Monday, April 17, 2023

ವ್ಯಾಸ ವೀಕ್ಷಿತ - 34 ಪಾಂಚಾಲದೇಶದತ್ತ ಪಾಂಡವರ ಪಯಣ ( Vyaasa Vikshita - 34 Panchala Deshadatta Pandavara Payana)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ದ್ರೌಪದಿಯ ಹಿನ್ನೆಲೆಯ ವೃತ್ತಾಂತವನ್ನು ಹೀಗೆ ಹೇಳಿ, ಮಹಾತ್ಮರೂ ಮಹಾತಪಸ್ವಿಗಳೂ ಆದ ವ್ಯಾಸಪಿತಾಮಹರು, ಪಾಂಡವರನ್ನೂ ಕುಂತಿಯನ್ನೂ ಬೀಳ್ಕೊಟ್ಟು ಹೊರಟುಬಂದರು.

ವ್ಯಾಸರು ಹೊರಡುತ್ತಲೇ ಪಾಂಡವರ ಮನಸ್ಸಿನಲ್ಲಿ ಹರ್ಷ ತುಂಬಿತು. ತಾಯಿಯನ್ನು ಮುಂದಿಟ್ಟುಕೊಂಡು ಪಾಂಚಾಲದೇಶದತ್ತ ಆ ನರಶ್ರೇಷ್ಠರು ಹೊರಟರು. ತಾವಿಷ್ಟು ದಿನ ಯಾರ ಮನೆಯಲ್ಲಿದ್ದರೋ ಆ ಬ್ರಾಹ್ಮಣನಿಗೆ ಅಭಿವಾದನ ಮಾಡಿ, ಅನುಮತಿ ಪಡೆದು ಹೊರಟರು. ಅವರ ಪಯಣಿಸುತ್ತಿದ್ದುದು ಉತ್ತರದಿಕ್ಕಿನತ್ತ ಸಾಗುವ ಸಮವಾದ ಹಾದಿಗಳಲ್ಲಿ; ಒಂದು ಹಗಲು ಒಂದು ರಾತ್ರಿಗಳ ಪ್ರಯಾಣ. (ಕತ್ತಲಿನಲ್ಲಿ ಸಾಗುವಾಗ) ಅವರೆಲ್ಲರ ಮುಂದೆ ಅರ್ಜುನನು ಪಂಜನ್ನು ಹಿಡಿದು ದಾರಿತೋರುತ್ತಾ ನಡೆದನು.  ಪಯಣಿಸಿ, ಗಂಗಾತಟದಲ್ಲಿದ್ದ "ಸೋಮಾಶ್ರಯಾಯಣ" ಎಂಬ ಹೆಸರಿನ ತೀರ್ಥವನ್ನು ಆ ಪುರುಷಶ್ರೇಷ್ಠರಾದ ಪಾಂಡುಪುತ್ರರು ತಲುಪಿದರು.

ಅಲ್ಲಿ ರಮಣೀಯವಾದ ಒಂದು ಏಕಾಂತಸ್ಥಳ. ಅಲ್ಲಿ ಗಂಗಾಜಲದಲ್ಲಿ ತನ್ನ ಸ್ತ್ರೀಯರೊಂದಿಗೆ ಗಂಧರ್ವನೊಬ್ಬನು ಕ್ರೀಡಿಸುತ್ತಿದ್ದನು. ಆತನೋ ದರ್ಪಿಷ್ಠ. ನದಿಯನ್ನು ಸಮೀಪಿಸುತ್ತಿದ್ದ ಪಾಂಡವರ (ಹೆಜ್ಜೆಯ) ಸದ್ದನ್ನು ಆತನು ಕೇಳಿದನು. ಆ ಶಬ್ದವು ಕೇಳಿಬಂದುದಕ್ಕೇ ಆ ಬಲಶಾಲಿ ಗಂಧರ್ವನಿಗೆ ಉತ್ಕಟವಾದ ಕೋಪವುಕ್ಕಿತು. ಅಲ್ಲಾಗ ಆತನಿಗೆ ಕಂಡದ್ದು ತಾಯಿಯೊಂದಿಗೆ ಬರುತ್ತಿದ್ದ ಈ ಪಾಂಡವರು.  ತನ್ನ ಭಯಂಕರವಾದ ಧನುಸ್ಸನ್ನು ಟಂಕಾರಮಾಡುತ್ತಾ ಆ ಗಂಧರ್ವನು ಈ ಮಾತನ್ನು ಹೇಳಿದನು:

"ರಾತ್ರಿಯು ಆರಂಭವಾಗುವ ವೇಳೆ, ಕೆಂಪಡರಿದ ಸಂಧ್ಯೆಯು ಗೋಚರವಾಗುವುದಲ್ಲವೇ? ಅದರಲ್ಲಿ ಎಂಭತ್ತು 'ಲವ'ಗಳಷ್ಟು ಕಾಲವನ್ನು ಬಿಟ್ಟು ಉಳಿದದ್ದು ಯಕ್ಷರು, ಗಂಧರ್ವರು, ರಾಕ್ಷಸರು – ಇವರುಗಳ ಮುಹೂರ್ತವೆಂದು ನಿಗದಿಯಾಗಿದೆ. (ಸುಮಾರಿಗೆ ಮೂವತ್ತಾರು ಬಾರಿ ರೆಪ್ಪೆ ಬಡಿಯುವಷ್ಟು ಕಾಲಕ್ಕೆ "ಲವ" ಎನ್ನುವರು.) ಅವರೆಲ್ಲರೂ ಕಾಮಚಾರರು (ಎಂದರೆ ಇಷ್ಟ ಬಂದಂತೆ ಸಂಚರಿಸತಕ್ಕವರು). ಅವರ ಕಾಲವನ್ನುಳಿದ ಕಾಲವು ಮನುಷ್ಯರ ಕರ್ಮಚಾರಕ್ಕಾಗಿ (ಎಂದರೆ ಕಾರ್ಯಾರ್ಥವಾದ ಓಡಾಟಕ್ಕಾಗಿ) - ಎಂಬುದಾಗಿ ಹೇಳಲಾಗಿದೆ.

ಹಾಗಿರುವಾಗ ಆ ವೇಳೆಯಲ್ಲಿ ಲೋಭದಿಂದ ಮನುಷ್ಯರೇನಾದರೂ ಸಂಚಾರಮಾಡಲು ಬಂದರೆ, ಅಂತಹ ಬಾಲಿಶರನ್ನು (ಎಂದರೆ ವಿವೇಕಹೀನರನ್ನು) ನಾವೂ (ಎಂದರೆ ಗಂಧರ್ವರೂ) ರಾಕ್ಷಸರೂ ಕೂಡಿ ಹಿಡಿದುಕೊಳ್ಳುತ್ತೇವೆ, ಗೊತ್ತೇ? ಆ ಕಾರಣಕ್ಕಾಗಿಯೇ (ಆ ಹೊತ್ತಿನಲ್ಲಿ) ನೀರಿನ ಬಳಿ ಸುಳಿಯುವವರನ್ನು ವೇದಜ್ಞರು ನಿಂದಿಸುತ್ತಾರೆ – ಹಾಗೆ ಸುಳಿಯುವವರು ಬಲಶಾಲಿಗಳಾದ ರಾಜರುಗಳೇ ಆಗಿದ್ದರೂ ಕೂಡ!

ಆದ್ದರಿಂದ ನಿಲ್ಲಿರಿ, ದೂರದಲ್ಲೇ. ನನ್ನ ಬಳಿ ಬರಬೇಡಿರಿ. ಗಂಗೆಗೆ ಬಂದಿರುವ ನನ್ನನ್ನು ನೀವದೆಂತು ಅರಿಯಲಾರದೆ ಹೋದಿರಿ? ಅಂಗಾರಪರ್ಣ - ಎಂದು ನನ್ನ ಹೆಸರು. ನಾನು ಮಹಾಬಲಶಾಲಿ, ಸ್ವಾಭಿಮಾನಿ., ನನಗೆ ಸಹನೆಯೆಂಬುದಿಲ್ಲ. ನಾನು ಕುಬೇರನ ಪ್ರಿಯಮಿತ್ರ. ನನ್ನ ಈ ಕಾಡಿಗೆ ಸಹ ನನ್ನ ಹೆಸರೇ:  ಅಂಗಾರಪರ್ಣವೆಂದೇ. ಈ ಗಂಗಾತಟದಲ್ಲಿ ಓಡಾಡುತ್ತಾ ಬಗೆಬಗೆಯಾದ ಆಶ್ಚರ್ಯಕರವಾದ ಸುಖಗಳನ್ನು ಪಡುತ್ತಾ ನಾನಿರುವೆನು. ರಾಕ್ಷಸರಾಗಲಿ, ದೇವತೆಗಳಾಗಲಿ, ಮನುಷ್ಯರಾಗಲಿ, ಇತ್ತ ಸುಳಿಯರು. ಹಾಗಿರುವಲ್ಲಿ ನೀವದೆಂತು ಬಂದಿರಿ! - ಎಂದಬ್ಬರಿಸಿದನು.

ಗಂಧರ್ವನ ಈ ಗರ್ವದ ಮಾತುಗಳನ್ನು ಕೇಳಿ ಅಸಾಧಾರಣ-ಪರಾಕ್ರಮಿಯಾದ ಅರ್ಜುನನಿಗೆ ಅನಲ್ಪವಾದ ಕೋಪವೇ ಬಂದಿತು.

ಸೂಚನೆ : 16/4/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.