Sunday, February 26, 2023

ಅಷ್ಟಾಕ್ಷರೀ​ - 29 ಜ್ಞಾನಿನಃ ತತ್ತ್ವದರ್ಶಿನಃ (Astakshara Darshana 29 Jnaninah Tattvadarshinah)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಭಾರತೀಯ ಅಧ್ಯಾತ್ಮಪರಂಪರೆಗೂ ಅನ್ಯಪರಂಪರೆಗಳಿಗೂ ಪ್ರಮುಖವಾದ ವ್ಯತ್ಯಾಸಗಳಿವೆ. "ನಾನು ಹೇಳುವುದನ್ನೊಪ್ಪಿ ನನ್ನ ಮಾತಿನಂತೆ ನಡೆ; ಇಲ್ಲವೋ ನಿನಗೆ ನಿತ್ಯನರಕವೇ ಸಿದ್ಧ!" ಎಂಬ ಪರಿಯಲ್ಲಿ ವಿದೇಶೀಪರಂಪರೆಗಳ ವರಸೆ. ಆದರೆ ನಮ್ಮಲ್ಲಿ ಹಾಗಲ್ಲ: "ಯೋಚಿಸಿ ನೋಡು; ಹಿತಕಂಡರೆ ಅನುಸರಿಸು." ಎನ್ನುವ ಮಾತೇ ಪ್ರಧಾನ. ಗೀತೆಯಾಗಲಿ ಉಪನಿಷತ್ತಾಗಲಿ ಅಲ್ಲೆಲ್ಲ ಸಂವಾದಗಳೇ ಎದ್ದು ಕಾಣುವಂತಹವು. ಹೆದರಿಸಿ ಬೆದರಿಸಿ ಕೆಲಸ ಮಾಡಿಸುವ ಗೋಜಿಲ್ಲ, ಗೋಜಲಿಲ್ಲ.

ಮಾತು ಸತ್ಯಮೂಲವಾಗಿ ಎಲ್ಲಿ ಬರುವುದೋ ಅಲ್ಲಿ ಅವರಲ್ಲಿಯ ಆಕ್ರೋಶದ ಆವಶ್ಯಕತೆಯಿರುವುದಿಲ್ಲ. "ನನ್ನನ್ನು ನಂಬಿದರೆ ಮಾತ್ರವೇ ನಿನ್ನ ಉದ್ಧಾರ!" ಎನ್ನುತ್ತಾ ನಾನಾ ನಿಹಿತಸ್ವಾರ್ಥಗಳಿಗಾಗಿ ನಾನಾತಂತ್ರಗಳನ್ನು ಬಳಸುವವರ ಬಿಗಿಬಗೆಗಳ ಶೋಧನವು ನಮಗಿಲ್ಲಿ ಪ್ರಕೃತವಲ್ಲ. ಪ್ರಕೃತವಾದದ್ದು ಅಧ್ಯಾತ್ಮದಲ್ಲಿಯ ಪ್ರಗತಿ.

ಲೋಕದಲ್ಲಿ ನಾವು ಸಾಧಾರಣವಾಗಿ ನೋಡುವಂತೆ, ಬಹುಮಂದಿಗೆ ಸಾಧಾರಣವಾದ ಜೀವನದಲ್ಲೇ ತೃಪ್ತಿ. ಹಿರಿದಾದುದನ್ನು ಸಾಧಿಸಬೇಕೆನ್ನುವವರು, ಕಿರಿದಾದ ಕೆಲವು ಸುಖಗಳನ್ನು ಕೆಲಕಾಲ ಕೈಬಿಡಬೇಕಾಗಿರುತ್ತದೆಯಲ್ಲವೇ? ಸುಭಾಷಿತವೊಂದರಂತೆ, ಸುಖಾರ್ಥಿಯು ವಿದ್ಯಾರ್ಥಿಯಾಗಲಾರ; ವಿದ್ಯಾರ್ಥಿಯು ಸುಖಾರ್ಥಿಯಾಗಿರಲಾರ. ವಾಸ್ತವವಾಗಿ, ಒಳ್ಳೆಯ ವಿದ್ಯಾಸಂಪಾದನೆಯ ಬಳಿಕ ಉತ್ಕೃಷ್ಟವಾದ ಸುಖಗಳನ್ನೇ ಪಡೆಯಬಹುದೆಂಬುದನ್ನು ಕಂಡುಕೊಂಡಾಗ, ಆರಂಭದಲ್ಲಿಯ ಸುಖತ್ಯಾಗದಿಂದ ಮಹತ್ತಾದ ನಷ್ಟವೇನೂ ಆಗದೆಂಬುದು ಮನದಟ್ಟಾಗುತ್ತದೆ.

ಹೊಟ್ಟೆಹೊರೆಯಲೆಂದು ಕಲಿಯುವುದೊಂದು ಬಗೆ; ಆದರೆ ಹಸಿವು ಹೊಟ್ಟೆಗೆ ಮಾತ್ರವೇ? ಮನೋಬುದ್ಧಿಗಳಿಗೂ ಹಸಿವೆಂಬುದುಂಟು. ಅವಕ್ಕೂ ಆಹಾರ ಬೇಕೇ. ಕಲಾಭ್ಯಾಸ-ಶಾಸ್ತ್ರಾಧ್ಯಯನಗಳಿಂದ ಅದು ಲಭ್ಯ. ಅಂತೂ ದೇಹ-ಇಂದ್ರಿಯ-ಮನಸ್ಸು-ಬುದ್ಧಿಗಳಿಗೆ ಒಂದಲ್ಲ ಒಂದು ರೀತಿಯ ಆಹಾರವನ್ನು ಒದಗಿಸುತ್ತಲೇ ಇರುತ್ತೇವೆ. (ಅವಲ್ಲಿ ಯಾವುದೆಷ್ಟು ಆರೋಗ್ಯಕರ, ಯಾವುದಲ್ಲ? - ಎಂಬ ಪ್ರಶ್ನೆಯನ್ನು ಈಗಿಲ್ಲೆತ್ತಿಕೊಳ್ಳುವುದು ಬೇಡ.)

ಆದರೆ ಸಾಧಾರಣವಾಗಿ ಬಹುಮಂದಿಗರಿವಾಗದ  ಹಸಿವೊಂದುಂಟು. ಮಿಕ್ಕೆಲ್ಲ ಹಸಿವೆಗಳಿಗಿಂತಲೂ ಅದು ಮಿಗಿಲಾದುದು, ಉನ್ನತವಾದುದು. ಅದುವೇ ಆತ್ಮನ ಹಸಿವು. ಅದಕ್ಕೂ ಆಹಾರವು ಬೇಕು. "ಆತ್ಮನ ಹಸಿವಿಗೆ ಪರಮಾತ್ಮನೇ ಆಹಾರ" - ಎಂಬುದಾಗಿ ಶ್ರೀರಂಗಮಹಾಗುರುಗಳು ಉಪದೇಶಿಸಿದ್ದರು. ಈ ಹಸಿವನ್ನು ನೀಗಿಸಿಕೊಳ್ಳುವುದನ್ನೇ ಜ್ಞಾನವೆನ್ನುವುದು. ನಿಜವಾದ ಜ್ಞಾನವೆಂದರೆ ಅದೇ. "ಕರ್ಮಗಳೆಲ್ಲವೂ ಜ್ಞಾನದಲ್ಲಿ ಪರಿಸಮಾಪ್ತಿಯನ್ನು ಹೊಂದುತ್ತವೆ" – ಎಂಬ ಗೀತೋಕ್ತಿಯ ಸಾರವಿಲ್ಲಿದೆ.

ಅಂತಹ ಜ್ಞಾನವನ್ನು ಪಡೆಯಲು ಜ್ಞಾನಿಗಳ ಬಳಿ ಸಾಗಬೇಕು. ಜ್ಞಾನಿಗಳು ತತ್ತ್ವದರ್ಶಿಗಳು. ಏನು ಹಾಗೆಂದರೆ? ತತ್ ಎಂದರೆ ಅದು. ತತ್-ತ್ವ ಎಂದರೆ "ಅದರತನ", ಅದರ ವಾಸ್ತವ-ಸ್ವರೂಪ. ಭೌತಿಕವಾದ ವಸ್ತುಗಳಾದರೆ ಅವುಗಳನ್ನು ಹೊರಗಣ್ಣಿನಿಂದ ನೋಡಬಹುದು; ತಾತ್ತ್ವಿಕನೋಟವೆಂಬುದು ಒಳಗಣ್ಣಿಗೇ ಲಭ್ಯವಾಗುವಂತಹುದು. ಆತ್ಮತತ್ತ್ವದರ್ಶನವೇ ಜ್ಞಾನ. ಅನುಭವವೇ ತತ್ತ್ವದರ್ಶನ. ಈ ಪದದ ಮರ್ಮವನ್ನು ಬಿಡಿಸಿ ತೋರಿಸುತ್ತಾ ಶ್ರೀರಂಗಮಹಾಗುರುಗಳು ಹೀಗೆ ಹೇಳಿದ್ದಾರೆ: "ತತ್ತ್ವದರ್ಶಿಗಳೆಂದರೆ ತತ್ತ್ವವನ್ನು ಕುರಿತು ಹೇಳುವವರಲ್ಲ, ತತ್ತ್ವವನ್ನು ಕಂಡವರು, ಅನುಭವಿಸಿರುವವರು" ಎಂಬುದಾಗಿ. ಅಲ್ಲಿಗೆ, ಅನುಭವಕ್ಕೇ ಬೆಲೆ; ಬರೀ ಪುಸ್ತಕದ/ಕಲಿತ ಮಾತಿಗಲ್ಲ.

ಆ ಜ್ಞಾನವಾದರೂ ಸೂಕ್ಷ್ಮವಾದುದು: ಅದನ್ನು ಉಪದೇಶದಿಂದಲೇ ಪಡೆಯತಕ್ಕದ್ದು. ಏನು ಉಪದೇಶವೆಂದರೆ? "ದೇಶವೆಂದರೆ ಎಡೆ. ಉಪ-ಎಂದರೆ ಹತ್ತಿರ. ಆ ಉನ್ನತವಾದ ಎಡೆಯ ಬಳಿಗೊಯ್ಯುವುದೇ ಉಪ-ದೇಶ. ಅದಾಗದಿದ್ದರೆ ಅಪದೇಶ!" (ಎಂದರೆ ಮತ್ತೆಲ್ಲಿಗೋ ಒಯ್ದುಬಿಡುವುದು!) - ಎಂಬ ಮರ್ಮವನ್ನು ಬಿಡಿಸಿಕೊಟ್ಟವರೂ ಅವರೇ.

ಜ್ಞಾನವನ್ನು ಮಹಾತ್ಮರಿಂದ ಪಡೆಯಬೇಕು. ಅದಕ್ಕೆ ಮೂರು ಪರಿಗಳಿವೆ: ಅವೇ ಪ್ರಣಿಪಾತ (ಎಂದರೆ ನಮಸ್ಕಾರ), ಪರಿಪ್ರಶ್ನ (ಎಂದರೆ ಪರಿಪರಿಯಗಿ ಪ್ರಶ್ನಿಸುವುದು), ಹಾಗೂ ಸೇವೆ (ಎಂದರೆ ಶುಶ್ರೂಷೆ). ಮೂರೂ ಬೇಕು.


ಗುರುಶಿಷ್ಯ-ಸಂಬಂಧವು ಮಧುರವಾಗಿರಬೇಕು. "ನೀನು ನನ್ನ ಭಕ್ತನೂ ಸಖನೂ ಆಗಿದ್ದೀಯೇ. ಎಂದೇ ಈ ಉತ್ತಮರಹಸ್ಯವನ್ನು ಹೇಳುತ್ತಿದ್ದೇನೆ" ಎಂದು ಅರ್ಜುನನಿಗೆ ಹೇಳುತ್ತಾನೆ, ಶ್ರೀಕೃಷ್ಣ.

ನಮಸ್ಕಾರವೆಂಬುದು ಬರೀ ಆದರಸೂಚಕವಲ್ಲ: ಶಕ್ತಿಯ ಹರಿವನ್ನು ಸುಗಮವಾಗಿಸುವ ಪರಿಯದು! ಶುಶ್ರೂಷೆಯೆಂಬುದೂ ಅದರ ವಿಸ್ತಾರವೇ ಆಗಿರುವುದು. ಇನ್ನು, ಒಂದೇ ವಿಷಯವನ್ನು ನಾನಾಬಗೆಗಳಿಂದ ಪರಿಕಿಸಿ ಕೇಳಿ ತಿಳಿದುಕೊಳ್ಳುವುದು ಪರಿಪ್ರಶ್ನವೆನಿಸುವುದು. ಗುರುವು ಹೇಳಿದ್ದಕ್ಕೆಲ್ಲಾ ಸುಮ್ಮನೆ ಗೋಣಾಡಿಸುವಂತಾಗಿಬಿಡದೆ, ಮನನ-ಮಥನಗಳಿಂದಾಗಿ ಹೊಮ್ಮುವ ಪ್ರಶ್ನೆಗಳನ್ನು ಶಿಷ್ಯನು ಕೇಳಬೇಕು; ಆಗಾತನ ಸ್ತರವು ಗುರುವಿಗೆ ಸುಗೋಚರವಾಗುವುದು. ಶಿಷ್ಯನ ಸಂಶಯಗಳಳಿದು, ಬುದ್ಧಿಗೆ ತಿಳಿವು ಮೂಡಿ, ಅನುಭವವೂ ಎಟುಕಿಸುವಂತಾಗಿಸಲು ಗುರುವಿಗೂ ಅನುಕೂಲವಾಗುವುದು. ತತ್ತ್ವಜ್ಞರಾದವರ ಬಳಿಯ ಪರಿಪ್ರಶ್ನ-ಉತ್ತರಗಳು ಎಂದಿಗೂ ಅಮೂಲ್ಯವಾದವು.

ತತ್ತ್ವದರ್ಶಿಗಳಾದ ಜ್ಞಾನಿಗಳು ಜ್ಞಾನೋಪದೇಶವನ್ನು ಮಾಡುವರು – ಎಂಬುದು ಗೀತೆಯಲ್ಲಿಯ ಶ್ರೀಕೃಷ್ಣೋಕ್ತಿ. ಇದಕ್ಕೆ ಭಗವದ್ಗೀತೆಯೇ ಒಂದು ಭವ್ಯಸಾಕ್ಷಿಯಲ್ಲವೇ?


ಸೂಚನೆ: 12/02/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.


ಯಕ್ಷ ಪ್ರಶ್ನೆ -27 (Yaksha prashne -27)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)



ಪ್ರಶ್ನೆ – 26 ವಾಯುವಿಗಿಂತಲೂ ವೇಗವಾದುದು ಯಾವುದು?

ಉತ್ತರ - ಮನಸ್ಸು

ಒಂದು ವಸ್ತುವಿನ ವೇಗವನ್ನು ಕಂಡುಹಿಡಿಯಲು ಆ ವಸ್ತು ನಮಗೆ ಗೋಚರಿಸಬೇಕು. ಆಗ ಮಾತ್ರ ಪ್ರತಿನಿಮಿಷಕ್ಕೋ,  ಗಂಟೆಗೋ ಎಷ್ಟು ದೂರವನ್ನು ಕ್ರಮಿಸಬಲ್ಲದು? ಅದು ಎಷ್ಟು ವೇಗವಾಗಿ ಸಾಗುತ್ತದೆ? ಎಂಬುದನ್ನು ನಿರ್ಣಯಿಸಲು ಸಾಧ್ಯವಾಗುತ್ತದೆ. ಒಂದು ವಾಹನವೋ ಅಥವಾ ಕುದುರೆಯೋ ಅದರ ವೇಗ ಎಷ್ಟೆಂಬುದು ತಿಳಿಯಬಹುದಾದ ವಿಷಯ. ಆದರೆ ಇಲ್ಲಿ ಯಕ್ಷನು ಧರ್ಮಜನಿಗೆ ಕೇಳುವ ಪ್ರಶ್ನೆ ಕಣ್ಣಿಗೆ ಕಾಣದಿರುವ ವಿಷಯದ ಬಗ್ಗೆ. ಅದರಲ್ಲೂ ಮನಸ್ಸಿನ ಬಗ್ಗೆ. ಮನಸ್ಸನ್ನು ಕಂಡು ಹಿಡಿಯಲು, ಅದರ ವೇಗವನ್ನು ಗುರುತಿಸಲು ಅನೇಕಾನೇಕ ಪ್ರಯತ್ನಗಳು ನಡೆದಿವೆ, ನಡೆಯುತ್ತಿವೆ, ಮುಂದೂ ನಡೆಯುತ್ತವೆ. ಆದರೂ ಇದರ ವೇಗದ ಬಗ್ಗೆ ಇತ್ಯರ್ಥವಾಗುವುದೇ ಇಲ್ಲವೆನೋ? ಅಂತಹ ವಿಷಯದ ಬಗ್ಗೆ ಇಲ್ಲಿ ಯಕ್ಷನ ಪ್ರಶ್ನೆಯಾಗಿದೆ. ವಾಯುವಿಗಿಂತಲೂ ವೇಗವಾಗಿ ಹೋಗುವ ವಸ್ತು ಯಾವುದು? ಎಂದು. ಅದಕ್ಕೆ ಉತ್ತರ ಮನಸ್ಸು.

ಕಣ್ಣಿಗೆ ಕಾಣುವ ವಸ್ತುಗಳಲ್ಲಿ ಅತಿಶಯವಾದ ವೇಗ ಉಳ್ಳದ್ದು ಎಂದರೆ ಅದು ಗಾಳಿ. ಗಾಳಿಗಿಂತಲೂ ವೇಗವಾಗಿ ಸಾಗುವ ವಸ್ತು ಇನ್ನೊಂದಿಲ್ಲ. ಕುದುರೆಯೂ ಅತಿವೇಗವಾಗಿ ಓಡುವ ಪ್ರಾಣಿಯಾಗಿದೆ. ಪ್ರತಿ ಗಂಟೆಗೆ ೩೩೫ ಕಿಲೋಮೀಟರ್ ವೇಗ ಎಂದು ವಿಮಾನಕ್ಕೂ ಒಂದು ಮಿತವಾದ ವೇಗವನ್ನು ಹೇಳುತ್ತಾರೆ. ಬೆಳಕಿನ ವೇಗವನ್ನು ಪ್ರತಿ ಸೆಕೆಂಡಿಗೆ ಮೂರು ಲಕ್ಷ ಕಿಲೋಮೀಟರ್ ಎಂದು ಹೇಳುತ್ತಾರೆ. ಬೆಳಕಿನ ವೇಗಕ್ಕಿಂತಲೂ ಅಧಿಕವೇಗವುಳ್ಳದ್ದು 'ಬ್ರಹ್ಮಾಂಡದ ವಿಸ್ತರಣೆ' ಎಂಬುದು ಇದಕ್ಕಿಂತಲೂ ವೇಗವುಳ್ಳದ್ದು ಎಂದು ವಿಜ್ಞಾನ ಹೇಳುತ್ತದೆ. ಇವೆಲ್ಲಕ್ಕಿಂತ ವೇಗವುಳ್ಳದ್ದೆಂದರೆ ಅದೇ ಮನಸ್ಸು. 

ಹಾಗಾದರೆ ಮನಸ್ಸಿಗೆ ಇರುವ ವೇಗವೆಷ್ಟು? ಯಾವ ರೀತಿಯಾಗಿ ಇದರ ವೇಗವನ್ನು ಕಂಡುಹಿಡಿಯಬಹುದು? ಎಂಬ ಪ್ರಶ್ನೆಯು ಬರುತ್ತದೆ. ಯಾವುದರ ವೇಗದ ಮಿತಿಯನ್ನು ನಿರ್ಧರಿಸಲು ಸಾಧ್ಯವೇ ಇಲ್ಲವೋ ಅಂತಹದ್ದನ್ನು ಮಾತ್ರ ಈ ಬ್ರಹ್ಮಾಂಡದಲ್ಲೇ ಅತಿವೇಗವುಳ್ಳ ವಿಷಯ ಎಂದು ನಿರ್ಧರಿಸಬಹುದು. ಮನಸ್ಸು ಎಲ್ಲಕ್ಕಿಂತ ವೇಗವುಳ್ಳದ್ದು. ಏಕೆಂದರೆ ಅದರ ವೇಗ ಎಷ್ಟೆಂಬುದು ಇವತ್ತಿನ ತನಕ ಸರಿಯಾಗಿ ತಿಳಿದಿಲ್ಲ. ಒಂದು ಅಧ್ಯಯನದ ಪ್ರಕಾರ ಮನಸ್ಸು ಒಂದು ಸೆಕೆಂಡಿಗೆ ಒಂದು ಲಕ್ಷದ ಎಂಭತ್ತಾರು ಸಾವಿರ ಮೈಲ್ ಸಂಚರಿಸುತ್ತದೆ ಎಂದು ಕೆಲವರು ಹೇಳುತ್ತಾರೆ. ಅಂದರೆ ಮನಸ್ಸಿಗಿಂತಲೂ ವೇಗವುಳ್ಳ ಇನ್ನೊಂದು ವಸ್ತುವಿಲ್ಲ ಎಂದೇ ತಾತ್ಪರ್ಯ. ಈ ಬ್ರಹ್ಮಾಂಡವೆಂಬುದು ಅಸೀಮವಾದುದು, ಅಮಿತವಾದುದು. ಅದಕ್ಕಿಂತಲೂ ಅಮಿತವಾದುದು ಪರಬ್ರಹ್ಮ. ಇವೆಲ್ಲವನ್ನು ಒಂದು ಹಂತದವರೆ ತಿಳಿಯಲು ಸಾಧ್ಯವಾದ ವಸ್ತುವೆಂದರೆ ಮನಸ್ಸೇ. ಬ್ರಹ್ಮಾಂಡದ ಒಂದು ಕಡೆಯಿಂದ ಇನ್ನೊಂದು ಕಡೆ ಎನ್ನುವುದೇ ಅವಿದಿತವಾದ ಮೇಲೆ ಅದರ ಅಸೀಮತ್ವವನ್ನು ತಿಳಿಯಲು ಮನಸ್ಸಿಗೆ ಅದೆಂತಹ ವೇಗ ಇರಬೇಕಾದೀತು?! ಚಲಿಸುತ್ತಿರುವ ಯಾವುದೇ ವಸ್ತುವನ್ನೂ ಹಿಡಿಯಬೇಕಾದರೆ ಅದಕ್ಕಿಂತಲೂ ಹೆಚ್ಚಾದ ಶೈಘ್ರ್ಯ ಹಿಡಿಯುವ ವಿಷಯಕ್ಕೆ ಬೇಕಾಗುತ್ತದೆ. ಹಾಗಾಗಿ ಈ ಮನಸ್ಸಿಗೆ ಎಲ್ಲಕ್ಕಿಂತಲೂ ಅಧಿಕವಾದ ವೇಗವಿದ್ದೇ ಇದೆ ಎಂದು ಒಪ್ಪಲೇಬೇಕಾಗುತ್ತದೆ.

ಅದಕ್ಕಾಗಿ ಈ ಮನಸ್ಸನ್ನು ಹಿಡಿದಿಡುವುದು ದುರ್ಭರ. ಅದು ಬಹಳ ಚಂಚಲ. ಆದರೆ ಮನಸ್ಸನ್ನು ಕಟ್ಟಿ ಹಾಕಲೇಬೇಕಾದುದು. ಅದರ ವೇಗವನ್ನು ತಿಳಿಯದಿದ್ದರೂ ವೇಗವನ್ನು ತಡೆದು ಒಂದು ಕಡೆ ಸ್ಥಿರಗೊಳಿಸಲೇಬೇಕಾದ ವಿಷಯ.   

ಸೂಚನೆ : 26/2/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 27 ದ್ರುಪದ-ಗರ್ವ-ಭಂಗ (Vyaasa Vikshita - 27 Drupada-Garva-Bhanga)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಬಾಲ್ಯದ ಒಡನಾಡಿಯು ದೀರ್ಘಕಾಲಾನಂತರ ಎದುರಿಗೆ ಬಂದಾಗ ಅದೇನೋ ಒಂದು ವಿಶೇಷ ನಲಿವು ಉಕ್ಕುವುದು ಲೋಕಸಾಮಾನ್ಯ. ಆದರೆ ಇಲ್ಲಿ ಹಾಗಾಗಲಿಲ್ಲ. ಅದರ ವಿರುದ್ಧವೇ ಆಯಿತು!

ದ್ರೋಣರಿಗೆ ಸಾಧಾರಣವಾದ ಸೌಜನ್ಯವನ್ನೂ ತೋರಿಸದಾದ, ದ್ರುಪದ. "ನನ್ನೊಂದಿಗಿನ ಸ್ನೇಹಕ್ಕೆ ನೀನು ಸರ್ವಥಾ ಅನರ್ಹ" - ಎಂಬ ರೀತಿಯಲ್ಲಿ ಗರ್ವದಿಂದ ವರ್ತಿಸಿದವನ ಮೇಲೆ ಯಾರಿಗೆ ತಾನೆ ಕೋಪವುಕ್ಕದು? ಲೋಕಸಹಜವಾದ ನಿರೀಕ್ಷೆಗಳು ಹುಸಿಯಾದಾಗ ಮನಸ್ಸಿಗೆ ಘಾತವಾಗದೆ?

ಮರುಮಾತೇ ಆಡಲಿಲ್ಲ, ಜಾಣ ದ್ರೋಣರು. ತಮಗೆ ಅವಮಾನ ಮಾಡಿದ ಪಾಂಚಾಲರಾಜನಿಗೆ ಪ್ರತಿಯಾಗಿ ಮುಂದೇನು ಮಾಡಬೇಕು? - ಎಂಬುದನ್ನು ಮನಸ್ಸಿನಲ್ಲಿ ನಿಶ್ಚಯಮಾಡಿಕೊಂಡರು. ಕುರುವಂಶದ ಮುಖ್ಯರ ನಗರವಾದ "ನಾಗಸಾಹ್ವಯ"ಕ್ಕೆ (ಎಂದರೆ ಹಸ್ತಿನಾವತಿಗೆ) ಬಂದರು.

ದ್ರೋಣರ ಸಾಧನೆಯ ಅರಿವು, ಅಲ್ಲಿದ್ದ ಭೀಷ್ಮರಿಗಿತ್ತು. ತಮ್ಮ ಮೊಮ್ಮಕ್ಕಳನ್ನು ಅವರಲ್ಲಿಗೆ ಒಯ್ದು, ನಾನಾವಿಧವಾದ ವಸುಗಳನ್ನು (ಎಂದರೆ ಸಂಪತ್ತನ್ನು) ಅವರು ದ್ರೋಣರಿಗಿತ್ತರು. ತಮ್ಮ ಮೊಮ್ಮಕ್ಕಳು ವಿದ್ಯೆಯನ್ನು ಕಲಿಯುವಂತಾಗಲೆಂದು, ದ್ರೋಣರಲ್ಲಿ ಶಿಷ್ಯರನ್ನಾಗಿ ಅವರನ್ನು ಒಪ್ಪಿಸಿದರು. (ದ್ರೋಣರಾದರೂ ಸಿರಿವಂತರೇನಾಗಿರಲಿಲ್ಲವಷ್ಟೆ; ಹೀಗಾಗಿ ಅವರಿಗೆ ಧನಾಪೇಕ್ಷೆಯು ಸಹಜವೇ. ಆದರೆ ಅವರಲ್ಲಿ ಹಿರಿದಾದ ವಿದ್ಯೆಯಿತ್ತು. ಬೆಳೆಯುವ ರಾಜಕುಮಾರರಿಗೆ ಅತ್ಯವಶ್ಯವಾದ ವಿದ್ಯೆಯದು. ರಾಜೋಚಿತವಾದ ವಿದ್ಯೆಗಾಗಿ ಪುಷ್ಕಳ-ಧನ-ಸಮರ್ಪಣದ ಔಚಿತ್ಯವನ್ನು ಭೀಷ್ಮರು ಚೆನ್ನಾಗಿಯೇ ಬಲ್ಲವರಾಗಿದ್ದರು. ಶ್ರೇಷ್ಠವಿದ್ಯೆಗಾಗಿ ಶ್ರೇಷ್ಠಧನಾರ್ಪಣೆಯು ಯುಕ್ತವೇ ತಾನೆ?)

ದ್ರೋಣರದ್ದೂ ನೇರವಾದ ವ್ಯವಹಾರವೇ ಸರಿ. 'ಆಚಾರ್ಯ-ವೇತನ'ದ (ವಿದ್ಯಾ-ಗುರುವಿಗೆ ಕೊಡುವ ಸಂಬಳ/ದಕ್ಷಿಣೆ) ಬಗ್ಗೆ ಆರಂಭದಲ್ಲೇ ಪ್ರಸ್ತಾವಮಾಡಿಬಿಟ್ಟರು. ಯುಧಿಷ್ಠಿರ ಮೊದಲಾದವರಿಗೆ ಹೀಗೆ ಹೇಳಿದರು: "ನೀವು ಕೃತಾಸ್ತ್ರರಾದ ಮೇಲೆ (ಎಂದರೆ ಅಸ್ತ್ರವಿದ್ಯೆಯನ್ನು ಚೆನ್ನಾಗಿ ಸಾಧಿಸಿದ ಬಳಿಕ) ನನಗೆ ಕೊಡಬೇಕಾದದ್ದನ್ನು ಈಗಲೇ ಹೇಳುತ್ತೇನೆ. ನೀವು ನಿಜವಾಗಿ ಹೇಳಿ, ಅದನ್ನು ಮಾಡಿಕೊಡುತ್ತೇವೆಂದು" - ಎಂದರು. "ಹಾಗೆಯೇ ಆಗಲಿ, ನಾವು ನಡೆಸಿಕೊಡುತ್ತೇವೆ" - ಎಂದು ಅರ್ಜುನಾದಿಗಳು ಹೇಳಿದರು.

ಪಾಂಡವರೆಲ್ಲರೂ ಕಾಲಕ್ರಮದಲ್ಲಿ ಕೃತಾಸ್ತ್ರರಾದರು. ಅವರ ಸಂಕಲ್ಪವೂ ದೃಢವಾಯಿತು. ಆಗ ದ್ರೋಣರು ಹೇಳಿದರು, ತಮಗೆ ಸಲ್ಲಬೇಕಿದ್ದ ವೇತನವನ್ನು ಪಡೆಯುವುದಕ್ಕಾಗಿ: "ಛತ್ರವತಿಯಲ್ಲಿ (ಎಂದರೆ ಆಹಿಚ್ಛತ್ರ-ನಗರಿಯಲ್ಲಿ) ಪೃಷತ-ಪುತ್ರನಾದ ದ್ರುಪದನೆಂಬ ರಾಜನಿರುವನು. ಅವನ ರಾಜ್ಯವನ್ನು ಅವನಿಂದ ಸೆಳೆದುಕೊಂಡು, ಅದನ್ನು ನೀವು ನನಗೆ ಬೇಗನೆ ಒಪ್ಪಿಸಬೇಕು" - ಎಂಬುದಾಗಿ.

ಆಗ ಐದೂ ಮಂದಿ ಪಾಂಡುಪುತ್ರರು ಯುದ್ಧದಲ್ಲಿ ದ್ರುಪದ ನೊಂದಿಗೆ ಕಾದು ಅವನನ್ನು ಸೋಲಿಸಿದರು. ದ್ರುಪದನನ್ನೂ ಆತನ ಮಂತ್ರಿಯನ್ನೂ ಬಂಧಿಸಿದರು, ದ್ರೋಣರಿಗೆ ತಂದೊಪ್ಪಿಸಿದರು.

ದ್ರೋಣರು ದ್ರುಪದನನ್ನು ಕುರಿತು ಹೀಗೆ ಹೇಳಿದರು.

"ರಾಜನೇ, ನಿನ್ನೊಂದಿಗೆ ಸಖ್ಯವನ್ನು ಮತ್ತೆ ಯಾಚಿಸುವೆ. ರಾಜನಲ್ಲದವನು ರಾಜನೊಂದಿಗೆ ಮಿತ್ರನಾಗಲು ಸಾಧ್ಯವಿಲ್ಲ - ಎಂಬುದಾಗಲ್ಲವೆ ನೀ ಹೇಳಿದುದು? ಆ ಕಾರಣಕ್ಕಾಗಿಯೇ ನಾನು ನಿನ್ನೊಂದಿಗೆ ರಾಜ್ಯದ ವಿಷಯದಲ್ಲಿ ಸೆಣಸಬೇಕಾಯಿತು, ಯಾಜ್ಞಸೇನನೇ!

ಇದೋ ಈಗ ರಾಜ್ಯವು ಹೀಗೆ ವಿಭಾಗವಾಗಬಹುದು: ಈ ಭಾಗೀರಥೀನದಿಯ ದಕ್ಷಿಣತೀರದಲ್ಲಿ ನೀನು ರಾಜನಾಗಿರುವೆಯಂತೆ, ಹಾಗೂ ಉತ್ತರತೀರದಲ್ಲಿ ನಾನು ರಾಜನಾಗಿರುವೆನು."

ಹೀಗೆ ಧೀಮಂತನಾದ ಭಾರದ್ವಾಜನು (ಎಂದರೆ ಭರದ್ವಾಜಪುತ್ರನಾದ ದ್ರೋಣನು) ಪಾಂಚಾಲ್ಯನಿಗೆ (ಎಂದರೆ ಪಂಚಾಲದೇಶದ ಅರಸನಾದ ದ್ರುಪದನಿಗೆ) ಹೇಳಿದನು.

ಸೂಚನೆ : 26/2/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.


ಭಾ – ರತವಾದ ಶಾಸ್ತ್ರೀಯ ಸಂಗೀತ (Bha – Ratavada Sastriya Sangita)

ಶ್ರೀಮತಿ ಪದ್ಮಿನಿ ಶ್ರೀನಿವಾಸನ್

 (ಪ್ರತಿಕ್ರಿಯಿಸಿರಿ lekhana@ayvm.in)

ಭಾರತೀಯ ಶಾಸ್ತ್ರೀಯ ಸಂಗೀತವನ್ನು (ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್), ನಮ್ಮ ದೇಶದ ಸಂಸ್ಕೃತಿಯನ್ನನುಸರಿಸಿ, ನಿಯಮಗಳಿಂದೊಡಗೂಡಿರುವ ಪ್ರಾಚೀನವಾದ ಸಂಗೀತವೆಂದು ತಿಳಿದಿದ್ದೇವೆ. ದೀರ್ಘ ಕಾಲದಿಂದ ಪ್ರಚಾರದಲ್ಲಿದ್ದು, ಗೌರವಾನ್ವಿತವಾದದ್ದು ದಕ್ಷಿಣ ಭಾರತದ ಕರ್ಣಾಟಕ ಸಂಗೀತ ಪದ್ಧತಿ. ಒಂದೆಡೆ ಕಲಾನಿಪುಣರು ಸಾಧನೆಯಿಂದ ಕೀರ್ತಿಯ ಶಿಖರವನ್ನು ಮುಟ್ಟುತ್ತಿರುವ ಸನ್ನಿವೇಶಗಳಿರುವಂತೆಯೇ, ಜನರಿಗೆ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಅನ್ನುವ ಅಭಿಪ್ರಾಯವೂ ಇಲ್ಲದಿಲ್ಲ. ಇಂದಿನ ಜೀವನ ನಿರ್ವಹಣೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ಆರ್ಥಿಕಮಾನದಂಡದಿಂದ ಅಳೆದಾಗ, ಸಂಗೀತದ ಕಲಿಕೆಗೆ ಶ್ರಮ ವ್ಯರ್ಥವೇ ಸರಿ. ಏಕೆಂದರೆ ಅದರಿಂದ ಸಾಕಷ್ಟು ವರಮಾನವೇ ಬರುತ್ತಿಲ್ಲ. ಆದ್ದರಿಂದ ಹವ್ಯಾಸ ಮಾತ್ರಕ್ಕೆ ಸಂಗೀತಾಭ್ಯಾಸವನ್ನು ಸೀಮಿತಗೊಳಿಸಿಕೊಳ್ಳಬೇಕಷ್ಟೆ - ಮುಂತಾದ ಅಭಿಪ್ರಾಯಗಳು ಕೇಳಿಬರುತ್ತಿವೆ. 

ಸಪ್ತಸ್ವರ ಪದ್ಧತಿ, ಸಂಗೀತದ ಪರಂಪರೆ

ಭಾರತೀಯ ಶಾಸ್ತ್ರ ಕಾವ್ಯಗಳು, ಪರಮಾತ್ಮನನ್ನು ಸಂತೋಷ ಪಡಿಸುವುದು, ಅವನ ಸಾಕ್ಷಾತ್ಕಾರವನ್ನು ಪಡೆಯುವುದು, ಮತ್ತು ಅದಕ್ಕೆ ಸಾಧನವಾಗಿ ಸದ್ಭಕ್ತಿಯ ಪೋಷಣೆ-ಇವೇ  ಸಂಗೀತದ ಗುರಿ ಎನ್ನುತ್ತವೆ. ವಿಶ್ವಸಂಗೀತ ಚರಿತ್ರೆಯಲ್ಲಿ ಉಳಿದ ರಾಷ್ಟ್ರಗಳು ಶೈಶವಾವಸ್ಥೆಯಲ್ಲಿರುವಾಗಲೇ ನಮ್ಮ ದೇಶದಲ್ಲಿ ಸಪ್ತಸ್ವರ ಪದ್ಧತಿ ಬಳಕೆಗೆ ಬಂದು, ಉನ್ನತ ಮಟ್ಟದ ಸಂಗೀತ ಕಲೆ ಬೆಳೆದಿತ್ತು. ಪ್ರಾಚೀನ ಗ್ರಂಥವಾದ ನಾರದ ಪರಿವ್ರಾಜಕ ಉಪನಿಷತ್ತಿನಲ್ಲಿಯೇ ಸಪ್ತಸ್ವರಗಳ ಉಲ್ಲೇಖವಿದೆ. ಸಂಗೀತದಿಂದ ದೇವತೆಗಳಲ್ಲದೆ ವಿರಕ್ತಶಿಖಾಮಣಿಗಳಾದ ಮಹರ್ಷಿಗಳೂ ದೇವತಾರಾಧನವನ್ನು ಮಾಡುತ್ತಿದ್ದರೆಂದು ಇತಿಹಾಸ ಪುರಾಣಗಳಿಂದ ತಿಳಿಯುತ್ತದೆ. ಬ್ರಹ್ಮರ್ಷಿಗಳಾದ ತುಂಬುರು, ನಾರದರಿಂದ ಹಿಡಿದು, ಮತಂಗ, ಕಶ್ಯಪಾದಿ ಮಹರ್ಷಿಗಳು ಸದ್ಭಕ್ತಿಯಿಂದ ಹಾಡಿ, ಸಂಗೀತೋಪಾಸನೆಯನ್ನು ಮಾಡಿದವರು.

ಸಂಗೀತವು ಕೊಡುವ ಉತ್ತಮೋತ್ತಮ ಲಾಭದ ಬಗ್ಗೆ ಪಾಠಮಾಡುತ್ತಾ, ಋಷಿ ಮನೋವೇದಿಗಳಾದ, ನಾದಯೋಗಿಗಳಾದ, ಸಂಗೀತವನ್ನು ಇಂದಿಗೂ ಭಗವತ್ಸಂಬಂಧಿಯಾಗಿ ಬಳಸಿ ಬೆಳೆಸಬಹುದೆಂಬುದಕ್ಕೆ ನಿದರ್ಶನವಾಗಿ ಶ್ರೀರಂಗಮಹಾಗುರುಗಳು - "ಈ ಮಾತು ಓಬಿರಾಯನ ಕಾಲದ್ದು, ಈಗೇಕೆ ಅದೆಲ್ಲ? ಎಂದರೆ, ಸದ್ಯದಲ್ಲಿಯೇ ನೂರು ವರ್ಷ ಹಿಂದಿದ್ದ ತ್ಯಾಗರಾಜರು ಸಂಗೀತವನ್ನು ಭಗವಂತನ ಮಾರ್ಗಕ್ಕನುಗುಣವವಾಗಿ  ಬೆಳೆಸಿದರಪ್ಪ" ಎಂದು ಹೇಳಿದ್ದರು. ಅವರು ತಮ್ಮ ಚಿಕ್ಕಂದಿನಿಂದ ತ್ಯಾಗರಾಜರ ಕೃತಿಗಳನ್ನು ಹಾಡುತ್ತಿದ್ದರಲ್ಲದೆ, ಸಂಗೀತದ ಬಗ್ಗೆ ಸಮಗ್ರನೋಟವನ್ನು ಹೀಗೆ  ಕೊಟ್ಟಿದ್ದರು. 

ಒಂದು ಬೀಜವು ಅಂಕುರ, ಕಾಂಡ, ಏಲೆ, ಹೂವು, ಕಾಯಿ, ಹಣ್ಣಾಗಿ ಮತ್ತೆ ಬೀಜದಲ್ಲಿ ಬಂದು ನಿಂತರೆ, ಅದರ ಬೆಳವಣಿಗೆ  ಪರಿಪೂರ್ಣವೆನಿಸಿಕೊಳ್ಳುತ್ತದೆ. ಅಂತೆಯೇ, ಜಗನ್ಮಾತಾಪಿತೃಗಳಾದ ಲಕ್ಷ್ಮೀನಾರಾಯಣರಿಂದ, ಪಾರ್ವತೀಪರಮೇಶ್ವರರಿಂದ ಹುಟ್ಟಿತು ನಾದ; ಸಮಸ್ತ ಚರಾಚರ ಜಗತ್ತಿನ ಮೇಲೆ ಅದರ ಪರಿಣಾಮ ಬೀರಿ, ಆ ಪ್ರಣವನಾದದಿಂದ ಸಪ್ತಸ್ವರಗಳು, ಅದರಿಂದ ರಾಗಗಳು ವಿಸ್ತಾರವಾದವು. ರಾಗದಿಂದ ಭಗವಂತನಲ್ಲಿ ಅನುರಾಗವನ್ನು ಬೆಳೆಸಿ, ಭಗವಂತನನ್ನು ಸೇರಬೇಕೆಂಬುದು ಸೃಷ್ಟಿಯ ವಿಸ್ತಾರದ ಕ್ರಮದ ವಿಧಿ. ಇವೇ ಶಾಸ್ತ್ರಗಳೆನಿಸಿದವು.

 ಸಂಗೀತದ ಸುವರ್ಣಯುಗದ (ಕ್ರಿ.ಶ.16 - 19ನೇ ಶತಮಾನ) ಅವಧಿಯಲ್ಲಿ, ಭದ್ರ ಬುನಾದಿಯನ್ನು ಕಟ್ಟಿದವರು ಸಂಗೀತ ಪಿತಾಮಹರೆನಿಸಿದ ಪುರಂದರದಾಸರು. ಸಂಗೀತ ತ್ರಿಮೂರ್ತಿಗಳೆಂದು ಖ್ಯಾತಿ ಪಡೆದ ಶ್ಯಾಮಾ ಶಾಸ್ತ್ರಿಗಳು, ತ್ಯಾಗರಾಜರು ಹಾಗೂ ಮುತ್ತುಸ್ವಾಮಿ ದೀಕ್ಷಿತರಿಂದ ಭವ್ಯವಾದ ಮೆರುಗನ್ನು ಪಡೆಯಿತು. ಗುರು ಶಿಷ್ಯ ಪರಂಪರೆಯಲ್ಲಿ ಮುಂದುವರೆದು, ಇಂದು ನಮಗೆ ಪರಿಚಿತವಾಗಿರುವುದು ಈ ಸಂಗೀತವೇ. ನಾರದ, ಪ್ರಹ್ಲಾದರಿಂದ ಶಾರ್ಙ್ಗದೇವನವರೆಗೆ ಭಕ್ತಿಮಾರ್ಗವನ್ನಪ್ಪಿ, ಸಂಗೀತ ಹಾಡಿದ ಋಷಿಪರಂಪರೆಯನ್ನು ಹಲವಾರು ಕೃತಿಗಳಲ್ಲಿ ಸ್ತುತಿಸಿದ್ದಾರೆ ಸಂತ ತ್ಯಾಗರಾಜರು.

ಸಂಗೀತವಿದ್ಯೆ ಕೊಡುವ ಅತ್ಯುತ್ತಮ ವರಮಾನ

ಗಾಂಧರ್ವವೇದವೆನಿಸಿದ ಸಂಗೀತವಿದ್ಯೆಯ ಲೌಕಿಕವಾದ ಪ್ರಯೋಜನಗಳು ಏನೇ ಇದ್ದರೂ, ಜ್ಞಾನ ಮೂಲವನ್ನು ಮುಟ್ಟಿಸುವುದೇ ಅದರ ಪರಮಗುರಿ. ಸಂಗೀತಕ್ಕೆ ಸಾರರೂಪವಾದ ವಿಷಯವನ್ನು ಪರಿಪೂರ್ಣವಾಗಿ ತಮ್ಮ ಮನಸ್ಸಿಗೆ ತೆಗೆದುಕೊಂಡು, ಅಂತರಂಗದಲ್ಲಿ ಅನುಭವಿಸಿ, ಅದರ ಹರಿವನ್ನು ಸಂಗೀತದಲ್ಲಿ ಸಾರವಾಗಿಟ್ಟು ಕೃತಿಗಳನ್ನು ರಚಿಸಿದರು ಉತ್ತಮ ವಾಗ್ಗೇಯಕಾರರು. ಅವರನ್ನು ಗೌರವಿಸಿ, ಅವರ ಮತಿಯ ಆಳವನ್ನರಿತು, ನಮ್ಮ ಮನೋಭಾವನೆಗಳನ್ನು  ಸೋಂಕಿಸದೆ ಹಾಡಬೇಕೆಂಬುದು ವಿಸ್ತಾರ ಕ್ರಮದ ಧರ್ಮ. ಮಹಾಗುರುಗಳು ಹೇಳುತ್ತಿದ್ದರು, "ಮರ್ಮವನ್ನರಿತು ಹಾಡಿದ ರಾಗಗಳು ಅದರ ಗತಿ ಹಾಗೂ ಸ್ವರ ವಿನ್ಯಾಸದಿಂದ ಸಪ್ತ ಕೇಂದ್ರಗಳನ್ನೂ ಪ್ರಬೋಧಿಸುವವು. ಧರ್ಮಾರ್ಥಕಾಮಗಳೊಂದಿಗೆ ಮೋಕ್ಷವನ್ನು ಒದಗಿಸಿ, ಚತುರ್ವಿಧ ಪುರುಷಾರ್ಥಗಳನ್ನು ಕೊಡುವವು ರಾಗಗಳು. ವಿದೇಶದಲ್ಲಿಯೂ ಸಂಗೀತ(ಮ್ಯೂಸಿಕ್) ಉಂಟು, ಆದರೆ ಚತುರ್ವಿಧ ಪುರುಷಾರ್ಥಕ್ಕೆ ಅನುಗುಣವಾಗಿ ಹೊಂದಿಕೊಂಡಿರುವುದು ನಮ್ಮ ದೇಶದಲ್ಲಿ ಮಾತ್ರ" ಎಂದು.

ಸಂಗೀತ ಯಾವುದಕ್ಕಾದರೂ ಕಟ್ಟಬಹುದು. ಆದರೆ ಅದರ ಹಿರಿಮೆಯನ್ನು ಅರಿತು, ಲೋಕರಂಜನೆಗೆ ಮಾತ್ರವಲ್ಲದೆ, ಭವಬಂಧನ ದಾಟಿ, ಆತ್ಮರಂಜನೆಯೊಡನೆ, ಪರಮಾತ್ಮನನ್ನು ಒಲಿಸಿ, ಆ ಮನಸ್ಸಿನಿಂದ ಲೋಕದಲ್ಲಿ ಸಂಗೀತವನ್ನು ಇಡುವುದು ಮಹರ್ಷಿಗಳ ಪುರುಷಾರ್ಥಮಯವಾದ ಸಂಸ್ಕೃತಿಯ ಕೊಡುಗೆ. ಅಷ್ಟು ದೂರ ವ್ಯಾಪಿಸಿದೆ ನಮ್ಮ ಭಾ-ರತ(ಪರಮಾತ್ಮಜ್ಯೋತಿಯಲ್ಲಿ ಮುಳುಗಿದ) ಮಹರ್ಷಿಗಳ ಧ್ಯೇಯ. ಒಂದು ಏಣಿಯನ್ನು ಹತ್ತಿ–ಇಳಿಯಲು ಉಪಯೋಗಿಸುವಂತೆ, ಪ್ರಕೃತಿಯ ತತ್ತ್ವ ಸೋಪಾನವನ್ನು ಮೆಟ್ಟಿ, ಪರಮಾತ್ಮದರ್ಶನ ಪಡೆದು, ಮತ್ತೆ ಅದೇ ತತ್ತ್ವಸೋಪಾನವನ್ನು ಬಳಸಿ, ಇಳಿದು, ಲೋಕಕ್ಕೆ ಸಂಸ್ಕೃತಿಯಾಗಿ ತಂದರು. ಅದೇ ಸೋಪಾನವನ್ನು ನಮ್ಮಂತಹ ಪಾಮರರು ಆಶ್ರಯಿಸಿ ಉದ್ಧಾರವಾಗಲೆಂದು ವಿದ್ಯೆ/ಕಲೆಗಳನ್ನೂ ತಂದರು. ಪೂರ್ವಸುಕೃತದ ಫಲವಾಗಿಯೇ ಈ ವಿದ್ಯೆಗಳು ಒಲಿಯುತ್ತವೆ ಎಂಬುದು ಹಿರಿಯರ ಮಾತು. ಹವ್ಯಾಸವಾಗಿ ಶುಭಾರಂಭಮಾಡಿ, ಮುಂದೆ ಶ್ರವಣ/ಕೀರ್ತನ ಭಕ್ತಿಯಲ್ಲಿ ಆಸಕ್ತಿಯನ್ನು ದೃಢಗೊಳಿಸಿಕೊಂಡು, ಪರಮಾತ್ಮನ ಅನುಗ್ರಹ ಪಡೆಯುವ ಮನೋರಂಜಕವಾದ ಮಾರ್ಗವಾದ ಭಾ-ರತೀಯ ಶಾಸ್ತ್ರೀಯ ಸಂಗೀತ (ಗೀತ-ನೃತ್ಯ–ವಾದ್ಯಗಳ ಸಮೂಹ)ವನ್ನು ಆವಿಷ್ಕರಿಸಿದ  ಋಷಿಗಳನ್ನು ನಮಸ್ಕರಿಸೋಣ!

ಸೂಚನೆ : 25/2/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

Friday, February 24, 2023

ಆಪ್ತವಾಕ್ಯವೆಂಬ ರಕ್ಷಾಕವಚ (Aptavakyavemba Raksakavaca)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)




ಮಹಾಭಾರತದ ಒಂದು ಪ್ರಸಂಗ. ಸದಾ ಪಾಂಡವರ ನಾಶವನ್ನೇ ಬಯಸಿ ಅದಕ್ಕಾಗಿಯೇ ಯೋಜನೆಯನ್ನು ಕೈಗೊಳ್ಳುವ ದುರ್ಯೋಧನನು ಪಾಂಡವರನ್ನು ವಾರಣಾವತ ಎಂಬ ಪ್ರದೇಶಕ್ಕೆ ಕಳಿಸುವ ಯೋಜನೆ ಮಾಡುತ್ತಾನೆ. ಅಲ್ಲಿ ಅಗ್ನಿಯ ಸ್ಪರ್ಶವಾದೊಡನೆ ಕ್ಷಣ ಮಾತ್ರದಲ್ಲಿ ಹೊತ್ತಿ ಉರಿಯುವ ಸಾಮಗ್ರಿಗಳಿಂದ ನಿರ್ಮಿತವಾದ ಸೌಧವೊಂದನ್ನು ನಿರ್ಮಿಸಿ, ಅದರಲ್ಲಿ ಪಾಂಡವರನ್ನು ಇರಿಸಿ, ಅಲ್ಲಿಯೇ ಅವರನ್ನು ದಹಿಸುವ ಕೆಟ್ಟ ಯೋಚನೆಯನ್ನು ಶಕುನಿ ಹಾಗೂ ಕರ್ಣರೊಂದಿಗೆ ಸಮಾಲೋಚಿಸಿ ಕೈಗೊಳ್ಳುತ್ತಾನೆ. ತಂದೆಯಾದ ದೃತರಾಷ್ಟ್ರನಿಗೆ ಪಾಂಡವರನ್ನು ವಾರಣಾವತಕ್ಕೆ ಕಳುಹಿಸಲು ಸಕಲ ಸಿದ್ಧತೆಗಳನ್ನು ಮಾಡುವಂತೆ ಸೂಚಿಸುತ್ತಾನೆ. ವಿದುರನಿಗೆ ದುರ್ಯೋಧನಾದಿಗಳ ಈ ದುಷ್ಟಕೃತ್ಯದ ಅರಿವಾಗಿ ಹೇಗಾದರೂ ಮಾಡಿ ಪಾಂಡವರನ್ನು ರಕ್ಷಿಸುವ ಉಪಾಯವನ್ನು ಮಾಡುತ್ತಾನೆ. ಧೃತರಾಷ್ಟ್ರನ ಆದೇಶದಂತೆ ಪಾಂಡವರು ತಾಯಿಯಾದ ಕುಂತಿ ಸಮೇತರಾಗಿ ವಾರಣಾವತಕ್ಕೆ ಹೊರಟು ನಿಂತಾಗ ಆಪ್ತನಾದ ವಿದುರನು ಸ್ವಲ್ಪ ದೂರ ಅವರನ್ನು ಅನುಸರಿಸಿ ಬಂದು ಧರ್ಮರಾಯನನ್ನು ಕುರಿತು ಏಕಾಂತದಲ್ಲಿ ಮುಂದಾಗುವ ಅನಾಹುತಕ್ಕೆ ರಕ್ಷಾಕವಚದಂತಿರುವ ಈ ಹಿತವಚನಗಳನ್ನು ಸೂಚ್ಯವಾಗಿ ಹೇಳುತ್ತಾನೆ. ಮನುಷ್ಯರನ್ನು ಕೊಲ್ಲಲು ಲೋಹಸಂಬಂಧವಾದ ಶಸ್ತ್ರಗಳು ಮಾತ್ರವೇ ಕಾರಣವಲ್ಲ, ಶತ್ರುಗಳು ಅವರ ನಾಶಕ್ಕೆ ಬೇರೆ ಉಪಾಯಗಳನ್ನೂ ಹುಡುಕುತ್ತಾರೆ. ವಿವೇಕದಿಂದ ಅದನ್ನು ಅರಿತು ಜಾಗೃತರಾಗಿರಬೇಕು. ಅಗ್ನಿಯು ಮಹಾರಣ್ಯವನ್ನೇ ಸುಟ್ಟರೂ, ಬಿಲದಲ್ಲಿರುವ ಸರ್ಪದಂತಹ ಜಂತುಗಳನ್ನು ಸುಡದು. ಸಂಚರಿಸುತ್ತಾ ಹೋದವನು ನಕ್ಷತ್ರಗಳಿಂದ ದಿಕ್ಕನ್ನು ಕಂಡುಕೊಳ್ಳುವನು. ಹೀಗೆ ವಿದುರನ ಮಾತುಗಳು ಒಗಟಿನಿಂದ ಕೂಡಿದ್ದರೂ, ಸೂಕ್ಷ್ಮಮತಿಯಾದ ಧರ್ಮರಾಯನಿಗೆ ಅವುಗಳ ಅರ್ಥ ತಿಳಿಯುತ್ತದೆ.  ಅವನು ಸದಾ ಜಾಗರೂಕನಾಗಿರುತ್ತಾನೆ. ವಾರಣಾವತಕ್ಕೆ ಬಂದು ಅಲ್ಲಿ ತಮಗಾಗಿ ದುರ್ಯೋಧನನಿಂದ ನಿರ್ಮಿತವಾದ ಭವನವನ್ನು ಪರೀಕ್ಷಿಸಿದೊಡನೆಯೇ ಇದು ಅಗ್ನಿಯ ಸ್ಪರ್ಶವಾದೊಡನೆಯೇ ಕ್ಷಣಮಾತ್ರದಲ್ಲಿ ದಹಿಸಲ್ಪಡುವ ಪರಿಕರಗಳಿಂದ ನಿರ್ಮಿತವಾದ ಸೌಧ ಎಂದು ಖಚಿತವಾಗುತ್ತದೆ. ವಿದುರನ ಮಾರ್ಗದರ್ಶನ ಹಾಗೂ ವಿದುರನೇ ಕಳುಹಿಸಿದ ಅವನ ಮಿತ್ರನ ಸಹಾಯದಿಂದ ಅರಗಿನ ಮನೆಯಲ್ಲಿ ಸುರಂಗವನ್ನು ತೋಡಿಸುತ್ತಾನೆ. ಮನೆಯು ದಹನವಾದಾಗ, ಸುರಂಗದಿಂದ ಪಾರಾಗಿ, ನಕ್ಷತ್ರಗಳ ಸಹಾಯದಿಂದ ದಿಕ್ಕನ್ನು ಗುರುತಿಸಿ ಪಾಂಡವರು ಕುಂತಿಯೊಂದಿಗೆ ಮುಂದಕ್ಕೆ ಸಂಚರಿಸುತ್ತಾರೆ. ಹೀಗೆ ಪಾಂಡವರು ಆಪ್ತವಾಕ್ಯ ಪರಿಪಾಲನೆಯಿಂದ ತಮಗೊದಗಿಬಂದ ಆಪತ್ತಿನಿಂದ ರಕ್ಷಿಸಲ್ಪಡುತ್ತಾರೆ.


ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಸಮಸ್ಯೆಗಳು, ಕಷ್ಟ ಕಾರ್ಪಣ್ಯಗಳು ಹಾಗೂ ಸಂಧಿಗ್ಧತೆಯು ಎದುರಾದಾಗ ಹಿತೈಷಿಗಳ ವಚನದ ಅವಶ್ಯಕತೆ ಇರುತ್ತದೆ; ಹಾಗೂ ಅವುಗಳು ಬೆಂಗಾವಲಾಗಿ ನಿಂತು ಕಾಪಾಡುತ್ತವೆ. ಹಾಗಾಗಿ, ಪ್ರತಿಯೊಬ್ಬರ ಜೀವನಕ್ಕೂ ಆಪ್ತರು ಹಾಗೂ ಆಪ್ತ ವಚನಗಳು ಅತ್ಯವಶ್ಯಕ.


"ಆಪ್ತರೆಂದರೆ ಬೇಕಾದವರು ಎಂಬಷ್ಟೇ ಅರ್ಥವಲ್ಲ; ವಿವೇಕಿಗಳ ಮತದಲ್ಲಿ ಆಪ್ತರೆಂದರೆ ಜ್ಞಾನಿಗಳು, ತಪೋಜ್ಞಾನಬಲಗಳಿಂದ ರಜಸ್ಸು ತಮಸ್ಸುಗಳನ್ನು ದಾಟಿದವರು. ತ್ರಿಕಾಲದಲ್ಲೂ ನಿರ್ಮಲವೂ, ಅವ್ಯಾಹತವೂ ಆದ ಪರಜ್ಞಾನ ಉಳ್ಳವರು. ಇವರೇ ಶಿಷ್ಟರು, ವಿಬುದ್ಧರು. ಇಂತಹವರು ಆಡುವ ಮಾತು ನಿಸ್ಸಂಶಯವಾಗಿಯೂ ಸತ್ಯವೇ. ರಜಸ್ಸು ತಮಸ್ಸುಗಳಿಲ್ಲದವರು ಅಸತ್ಯವನ್ನು ಏಕೆ ನುಡಿಯುವರು?" ಎಂಬ  ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ.  ಹಿಂದಿನ ಕಾಲದಲ್ಲಿ  ಜ್ಞಾನಿಗಳಾದ, ಇಡೀ ಪುರಕ್ಕೆ ಹಿತವನ್ನು ಬಯಸಿ ಅದಕ್ಕಾಗಿ ಶ್ರಮಿಸುವ ಕುಲಪುರೋಹಿತರು ಪ್ರತಿಯೊಂದು ರಾಜಮನೆತನಕ್ಕೂ ಇರುತ್ತಿದ್ದುದು ತಿಳಿದಿರುವ ವಿಷಯವೇ ಆಗಿದೆ. ಉದಾಹರಣೆಗೆ ತ್ರೇತಾಯುಗದಲ್ಲಿ ಬ್ರಹ್ಮರ್ಷಿ ವಸಿಷ್ಠರಂತಹವರು, ದ್ವಾಪರದಲ್ಲಿ ಧೌಮ್ಯರು, ಕೃಪಾಚಾರ್ಯ ಮೊದಲಾದವರು ಮತ್ತು ಕಲಿಯುಗದಲ್ಲಿ ಚಾಣಕ್ಯ,ವಿದ್ಯಾರಣ್ಯರಂತಹವರು. ಇಂದು ಅಂತಹ ಜ್ಞಾನಿಗಳ ಸಂಖ್ಯೆ ವಿರಳವಾಗಿದ್ದರೂ ಕೂಡ ಇಂದಿಗೂ ನಮ್ಮ ಭರತಭೂಮಿಯು ಜ್ಞಾನಿಗಳಿಂದ ಅಲಂಕೃತವಾಗಿಯೇ ಇದೆ. ಜ್ಞಾನಿಶ್ರೇಷ್ಠರಿಂದ ರಚಿತವಾದ ಅನೇಕ ಶಾಸ್ತ್ರಗ್ರಂಥಗಳು ಲೋಕದಲ್ಲಿವೆ. 'ಶಾಸನಾತ್ ತ್ರಾಣನಾತ್ ಚೈವ ಶಾಸ್ತ್ರಮಿತ್ಯಾಹು:' ಎಂಬಂತೆ ನಮಗೆ ವಿಧಿ ನಿಷೇಧಗಳನ್ನೊಳಗೊಂಡ ಶಾಸನವನ್ನು ಅದೇಶಿಸಿ, ಇಹ ಪರಗಳ ಜೀವನ ಸಂಚಾರಕ್ಕೆ ರಕ್ಷಣೆಯನ್ನು ಒದಗಿಸುವ ಅವುಗಳ  ಅನುಸಂಧಾನವೂ ಕೂಡ ಜೀವನದ ಸುಭದ್ರತೆಗೆ ಸಹಾಯಕವಾಗಿವೆ. ಲಭ್ಯವಿರುವ ಜ್ಞಾನಿಗಳ ಮಾರ್ಗದರ್ಶನ ಪಡೆದು ಅಥವಾ ಜ್ಞಾನಿಗಳಿಂದ ರಚಿತವಾದ ಶಾಸ್ತ್ರಗ್ರಂಥಗಳ ಒಳನೋಟದ ಸಹಾಯದಿಂದ ಜೀವನವನ್ನು ಸರ್ವ ರೀತಿಯಿಂದಲೂ ಸುಭದ್ರವಾಗಿರಿಸಿಕೊಳ್ಳೋಣ.


ಸೂಚನೆ: 23/02/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

Sunday, February 19, 2023

ವ್ಯಾಸ ವೀಕ್ಷಿತ - 26 ದ್ರೋಣ-ದ್ರುಪದರ ವೈರದ ಬೀಜ (Vyaasa Vikshita - 26 Drona-Drupadara Vairada Bija)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ದೀರ್ಘಕಾಲದ ಬ್ರಹ್ಮಚರ್ಯನಿಷ್ಠೆಯನ್ನು ಪಾಲಿಸಿದವರಲ್ಲಿ ಸಂಪಾದಿತವಾಗಬಹುದಾದ ಶಕ್ತಿಗಳು ಅಲ್ಪವೂ ಅಲ್ಲ, ಸಾಧಾರಣವೂ ಅಲ್ಲ. ಎಂದೇ, ಆ ಕ್ಷಣದಲ್ಲಿ ಸ್ಖಲಿಸಿದ ಭರದ್ವಾಜನ ರೇತಸ್ಸು ಮುಂದೆ ಪಡೆದ ದಿಕ್ಕೇ ಬೇರೆ: ಅದನ್ನು ಆ ಋಷಿಯು ಒಂದು ದ್ರೋಣದಲ್ಲಿ, ಎಂದರೆ ಕಲಶದಲ್ಲಿ, ಇಟ್ಟನು; ಅದುವೇ ಒಂದು ಶಿಶುವಾಗಿ ಪರಿಣಮಿಸಿತು! (ಅರ್ಥಾತ್ ಸ್ತ್ರೀಗರ್ಭಸಂಸ್ಪರ್ಶವೇ ಇಲ್ಲದೆ ಜನಿಸಿತು; ಮಹಾಭಾರತದಲ್ಲಿ ಬರುವ ಹಲವರ ಜನನ-ವೃತ್ತಾಂತಗಳು ಲೋಕವಿಲಕ್ಷಣವಾದವು).

ದ್ರೋಣದಲ್ಲಿ ಜನಿಸಿದ ಶಿಶುವಾದ್ದರಿಂದ ಅದಕ್ಕೆ ದ್ರೋಣನೆಂದೇ ಹೆಸರಾಯಿತು. ಭರದ್ವಾಜನು ಎಷ್ಟಾದರೂ ಧೀಮಂತನಲ್ಲವೇ?: ತನಗೆ ಕರಗತವಾಗಿದ್ದ ವೇದಗಳನ್ನೂ ವೇದಾಂಗಗಳನ್ನೂ ತನ್ನ ಕುಮಾರನಿಗೆ ಬೋಧಿಸಿದನು.

ಭರದ್ವಾಜನಿಗೆ ಪೃಷತನೆಂಬ ಒಬ್ಬ ಮಿತ್ರನಿದ್ದನು. ಆತನಿಗೆ ದ್ರುಪದನೆಂಬ ಒಬ್ಬ ಚಿಕ್ಕ ಮಗನಿದ್ದನು. ದ್ರುಪದನು ನಿತ್ಯವೂ ಭರದ್ವಾಜಾಶ್ರಮಕ್ಕೆ ಹೋಗಿ ಭರದ್ವಾಜಪುತ್ರನಾದ ದ್ರೋಣನೊಂದಿಗೆ ಆಟವಾಡುತ್ತಿದ್ದನು. ಅಲ್ಲಿಯೇ ಅಧ್ಯಯನವನ್ನೂ ಮಾಡುವುದಾಯಿತು.

ಪೃಷತನ ಕಾಲವಾದ ಬಳಿಕ ಆತನ ಪುತ್ರನಾದ ದ್ರುಪದನೇ ರಾಜನಾದನು. ಅಷ್ಟರಲ್ಲಿ ದ್ರೋಣನ ಕಿವಿಗೆ ಬಿದ್ದದ್ದು ಪರಶುರಾಮನ ವಿಷಯ: ತನ್ನಲ್ಲಿದ್ದ ಸಮಸ್ತಸಂಪತ್ತನ್ನೂ ಆತನು ದಾನಮಾಡಲಿರುವನೆಂಬುದು. ತನಗಿದ್ದ ಕೊರತೆಯೂ ಸಿರಿಯೇ ಆಗಿದ್ದರಿಂದ, ಅದನ್ನು ಅವನಿಂದ ಪಡೆಯಲೆಂದು, ಅವನತ್ತ ಸಾಗಿದನು.

ಪರಶುರಾಮನ ಬಳಿಗೆ ದ್ರೋಣನು ಹೋಗುವ ಹೊತ್ತಿಗಾಗಲೇ ತನ್ನ ಸೊತ್ತನ್ನೆಲ್ಲವನ್ನೂ ಹಂಚಿ ಪರಶುರಾಮನು ಕಾಡಿಗೆ ಹೊರಟಾಗಿತ್ತು. ಆಗ ಭರದ್ವಾಜಪುತ್ರನಾದ ದ್ರೋಣನು ಪರಶುರಾಮನನ್ನು ಮಾತನಾಡಿಸಿ, ತಾನು ವಿತ್ತಕಾಮನಾಗಿ, ಎಂದರೆ ಧನಾರ್ಥಿಯಾಗಿ, ಬಂದಿರುವುದನ್ನು ನಿವೇದಿಸಿಕೊಂಡನು.

ಆಗ ಪರಶುರಾಮನು ಹೇಳಿದನು: "ಅಯ್ಯಾ ನನ್ನ ಸರ್ವಸ್ವವನ್ನೂ ಇದೀಗ ದಾನಮಾಡಿಯಾಗಿದೆ. ಇನ್ನು ನನ್ನಲ್ಲುಳಿದಿರುವುದು ಈ ಶರೀರ ಮಾತ್ರವೇ. ನನ್ನಲ್ಲಿ ಅಸ್ತ್ರಗಳಂತೂ ಉಂಟು. ಅವನ್ನೋ ಅಥವಾ ನನ್ನ ಶರೀರವನ್ನೋ - ಯಾವುದಾದರೊಂದನ್ನು ನೀನು ಬಯಸಬಹುದು." ಅದಕ್ಕೆ ದ್ರೋಣನು, "ಸಮಸ್ತ ಅಸ್ತ್ರಗಳನ್ನೂ ( ಎಂದರೆ ಅವೆಲ್ಲದರ ಪ್ರಯೋಗವನ್ನೂ ಉಪಸಂಹಾರವನ್ನೂ) ನನಗೆ ದಯಪಾಲಿಸಿ ಎಂದನು. ( ಪ್ರಯೋಗಿಸಿದ ಅಸ್ತ್ರದ ಕಾರ್ಯವನ್ನು ಸ್ಥಗಿತಗೊಳಿಸುವುದು ಉಪಸಂಹಾರ: ಪ್ರಯುಕ್ತವಾದ ಅಸ್ತ್ರವನ್ನು ಹಿಂದಕ್ಕೆ ತೆಗೆದುಕೊಳ್ಳುವುದು.)

ಪರಶುರಾಮನು ಅದಕ್ಕೊಪ್ಪಿ ಅವನ್ನಿತ್ತನು. ಅವನ್ನು ಸ್ವೀಕರಿಸಿದ ದ್ರೋಣನು ಕೃತಕೃತ್ಯನಾದನು. ಎಲ್ಲರ ಪರಮಾದರಕ್ಕೆ ಪಾತ್ರವಾದ ಬ್ರಹ್ಮಾಸ್ತ್ರವನ್ನು ಪರಶುರಾಮನಿಂದ ಪಡೆದ ದ್ರೋಣನು ಪರಮಸಂತೋಷವನ್ನು ಹೊಂದಿದನು. ಈ ಅಸ್ತ್ರಬಲದಿಂದಾಗಿ, ನರರಲ್ಲಿ ಅತಿಶ್ರೇಷ್ಠನೂ ಆದನು.

ಅಂತೂ ಹೀಗೆ ಪುರುಷಶ್ರೇಷ್ಠನೂ ಪ್ರತಾಪಶಾಲಿಯೂ ಆದ ದ್ರೋಣನು ಈಗ ದ್ರುಪದರಾಜನ ಬಳಿಗೆ ಹೋದನು. "ನಾನು ನಿನ್ನ ಸ್ನೇಹಿತ" ಎಂದು ಹಳೆಯದನ್ನುಜ್ಞಾಪಿಸಿದನು.

ಆದರೆ ದ್ರುಪದನ ವರ್ತನೆ ಅನಿರೀಕ್ಷಿತವಾಗಿತ್ತು; ತಾನೀಗ ರಾಜನಾಗಿದ್ದುದರಿಂದ ದರ್ಪವು ತುಂಬಿತ್ತು. ಆತ ಹೇಳಿದ: ಶ್ರೋತ್ರಿಯನಾದವನಿಗೆ (ಬ್ರಾಹ್ಮಣನಾಗಿ ಜನಿಸಿರಬೇಕು; ಸಂಸ್ಕಾರಗಳಿಂದ ದ್ವಿಜತ್ವವನ್ನೂ ಹೊಂದಿರಬೇಕು; ವಿದ್ಯಾರ್ಜನೆಯಿಂದ ವಿಪ್ರತ್ವವನ್ನೂ ಹೊಂದಿರಬೇಕು - ಅಂತಹವನು ಶ್ರೋತ್ರಿಯನೆನಿಸುತ್ತಾನೆ) ಶ್ರೋತ್ರಿಯನಲ್ಲದವನು ಮಿತ್ರನಾಗಲಾರನಲ್ಲವೇ? ರಥಿಗೆ (ಎಂದರೆ ರಥವುಳ್ಳವನಿಗೆ) ರಥಿಯಲ್ಲದವನು ಸ್ನೇಹಿತನಾಗಲಾರ. ರಾಜನಾದವನಿಗೆ ರಾಜನಲ್ಲದವನು ಸಖನಾಗಲಾರ. ಹೀಗಿರುವಾಗ 'ಹಳೆಯ ವಯಸ್ಯ' ಎಂದು ಹೇಳಿಕೊಂಡು ಬಯಸುವುದಾದರೂ ಏನನ್ನು! - ಎಂದುಬಿಟ್ಟ!

ಸೂಚನೆ : 19/2/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷಪ್ರಶ್ನೆ - 26 (Yaksha Prashne - 26)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – 25 ಆಕಾಶಕ್ಕಿಂತಲೂ ಎತ್ತರವಾದುದು ಯಾವುದು?

ಉತ್ತರ - ತಂದೆ

ಈ ಸೃಷ್ಟಿಯಲ್ಲಿ ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ಪ್ರಾಶಸ್ತ್ಯವಿದೆ. ಅದಕ್ಕೇ ಮೀಸಲಾದ ಕರ್ತವ್ಯವಿದೆ. ಹಾಗಾಗಿ ಯಾವುದೂ ಶ್ರೇಷ್ಠವೆಂದಲ್ಲ, ಯಾವುದೂ ಕನಿಷ್ಠವೆಂದಲ್ಲ. ಯಾವುದೇ ಜೀವಿಯೂ ಈ ಜಗತ್ತನ್ನು ಕಾಣಲು ಎರಡು ಅತಿಮುಖ್ಯವಾದ ಪಾತ್ರವುಂಟು. ಅವೇ ತಂದೆ ಮತ್ತು ತಾಯಿ. ಇವರಿಬ್ಬರಲ್ಲಿ ಒಬ್ಬೊಬ್ಬರಿಗೂ ಒಂದೊಂದು ಬಗೆಯ ನಿರ್ವಹಣೆಯ ಹೊಣೆಗಾರಿಕೆ ಇದ್ದೇ ಇದೆ. ತಾಯಿಯಾದವಳು ತನ್ನ ಗರ್ಭದಲ್ಲಿ ಮಗುವನ್ನು ಹೊತ್ತು ಹೆತ್ತು ತನ್ನ ಕರ್ತವ್ಯವನ್ನು ನಿರ್ವಹಿಸುವಳು. ಸೃಷ್ಟಿಯಲ್ಲಿ ಸಂತತಿಯು ನಿರ್ವಿಕಾರವಾಗಿ ಮುಂದುವರಿಯಲು ತಾಯಿಯ ಪಾತ್ರ ಅತಿವಿಶಿಷ್ಟವಾದುದು. ಆದರೆ ತಂದೆಯ ಪಾತ್ರ ಪುರುಷನ ಸ್ಥಾನದ್ದು. ಅಂದರೆ ಲೋಕದಲ್ಲಿ ಎರಡು ಬಗೆಯ ಪುರುಷರಿರುತ್ತಾರೆ. "ದ್ವಿವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ। ಉತಮಃ ಪುರುಷಃ ತ್ವನ್ಯಃ ಪರಮಾತ್ಮೇತ್ಯುದಾಹೃತಃ" ಎಂಬಂತೆ ಉತ್ತಮ ಪುರುಷನಿಗೆ ಪರಮಾತ್ಮಾ ಎಂದು ಕರೆಯಲಾಗಿದೆ. ಆ ಪರಮಪುರುಷನನ್ನು ಹೊತ್ತು ಅದೇ ಭಾವವು ಮುಂದಿನ ಸಂತತಿಯಲ್ಲಿ ಬೆಳೆಯಲು ಅತಿಮುಖ್ಯವಾದ ಪಾತ್ರ ತಂದೆಯದ್ದು. ಶ್ರೀರಂಗಮಹಾಗುರುಗಳು ಹೀಗೊಂದು ಮಾತನ್ನು ಹೇಳುತ್ತಿದ್ದರು- " ತಂದೆ ಏನು ತಂದೆ? ಎಂದರೆ ಜ್ಞಾನವನ್ನು ತಂದೆ ಎನ್ನುವವನೇ ತಂದೆ" ಎಂದು.  ಯಾವನು ಜ್ಞಾನದ ಮೂಲವಾದ ಜ್ಞಾನಸ್ವರೂಪನಾದ ಭಗವಂತನನ್ನು ತನ್ನಲ್ಲಿ ಹೊತ್ತು ತನ್ನ ಮುಂದಿನ ಸಂತತಿಯು ಜ್ಞಾನಸಂತತಿಯಾಗಿ ಮುಂದುವರಿಯಬೇಕು ಎಂಬ ಆಶಯದಲ್ಲಿ ಈ ಸಂಸಾರದಲ್ಲಿ ಭಾಗಿಯಾಗುತ್ತಾನೋ ಅವನೇ ತಂದೆ. 

"ದ್ಯೌಃ ಪಿತಾ ಪೃಥಿವೀ ಮಾತಾ" ಎಂದೂ, " ಮಾತಾ ಪೂರ್ವರೂಪಂ ಪಿತೋತ್ತರರೂಪಂ ಪ್ರಜಾಸಂಧಿಃ" ಎಂದು ವೇದಮಾತೆಯು ತಂದೆ ತಾಯಂದಿರ ಮಾತ್ರ ಈ ಸೃಷ್ಟಿಯಲ್ಲಿ ಯಾವ ರೀತಿಯಾಗಿದೆ ಎಂಬುದನ್ನು ತಿಳಿಸುತ್ತಾಳೆ. ಮಾನವ ತನ್ನ ಈ ಜೀವಿತವನ್ನು ಸಾರ್ಥಕಪಡಿಸಿಕೊಳ್ಳಬೇಕಾದರೆ ಶರೀರದ ಅವಶ್ಯಕತೆ ಇದೆ. ಒಂದು ಜೀವ ಉತ್ಪತ್ತಿಯಾಗಲು ಶುಕ್ರ ಮತ್ತು ಶೋಣಿತ ಇವೆರಡರ ಅವಶ್ಯಕತೆ ಇದೆ. ಇವುಗಳು ತಂದೆ ಮತ್ತು ತಾಯಿಯಿಂದ ಬರುವ ಧಾತುಗಳು ಎಂದು ಆಯುರ್ವೇದ ಸಾರುತ್ತದೆ. ಒಟ್ಟಾರೆ ಒಂದು ಶರೀರರವು ಉತ್ಪತ್ತಿಯಾಗಲು ತಂದೆ ಮತ್ತು ತಾಯಿಯ ಸ್ಥಾನ ಎಷ್ಟು ಮುಖ್ಯವಾಗಿದೆ ಎಂದು ತಿಳಿಯಬಹುದು. ಶರೀರದಲ್ಲೂ ಹೊರಕವಚ ಮತ್ತು ಆತ್ಮಾ  ಎಂಬ ಎರಡು ಪ್ರಧಾನವಾದ ಭಾಗವಿದೆ. ಇಲ್ಲಿ ಹೊರಕವಚಕ್ಕೆ ಕಾರಣವಾದುದು ತಾಯಿಯಾದರೆ ಆತ್ಮಕ್ಕೆ-ಜೀವಭಾವಕ್ಕೆ ಕಾರಣವಾದುದು ತಂದೆ. ತಂದೆಯ ಇನ್ನೊಂದು ರೂಪವೇ ಪುತ್ರ. ತಂದೆಯ ಸೂಕ್ಷ್ಮರೂಪವು ತಾಯಿಯ ಗರ್ಭದ ಒಳಗೆ ಸೇರುತ್ತದೆ. ಅಲ್ಲಿಂದ ಮುಂದೆಕ್ಕೆ ಮಗುವಿನ ವಿಕಾಸವಾಗುತ್ತಾ ಸಾಗುತ್ತದೆ. "ಆತ್ಮಾ ವೈ ಪುತ್ರ ನಾಮಾಸಿ" ಎಂದು ಹೇಳುವಂತೆ ಪುತ್ರ ಎಂದರೆ ತಾನೇ-ಪತಿಯೇ ವೀರ್ಯರೂಪದಲ್ಲಿ ಪತ್ನಿಯ ಗರ್ಭವನ್ನು ಪ್ರವೇಶಿಸಿ ಜೀವರೂಪದಲ್ಲಿ ಹೊರಬಂದಿದ್ದು. ಆ ಪರಮಪುರುಷನ ವಿಸ್ತಾರವು ಈ ಶರೀರದಲ್ಲಿ ತಂದೆಯಿಂದಲೇ ಆಗುವಂತಹದ್ದು. ಆದ್ದರಿಂದ ತಂದೆಯ ಸ್ಥಾನ ಅತ್ಯಂತ ಎತ್ತರದಲ್ಲಿರುವಂತಹದ್ದು. ಪರಬ್ರಹ್ಮನ ಸ್ಥಾನವು ಮೇಲಕ್ಕೆ ತಾನೆ ಇರುವಂತಹದ್ದು! ಅಲ್ಲಿಂದಲೇ ವಿಭಾಗವಾಗಿ ಬಂದದ್ದು ಈ ಜೀವಭಾವ. ಸೂರ್ಯನಿಂದಲೇ ಬಂದ ಕಿರಣಗಳಂತೆ ಈ ಜಗತ್ತಿನಲ್ಲಿ ಎಲ್ಲ ಜೀವಗಳೂ ಪರಮಾತ್ಮನ ಅಂಶಗಳು. ಈ ಎಲ್ಲಾ ಕಾರಣಗಳಿಂದ ತಂದೆಯ ಸ್ಥಾನ ಅತ್ಯಂತ ಎತ್ತರದಲ್ಲಿರುವಂತಹದ್ದು. ಎಷ್ಟು ಎತ್ತರವೆಂದರೆ ಆಕಾಶಕ್ಕಿಂತಲೂ. ಅಂದರೆ ಆಕಾಶದ ಎತ್ತರವನ್ನು ಅಳಯಲು ಸಾಧ್ಯವೇ? ಅಂದರೆ ಅಸಾಧ್ಯವೇ!. ಈ ಆಕಾಶಕ್ಕೂ ಮೀರಿದ ಸ್ಥಾನವೇ ಪರಬ್ರಹ್ಮನ ಸ್ಥಾನ. ಇದೇ ತಂದೆಯ ಮೂಲಸ್ಥಾನ. ಅದು ಅತಿಎತ್ತರವಷೇ !. 

ಸೂಚನೆ : 19/2/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Thursday, February 16, 2023

ಅರಿತರೆ ವಿದುರ ನೀತಿಯ ಸಾರ - ಸಾಗಬಹುದು ಶೋಕದಿಂದ ದೂರ. (Aritare Vidura Nitiya Sara - Sagabahudu Sokadinda Dura.)

ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)




ಮನುಷ್ಯನಲ್ಲಿರುವ ಅಜ್ಞಾನ ಹಾಗೂ ಮೂಢತನವೇ ಅವರುಗಳನ್ನು ಶೋಕಸಾಗರದಲ್ಲಿ ಮುಳುಗಿಸುವಂತಹ ಪ್ರಮುಖ ಸಾಧನಗಳು. ಅದರ ನಿವಾರಣೆಗೆ ಸದ್ವಿಚಾರಗಳ ಶ್ರವಣ ಹಾಗೂ ಅದರ ಪರಿಪಾಲನೆಯೇ ಉಪಾಯ. ಏಕೆಂದರೆ ಜೀವನದ ವ್ಯಾಪ್ತಿ ಎನ್ನುವುದು ಸಾಮಾನ್ಯರ ದೃಷ್ಟಿಗೆ ಗೋಚರವಾಗುವಷ್ಟು ಮಾತ್ರ ಸೀಮಿತವಾಗಿಲ್ಲ. ಸ್ಥೂಲ,ಸೂಕ್ಷ್ಮ ಮತ್ತು ಪರಾ ಎಂಬ ಮೂರೂ ದೃಷ್ಟಿಯನ್ನು ಹೊಂದಿದ ಜ್ಞಾನಿಗಳ ವಾಣಿಗೆ ಶೋಕ ಮೋಹಗಳನ್ನು ದೂರ ಮಾಡುವ ಶಕ್ತಿ ಇರುತ್ತದೆ. ಅರ್ಜುನನೂ ಒಂದು ರೀತಿಯ ಅಜ್ಞಾನಕ್ಕೊಳಗಾಗಿ ಯುದ್ಧಮಾಡಲು ಹಿಂಜರಿದಾಗ ಭಗವದ್ವಾಣಿಯು ಅವನನ್ನು ಎಬ್ಬಿಸಿ, ಶೋಕ ಮೋಹಗಳಿಂದ ದೂರ ಮಾಡಿ ಕಾರ್ಯ ಪ್ರವೃತ್ತನನ್ನಾಗಿ ಮಾಡಿತು.


ಮಹಾಮೇಧಾವಿಯಾದಂತಹ ವಿದುರನು, ಶೋಕ ಮೋಹಗಳಿಂದ ಆವೃತನಾಗಿ, ನಿದ್ರಾಹೀನನಾಗಿ, ದುಃಖಿಸುತ್ತಿರುವ ಧೃತರಾಷ್ಟ್ರನ  ಕ್ಷೇಮಕ್ಕಾಗಿ ಅನೇಕ ಹಿತನುಡಿಗಳನ್ನು ಹೇಳುತ್ತಾನೆ. ಅವುಗಳು ಇಂದಿಗೂ ನಿತ್ಯ ನೂತನವಾಗಿದ್ದು ಲೋಕದಲ್ಲಿರುವ ಅಜ್ಞಾನವನ್ನು ದೂರ ಮಾಡಲು ಸಹಾಯಕವಾಗಿವೆ.

ಮನುಷ್ಯನು ನಿತ್ಯವೂ ಕೃತಜ್ಞತೆಯಿಂದ ಭಾವಿಸಿ ಪೂಜಿಸಬೇಕಾದವರ ಬಗ್ಗೆ ವಿದುರನು ಹೀಗೆ ವಿವರಿಸುತ್ತಾನೆ.


ಪಂಚಾಗ್ನಯೋ ಮನುಷ್ಯೇಣ ಪರಿಚರ್ಯಾ: ಪ್ರಯತ್ನತ: l

ಪಿತಾ ಮಾತಾಗ್ನಿರಾತ್ಮಾ ಚ ಗುರುಶ್ಚ ಭರತರ್ಷಭ ll

ಐದು ಅಗ್ನಿಗಳನ್ನು ಮಾನವನು ಪ್ರಯತ್ನಪೂರ್ವಕವಾಗಿ ಪೂಜಿಸಬೇಕು. ಅವರೆಂದರೆ - ತಂದೆ, ತಾಯಿ, ಯಜ್ಞೇಶ್ವರ ಆತ್ಮ ಮತ್ತು ಗುರು.


ನಮ್ಮ ಸಂಸ್ಕೃತಿಯಲ್ಲಿ ತಂದೆ, ತಾಯಿ ಹಾಗೂ ಗುರುವಿಗೆ ಅತ್ಯಂತ ಮಹತ್ವಪೂರ್ಣವಾದ ಸ್ಥಾನವಿದೆ. ತಂದೆ, ತಾಯಿಗಳು ನಮಗೆ ಅತ್ಯಮೂಲ್ಯವಾದ ಶರೀರವನ್ನು ಕೊಟ್ಟು ಅದರ ಪಾಲನೆ ಪೋಷಣೆ ಮಾಡಿರುತ್ತಾರೆ. ನಾವು ಭೌತಿಕ, ದೈವಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳ ಸಾಧನೆ ಮಾಡುವುದಕ್ಕೆ ಈ ಮಾನವ ಶರೀರವೇ ಅತ್ಯವಶ್ಯಕವಾದ ಸಾಧನವಾಗಿದೆ. ಅಂತಹ ಶರೀರವನ್ನು ದಯಪಾಲಿಸಿ ಅದನ್ನು ಸರ್ವ ರೀತಿಯಿಂದಲೂ ಪೋಷಿಸಿದ ತಂದೆ ತಾಯಿಗಳನ್ನು ಪೂಜ್ಯ ಭಾವನೆಯಿಂದ ನೋಡುವುದು,ಅವರ ಸೇವೆಯನ್ನು ಮಾಡುವುದು ಮಕ್ಕಳ ಆದ್ಯ ಕರ್ತವ್ಯ. ಲೋಕಕ್ಕೆಲ್ಲಾ ತಂದೆ ತಾಯಿಗಳಾದಂತಹ ಭಗವಂತ ಭಗವತಿಯರ ಒಂದು ಶಕ್ತಿ ಅವರಲ್ಲಿಯೂ ಬಂದಿರುವುದರಿಂದ ಅವರು ಸರ್ವದಾ ಪೂಜನೀಯರು.

 ಇನ್ನು ಗುರುವಿನ ಮಹಿಮೆಯು ಹೇಳತೀರದು. ನಮ್ಮ ಶಾಸ್ತ್ರಗ್ರಂಥಗಳೆಲ್ಲವೂ ಬಹುವಿಧವಾಗಿ ಗುರುವಿನ ಮಹಿಮೆಯನ್ನು ಕೊಂಡಾಡಿವೆ. ಗುರುವು ಸೃಷ್ಟಿರಹಸ್ಯವನ್ನು ಬಲ್ಲವನಾದ್ದರಿಂದ ಅವನನ್ನು ಬ್ರಹ್ಮನೆಂದೂ, ಅದರ ರಕ್ಷಣೆಯ ಮರ್ಮವನ್ನು ಅರಿತವನಾದ್ದರಿಂದ ವಿಷ್ಣುವೆಂದೂ, ಲಯದ ಗುಟ್ಟನ್ನು ತಿಳಿದವನಾದ್ದರಿಂದ ಶಿವನೆಂದೂ ಕೊಂಡಾಡಿದ್ದಾರೆ. ಅಷ್ಟೇ ಅಲ್ಲದೇ ಈ ಮೂರನ್ನೂ ಮೀರಿದ ಪರಬ್ರಹ್ಮ ಸ್ವರೂಪವನ್ನೂ ಅವನು ಅರಿತು ಅದರಲ್ಲಿ ಒಂದಾಗಿರುವುದರಿಂದಲೇ  ಅವನು ತನ್ನನ್ನು ಆಶ್ರಯಿಸಿದ ಶಿಷ್ಯನ ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಿ ಶಿಷ್ಯನ ಹೃದಯದಲ್ಲಿ ಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸಲು ಸಮರ್ಥನಾಗಿರುತ್ತಾನೆ. " ಗುರುವು ಸೃಷ್ಟಿನ್ಯಾಸ, ಸ್ಥಿತಿನ್ಯಾಸ, ಲಯನ್ಯಾಸಗಳ ರಹಸ್ಯವನ್ನರಿತಿರಬೇಕು. ಅದಕ್ಕೇ ಅವನು ಬ್ರಹ್ಮ, ವಿಷ್ಣು,ಮಹೇಶ್ವರ ಇವರಿಗೆಲ್ಲಾ ಮೂಲವಾಗಿರುವ ಸನಾತನಸತ್ಯದಲ್ಲಿ ತನ್ಮಯನಾಗಿರುವುದರಿಂದ ಅವನು ಪರಬ್ರಹ್ಮವೂ ಆಗಿದ್ದಾನೆ." ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ. ಪರಬ್ರಹ್ಮ ಸ್ವರೂಪಿಯಾದ ಸದ್ಗುರುವನ್ನು ಆಶ್ರಯಿಸಿ ನಿತ್ಯವೂ ಆರಾಧಿಸಿದಾಗ ಜೀವನದ ಅಂಧಕಾರ ದೂರವಾಗಲು ಸಾಧ್ಯ.


 ಇನ್ನು ಅಗ್ನಿ, ದೇವತೆಗಳನ್ನು ಯಜ್ಞ ಯಾಗಾದಿಗಳ ಮೂಲಕ ಆರಾಧಿಸುವಾಗ ಅಗ್ನಿಯನ್ನು ವಾಹಕವಾಗಿಟ್ಟುಕೊಂಡು ಹವಿಸ್ಸನ್ನು (ಅಗ್ನಿಗೆ ಸಮರ್ಪಿಸುವ ಪದಾರ್ಥ) ಸಮರ್ಪಿಸಿದಾಗ ಆಯಾಯ ದೇವತೆಗಳಿಗೆ ಅದನ್ನು ಅಗ್ನಿಯು ತಲುಪಿಸುವುದರಿಂದ ಅಗ್ನಿಗೆ ಹವ್ಯವಾಹನವೆಂಬ ಹೆಸರು. ಇದು ಅಗ್ನಿಯ ಹೊರರೂಪವಾದರೆ, ಒಳ ಭೂಮಿಕೆಗೆ ಸೇರಿದ ಅಗ್ನಿ ಒಂದು ಉಂಟು. ಆ ಅಗ್ನಿಯನ್ನೇ ಜ್ಞಾನಿಗಳು "ಅಗ್ರo ನಯತಿ ಇತಿ ಅಗ್ನಿ:" ಅಗ್ರವಾದ ಜ್ಞಾನದ ಸ್ಥಾನಕ್ಕೆ ಯಾವುದು ಕರೆದುಕೊಂಡು ಹೋಗುತ್ತದೆಯೋ ಅಂತಹ ಚಿದಾನಂದ ಜ್ಯೋತಿಗೆ ಅಗ್ನಿ ಎನ್ನುವ ಹೆಸರುಂಟು. ಹೊರಗಡೆಯ ಅಗ್ನಿ  ನಮ್ಮೊಳಗೇ ಬೆಳಗುತ್ತಿರುವ ಪರಮಾತ್ಮನೆಂಬ ಅಗ್ನಿಯ ಪ್ರತೀಕವಾಗಿದೆ. ಹಾಗಾಗಿ ಅಂತಹ ಯಜ್ಞೇಶ್ವರನು ಸದಾ ಪೂಜನೀಯ. ಅಂತೆಯೇ ನಮ್ಮ ಇರುವಿಕೆಗೆ ಮೂಲ ಕಾರಣನಾಗಿರುವ ಪರಮಾತ್ಮನೆಂಬ ಅಗ್ನಿಯನ್ನು ನಿತ್ಯವೂ ಉಪಾಸನೆ ಮಾಡಿದಾಗ ಅಂಧಕಾರದ ನಿವೃತ್ತಿ, ಶೋಕಸಾಗರದಿಂದ ಬಿಡುಗಡೆ.

ಯದಿ ಸಂತಂ ಸೇವತಿ ಯಾದ್ಯಸಂತಂ ತಪಸ್ವಿನಂ ಯದಿ ವಾ ಸ್ತೇನಮೇವ l

ವಾಸೋ ಯಥಾ ರಂಗವಶಂ ಪ್ರಯಾತಿ ತಥಾ ಸ ತೇಷಾo ವಶಮಭ್ಯುಪೈತಿ ll


ದಾರಕ್ಕೆ ಯಾವ ಬಣ್ಣ ಹಾಕಲಾಗುವುದೋ, ಬಟ್ಟೆಯೂ ಅದೇ ಬಣ್ಣದ್ದಾಗಿರುತ್ತದೆ. ಅದರಂತೆಯೇ ಸತ್ಪುರುಷ, ದುರ್ಜನ, ತಪಸ್ವಿ, ಕಳ್ಳ - ಇವರಲ್ಲಿ ಯಾರನ್ನು ಯಾರು ಸೇವಿಸುತ್ತಾರೋ ಅವರು ಅವರಂತೆಯೇ ಆಗುತ್ತಾರೆ- ಅಂದರೆ ಅವರ ಪ್ರಭಾವಕ್ಕೆ ಒಳಗಾಗುತ್ತಾರೆ.

ಇಲ್ಲಿ ನಾವು ಎಂತಹವರ ಸಹವಾಸ ಹಾಗೂ ಸೇವೆಗಳನ್ನು ಮಾಡಿದಾಗ ನಮ್ಮ ಜೀವನ ಯಾವ ರೀತಿಯಾಗಿ ರೂಪಿತವಾಗುತ್ತದೆ ಎಂಬುದನ್ನು ವಿದುರನು ಉದಾಹರಣೆಯ ಮೂಲಕ ಮನಮುಟ್ಟುವಂತೆ ವಿವರಿಸಿದ್ದಾನೆ.


 ನಾವು ನಿರಂತರವಾಗಿ ಯಾರ ಸಾನ್ನಿಧ್ಯದಲ್ಲಿರುತ್ತೇವೆಯೋ ಅವರಲ್ಲಿರುವ ಗುಣ ದೋಷಗಳು ನಮ್ಮಲ್ಲಿಯೂ ಊರ್ಜಿತವಾಗುತ್ತವೆ.  ಹಾಗಾಗಿ ಸದ್ಗುಣ ಸಂಪನ್ನರ ಸಹವಾಸ ಹಾಗೂ ಸೇವೆ ಕಲ್ಯಾಣಪ್ರದ. ಸೇವೆ ಎಂದರೆ ಅವರ ಕೆಲಸಗಳನ್ನು ಮಾಡುವುದು ಎಂದು ಮಾತ್ರವಲ್ಲ;  ಅವರಲ್ಲಿರುವ ಗುಣಗಳನ್ನು ನಮ್ಮೊಳಗೆ ತೆಗೆದುಕೊಳ್ಳುವುದು ಎಂದರ್ಥ.

ದುರ್ಯೋಧನನು ಬಾಲ್ಯದಿಂದಲೂ ನಿರಂತರವಾಗಿ ದುರ್ಗುಣ, ದುರಾಚಾರಗಳಿಂದ ಯುಕ್ತನಾದಂತಹ ಶಕುನಿಯ ಸಾನ್ನಿಧ್ಯದಲ್ಲಿ ಬೆಳೆದ ಕಾರಣ ಅವನಲ್ಲಿಯೂ ದುರ್ಗುಣಗಳು ಗಟ್ಟಿಯಾಗಿ ಬೇರೂರಲ್ಪಟ್ಟವು. ಪಾಂಡವರ ಮೇಲಿನ ಅವನ ದುರಾಚಾರಕ್ಕೆ ಶಕುನಿಯ ಪ್ರಚೋದನೆಯೇ ಪ್ರಧಾನವಾಗಿ ಕಾರಣವಾಯಿತು. ಪಾಂಡವರು ವನವಾಸದ ಸಂದರ್ಭದಲ್ಲಿಯೂ ಸತ್ಪುರುಷರ ಸಂಗ ಹಾಗೂ ಸೇವೆಯಲ್ಲಿ ನಿರತರಾದ್ದರಿಂದ ಅವರ ಮನಸ್ಸಿನಲ್ಲಿ ಶಾಂತಿ ನೆಲೆಯೂರಿತ್ತು. 'ಸಜ್ಜನರ ಸಂಗ ಹೆಜ್ಜೇನು ಸವಿದಂತೆ' ಎಂಬಂತೆ ಮನೋ ಬುದ್ಧಿಗಳಿಗೆ ಅಮೃತಧಾರೆಯನ್ನು ಸುರಿಸುವ ಶಕ್ತಿ ಇರುವಂತಹ ಸಜ್ಜನರ ಸಾಂಗತ್ಯವನ್ನೇ ಬಯಸಿದಾಗ  ಶಾಂತಿ ಹಾಗೂ ನೆಮ್ಮದಿಗಳಿಂದ ಕೂಡಿದ ಬಾಳಾಟವನ್ನು ನಡೆಸಬಹುದು ಎಂಬುದು ವಿದುರನ ಈ ಮಾತಿನ ಸಾರವಾಗಿದೆ.

ಸೂಚನೆ:  16/02/2023 ರಂದು ಈ ಲೇಖನವು ವಿಶ್ವವಾಣಿಯ ಗುರುಪುರವಾಣಿ ಯಲ್ಲಿ ಪ್ರಕಟವಾಗಿದೆ.


ದೇವತೆಗಳಲ್ಲಿ ಯಾರು ಹೆಚ್ಚು? (Devategalalli Yaru Heccu?)

ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್ 

ಪ್ರತಿಕ್ರಿಯಿಸಿರಿ lekhana@ayvm.in



ಘಂಟಾಕರ್ಣನೆಂಬ ರಾಕ್ಷಸನಿದ್ದ. ಅಪ್ಪಟ ಶಿವಭಕ್ತನಾತ. ಆದರೆ 'ನಾರಾಯಣ' ಎಂಬ ಶಬ್ದವು ತನ್ನ ಕಿವಿಗೆ ಬೀಳಕೂಡದೆಂದು ಕಿವಿಗಳಿಗೆ ಘಂಟೆಗಳನ್ನು ಕಟ್ಟಿಕೊಂಡು ಅವನ್ನು ಅಲ್ಲಾಡಿಸುತ್ತಲೇ ಇದ್ದ. ಒಮ್ಮೆ ಈಶ್ವರನು ಪ್ರತ್ಯಕ್ಷನಾಗಿ, ವರವನ್ನು ಬೇಡೆಂದನು. ಘಂಟಾಕರ್ಣ, ತನಗೆ ಮೋಕ್ಷವನ್ನು ದಯಪಾಲಿಸಬೇಕೆಂದ. ಆಗ ಈಶ್ವರನು, 'ನಿನ್ನ ಭಕ್ತಿಯನ್ನು ಮೆಚ್ಚಿರುವೆ; ಆದರೆ, ನೀನು ವಿಷ್ಣುವನ್ನು ದ್ವೇಷಿಸುತ್ತಿರುವೆ. ಅವನ ಕ್ಷಮೆಯನ್ನು ಬೇಡಿಕೊಂಡು ಬಂದರೆ ನಿನಗೆ ಮೋಕ್ಷವನ್ನು ಕೊಡುವೆ; ಅಜ್ಞಾನಿಗಳು ವಿಷ್ಣುವಿಗೂ ನನಗೂ ಭೇದವನ್ನು ಕಲ್ಪಿಸುತ್ತಾರೆ; ಇದು ತಪ್ಪು' ಎಂದು ಹೇಳಿ ಮಾಯವಾದನು. ಒಡನೆಯೇ ಘಂಟಾಕರ್ಣನು ವಿಷ್ಣುವಿನಲ್ಲಿ ತನಗಿದ್ದ ವೈರವನ್ನು ಬಿಟ್ಟು, ಅವನನ್ನು ಕುರಿತು ತಪಸ್ಸನ್ನಾಚರಿಸಿದ. ವಿಷ್ಣುವು ಪ್ರತ್ಯಕ್ಷನಾದಾಗ, ಘಂಟಾಕರ್ಣ, 'ನಾನು ತಿಳಿಯದೆ, ತಮ್ಮನ್ನು ದ್ವೇಷಿಸಿದೆ. ಈಶ್ವರನು ತಿಳಿವಳಿಕೆಯನ್ನು ಕೊಟ್ಟನು. ನನ್ನ ತಪ್ಪಿಗಾಗಿ ತಮ್ಮಲ್ಲಿ ಕ್ಷಮೆಯನ್ನು ಬೇಡಿಕೊಳ್ಳುವೆ" ಎಂದನು. ವಿಷ್ಣುವು ಇವನ ಪ್ರಾರ್ಥನೆಗೆ ಓಗೊಟ್ಟು ಇವನ ತಪ್ಪನ್ನು ಕ್ಷಮಿಸಿದನು. ಘಂಟಾಕರ್ಣನಿಗೆ ಮೋಕ್ಷ ಪ್ರಾಪ್ತಿಯಾಯಿತು.


ನಮ್ಮ ಪುರಾಣಗಳಲ್ಲಿ ಯಾವುದೋ ಒಂದು ದೇವತೆಯ ಮಹಿಮೆಯನ್ನು ಹೇಳುತ್ತಿರುವಾಗ, ಮನಸ್ಸು ಆ ದೇವತೆಯಲ್ಲೇ ನೆಡಲಿ ಎಂಬ ಉದ್ದೇಶದಿಂದ ಆ ದೇವತೆಯನ್ನು ಹಾಡಿ ಹೊಗಳಿ, ಉಳಿದೆಲ್ಲ ದೇವತೆಗಳ ಮಹಿಮೆಯನ್ನು ಕೆಳಕ್ಕೆ ತಳ್ಳಿರುವುದುಂಟು. ಒಬ್ಬರೇ ವ್ಯಾಸರು ಒಂದೊಂದು ಪುರಾಣದಲ್ಲಿ ಒಬ್ಬೊಬ್ಬ ದೇವತೆಯ ಪಾರಮ್ಯವನ್ನು ಎತ್ತಿಹಿಡಿದಿದ್ದಾರೆ. ದೇವತೆಗಳಲ್ಲಿ ಭೇದವನ್ನೆಣಿಸಬಾರದು ಎಂಬ ನೀತಿಯನ್ನು ಸಾರುವ ಕಥೆಗಳೂ ಇವೆ. ಸರಿಯಾದ ಮಾರ್ಗದರ್ಶನವಿಲ್ಲದಿದ್ದರೆ ಇದೊಂದು ಗೊಂದಲವಾಗುವುದು ಸಹಜ.


ಶ್ರೀರಂಗಮಹಾಗುರುಗಳು, ಶಿವ ದೊಡ್ಡವನೋ? ವಿಷ್ಣು ದೊಡ್ಡವನೋ? ಎಂಬ ಪ್ರಶ್ನೆ ಬಂದಾಗ, ಪರಬ್ರಹ್ಮವೇ ತ್ರಿಮೂರ್ತಿಗಳಾಗಿ ಕೆಲಸ ನಿರ್ವಹಿಸುವ ಬಗ್ಗೆ ಹೀಗೊಂದು ಸುಂದರ ಉಪಮಾನವನ್ನು ಕೊಟ್ಟಿದ್ದಾರೆ. "ಒಬ್ಬನೇ ನಾಟಕದಲ್ಲಿ ಮೂರು ಪಾರ್ಟು ಹಾಕುತ್ತಾನೆ. ಬೇರೆ ಬೇರೆ ಪಾರ್ಟುಗಳಲ್ಲಿ ಬೇರೆ ಬೇರೆ ಬಣ್ಣಗಳು, ಬೇರೆ ಬೇರೆ ವೇಷ-ಉಡಿಗೆ ತೊಡಿಗೆಗಳು, ಕಾರ್ಯಗಳೂ ಬೇರೆ ಬೇರೆ".

ಆಹಾರ ಸೇವನೆ ಮಾಡುವಾಗ, ಒಬ್ಬೊಬ್ಬರಿಗೆ ಒಂದೊಂದು ರಸ ರುಚಿಸುತ್ತದೆ. ಒಂದು ರಸವನ್ನು ಹೆಚ್ಚು ಇಷ್ಟಪಟ್ಟು ತಿಂದರೂ  ಉಳಿದ ರಸಗಳನ್ನು ಕಡೆಗಣಿಸುವಂತಿಲ್ಲ. ಒಳ್ಳೆಯ ಸ್ವಾಸ್ಥ್ಯಕ್ಕೆ ಷಡ್ರಸಗಳೂ ಬೇಕು ಎನ್ನುತ್ತಾರೆ ಆಹಾರಶಾಸ್ತ್ರಜ್ಞರು.


ರಾಷ್ಟ್ರಕವಿ ಕಾಳಿದಾಸನು "ಒಂದೇ ಪರಬ್ರಹ್ತವಸ್ತುವೇ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರೆಂಬ ಮೂರು ಪ್ರಕಾರದ ಭೇದಗಳನ್ನು ತಾಳಿತು. ಒಂದೊಂದು ಸನ್ನಿವೇಶದಲ್ಲಿ ಒಬ್ಬೊಬ್ಬರು ಮುಖ್ಯ; ಮತ್ತೊಬ್ಬರು ಅಮುಖ್ಯರಾಗುತ್ತಾರೆ" ಎನ್ನುತ್ತಾನೆ.(ಏಕೈವ ಮೂರ್ತಿಃ ಬಿಭಿದೇ  ತ್ರಿಧಾ ಸಾ, ಸಾಮಾನ್ಯಮೇಷಾಂ ಪ್ರಥಮಾವರತ್ವಂ") ಯುದ್ಧ ಮಾಡಬೇಕಾದಾಗ, ವೈದ್ಯ ಅಮುಖ್ಯ. ಯೋಧನೇ ಮುಖ್ಯ. ಆದರೆ, ರೋಗ ಚಿಕಿತ್ಸೆ ಮಾಡಬೇಕಾದಾಗ, ವೈದ್ಯನೇ ಮುಖ್ಯನಾಗುತ್ತಾನಷ್ಟೆ.


ನಮ್ಮ ಕುಲಾಚಾರದಂತೆಯೋ, ನಮ್ಮ ಅಭಿರುಚಿಯಂತೆಯೋ, ಯಾವ ದೇವತೆಯನ್ನಾದರೂ ವಿಶೇಷವಾಗಿ ಪೂಜಿಸೋಣ. ಆದರೆ, ಒಂದೇ ಮಹಾಶಕ್ತಿಯೇ ವಿವಿಧ ಕಾರ್ಯಗಳಿಗಾಗಿ, ವಿವಿಧ ರೂಪಗಳನ್ನು ಧರಿಸಿದೆ ಎಂಬುದನ್ನು ಮರೆಯದಿರೋಣ. 

ಸೂಚನೆ: 16/02/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.

Tuesday, February 14, 2023

ಅಷ್ಟಾಕ್ಷರೀ​ - 28 ಹತಾ ಚಾಜ್ಞಾನಿನಃ ಕ್ರಿಯಾ (Astakshara Darshana 28 Hata Cajnaninah Kriya)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಹುಟ್ಟಿದ ಮೇಲೆ ಸಾಯುವ ತನಕವೂ ಯಾರೂ ಸುಮ್ಮನೆ ಕೂರರಷ್ಟೆ? ಹಾಗೆ ಹೇಗೆ ಹೇಳಲಾದೀತು, ಸುಮ್ಮನೆ ಕುಳಿತುಕೊಳ್ಳುವುದೇನು ಮಹಾಕಷ್ಟವೇ? - ಎಂದು ಯಾರಾದರೂ ಕೇಳಬಹುದು. ಇಲ್ಲಿ ಹೇಳಿದ 'ಸುಮ್ಮನೆ'ಯ ಅರ್ಥ ಸ್ವಲ್ಪ ವಿಭಿನ್ನವಾದುದು.

ಕೆಲವೊಮ್ಮೆ ಹಿರಿಯರು ಗದರಿಸುವುದುಂಟು. "ಏನಷ್ಟು ಹರಟೆ? ಸುಮ್ಮನಿರು" ಎಂದು. ಅಲ್ಲಿ ಸುಮ್ಮನಿರುವುದೆಂದರೆ ಮಾತನಾಡದಿರುವುದು - ಎಂದರ್ಥ. "ಶತ್ರುವು ಕೈಯಲ್ಲಿ ಆಯುಧವನ್ನು ತೆಗೆದುಕೊಂಡುಬರುತ್ತಿದ್ದರೂ ಆ ವೀರನು ಸುಮ್ಮನೆ ನಿಂತಿದ್ದನು" - ಎಂದು ಹೇಳಿದರೆ, ಅಲ್ಲಿ "ಸುಮ್ಮನೆ"ಯ ಅರ್ಥ ಬೇರೆ. "ತಾನೂ ಯಾವುದಾದರೂ ಆಯುಧವನ್ನು ಕೈಗೆ ತೆಗೆದುಕೊಳ್ಳಬಹುದಿತ್ತು; ಅದನ್ನೇನೂ ಮಾಡಲಿಲ್ಲ" ಎಂದು; ಅರ್ಥಾತ್ ನಿಶ್ಚೇಷ್ಟನಾಗಿದ್ದನು, ಕೈಕಾಲಾಡಿಸಲಿಲ್ಲ - ಎಂದರ್ಥ. ಹೀಗೆ "ಸುಮ್ಮನಿರು"ವುದೆಂದರೆ ಕೈಕಾಲುಗಳಾಡದಿರುವುದು, ನಾಲಿಗೆಯೂ ಆಡದಿರುವುದು - ಎಂಬುದು ಸ್ಪಷ್ಟವಾಗಿದೆ. ಆದರೆ ಇವೆರಡರ "ಆಟ"ದ ಹಿಂದೆ ಮತ್ತೊಂದರ ಆಡುವಿಕೆಯುಂಟು. ಅದು ಆಡಿದರೆ ಮಾತ್ರವೇ ಇವುಗಳ ಆಟ; ಅದು ಆಡದಿದ್ದಾಗ ಇವೂ ಸುಮ್ಮನಾಗುವುವು. ಯಾವುದದು? ಅದುವೇ ಮನಸ್ಸು. ನಮ್ಮ ಕೈಕಾಲುಗಳಾಡುವುದೆಲ್ಲ ನಮ್ಮ ಮನಸ್ಸು ಆಡಿಸಿದಂತೆಯೇ. ಮಾತೂ ಅಷ್ಟೇ.

ನಮ್ಮೆಲ್ಲ ಚಟುವಟಿಕೆಗಳು ನಡೆಯುವ ಸ್ತರಗಳನ್ನು ಮೂರಾಗಿ ಗಣಿಸಿರುವುದನ್ನು ನಮ್ಮ ಭಾರತೀಯ ಭಾಷೆಗಳಲ್ಲೆಲ್ಲ ಗುರುತಿಸಬಹುದು: "ಕಾಯಾ ವಾಚಾ ಮನಸಾ". ಈ ಪದಗುಚ್ಛವನ್ನು ಪುರಂದರದಾಸರೇ ಬಳಸಿರುವರಲ್ಲವೇ? ವಾಸ್ತವವಾಗಿ, "ಕಾಯೇನ ವಾಚಾ ಮನಸಾ" ಎಂಬುದೇ ಯುಕ್ತ-ಪ್ರಯೋಗ. "ಶರೀರದಿಂದ, ಮಾತಿನಿಂದ, ಮನಸ್ಸಿನಿಂದ" ಎಂದದರ ಅರ್ಥ. ('ವಾಚಾ'-'ಮನಸಾ'-ಗಳಲ್ಲಿಯ ಕೊನೆಯ 'ಆ'ಕಾರವನ್ನೇ 'ಕಾಯ'ಕ್ಕೂ ಅಂಟಿಸಿ, 'ಕಾಯಾ' ಎಂದು ಮಾಡಲಾಗಿದೆ: ಅನುಪ್ರಾಸಕ್ಕಾಗಿ ಉಂಟುಮಾಡಿದ 'ಆ'ಕಾರ).

ಅಂತೂ ನಮ್ಮೆಲ್ಲ(ರ) ಚಟುವಟಿಕೆಗಳೂ ನಡೆಯುವ ನೆಲೆಗಳು ಮೂರು: ಮನೋ-ವಾಕ್-ಕಾಯಗಳು. ಇವುಗಳಲ್ಲಿ ಮನಸ್ಸಿಗೇ ಮೊದಲ ಸ್ಥಾನ. ನಮ್ಮ ಮನಸ್ಸಾಡಿದಂತೆ ಮಾತು, ಮನಸ್ಸಾಡಿದಂತೆಯೇ ಅಂಗಚೇಷ್ಟೆಯೂ.

ವೇದಾಂತದ ಪರಿಭಾಷೆಯಲ್ಲಿ ಹೇಳುವುದಾದರೆ ಕೈಕಾಲುಗಳು ಕರ್ಮೇಂದ್ರಿಯಗಳು. ನಾಲಿಗೆಯೂ ಕರ್ಮೇಂದ್ರಿಯವೇ. (ರುಚಿ ನೋಡುವ ಕೆಲಸ ಮಾಡುವಾಗ ನಾಲಿಗೆಯು ಜ್ಞಾನೇಂದ್ರಿಯ). ಹೀಗಾಗಿ ಕರ್ಮೇಂದ್ರಿಯಗಳು ಕೆಲಸಮಾಡಬೇಕೆಂದರೆ ಮೊದಲು ಕೆಲಸಮಾಡಬೇಕಾದದ್ದು ಮನಸ್ಸು. ಒಂದರ್ಥದಲ್ಲಿ ಮನಸ್ಸಿನ ಪಾತ್ರವೂ ಕರ್ಮೇಂದ್ರಿಯದಂತೆಯೇ ಆಯಿತು. (ವಾಸ್ತವವಾಗಿ ನಾಲಿಗೆಯಂತೆಯೇ ಮನಸ್ಸೂ - ಎನ್ನಬಹುದು. ಅದೂ  ಜ್ಞಾನೇಂದ್ರಿಯವೂ ಕರ್ಮೇಂದ್ರಿಯವೂ ಆಗಿದೆ. ಅರಿಯುವಾಗಿನ ಮನಸ್ಸು ಜ್ಞಾನೇಂದ್ರಿಯ; ಕಾರ್ಯ-ಪ್ರವೃತ್ತವಾದಾಗ ಅದೂ ಕರ್ಮೇಂದ್ರಿಯವೇ.)

ಶರೀರದ ರಚನೆಯನ್ನೊಮ್ಮೆ ನೋಡಿಕೊಂಡರೂ ಇಲ್ಲಿಯ ಕೆಲವು ಸೂಕ್ಷ್ಮಗಳು ಗೋಚರವಾಗುವುವು. ಕರ್ಮೇಂದ್ರಿಯಗಳು ಕೆಳಗಿವೆ, ಜ್ಞಾನೇಂದ್ರಿಯಗಳು ಮೇಲಿವೆ: ಕೆಲಸ ಮಾಡುವ ಕೈಕಾಲುಗಳು ಕೆಳಗಿವೆ, ಅರಿವಿಗೆಡೆಯಾದ ಕಣ್ಣು ಕಿವಿಗಳು ಮೇಲಿವೆ; ಮಲಮೂತ್ರವಿಸರ್ಜನೆಯ ಕೆಲಸ ಮಾಡುವ ಇಂದ್ರಿಯಗಳು ಕೆಳಗಿವೆ; ಮೂಗು-ನಾಲಿಗೆಗಳು ಮೇಲಿವೆ. (ಚರ್ಮವಂತೂ ಎಲ್ಲೆಡೆಯಿದೆ.) ನಾಲಿಗೆಯದು ಒಂದರ್ಥದಲ್ಲಿ ಸಂಧಿಸ್ಥಾನ - ಅದು ಎರಡೂ ಆದ್ದರಿಂದ. ಕರ್ಮೇಂದ್ರಿಯಗಳು ಕೆಲಸ ಮಾಡುವುದೆಲ್ಲ ಮನಸ್ಸಿನ ನೇತೃತ್ವದಲ್ಲಿ; ಕರ್ಮೇಂದ್ರಿಯವಾದ ಮನಸ್ಸೂ ಕೆಲಸಮಾಡುವುದು ಜ್ಞಾನೇಂದ್ರಿಯವಾದ ಮನಸ್ಸಿನ ನೇತೃತ್ವದಲ್ಲೇ: ಜ್ಞಾನವೇ ಕ್ರಿಯಾಮೂಲ.

ಯಾರ ಅರಿವು ಉನ್ನತಮಟ್ಟದ್ದೋ ಅವರ 'ಆಟ'ವೂ ಉನ್ನತಮಟ್ಟದ್ದೇ ಆಗಿರುತ್ತದೆ. ದೇಶಕ್ಕಾಗಿ ಜೀವಿಸಬೇಕು, ದೇವನಿಗಾಗಿ (ಎಂದರೆ ಭಗವತ್-ಪ್ರೀತಿಗಾಗಿ) ಜೀವಿಸಬೇಕು - ಎಂಬ ಆದರ್ಶಗಳು ಯಾರಿಗೆ ಮನದಟ್ಟಾಗಿರುವುವೋ ಅವರ ನಡೆಯ ತೆರನೇ ಬೇರೆ; ಅನ್ಯರ ನಡವಳಿಕೆಯ ಬಗೆಯೇ ಬೇರೆ.

ಮನುಷ್ಯನ ಮನುಷ್ಯತ್ವವಿರುವುದೆಲ್ಲಿ? ಪ್ರಾಣಿಗಳಿಗಿಂತಲೂ ವಿಶಿಷ್ಟವಾಗಿ ಜೀವಿಸುವಲ್ಲಿ. ಖಾನಾ-ಪೀನಾ-ಸೋನಾ - ಇವೇ ಪ್ರಾಣಿಜೀವನದ ಹೆಗ್ಗುರುತು. ಇಷ್ಟಕ್ಕೆ ಹೆಚ್ಚಿನ ಅರಿವೇನು ಅವಶ್ಯವಿಲ್ಲ. ಪ್ರಾಣಿಗಳಿಗೆ ಹೆಚ್ಚಿನ ಅರಿವಿಗೆ ಆಸ್ಪದವೇ ಇಲ್ಲ; ಆಸ್ಪದವಿದ್ದೂ ಅರಿಯದವನ ಜೀವನ ಪ್ರಾಣಿಜೀವನವೇ ಸರಿ.

ಚಟುವಟಿಕೆಯಿಂದ ಬದುಕಬೇಕು, ಹೌದು. ಆದರೆ ಮೊದಲು ಬೇಕಾದದ್ದು ಜೀವನದ ಗುರಿಯ ಅರಿವು; ತತ್ಸಾಧನೆಗಾಗಿ ಮಾಡಬೇಕಾದ/ಮಾಡಬಾರದ ಕ್ರಿಯೆಗಳ ಅರಿವು. ಅಜ್ಞಾನಿಗಳು ಸದಾ ಚಟುವಟಿಕೆಯಿಂದಿದ್ದರೂ ಅದೇನೂ  ಉತ್ತಮ-ಫಲ-ಪ್ರದವೆನ್ನುವಂತಿಲ್ಲ.

ಜೀವನದ ಮಹಾಲಕ್ಷ್ಯವೇನು, ಹಾಗೂ ಅದಕ್ಕನುಗುಣವಾದ ಸುಜೀವನ-ಕ್ರಮವೇನು? – ಎಂಬ ಮುಖ್ಯಾಂಶಗಳ ಅರಿವಿಲ್ಲದ ಅಜ್ಞಾನಿಯ ನಾನಾಕ್ರಿಯೆಗಳು ಬಹುತೇಕ ವ್ಯರ್ಥಶ್ರಮ, ಅಥವಾ ಹಾಳು - ಎಂಬ ಅಭಿಪ್ರಾಯದ ಈ ಸುಭಾಷಿತದ ಸಾರವನ್ನು ಶ್ರೀರಂಗಮಹಾಗುರುಗಳು ಪಲಬಗೆಗಳಲ್ಲಿ ಪ್ರತಿಪಾದಿಸುತ್ತಿದ್ದರು.


ಸೂಚನೆ: 12/02/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.

ಯಕ್ಷಪ್ರಶ್ನೆ - 25 (Yaksha Prashne - 25)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)



ಪ್ರಶ್ನೆ – 24 ಭೂಮಿಗಿಂತಲೂ ಭಾರವಾದುದು ಯಾವುದು?

ಉತ್ತರ - ತಾಯಿ

ಪ್ರತಿಯೊಬ್ಬನ ಜೀವನದಲ್ಲಿ ಎರಡು ಅತ್ಯಂತ ಪ್ರಧಾನವಾದುವುಗಳು. ಅವು ಯಾವುವು? ಎಂದರೆ ಜನ್ಮ ಕೊಟ್ಟ  ತಾಯಿ ಮತ್ತು ಜನ್ಮವನ್ನು ಎಲ್ಲಿ ಪಡೆದಿದ್ದೇವೋ ಆ ನಾಡು-ಭೂಮಿ. ಈ ಎರಡರ ನಡುವಿನ ವ್ಯತ್ಯಾಸವನ್ನು ಅಥವಾ ಭೇದವನ್ನು ಗುರುತಿಸುವ ಯಕ್ಷನ ಪ್ರಶ್ನೆಯಿದು. ವಸ್ತುತಃ ಎರಡೂ ಜೀವನಕ್ಕೆ ಅಥವಾ ಜೀವಭಾವಕ್ಕೆ ತುಂಬಾ ಮುಖ್ಯವೇ. ತಾಯಿ ಇಲ್ಲದೇ ಜನ್ಮ ಅಸಾಧ್ಯ ಹೇಗೋ, ತಾಯ್ನಾಡು ಇಲ್ಲದಿದ್ದರೂ ಜನ್ಮ ಸಾಧ್ಯವಿಲ್ಲ. ಪ್ರಶ್ನೆಯ ಸ್ವಾರಸ್ಯವೇ ಇದು. ಎರಡು ಪ್ರಧಾನವಾದಾಗಲೂ ಅಲ್ಲಿಯೇ ಪ್ರಧಾತಮವಾದುದನ್ನು ಗುರುತಿಸುವುದು ಮತ್ತು ಅದನ್ನು ಸಮರ್ಥಿಸುವುದು ಜಾಣತನವೇ. ಇಂತಹ ಜಾಣತನದ ಉತ್ತರವನ್ನು ಇಲ್ಲಿ ಧರ್ಮರಾಜನು ಮಾತ್ರವೇ ನೀಡಬಲ್ಲವನಾದನು. ಅದು ಏಕೆ? ಮತ್ತು ಹೇಗೆ? 

ಅತ್ಯಂತ ಗುರು- ಭಾರವಾದುದು ಯಾವುದು? ಎಂಬುದು ಪ್ರಶ್ನೆ. ತಾಯಿಗಿಂತಲೂ ಭೂತಾಯಿ ಭಾರವೇ ಎಂಬುದು ಎಲ್ಲರಿಗೂ ತಿಳಿದ ವಿಷಯ. ತಾಯಿಯ  ಭಾರದ ಅಳತೆಯನ್ನು ಎಷ್ಟು ಕಿಲೋ ಗ್ರಾಂ ತೂಕ ಬರುತ್ತದೆ ಎಂದು ಅಳತೆಮಾಡಬಹುದು. ಆದರೆ ಭೂಮಿಯು ಅಳತೆಗೆ ಮೀರಿದ್ದು. ನಿಜವೆಂದರೆ ಭೂತಾಯಿಯೇ ಅಧಿಕಭಾರವಾದುದು. ಆದರೆ ಇಲ್ಲಿ ತಾಯಿಯೇ ಅಧಿಕಭಾರವಾದುದು ಎಂಬ ಉತ್ತರವಿದೆ. ಅಂದರೆ ಇಲ್ಲಿ ಭಾರವೆಂಬುದು ಅಳತೆಗೆ ಸಿಗುವುದಲ್ಲ. ಯಾವುದು ಪ್ರಮಾಣಕ್ಕೆ ಅತೀತವಾದುದೋ ಅದುವೇ ನಿಜವಾದ ಭಾರ. ಭೌತಿಕವಾದ ಭಾರ ಅಥವಾ ಗುರುತ್ವವಾದುದು ಎಂಬ ಅರ್ಥವಲ್ಲ. ನಮ್ಮ ಜೀವನಕ್ಕೆ ಯಾವುದರಿಂದ ಗೌರವ ಬರುತ್ತದೋ ಅದುವೇ ಗುರುವಾದುದು. ಈ ಅರ್ಥದಲ್ಲಿ "ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ" ಎಂಬ ಕನ್ನಡದ ಗಾದೆ ನೆನಪಾಗುತ್ತದೆ. ಅಲ್ಲದೇ ಇದೇ ಅರ್ಥವನ್ನು ಕೊಡುವ ವೇದವಾಕ್ಯವೂ ಕೂಡ ಇದೆ. 'ಮಾತೃಭ್ಯೋ ನಮಃ'  ಎಂಬುದಾಗಿ ತಾಯಿಗೆ ಮೊದಲು ನಮಸ್ಕಾರದ ಪದ್ದತಿ ಇದೆ. ಅಲ್ಲದೇ ಈ ಭೂಮಿಗೆ ಬರುವ ಮೊದಲು ನಮ್ಮನ್ನು ಒಂಭತ್ತು ತಿಂಗಳುಗಳ ಕಾಲ ತನ್ನ ಗರ್ಭದಲ್ಲಿ ಹೊತ್ತು, ಅನಂತರ ಹೆತ್ತವಳು ಇದೇ ತಾಯಿಯಲ್ಲವೇ. ಅದಾದ ಮೇಲೂ ಎಷ್ಟೋ ದಿನಗಳವರೆಗೆ ಭೂಮಿಯ ಸ್ಪರ್ಶವೇ ಆಗದಂತೆ ನಮ್ಮನ್ನು ತನ್ನ ಮಡಿಲಲ್ಲಿ ಇಟ್ಟು, ತನ್ನ ನಿದ್ರಾ, ಆಹಾರ, ಶ್ರಮ ಎಲ್ಲವನ್ನೂ ಪರಿಗಣೆಸದೆ ಸಾಕಿದವಳು ಈ ಮಹಾಮಾತೆಯಲ್ಲವೆ. ಇಂತಹ ಮಹಾಮಾತೆಗೆ ಅದೆಷ್ಟು ಮರ್ಯಾದೆಯನ್ನು ಕೊಡಬಹುದು? ಅದೆಷ್ಟು ಗೌರವವನ್ನು ಕೊಡಲು ನಮ್ಮಿಂದ ಸಾಧ್ಯ. ಹೇಗೆ ತಾನೆ ಅವಳ ಗುರುತ್ವವನ್ನು ನಾವು ಅರಿಯಲು ಸಾಧ್ಯ? ಎಷ್ಟೆಂದರೂ ಅವಳಿಗಿಂದ ಈ ಸೃಷ್ಟಿಯಲ್ಲಿ ಮಿಗಿಲಾದವರು ಯಾರು ತಾನೆ ಇರಲು ಸಾಧ್ಯ?   ಏಕೆಂದರೆ ಈ ಎಲ್ಲ ವಿಷಯಗಳಿಗೆ ಶಿಖರಪ್ರಾಯವಾದುದು "ಭಗವಂತನ ಜ್ಞಾನವು ತಾನಾಗಿಯೇ ಬೆಳೆದು ವಿಸ್ತಾರಗೊಳ್ಳಲು ಬಯಸಿದಾಗ ಅದನ್ನು ಹೊತ್ತು ಬೆಳೆಸುವವಳೇ ತಾಯಿ" ಎಂಬ ಶ್ರೀರಂಗಮಹಾಗುರುಗಳ ಮಾತು. 

ಸೂಚನೆ : 12/2/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  

ವ್ಯಾಸ ವೀಕ್ಷಿತ - 25 ಆಗಂತುಕ-ವಿಪ್ರನ ಆಶ್ಚರ್ಯ-ಕಥನಗಳು ( Vyaasa Vikshita - 25 Agantuka-viprana Ashcarya-kathanagalu)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಲೋಕಕಂಟಕನಾಗಿದ್ದ ಬಕಾಸುರನನ್ನು ಸಂಹಾರ ಮಾಡಿದ ಬಳಿಕ, ಪಾಂಡವರು ಆ ಬ್ರಾಹ್ಮಣನ ಮನೆಯಲ್ಲಿಯೇ ಉಳಿದುಕೊಂಡರು. ಸಾಯಿಸುವುದಕ್ಕೂ ಹೇಸದ, ಅಸೂಯುವಾದ (ಎಂದರೆ ಅಸೂಯಾ-ಭರಿತನಾದ) ದುರ್ಯೋಧನ ಮೊದಲಾದವರ ಕಾಟವನ್ನು ತಪ್ಪಿಸಿಕೊಳ್ಳಬೇಕಿತ್ತಲ್ಲವೇ? ಎಂದೇ ಪಾಂಡವರು ಬ್ರಾಹ್ಮಣರ ವೇಷವನ್ನು ಧರಿಸಿದ್ದರಷ್ಟೆ. ತದನುಸಾರವಾಗಿ, ಅಲ್ಲಿ ಉಳಿದುಕೊಂಡಿದ್ದ ಅವರು ವೇದಾಧ್ಯಯನವನ್ನು ಮಾಡುತ್ತಿದ್ದರು (ಅಧೀಯಾನಾಃ ಪರಂ ಬ್ರಹ್ಮ) (ಬ್ರಹ್ಮವೆಂಬ ಪದಕ್ಕೆ ವೇದವೆಂಬ ಅರ್ಥವೂ ಪ್ರಸಿದ್ಧವಾದದ್ದೇ).

ಕೆಲದಿನಗಳು ಕಳೆದವು. ಆಶ್ರಯಾರ್ಥಿಯಾಗಿ ಬ್ರಾಹ್ಮಣನೊಬ್ಬನು ಇವರುಗಳಿದ್ದ ಮನೆಗೆ ಬಂದನು. ಆತನೋ ಸಂಶಿತವ್ರತನಾದವನು, ಎಂದರೆ ವ್ರತಾಚರಣೆಗಳಲ್ಲಿ ನಿಷ್ಠೆಯುಳ್ಳವನು. (ಆಚಾರನಿಷ್ಠೆಯುಳ್ಳ ಬ್ರಾಹ್ಮಣನನ್ನು ಕಂಡರೆ ಆದರ ಮೂಡುವುದು ಸಾಧಾರಣವಾಗಿದ್ದ ಕಾಲವದು; ಎಂದೇ ಆತನಿಗೆ ಇಲ್ಲಿ ಆಶ್ರಯವು ಸಹಜವಾಗಿಯೇ ದೊರೆತಿತು). ಮನೆಯೊಡೆಯನಾದ ಬ್ರಾಹ್ಮಣನಿಗೂ ಅತಿಥಿಗಳೆಂದರೆ ಅತಿಶಯವಾದ ಆದರವೇ. ಎಂದೇ ಆಗಂತುಕನಾಗಿ ಬಂದ ಆ ಬ್ರಾಹ್ಮಣನಿಗೆ ಚೆನ್ನಾಗಿಯೇ ಸತ್ಕಾರ ಮಾಡಿದನು.

ಆ ಬ್ರಾಹ್ಮಣನಾದರೂ  ಒಳ್ಳೊಳ್ಳೆಯ ಮಾತುಗಳನ್ನೇ ಆಡುತ್ತಿದ್ದನು. ಕುಂತಿಯೊಂದಿಗೆ ಪಾಂಡವರು ಆತನ ಮಾತುಗಳಿಗೆ ಕಿವಿಗೊಟ್ಟರು. ಆತನೋ ಅಪಾರ ಸಂಚಾರ ಮಾಡಿದ್ದವನು. ತಾನು ಕಂಡಿದ್ದ ನಾನಾದೇಶಗಳೇನು, ತೀರ್ಥಗಳೇನು, ನದಿಗಳೇನು, ರಾಜರುಗಳ ನಾನಾಶ್ಚರ್ಯಕರಗಳಾದ ಪುರಗಳು ರಾಜ್ಯಗಳೇನು - ಇವೆಲ್ಲವನ್ನು ಕುರಿತೂ ಹೇಳಿದನು.

ಈ ಕಥೆಗಳು ಮುಗಿಯುವ ಹೊತ್ತಿಗೆ ಪಂಚಾಲದೇಶದಲ್ಲಿ ಜರುಗುವ ಯಾಜ್ಞಸೇನಿಯ (ಎಂದರೆ ದ್ರೌಪದಿಯ) ಅದ್ಭುತವಾದ ಸ್ವಯಂವರವನ್ನೂ, ಧೃಷ್ಟದ್ಯುಮ್ನ ಹಾಗೂ ಶಿಖಂಡಿ - ಇವರುಗಳ ಜನನವನ್ನೂ, ದ್ರುಪದ-ಮಹಾರಾಜನ ಮಹಾಯಜ್ಞದಲ್ಲಿ ಕೃಷ್ಣೆಯ (ಎಂದರೆ ದ್ರೌಪದಿಯ) ಅಯೋನಿಜತ್ವವನ್ನೂ (ಎಂದರೆ ಎಲ್ಲರಂತಲ್ಲ, ಅವಳ ಜನ್ಮ; ಎಲ್ಲರೂ ತಾಯಿಯ ಗರ್ಭದಿಂದ ಹೊರಬಂದು ಜನಿಸುವರು; ಆದರೆ ದ್ರೌಪದಿಯು ಹಾಗಲ್ಲವೆಂಬುದು) - ಇವೆಲ್ಲವನ್ನೂ ಹೇಳಿದನು.

ಇವೆಲ್ಲವೂ ಅತ್ಯದ್ಭುತವಾದ ಘಟನೆಗಳೇ ಸರಿ. ಪಾಂಡವರ ಕುತೂಹಲವೂ ಸಹಜವಾಗಿಯೇ ಕೆರಳಿತು; ಎಂದೇ ಅವೆಲ್ಲವನ್ನೂ ವಿಸ್ತರವಾಗಿ ಹೇಳಬೇಕೆಂಬುದಾಗಿ ಆ ಬ್ರಾಹ್ಮಣನನ್ನು ಅವರು ಕೇಳಿಕೊಂಡರು: "ಅಯ್ಯಾ ವಿಪ್ರನೇ, ದ್ರುಪದನ ಪುತ್ರನಾದ ಧೃಷ್ಟದ್ಯುಮ್ನನು ಅಗ್ನಿಯಿಂದ ಹುಟ್ಟಿದನೆಂದಿರಿ; ಇದಾದದ್ದು ಹೇಗೆ? ಕೃಷ್ಣೆಯ ಅದ್ಭುತ-ಜನನವು ಯಜ್ಞ-ವೇದಿಕೆಯ ಮಧ್ಯದಿಂದ ಆದುದೆಂದಿರಿ; ಅದಾದದ್ದು ಹೇಗೆ? ದ್ರೋಣಾಚಾರ್ಯರು ಮಹಾಬಿಲ್ಲುಗಾರರು; ಅವರಿಂದ ಎಲ್ಲಾ ಅಸ್ತ್ರಗಳನ್ನು ಆ ಧೃಷ್ಟದ್ಯುಮ್ನನು ಕಲಿತನೆಂದಿರಿ, ಅದರ ಬಗೆಯೇನು? ದ್ರುಪದನೂ ದ್ರೋಣರೂ ಮಿತ್ರರಾಗಿದ್ದವರು; ಅವರ ಸ್ನೇಹವು ಒಡೆದುಹೋದದ್ದಾದರೂ ಹೇಗೆ?" – ಎಂದೆಲ್ಲಾ ಕೇಳಿದರು.

ಹೀಗೆ ಪುರುಷಶ್ರೇಷ್ಠರಾದ ಪಾಂಡವರಿಂದ ಚೋದಿತನಾದ (ಎಂದರೆ ಪ್ರೇರಿಸಲ್ಪಟ್ಟ) ಆ ವಿಪ್ರನು ಅದೆಲ್ಲವನ್ನೂ ವಿಸ್ತಾರವಾಗಿ ಹೇಳಿದನು. ಅದು ಹೀಗೆ:

ಗಂಗಾದ್ವಾರದ ಬಳಿ ಮಹಾತಪಸ್ವಿಯದ ಋಷಿಯೊಬ್ಬನಿದ್ದನು. ಆತನೇ ಮಹಾಪ್ರಾಜ್ಞನಾದ ಭರದ್ವಾಜ. ವ್ರತಾಚರಣೆಯಲ್ಲಿ ಕಟ್ಟುನಿಟ್ಟಾದವನು ಅವನು. ಸ್ನಾನಾರ್ಥವಾಗಿ ಆತನೊಮ್ಮೆ ಗಂಗೆಗೆ ಹೋದನು. ಮೊದಲೇ ಅಲ್ಲಿಗೆ ಬಂದಿದ್ದು ಸ್ನಾನ ಮುಗಿಸಿದ್ದ ಅಪ್ಸರಸ್ತ್ರೀಯೊಬ್ಬಳನ್ನು ಕಂಡನು. ಅವಳ ಹೆಸರು ಘೃತಾಚೀ. ಅವಳು ವಸ್ತ್ರಧಾರಣೆ ಮಾಡುತ್ತಿರಲು ಗಾಳಿ ಬೀಸಿ ಅವಳ ವಸ್ತ್ರವು ಹಾರಿಹೋಯಿತು. ವಿವಸ್ತ್ರಳಾದ ಆಕೆಯನ್ನು ಋಷಿಯು ಬಯಸಿದನು. ದೀರ್ಘಕಾಲದಿಂದ, ಎಂದರೆ ಚಿಕ್ಕಂದಿನಿಂದಲೂ, ಬ್ರಹ್ಮಚಾರಿಯಾಗಿದ್ದ ಆತನ ಮನಸ್ಸು ಅವಳಲ್ಲಿ ನೆಟ್ಟಿತು.


ಸೂಚನೆ : 12/2/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  

Saturday, February 11, 2023

ಪ್ರಕೃತಿಯಿಂದ ಈ ಅವಧೂತರು ಏನನ್ನು ಕಲಿತರು?(Prakrtiyinda E Avadhutaru Enannu Kalitaru?)

ಲೇಖಕರು : ಭಾಷ್ಯಂ ರಾಮಚಂದ್ರಾಚಾರ್ 

(ಪ್ರತಿಕ್ರಿಯಿಸಿರಿ lekhana@ayvm.in)


ಪ್ರಕೃತಿಯ ಧೂಳನ್ನು ಅಶ್ವ  ಒದರುವಂತೆ ಕೊಡವಿ, ವಿಧಿ - ನಿಷೇಧಗಳೆಂಬ ಕಟ್ಟಲೆಗಳನ್ನು  ಮೀರಿ, ಕರ್ಮಬಂಧಗಳನ್ನು ದಾಟಿ ಬ್ರಹ್ಮದಲ್ಲಿಯೇ ನೆಲೆಸಿರುವರು.  ಅವಧೂತರು - ಅವ - ಧೂತ. 'ಅ' ಅಂದರೆ 'ಅಕ್ಷರರೂಪವಾದ ಪರಂಬ್ರಹ್ಮ'; 'ವ' ಅಂದರೆ 'ವರೇಣ್ಯ ವಾಗಿರುವುದು - ಶ್ರೇಷ್ಠತಮವಾಗಿರುವುದು'; ಭಗವಂತನಂತೆ ತೇಜೋರೂಪಿಯಾಗಿರುವುದು; 'ಧೂತ' ಎಂದರೆ ಸಂಸಾರ ಬಂಧನಗಳನ್ನು ಅಶ್ವ ಧೂಳನ್ನು  ಒದರುವಂತೆ ಒದರಿಹಾಕುವವರು. 


ಒಮ್ಮೆ ಅವಧೂತ ಶಿಖಾಮಣಿಗಳಾದ ದತ್ತಾತ್ರೇಯರು ಯದು ಮಹಾರಾಜರ ಆಸ್ಥಾನಕ್ಕೆ ಆಗಮಿಸುತ್ತಾರೆ. ಅಂತಸ್ತಿಗೆ  ತಕ್ಕ ಮಧು -ಪರ್ಕ - ಆಸನಾದಿಗಳನ್ನು ಸಮರ್ಪಿಸಿದ ಯದುಮಹಾರಾಜ, ಅವರನ್ನು ಪ್ರಶ್ನಿಸುತ್ತಾನೆ "ಇಂದ್ರಿಯಗಳಿಗೆ ಸಂತೋಷವನ್ನುಂಟುಮಾಡುವ ಯಾವ ಪದಾರ್ಥಗಳೂ ತಮ್ಮಲ್ಲಿಲ್ಲದಿದ್ದರೂ, ತಾವು ಯಾವಾಗಲೂ ಸಂತೋಷವಾಗಿರುತ್ತೀರಿ.  ತಾವು ಅತ್ಯಂತ ಬುದ್ಧಿಶಾಲಿಗಳು. ಇಷ್ಟು ತಿಳುವಳಿಕೆ ತಾವು ಹೇಗೆ ಗಳಿಸಿದಿರಿ?". ಅದಕ್ಕೆ ಉತ್ತರಿಸಿದ ದತ್ತಾತ್ರೇಯರು "ನನ್ನ ತಿಳುವಳಿಕೆಯೆನ್ನೆಲ್ಲಾ ನಾನು ಪ್ರಕೃತಿಯಲ್ಲಿನ ಇಪ್ಪತ್ತುನಾಲ್ಕು ಗುರುಗಳು (ಆಚಾರ್ಯರು) ಮತ್ತೊಂದರ (೨೪+೧) ಮೂಲಕ ಗಳಿಸಿದೆ" ಎಂದೆನ್ನುತ್ತಾರೆ. 


ಈ ಇಪ್ಪತ್ತುನಾಲ್ಕು ಆಚಾರ್ಯರು ಯಾರೆಂದರೆ ಪೃಥಿವೀ, ನೀರು, ಅಗ್ನಿ, ವಾಯು, ಆಕಾಶ, ಚಂದ್ರಮ, ರವಿ,  ಪಾರಿವಾಳ,  ಹೆಬ್ಬಾವು,  ಸಾಗರ, ಪತಂಗ, ಜೇನುಬಿಡಿಸುವವನು, ಜಿಂಕೆ, ಗಜ, ಜೇನುಹುಳು, ದುಂಬಿಗೆ  ಆಹಾರವಾಗುವ ಹುಳು, ಹದ್ದು, ಮದುಮಗಳು, ಆಗತಾನೆ ಹುಟ್ಟಿದ ಮಗು, ಮೀನು, ಬಾಣವನ್ನು ಮಾಡುವನು, ಜೇಡರಹುಳು, ಭ್ರಮರಕೀಟ ,ಪಿಂಗಲಾ ಎನ್ನುವ ವೇಶ್ಯೆ, ಮತ್ತು ಇಪ್ಪತ್ತೈದನೆಯದು ಮಾನುಷ  ದೇಹ.  


ದತ್ತಾತ್ರೇಯರು ಇವುಗಳಿಂದ ಏನು ಪಾಠ ಕಲಿತರು ಎಂದು ಸಂಕ್ಷಿಪ್ತವಾಗಿ ನೋಡೋಣ. 


ಭೂಮಾತೆ ಕ್ಷಮೆಗೆ  ಆದರ್ಶ; ಅವಳಿಂದ ಕ್ಷಮೆ ಕಲಿತೆ.  ನೀರು, ಗಂಗಾಜಲ ಸ್ವಚ್ಛತೆಗೆ ಪ್ರತೀಕ, ತಂಪು  - ನಮ್ಮ ಮನಸ್ಸೂ  ಸ್ವಚ್ಛವಾಗಿ, ತಂಪಾಗಿರಬೇಕು. ಅಗ್ನಿ ಎಲ್ಲವನ್ನೂ ದಹಿಸುತ್ತದೆ(ಪಾವಕ).  ಅದರಿಂದ ಪಾಪಗಳನ್ನು   ಸುಡುವುದನ್ನು  ಕಲಿತೆ. ವಾಯುವು  ದೇಹದ ಒಳಗಡೆ   ಪ್ರಾಣಶಕ್ತಿಯಾಗಿಯೂ, ಹೊರಗಡೆ ಗಾಳಿಯಾಗಿಯೂ ಕೆಲಸ ಮಾಡುತ್ತದೆ. ಪ್ರಾಣವು ಏನನ್ನೂ ಅಪೇಕ್ಷೆ ಪಡದೆ  ತನ್ನ ಕೆಲಸವನ್ನು ನಿರ್ವಹಿಸುತ್ತಿರುತ್ತದೆ. ಹೊರಗಡೆ ಗಾಳಿಯು ಏನನ್ನೂ ಬಯಸದೆ ಸಂಚರಿಸುತ್ತಾ ಶುದ್ಧಿ  ಮಾಡುತ್ತಿರುತ್ತದೆ (ಪವಮಾನ).  ಪ್ರಾಣ - ಗಾಳಿಗಳು ನಿರ್ಲಿಪ್ತ. ಈ ನಿರ್ಲಿಪ್ತತೆಯನ್ನು ವಾಯುವಿನಿಂದ ಕಲಿತೆ. ಆಕಾಶವು ವ್ಯಾಪಿಸಿರುತ್ತದೆ. ಬ್ರಹ್ಮವೂ ವ್ಯಾಪಿಸಿರುತ್ತದೆ. ವ್ಯಾಪಿಸಿದ್ದರೂ ಎರಡಕ್ಕೂ ಯಾವುದರೊಡನೆಯೂ  ಸಂಗವಿಲ್ಲ. ಈ ಅಸಂಗತ್ವವನ್ನು ಆಕಾಶದಿಂದ ಕಲಿತೆ. ಚಂದ್ರ ಆಹ್ಲಾದವನ್ನುಂಟುಮಾಡುತ್ತಾನೆ. ಈ ಗುಣವನ್ನು ಚಂದ್ರಮನಿಂದ ಕಲಿತೆ. ಸೂರ್ಯ ಪ್ರಕಾಶ ರೂಪಿ, ಪ್ರಪಂಚಕ್ಕೆ ಚೈತನ್ಯ ದಾಯಿ,  ಆಕಾಶದಲ್ಲಿರುವವನು; ಎಲ್ಲೆಲ್ಲೂ ಪ್ರತಿಬಿಂಬಿಸುವನಾಗಿದ್ದರೂ ಆತ ಒಬ್ಬನೇ.   ಜ್ಞಾನ ಸೂರ್ಯನೂ ಅಷ್ಟೇ, ವಿಶ್ವಕ್ಕೆಲ್ಲಾ ಚೈತನ್ಯದಾಯಿ, ದಹರಾಕಾಶದಲ್ಲಿ ಪ್ರಕಾಶಿಸುವವನು, ಸೃಷ್ಟಿಯಲ್ಲಿ ಎಲ್ಲೆಲ್ಲೂ ಪ್ರಕಾಶಿಸುತ್ತಿದ್ದರೂ ಆತ ಒಬ್ಬನೇ. ಪರಮಹಂಸ ಸೂರ್ಯರೂ  ಹೀಗೆಯೇ ಇರಬೇಕು ಎಂಬ ಪಾಠ ಅಂತರಂಗ ಸೂರ್ಯವನ್ನು ಪ್ರತಿಬಿಂಬಿಸುವ ಹೊರ ಸೂರ್ಯನಿಂದ ಕಲಿತೆ.  

  

ಪಾರಿವಾಳಗಳು ಮನುಷ್ಯರಂತೆ ಸಂಸಾರಸುಖದಲ್ಲಿ ಸಂತೋಷವಾಗಿರುತ್ತವೆ. ಹೀಗೆ ಮೈಮರೆತಿರುವಾಗ ಮರಿಗಳು ಬೇಡನ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತವೆ. ಬಿಡಿಸಲು ಬರುವ ತಾಯಿ ತಾನೂ ಅದರಲ್ಲಿ ಬಂಧಿತವಾಗುತ್ತದೆ. ಹಾಗೆಯೇ ಗೃಹಸ್ಥನಾದವನು  ಸಂಸಾರಬಂಧನದಲ್ಲಿ ಸಿಲುಕುತ್ತಾನೆ. ಹೀಗಾಗಬಾರದೆಂಬ ಪಾಠ ಪಾರಿವಾಳದಿಂದ ಕಲಿತೆ. ಹೆಬ್ಬಾವು, ಆಹಾರಕ್ಕೋಸ್ಕರ ಕಷ್ಟ ಪಡುವುದಿಲ್ಲ. ಇದ್ದಲ್ಲಿಯೇ ಪ್ರಾರಬ್ಧವಶದಿಂದ ಸಿಕ್ಕುವ ಯಾವ ಪ್ರಾಣಿಯನ್ನಾದರೂ ನುಂಗಿ ತೃಪ್ತಿಪಟ್ಟುಕೊಳ್ಳುತ್ತದೆ. ಅನಾಯಾಸವಾಗಿ ಏನು ಪ್ರಾಪ್ತವಾಗುತ್ತದೋ ಅದರಿಂದ ಸಂತೋಷವಾಗಿರಬೇಕೆನ್ನುವ ಪಾಠವನ್ನು ಹೆಬ್ಬಾವಿನಿಂದ ಕಲಿತೆ. ಸಮುದ್ರ ಎಷ್ಟೆಲ್ಲ ನದಿಗಳು ಸೇರಿದರೂ, ಆಳವಾಗಿ,ಗಂಭೀರವಾಗಿ, ಅಂತರಂಗವನ್ನು ತೋರಗೊಡದೆ ಇರುತ್ತದೆ. ಅಂತಹ ಗಾಂಭೀರ್ಯವನ್ನು, ಮನಸ್ಸಿನ ಆಳವನ್ನು ಸಮುದ್ರದಿಂದ ಕಲಿತೆ. 


ಪತಂಗ,  ಪ್ರಕಾಶದಿಂದ ಆಕರ್ಷಿತವಾಗಿ ಬೆಂಕಿಗೆ ಬೀಳುತ್ತದೆ. ಸಂಸಾರದ ಆಕರ್ಷಣೆಗೆ ವಶವಾಗಬಾರದೆಂದು ಪತಂಗದಿಂದ ಕಲಿತೆ. ಕೂಡಿಟ್ಟ ಸಂಪತ್ತು ಜೇನಿನ ಗೂಡಿನಂತೆ  ಕದಿಯಲ್ಪಡುತ್ತದೆಂದು ಜೇನು ಬಿಡಿಸುವವನನ್ನು ನೋಡಿ ಕಲಿತೆ. ಗ್ರಾಮ್ಯ ಗೀತೆಯಲ್ಲಿನ ಆಸಕ್ತಿಯಿಂದ ಜಿಂಕೆ ಬಲೆಯಲ್ಲಿ ಸಿಕ್ಕುತ್ತದೆ. ಇಂದ್ರಿಯ ಸೆಳೆತಕ್ಕೆ ಸಿಗಬಾರದೆಂದು ಜಿಂಕೆಯಿಂದ ಕಲಿತೆ. ಹೆಣ್ಣಾನೆಯ ಆಸೆಗೆ ಸಿಲುಕಿ ಗಂಡಾನೆ ಹಳ್ಳಕ್ಕೆ ಬೀಳುತ್ತದೆ. ಸಂಗದ  ಆಸೆಗೆ ಸಿಕ್ಕಿ ಪತನಕ್ಕೆ ಒಳಗಾಗಬಾರದೆಂದು ಆನೆಯಿಂದ  ಕಲಿತೆ. ಜೇನುಹುಳು ಹೂವಿಗೆ ಸ್ವಲ್ಪವೂ ನೋವಾಗದಂತೆ ಮಧುವನ್ನು ಹೀರುತ್ತದೆ.  ಮಧುಕರವೃತ್ತಿಯಿಂದ ಭಿಕ್ಷೆ ಬೇಡುತ್ತಿರುವಾಗ  ಗೃಹಸ್ಥರಿಗೆ ಸ್ವಲ್ಪವೂ ತೊಂದರೆಯಾಗಬಾರದೆಂಬ ಪಾಠವನ್ನು ಮಧುಕರನಿಂದ(ಜೇನಿನಿಂದ)  ಕಲಿತೆ. 


ಕುರರ ಪಕ್ಷಿ - ಒಂದು ಪ್ರಕಾರದ  ಹದ್ದು- ಮಾಂಸವನ್ನು ಬಾಯಿಯಲ್ಲಿಯೇ ಇಟ್ಟುಕೊಂಡು, ಇನ್ಯಾವುದೋ ಬಲಿಷ್ಠಪಕ್ಷಿ ಕಿತ್ತು ತಿನ್ನುತ್ತದೆ ಎಂಬ ಭಯದಲ್ಲಿ ನೆಮ್ಮದಿಯಿಲ್ಲದೆಯೇ ಹಾರಾಡುತ್ತಿರುತ್ತದೆ. ವಸ್ತುಸಂಗ್ರಹ ಮಾಡಿ, ಅದರ ರಕ್ಷಣೆಯಲ್ಲಿಯೇ ಆಸಕ್ತನಾಗಿ, ಭಯದಿಂದ ಜೀವನ ನಡೆಸಬಾರದೆಂಬ ಪಾಠವನ್ನು ಕುರರದಿಂದ ಕಲಿತೆ. ಮದುವೆಗೆ ಸಿದ್ಧಳಾದ ಕುಮಾರಿ, ಬಂದ ಅತಿಥಿಗಳಿಗೆ ತಾನು ಕುಟ್ಟುತ್ತಿರುವ ಭತ್ತದ ಶಬ್ದ, ಬಳೆಗಳ ಘರ್ಷಣೆಗಳಿಂದ ತಿಳಿಯಬಾರದೆಂದು ಒಂದೊಂದೇ ಬಳೆಯನ್ನು ತೆಗೆದಿಡುತ್ತಾಳೆ. ಒಂದೇ ಬಳೆಯಾದಾಗ ಶಬ್ದ ಕೇಳಿಸುವುದಿಲ್ಲ . ಎರಡಿಲ್ಲದ ಸ್ಥಿತಿ ಇದ್ದಾಗ, ದ್ವೈತವಿಲ್ಲದಿದ್ದಾಗ, ನೆಮ್ಮದಿಯೆಂದು ಇದರಿಂದ ಕಲಿತೆ. ಮಗು ತಾಯಿಯ ಗರ್ಭದಲ್ಲಿದ್ದಾಗ ತನ್ನ ಎಂಟನೆಯ ಮಾಸದಲ್ಲಿ ಪರಂಜ್ಯೋತಿಯನ್ನನುಭವಿಸಿ ಆನಂದದಲ್ಲಿರುತ್ತದೆ. ಹೊರಗೆ ಬಂದಾಗಲೂ ಅದಕ್ಕೆ ಇನ್ನೂ ಒಳಗುಂಗೇ. ಜ್ಞಾನಿಯಾದವನು ಸದ್ಯೋಜಾತ(ಆಗ ತಾನೆ ಹುಟ್ಟಿದ)  ಮಗುವಿನಂತೆ  ಇರಬೇಕೆಂಬುದನ್ನು ಅದರಿಂದ ಕಲಿತೆ. ಮೀನು ಸುಖದ ಆಸೆಯಿಂದ ಗಾಳಕ್ಕೆ ಸಿಕ್ಕಿಹಾಕಿಕೊಳ್ಳುತ್ತದೆ. ಹಾಗೆ ಆಸೆಗೆ ಸಿಲುಕಬಾರದೆಂಬುದನ್ನು ಮೀನಿನಿಂದ ಕಲಿತೆ. ಬಾಣದ ವಕ್ರತೆಯನ್ನು ಸರಿಮಾಡುವ ಇಷುಕಾರ, ರಾಜನ ಮೆರವಣಿಗೆ ಹೋಗುತ್ತಿದ್ದರೂ ಗಮನ ಅತ್ತ ಹರಿಸಲಿಲ್ಲ. ವಕ್ರವಾಗಿರುವುದನ್ನು ಸರಿಮಾಡಬೇಕು ಮತ್ತು ಏನೆಲ್ಲ ಆಕರ್ಷಣೆಗಳಿದ್ದರೂ ಧ್ಯಾನದ ಗಮನ ಅತ್ತಕಡೆ ಹರಿಯಬಾರದೆಂಬುದನ್ನು ಇಷುಕಾರನಿಂದ ಕಲಿತೆ. 


ಜೇಡರಹುಳು ತಾನೇ ಉಗುಳಿದ ನೂಲಿನಲ್ಲಿ ಬಲೆಯನ್ನು ಮಾಡಿ, ಅದರಲ್ಲೇ ವಿಹರಿಸಿ, ಮತ್ತೆ ಅದನ್ನು ತಾನೇ ನುಂಗುತ್ತದೆ. ಭಗವಂತನೂ ತಾನೇ ಸೃಷ್ಟಿಸಿದ ಜಗತ್ತಿನಲ್ಲಿ ವಿಹರಿಸಿ ತಾನೇ ಅಂತ್ಯಮಾಡುತ್ತಾನೆ. ಭಗವಂತನೇ ಜಗತ್ತಿಗೆ ಉಪಾದಾನ ಕಾರಣ ಮತ್ತು ನಿಮಿತ್ತ ಕಾರಣನೆಂದು ಜೇಡರಹುಳುವನ್ನು ನೋಡಿ ಅರಿತುಕೊಂಡೆ.  ತನ್ನ ಆಹಾರಕ್ಕೋಸ್ಕರ  ತಂದು ಅಂಟಿಸಿದ ಕೀಟ, ದುಂಬಿಯ ಭಯದಿಂದ ದುಂಬಿಯನ್ನೇ  ಯಾವಾಗಲೂ ನೆನೆಯುತ್ತಾ  ಕೊನೆಗೆ ದುಂಬಿಯೇ  ಆಗಿಬಿಡುತ್ತದೆ. ಭಯದಿಂದಲಾದರೂ ಪರಮಾತ್ಮನಲ್ಲಿ ತನ್ಮಯತೆಯನ್ನು ಹೊಂದಿದವ, ಪರಮಾತ್ಮನೇ  ಆಗಿಬಿಡುತ್ತಾನೆ ಎಂದು ಆ ಕೀಟದಿಂದ ಕಲಿತೆ.   ಧನದಾಸೆಗೆ ತನ್ನನ್ನು ಮಾರಿಕೊಂಡ ಪಿಂಗಳಾ ಎನ್ನುವ ವೇಶ್ಯೆ , ಒಂದು ದಿನ ಪುರುಷನಿಗೋಸ್ಕರ ಕಾದು  ಕಾದು  ಬೇಸತ್ತು, ಕೊನೆಗೆ ಭಗವಂತನನ್ನು ನೆನೆಸಿಕೊಂಡು ಆತನ ಮಡಿಯಲ್ಲಿ   ನಿದ್ರೆಮಾಡಿ ಅದೇ ಸೌಖ್ಯವೆಂದು, ಆತ ಎಂದೂ ನಿರಾಸೆಯನ್ನು ಉಂಟುಮಾಡುವುದಿಲ್ಲವೆಂದು ಕಂಡುಕೊಂಡು ಆತನಲ್ಲಿಯೇ ರತಿಯನ್ನು ಹೊಂದುತ್ತಾಳೆ. ಭಗವಂತನಲ್ಲೇ   ಎಂದೂ ರಮಿಸಬೇಕು ಎನ್ನುವುದನ್ನು  ಆ ವೇಶ್ಯೆಯಿಂದ   ಕಲಿತುಕೊಂಡೆ. 


ಶರೀರವು  ಯೋಗ ಮತ್ತು ಭೋಗ- ಇವುಗಳೆರಡಕ್ಕೂ  ಆಯತನ  ಎಂಬುದನ್ನು ಈ ಶರೀರದಿಂದ ಕಂಡುಕೊಂಡೆ  ಎಂದು ತಿಳಿಸುತ್ತಾರೆ. ಹೀಗೆ  ತಿಳಿಸಿ ರಾಜನಿಂದ ಸತ್ಕಾರವನ್ನು ಪಡೆದು, ದತ್ತಾತ್ರೇಯರು ಹೊರಟುಬರುತ್ತಾರೆ. 


ಸಾಂಸಾರಿಕರಾಗಿದ್ದರೂ ಕೂಡ, ನಾವುಗಳು ಇವುಗಳಲ್ಲಿನ ಅನೇಕ ವಿಷಯಗಳನ್ನು ಅಳವಡಿಸಿಕೊಳ್ಳಬಹುದು ಎಂದನಿಸುತ್ತದೆ  - ಕ್ಷಮೆ, ಗಾಂಭೀರ್ಯ, ಅನಾಯಾಸ, ನಿಃಸ್ಪೃಹತೆ, ಭಗವಂತನಲ್ಲಿ ಭಕ್ತಿ- ನಂಬಿಕೆಗಳು, ನೇರಬಾಣದಂತಹ ಸರಳವಾದ ಮನಸ್ಸು, ತನ್ಮಯತೆ, ಬೇಡದುದಕ್ಕೆ  ಆಸೆಪಡದಿರುವುದು   ಮತ್ತು  ಇನ್ನೂ  ಅನೇಕ ಪಾಠಗಳನ್ನು ನಾವು ಈ ವೃತ್ತಾಂತದಿಂದ ಕಲಿಯಬಹುದಾಗಿದೆ.


ಸೂಚನೆ : 11/2/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.