Saturday, October 30, 2021

ಭಾಗವತೋತ್ತಮನಿಗೆ ಸಲ್ಲಿಸುವ ಪೂಜೆ ಬಲಿಪಾಡ್ಯಮಿ (Bhagavathotthamanige Sallisuva Puje Balipadyami)

ಡಾ. ಹಚ್.ಆರ್. ಮೀರಾ
(ಪ್ರತಿಕ್ರಿಯಿಸಿರಿ lekhana@ayvm.in)


ಐದು ದಿನಗಳ ದೀಪಾವಳೀಪರ್ವದ ನಾಲ್ಕನೇ ದಿನವಾದ ಪ್ರಥಮೆಯಂದು ಮಾಡುವ ಬಲೀಂದ್ರಪೂಜೆಯನ್ನು ಬಲಿಪಾಡ್ಯಮಿಯೆಂದು ಆಚರಿಸುತ್ತೇವೆ. ಬಲಿಚಕ್ರವರ್ತಿಯ ಕಥೆಯ ಜೊತೆಗೇ ಮನಸ್ಸಿಗೆ ಬರುವುದು: ಮಹಾವಿಷ್ಣುವಿನ ವಾಮನ ಹಾಗೂ ತ್ರಿವಿಕ್ರಮಾವತಾರಗಳು; ಅದರೊಂದಿಗೆಯೇ ಪತ್ರಿಕೆ-ಸಾಮಾಜಿಕಜಾಲತಾಣಗಳಲ್ಲಿ ಪದೇ ಪದೇ ಚರ್ಚಿಸಲಾಗುವ ವಿಷಯಗಳಿಂದೇಳುವ ಹಲವಾರು ಪ್ರಶ್ನೆಗಳು. ಅವಲ್ಲಿ ಒಂದು – ವಾಮನನಾಗಿ ಬಂದು, ದಾನಕೊಡಲೊಪ್ಪಿದ ಬಲಿಯನ್ನು ಮೋಸದಿಂದ ತುಳಿದು ಪಾತಾಳಕ್ಕೆ ತಳ್ಳಿದ್ದು ತಪ್ಪಲ್ಲವೇ? – ಎಂದು.

ಅಲ್ಲಿಯ ಸನ್ನಿವೇಶ ಹೀಗೆ: ಇಂದ್ರನಿಗೆ ಸೇರಿದ್ದ ರಾಜ್ಯವನ್ನು ಅಧರ್ಮದಿಂದ ತನ್ನದನ್ನಾಗಿ ಮಾಡಿಕೊಂಡಿದ್ದವನು ಬಲಿಚಕ್ರವರ್ತಿ. ಅವನನ್ನು ನಿಗ್ರಹಿಸಲು ಮಹಾವಿಷ್ಣುವೇ ಬರಬೇಕಾಯಿತು. ವಾಮನನಾಗಿ ಬಂದು, ಬಲಿಯಿಂದ ಮೂರು ಹೆಜ್ಜೆಗಳಷ್ಟು ಸ್ಥಳವನ್ನು ದಾನ ಪಡೆದು ತ್ರಿವಿಕ್ರಮನಾದನು. ಭೂಮಿ-ಸ್ವರ್ಗಗಳನ್ನು ತನ್ನ ಎರಡು ಪಾದಗಳಿಂದ ಅಳೆದು, ಮೂರನೆಯ ಹೆಜ್ಜೆಯನ್ನು ಬಲಿಯ ಶಿರಸ್ಸಿನ ಮೇಲಿಟ್ಟು, ಅವನನ್ನು ಪಾತಾಳಕ್ಕೆ ಕಳುಹಿಸಿದನು.

ಇವಿಷ್ಟು ಘಟನಾವಳಿ. ಅದರ ಫಲಿತವೇ ಮೂರು ಅನುಗ್ರಹಗಳು: ಇಂದ್ರನಿಗೆ ತನ್ನ ರಾಜ್ಯ ಮತ್ತೆ ಸಿಕ್ಕಿ, ಅವನ ಮೇಲೆ ಮಹಾನುಗ್ರಹವಾಯಿತು. ಬಲಿಯು ಇಂದ್ರನ ರಾಜ್ಯಕ್ಕಿಂತಲೂ ಹೆಚ್ಚು ಸಮೃದ್ಧವಾದ ಅಧೋರಾಜ್ಯಕ್ಕೆ ಒಡೆಯನಾದನು; ಅಲ್ಲದೆ, ತನ್ನ ಆಸುರಭಾವದ ದಮನವಾಗಿ, ಮಹಾವಿಷ್ಣುವೇ ತನ್ನ ರಾಜ್ಯಕ್ಕೆ ದ್ವಾರಪಾಲಕನಾದುದೂ ಬಲಿಗೆ ಮಹತ್ತರವಾದ ಅನುಗ್ರಹವಾಯಿತು. ತ್ರಿವಿಕ್ರಮರೂಪದಲ್ಲಿ ಎತ್ತಿದ ಪಾದದಿಂದ ಲೋಕಪಾವನಿಯಾದ ಗಂಗೆಯು ಉದ್ಭವಿಸಿ, ಲೋಕಕ್ಕೆಲ್ಲ ಮಹತ್ತಮವಾದ ಅನುಗ್ರಹವಾಯಿತು.

ಹಿಂದೆ ಬಂದ ಪ್ರಶ್ನೆಗೆ ಲೋಕನೀತಿಯ ದೃಷ್ಟಿಯಿಂದ ಫಲಿತದ ವಿವೇಚನೆಯ ವಿವರಣೆ ಇದಾಯಿತು. ಈ ಕಥೆಯನ್ನು ತಾತ್ತ್ವಿಕ ನಿಟ್ಟಿನಿಂದ ನೋಡಿದರೆ ಮತ್ತೂ ಆಳವಾದ ನೋಟ ದೊರೆತಂತಾಗುತ್ತದೆ.

ಯಾಚಕನಾಗಿ ಬಂದು ತನ್ನನ್ನು ಸಣ್ಣ ದಾನವೊಂದನ್ನು ಕೇಳಿದಾಗ, ಬಂದಿರುವವನು ವಿಷ್ಣುವೆಂದು ತಿಳಿದೂ ಬಲಿಯು ದಾನಕೊಡಲೊಪ್ಪಿದನು. ಏಕೆ? ಬಲಿಯ ಮನಸ್ಸಿನಲ್ಲಿ ವಾಮನನ ಪಾದಗಳ ಅಳತೆ ತನ್ನ ಪಾದಗಳ ಅಳತೆಯಂತೆಯೇ ಎಂದಿತ್ತು. ಆಸುರೀಶಕ್ತಿಗಳಿಗಾಗಲೇ ಸ್ಥಾನವನ್ನು ಕೊಟ್ಟಿರುವಾಗ ವಿಷ್ಣುವು ಸ್ವಲ್ಪ ಜಾಗ ಕೇಳಿದರೆ ಕೊಡಲಾರೆನೇ? – ಎಂದೆಣಿಸಿ ದಾನಕೊಟ್ಟನು. ಆಗ ವಾಮನಮೂರ್ತಿಯು ತ್ರಿವಿಕ್ರಮನಾಗಿ ಭೂರ್ಭುವಸ್ಸುವರ್ಲೋಕಗಳನ್ನು ಅಳೆದು, ಬಲಿಯ ಶಿರಸ್ಸಿನ ಮೇಲೆ ಪಾದವಿಟ್ಟನು. ಶ್ರೀರಂಗಮಹಾಗುರುಗಳು ಯೋಗದೃಷ್ಟಿಯಿಂದ ಹೇಳಿದಂತೆ – ಮೂಲಾಧಾರ ಮತ್ತು ಕೆಳಗಿರಬೇಕಾದ ಆಸುರೀಶಕ್ತಿಗಳು ಹೃದಯಪರ್ಯಂತ ದೇಹವನ್ನು ಆಕ್ರಮಿಸಿ ನಿಂತಿವೆ. ಹೃದಯವೇ ಬಲಿಯ ಯಜ್ಞವೇದಿ. ಬಲಿಯು ಕೊಟ್ಟ ಜಾಗವೇ ಹೃನ್ಮಧ್ಯದಲ್ಲಿ ಭಗವಂತನ ಶಕ್ತಿಗಿತ್ತಿರುವ ಸ್ವಲ್ಪ ಜಾಗ. ಹಾಗೆ ಕೊಟ್ಟದ್ದೇ ತಡ, ಭಗವಚ್ಛಕ್ತಿಯು ಅನತಿಕಾಲದಲ್ಲಿ ಸರ್ವಕ್ಷೇತ್ರವನ್ನೂ ವ್ಯಾಪಿಸಿಕೊಂಡಿತು. ಆಸುರೀಶಕ್ತಿಗಳು ತಮ್ಮ ಸ್ಥಾನವಾದ ಮೂಲಾಧಾರಕ್ಕೆ ಹಿಂದಿರುಗಿದವು. ಆಸುರದೇಹ ಹೊಂದಿದ್ದರೂ ಆಸುರಭಾವಮುಕ್ತನಾದ ಬಲಿಗೆ  ಭಗವದ್ದರ್ಶನವಾಯಿತು.

ಈ ತತ್ತ್ವದೃಷ್ಟಿಯಿದ್ದರೂ ಬರುವ ಮತ್ತೊಂದು ಪ್ರಶ್ನೆ - ಭಗವಂತನನ್ನೇ ನೇರವಾಗಿ ಪೂಜಿಸಲು ಸಾಧ್ಯವಿರುವಾಗ, ಅಸುರನಾದ ಬಲಿಗೆ ಪೂಜೆ ಮಾಡಬೇಕೆ? - ಎಂಬುದು.

ಅದಕ್ಕೆ ಸಮಾಧಾನವಿದು: "ಭಾಗವತ" ಎಂದರೆ "ಭಗವದ್ಭಾವವನ್ನು ಹೊತ್ತವನು". ಭಗವಂತನ ಭಕ್ತಿಯಲ್ಲಿ ತಾದಾತ್ಮ್ಯ ಹೊಂದಿರುವವರ ವರ್ಣಾಶ್ರಮ-ಜಾತಿಕುಲಾದಿಗಳು ಗಣನೆಗೆ ಬಾರವು. ಹಾಗಾಗಿ ಬಲಿಯು ಆಸುರದೇಹಧರ್ಮವುಳ್ಳವನಾದರೂ ಭಾಗವತೋತ್ತಮನಾದ್ದರಿಂದ ಪೂಜಾರ್ಹನೇ ಸರಿ. ಅವನನ್ನು ನಿಕೃಷ್ಟವಾಗಿ ಕಂಡರೆ ಅದು ಭಾಗವತಾಪಚಾರವಾಗಿ, ಭಗವದಪಚಾರವೇ ಮಾಡಿದಂತೆ.

ಹಿಂದೆ ತನ್ನ ರಾಜ್ಯವಾಗಿದ್ದ ಭೂಮಿಗೆ ಬಲಿಪಾಡ್ಯಮಿಯಂದು ಹಿಂದಿರುಗಿ, ನಾವು ಸಲ್ಲಿಸುವ ಪೂಜೆಯನ್ನು ಬಲಿಯು ಸ್ವೀಕರಿಸುತ್ತಾನೆ. ಕೆಲ ಸಂಪ್ರದಾಯಗಳಲ್ಲಿ ಕಲಶ-ವಿಗ್ರಹಗಳಿಗೆ ಪೂಜೆಯಾದರೆ, ಕೆಲವಲ್ಲಿ ಸಗಣಿಯಿಂದ ಕೋಟೆಯನ್ನು ಕಟ್ಟಿ, ಗೋಪುರದಾಕಾರದ ಸಗಣಿಯನ್ನಿಟ್ಟು, ಅದನ್ನು ಬಲೀಂದ್ರನೆಂದು ಪೂಜಿಸಲಾಗುತ್ತದೆ. ಇಲ್ಲಿ ಮತ್ತೊಂದು ಪ್ರಶ್ನೆ: ಸಗಣಿಯಂತಹ ವಸ್ತುವಿನಿಂದ ಮಾಡಿದ ಬಿಂಬವನ್ನು ಬಲಿಯ ಪ್ರತಿನಿಧಿಯೆಂದು ಕಾಣುವುದು ಅಪಚಾರವಾಗುವುದಿಲ್ಲವೇ? ಅದು ಖಂಡಿತ ಅಪಚಾರವಲ್ಲ. ಏಕೆಂದರೆ ಸಗಣಿಯು ಅಪವಿತ್ರವಲ್ಲ: ಅದು "ಗೋಮಯ", ಪವಿತ್ರವಾದ ಪಂಚಗವ್ಯದಲ್ಲಿ ಒಂದು ಪದಾರ್ಥ. ಹಾಗಾಗಿ ಬಲೀಂದ್ರನ ಆವಾಹನೆಯನ್ನು ನಿಕೃಷ್ಟವಾದ ಪದಾರ್ಥದಲ್ಲಿ ಮಾಡಿದಂತಾಗುವುದಿಲ್ಲ. ಹೀಗಾಗಿ ಉದ್ದೇಶವೂ, ಕ್ರಮವೂ ಯುಕ್ತವೇ ಆಗಿವೆ.

ಸಂಪ್ರದಾಯಬದ್ಧವಾಗಿ ಬಲೀಂದ್ರನ ಪೂಜೆಯನ್ನು ಭಕ್ತಿಯಿಂದ ಮಾಡಿ, ಆ ಭಾಗವತೋತ್ತಮನ ಅನುಗ್ರಹದಿಂದ ಈ ಪರ್ವದ ತತ್ತ್ವಾರ್ಥವು ನಮ್ಮ ಜೀವನಕ್ಕೆ ಪಸರಿಸುವಂತೆ ಮಾಡಿಕೊಳ್ಳೋಣ.

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 30/10/2021 ರಂದು ಪ್ರಕಟವಾಗಿದೆ.