Sunday, August 1, 2021

ಗುಣಗ್ರಾಹಿಗಳಾಗೋಣ (Gunagraahigalaagona)

ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್ 

ಪ್ರತಿಕ್ರಿಯಿಸಿರಿ lekhana@ayvm.in





ಗುರುಗಳೊಬ್ಬರಿದ್ದರು. ಅವರ ಬಳಿ ಒಂದು ವಿಶೇಷ ಕನ್ನಡಿ ಇದ್ದಿತು. ಅದನ್ನು ಯಾರ ಮುಂದಾದರೂ ಹಿಡಿದರೆ, ಆ ವ್ಯಕ್ತಿಯ ದೋಷಗಳೆಲ್ಲ ಸ್ಪಷ್ಟವಾಗಿ ಕಾಣಿಸುತ್ತಿದ್ದವು. ಆ ಗುರುಗಳಿಗೆ ಒಬ್ಬ ಶಿಷ್ಯನಿದ್ದ. ಗುರುಗಳ ಬಳಿ ಇದ್ದ ಈ ವಿಶೇಷ ಕನ್ನಡಿಯನ್ನು ಶಿಷ್ಯ ಗಮನಿಸಿದ್ದ. ಅವನಿಗೆ ತಡೆಯದಾಯಿತು. ಆತ ಆ ಕನ್ನಡಿಯನ್ನು ತನಗೇ ಕೊಡಬೇಕೆಂದು ಗುರುಗಳನ್ನು ಒತ್ತಾಯಿಸಲಾರಂಭಿಸಿದ. ಗುರುಗಳ ಹಿತವಚನಗಳು ಶಿಷ್ಯನಿಗೆ ರುಚಿಸದಾದವು. ಗುರುಗಳು ಕನ್ನಡಿಯನ್ನು ಶಿಷ್ಯನಿಗೆ ಕೊಟ್ಟೇಬಿಟ್ಟರು. ಭಸ್ಮಾಸುರ, ತಾನು ಯಾರ ತಲೆಯ ಮೇಲೆ ಕೈ ಇಟ್ಟರೂ ಆ ವ್ಯಕ್ತಿ ಸುಟ್ಟುಹೋಗಬೇಕೆಂಬ ವರವನ್ನು ಪಡೆದು, ಆ ವರವನ್ನಿತ್ತ ಶಿವನ ಮೇಲೆಯೇ ಪ್ರಯೋಗಿಸಹೊರಟಂತೆ, ಈ ಶಿಷ್ಯನೂ ಆ ಕನ್ನಡಿಯನ್ನು ಗುರುಗಳ ಮುಖಕ್ಕೇ ಹಿಡಿದ. ಶಿಷ್ಯನಿಗೆ ಆಶ್ಚರ್ಯ, ಜುಗುಪ್ಸೆ-ಎರಡೂ ಉಂಟಾದವು. ತಾನು ಬಹಳ ಉನ್ನತ ವ್ಯಕ್ತಿಯೆಂದು ಭಾವಿಸಿದ್ದ ಗುರುವಿನಲ್ಲೇ ನಾಲ್ಕಾರು ದೋಷಗಳು! "ಏನು ಗುರುಗಳೇ, ನಿಮ್ಮಲ್ಲಿ ಹೀಗೂ ದೋಷಗಳು ಇರಬಹುದೆಂದು ನಾನೆಣಿಸಿಯೇ ಇರಲಿಲ್ಲವಲ್ಲ?" ಎಂದು ಗುರುಗಳನ್ನು ಕೇಳಿಯೇಬಿಟ್ಟ! ಗುರುಗಳು ಶಾಂತಚಿತ್ತರಾಗಿ ಶಿಷ್ಯನನ್ನು ಕುರಿತು, "ಮಗು, ಒಮ್ಮೆ ನಿನ್ನ ಕಡೆಗೇ ಆ ಕನ್ನಡಿಯನ್ನು ತಿರುಗಿಸಿಕೊಂಡು ನೋಡು" ಎಂದರು. ಶಿಷ್ಯ, ಅಂತೆಯೇ ಮಾಡಿದ. ದಿಗ್ಭ್ರಾಂತನಾದ. ಗುರುಗಳಲ್ಲಿದ್ದುದು ನಾಲ್ಕಾರು ದೋಷಗಳು; ತನ್ನಲ್ಲಿರುವ ದೋಷಗಳನ್ನು ಪಟ್ಟಿ ಮಾಡಿಕೊಳ್ಳುವುದೇ ಕಷ್ಟವಾಯ್ತು, ಅವನಿಗೆ! ವಿವೇಕದಿಂದ ಗುರುಗಳಿಗೆ ಕನ್ನಡಿಯನ್ನು ಮರಳಿಸಿ ಶರಣಾದ. ಗುರುಗಳೆಂದರು- "ನೂರಕ್ಕೆ ನೂರು ಶುದ್ಧಾತ್ಮರು ಸಿಗುವುದು ವಿರಳವೇ ಸರಿ. ಕೆಲವು ಮಹಾತ್ಮರೂ ಒಮ್ಮೊಮ್ಮೆ ಸತ್ಪಥದಿಂದ ಜಾರಿರುವುದುಂಟು. ಆದರೆ, ಅವರು ಭಗವತ್ಕೃಪೆ ಹಾಗೂ ಸಾಧನಾಬಲಗಳಿಂದ ಮತ್ತೆ ಎಲ್ಲವನ್ನೂ ಕೊಡವಿಕೊಂಡು ಮೇಲೇಳಬಲ್ಲರು;  ತಮ್ಮ ದೋಷಗಳನ್ನು ತೊಳೆದುಕೊಳ್ಳಬಲ್ಲರು. ಆದ್ದರಿಂದ, ಪಾಮರರು ತಮ್ಮನ್ನು  ಮಹಾತ್ಮರಿಗೆ ಹೋಲಿಸಿಕೊಳ್ಳಬಾರದು. ಯಾರಲ್ಲಿಯಾದರೂ ಸರಿ, ಗುಣವನ್ನು ಮಾತ್ರ ಗ್ರಹಿಸಿಕೊಂಡು ಮುಂದೆ ಸಾಗುವಂತಿದ್ದರೆ ನಮ್ಮ ಜೀವನ ನೆಮ್ಮದಿಯಿಂದ ಇದ್ದೀತು. ನಿನಗೆ ಅಂತಹ ಪರಿಜ್ಞಾನವಿಲ್ಲದೆ, ಕೇವಲ ಶಾಸ್ತ್ರಪಾಂಡಿತ್ಯದಿಂದ ನಿನ್ನನ್ನು ಒಬ್ಬ ಅಧ್ಯಾತ್ಮಸಾಧಕನೆಂದೆಣಿಸಿದೆ;  ನನ್ನ ಹಿತವಚನಗಳು ನಿನಗೆ ಹಿಡಿಸಲಿಲ್ಲ" ಎಂದು. ಶಿಷ್ಯನಿಗೆ ಅರಿವುಂಟಾಯಿತು.


ಅಧ್ಯಾತ್ಮಮಾರ್ಗವನ್ನು ಅರಸಿ ಬಂದವರಲ್ಲಿ ಎಷ್ಟೋ ಮಂದಿ, ಕೇವಲ ಪುಸ್ತಕ ಜ್ಞಾನದತ್ತಲೇ ಹೆಚ್ಚು ಒಲವನ್ನು ತೋರಿಸುತ್ತಿರುತ್ತಾರೆ. ಹೀಗಾಗಿ, ತಮ್ಮ ಜೀವನಕ್ಕೆ ನಿಜವಾದ ಹಿತವನ್ನುಂಟು ಮಾಡುವ ಜ್ಞಾನದ ಮಾತುಗಳು ಅವರಿಗೆ ರುಚಿಸಲಾರವು. " ವೇಸ್ಟ್ ಪೇಪರ್ ಬ್ಯಾಸ್ಕೆಟ್ಟಿನಲ್ಲಿ ಹಾಕಲ್ಪಡಬೇಕಾಗಿದ್ದ ವಿಷಯಗಳೆಲ್ಲಾ ಮನಸ್ಸಿನಲ್ಲಿ ತುಂಬಿರುವಾಗ, ಜ್ಞಾನದ ಮಾತುಗಳು ಅದಕ್ಕೆ ಹೇಗೆ ತಾನೇ ಹಿಡಿಸಿಯಾವು?" ಎಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಪುಸ್ತಕಜ್ಞಾನ ತಪ್ಪೆಂದಲ್ಲ.  ಸದ್ಗುರುವೊಬ್ಬನು ದೊರೆತಾಗ ತನಗೆ ನಿಜಕ್ಕೂ ಜೀವಹಿತವನ್ನುಂಟುಮಾಡುವ ಸಾಹಿತ್ಯವಾವುದೆಂದು ಗುರುಮುಖೇನ ತಿಳಿದುಕೊಂಡು ಅವುಗಳ ಅಧ್ಯಯನದತ್ತ ಮನಸ್ಸನ್ನು ಹರಿಸಬೇಕು. ಇಂದಿನ ಮಾಹಿತಿಯುಗದಲ್ಲಿ ನಮಗೆ ಜೀವಮಾನವಿಡೀ ಓದಿದರೂ ಮುಗಿಯದ ಜ್ಞಾನರಾಶಿಯಿದೆ. ನಮ್ಮ ಮನಸ್ಸು ಕಂಡ ಕಂಡ ಎಲ್ಲ ಮಾಹಿತಿಗಳನ್ನೂ ಬಾಚಿ ತುಂಬಿಕೊಳ್ಳುವ ಕಸದ ಬುಟ್ಟಿಯಂತಾಗದೆ ನಮ್ಮ ಜೀವದ ಉದ್ಧಾರಕ್ಕೆ ಬೇಕಾದ ರಸಗ್ರಾಹಿ ಬುಟ್ಟಿಯಂತಾಗಲಿ.


ಸೂಚನೆ: 29/07/2021 ರಂದು ಈ ಲೇಖನ
ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.