ಲೇಖಕಿ: ಸೌಮ್ಯಾ ಪ್ರದೀಪ್
ಮಹಿಲಾರೋಪ್ಯವೆಂಬ ನಗರದಲ್ಲಿ ಅಮರಶಕ್ತಿಯೆoಬ ಶೂರನಾದ ರಾಜನಿದ್ದನು, ಅವನ ಮೂರು ಗಂಡು ಮಕ್ಕಳೂ ನ್ಯಾಯ ನೀತಿ ರಹಿತರಾಗಿ ಮಹಾಮೂರ್ಖರಾಗಿದ್ದರು. ಇದರಿಂದ ಬಹಳ ಚಿಂತಾಕ್ರಾಂತನಾದ ರಾಜನು ಮಂತ್ರಿಗಳೊಂದಿಗೆ ಸಮಾಲೋಚಿಸಿ ತನ್ನ ಮಕ್ಕಳು ನೀತಿವಂತರೂ ಬುದ್ಧಿವಂತರೂ ಆಗುವಂತಹ ಮಾರ್ಗವನ್ನು ಶೋಧಿಸಲು ಸೂಚಿಸುತ್ತಾನೆ. ಆಗ ವಿಷ್ಣುಶರ್ಮನೆಂಬ ವಿದ್ವಾಂಸನು ರಾಜನ ಮೂವರು ಮಕ್ಕಳನ್ನು ಆರು ತಿಂಗಳಲ್ಲಿ ವಿದ್ಯಾವಂತರನ್ನಾಗಿ ಮಾಡುವ ಭರವಸೆ ನೀಡಿ ರಾಜನ ಮಕ್ಕಳನ್ನು ಕರೆದೊಯ್ದು ಮಕ್ಕಳಿಗೆ ನೀತಿಯುಕ್ತವಾದ ಐದು ತಂತ್ರಗಳನ್ನೊಳಗೊಂಡ ಕಥೆಯನ್ನು ರಚಿಸಿ ಮನಮುಟ್ಟುವಂತೆ ಹೇಳಿ ಅವರನ್ನು ವಿದ್ಯಾವಂತರನ್ನಾಗಿ ಮಾಡಿದನು. ಅದೇ ಇಂದಿಗೂ ಪಂಚತಂತ್ರವೆಂಬ ಹೆಸರಿನ ಬಹೂಪಯೋಗಿ ಗ್ರಂಥವಾಗಿದೆ.
ಮಕ್ಕಳನ್ನು ಸನ್ಮಾರ್ಗಕ್ಕೆ ಕೊಂಡೊಯ್ಯಲು ಕಥೆಗಳು ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಭಾರತೀಯ ಪುರಾಣೇತಿಹಾಸಗಳಿಂದ ಆಯ್ದ ಕಥೆಗಳು ಲೌಕಿಕ ವ್ಯವಹಾರದ ಜ್ಞಾನವನ್ನು ಅಂದರೆ ಯಾರೊಂದಿಗೆ ಎಂತಹ ವ್ಯವಹಾರವನ್ನು ಇಟ್ಟುಕೊಳ್ಳಬೇಕು ಎಂಬ ಜ್ಞಾನವನ್ನು ನೀಡುವುದರ ಜೊತೆಗೆ ಅನೇಕ ನೀತಿತತ್ತ್ವಗಳನ್ನು ಬೋಧಿಸಿ ಮಕ್ಕಳಲ್ಲಿ ಸದ್ಗುಣಗಳನ್ನು ಬೆಳೆಸಿ ಸತ್ಪ್ರಜೆಗಳನ್ನಾಗಿ ಮಾಡಲು ಸಹಕಾರಿಯಾಗಿವೆ.
ಸತ್ತ್ವ-ರಜಸ್ಸು-ತಮಸ್ಸುಗಳೆಂಬ ತ್ರಿಗುಣಗಳು ಇಡೀ ಬ್ರಹ್ಮಾಂಡ (ವಿಶ್ವ)ದಲ್ಲಿ ಹಾಗೂ ಪಿಂಡಾಂಡ (ಶರೀರ)ದಲ್ಲಿ ಹಾಸುಹೊಕ್ಕಾಗಿ ವ್ಯಾಪಿಸಿದೆ. ಈ ತ್ರಿಗುಣಗಳ ಕ್ರಿಯೆಗಳಿಲ್ಲದೆ ಸೃಷ್ಟಿ ಚಕ್ರವು ನಡೆಯುವುದೇ ಇಲ್ಲ. ಪ್ರಕೃತಿಯ ಸಮತೋಲನ ಕಾಪಾಡಿಕೊಳ್ಳಲು ತ್ರಿಗುಣಗಳು ಅತ್ಯವಶ್ಯಕ. ಶಾಂತಿ ಸಮಾಧಾನಗಳಿಗೆ ಸತ್ತ್ವಗುಣವು ಅವಶ್ಯಕವಾದರೆ ಕಾರ್ಯಪ್ರವೃತ್ತಿಗೆ ರಜೋಗುಣವು ಬೇಕು; ಆಲಸ್ಯವನ್ನು ಉಂಟುಮಾಡುವ ತಮೋಗುಣವನ್ನು ನಿದ್ರೆಗಾಗಿ ಅವಲಂಬಿಸಲೇಬೇಕು. ಸತ್ತ್ವದ ಆಧಿಕ್ಯವನ್ನು ಸಾಧಿಸಿ ಅದರ ಅಧೀನದಲ್ಲಿ ರಜಸ್ಸು ಮತ್ತು ತಮಸ್ಸುಗಳಿರುವಂತೆ ನೋಡಿಕೊಂಡಾಗ ಜೀವನ ಧರ್ಮಮಯವಾಗಿರುತ್ತದೆ. ಅಂತಹ ಸತ್ತ್ವಗುಣದ ಆಧಿಕ್ಯವನ್ನು ಸಾಧಿಸಲು ಸದ್ವಿಚಾರಗಳ ಶ್ರವಣ ಅತ್ಯವಶ್ಯಕ, ಎಳೆಯ ಮನಸ್ಸಿನ ಮಕ್ಕಳಿಗೆ ರಾಮನಂತೆ ವರ್ತಿಸಬೇಕು ರಾವಣನಂತೆ ವರ್ತಿಸಬಾರದು ಎಂಬಿತ್ಯಾದಿ ಸದ್ವಿಚಾರಗಳನ್ನು ತತ್ತ್ವಸಹಿತವಾಗಿ ಕೊಟ್ಟಾಗ ಅವರನ್ನು ಸನ್ಮಾರ್ಗದಲ್ಲಿ ಮುನ್ನಡೆಸಿ ಸಂಸ್ಕಾರವಂತರನ್ನಾಗಿ ಮಾಡಬಹುದು. ತಾಯಿ ಜೀಜಾಭಾಯಿಯವರು ಹೇಳುತ್ತಿದ್ದ ಮಹಾಭಾರತದ ಕಥೆಯನ್ನು ಕೇಳಿ ಶಿವಾಜಿ ಮಹಾರಾಜರು ಬೆಳೆದುದರ ಪರಿಣಾಮ ಭಾರತಭೂಮಿಯು ಅಂತಹ ಒಬ್ಬ ಧರ್ಮಿಷ್ಠನಾದ ರಾಜನನ್ನು ಕಾಣಲು ಸಾಧ್ಯವಾಯಿತು.
ವೇದದಲ್ಲಿರುವ ಧರ್ಮಸೂಕ್ಷ್ಮಗಳನ್ನು ಪುರಾಣೇತಿಹಾಸಗಳಲ್ಲಿ ಹಾಗೂ ಕಾವ್ಯಗಳಲ್ಲಿ ಕಥಾರೂಪದಲ್ಲಿ ಹೆಣೆದು ಮಹರ್ಷಿಗಳು ಲೋಕಕ್ಕೆ ನೀಡಿದ್ದಾರೆ. ಆ ಕಥೆಗಳೇ ಪುಟ್ಟ ಮಕ್ಕಳಿಗೆ ಅರ್ಥವಾಗುವಂತೆ ಪ್ರಾಣಿ-ಪಕ್ಷಿಗಳ ಕಥೆಗಳ ಮೂಲಕ ಪಂಚತಂತ್ರ ಇತ್ಯಾದಿಗಳಲ್ಲಿ ಚಿತ್ರಿಸಲ್ಪಟ್ಟಿವೆ. "ಮಹರ್ಷಿಯು ತನ್ನ ಮಟ್ಟದಲ್ಲೇ ತಾನು ಇದ್ದುಬಿಟ್ಟರೆ ಲೋಕಕ್ಕೆ ಅದಾವುದೂ ಅರ್ಥವಾಗೋಲ್ಲ. ಲೋಕವು ಆ ಮಟ್ಟಕ್ಕೆ ಏರಲಾಗುವುದಿಲ್ಲ. ಪುಟ್ಟ ಮಕ್ಕಳಿಗೆ ನಾವೇನಾದರೂ ಕೂಗಿಕೊಡುವ ಸಂನಿವೇಶ ಬಂದಾಗ ನಾವು ಆ ಮಕ್ಕಳ ಮಟ್ಟಕ್ಕೇ ಇಳಿದು ಮಾತನಾಡಿಸಿ ಕೊಡಬೇಕೇ ಹೊರತು ನಮ್ಮ ಮಟ್ಟದಲ್ಲೇ ನಮ್ಮ ಪಿಚ್ಚಿನಲ್ಲೇ ನಮ್ಮ ಭಾಷಾಗಾಂಭೀರ್ಯದಲ್ಲೇ ನಾವು ಮಾತನಾಡುವುದಾದರೆ ಮಕ್ಕಳು ನಮ್ಮ ಹತ್ತಿರದಲ್ಲೇ ಸುಳಿಯಲಾರವು" ಎಂಬ ಶ್ರೀರಂಗಮಹಾಗುರುಗಳ ಮಾತಿನಂತೆ ಮಕ್ಕಳಿಗೆ ವೇದೋಪನಿಷತ್ತುಗಳಲ್ಲಿರುವ ಸದ್ವಿಚಾರಗಳನ್ನು ಕಥೆಗಳ ಮೂಲಕ ಕೊಡಲು ಪ್ರಯತ್ನಿಸೋಣ.
ಸೂಚನೆ: 28/11/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.