Sunday, March 12, 2023

ವ್ಯಾಸ ವೀಕ್ಷಿತ - 29 ಉಪಯಾಜನು ಸೂಚಿಸಿದ ಉಪಾಯ (Vyaasa Vikshita - 29 Upayajanu Sucisida Upaya)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


 

ತನಗೆ ಅವಮಾನ ಮಾಡಿದ ದ್ರೋಣನ ವಿರುದ್ಧ ಆಭಿಚಾರಿಕವನ್ನು ದ್ರುಪದನು ಮಾಡಲೆಳಸಿದ್ದನಷ್ಟೆ; ಆತನ ಕೋರಿಕೆಗೆ ಯಾಜನು ನಕಾರವನ್ನೇ ಸೂಚಿಸಿದ್ದನು; ಆದರೂ ಅವನನ್ನು ಹೇಗಾದರೂ ಆರಾಧಿಸಬೇಕೆಂಬ ಸಂಕಲ್ಪ ದ್ರುಪದನದಾಯಿತು. ಆದ್ದರಿಂದ ಆತನ ಪರಿಚರ್ಯೆಯನ್ನು (ಎಂದರೆ ಸೇವೆಯನ್ನು) ದ್ರುಪದನು ಮತ್ತೂ ಮಾಡಿದನು. ಮಾಡುತ್ತಾ ಒಂದು ವರ್ಷವೇ ಕಳೆಯಿತು. ಹಾಗಾಗಿರಲು, ರಾಜನಿಗೊಂದು ಮಧುರವಾದ ನುಡಿಯನ್ನು ಉಪಯಾಜನು ಹೇಳಿದನು.


"ಒಮ್ಮೆ ದಟ್ಟವಾದ ಕಾಡಿನಲ್ಲಿ ಸಂಚರಿಸುತ್ತಿದ್ದಾಗ ಹಣ್ಣೊಂದು ಬಿತ್ತು. ಅದು ಬಿದ್ದ ಎಡೆ ಶುಚಿಯಾಗಿದೆಯೇ ಇಲ್ಲವೇ ಎಂಬುದೇನೂ ಖಚಿತವಾಗಿ ಗೊತ್ತಿರಲಿಲ್ಲ. ಹಾಗಿದ್ದರೂ ಆ ಹಣ್ಣನ್ನು ನನ್ನಣ್ಣ ಯಾಜನಿದ್ದಾನಲ್ಲ, ಆತನು ಸ್ವೀಕರಿಸಿದನು! ಆತನ ಜೊತೆಯಲ್ಲಿಯೇ ಸಾಗುತ್ತಿದ್ದ ನಾನು ಆತನ ಆ ಅನೌಚಿತ್ಯವನ್ನು ಕಂಡೆ. ಸಂಕರವಾಗಿರುವ (ಎಂದರೆ ಅಶುದ್ಧಿಯು ಸೇರಿಕೊಂಡಿರುವ) ವಸ್ತುವನ್ನು ಸ್ವೀಕರಿಸುವುದರಲ್ಲಿ ಆತನೆಂದೂ ವಿಮರ್ಶೆಯನ್ನೇ ಮಾಡನು! ಹಣ್ಣನ್ನು ಕಂಡನೇ ವಿನಾ, ಪಾಪಾನುಬಂಧಿಯಾದ (ಎಂದರೆ ಪಾಪವು ಅಂಟಿಕೊಂಡು ಬರುವ) ದೋಷಗಳನ್ನು ಆತ ಗಮನಿಸಲಿಲ್ಲ. (ಪ್ರಕೃತ, ಆಭಿಚಾರಿಕವೂ ಪಾಪಾನುಬಂಧಿಯಾದದ್ದೇ – ಎಂಬ ಆತನ ಮಾತಿನ ಧ್ವನಿಯನ್ನು ಇಲ್ಲಿ ಗಮನಿಸಿಕೊಳ್ಳಬೇಕು.) ಯಾವನು ಇಂತಹ ಪ್ರಸಂಗದಲ್ಲಿ ಶೌಚವನ್ನು (ಎಂದರೆ ಶುದ್ಧಿಯನ್ನು) ಗಮನಿಸಿಕೊಳ್ಳನೋ ಆತನು ಬೇರೆಡೆಯಲ್ಲಿಯೂ ಮತ್ತಿನ್ನೆಂತು ಇದ್ದಾನು? (ಶೌಚವನ್ನು ಎಲ್ಲೆಡೆ ಗಮನಿಸತಕ್ಕದ್ದು; ನಾನಂತೂ ನನ್ನಣ್ಣನಂತಲ್ಲ – ಎಂಬ ಅಭಿಪ್ರಾಯ).

 

ಮತ್ತೂ ಒಂದು ನಿದರ್ಶನವಿದೆ. ಗುರುಕುಲವಾಸದಲ್ಲಿ ವೇದಾಧ್ಯಯನವಾಗುತ್ತಿದ್ದ ಸಮಯವದು. ಭಿಕ್ಷಾನ್ನದಲ್ಲಿ ಅನ್ಯರು ತಿಂದು ಮಿಕ್ಕಿದ್ದನ್ನೇ ಆಗೊಮ್ಮೆ ಈಗೊಮ್ಮೆ ಆತ ತಿನ್ನುತ್ತಿದ್ದುದೂ ಉಂಟು! ಘೃಣೆಯಿಲ್ಲದೆ (ಎಂದರೆ ನಾಚಿಕೆಯಿಲ್ಲದೆ) ಅಂತಹ ಅನ್ನದ ಗುಣಗಾನವನ್ನು ಸಹ ಮಾಡಿಬಿಡುತ್ತಿದ್ದನು, ಆತ! ತಾತ್ಪರ್ಯವಿದು: ಆತನು ಫಲಾರ್ಥಿ (ಎಂದರೆ, ಇದು ಬೇಕು, ಅದು ಬೇಕು ಎಂದು ಬಯಸುವಂತಹವನು). ಇದನ್ನು ನಾನು ನನ್ನ "ತರ್ಕವೆಂಬ ಕಣ್ಣಿನಿಂದ" ಕಂಡಿದ್ದೇನೆ. ರಾಜನೇ, ಸಾರಾಂಶವಿಷ್ಟು: ನೀನು ಆತನಲ್ಲಿಗೆ ಹೋಗು; ಆತನು ನಿನಗೆ ಯಾಗವನ್ನು ಮಾಡಿಸಿಕೊಡುವನು" – ಎಂದು ಉಪಯಾಜನು ಹೇಳಿಬಿಟ್ಟನು. (ಅರ್ಥಾತ್, ವಾಂಛೆಗಳುಳ್ಳವರು, ಹಾಗೂ ಪಾಪಾನುಬಂಧಗಳನ್ನು ಲೆಕ್ಕಿಸದವರು, ಇಂತಹ ಕಾರ್ಯಗಳಿಗೆ ಕೈಹಾಕಬಹುದು; ನಾನಲ್ಲ – ಎಂಬ ಅಭಿಪ್ರಾಯ ಉಪಯಾಜನದು).


ಉಪಯಾಜನ ಈ ಮಾತನ್ನು ಕೇಳಿದ ದ್ರುಪದನಿಗೆ ಮನಸ್ಸಿನಲ್ಲಿ ಬೇಜಾರೇ ಆಯಿತು. ಅದನ್ನೇ ಚಿಂತಿಸುತ್ತಾ ಯಾಜನ ಆಶ್ರಮಕ್ಕೆ ಹೋದನು. ಪೂಜಾರ್ಹನಾದ ಯಾಜನನ್ನು ಸತ್ಕರಿಸಿ ಆತನಿಗೆ ಹೇಳಿದನು:

 

"ಅಯ್ಯಾ ಯಾಜನೇ, ನಿನಗೆ ಎಂಟು ಅಯುತ (ಎಂದರೆ ಎಂಭತ್ತು ಸಾವಿರ) ಗೋವುಗಳನ್ನು ಕೊಡುವೆನು. ನನಗಾಗಿ ನೀನೊಂದು ಯಾಗವನ್ನು ಮಾಡಿಸಬೇಕು. ದ್ರೋಣನ ಮೇಲಣ ವೈರ ನನ್ನನ್ನು ಸುಡುತ್ತಿದೆ; ಅಂತಹ ನನಗೆ ಸಂತೋಷವನ್ನುಂಟುಮಾಡುವುದು ನಿನ್ನ ಕೈಯಲ್ಲಿದೆ. ಏಕೆ ಗೊತ್ತೆ? ವೇದವನ್ನು ಬಲ್ಲವರಲ್ಲಿ ದ್ರೋಣನು ಶ್ರೇಷ್ಠನಾದವನು. ಬ್ರಹ್ಮಾಸ್ತ್ರವನ್ನು ಬಲ್ಲವರಾರೂ ಆತನನ್ನು ಮೀರಿಸಲಾರರು. ಆ ಕಾರಣದಿಂದಲೇ (ಹಳೆಯ) ಮಿತ್ರತ್ವವನ್ನೊಪ್ಪಿಕೊಳ್ಳುವ ತಗಾದೆಯಲ್ಲಿ ನನ್ನನ್ನಾತನು ಪರಾಜಯಗೊಳಿಸಿದನು. ಕುರುವಂಶದ ಆಚಾರ್ಯರಲ್ಲಿ ಆತನೀಗ ಮುಖ್ಯನಾಗಿರುವನು. ಧೀಮಂತನಾದ ಅಂತಹ ಭಾರದ್ವಾಜನನ್ನು ಮೀರಿಸಬಲ್ಲ ಕ್ಷತ್ರಿಯರಾರೂ ಈ ಭೂಮಿಯಲ್ಲಿಲ್ಲ.


ಸೂಚನೆ : 12/3/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.