ಅಪರಿಗ್ರಹ ಎನ್ನುವುದು ಪತಂಜಲಿ ಸೂತ್ರದ ಅಷ್ಟಾಂಗಯೋಗದ ಯಮ ಎನ್ನುವ ಮೆಟ್ಟಿಲಿನ ಒಂದು ಭಾಗ. ಪರಿಗ್ರಹ ಎಂದರೆ ಸ್ವೀಕಾರ ಮಾಡುವುದು, ತೆಗೆದುಕೊಳ್ಳುವುದು ಎಂದರ್ಥ ಮತ್ತು ದಾನವನ್ನು ಸ್ವೀಕಾರ ಮಾಡದೇಇರುವಿಕೆಯೇ ಅಪರಿಗ್ರಹ. ಮೇಲುನೋಟದಲ್ಲಿ ಈ ಯಮವು ಇಂದಿನ ಆಧುನಿಕ ಜೀವನದ ಚಿಂತನಾಕ್ರಮ ಹಾಗೂ ಜೀವನಶೈಲಿಯ ಚೌಕಟ್ಟಿನಲ್ಲಿ ಅಪ್ರಸ್ತುತ ಎಂದು ಅನ್ನಿಸಬಹುದೇನೋ! ಆದರೆ ಈ ಯಮದ ಹಿಂದಿರುವ ತತ್ತ್ವದ ಅಳವಡಿಕೆ ಆಧುನಿಕ ಕಾರ್ಪೊರೇಟ್ ಜಗತ್ತಿನಲ್ಲಿ ಅಲೆಗಳನ್ನೇ ಎಬ್ಬಿಸಿ ಜಾಗತಿಕ ಮಟ್ಟದಲ್ಲಿ ಕ್ರಾಂತಿ ಉಂಟು ಮಾಡಿದೆ. ಆದುದರಿಂದ ಈ ವಿಷಯದ ಹಿಂದಿರುವ ತತ್ತ್ವವೇನು? ಹೇಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವುದನ್ನು ಮೌಲಿಕವಾಗಿ ತಿಳಿಯಬೇಕಾಗಿದೆ.
ಮೌಲಿಕವಾಗಿ ಚಿಂತಿಸುವುದಾದರೆ, ಪತಂಜಲಿಗಳ ಪ್ರಕಾರ, ಯೋಗ ಎಂದರೆ ಚಿತ್ತವೃತ್ತಿಗಳ ನಿರೋಧವೇ ಆಗಿದೆ. ಮನಸ್ಸಿನ ಅಲೆಗಳು ಸಂಪೂರ್ಣವಾಗಿ ಶಾಂತವಾದಾಗ, ವ್ಯಕ್ತಿಯು ತನ್ನ ಮೂಲಸ್ವರೂಪವನ್ನು ದರ್ಶನ ಮಾಡಬಹುದು ಎನ್ನುವುದು ಈ ಸೂತ್ರದ ತಾತ್ಪರ್ಯ. ಯಾವ ಅಭ್ಯಾಸಗಳು ಚಿತ್ತವೃತ್ತಿಗಳನ್ನು ಕಡಿಮೆ ಮಾಡುತ್ತವೆಯೋ ಅವೆಲ್ಲವೂ ಯೋಗಕ್ಕೆ ಪೋಷಕ ಮತ್ತು ಯಾವ ಅಭ್ಯಾಸಗಳು ಚಿತ್ತವೃತ್ತಿಯನ್ನು ಹೆಚ್ಚಿಸುತ್ತವೆಯೋ ಅವು ಯೋಗಕ್ಕೆ ವಿರೋಧ ಎಂದು ಪರಿಗಣಿಸಬಹುದು. ವಸ್ತುಗಳು ಅಥವಾ ಪದಾರ್ಥಗಳು ನಮ್ಮ ಮನಸ್ಸಿನ ಮೇಲೆ ಪರಿಣಾಮವನ್ನು ಬೀರಿ ಚಿತ್ತವೃತ್ತಿಗಳನ್ನು ಹೆಚ್ಚಿಸುತ್ತವೆ. ಪರಿಗ್ರಹ ಮಾಡುತ್ತಿದ್ದರೆ, ಅಂದರೆ ದಾನ ಕೊಟ್ಟ ವಸ್ತುಗಳನ್ನು ಸ್ವೀಕರಿಸುತ್ತಿದ್ದರೆ ನಮ್ಮಲ್ಲಿ ಪದಾರ್ಥಸಂಗ್ರಹವು ಜಾಸ್ತಿಯಾಗೆ ತನ್ಮೂಲಕ ಚಿತ್ತವೃತ್ತಿಗಳು ಜಾಸ್ತಿಯಾಗಿ ಯೋಗಕ್ಕೆ ಬಾಧಕವಾಗುತ್ತದೆ. ಆದುದರಿಂದ ದಾನವನ್ನು ಸ್ವೀಕರಿಸದೇ ಇರುವುದರಿಂದ, ಪದಾರ್ಥ ಸಂಗ್ರಹವು ಮಿತಿಯಲ್ಲಿದ್ದು ತನ್ಮೂಲಕ ಚಿತ್ತವೃತ್ತಿಗಳನ್ನು ಹತೋಟಿಯಲ್ಲಿರುವಂತೆ ಆಗುವುದರಿಂದ ಅಪರಿಗ್ರಹ ಎನ್ನುವ ಯಮವು ಒಂದು ಯೋಗಾಂಗವಾಗಿದೆ.
ಪದಾರ್ಥಗಳಿಗೂ ಮತ್ತು ಮನಸ್ಸಿಗೂ ಇರುವ ಸಂಬಂಧವೇನು? ಅವು ಹೇಗೆ ಚಿತ್ತವೃತ್ತಿಗಳನ್ನು ಹೆಚ್ಚಿಸುತ್ತವೆ ಎನ್ನುವುದನ್ನು ನಮ್ಮ ದೈನಂದಿನ ಜೀವನವನ್ನು ಗಮನಿಸುವ ಮೂಲಕವೇ ಅರ್ಥ ಮಾಡಿಕೊಳ್ಳಬಹುದು. ಒಂದು ಪದಾರ್ಥ ನಮ್ಮಲ್ಲಿ ಬಂದು ಸೇರಿದರೆ ಅದರ ಉಪಯೋಗ ಏನು? ಅದನ್ನು ಎಲ್ಲಿಟ್ಟಿರುವುದು? ಅದರ maintenance ಹೇಗೆ? ಮುಂತಾಗಿ ಆಲೋಚಿಸಬೇಕಾಗುತ್ತದೆ. ಕನಿಷ್ಠ ಪಕ್ಷ ಅದರ ಧೂಳು ಹೊಡೆಯುವುದಷ್ಟು ಕೆಲಸವನ್ನಂತೂ ಮಾಡಲೇಬೇಕಾಗುತ್ತದೆ. ಮನೆಯಲ್ಲಿ ವಸ್ತುಗಳು ಚೊಕ್ಕವಾಗಿದ್ದರೆ ಮನಸ್ಸು ಪ್ರಸನ್ನವಾಗಿರುತ್ತದೆ. ಶುಭ್ರವಾಗಿ, ಚೊಕ್ಕವಾಗಿ, ಅಂದವಾಗಿಟ್ಟುರುವ ಸನ್ನಿವೇಶವೇ ಮನಸ್ಸು ಅರಳುವಂತೆ ಮಾಡುತ್ತದೆ. ಆದರೆ ವಸ್ತುಗಳು ಅಸ್ತ್ಯವಸ್ತ್ಯವಾಗಿ ಹರಡಿದ್ದರೆ ಅಥವಾ ಬಿಸಾಡಲ್ಪಟ್ಟಿದ್ದರೆ ಮನಸ್ಸು ಕೆರಳಬಹುದು ಅಥವಾ ಒಂದು ಮಬ್ಬು ಕವಿಯಬಹುದು ಒಟ್ಟಿನಲ್ಲಿ ಪ್ರಸನ್ನತೆ ಹಾಳಾಗಬಹುದು. ಒಟ್ಟಾರೆ ವಸ್ತುಗಳಿಗೂ ಮನಸ್ಥಿತಿಗೂ ಸಂಬಂಧವುಂಟು ಎನ್ನುವುದು ಸ್ಪಷ್ಟವಾಗುತ್ತದೆ. ಹೀಗೆ, ವಸ್ತುಗಳಿಗೂ ಚಿತ್ತವೃತ್ತಿಗಳಿಗೂ ಸಂಬಂಧವಿರುವುದರಿಂದ ವಸ್ತು ಸಂಗ್ರಹವನ್ನು ಕನಿಷ್ಠವಾಗಿಟ್ಟುಕೊಳ್ಳುವುದು ಚಿತ್ತವೃತ್ತಿಗಳು ಕಡಿಮೆಯಾಗುವುದಕ್ಕೆ ಕಾರಣವಾಗಿ ಯೋಗಕ್ಕೆ ಪೋಷಕವಾಗಿರುತ್ತದೆ. ಈ ಕನಿಷ್ಠ ಪದಾರ್ಥ ಸಂಗ್ರಹವೇ ಅಪರಿಗ್ರಹ ಎನ್ನುವ ಯಮದ ಹಿಂದಿರುವ ತತ್ತ್ವ. ಈ ತತ್ತ್ವವನ್ನೇ ಆಧುನಿಕ ಕಾರ್ಪೊರೇಟ್ ಜಗತ್ತು ವ್ಯಾಪಕವಾಗಿ, ಜಾಗತಿಕ ಮಟ್ಟದಲ್ಲಿ ಅಳವಡಿಸಿಕೊಂಡು ಬಹಳ ದೊಡ್ಡ ಮಟ್ಟದ ಪ್ರಯೋಜನವನ್ನು ಗಳಿಸಿರುವುದು.
ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ 'ಲೀನ್ ಪ್ರಿನ್ಸಿಪಲ್' (Lean principles) ಬಹಳ ವ್ಯಾಪಕವಾಗಿ ರೂಢಿಯಲ್ಲಿದ್ದು ಅನೇಕ ಸಂಸ್ಥೆಗಳು ದೊಡ್ಡ ಗುಣಮಟ್ಟದ ಉತ್ಪನ್ನಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಿ ಜಾಗತಿಕ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನೇ ಉಂಟುಮಾಡಿವೆ. ಇಂತಹ ಸಂಸ್ಥೆಗಳಲ್ಲಿ ಅಗ್ರಗಣ್ಯವಾಗಿರುವುದು ಜಪಾನಿನಟೊಯೋಟ ಸಂಸ್ಥೆ. ಜಪಾನಿನಲ್ಲಿ ಶಿಂಟೋಯಿಸಮ್ ಹಾಗೂ ಜೆನ್ ಬುದ್ಧಿಸಂ ಗಳು ಪ್ರಚಲಿತವಿದ್ದು ಇವು ಭಾರತೀಯ ಸಂಸ್ಕೃತಿಯಿಂದ ಪ್ರಭಾವಿತವಾಗಿವೆ ಎನ್ನುವುದು ಬಹುತೇಕ ಮಾನ್ಯವಾಗಿರುವ ವಿಷಯವಾಗಿದೆ. ಈ ಮತಗಳ ಪ್ರಭಾವದಿಂದ ಜಪಾನ್ ಸಂಸ್ಕೃತಿಯಲ್ಲಿ ಕನಿಷ್ಠ ಪದಾರ್ಥ ಸಂಗ್ರಹ ಎನ್ನುವುದು ಬಹಳ ವ್ಯಾಪಕವಾಗಿ ರೂಢಿಯಲ್ಲಿದೆ. ಆ ಸಂಸ್ಕೃತಿಯಲ್ಲಿ ಯಾವುದೇ ವಸ್ತುವನ್ನು ಅವರು ಉಡಾಫೆಯಿಂದ ನೋಡುವುದಿಲ್ಲ. ಪ್ರತಿಯೊಂದು ಪದಾರ್ಥಕ್ಕೂ ಅದರದರ ಗೌರವವನ್ನು ಕೊಡುತ್ತಾರೆ. ಬೇರೆ ದೇಶದ ಜನರಜೊತೆ ವ್ಯವಹರಿಸಬೇಕಾದರೆ ಅವರ ಈ ವರ್ತನೆ ಹೆಚ್ಚು ಬೆಳಕಿಗೆ ಬರುತ್ತದೆ. ಉದಾಹರಣೆಗೆ ಯಾವುದಾದರೂ use and throw pen ಅನ್ನು ಬೇರೆ ದೇಶದವನೊಬ್ಬ ಪೂರ್ಣವಾಗಿ ಬಳಸದೇ, ಅಸಡ್ಡೆಯಿಂದ ಅಥವಾ ಉಡಾಫೆಯಿಂದ ಎಸೆದರೆ, ಜಪಾನಿನವರು ಬಹಳ ಬೇಸರ ಪಟ್ಟುಕೊಂಡುಬಿಡುತ್ತಾರೆ. ಭಾರತೀಯ ಮಹರ್ಷಿ ಸಂಸ್ಕೃತಿಯ "ಪ್ರತಿಯೊಂದು ಪದಾರ್ಥವೂ ದೈವಪ್ರೀತಿಗಾಗಿ ನಿರ್ಮಿತವಾದದ್ದು" ಎನ್ನುವ ಭಾವನೆ ಶಿಂಟೋಯಿಸಮ್ ನಲ್ಲಿಯೂ ಇದೆ. ಆಧುನಿಕ ಭಾರತೀಯ ಸಮಾಜದಲ್ಲಿ ಬಹುತೇಕ ಮರೆಯಾಗಿರುವ ಈ ಭಾವನೆ ಜಪಾನಿನಲ್ಲಿ ಮಾತ್ರ ಬಹುತೇಕಸಜೀವವಾಗಿದೆ. ಆದುದರಿಂದ ಇಲ್ಲಿ ಪದಾರ್ಥಗಳನ್ನು ನೋಡುವ ನೋಟವೇ ಬೇರೆಯಾಗಿರುತ್ತದೆ. ಅವರುಗಳ ಮನೆಗೆ ಒಂದು ಹೊಸಪದಾರ್ಥ ತರಬೇಕಾದರೆ ಮನೆಯಲ್ಲಿರುವ ಯಾವವಸ್ತು ಹೊರಗೆ ಹೋಗಬೇಕು ಎಂದು ಆಲೋಚಿಸಿ ನಂತರವೇ ಒಂದು ಹೊಸಪದಾರ್ಥವನ್ನು ಖರೀದಿಸುತ್ತಾರೆ. ಹೀಗೆ ಅವರು ಕನಿಷ್ಠಪದಾರ್ಥ ಸಂಗ್ರಹವನ್ನು ಬಹಳ ಶಿಸ್ತಿನಿಂದ ಪಾಲಿಸುತ್ತಾರೆ.
ಜಪಾನ್ ಸಂಸ್ಥೆಗಳು ತಮ್ಮ ಸಂಸ್ಕೃತಿಯನ್ನು ಗೌರವದಿಂದ ಕಾಣುತ್ತಾರೆ ಮತ್ತು ಸಂಸ್ಕೃತಿಯ ಯಾವುದಾದರೂ ರೂಢಿಯು ಸಂಸ್ಥೆಗೆ ಪ್ರಯೋಜನಕಾರಿಯಾಗಿದ್ದರೆ ಅದನ್ನು ಹಿಂಜರಿಯದೇ, ಪಾಶ್ಯಾತ್ಯ ಜಗತ್ತಿನ ಅನುಮೋದನೆಗೆ ಕಾಯದೇ ಅಳವಡಿಸಿಕೊಳ್ಳುತ್ತಾರೆ. ಅಲ್ಲಿನ ಟೊಯೋಟ ಸಂಸ್ಥೆಯು ಈ ಕನಿಷ್ಠ ಪದಾರ್ಥಸಂಗ್ರಹ ಎನ್ನುವ ತತ್ತ್ವವನ್ನು ಲೀನ್ ಪ್ರಿನ್ಸಿಪಲ್ ಗಳಲ್ಲಿ ಒಂದಾದ ಶೂನ್ಯದಾಸ್ತಾನು (zero inventory) ಎನ್ನುವ ಹೆಸರಿನಲ್ಲಿ ಅಳವಡಿಸಿಕೊಂಡಿದೆ. ಉದಾಹರಣೆಗೆ ಕರ್ನಾಟಕದ ಬಿಡದಿಯಲ್ಲಿರುವ ಟೊಯೋಟ ಸಂಸ್ಥೆಯು ಕಾರು ತಯಾರಿಕೆಗೆ ಬೇಕಾದ ಬಿಡಿಭಾಗಗಳನ್ನು ತಂದಿಟ್ಟುಕೊಳ್ಳುವುದೇ ಇಲ್ಲ. ಬಿಡಿಭಾಗಗಳ ಪೂರೈಕೆದಾರರು ನಿಗಧಿತ ಸಮಯಕ್ಕೆ ಮುಂಚೆಯೇ ತಮ್ಮ ಸರಕುವಾಹನಗಳನ್ನು ತಯಾರಿಟ್ಟುಕೊಂಡು ನಿಗಧಿತ ಸಮಯಕ್ಕೆ ಸರಿಯಾಗಿ ಬಿಡಿಭಾಗಗಳನ್ನು ತಯಾರಿಕಾ ಘಟಕಕ್ಕೆ ಒದಗಿಸುತ್ತಾರೆ. ಈ ರೂಢಿಯಿಂದ ಸಂಸ್ಥೆಯು ತಯಾರಿಕೆಯ ವೆಚ್ಚವನ್ನು ಕಡಿಮೆ ಮಾಡಿ, ಗ್ರಾಹಕರಿಗೆ ಕಡಿಮೆ ದರದಲ್ಲಿ ಕಾರುಗಳನ್ನು ಒದಗಿಸುವ ಮೂಲಕ ಮಾರುಕಟ್ಟೆಯ ದೊಡ್ಡ ಪಾಲನ್ನು ತಮ್ಮದಾಗಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಶೂನ್ಯದಾಸ್ತಾನಲ್ಲದೇ, ಇನ್ನಿತರ ಲೀನ್ ರೂಢಿಗಳಿಂದಾಗಿ ತಯಾರಿಕೆಯ ಗುಣಮಟ್ಟವನ್ನು ಹೆಚ್ಚಿಸಿ, ಟೊಯೋಟಸಂಸ್ಥೆಯು ತಾನು ಜಾಗತಿಕ ಮಾರುಕಟ್ಟೆಗಳಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆಯುವುದಲ್ಲದೇ ಕೈಗಾರಿಕಾಡಳಿತ ಚಿಂತನೆಯಲ್ಲಿ ಒಂದು ಕ್ರಾಂತಿಯನ್ನೇ ಉಂಟುಮಾಡಿದ್ದಾರೆ. ವಿವಿಧ ಕೈಗಾರಿಕಾ ಕ್ಷೇತ್ರಗಳು, ಆಡಳಿತಗಳು, ಲೀನ್ ಪ್ರಿನ್ಸಿಪಲ್ ಗಳನ್ನು ಅಳವಡಿಸಿಕೊಳ್ಳುತ್ತವೆ. ಸಂಶೋಧನಾ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಸಂಶೋಧನೆ ಮತ್ತು ಅಧ್ಯಯನ ಮಾಡುತ್ತವೆ. ಒಟ್ಟಿನಲ್ಲಿ ಲೀನ್ ಎನ್ನುವ ಪದ ಇಂದು ಒಂದು ಮಾರುಕಟ್ಟೆ ಮಂತ್ರವಾಗಿದೆ.
ಹೀಗೆ, ಹೊರನೋಟದಲ್ಲಿ ಅಪ್ರಸ್ತುತ ಎನ್ನಿಸಬಹುದಾದ ಒಂದು ಯೋಗಾಂಗವು ಆಳವಾಗಿ ರೂಢಿಸಿಕೊಂಡಲ್ಲಿ ಎಂತಹಾ ಪರಿಣಾಮವನ್ನಾದರೂ ಉಂಟು ಮಾಡಬಹುದೆಂಬುದಕ್ಕೆ ಟೊಯೋಟಸಂಸ್ಥೆಯೇ ನಿದರ್ಶನವಾಗಿದೆ. ಈ ನಿದರ್ಶನದಿಂದ ನಾವೂ ಸಹ ಯೋಗಾಂಗಗಳನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಲಿಕ್ಕೆ ಸ್ಪೂರ್ತಿಯನ್ನು ಪಡೆಯೋಣ.
ಸೂಚನೆ : 20/11/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.