Sunday, August 1, 2021

ಶ್ರೀರಾಮನ ಗುಣಗಳು - 16 ಧನುರ್ವೇದನಿಷ್ಣಾತ - ಶ್ರೀರಾಮ (Sriramana Gunagalu - 16 Dhanurvedanishnata - Shrirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀರಾಮನು ಧನುರ್ವಿದ್ಯೆಯಲ್ಲಿ ಬಹಳ ಚತುರನಾಗಿದ್ದನು. 'ಧನ್ವಿನೇ ನಮಃ| ಧನುರ್ಧರಾಯ ನಮಃ| ಕೋದಂಡಪಾಣಯೇ ನಮಃ|' ಇತ್ಯಾದಿಯಾಗಿ ಶ್ರಿರಾಮನನ್ನು ಪೂಜಿಸುತ್ತೇವೆ. ಅಲ್ಲದೇ ಶ್ರೀರಾಮನನ್ನು ಚಿತ್ರಪಟದಲ್ಲಿ ನೋಡಿದರೂ, ಅಲ್ಲೂ ಧನುಸ್ಸನ್ನು ಹಿಡಿದಿರುವ ಭಂಗಿಯೇ ಕಾಣುತ್ತದೆ. ಧನುಸ್ಸನ್ನು ಆಯುಧಗಳಲ್ಲಿ ವಿಶೇಷ ಎಂಬುದಾಗಿ ಪರಿಗಣಿಸಲಾಗುತ್ತದೆ. ಬೇರಾವ ಆಯುಧದ ಜೊತೆಗೆ ಶ್ರೀರಾಮನ ಸಂಬಂಧವನ್ನು ಕಾಣದೇ, ಧನುಸ್ಸಿನ ಜೊತೆ ಅಂತಹ ಅನ್ಯೋನ್ಯವಾದ ಸಂಬಂಧವನ್ನು ಕಾಣುತ್ತೇವೆ. ಅಂದರೆ ಈ ಧನುಸ್ಸಿಗೂ ಶ್ರೀರಾಮನಿಗೂ ಅದಾವುದೋ ಒಂದು ನಂಟು ಇರಲೇಬೇಕಲ್ಲವೇ!? ಮತ್ತು 'ಧನುರ್ವಿದ್ಯೆ'ಯನ್ನು ಯಜುರ್ವೇದದ ಉಪವೇದ ಎಂಬುದಾಗಿಯೂ ಪರಿಗಣಿಸಲಾಗಿದೆ. 

ಯುದ್ಧಕ್ಕೆ ಬೇಕಾದ ವಿದ್ಯೆ ಯಾವುದು? ಎಂದು ಹೇಳುವಾಗಲೂ 'ಧನುರ್ವಿದ್ಯೆ' ಎಂಬುದಾಗಿಯೇ ಈ ಧನುಸ್ಸಿನ ಹೆಸರಿನಲ್ಲೇ ಒಂದು ವಿದ್ಯೆಯನ್ನು ಹೇಳಲಾಗುತ್ತದೆ. ಇಲ್ಲೂ ಕೂಡಾ ಬೇರಾವುದೇ ಆಯುಧವನ್ನು ಹೆಸರಿಸಿ ಆ ವಿದ್ಯೆಯನ್ನು ಹೇಳಿರುವುದು ಕಂಡುಬಂದಿಲ್ಲ. ಹಾಗಾದರೆ ಈ ಧನುಸ್ಸಿಗೆ ಇರುವ ವಿಶೇಷತೆಯಾದರೂ ಏನು? ಧನುರ್ವಿದ್ಯೆಯಲ್ಲಿ ಪರಿಣತನಾದವನನ್ನು 'ಯುದ್ಧವಿಶಾರದ' ಎಂದು ಹೇಳುವುದಂಟು. ಈ ನೇರದಲ್ಲೇ ಅರ್ಜುನನ್ನು ಮೂರುಲೋಕದಲ್ಲೇ ಅಪ್ರತಿಮ ಬಿಲ್ಲುಗಾರ ಎನ್ನುತ್ತೇವೆ. ಒಬ್ಬ, ಯುದ್ಧದಲ್ಲಿ ಪ್ರವೀಣ ಎಂದೆನಿಸಿಕೊಳ್ಳಲು, ಆತ ಧನುಸ್ಸನ್ನು ಸರಿಯಾಗಿ ಬಲ್ಲವನಾಗಿರಬೇಕು. ದ್ರೋಣಾಚಾರ್ಯರೋ, ಭೀಷ್ಮಾಚಾರ್ಯರೋ ಈ ಹಿನ್ನೆಲೆಯಲ್ಲೇ ಆಚಾರ್ಯರೆನಿಸಿಕೊಂಡವರು. ಅಂದರೆ ಈ ಧನುಸ್ಸು ಎಂಬುದು 'ಆಯುಧರಾಜ' ಎನಿಸಿತು. ಅದಕ್ಕೆ ಕಾರಣವೇನು? ಶ್ರಿರಂಗಮಹಾಗುರುವು ಉಪನಿಷತ್ತಿನ ಈ ಮಂತ್ರವನ್ನು ಆಗಾಗ್ಗೆ  ಸ್ಮರಿಸಿಕೊಳ್ಳುತ್ತಿದ್ದರು – "ಪ್ರಣವೋ ಧನುಃ ಶರೋ ಹ್ಯಾತ್ಮಾ ಬ್ರಹ್ಮ ತಲ್ಲಕ್ಷ್ಯಮುಚ್ಯತೇ | ಅಪ್ರಮತ್ತೇನ ವೇದ್ಧವ್ಯಂ ಶರವತ್ತನ್ಮಯೋ ಭವೇತ್" ಎಂದು. ಪ್ರಣವದಿಂದಲೇ ಎಲ್ಲಾ ವೇದ-ವೇದಾಂಗ ಮತ್ತು ಅವುಗಳ ಶಾಖೋಪಶಾಖೆಗಳೆಲ್ಲವೂ ಕವಲೊಡೆದಿವೆ. ಪ್ರಣವವನ್ನು ಧನುಸ್ಸಿನ ಪ್ರತಿರೂಪವೆಂದೇ ಹೇಳುವುದುಂಟು. ಪ್ರತಿಯೊಂದು ಜೀವವೂ ಭಗವಂತನನ್ನು ಕಾಣಬೇಕಾದರೆ ಈ ಪ್ರಣವವನ್ನೇ ಧನುಸ್ಸಾಗಿ ಮಾಡಿಕೊಳ್ಳಬೇಕು, ಆತ್ಮವನ್ನು ಬಾಣವಾಗಿ ಹೂಡಬೇಕು. ಅಪ್ರಮತ್ತನಾಗಿ(ಜಾಗರೂಕನಾಗಿ) ಬ್ರಹ್ಮವೆಂಬ ಲಕ್ಷ್ಯವನ್ನು ತನ್ಮಯನಾಗಿ-ಏಕಾಗ್ರನಾಗಿ ಭೇದಿಸಬೇಕು. ಮಾನವನ ಶರೀರವನ್ನೂ ಪ್ರಣವಾಕಾರವಾಗಿ ಬಿಂಬಿಸಿದ್ದುಂಟು. ಶರೀರವು ಬ್ರಹ್ಮವೆಂಬ ಲಕ್ಷ್ಯಕ್ಕೆ ಸಾಧನವಾಗಿದೆ. ಆದ್ದರಿಂದ ಧನುರ್ವಿದ್ಯೆಯಲ್ಲಿ ನಿಷ್ಣಾತನಾದವನು ತನ್ನ ಜೀವನಲಕ್ಷ್ಯವಾದ ಬ್ರಹ್ಮವನ್ನು ಭೇದಿಸುವುದು ಸುಲಭಸಾಧ್ಯ ಎಂಬುದು ಇದರ ರಹಸ್ಯಾರ್ಥ. ಕಾಣುವ ಮತ್ತು ಕಾಣದ ಲಕ್ಷ್ಯವನ್ನು ಭೇದಿಸಲು ಧನುಸ್ಸನ್ನೇ ಬಳಸಲಾಗುತ್ತದೆ. ಕಾಣದ ಲಕ್ಷ್ಯವನ್ನು ಭೇದಿಸಲು ಬಳಸುವ ವಿದ್ಯೆಯೇ ಶಬ್ದವೇಧಿ. ಶ್ರೀರಾಮನಿಗೂ ಧನುಸ್ಸಿಗೂ ಇದ್ದ ಸಂಬಂಧವನ್ನು  ರಾಮಾಯಣದುದ್ದಕ್ಕೂ ಕಾಣಬಹುದು. ಶ್ರೀರಾಮನು ತಪಸ್ಸಿನಿಂದ ಧನುರ್ವೇದ ವಿದ್ಯೆಯನ್ನು ಸಂಪಾದಿಸಿದ್ದ ವಿಶ್ವಾಮಿತ್ರರಿಂದ ವಿವಿಧ ಅಸ್ತ್ರಗಳ ಬಗ್ಗೆ ಉಪದೇಶವನ್ನು ಪಡೆಯುತ್ತಾನೆ. ಶ್ರೀರಾಮನು ಶಿವಧನುಸ್ಸನ್ನು ಭಂಗ ಮಾಡಿದುದೇ ಸೀತಾಕಲ್ಯಾಣಕ್ಕೆ ಕಾರಣವಾಯಿತು. ಪರಶುರಾಮನು ರೋಷದಿಂದ ಆಹ್ವಾನಿಸಿದಾಗ ಅವನಲ್ಲಿದ್ದ ವೈಷ್ಣವ ಧನುಸ್ಸಿಗೆ ಬಾಣವನ್ನು ಹೂಡಿದುದರಿಂದ  ಪರಶುರಾಮನ ಗರ್ವಭಂಗವಾಗಿ ಲೋಕವು ನೆಮ್ಮದಿಯಿಂದ ಉಸಿರಾಡುವಂತಾಯಿತು. ಮುಂದೆ ಲೋಕಕಂಟಕರಾದ ರಾವಾಣಾದಿಗಳ ಸಂಹಾರವೂ ಆಯಿತು. ಶ್ರೀರಾಮನು ಇಂತಹ ಧನುರ್ವಿದ್ಯೆಯಿಂದ ದುಷ್ಟರನ್ನು ಸಂಹರಿಸಿದ. ಧರ್ಮರಕ್ಷಣೆಗಾಗಿ ಧನುರ್ಧಾರಿಯಾದ ಭಗವಾನ್ ಶ್ರೀರಾಮನು ಎಲ್ಲರನ್ನೂ ಪರಿಪಾಲಿಸಲಿ.

ಸೂಚನೆ : 1/8/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ " ಶ್ರೀರಾಮನ ಗುಣಗಳು " ಅಂಕಣದಲ್ಲಿ ಪ್ರಕಟವಾಗಿದೆ.