Saturday, September 25, 2021

ಯೋಗತಾರಾವಳಿ - 22 ಸಹಜಾಮನಸ್ಕದ ಹಂಬಲಿಕೆ (Yogataravali - 22 Sahajamanaskada Hambalike)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಯೋಗತಾರಾವಳೀ (ಶ್ಲೋಕ ೨೩)


ನಿವರ್ತಯಂತೀಂ

ಎಂತಹ ಉತ್ಕೃಷ್ಟವಾದ ಸ್ಥಿತಿ, ಈ ಸಹಜಾಮನಸ್ಕ-ಭಾವವೆಂಬುದು! ಏಕೆಂದರೆ ಈ ಸ್ಥಿತಿಯನ್ನು ತಲುಪುವುದೆಂದರೆ ಸಮಸ್ತವಾದ ಇಂದ್ರಿಯಗಳನ್ನೂ ಹಿಂದಿರುಗಿಸುವುದು ಎಂದೇ. ಏನು ಹಾಗೆಂದರೆ? ಇಂದ್ರಿಯಗಳೆಲ್ಲವೂ ಸದಾ ಬಹಿರ್ಮುಖಗಳೇ ಆಗಿರುತ್ತವೆ. ಅರ್ಥಾತ್ ಹೊರಗಿರುವ ವಸ್ತುಗಳನ್ನು ಗ್ರಹಿಸತಕ್ಕವುಗಳೇ ಆಗಿರುತ್ತವೆ. ನಾವು ಎಚ್ಚರವಾಗಿರುವಷ್ಟು ಹೊತ್ತೂ ಇಂದ್ರಿಯಗಳೆಲ್ಲ ಎಡೆಬಿಡದೆ ದುಡಿಯುತ್ತಿರುವುವು. ನಮ್ಮ ನಿದ್ರೆಯ ಸಮಯವನ್ನು ಬಿಟ್ಟರೆ ಉಳಿದ ಕಾಲದಲ್ಲಿ ಅವುಗಳಿಗೆ ವಿಶ್ರಾಂತಿಯೆಂಬುದೇ ಇರದು. ಏಕೆ ಹೀಗೆ? ಏಕೆಂದರೆ ಅವುಗಳ ಸೃಷ್ಟಿಯಾಗುವಾಗಲೇ ಆ ಬಗೆಯ ಪ್ರವೃತ್ತಿಯಿರುವಂತೆಯೇ ಅವು ಸೃಷ್ಟವಾಗಿವೆ. ಹಾಗೆಂದು ಉಪನಿಷತ್ತೇ ಹೇಳುತ್ತದೆ.

ಸೃಷ್ಟಿಯಾದದ್ದೇ ಹಾಗೆ!

ಕುಂಬಾರನು ಮಡಕೆ ಮಾಡುವಾಗ ಹಸಿಮಣ್ಣಿನ ಒಂದು ಮುದ್ದೆಗೆ ಒಂದು ವಿಶಿಷ್ಟವಾದ ಆಕಾರವನ್ನು ಕೊಡುತ್ತಾನೆ. ಮಡಕೆಯನ್ನು ಮಾಡುವಾಗಲೇ ಕುಂಬಾರನೇನಾದರೂ ಒಂದಿಷ್ಟು ರಂಧ್ರಗಳನ್ನೂ ಮಾಡಬೇಕೆಂದುಕೊಂಡನೆನ್ನಿ. ಎಷ್ಟು? ಏಳು. ಮಡಕೆಯಿನ್ನೂ ಹಸಿಹಸಿಯಾಗಿರುವಾಗಲೇ ಒಂದು ವಿಶಿಷ್ಟವಾದ ರೀತಿಯಲ್ಲಿ ಏಳು ರಂಧ್ರಗಳನ್ನು ಮಾಡಿದರೆ ಹೇಗಿರಬಹುದು? ಯಾವ ರೀತಿ? ನಮ್ಮ ಮುಖವು ಹೇಗೋ ಹಾಗೆ: ಎರಡು ಕಣ್ಣುಗಳು, ಎರಡು ಹೊಳ್ಳೆಗಳು, ಎರಡು ಕಿವಿಗಳು, ಒಂದು ಬಾಯಿ.

ಬೋರಲಾದ ಈ ಮಡಕೆಯ ಕಂಠವೇ ನಮ್ಮ ಕಂಠವೂ. ನಿದ್ರೆಯಿಂದ ಏಳುತ್ತಲೇ ಏಳು ರಂಧ್ರಗಳೂ ಕಾರ್ಯೋನ್ಮುಖವಾಗುವುವು. ಸರ್ವೇಂದ್ರಿಯಗಳೂ ನೆಲೆಸಿರುವ ತಾಣವೇ ನಮ್ಮ ಶಿರಸ್ಸು. ಒಳಗಿನಿಂದ ಹೊರಕ್ಕೆ ಕೊರೆದ ರಂಧ್ರಗಳಂತೆಯೇ ಇವೆ, ನಮ್ಮ ಇಂದ್ರಿಯಗಳೆಲ್ಲವೂ. ಎಂದೇ ಕೆಲಸವೆಲ್ಲವೂ ಹೊರಜಗತ್ತಿನೊಂದಿಗೇ.

ಹಿನ್ನೋಟವೂ ಸಾಧ್ಯ

ಎಚ್ಚರವಾಗಿರುವವನು ಸುಮ್ಮನೆ ಕಣ್ಮುಚ್ಚಿ ಕುಳಿತಿರನು. "ಕಣ್ಣು ಮುಚ್ಚಿಕೊಂಡು ಕುಳಿತುಕೋ" ಎಂದಪ್ಪಣೆ ಮಾಡಿದರೂ ಸ್ವಲ್ಪ-ಕಾಲಕ್ಕೇ ಚಡಪಡಿಕೆ ಆರಂಭವಾಗುವುದು. ಹೀಗಾಗಿ ಇಂದ್ರಿಯಗಳನ್ನು ಸುಮ್ಮನಿರು ಎಂದರೇ ಚಡಪಡಿಕೆಯೆನ್ನಿಸುವಾಗ, ಇನ್ನು ಹಿಮ್ಮುಖವಾಗು. ಎಂದರೆ ಕೇಳುವುವೇ? ಆದರೆ ಈ ಸಹಜಾಮನಸ್ಕವು ಇಂದ್ರಿಯಗಳನ್ನು ಹಿಮ್ಮುಖವಾಗಿಸಬಲ್ಲುದು. ಸಹಜಾಮನಸ್ಕವು ಸಿದ್ಧಿಸಿತೆಂದರೆ ಇಂದ್ರಿಯಗಳು ಹಿಮ್ಮುಖವಾದಂತೆಯೇ.

ಇಂದ್ರಿಯಗಳಲೆಲ್ಲ ಪ್ರಧಾನವಾದುದು ಕಣ್ಣೇ. ಈ ಚಕ್ಷುರಿಂದ್ರಿಯದ ನಿವೃತ್ತಿಯೊಂದಾದರೆ ಮಿಕ್ಕೆಲ್ಲ ಇಂದ್ರಿಯಗಳೂ ನಿವೃತ್ತವಾದವೆಂದೇ ಅರ್ಥ. ನಿವೃತ್ತಿಯೆಂದರೆ ಹಿಂತಿರುಗಿರುವಿಕೆ. ಹಿಂದಕ್ಕೆ ತಿರುಗುವುದೇ ಹಿಂತಿರುಗುವುದು, ಒಳಮುಖವಾಗುವುದು.

ಹಿಂತಿರುಗಿರುವುದನ್ನು ನಿವೃತ್ತ ಎನ್ನುವಂತೆಯೇ "ಆವೃತ್ತ" ಎಂದೂ ಹೇಳುವುದುಂಟು. ಎಂದೇ ಕಠೋಪನಿಷತ್ತು "ಆವೃತ್ತ-ಚಕ್ಷು"ವನ್ನು ಕುರಿತು ಹೇಳುವುದು. ಆವೃತ್ತ-ಚಕ್ಷುವಾದವನನ್ನೇ ಉಪನಿಷತ್ತು ಧೀರನೆಂದು ಕರೆಯುವುದೂ. ನೇತ್ರವೇ ಆವೃತ್ತವೆಂದಾದಲ್ಲಿ, ಅದು ಮಿಕ್ಕೆಲ್ಲದರ ಆವೃತ್ತವಾಗುವಿಕೆಯ ಉಪಲಕ್ಷಣವೇ ಸರಿ. (ಉಪಲಕ್ಷಣವೆಂದರೆ - ಒಂದನ್ನು ಹೇಳಿದರೆ ಮಿಕ್ಕದ್ದು ಊಹ್ಯ – ಎಂಬ ಲೆಕ್ಕ; ಕಷ್ಟವಾದದ್ದೇ ಸಾಧ್ಯವಾದ ಮೇಲೆ ಉಳಿದವು ಸು-ಸಾಧ್ಯವೇ ಸರಿ- ಎಂದು ತಿಳಿದುಕೊಳ್ಳುವ ಲೆಕ್ಕ). ಈ ಶ್ಲೋಕವಂತೂ ಬಾಯಿಬಿಟ್ಟೇ ಎಲ್ಲ ಇಂದ್ರಿಯಗಳ ನಿವೃತ್ತಿಯನ್ನು ತಿಳಿಸಿದೆ.

ದೊಡ್ಡದು ದಕ್ಕಲು ಚಿಕ್ಕದನ್ನು ಬಿಡು!

ಹೊರಪ್ರಪಂಚವನ್ನು ಬಿಟ್ಟದ್ದು ಏತಕ್ಕಾಗಿ? ಮತ್ತೊಂದನ್ನು ಹಿಡಿದುಕೊಳ್ಳುವುದಕ್ಕಾಗಿ: ಅಲ್ಪವಾದುದನ್ನು ಬಿಟ್ಟು ಅನಲ್ಪವಾದುದನ್ನು ಹಿಡಿಯಲಿಕ್ಕಾಗಿ; ಅಲ್ಪವಾದ ಬಾಹ್ಯ-ಪ್ರಪಂಚವನ್ನು ಬಿಟ್ಟು ಭೂಮವಾದ ಬ್ರಹ್ಮವನ್ನು ಹಿಡಿಯಲಿಕ್ಕಾಗಿ. ('ಭೂಮ' ಎಂದರೆ ಹಿರಿದಾದುದು). ಹೊರಗಣ ಪ್ರಪಂಚದಿಂದ ವಿಯೋಗ ಹೊಂದಿದುದು ಒಳಗಣ ಯೋಗಕ್ಕಾಗಿ: ಆತ್ಮ-ಯೋಗಕ್ಕಾಗಿ, ಪರಮಾತ್ಮ-ಯೋಗಕ್ಕಾಗಿ.

ನಿದ್ರೆಯಲ್ಲೂ ಹೊರಪ್ರಪಂಚವನ್ನು ಬಿಟ್ಟಿರುತ್ತೇವಾದರೂ ನಿದ್ರೆಯಲ್ಲಿ ಜಾಡ್ಯವಿರುತ್ತದೆ. ಎಲ್ಲಿ ಜ್ಞಾನವಿಲ್ಲವೋ ಅಲ್ಲಿ ತಮಸ್ಸು. ತಮಸ್ಸೇ ಜಾಡ್ಯ. ಜ್ಞಾನವೇ ಬೆಳಕು. ಜ್ಞಾನಮಯವಾದುದೇ ಈ ಸಹಜಾಮನಸ್ಕ-ಸ್ಥಿತಿ. ಜ್ಞಾನಮಯವೆಂದರೂ ಒಂದೇ, "ಸಂವಿನ್ಮಯ"ವೆಂದರೂ ಒಂದೇ. ಹೀಗೆ ಸಹಜಾಮನಸ್ಕವು ಸಂವಿನ್ಮಯ.

ಹಂಬಲದ ಕೇಳ್ಕೆ

ಸಹಜಾಮನಸ್ಕವನ್ನು ಅದೆಂದು ಹೊಂದಿಯೇನೋ?! - ಎಂಬ ಹಂಬಲದ ಕೇಳ್ಕೆ ಇಲ್ಲಿದೆ. ಹೇಗೆ ಕೆಲಕಾಲ ಚೆನ್ನಾಗಿ ನಿದ್ರಿಸಿದ ಮೇಲೆ ತೃಪ್ತಿಯಾಗಿ ಏಳುವೆವೋ, ಹಾಗೆಯೇ ಈ ಸಹಜಾಮನಸ್ಕ-ಸ್ಥಿತಿಯಲ್ಲೂ. ಹೇಗೆ ನಿದ್ದೆ ಎಳೆಯುತ್ತಿದ್ದಾಗ ಪ್ರಪಂಚದ ಗೊಡವೆಯೇ ಬೇಡವೆನಿಸುತ್ತದೋ ಹಾಗೆಯೇ ಇಲ್ಲೂ. ಅನ್ಯ-ಭಾವಗಳೆಲ್ಲ ಹೋಗಿ ಜ್ಞಾನಮಯವಾದ ಈ ಸ್ಥಿತಿಯಲ್ಲಿ ನೆಲೆಗೊಂಡಾಗ ಬರುವ ತೃಪ್ತಿ-ಸಂತೋಷಗಳೇ ಬೇರೆ! ಬರೀ ನಿದ್ದೆಯಲ್ಲದೆಲ್ಲಿ? ಎಂದೇ ಈ ಹಂಬಲಿಕೆ!

ನಿವರ್ತಯಂತೀಂ ನಿಖಿಲೇಂದ್ರಿಯಾಣಿ

   ಪ್ರವರ್ತಯಂತೀಂ ಪರಮಾತ್ಮ-ಯೋಗಮ್ |

ಸಂವಿನ್ಮಯೀಂ ತಾಂ ಸಹಜಾಽಮನಸ್ಕಾಂ

   ಕದಾ ಗಮಿಷ್ಯಾಮಿ ಗತಾಽನ್ಯಭಾವಃ ||೨೩||

ಸೂಚನೆ : 25/9/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ಸೂಚನೆ : 25/9/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ