ಬಿರುಸು ಮಾತುಗಳು ಕೆಲ ಸಂದರ್ಭಗಳಲ್ಲಿ ಬಂದುಬಿಟ್ಟಾಗ, ಅವುಗಳ ಔಚಿತ್ಯ-ಕಾರಣಗಳ ವಿಮರ್ಶೆ ಅಗತ್ಯವಾಗುತ್ತದೆ. ಸೀತೆಯ ಜೀವನದ ಅಂತಹ ಒಂದು ಪ್ರಸಂಗ ಇಲ್ಲಿದೆ. ಮಾರೀಚನು ರಾಮಬಾಣಕ್ಕೆ ತುತ್ತಾಗಿ ಸಾಯುವಾಗ "ಹಾ ಸೀತೆ! ಹಾ ಲಕ್ಷ್ಮಣ!" ಎಂದು ಕೂಗಿ ಸತ್ತನಷ್ಟೆ. ಅದನ್ನು ಕೇಳಿ ಆತಂಕಪಟ್ಟ ಸೀತೆಯು, ಶ್ರೀರಾಮನ ಸಹಾಯಕ್ಕೆ ಹೋಗೆಂದು ಲಕ್ಷ್ಮಣನಿಗೆ ಸಹಜವಾಗಿಯೇ ಹೇಳಿದಳು.
ಮೊದಮೊದಲು ಲಕ್ಷ್ಮಣ ಕದಲಲಿಲ್ಲ. ಅವಳ ಆತಂಕ-ಕೋಪಗಳು ಹೆಚ್ಚಾಗಿ, ಬಹಳವೇ ಚುಚ್ಚುವಂತಹ ಮಾತುಗಳನ್ನು ಅವಳು ಲಕ್ಷ್ಮಣನನ್ನು ಕುರಿತು ಆಡಿದಳು.
ರಾಮಚಂದ್ರನಾದರೂ ದೇವ-ಗಂಧರ್ವ-ರಾಕ್ಷಸರಿಂದಲೂ ಅಜಯ್ಯನಾದವನು - ಎಂದರೆ ಜಯಿಸಲು ಅಶಕ್ಯನಾದವನು. ಅದನ್ನು ಲಕ್ಷ್ಮಣನು ಎಷ್ಟು ತಿಳಿಹೇಳಿದರೂ, ಆಕೆಗೆ ಸಮಾಧಾನವಾಗಲೇ ಇಲ್ಲ.
ಬದಲಾಗಿ, ಲಕ್ಷ್ಮಣನನ್ನೇ ದುಷ್ಟನೆಂದೂ, ಮೋಸಗಾರನೆಂದೂ, ತನ್ನ ವಿಷಯದಲ್ಲಿ ದುಷ್ಟೋದ್ದೇಶವನ್ನು ಹೊಂದಿರುವವನೆಂದೂ ತೆಗಳಿದಳು! ಲಕ್ಷ್ಮಣನೋ, ಜಿತೇಂದ್ರಿಯನೂ ಸಾಧುಸ್ವಭಾವದವನೂ ಆದವನು; ಅವಳ ಈ ಮಾತುಗಳಂತೂ ಮರ್ಮಘಾತಕ! ಆದಷ್ಟೂ ಸಹಿಸಿಯಾದ ಮೇಲೆ, ಕೊನೆಗೆ, "ಇನ್ನು ಈ ಮಾತುಗಳನ್ನು ಕೇಳಲಾರೆ. ನನ್ನ ಅಣ್ಣನ ಆಜ್ಞೆಯನ್ನು ಪಾಲಿಸುತ್ತಿದ್ದ ನನ್ನನ್ನೇ ಶಂಕಿಸುವೆಯಾ?” ಎಂದು ಖೇದಿಸಿದನು. “ವನದೇವತೆಗಳು ನಿನ್ನನ್ನು ರಕ್ಷಿಸಲಿ. ದುಃಶಕುನಗಳಾಗುತ್ತಿದ್ದರೂ, ಶ್ರೀರಾಮನೊಂದಿಗೆ ಹಿಂದಿರುಗಿ ನಿನ್ನನ್ನು ಕಾಣುತ್ತೇನೆ" ಎಂದು ಹೇಳಿ ಹೊರಟುಬಿಟ್ಟನು.
ಆಗಲೂ ಅಷ್ಟೆ. ಸೀತೆಯು ಶೋಕಾತಿರೇಕದಿಂದ ಮತ್ತೂ ಕಠೋರವಚನಗಳನ್ನೇ ಆಡಿದಳು. “ನಾನು ಗೋದಾವರಿಯಲ್ಲಿ ಮುಳುಗಿಯೋ, ನೇಣು ಹಾಕಿಕೊಂಡೋ, ವಿಷವನ್ನು ಸೇವಿಸಿಯೋ, ಪ್ರಾಣ ಬಿಡುವೆ; ಆದರೆ ಮತ್ತೊಬ್ಬ ಪುರುಷನನ್ನು ಎಡಗಾಲಿನಿಂದಲೂ ಮುಟ್ಟಲಾರೆ” ಎಂದಳು!
ಪ್ರಾಣವೇ ಆಗಿದ್ದ ಪತಿಯು ಎಷ್ಟೇ ಧೀರ-ಶೂರನಾಗಿರಬಹುದು. ಅವನು ದೊಡ್ಡ ಆಪತ್ತಿಗೆ ಸಿಲುಕಿರಬಹುದೆಂಬ ಶಂಕೆ ಬಂದರೂ ಸೀತೆಯಂತಹ ಪತ್ನಿಗೆ ಎದೆಯೊಡೆದುಹೋಗುವಷ್ಟು ದುಃಖ-ಆತಂಕಗಳನ್ನು ಉಂಟುಮಾಡುವಂತಹುದೇ. ಈ ಸನ್ನಿವೇಶದ ವಿಮರ್ಶೆಮಾಡುವುದು ಇಲ್ಲಿ ನಮ್ಮ ಉದ್ದೇಶ.
ಸೀತೆ ಮಹಾಸಾಧ್ವಿ; ಅವಳಿಗೆ ಬಹಳ ದುಃಖವಾಗಿದೆ - ಎನ್ನುವುದೆಲ್ಲ ನಿಜವೇ ಆದರೂ, ಲಕ್ಷ್ಮಣನು ತಾನೆ ಎಂತಹವನು? ಧರ್ಮಾತ್ಮನೂ ಜಿತೇಂದ್ರಿಯನೂ ಆದವನು! ಅಂತಹವನಿಗೆ ಆ ರೀತಿಯ ಮಾತುಗಳನ್ನಾಡಿದ್ದು ನ್ಯಾಯವೇ? - ಎಂಬುದು ಮೊದಲ ಪ್ರಶ್ನೆ. ಎರಡನೆಯದೊಂದಿದೆ. ಕೋಪದ ಭರದಲ್ಲಿ ಆ ಮಾತುಗಳನ್ನು ಅವಳು ಆಡಿದಳಾದರೂ, ಮುಂದೆಂದಾದರೂ ಅವಳು ಲಕ್ಷ್ಮಣನಲ್ಲಿ ಕ್ಷಮಾಯಾಚನೆ ಮಾಡಿದಳೇ? ಇಲ್ಲವಲ್ಲ? ಸಾಧ್ವಿಯಾದವಳು ಹೀಗೆ ಮಾಡಬಹುದೇ? -
ಸೀತೆಗೆ ಲಕ್ಷ್ಮಣನ ಗುಣಗಳ ಬಗ್ಗೆ ತಿಳಿದಿಲ್ಲವೇ? ಶ್ರೀರಾಮನಿಗೆ ತನಗಿಂತ ಪ್ರೀತಿಪಾತ್ರನಾದವನು ಅವನು - ಎಂಬುದು ಅವಳಿಗೆ ಗೊತ್ತು. ಮುಂದೆ, ಸುಂದರಕಾಂಡದಲ್ಲಿ ಅವಳು ಆಂಜನೇಯನನ್ನು ಕುರಿತು ಆಡುವ ಮಾತುಗಳಿಂದ ಇದು ತಿಳಿಯುತ್ತದೆ.
ಶ್ರೀರಾಮನ ಸಹಾಯಕ್ಕೆ ಹೋಗಲೆಂದು ಪ್ರಚೋದಿಸಲು ಆಕೆ ಆ ಪರುಷವಾದ ಮಾತುಗಳನ್ನು ಆಡಿದಳು - ಎಂದು ಕೆಲವರು ಹೇಳುತ್ತಾರೆ. ಇಲ್ಲ, ಕೋಪ-ದುಃಖಗಳಿಂದಾಗಿ ಅವಳು ಆ ಮಾತುಗಳನ್ನಾಡಿರುವುದೇ ವಿನಾ, ಮತ್ತೇನೂ ಅಲ್ಲ – ಎಂದು ಇನ್ನು ಕೆಲವರು. ಕ್ರೂರವಾಗಿದ್ದರೂ ಆ ಸಂನಿವೇಶದಲ್ಲದು ಸಹಜವೆಂದು ಮತ್ತೆ ಕೆಲವರ ಅನಿಸಿಕೆ. ಹೇಗೇ ಇರಲಿ, ಅವಳು ಮಾನಸಿಕವಾಗಿಯಾದರೂ ತಾನಾಡಿದ ಈ ಮಾತುಗಳ ಬಗ್ಗೆ ಪಶ್ಚಾತ್ತಾಪಪಡುವುದಾಗಲೀ, ಕ್ಷಮೆ ಕೇಳುವುದಾಗಲೀ ಮುಂದೆಲ್ಲೂ ನಮಗೆ ಕಂಡುಬರುವುದಿಲ್ಲ.
ಸೀತಾದೇವಿಯು ಮಹಾಧರ್ಮಿಷ್ಠೆ; ಅಂತಹವಳು ತನ್ನಿಂದ ತಪ್ಪಾಗಿದ್ದೂ ಕ್ಷಮೆಯಾಚಿಸದಿರುವುದು ಸಾಧ್ಯವೇ? ಸಾಧುವೇ? ಆಕೆಯ ಸ್ವಭಾವಕ್ಕೆ ಅದೆಂದೂ ಹೊಂದಿಕೆಯಾಗದಿರುವಂತಹ ನಡತೆಯಾಗದೇ? ಹೀಗಾಗಿ, ಇವೆರಡೂ ಸಮಾಧಾನಕರವಾದ ವಿವರಣೆಯಾಗವು.
ಈ ಬಗ್ಗೆ ಶ್ರೀರಂಗಮಹಾಗುರುಗಳ ಉತ್ತರವು ನಮಗೆ ಸಮಂಜಸವಾಗಿ ತೋರುತ್ತದೆ.
ಲಕ್ಷ್ಮಣನು ಶುದ್ಧಾತ್ಮನೆಂದು ಸೀತೆಗೆ ತಿಳಿದಿದ್ದರೂ, ಆತ್ಮಪ್ರಿಯನಾದ ಪತಿ ಪ್ರಾಣಸಂಕಟದಲ್ಲಿದ್ದಾನೆ - ಎಂದು ಬಲವಾಗಿ ಅನ್ನಿಸಿಬಿಟ್ಟಿದೆ. ಸಾಧ್ವಿಯೂ ಸ್ತ್ರೀಪ್ರಕೃತಿಯೂ ಆದ ಅವಳಿಗೆ, ಆ ಸಂನಿವೇಶದಿಂದ ಮಾನಸಿಕ ಹತೋಟಿ ತಪ್ಪಿ ಸನ್ನಿಪಾತಜ್ವರದ ರೋಗಿಗೆ ಉಂಟಾಗುವಂತೆ ಭಾವೋದ್ರೇಕದ ಸ್ಥಿತಿ (delirium) ಉಂಟಾಗಿದೆ. ಹಾಗಾದಾಗ ತಾನು ಹೇಳುತ್ತಿರುವ ಮಾತು ಸರಿಯೇ ತಪ್ಪೇ ಎಂಬ ವಿವೇಕವೇ ಇರುವುದಿಲ್ಲ. ಹಾಗಾಗಿ ಏನೇನೋ ಬಡಬಡಿಸಿದ್ದಾಳೆ.
ಡೆಲಿರಿಯಮ್ ಸ್ಥಿತಿಯಿಂದ ಹೊರಬಂದಮೇಲೆ ಹೇಗಿರುತ್ತದೆ? ಆ ಸ್ಥಿತಿಯಲ್ಲಿದ್ದಾಗ ಏನು ಹೇಳಿದ್ದೆವು ಎನ್ನುವ ನೆನಪೇ ಇರುವುದಿಲ್ಲ! ನೆನಪೇ ಇಲ್ಲದಿರುವ ಕಾರಣ ಪಶ್ಚಾತ್ತಾಪಪಡುವ ಪ್ರಶ್ನೆಯಾಗಲಿ, ಕ್ಷಮೆ ಯಾಚಿಸುವ ಪ್ರಶ್ನೆಯಾಗಲಿ ಬರುವುದಿಲ್ಲ.
ಹೋಗಲಿ, ಮತ್ತಾರಾದರೂ ಅವಳಿಗೆ ನೆನಪಿಸಬಹುದಿತ್ತಲ್ಲವೇ? – ಎಂದರೆ, ಲಕ್ಷ್ಮಣನೊಬ್ಬನೇ ಆ ಮಾತುಗಳನ್ನು ಕೇಳಿದ್ದನಾದ್ದರಿಂದ ಅದೂ ಅಶಕ್ಯವೇ.
ಶುದ್ಧಚಾರಿತ್ರನಾದ ಲಕ್ಷ್ಮಣನನ್ನು ಕುರಿತು ಮಹಾಸಾಧ್ವಿಯಾದ ಸೀತಾಮಾತೆಯು ಕಠೋರವೂ ಅವಿವೇಕಪೂರ್ಣವೂ ಆದ ಮಾತುಗಳನ್ನಾಡಿದಳೆಂದು ನಮಗೆ ಅಸಮಾಧಾನವಾಗಿತ್ತಲ್ಲವೇ? ಆ ಬಗ್ಗೆ ಶ್ರೀರಂಗಮಹಾಗುರುಗಳಿತ್ತಿರುವ ಸಮಂಜಸವೂ ಸರಳವೂ ಆದ ಈ ಸಮಾಧಾನವು ನಮ್ಮ ತಳಮಳವನ್ನು ಸಮರ್ಥವಾಗಿ ಶಮನಗೊಳಿಸುವುದಲ್ಲವೇ?
ಸೂಚನೆ : 30/09/2026 ರಂದು ಈ ಲೇಖನವು ವಿಜಯವಾಣಿದ ಸತ್ಸಂಗ ಪತ್ರಿಕೆಯಲ್ಲಿ ಪ್ರಕಟವಾಗಿದೆ.