Sunday, January 22, 2023

ವ್ಯಾಸ ವೀಕ್ಷಿತ - 22 ಕುಂತಿಯಿತ್ತ ಸಮರ್ಥನೆ - ಯುಧಿಷ್ಠಿರನಿತ್ತ ಸಮ್ಮತಿ (Vyaasa Vikshita - 22 Kuntiyitta Samarthane - Yudhishthiranitta Sammati)

 ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in) 



ಬ್ರಾಹ್ಮಣ-ಕುಟುಂಬಕ್ಕೊದಗಿದ ಆಪತ್ತಿನ ಪರಿಹಾರಕ್ಕಾಗಿ, ಬಕಾಸುರನ ಬಳಿಗೆ ಭೀಮನನ್ನು ಕಳುಹಿಸುವ ಕುಂತಿಯ ತೀರ್ಮಾನವನ್ನು ಪ್ರಶ್ನಿಸಿದ್ದ ಯುಧಿಷ್ಠಿರನಿಗೆ ಕುಂತಿಯು ಹೇಳಿದ ಮುಂದಿನ ಮಾತುಗಳಿವು:

ಬಲದ ವಿಷಯದಲ್ಲಿ ಭೀಮನಿಗೆ ಹೋಲಿಕೆಗೆ ನಿಲ್ಲುವವರಾರೂ ಇರಲಾರರು. ಏಕೆನ್ನುವೆಯಾ? ವಜ್ರಾಯುಧ-ಧಾರಿಯಾದ ಇಂದ್ರನು ಶ್ರೇಷ್ಠನಲ್ಲವೇ? ಸ್ವತಃ ಆತನೇ ಯುದ್ಧಕ್ಕೆ ಬಂದರೂ ಆತನನ್ನು ಭೀಮನು ಮಣಿಸುವವನೇ! ಹಿಂದಿನ ಪ್ರಸಂಗವೊಂದನ್ನು ಹೇಳುವೆ, ಕೇಳು. ಭೀಮನಿನ್ನೂ ಆಗಷ್ಟೆ ಹುಟ್ಟಿದ ಮಗು; ನನ್ನ ತೊಡೆಯ ಮೇಲಿದ್ದ ಆ ಎಳೆಗೂಸು ಜಾರಿ ಪರ್ವತದ ಮೇಲೆ ಬಿದ್ದರೆ, ಈತನ ಮೈಯ ಗಟ್ಟಿತನದಿಂದಾಗಿ ಬಂಡೆಯೇ ಚೂರುಚೂರಾಗಿ ಹೋಯಿತು (ಮಗುವಿಗೇನೂ ಆಗಲಿಲ್ಲ). ಎಳಸಿನಲ್ಲೇ ಅಷ್ಟು ಬಲ!

ಎಂದೇ ಭೀಮನ ಶಕ್ತಿಯನ್ನು ನಾನು ಪ್ರಜ್ಞೆಯಿಂದ ಅರಿತವಳಾಗಿ, ವಿಪ್ರನಿಗೆ ಪ್ರತೀಕಾರವನ್ನು - ಎಂದರೆ ಪ್ರತ್ಯುಪಕಾರವನ್ನು - ಮಾಡಲು ಮನಸ್ಸು ಮಾಡಿರುವುದು. ನಾನು ನಿಶ್ಚಯವನ್ನು ಮಾಡಿರುವುದು ಲೋಭದಿಂದಲ್ಲ, ಅಜ್ಞಾನದಿಂದಲ್ಲ, ಮೋಹದಿಂದಲ್ಲ. ಬುದ್ಧಿಪೂರ್ವಕವಾಗಿಯೇ ಧರ್ಮಸಂಕಲ್ಪವನ್ನು ಮಾಡಿರುವೆ. ಎರಡು ಪ್ರಯೋಜನಗಳೂ ಇದರಿಂದಾಗಿ ಸಾಧಿತವಾಗುತ್ತವೆ, ಯುಧಿಷ್ಠಿರ: ಒಂದು, ನಾವೀ ಬ್ರಾಹ್ಮಣ-ಗೃಹದಲ್ಲಿ ವಾಸಿಸಿದ್ದಕ್ಕೊಂದು ಪ್ರತ್ಯುಪಕಾರ; ಎರಡನೆಯದು, ಮಹಾಧರ್ಮದ ಆಚರಣೆ. (ಎಂದರೆ ಮಹಾಜನಕ್ಕೆ ಬಂದೊದಗಿರುವ ಆಪತ್ತಿನ ನಿವಾರಣೆ - ಇಂದಿನ ಮಾತಿನಲ್ಲಿ ಒಂದು ಮುಖ್ಯ ಸಮಾಜಸೇವೆ; ಒಂದು ಸಾಮಾಜಿಕ "ಪಿಡುಗಿನ" ಪರಿಹಾರ: ಲೋಕಕಂಟಕ-ಬಕನ ಸಂಹಾರ).

(ಯಾರಾರಿಗೆ ಹೇಗೆ ಉಪಕರಿಸಿದರೆ ಏನೇನು ಫಲವೆಂಬುದನ್ನು ಅರಿತುಕೋ:) ಬ್ರಾಹ್ಮಣನಿಗೆ ಯಾವುದಾದರೂ ಕೆಲಸ-ಕಾರ್ಯದಲ್ಲಿ  ಸಹಾಯಮಾಡಿದರೆ (ವಸ್ತುತಃ, 'ಸಹಾಯ' ಎಂಬ ಪದಕ್ಕೆ ಸಂಸ್ಕೃತದಲ್ಲಿ'ಜೊತೆಗಾರ, ಮಿತ್ರ' ಎಂಬ ಅರ್ಥ;  ಮಿತ್ರನೆಸಗುವ ಉಪಕಾರವು "ಸಾಹಾಯ್ಯ"), ಅಂತಹ ಕ್ಷತ್ರಿಯನು ಶುಭಲೋಕಗಳನ್ನು ಮುಂದೆ ಹೊಂದುವನು. ಮತ್ತೊಬ್ಬ ಕ್ಷತ್ರಿಯನನ್ನು ಸಾವಿನಿಂದ ಪಾರುಮಾಡಿ ಉಪಕರಿಸಿದಲ್ಲಿ ವಿಪುಲವಾದ ಕೀರ್ತಿಯನ್ನು ಇಹ-ಪರಗಳಲ್ಲಿ ಹೊಂದುವನು! ವೈಶ್ಯನೊಬ್ಬನಿಗೆ ಸಾಹಾಯ್ಯ ಮಾಡಿದ ಕ್ಷತ್ರಿಯನು, ಎಲ್ಲೆಡೆ ಪ್ರಜಾರಂಜನವನ್ನು ಮಾಡತಕ್ಕವನಾಗುವನು. ಇನ್ನು ಶರಣಾರ್ಥಿಯಾಗಿ ಬಂದ ಶೂದ್ರನನ್ನು ಬಿಡುಗಡೆಗೊಳಿಸಿದಲ್ಲಿ, ರಾಜಪೂಜಿತವೂ ಸುಸಂಪನ್ನವೂ ಆದ ಕುಲದಲ್ಲಿ ಜನ್ಮ ತಾಳುವನು. ಇದೆಲ್ಲ ವಿಷಯವನ್ನೂ ಹಿಂದೆ ನನಗೆ ತಿಳಿಸಿಕೊಟ್ಟವರು, ಮಹಾಮೇಧಾವಿ ಭಗವಾನ್ ವೇದವ್ಯಾಸ. ಅದಕ್ಕಾಗಿಯೇ ನಾನು ಹೀಗೆ ಮಾಡಲು ನಿಶ್ಚಯಿಸಿಕೊಂಡದ್ದು.

ಅದಕ್ಕೆ ಯುಧಿಷ್ಠಿರನೆಂದನು: ಯುಕ್ತಿ-ಯುಕ್ತತವಾಗಿದೆ, ತಾಯಿ, ನಿನ್ನ ಉಕ್ತಿ; ನೀನೀಗ ಮಾಡಹೊರಟಿರುವುದು ಬುದ್ಧಿಪೂರ್ವಕವಾದ ಸತ್ಕಾರ್ಯ: ಕಷ್ಟದಲ್ಲಿ ಸಿಲುಕಿರುವ ಬ್ರಾಹ್ಮಣನ ಮೇಲೆ ದಯೆಯಿಂದ ಮಾಡುತ್ತಿರುವಂತಹುದು. ನರಭಕ್ಷಕನನ್ನು ಸಂಹಾರಮಾಡಿ ಭೀಮನು ಹಿಂದಿರುಗುವನೇ ಸರಿ. ಆದರೊಂದು ಎಚ್ಚರ: ಬಕಾಸುರನನ್ನು ಕೊಂದವರಾರೆಂಬುದನ್ನು ನಗರದಲ್ಲಿ ವಾಸಿಸುವ ಮಂದಿ ಅರಿಯಕೂಡದು. ಹಾಗೆಂಬುದಾಗಿ ಬ್ರಾಹ್ಮಣನಿಗೆ ಹೇಳತಕ್ಕದ್ದು; ಅಷ್ಟೇ ಅಲ್ಲ, ಆತನನ್ನು ಅದಕ್ಕೊಪ್ಪಿಸತಕ್ಕದ್ದು - ಎಂದು.

ಯುಧಿಷ್ಠಿರನಿಗೆ ಮೊದಲು ಮೂಡಿದ ಸಂದೇಹವನ್ನು ಕುಂತಿಯು ಅದೆಷ್ಟು ಕುಶಲತೆಯಿಂದ ಪರಿಹರಿಸಿದಳು! ತನ್ನ ತೀರ್ಮಾನದ ಹಿಂದೆ ಲೋಭ-ಮೋಹಗಳಾಗಲಿ, ಅಜ್ಞಾನವಾಗಲಿ ಕೆಲಸಮಾಡಿಲ್ಲವೆಂಬುದನ್ನು ಖಚಿತಪಡಿಸುತ್ತಾಳೆ; ಅಮ್ಮನ ಚಿಂತನದಲ್ಲಿಯ ವಿವೇಕ-ತರ್ಕಬದ್ಧತೆಗಳನ್ನು ಮನಗಂಡೊಡನೆಯೇ ಆತನೂ ಅದಕ್ಕೊಪ್ಪುವವನೇ. ಕುಂತಿಯ ಚುರುಕು ಶ್ಲಾಘನೀಯವಲ್ಲವೇ? ಅಮ್ಮನ ಧರ್ಮ-ಪ್ರಜ್ಞೆಯನ್ನು ಮೆಚ್ಚುವ ಧರ್ಮಪುತ್ರನೂ ಶ್ಲಾಘ್ಯನೇ.

ಸೂಚನೆ : 22/1/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.