ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಪಾಂಡವರ ಮುಖೋಲ್ಲಾಸ ಕಂಡು ಹಿಗ್ಗಿದ, ಪುರೋಚನ. ಹೇಗೂ ಸಾಕಷ್ಟು ಕಾಲ ಕಳೆದಿತ್ತು; ಪಾಂಡವರು ಈಗ ವಿಶ್ವಸ್ತರಾಗಿದ್ದಾರೆ – ಎಂದು ತೀರ್ಮಾನಿಸಿಕೊಂಡ. ಪುರೋಚನನ ಹರ್ಷವನ್ನು ಗಮನಿಸಿಕೊಂಡ ಯುಧಿಷ್ಠಿರ, ತನ್ನ ತಮ್ಮಂದಿರಿಗೆ ಹೇಳಿದ: "ನಮ್ಮ ಪಲಾಯನಕಾಲವೀಗ ಬಂದಿದೆ; ಈ ಮನೆಗಿನ್ನು ನಾವೇ ಬೆಂಕಿ ಹಚ್ಚಿ ಧಾವಿಸಬೇಕು. ಆಯುಧಾಗಾರವನ್ನು ಮಾತ್ರವಲ್ಲ; ಪುರೋಚನನನ್ನೂ ಸುಡಬೇಕು; ಆರು ಪ್ರಾಣಿಗಳನ್ನೂ ಇಟ್ಟು ಯಾರಿಗೂ ತೋರದಂತೆ ಇಲ್ಲಿಂದ ಚಲಿಸಬೇಕು."
ಅಂದು ರಾತ್ರಿ ಕುಂತಿಯು ಬ್ರಾಹ್ಮಣಭೋಜನವೊಂದನ್ನು ಏರ್ಪಡಿಸಿದಳು. ಅಲ್ಲಿಗೆ ಅನ್ನಾರ್ಥಿನಿಯಾಗಿ ಭಿಲ್ಲೆಯೊಬ್ಬಳು ತಾನಾಗಿ ತನ್ನೈದು ಮಕ್ಕಳೊಂದಿಗೆ ಬಂದಳು! ಕಾಲಚೋದಿತಳಾಗಿ, ಅತಿಪಾನಮತ್ತಳಾಗಿ, ಸತ್ತವಳಂತೆ ಅಲ್ಲೇ ಎಲ್ಲೋ ಬಿದ್ದುಗೊಂಡಳು.
ನಡುರಾತ್ರಿ ಭಾರಿಗಾಳಿಯ ವೇಳೆ, ಪುರೋಚನನ ಶಯನದೆಡೆ, ಹಾಗೂ ಜತುಗೃಹದ್ವಾರದಲ್ಲಿ, ಬೆಂಕಿಯಿಕ್ಕಿದ, ಭೀಮ. ಸುರಂಗದ್ವಾರಾ ಕುಂತಿಯೊಂದಿಗೆ ಪಂಚಪಾಂಡವರೂ ಪಲಾಯನ ಮಾಡಿದರು. ಗಟ್ಟಿಗ ಭೀಮನೇ ಪಾಂಡವರೆಲ್ಲರನ್ನೂ ಹೊತ್ತು ಸಾಗಿದ.
ಬೆಂಕಿಯ ಭಾರಿಶಬ್ದಕ್ಕೆ ಎಚ್ಚೆತ್ತಿತು ಸುತ್ತಲಿನ ಜನಸ್ತೋಮ. "ಅಯ್ಯೋ, ಅಸಮಂಜಸಬುದ್ಧಿಯ ಧೃತರಾಷ್ಟ್ರನು ಶುದ್ಧರಾದ ಪಾಂಡವರನ್ನು ಸುಡಿಸಿಬಿಟ್ಟ" ಎಂದುಕೊಂಡರು.
ಈ ಮಧ್ಯೆ, ನಂಬಿಕೆಗೆ ಯೋಗ್ಯವಾದ ನಾವಿಕನೊಬ್ಬನನ್ನು ವಿದುರ ಕಳುಹಿಸಿಕೊಟ್ಟ. ಪಾಂಡವರಿಗೆ ಆತ ತನ್ನ ಅದ್ಭುತನಾವೆಯನ್ನು ತೋರಿಸಿದ. ಅದು ಮನಸ್ಸಿನಂತೆ, ವಾತದಂತೆ, ವೇಗವಾಗಿ ಹೋಗುವಂತಹುದು. ಎಂತಹ ಗಾಳಿಯನ್ನೂ ಎದುರಿಸಬಲ್ಲುದು. ಏಕೆಂದರೆ ಅದಕ್ಕೆ ಯಂತ್ರವೂ ಉಂಟು, ಪಟಗಳೂ ಉಂಟು (ಯಂತ್ರಯುಕ್ತಾಂ ಪತಾಕಿನೀಂ). ಎಲ್ಲಕ್ಕಿಂತಲೂ ಮುಖ್ಯವಾಗಿ, ನಂಬಿಕೆಗೆ ಅರ್ಹರಾದವರು ಅದನ್ನು ನಿರ್ಮಿಸಿದ್ದರು.
ಯುಧಿಷ್ಠಿರನಿಗೆ ತನ್ನ ಗುರುತಿನ ಮಾತನ್ನು ಹೇಳಿ, "ಕರ್ಣ-ಶಕುನಿಗಳೂ ಸೇರಿದಂತೆ, ತಮ್ಮಂದಿರಿಂದೊಡಗೂಡಿದ ದುರ್ಯೋಧನನು ಮುಂದೆ ಸಾವನ್ನಪ್ಪುವನೆಂದು ವಿದುರನು ಹೇಳಿದ್ದಾನೆ. ಇರಲಿ, ಇಲ್ಲಿಂದ ನಿಮ್ಮನ್ನೀಗ ಪಾರುಮಾಡಬೇಕಾಗಿದೆ" - ಎಂದು ಹೇಳಿ ದೋಣಿಯಿಂದ ಗಂಗೆಯನ್ನು ದಾಟಿಸಿದ. ಜಯಶಬ್ದದೊಂದಿಗೆ ಅವರನ್ನು ಕಳುಹಿಸಿಕೊಟ್ಟ. ಮುಂದಕ್ಕೆ ಗುಟ್ಟಾಗಿ ನಡೆದರು, ಪಾಂಡವರು.
ಇತ್ತ ವಾರಣಾವತದಲ್ಲಿ ಜನಸಂದಣಿ. "ಇದು ಪಾಪಿದುರ್ಯೋಧನನ ಕೃತ್ಯವೇ. ಇಲ್ಲಿ ಭೀಷ್ಮಾದಿಗಳೂ ಧರ್ಮವನ್ನನುಸರಿಸುತ್ತಿಲ್ಲ!" ಎಂದೆಲ್ಲ ಮಾತನಾಡಿಕೊಂಡರು.
ಭಿಲ್ಲೆಯ ಶರೀರ ಹಾಗೂ ಅವಳ ಐದು ಮಕ್ಕಳ ಶರೀರಗಳು ಸುಟ್ಟಿದ್ದವಾಗಿ, ಆ ಶರೀರಗಳು ಪಾಂಡವರ ಹಾಗೂ ಅವರ ತಾಯಿಯವು - ಎಂದವರು ತರ್ಕಿಸುವಂತಾಯಿತು. ಏತನ್ಮಧ್ಯೇ ಆ ವಿದುರಪ್ರೇಷಿತನಾದ ಖನಕನು (ಅಗೆಯುವವನು) ಪಾಂಡವರನ್ನು ಹುಡುಕುವ ನೆಪದಲ್ಲಿ ಒಳಕ್ಕೆ ಹೋಗಿ, ಸುರಂಗಮಾರ್ಗದ ಬಾಗಿಲನ್ನು ಧೂಳಿನಿಂದ ಮುಚ್ಚಿಬಿಟ್ಟ. ಹೀಗಾಗಿ ಯಾರಿಗೂ ಅಲ್ಲಿ ಬಿಲವೊಂದನ್ನು ನಿರ್ಮಿಸಿತ್ತೆಂಬ ಸುಳಿವೂ ಸಿಗಲಿಲ್ಲ.
ಈ ಪ್ರಸಂಗದ ಪಾಠವನ್ನಿಷ್ಟು ಗಮನಿಸಬಹುದು: "ಅಹಿಂಸೆಯೆಂಬುದು ಒಳ್ಳೆಯದು, ಸರಿಯೇ; ಆದರೆ ಅದೇ ಸರ್ವಸ್ವವಲ್ಲ. ನಿಷ್ಕಾರಣವಾಗಿ ನಮ್ಮನ್ನು ಕೊಲ್ಲಲೆಳಸುವ ಪಾಪಿ ಪುರೋಚನನನ್ನು ಸುಟ್ಟರೆ ಪಾಪವಿಲ್ಲ- ಎಂಬ ಯುಧಿಷ್ಠಿರನ ಸ್ಪಷ್ಟನಿಲುವೂ ದಿಟ್ಟಹೆಜ್ಜೆಗಳೂ ನಮಗೆ ಇಂದಿಗೂ ಮಾದರಿಯಾಗಿವೆ. "ಧರ್ಮಕಂಟಕರನ್ನು ಸಂಹರಿಸುವುದೇ ಅಹಿಂಸೆ" – ಎಂಬ ಶ್ರೀರಂಗಮಹಾಗುರುಗಳ ಸೂತ್ರ ಇಲ್ಲಿ ಅತ್ಯಂತಸ್ಮರಣೀಯ.
ಇಂದಿನ ರಾಜಕೀಯಸಂನಿವೇಶಕ್ಕೆ ಅನ್ವಯಿಸುವುದಾದರೆ: ಇಡೀ ದೇಶವನ್ನೇ ಕಬಳಿಸಲು ಹೊಂಚು ಹಾಕುತ್ತಿರುವ ದುಷ್ಟಶಕ್ತಿಗಳನ್ನು ದಮನ ಮಾಡುವುದೇ ಧರ್ಮರಕ್ಷಣೆಯ ಮೊಟ್ಟಮೊದಲ ಹೆಜ್ಜೆಯಾಗಿದೆಯಲ್ಲವೇ?