Sunday, October 31, 2021

ಶ್ರೀರಾಮನ ಗುಣಗಳು - 29 ಅನಸೂಯಕ - ಶ್ರೀರಾಮ (Sriramana Gunagalu - 29 Anasuyaka Shrirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)



  


ಗೌತಮಧರ್ಮಸೂತ್ರದಲ್ಲಿ ಹೇಳಲಾದ ಎಂಟು ಬಗೆಯ ಆತ್ಮಗುಣಗಳಲ್ಲಿ 'ಅನಸೂಯಾ' ಎಂಬುದು ಒಂದು. ಒಬ್ಬ ಪರಿಪೂರ್ಣ ವ್ಯಕ್ತಿ ಆಗಬೇಕಾದರೆ ಆತನಲ್ಲಿ ಈ ಆತ್ಮಗುಣ ಇದ್ದಾಗ ಮಾತ್ರ ಸಾಧ್ಯ. ಶ್ರೀರಾಮನು ಇಂದಿಗೂ ಒಬ್ಬ ಮಾನ್ಯನಾದ ಮಾನವರೂಪ. ಇದಕ್ಕೆ ಕಾರಣ, ಅವನಲ್ಲಿದ್ದ ವಿಶೇಷವಾದ ಆತ್ಮಗುಣವೇ ಅನಸೂಯಾ. ಭರತನು ರಾಜನಾಗುತ್ತಾನೆಂದು ರಾಮನು ಸ್ವಲ್ಪವೂ ಅಸೂಯೆ ಪಡಲಿಲ್ಲ. ಈ ಗುಣವನ್ನು ಹೊಂದಿರುವುದರಿಂದ ಶ್ರೀರಾಮನನ್ನು 'ಅನಸೂಯಕ ಶ್ರೀರಾಮ' ಎಂದು ಕರೆಯುತ್ತೇವೆ. 


'ನ ಗುಣಾನ್ ಗುಣಿನೋ ಹಂತಿ ಸ್ತೌತಿ ಮಂದಗುಣಾನಪಿ | ನಾನ್ಯದೋಷೇಷು ರಮತೇ ಸಾನಸೂಯಾ ಪ್ರಕೀರ್ತಿತಾ ||' (ಗುಣಶಾಲಿಗಳನ್ನಾಗಲಿ, ಅವರಲ್ಲಿರುವ ಸದ್ಗುಣಗಳನ್ನಾಗಲಿ, ನಾಶ ಮಾಡಲು ಯತ್ನಿಸದಿರುವುದು, ಇತರರಲ್ಲಿ ಅಲ್ಪಪ್ರಮಾಣದಲ್ಲಿ ಒಳ್ಳೆಯ ಗುಣವಿದ್ದರೂ ಅದನ್ನು ಪ್ರಶಂಸಿಸುವುದು, ಇತರರ ದೋಷಗಳಲ್ಲಿ ರಮಿಸದಿರುವುದು 'ಅನಸೂಯಾ' ಎಂದು ಹೇಳಲ್ಪಡುತ್ತದೆ.)'ಅನಸೂಯಾ' ಎಂಬುದು 'ಅಸೂಯಾ' ಎಂಬ ಗುಣದ ವಿರುದ್ಧಾರ್ಥಕ ಶಬ್ದ. ಮತ್ತೊಬ್ಬರಲ್ಲಿರುವ ಒಳ್ಳೆಯ ಸಂಗತಿಗಳನ್ನು ನೋಡಿ ಸಹಿಸಿಕೊಳ್ಳಲಾಗದ ಸ್ಥಿತಿ. ಅಸೂಯಾಪರನು ತಾನು ಒಂದು ಕಾರ್ಯವನ್ನು ಮಾಡಲು ಹೊರಟು ಅದರಲ್ಲಿ ಸಫಲನಾಗದೇ, ಮತ್ತೊಬ್ಬನು ಸಫಲನಾದರೆ ಅದನ್ನು ಸಹಿಸಿಕೊಳ್ಳುವುದಿಲ್ಲ. ಬೇರೆಯವರ ಏಳಿಗೆಯನ್ನು ಸಹಿಸಲಾರನು. ಈ ಗುಣವನ್ನೇ ಈರ್ಷ್ಯಾ, ಹೊಟ್ಟೆಕಿಚ್ಚು ಇತ್ಯಾದಿ ಪದಗಳಿಂದ ಹೇಳುತ್ತೇವೆ. ಗುಣವಂತನಲ್ಲಿರುವ ಉತ್ತಮಸ್ವಭಾವವನ್ನು ಹೇಳಲು ಸ್ವಲ್ಪವೂ ಹಿಂಜರಿಕೆ ಇಲ್ಲದೆ ಮುಕ್ತವಾಗಿ ಉತ್ಕೀರ್ತನಮಾಡುವುದು, ಬೇರೆಯವರಲ್ಲಿರುವ ಪರಮಾಣುಗುಣವನ್ನು ಪರ್ವತೋಪಾದಿಯಾಲ್ಲಿ ಎತ್ತಿ ಸಾರುವುದು, ಬೇರೆಯವರ ದೋಷವನ್ನು ಹೇಳುವುದರಲ್ಲೇ ತೃಪ್ತಿಯನ್ನು ಪಡದಿರುವುದು, ಇವೆಲ್ಲವೂ ಅನಸೂಯಾ ಎಂಬುದಕ್ಕೆ ಸಾಕ್ಷಿ. ಇಂತಹ ಮಾನಸಿಕತೆ ಬರಲು ಹೇಗೆ ಸಾಧ್ಯ? 


ಯಾರು ತನ್ನ ಜೀವನದ ಸರ್ವೋತ್ಕೃಷ್ಟವಾದ ಸ್ತರವನ್ನು ತಲುಪಿರುತ್ತಾನೋ ಅಥವಾ ಅತ್ತ ಸಾಗಬೇಕೆಂಬ ಹಂಬಲ ಉಳ್ಳವನಾಗುತ್ತಾನೋ, ಅಂತಹವನು ಈರ್ಷ್ಯಾ ಅಸೂಯಾದಿ ದುರ್ಗುಣಗಳ ಸಹವಾಸಕ್ಕೆ ಬೀಳನು. ಅಸೂಯಾ ಗುಣವು ನಮ್ಮನ್ನೇ ಸುಡುತ್ತದೆ. ಅದಕ್ಕೆ ಕನ್ನಡದಲ್ಲಿ 'ಹೊಟ್ಟೆಕಿಚ್ಚು' ಎನ್ನುತ್ತೇವೆ. ಯಾರ ಹೊಟ್ಟೆಯಲ್ಲಿ ಈ ಬಗೆಯ ಕಿಚ್ಚು ಇರುವುದೋ, ಅದು ಅವರನ್ನೇ ಮೊದಲು ಬಲಿತೆಗೆದುಕೊಳ್ಳುವುದು ಸಹಜ ತಾನೆ! ಇದು ಆತ್ಮಹಾನಿಗೆ ಕಾರಣ. ಆದ್ದರಿಂದ ಇಂತಹ ದುಷ್ಟಸ್ವಭಾವಗಳಿಂದ ದೂರವಿರಬೇಕೆಂಬುದನ್ನು ಶ್ರೀರಾಮನು ತನ್ನ ಜೀವನದಲ್ಲಿ ತೋರಿಸಿಕೊಟ್ಟಿದ್ದಾನೆ. 


ಶ್ರೀಮದ್ರಾಮಾಯಣದಲ್ಲಿ ಶ್ರೀರಾಮನು ಪರೋನ್ನತಿಯನ್ನು ಸಹಿಸದಿರುವ ಯಾವ ಸಂದರ್ಭವನ್ನೂ ನೋಡಲಾರೆವು. ಅಷ್ಟೇ ಅಲ್ಲ, ತಾನು ಕಷ್ಟವನ್ನು ಸಹಿಸಿಕೊಂಡು ಬೇರೆಯವರ ಸುಖಕ್ಕೆ ಕಾರಣನಾದ ಅನೇಕ ಘಟನೆಗಳನ್ನು ನೋಡಬಹುದು. ಕೈಕೇಯಿಯ ಆಸೆಯನ್ನು ಈಡೇರಿಸಲು ತಾನು ಅತಿಭಯಾನಕವಾದ ಅರಣ್ಯದಲ್ಲಿ ವಾಸಮಾಡಲು ಮುಂದಾದ. ಅರಣ್ಯದ ಕಷ್ಟ ಇನ್ನೊಬ್ಬರಿಗೆ ಯಾಕೆ ಬೇಕೆಂದು ಸೀತಾಮಾತೆಯನ್ನು ಅರಮನೆಯಲ್ಲೇ ಬಿಟ್ಟು ಹೋಗುವ ಸೂಚನೆಯನ್ನೂ ನೀಡಿದ. ಶ್ರೀರಾಮನ ಅವತಾರದ ಉದ್ದೇಶದ ಹಿನ್ನೆಲೆಯೇ ದುಷ್ಟಶಿಕ್ಷಣವಲ್ಲವೇ! ಅಂದರೆ ಅರಮನೆಯಲ್ಲೇ ತಾನು ಮಾತ್ರ ಸುಖದಿಂದ ಇದ್ದರೆ ದುಷ್ಟರ ನಿಗ್ರಹ ಸಾಧ್ಯವೇ? ರಣಾಂಗಣಕ್ಕೆ ತಾನೂ ತೆರಳಿ, ವಾಲಿ, ರಾವಣ ಮೊದಲಾದ ದುಷ್ಟರ ಜೊತೆ ಯುದ್ಧ ಮಾಡಿ ಸಜ್ಜನರ ಶಾಂತಿಗೆ ಅವಕಾಶ ಮಾಡಿಕೊಟ್ಟ. ಇವೆಲ್ಲವೂ ಸಾಧ್ಯವಾಗಬೇಕಾದರೆ ಆ ವ್ಯಕ್ತಿಯಲ್ಲಿ ಅನಸೂಯಾ ರೂಪವಾದ ಆತ್ಮಗುಣ ಇದ್ದರೆ ಮಾತ್ರ ಸಾಧ್ಯ.   

ಸೂಚನೆ : 31/10/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.