ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಯೋಗತಾರಾವಳೀ (ಶ್ಲೋಕ ೨೭)
ಪ್ರಕಾಶಮಾನೇ
ಜಗತ್ತು ಮಿಥ್ಯೆ - ಎಂಬುದಾಗಿ ಹೇಳುವರಲ್ಲವೆ? ಎಷ್ಟೋ ವೇಳೆ ಅದಕ್ಕೆ ಕಾರಣಗಳನ್ನು ಎಷ್ಟು ಬಾರಿ ಕೇಳಿದರೂ ಅದೇಕೋ ಪೂರ್ತಿಯಾಗಿ ತೃಪ್ತಿಯಾದಂತಿರುವುದಿಲ್ಲ. "ಜಗತ್ತು ಮಿಥ್ಯೆಯೇ ಇರಬಹುದೋ ಏನೋ? ಆದರೂ ಒಪ್ಪುವುದೂ ಸುಲಭವಲ್ಲ; ಮತ್ತೊಬ್ಬರಿಗೆ ಒಪ್ಪಿಸುವುದಂತೂ ಮತ್ತೂ ಕಷ್ಟವೇ" ಎಂದೆಲ್ಲ ತೋರುತ್ತಿರುತ್ತದೆ. ಆದರೆ ಈ ಶ್ಲೋಕದಲ್ಲಿ ಅದನ್ನು ಸುಭಗವಾಗಿ ನಿರೂಪಿಸಿದೆ.
ಕಾಣುವುದೆಂದರೆ ಹೇಗೆ?
ಯಾವುದಾದರೂ ವಸ್ತುವನ್ನು ನಾವು ಕಾಣಬಲ್ಲೆವು ಎಂದರೆ ಏನರ್ಥ? ಆರು ಸಂನಿವೇಶಗಳಿವೆಯೆಂದರ್ಥ.
ಮೊದಲನೆಯದಾಗಿ, ವಸ್ತುವೊಂದು ಇರಬೇಕು. ಎರಡನೆಯದಾಗಿ, ಅದು ಕತ್ತಲಲ್ಲಿರಬಾರದು. ಮೂರನೆಯದಾಗಿ, ಅದರ ಮೇಲೆ ಸಾಕಷ್ಟು ಬೆಳಕು ಬೀಳಬೇಕು. ನಾಲ್ಕನೆಯದಾಗಿ, ಅದರ ಮೇಲೆ ಬಿದ್ದ ಬೆಳಕು ಪ್ರತಿಫಲಿತವಾಗಿ ನಮ್ಮ ಕಣ್ಣಿಗೆ ಬೀಳಬೇಕು. ಐದನೆಯದಾಗಿ, ನಮ್ಮ ಕಣ್ಣು ಆರೋಗ್ಯವಾಗಿರಬೇಕು! ಆರನೆಯದಾಗಿ, ನೋಡುವವರಿಗೆ ಅರಿವಿರಬೇಕು.
"ಆದರಿದೋ ನೋಡಿ ವಿಚಿತ್ರವನ್ನು!" ಎಂದು ಈ ಶ್ಲೋಕವು 'ಅಹೋ' (ಆಶ್ಚರ್ಯ)! ಎನ್ನುತ್ತಾ ತೋರಿಸುತ್ತದೆ.
ಈ ಜಗತ್ತು ಎಷ್ಟು ವಿಶಾಲವಾದುದು! ಅಲ್ಲಿ ಏನೆಲ್ಲ ಇಲ್ಲ!? ಕಗ್ಗತ್ತಲಾದಾಗ ಏನೂ ಕಾಣದಾದರೂ ಸೂರ್ಯೋದಯವಾಗುತ್ತಲೇ ಕತ್ತಲು ಮರೆ! ಸೂರ್ಯನು ಮೇಲೆ ಬಂದನೆಂದರೆ ಕತ್ತಲೆಯೆತ್ತಲೋ! ಮೋಡದ ಮರೆಯೆಂಬುದೇನೂ ಇಲ್ಲದೆ ಸೂರ್ಯನು ಪ್ರಕಾಶದಿಂದ ಕೂಡಿ ಬೆಳಗುತ್ತಿದ್ದಾನೆಂದರೆ, ಸೂರ್ಯನ ಕಿರಣಗಳು ತಡೆಯಿಲ್ಲದೆ ಬೀಳುತ್ತಿವೆಯೆಂದರೆ, ಆಗ ಕಾಣಲಾಗದ ಪದಾರ್ಥವೆಂಬುದೊಂದಿರಲು ಸಾಧ್ಯವೇ? ವಸ್ತುವಿನ ಮೇಲೆ ಸೂರ್ಯನ ಬೆಳಕೇ ಬಿದ್ದಿತೆಂದರೆ, ಪದಾರ್ಥವು ಅತ್ಯಂತ-ಸ್ಫುಟವಾಗಿ ತೋರುವುದೇ ಸರಿ!
ಆ ಸೂರ್ಯ ಬೆಳಗಿದಾಗ!
ಆದರಿದೋ ನೋಡಿ, ಯೋಗದ ಉನ್ನತೋನ್ನತ-ಸ್ಥಿತಿಯಲ್ಲುಂಟಾಗುವ ಸಂನಿವೇಶವನ್ನು!: ಪರಮಾತ್ಮನೇ ಸೂರ್ಯ. ಅತನೋ ಜಾಜ್ವಲ್ಯಮಾನನಾಗಿ ಪ್ರಕಾಶಿಸುತ್ತಿದ್ದಾನೆ. ಅವಿದ್ಯೆಯೆಂಬುದೇ ಕತ್ತಲು. ಸೂರ್ಯೋದಯವಾಗುತ್ತಲೇ ಕತ್ತಲೆಯೆಂಬುದೆಲ್ಲಿ ಹೋಯಿತೋ ಗೊತ್ತಾಗದು! ಇನ್ನು ಸೂರ್ಯನು ಜ್ವಲಿಸುತ್ತಿರುವಾಗ ಕತ್ತಲೆಯು ಸಂಪೂರ್ಣವಾಗಿಯೇ ನಾಶಹೊಂದುತ್ತದೆ. ಹಾಗೆಯೇ ಪರಮಾತ್ಮ-ಭಾನುವು ಬೆಳಗುತ್ತಿರಲು. ಅವಿದ್ಯೆಯೆಂಬ ತಿಮಿರವು ಸಮಸ್ತವಾಗಿಯೇ ನಾಶವಾಗಿದೆ!
ಇದಲ್ಲದೆ, ಯೋಗದ ನಿರ್ವಿಕಲ್ಪ-ಸಮಾಧಿಯ ಸ್ಥಿತಿಯವರೆಗೂ ಏರಿರುವವರು ಜ್ಞಾನಿಗಳೇ ಸರಿ. ಅಂತಹವರನ್ನು 'ಬುಧ'ರೆಂದೇ ಗೌರವಿಸಲಾಗುವುದು. ಯೋಗಾಭ್ಯಾಸವನ್ನು ಮಾಡಿದವರ ದೃಷ್ಟಿಯಲ್ಲಿ ಒಂದು ನಿರ್ಮಲತೆಯಿರುವುದು. ಅಂದರೆ ಅವರ ಕಣ್ಣು ಆರೋಗ್ಯವಾಗಿರುವುದೆಂದೂ ತಿಳಿಯುವುದು. ಅವರ ತಿಳಿಯಾದ, ಎಲ್ಲವನ್ನೂ ತಿಳಿಯುವ ದೃಷ್ಟಿಯು ನಿರ್ಮಲವೆಂದೂ ಸಿದ್ಧವಾಗುವುದು. ಇಂತಹ ಶುದ್ಧ-ದೃಷ್ಟಿಯುಳ್ಳವರ ಅನುಭವವನ್ನು ಈ ಶ್ಲೋಕವು ಹೇಳುತ್ತಿದೆ.
ಇದು ಅನುಭವದ ಮಾತು!
ಅದೇನೆಂದರೆ, "ಅವರು ಜಗತ್ತನ್ನೇ ಕಾಣರು!" - ಎಂದು. ಇಷ್ಟು ದೊಡ್ಡ ಜಗತ್ತನ್ನೂ ಕಾಣರೇ? - ಎಂದು ಕೇಳಬಹುದು. ಹೋಗಲಿ, ಇಡೀ ಜಗತ್ತಲ್ಲದಿದ್ದರೂ ಜಗತ್ತಿನ ಸ್ವಲ್ಪ-ಭಾಗವನ್ನಾದರೂ, ಅವರ ಎದುರಿಗಿರುವ ಭಾಗವನ್ನಾದರೂ, ಕಾಣುವರೇನು? - ಎಂದೂ ಕೇಳಬಹುದು. "ಕಿಂಚಿತ್ತೂ ಕಾಣದು, ಈ ಜಗತ್ತು!" -ಎಂದೇ ಉತ್ತರ ಬರುವುದು!
ಯಾವುದು ಕಾಣದೋ ಅದನ್ನು ಇಲ್ಲವೆನ್ನುವೆವು. "ಇಲ್ಲದ್ದೇ ಮಿಥ್ಯೆ"ಯೆನ್ನುವುದಾದರೆ ಇದೋ ಇಲ್ಲಿ ಜಗತ್ತೇ ತೋರುತ್ತಿಲ್ಲವೆಂಬ ಕಾರಣದಿಂದ ಜಗತ್ತನ್ನೇ ಮಿಥ್ಯೆಯೆನ್ನಬಹುದಲ್ಲವೆ?
ಶ್ಲೋಕದ ವಾಸ್ತವವಾದ ಅರ್ಥವಿದು: ಜಾಗ್ರತ್ ಮೊದಲಾದ ಮೂರೂ ಅವಸ್ಥೆಗಳನ್ನು ಮೀರಿದ ಮೇಲೆ, ದೊರೆಯುವುದು ನಾಲ್ಕನೆಯ ಅವಸ್ಥೆ. ಆ ಸ್ಥಿತಿಯಲ್ಲಿ ಒಂದು ವಿಶೇಷವಾದ ಅನುಭವವಾಗುತ್ತದೆ. ತುರೀಯ, ತುರ್ಯ, ಅಥವಾ ಸಮಾಧಿಯೆಂಬ ಆ ಸ್ಥಿತಿಯಲ್ಲಿ ಭಗವಂತನ ಸಾಕ್ಷಾತ್ಕಾರವೇ ಆಗುತ್ತದೆ.
ಭಗವಂತನು ಸೂರ್ಯನಂತೆ. 'ಅಂತೆ'ಯೇನು? ಆತನನ್ನು "ಕೋಟಿ-ಸೂರ್ಯ-ಸಮ-ಪ್ರಭ!" - ಎಂದು ಕೂಡ ಹೇಳುವರಲ್ಲವೆ?
ಅದಿದ್ದಾಗ ಇದಿಲ್ಲ!
ಅವಿದ್ಯೆಯಿರುವ ತನಕ ಆತ್ಮನ ಅನುಭವವಾಗದು ಅವಿದ್ಯಾಂಧಕಾರವು ಸಂಪೂರ್ಣವಾಗಿ ತೊಲಗುವುದು ಪರಮಾತ್ಮ-ಸೂರ್ಯನ ಉದಯವಾಗುವ ಸಮಯಕ್ಕೇ. ಪರಮಾತ್ಮನ ಅನುಭವವಾಗುವಾಗ ಈ ಜಗತ್ತು ಎಲ್ಲಿ ಮತ್ತು ಹೇಗೆ ಗೋಚರವಾದೀತು?
ತಾತ್ಪರ್ಯವೆಂದರೆ, ಯೋಗದ ಪರಮೋನ್ನತ-ಸ್ಥಿತಿಯಲ್ಲಿ, ಪರಮಾತ್ಮನ ಅನುಭವವಾಗುತ್ತಿರುವಾಗ, ಜಗತ್ತು ಕಾಣದು. ಕಾಣದ್ದನ್ನು ಮಿಥ್ಯೆಯೆಂದರೆ ಯಾರು ತಾನೆ ಒಪ್ಪರು?
ಪ್ರಕಾಶಮಾನೇ ಪರಮಾತ್ಮ-ಭಾನೌ
ನಶ್ಯತ್ಯವಿದ್ಯಾ-ತಿಮಿರೇ ಸಮಸ್ತೇ |
ಅಹೋ ! ಬುಧಾ ನಿರ್ಮಲ-ದೃಷ್ಟಯೋಽಪಿ
ಕಿಂಚಿನ್ನ ಪಶ್ಯಂತಿ ಜಗತ್ ಸಮಗ್ರಮ್ !! ||೨೭||
ಸೂಚನೆ : 16/10/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.