Saturday, June 5, 2021

ಯೋಗತಾರಾವಳಿ - 9 ಬಂಧತ್ರಯದ ಪಾಕ (Yogataravali- 9 Bandhatrayada paka)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ಯೋಗತಾರಾವಳೀ (ಶ್ಲೋಕ ೮) 

ಬಂಧತ್ರಯಾಭ್ಯಾಸ…

ಸಹಜವಾಗಿ ಹಣ್ಣಾಗುವುದು

ಬೀಜವನ್ನು ಬಿತ್ತಿದಾಗ ಮೊದಲು ಮೊಳಕೆಯಾಗಿ ಆಮೇಲೆ ಚಿಗುರು-ಎಲೆ-ಕಾಂಡ-ಹೂ- ಹಣ್ಣುಗಳಾಗಿ ಬೆಳೆಯುವುದಷ್ಟೆ. ಸಸಿಯಾದದ್ದು ಮರವಾಗುವುದನ್ನು ಕಾಣುತ್ತೇವೆ. ಬೆಳೆದದ್ದನ್ನು ಕಾಣುವೆವಾದರೂ ಬೆಳೆಯುತ್ತಿರುವುದನ್ನೇ ನೇರಾಗಿ ಕಾಣಲಾದೀತೇ? ಸಹಜವಾದ ಬೆಳವಣಿಗೆಯೆಂಬುದು ಮೆಲ್ಲಮೆಲ್ಲನೆ ಸಾಗುವುದು. ಕಾಯಿಯು ಹಣ್ಣಾಗುವುದೂ ಹೀಗೆಯೇ. "ಕಾಯಿಯನ್ನೇ ಕಿತ್ತು, ಹೊಡೆದು ಹೊಡೆದು ಹಣ್ಣು ಮಾಡಿದರೆ, ಅದರ ಸಹಜವಾದ ಸವಿ ಬರಲಾರದಲ್ಲವೇ?" - ಎಂಬ ಉದಾಹರಣೆಯನ್ನು ಶ್ರೀರಂಗಮಹಾಗುರುಗಳು ಕೊಡುತ್ತಿದ್ದರು.

ಯೋಗವೂ ಹಾಗೆಯೇ. ಅಲ್ಲಾಗುವ ವೃದ್ಧಿ ದಿಢೀರನೆ ಆಗುವುದಲ್ಲ. ಮರದಲ್ಲಿರುವ ಕಾಯಿ ಪ್ರತಿಕ್ಷಣವೂ ಹಣ್ಣಿನ ಸ್ಥಿತಿಯತ್ತ ಹೆಜ್ಜೆಯಿಡುತ್ತಲೇ ಇರುತ್ತದೆ. ಆದರೆ ಎದುರಿಗೇ ನಿಂತು ನೋಡುತ್ತಲೇ ಇದ್ದರೂ ಅದು ಅಗೋಚರವೇ. ಕಾಯಿಯು ಪಕ್ವಾವಸ್ಥೆಯತ್ತ ಸತತವಾಗಿ ಸಾಗುತ್ತಿರುವುದಾದರೂ, ಅಬ್ಬರವಿಲ್ಲದೆ ಎದ್ದುಕಾಣದೆ ಮುನ್ನಡೆಯನ್ನು ಹೊಂದಿರುವುದು. ಈ ಫಲೋನ್ಮುಖವಾದ ಸ್ಥಿತಿಗೆ 'ವಿಪಾಕ' ಎನ್ನುತ್ತಾರೆ.

ಯೋಗದ ಬಂಧತ್ರಯವೂ ಹೀಗೆಯೇ. ಅದರ ಫಲವು ಒಮ್ಮೆಲೇ ಬಂದುಬಿಡುವುದಲ್ಲ. ಒಂದರ್ಥದಲ್ಲಿ, ಥಟ್ಟನೇ ಅಥವಾ ಒಮ್ಮೆಲೇ ಬಂದುಬಿಡುವಂತಹುದು ಕೊನೆಗೆ ಸ್ಥಿರವಾಗಿ ಉಳಿಯಲೂ ಆಗದುದೇ ಸರಿ. ಅಂತೂ ಬಂಧತ್ರಯದ ಅಭ್ಯಾಸ ಚೆನ್ನಾಗಿ ನಡೆಯುತ್ತಿದ್ದರೆ ಅದರ ಈ ವಿಪಾಕದಿಂದಾಗಿ ಉಂಟಾಗುವ ಸ್ಥಿತಿಯೊಂದುಂಟು. ಅದನ್ನು ಈ ಶ್ಲೋಕವು ಹೇಳುತ್ತದೆ.

ರೇಚಕವೂ ಪೂರಕವೂ ಸೇರಿಯೇ ಉಸಿರಾಟ. ಅವು ಸಂತತವಾಗಿರುತ್ತವೆ. ಸಾಧಾರಣವಾಗಿ ಅವುಗಳ ಸತತತೆಗೆ ಭಂಗವೇ ಬರಬಾರದು. ಆದರೆ ಎರಡೂ ಇಲ್ಲವಾಗುವ ಸ್ಥಿತಿಯು ಈ ವಿಪಾಕದಿಂದ ಉಂಟಾಗುವುದೆಂದು ಈ ಶ್ಲೋಕವು ಹೇಳುತ್ತದೆ. (ಆದರಿದು ಸಾವಲ್ಲ!)

'ಆಸನ-ಜಯ'ದಂತೆ ಬಂಧತ್ರಯ-ಜಯವೂ. ಅದಾದಲ್ಲಿ, ಅದರ ವಿಪಾಕವಾಗಿ, ರೇಚಕ-ಪೂರಕಗಳು ಕೆಲಕಾಲ ನಿಂತಂತಾಗುವುವು. ರೇಚಕವನ್ನು ನಿಲ್ಲಿಸಲಾಗಲಿ, ಪೂರಕವನ್ನು ನಿಲ್ಲಿಸಲಾಗಲಿ ಯಾವುದೇ ಪ್ರಯತ್ನವು ಅವಶ್ಯವಿಲ್ಲದೆ, ಅವು ತಾವೇ ಮೃದುವಾಗಿಯೂ ದೀರ್ಘವಾಗಿಯೂ ಆಗುತ್ತಾ, ಬರಬರುತ್ತಾ ಅವುಗಳ ಗತಿಯೇ ಗೋಚರವಾಗದಂತಾಗುವುವು. 

ಧ್ಯಾನಕ್ಕೆಂದೇ ಕುಳಿತಾಗಲೂ - ವಿಶೇಷವಾಗಿ ಅದಕ್ಕೆಂದು ಕುಳಿತಾಗಲೇ - ನಮ್ಮ ಮನಸ್ಸಿಗೆ ಬಾಹ್ಯ-ವಿಷಯಗಳು ಹೆಚ್ಚಾಗಿ ಗೋಚರವಾಗುವುವು. ನಡೆದ ಘಟನೆಗಳ ಸ್ಮರಣೆಗಳು ಕಾಡುವುವು; ಮುಂದಾಗಬೇಕಾದ ಕೆಲಸ-ಕಾರ್ಯಗಳ ಸಂಕಲ್ಪ-ವಿಕಲ್ಪಗಳು ಮೂಡುತ್ತ ಆಡುತ್ತಲಿರುವುವು. ಎಷ್ಟು ಹೊತ್ತಾದರೂ ಮನಸ್ಸು ಒಳಮುಖವಾದಂತೆಯೇ ಅನಿಸದೆ ಬೇಜಾರೇ ಬಂದುಬಿಡುವುದು!

 ಕೇವಲ-ಕುಂಭಕ

ಆದರೆ ಉಚ್ಛ್ವಾಸ-ನಿಃಶ್ವಾಸಗಳತ್ತಲೇ ಮನಸ್ಸು ಹೋದಲ್ಲಿ ಬಾಹ್ಯವಿಷಯಗಳ ಪ್ರವಾಹ ಕಡಿಮೆಯಾದಂತಾಗುತ್ತದೆ. ಹಾಗೆ ಮನಸ್ಸು ಸೂಕ್ಷ್ಮವಾಗುತ್ತಿರುವಾಗ ಹೊರಗಡೆಯ ಸಣ್ಣ ಸದ್ದೂ ದೊಡ್ಡದಾಗಿ ಕೇಳಿಸಿ ಮನಸ್ಸಿಗೆ ಬಹಿರ್ಮುಖತೆ ತರುವಂತೆ/ಬರುವಂತೆ ಆಗುತ್ತದೆ.

ಆದರೆ ಬಂಧತ್ರಯವು ದೀರ್ಘಕಾಲದಿಂದಲೂ ಏರ್ಪಡುತ್ತಿದ್ದಲ್ಲಿ ರೇಚಪೂರಗಳ ವರ್ಜನವು ಉಂಟಾಗುತ್ತಾ, ವಿಷಯಪ್ರವಾಹವು ಶೋಷಣೆಗೆ ಒಳಗಾಗುವುದು. ಇಲ್ಲಿಯ ಶೋಷಣ (ಅಥವಾ ವಿಶೋಷಣ) ಎಂಬ ಪದಕ್ಕೆ ಏನೋ ಕೆಟ್ಟ ಅರ್ಥವಲ್ಲ. ಒಣಗಿಸುವುದು ಎಂಬುದು ಆ ಪದದ ಅರ್ಥ. ಮನೆಯೊಳಗೆ ನೀರು ನುಗ್ಗಿದರೆ ಅದನ್ನು ನಾವು ಒಣಗಿಸಲು ಯತ್ನಿಸುವುದಿಲ್ಲ. ಪ್ರವಾಹವಾಗಿ ಬಂದದ್ದನ್ನು ಮೊಗೆದು ಮೊಗೆದು ಹೊರಚೆಲ್ಲುತ್ತೇವೆ. ಆದರೆ ಇಲ್ಲಿ ಹೇಳಿರುವ ಯೋಗವಿದ್ಯೆಯ ವಿಷಯ ಹಾಗಲ್ಲ. 

ರೇಚಕ-ಪೂರಕಗಳು ತಾವಾಗಿ ಸ್ಥಗಿತಗೊಂಡ ಸ್ಥಿತಿಯು ಇಲ್ಲಿ ಉಂಟಾಗಿರುತ್ತದೆ. ರೇಚಕವೂ ಪೂರಕವೂ ಅಲ್ಲದ ಈ ಸ್ಥಿತಿ ಕುಂಭಕವೇ: ಇದೊಂದು ಅಂತಃಕುಂಭಕವೇ ಸರಿ. ಇದನ್ನು ಕೇವಲ-ಕುಂಭಕವೆನ್ನುತ್ತಾರೆ. ಕೇವಲಕುಂಭಕವೆಂಬುದು ಸಾಧಾರಣವಾದುದಲ್ಲ. ಅದು ಸಹಜವಾಗಿ ಏರ್ಪಟ್ಟಲ್ಲಿ ಯೋಗದ ಒಂದು ಉನ್ನತಸ್ಥಿತಿ ಬಂದಂತೆಯೇ. ಯೋಗವೆಂಬ ಮಹಾವಿದ್ಯೆಯ ಒಂದು ಅಂಗಭೂತವಾದ ವಿದ್ಯೆಯಿದು.

ಮನಸ್ಸಿನೊಳಗೆ ಅಡೆತಡೆಯಿಲ್ಲದೆ ಬರುತ್ತಿದ್ದ ವಿಷಯ-ಪ್ರವಾಹವನ್ನು ಇದು ತಡೆಯುತ್ತದೆ. ಅಷ್ಟೇ ಅಲ್ಲ. ಇದು ಎಷ್ಟು ಪ್ರಬಲವೆಂದರೆ ವಿಷಯ-ಪ್ರವಾಹವನ್ನು ಒಣಗಿಸಿಯೇ ಬಿಡುವುದು! "ಮನಸ್ಸೇ! ಸುಮ್ಮನಿರು, ಸುಮ್ಮನಿರು!" ಎಂದು ಬೇಡಿಕೊಂಡರಿಲ್ಲ, ಹಠಮಾಡಿದರಿಲ್ಲ - ಎಂಬ ಹಾಗೆ ಕಾಡುವ ಪ್ರಬಲ-ವಿಷಯಪ್ರವಾಹವನ್ನು ಶೀಘ್ರವಾಗಿಯೇ ಶೋಷಿಸಿಯೇ ಬಿಡುವ ವಿದ್ಯೆಯೇ ಕೇವಲಕುಂಭಕ!

ಬಂಧತ್ರಯಾಭ್ಯಾಸ-ವಿಪಾಕ-ಜಾತಾಂ

      ವಿವರ್ಜಿತಾಂ ರೇಚಕ-ಪೂರಕಾಭ್ಯಾಮ್ |

ವಿಶೋಷಯಂತೀಂ ವಿಷಯ-ಪ್ರವಾಹಂ

      ವಿದ್ಯಾಂ ಭಜೇ ಕೇವಲಕುಂಭ-ರೂಪಾಮ್ ||೮||

ಸೂಚನೆ : 5/6/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.