ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಯೋಗತಾರಾವಳೀ (ಶ್ಲೋಕ ೧೮)
ಚಿತ್ತೇಂದ್ರಿಯಾಣಾಂ
ಚಿತ್ತನಿಗ್ರಹ-ಇಂದ್ರಿಯನಿಗ್ರಹಗಳು ಒಟ್ಟಿಗೇ ಆಗುವಂತಹುವು - ಎಂದು ಸಾಧಾರಣವಾಗಿ ಹೇಳಬಹುದು. ಇಂದ್ರಿಯಗಳು ಐದು, ಚಿತ್ತವೆಂಬುದು ಒಂದು. ಆದರೂ ಇವುಗಳ ನಿಗ್ರಹವೆಂಬುದು ಸಮಕಾಲಕ್ಕೆ ಆಗುತ್ತದೆ ಏಕೆ? ಹೇಗೆ?
ಒಂದರ್ಥದಲ್ಲಿ ಮನಸ್ಸೂ ಒಂದು ಇಂದ್ರಿಯ. ಪಂಚ-ಜ್ಞಾನೇಂದ್ರಿಯಗಳ ಜೊತೆಗೆ ಸೇರಿ ಮನಸ್ಸು ಆರನೆಯ ಇಂದ್ರಿಯವೆನಿಸಿಕೊಳ್ಳುತ್ತದೆ. ಕರ್ಮೇಂದ್ರಿಯಗಳನ್ನೂ ಸೇರಿಸಿಕೊಂಡರೆ ಹನ್ನೊಂದನೆಯದೆನಿಸುತ್ತದೆ. ಹಾಗೂ, ಮನಸ್ಸು ಇತ್ತ ಜ್ಞಾನೇಂದ್ರಿಯದಂತೆಯೂ ಕೆಲಸಮಾಡುತ್ತದೆ, ಅತ್ತ ಕರ್ಮೇಂದ್ರಿಯದಂತೆಯೂ ಕೆಲಸಮಾಡುತ್ತದೆ.
ಯಾರಿಗೆ ಯಾರು ಒಡೆಯ?
ಇಂದ್ರಿಯಗಳಿಗೆ ಮನಸ್ಸೇ ಒಡೆಯ. "ಇಂದ್ರಿಯಾಣಾಂ ಮನೋ ನಾಥಃ" ಆದುದರಿಂದ, ಮನಸ್ಸು ಹೇಳಿದಂತೆ ಇಂದ್ರಿಯಗಳು ಕೇಳುವುವು. ಇದು ಎಷ್ಟು ನಿಜವೋ ಇದರ ವಿರುದ್ಧವಾದ ಹೇಳಿಕೆಯೂ ಅಷ್ಟೇ ನಿಜ! ಹೇಗೆ? ಇಂದ್ರಿಯಗಳು ಪ್ರಮಾಥಿಗಳು, ಅಂದರೆ ಗಲಭೆಯನ್ನುಂಟುಮಾಡತಕ್ಕವು. ಗುಲ್ಲೆಬ್ಬಿಸುವ ಕಾರ್ಮಿಕರು ಮಾಲಿಕನೇ ಮಣಿಯುವಂತೆ ಕೆಲವೊಮ್ಮೆ ಮಾಡಬಲ್ಲರಲ್ಲವೆ? ಹಾಗೆ. ಒಡೆಯನನ್ನೇ ಬಲಾತ್ಕಾರವಾಗಿ 'ಕಿಡ್ನಾಪ್' (ಅಪಹರಣ) ಮಾಡಬಲ್ಲವು. "ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಂ ಮನಃ" (ಗೀತೆ).
ಮೇಲೆಹೇಳಿದೆರಡೂ ಯೋಗಶಾಸ್ತ್ರದ ಮಾತುಗಳೇ. ಎರಡೂ ಪರಸ್ಪರ ವಿರುದ್ಧವೇ. ಆದರೂ ಎರಡರಲ್ಲೂ ಸತ್ಯವೇ ಇದೆ.
ಇಂದ್ರಿಯಗಳನ್ನು ಬಗ್ಗಿಸಿದರೆ ಮನಸ್ಸನ್ನು ಬಗ್ಗಿಸಬಹುದು – ಎಂಬಂತೆಯೇ, ಮನಸ್ಸನ್ನು ಬಗ್ಗಿಸಿದರೆ ಇಂದ್ರಿಯಗಳನ್ನು ಬಗ್ಗಿಸಬಹುದು! ಅಯ್ಯೋ, ಇದು ಅನ್ಯೋನ್ಯಾಶ್ರಯ-ದೋಷವಾಗಲಿಲ್ಲವೇ? - ಎಂದು ಕೇಳಬಹುದು. ಇಲ್ಲ. ಹೇಗೆಂದರೆ, ಕೆಲವೊಮ್ಮೆ ಮನಸ್ಸನ್ನು ಬಗ್ಗಿಸುವುದು ಸುಲಭವಾಗಿರುತ್ತದೆ, ಕೆಲವೊಮ್ಮೆ ಇಂದ್ರಿಯಗಳನ್ನು. ಯಾವಾಗ ಯಾವುದರ ಪ್ರವೃತ್ತಿ ಉಗ್ರವಾಗಿದೆ ಉತ್ಕಟವಾಗಿದೆ, ಯಾವುದು ಮೃದುವಾಗಿದೆ ವಿಧೇಯವಾಗಿದೆ - ಇವುಗಳನ್ನು ನೋಡಿಕೊಂಡು ಎರಡನ್ನೂ ಬೇರೆಬೇರೆಯಾಗಿ, ಕೆಲವೊಮ್ಮೆ ಒಟ್ಟಿಗೇ, ಹಾದಿಗೆ ತರಬೇಕು.
ಶಮ-ದಮ
ಹೀಗೆ ಶಮ-ದಮಗಳನ್ನು ಸಾಧಿಸಿಕೊಳ್ಳಬೇಕು. ಅಬ್ಬರದ ಆಳುಗಳನ್ನು ಮೆಟ್ಟಿಹಾಕುವುದು ದಮನ. ಇಂದ್ರಿಯಗಳಿಗೆ ಮಾಡಬೇಕಾದುದು ದಮನ: ಶಕ್ತಿಪ್ರಯೋಗದಿಂದ ವಶೀಕಾರ. ಮನಸ್ಸಿಗೆ ಅನುನಯವೇ ಉಪಾಯವಾಗಬಹುದು: ಅನುನಯವು ಶಮನ. ಹೀಗೆ ಶಮ-ದಮಗಳಿಂದ ಚಿತ್ತವನ್ನೂ ಇಂದ್ರಿಯಗಳನ್ನೂ ಹತೋಟಿಗೆ ತರುವುದಾಗುತ್ತದೆ.
ನಿರಂಕುಶವಾಗಿ ನಡೆಯುತ್ತಿರುವ ಶ್ವಾಸ-ಗತಿಯ ಬಗೆಯು ಶಮ-ದಮಗಳನ್ನು ಮಾಡುತ್ತಲೇ ಬೇರೆಯಾಗಿರುತ್ತದೆ. ಶ್ವಾಸ-ಗತಿಗಿದೊಂದು ಶಮನ: ಉಸಿರಾಟವನ್ನು ದೀರ್ಘವಾಗಿಯೇ ಸ್ತಬ್ಧವಾಗಿಯೋ ಮಾಡಿಡಲಾಗುತ್ತದೆ.
ಇದಿಷ್ಟನ್ನೂ ಸಾಧಿಸಿದುದರ ಫಲವೇನೆಂದರೆ ಯಮೀಂದ್ರರ ಅಂಗಗಳ ಮೇಲೂ ಬುದ್ಧಿಯ ಮೇಲೂ ಇವು ಪ್ರಭಾವ ಬೀರುತ್ತವೆ. ಯಮಿಯೆಂದರೆ ಯಮವುಳ್ಳವನು. (ಯಮ-ನಿಯಮಗಳು ತನ್ನ ಮೇಲೆ ತಾನು ಸಾಧಿಸಿಕೊಂಡಿರುವ ಕೆಲ ಹತೋಟಿಗಳು). ಅಂತಹ ಯಮಿಗಳಲ್ಲಿ ಅಗ್ರಗಣ್ಯನೆನಿಸುವವನು ಯಮೀಂದ್ರ. ರಾಜಯೋಗದ ಸಾಧಕರು ಯಮೀಂದ್ರರಾಗುವುದರಲ್ಲಿ ಸಂಶಯವಿಲ್ಲ.
ಯಮೀಂದ್ರರ ಬುದ್ಧಿಯು ಮನೋನ್ಮನಿಯಲ್ಲಿ ಮಗ್ನವಾಗುತ್ತದೆ. ಮನಸ್ಸು ಊರ್ಧ್ವಮುಖವಾದಾಗ ಮನೋನ್ಮನಿಯೆನಿಸಿಕೊಳ್ಳುತ್ತದೆ. ಅದೊಂದು ವಿಶೇಷಸ್ಥಿತಿ.
ಅಲ್ಲಾಡದ ದೀಪದಂತೆ
ಇದಲ್ಲದೆ, ಆ ಮನೋನ್ಮನೀ-ಸ್ಥಿತಿಯಲ್ಲಿ ಅವರು ನೆಲೆಗೊಂಡಿರುವಾಗ ಅವರ ಅಂಗಗಳೆಲ್ಲ ಚೇಷ್ಟೆಗಳನ್ನು ಕಳೆದುಕೊಳ್ಳುತ್ತವೆ. ಅವರು ನಿಶ್ಚಲಾಂಗರಾಗುತ್ತಾರೆ. ಅವರ ಸ್ಥಿತಿಯು ಆಗ ಹೇಗಿರುತ್ತದೆಂದರೆ, ಗಾಳಿಯಾಡದ ಎಡೆಯಲ್ಲಿಯ ದೀಪವು ಹೇಗೋ ಹಾಗೆ.
ದೀಪವುರಿಯಲು ಒಂದಿಷ್ಟು ಗಾಳಿಯು ಬೇಕೇ ಆದರೂ, ಗಾಳಿಯು ಅತ್ತಿಂದಿತ್ತ ಇತ್ತಿಂದತ್ತ ಬೀಸುತ್ತಿದ್ದರೆ, ದೀಪ-ಜ್ವಾಲೆಯು ಥರಥರನೆ ನಡುಗುತ್ತಿರುತ್ತದೆ. ವಾಯುವಿನ ಚಲನವಿಲ್ಲದಿದ್ದಾಗ, ದೀಪವು ನಿಶ್ಚಲವಾಗಿರುತ್ತದೆ, ಚಿತ್ರದಲ್ಲಿ ಬರೆದಿಟ್ಟಂತಿರುತ್ತದೆ. ಯೋಗಿಗಳು ಹಾಗಿರುತ್ತಾರೆ - ಎಂದಿದೆ ಈ ಶ್ಲೋಕ.
ಗೀತೆಯಲ್ಲೂ ಇದೇ ಉಪಮಾನವು ಬಂದಿದೆಯಷ್ಟೆ : "ಯಥಾ ದೀಪೋ ನಿವಾತಸ್ಥೋ ನೇಂಗತೇ". ಕಾಳಿದಾಸನೂ ತನ್ನ ಕುಮಾರ-ಸಂಭವದಲ್ಲಿ ಶಿವ-ತಪೋ-ವರ್ಣನೆಯನ್ನು ಮಾಡುವಾಗ ಇದೇ ಹೋಲಿಕೆಯನ್ನೇ ಕೊಡುತ್ತಾನೆ: "ನಿವಾತ-ನಿಷ್ಕಂಪಮ್ ಇವ ಪ್ರದೀಪಮ್" ಎಂದು.
ಶಿವನಿಗೆ ಮನೋನ್ಮನನೆಂದೇ ಹೆಸರು. ಮನೋನ್ಮನೀ ಎಂಬುದು ಈ ಅವಸ್ಥೆಯ ಹೆಸರು. ಮನೋನ್ಮನೀ ಸ್ಥಿತಿಯಲ್ಲಿ ನೆಲೆಸಿದ್ದ ಮನೋನ್ಮನನನ್ನು ಕಾಳಿದಾಸನು ಇದೇ ನಿಶ್ಚಲ ದೀಪೋಪಮೆಯಿಂದ ಚಿತ್ರಿಸಿರುವಲ್ಲಿ ಆಶ್ಚರ್ಯವೇನು?
ಚಿತ್ತೇಂದ್ರಿಯಾಣಾಂ ಚಿರ-ನಿಗ್ರಹೇಣ
ಶ್ವಾಸ-ಪ್ರಚಾರೇ ಶಮಿತೇ ಯಮೀಂದ್ರಾಃ |
ನಿವಾತ-ದೀಪಾ ಇವ ನಿಶ್ಚಲಾಂಗಾಃ
ಮನೋನ್ಮನೀ-ಮಗ್ನ-ಧಿಯೋ ಭವಂತಿ || ೧೮ ||
ಸೂಚನೆ : 6/8/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.