ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್
(ಪ್ರತಿಕ್ರಿಯಿಸಿರಿ lekhana@ayvm.in)
ಮಹಾಭಾರತದ ಒಂದು ಪ್ರಸಂಗ. ಸದಾ ಪಾಂಡವರ ನಾಶವನ್ನೇ ಬಯಸಿ ಅದಕ್ಕಾಗಿಯೇ ಯೋಜನೆಯನ್ನು ಕೈಗೊಳ್ಳುವ ದುರ್ಯೋಧನನು ಪಾಂಡವರನ್ನು ವಾರಣಾವತ ಎಂಬ ಪ್ರದೇಶಕ್ಕೆ ಕಳಿಸುವ ಯೋಜನೆ ಮಾಡುತ್ತಾನೆ. ಅಲ್ಲಿ ಅಗ್ನಿಯ ಸ್ಪರ್ಶವಾದೊಡನೆ ಕ್ಷಣ ಮಾತ್ರದಲ್ಲಿ ಹೊತ್ತಿ ಉರಿಯುವ ಸಾಮಗ್ರಿಗಳಿಂದ ನಿರ್ಮಿತವಾದ ಸೌಧವೊಂದನ್ನು ನಿರ್ಮಿಸಿ, ಅದರಲ್ಲಿ ಪಾಂಡವರನ್ನು ಇರಿಸಿ, ಅಲ್ಲಿಯೇ ಅವರನ್ನು ದಹಿಸುವ ಕೆಟ್ಟ ಯೋಚನೆಯನ್ನು ಶಕುನಿ ಹಾಗೂ ಕರ್ಣರೊಂದಿಗೆ ಸಮಾಲೋಚಿಸಿ ಕೈಗೊಳ್ಳುತ್ತಾನೆ. ತಂದೆಯಾದ ದೃತರಾಷ್ಟ್ರನಿಗೆ ಪಾಂಡವರನ್ನು ವಾರಣಾವತಕ್ಕೆ ಕಳುಹಿಸಲು ಸಕಲ ಸಿದ್ಧತೆಗಳನ್ನು ಮಾಡುವಂತೆ ಸೂಚಿಸುತ್ತಾನೆ. ವಿದುರನಿಗೆ ದುರ್ಯೋಧನಾದಿಗಳ ಈ ದುಷ್ಟಕೃತ್ಯದ ಅರಿವಾಗಿ ಹೇಗಾದರೂ ಮಾಡಿ ಪಾಂಡವರನ್ನು ರಕ್ಷಿಸುವ ಉಪಾಯವನ್ನು ಮಾಡುತ್ತಾನೆ. ಧೃತರಾಷ್ಟ್ರನ ಆದೇಶದಂತೆ ಪಾಂಡವರು ತಾಯಿಯಾದ ಕುಂತಿ ಸಮೇತರಾಗಿ ವಾರಣಾವತಕ್ಕೆ ಹೊರಟು ನಿಂತಾಗ ಆಪ್ತನಾದ ವಿದುರನು ಸ್ವಲ್ಪ ದೂರ ಅವರನ್ನು ಅನುಸರಿಸಿ ಬಂದು ಧರ್ಮರಾಯನನ್ನು ಕುರಿತು ಏಕಾಂತದಲ್ಲಿ ಮುಂದಾಗುವ ಅನಾಹುತಕ್ಕೆ ರಕ್ಷಾಕವಚದಂತಿರುವ ಈ ಹಿತವಚನಗಳನ್ನು ಸೂಚ್ಯವಾಗಿ ಹೇಳುತ್ತಾನೆ. ಮನುಷ್ಯರನ್ನು ಕೊಲ್ಲಲು ಲೋಹಸಂಬಂಧವಾದ ಶಸ್ತ್ರಗಳು ಮಾತ್ರವೇ ಕಾರಣವಲ್ಲ, ಶತ್ರುಗಳು ಅವರ ನಾಶಕ್ಕೆ ಬೇರೆ ಉಪಾಯಗಳನ್ನೂ ಹುಡುಕುತ್ತಾರೆ. ವಿವೇಕದಿಂದ ಅದನ್ನು ಅರಿತು ಜಾಗೃತರಾಗಿರಬೇಕು. ಅಗ್ನಿಯು ಮಹಾರಣ್ಯವನ್ನೇ ಸುಟ್ಟರೂ, ಬಿಲದಲ್ಲಿರುವ ಸರ್ಪದಂತಹ ಜಂತುಗಳನ್ನು ಸುಡದು. ಸಂಚರಿಸುತ್ತಾ ಹೋದವನು ನಕ್ಷತ್ರಗಳಿಂದ ದಿಕ್ಕನ್ನು ಕಂಡುಕೊಳ್ಳುವನು. ಹೀಗೆ ವಿದುರನ ಮಾತುಗಳು ಒಗಟಿನಿಂದ ಕೂಡಿದ್ದರೂ, ಸೂಕ್ಷ್ಮಮತಿಯಾದ ಧರ್ಮರಾಯನಿಗೆ ಅವುಗಳ ಅರ್ಥ ತಿಳಿಯುತ್ತದೆ. ಅವನು ಸದಾ ಜಾಗರೂಕನಾಗಿರುತ್ತಾನೆ. ವಾರಣಾವತಕ್ಕೆ ಬಂದು ಅಲ್ಲಿ ತಮಗಾಗಿ ದುರ್ಯೋಧನನಿಂದ ನಿರ್ಮಿತವಾದ ಭವನವನ್ನು ಪರೀಕ್ಷಿಸಿದೊಡನೆಯೇ ಇದು ಅಗ್ನಿಯ ಸ್ಪರ್ಶವಾದೊಡನೆಯೇ ಕ್ಷಣಮಾತ್ರದಲ್ಲಿ ದಹಿಸಲ್ಪಡುವ ಪರಿಕರಗಳಿಂದ ನಿರ್ಮಿತವಾದ ಸೌಧ ಎಂದು ಖಚಿತವಾಗುತ್ತದೆ. ವಿದುರನ ಮಾರ್ಗದರ್ಶನ ಹಾಗೂ ವಿದುರನೇ ಕಳುಹಿಸಿದ ಅವನ ಮಿತ್ರನ ಸಹಾಯದಿಂದ ಅರಗಿನ ಮನೆಯಲ್ಲಿ ಸುರಂಗವನ್ನು ತೋಡಿಸುತ್ತಾನೆ. ಮನೆಯು ದಹನವಾದಾಗ, ಸುರಂಗದಿಂದ ಪಾರಾಗಿ, ನಕ್ಷತ್ರಗಳ ಸಹಾಯದಿಂದ ದಿಕ್ಕನ್ನು ಗುರುತಿಸಿ ಪಾಂಡವರು ಕುಂತಿಯೊಂದಿಗೆ ಮುಂದಕ್ಕೆ ಸಂಚರಿಸುತ್ತಾರೆ. ಹೀಗೆ ಪಾಂಡವರು ಆಪ್ತವಾಕ್ಯ ಪರಿಪಾಲನೆಯಿಂದ ತಮಗೊದಗಿಬಂದ ಆಪತ್ತಿನಿಂದ ರಕ್ಷಿಸಲ್ಪಡುತ್ತಾರೆ.
ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಸಮಸ್ಯೆಗಳು, ಕಷ್ಟ ಕಾರ್ಪಣ್ಯಗಳು ಹಾಗೂ ಸಂಧಿಗ್ಧತೆಯು ಎದುರಾದಾಗ ಹಿತೈಷಿಗಳ ವಚನದ ಅವಶ್ಯಕತೆ ಇರುತ್ತದೆ; ಹಾಗೂ ಅವುಗಳು ಬೆಂಗಾವಲಾಗಿ ನಿಂತು ಕಾಪಾಡುತ್ತವೆ. ಹಾಗಾಗಿ, ಪ್ರತಿಯೊಬ್ಬರ ಜೀವನಕ್ಕೂ ಆಪ್ತರು ಹಾಗೂ ಆಪ್ತ ವಚನಗಳು ಅತ್ಯವಶ್ಯಕ.
"ಆಪ್ತರೆಂದರೆ ಬೇಕಾದವರು ಎಂಬಷ್ಟೇ ಅರ್ಥವಲ್ಲ; ವಿವೇಕಿಗಳ ಮತದಲ್ಲಿ ಆಪ್ತರೆಂದರೆ ಜ್ಞಾನಿಗಳು, ತಪೋಜ್ಞಾನಬಲಗಳಿಂದ ರಜಸ್ಸು ತಮಸ್ಸುಗಳನ್ನು ದಾಟಿದವರು. ತ್ರಿಕಾಲದಲ್ಲೂ ನಿರ್ಮಲವೂ, ಅವ್ಯಾಹತವೂ ಆದ ಪರಜ್ಞಾನ ಉಳ್ಳವರು. ಇವರೇ ಶಿಷ್ಟರು, ವಿಬುದ್ಧರು. ಇಂತಹವರು ಆಡುವ ಮಾತು ನಿಸ್ಸಂಶಯವಾಗಿಯೂ ಸತ್ಯವೇ. ರಜಸ್ಸು ತಮಸ್ಸುಗಳಿಲ್ಲದವರು ಅಸತ್ಯವನ್ನು ಏಕೆ ನುಡಿಯುವರು?" ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಹಿಂದಿನ ಕಾಲದಲ್ಲಿ ಜ್ಞಾನಿಗಳಾದ, ಇಡೀ ಪುರಕ್ಕೆ ಹಿತವನ್ನು ಬಯಸಿ ಅದಕ್ಕಾಗಿ ಶ್ರಮಿಸುವ ಕುಲಪುರೋಹಿತರು ಪ್ರತಿಯೊಂದು ರಾಜಮನೆತನಕ್ಕೂ ಇರುತ್ತಿದ್ದುದು ತಿಳಿದಿರುವ ವಿಷಯವೇ ಆಗಿದೆ. ಉದಾಹರಣೆಗೆ ತ್ರೇತಾಯುಗದಲ್ಲಿ ಬ್ರಹ್ಮರ್ಷಿ ವಸಿಷ್ಠರಂತಹವರು, ದ್ವಾಪರದಲ್ಲಿ ಧೌಮ್ಯರು, ಕೃಪಾಚಾರ್ಯ ಮೊದಲಾದವರು ಮತ್ತು ಕಲಿಯುಗದಲ್ಲಿ ಚಾಣಕ್ಯ,ವಿದ್ಯಾರಣ್ಯರಂತಹವರು. ಇಂದು ಅಂತಹ ಜ್ಞಾನಿಗಳ ಸಂಖ್ಯೆ ವಿರಳವಾಗಿದ್ದರೂ ಕೂಡ ಇಂದಿಗೂ ನಮ್ಮ ಭರತಭೂಮಿಯು ಜ್ಞಾನಿಗಳಿಂದ ಅಲಂಕೃತವಾಗಿಯೇ ಇದೆ. ಜ್ಞಾನಿಶ್ರೇಷ್ಠರಿಂದ ರಚಿತವಾದ ಅನೇಕ ಶಾಸ್ತ್ರಗ್ರಂಥಗಳು ಲೋಕದಲ್ಲಿವೆ. 'ಶಾಸನಾತ್ ತ್ರಾಣನಾತ್ ಚೈವ ಶಾಸ್ತ್ರಮಿತ್ಯಾಹು:' ಎಂಬಂತೆ ನಮಗೆ ವಿಧಿ ನಿಷೇಧಗಳನ್ನೊಳಗೊಂಡ ಶಾಸನವನ್ನು ಅದೇಶಿಸಿ, ಇಹ ಪರಗಳ ಜೀವನ ಸಂಚಾರಕ್ಕೆ ರಕ್ಷಣೆಯನ್ನು ಒದಗಿಸುವ ಅವುಗಳ ಅನುಸಂಧಾನವೂ ಕೂಡ ಜೀವನದ ಸುಭದ್ರತೆಗೆ ಸಹಾಯಕವಾಗಿವೆ. ಲಭ್ಯವಿರುವ ಜ್ಞಾನಿಗಳ ಮಾರ್ಗದರ್ಶನ ಪಡೆದು ಅಥವಾ ಜ್ಞಾನಿಗಳಿಂದ ರಚಿತವಾದ ಶಾಸ್ತ್ರಗ್ರಂಥಗಳ ಒಳನೋಟದ ಸಹಾಯದಿಂದ ಜೀವನವನ್ನು ಸರ್ವ ರೀತಿಯಿಂದಲೂ ಸುಭದ್ರವಾಗಿರಿಸಿಕೊಳ್ಳೋಣ.