Sunday, May 3, 2026

ಭಗವದಾನಂದಕ್ಕೆ ಪಾತ್ರರಾಗಲು ಮಾರ್ಗ ಯಾವುದು ? (Bhagavadanandakke Patraragalu Marga Yavudu?)

ವಿದುಷಿ ; ಸೌಮ್ಯಾ ಪ್ರದೀಪ್  ಎ. ಜೆ.

ಪ್ರತಿಕ್ರಿಯಿಸಿರಿ (lekhana@ayvm.in)


Screenshot 2026-05-03 165237.png

ಶಿಶುಪಾಲವಧೆ ಎಂಬ ಮಹಾಕಾವ್ಯದಲ್ಲಿ ಬರುವಂತಹ ಪ್ರಸಂಗ, ಪರಮಾತ್ಮನು ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆಗಾಗಿ ಶ್ರೀಕೃಷ್ಣನ ರೂಪದಲ್ಲಿ ಭುವಿಯಲ್ಲಿ ಅವತರಿಸಿ ದ್ವಾರಕೆಯಲ್ಲಿರುತ್ತಾನೆ. ದೇವತೆಗಳ ಆಶಯದಂತೆ ಒಮ್ಮೆ ದೇವರ್ಷಿ ನಾರದರು , ಶಿಶುಪಾಲ ಎಂಬ ದುಷ್ಟನ ವಧೆ ಸನ್ನಿಹಿತವಾಗಿದೆ ಎಂದು ವಿಜ್ಞಾಪಿಸಿಕೊಳ್ಳಲು ಶ್ರೀಕೃಷ್ಣನ ಬಳಿಗೆ ಬರುತ್ತಾರೆ. ನಾರದರ ಆಗಮನದಿಂದ ಶ್ರೀಕೃಷ್ಣ ಪರಮಾತ್ಮನಿಗೆ ಅತ್ಯಂತ ಸಂತೋಷ ಉಂಟಾಗುತ್ತದೆ, ನಾರದರು ಅರಮನೆಗೆ ಬಂದು ಭೂ ಸ್ಪರ್ಶ ಮಾಡುವುದರೊಳಗಾಗಿ ಕೃಷ್ಣನು ತನ್ನ ಸಿಂಹಾಸನದಿಂದ ಕೆಳಗಿಳಿದು ಅವರಿಗೆ ಸ್ವಾಗತವನ್ನು ನೀಡುತ್ತಾನೆ. ನಾರದರಿಗೆ ಅರ್ಘ್ಯ, ಪಾದ್ಯ ಮೋದಲಾದವುಗಳನ್ನು ನೀಡಿ ಆದರಪೂರ್ವಕವಾಗಿ ಸತ್ಕರಿಸುತ್ತಾನೆ. ತಮ್ಮಂತಹ ಮಹಾತ್ಮರ ದರ್ಶನವು ಜೀವಿಗಳಿಗೆ ಭೂತ, ಭವಿಷ್ಯತ್ ಮತ್ತು ವರ್ತಮಾನವೆಂಬ ಮೂರು ಕಾಲಗಳ  ಪಾಪವನ್ನು ಪರಿಹರಿಸಿ ಮಂಗಳವನ್ನುಂಟುಮಾಡುತ್ತದೆ ಎಂಬುದಾಗಿ ನಾರದರನ್ನು ಕುರಿತು ಹೇಳುತ್ತಾನೆ. ನಾರದರ ಆಗಮನದಿಂದ ಶ್ರೀಕೃಷ್ಣನಿಗೆ ಉಂಟಾದ ಆನಂದವನ್ನು ಕವಿಗಳು ಹೀಗೆ ವರ್ಣಿಸುತ್ತಾರೆ, 'ಪ್ರಳಯ ಕಾಲದಲ್ಲಿ ಸಮಸ್ತ ಜಗತ್ತನ್ನು ತನ್ನಲ್ಲಿ ಅಡಗಿಸಿಟ್ಟುಕೊಳ್ಳುವ ಪರಮಾತ್ಮನಿಗೆ ನಾರದರ ಆಗಮನದಿಂದ ಉಂಟಾದ ಆನಂದವನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳಲಾಗಲಿಲ್ಲ ಅದು ತುಂಬಿ ಹರಿದು ಪ್ರಕಟವಾಯಿತು' ಎಂಬುದಾಗಿ. ಭಗವಂತನು ತನ್ನ ಭಕ್ತರ ವಿಷಯದಲ್ಲಿ ಯಾವ ರೀತಿ ಆನಂದವನ್ನು ಹೊಂದಿರುತ್ತಾನೆ, ಅದನ್ನು ಯಾವ ರೀತಿ ಪ್ರಕಟಪಡಿಸುತ್ತಾನೆ ಎಂಬುದನ್ನು ಇಲ್ಲಿ ಕಾಣಬಹುದು.

ನಾರದರು ಭಕ್ತ ಶ್ರೇಷ್ಠರಲ್ಲಿ ಅಗ್ರಗಣ್ಯರು, ಸದಾ ಶ್ರೀಮನ್ನಾರಾಯಣನನ್ನು ಮನಸ್ಸಿನಲ್ಲಿ ತುಂಬಿಕೊಂಡು ಅವನ ಸ್ಮರಣೆ ಮಾಡುತ್ತಾ ಮೂರು ಲೋಕದಲ್ಲಿಯೂ ಸಂಚಾರ ಮಾಡುವವರು. ತಾವು ಭಕ್ತಿ ಮಾರ್ಗದಲ್ಲಿ ನಡೆಯುವುದು ಮಾತ್ರವಲ್ಲದೇ ಲೋಕವೆಲ್ಲವನ್ನು ಆ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಣೆ ನೀಡಿದವರು. ಪ್ರಹ್ಲಾದ, ಧ್ರುವ ಮುಂತಾದ ಭಾಗವತೋತ್ತಮರಿಗೆ ಭಕ್ತಿಮಾರ್ಗವನ್ನು ಉಪದೇಶಿಸಿ ಅವರ ಉದ್ಧಾರಕ್ಕೆ ಕಾರಣ ರಾದವರು, ದುಷ್ಟವ್ಯಾಧನಾದಂತಹ ರತ್ನಾಕರನನ್ನು ವಾಲ್ಮೀಕಿ ಮಹರ್ಷಿಗಳನ್ನಾಗಿ ಪರಿವರ್ತಿಸಿ ಪರಮಪಾವನಕರವಾದ ಶ್ರೀಮದ್ ರಾಮಾಯಣವನ್ನು ರಚಿಸಲು ಪ್ರೇರಣೆಯನ್ನು ನೀಡಿದವರು. ಹೀಗೆ ಸದಾ ಕಾಲ ತಮ್ಮನ್ನು ಭಗವತ್ ಕಾರ್ಯದಲ್ಲಿ, ಭಗವತ್ ಸೇವೆಯಲ್ಲಿ ತೊಡಗಿಸಿಕೊಂಡವರು. ಅಂತಹ ನಾರದರ ವಿಷಯದಲ್ಲಿ ಭಗವಂತನು ಸಂತೋಷಗೊಳ್ಳುವುದು ಸಹಜವೇ ಆಗಿದೆ.

ನಾರದ ಮಹರ್ಷಿಗಳು ದೇವತೆ, ರಾಕ್ಷಸ ಮನುಷ್ಯ ಎಂಬ ಭೇದವಿಲ್ಲದೆ ಎಲ್ಲರನ್ನೂ ಭಗವಂತನಿಗೆ ಅಭಿಮುಖವಾದ ದೈವೀಮಾರ್ಗದಲ್ಲಿ ನಡೆಯುವಂತೆ ಪ್ರಚೋದನೆಯನ್ನು ನೀಡಿದವರು. ಏಕೆಂದರೆ ಪರಮ ಕರುಣಾಮಯರಾದ ಅವರು ನೋಡುತ್ತಿದ್ದದು ಹೊರರೂಪವನ್ನಲ್ಲ, ಶರೀರದ ಒಳಗಿರುವ ಆತ್ಮವನ್ನು ಹಾಗೂ ಅದರ ಉದ್ಧಾರವನ್ನು.

ಏಕೆಂದರೆ ಈ ಶರೀರ ಅನ್ನುವುದು ಯಾವುದೋ ಒಂದು ಪೂರ್ವಜನ್ಮಕೃತ ಪುಣ್ಯ-ಪಾಪಕ್ಕೆ ಅನುಗುಣವಾಗಿ ಬಂದಿರುವಂತಹದು. ರಾಕ್ಷಸರಾಗಿ ಹುಟ್ಟಿದವರ ಪೂರ್ವವೃತ್ತಾಂತವನ್ನು ನಾವು ಇತಿಹಾಸ ಪುರಾಣಗಳಲ್ಲಿ ಕೇಳಿದ್ದೇವೆ. ನಮ್ಮ ಪುಣ್ಯ ಪಾಪಗಳನ್ನು ಕಡೆದುಕೊಂಡು ಭಗವಂತನ ಸಾನಿಧ್ಯವನ್ನು ಹೊಂದುವುದಕ್ಕೆ ಅವನ ಸ್ಮರಣೆಯ ಜೊತೆ ಜೊತೆಗೆ ಅವನಿಗೆ ಅಭಿಮುಖವಾಗಿ ನಡೆಯುವುದೊಂದೆಯೊಂದೇ ದಿವ್ಯವಾದ ಔಷಧ. ಅಂತಹ ಔಷಧವು ಪ್ರತಿಯೊಂದು ಜೀವಿಗೂ ಬೇಕು. ನಾರದರು ಹಾಗೂ ಅವರಂತೆಯೇ ಕರುಣಾಮಯರಾದ ಅನೇಕ ಮಹರ್ಷಿಗಳು ಪ್ರತಿಯೊಂದು ಜೀವದ ಉದ್ಧಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡು  ಭಗವಂತನಿಗೆ ಅಭಿಮುಖವಾಗಿ ನಡೆಯುವಂತಹ ಭಾರತೀಯ ಸಂಸ್ಕೃತಿಯನ್ನು ರೂಪಿಸಿಕೊಟ್ಟಿದ್ದಾರೆ. ನಮ್ಮ ನಡೆ, ನುಡಿ ವ್ಯವಹಾರದಲ್ಲಿ ಆ ರೀತಿಯ ಜೀವನ ಶೈಲಿಯನ್ನು ರೂಪಿಸಿ ಕೊಳ್ಳುವಂತೆ ದಾರಿಯನ್ನು ಮಾಡಿಕೊಟ್ಟಿದ್ದಾರೆ. ಏಕೆಂದರೆ ಭಗವಂತನಿಗೆ ಅಭಿಮುಖವಾಗಿ ನಮ್ಮ ಮನಸ್ಸನ್ನು ಕರೆದುಕೊಂಡು ಹೋಗುತ್ತಾ ಇದ್ದಾಗ ಮನಸ್ಸಿನಲ್ಲಿ ಪಾಪರೂಪದಲ್ಲಿ ಅಡಕವಾಗಿರುವ ಕಲ್ಮಶವೆಲ್ಲವೂ ನಾಶವಾಗುತ್ತದೆ ಹಾಗೂ ಮನೋಬುದ್ಧಿಗಳಲ್ಲಿ ತುಂಬಿರುವ ಅಂಧಕಾರ ತೊಲಗಿ ಜ್ಞಾನ ರೂಪದಲ್ಲಿರುವ ಭಗವಂತನ ದರ್ಶನ ಸನ್ನಿಹಿತವಾಗುತ್ತದೆ. ತಾವೂ ಭಗವನ್ಮಾರ್ಗದಲ್ಲಿ ನಡೆದು ತಮ್ಮ ಸುತ್ತಲಿರುವವರನ್ನು ಆ ಮಾರ್ಗದಲ್ಲಿ ನಡೆಯುವಂತೆ ಯಾರು ಪ್ರೇರೇಪಿಸುತ್ತಾರೋ ಅವರು ಮಾಡುವುದೇ ನಿಜವಾದ ಭಗವತ್ಕಾರ್ಯ ಹಾಗೂ ಭಗವಂತನಿಗೆ ಅತ್ಯಂತ ಸಂತೋಷವನ್ನುಂಟು ಮಾಡುವ ಸೇವೆ. ಅಂತಹ ಕಾರ್ಯವನ್ನು ಮಾಡುವವರ ವಿಷಯದಲ್ಲಿ ತಾನೇ ಭಗವಂತ ಅತ್ಯಂತ ಸಂತುಷ್ಟನಾಗುತ್ತಾನೆ! ಏಕೆಂದರೆ ಅಂತಹ ಮಾರ್ಗದಲ್ಲಿ ನಡೆದಾಗ ಮಾತ್ರ ಲೋಕಕಲ್ಯಾಣ ಮತ್ತು ಆತ್ಮಕಲ್ಯಾಣ ಇವೆರಡೂ ಸಾಧ್ಯ. "ಹುಟ್ಟಿದ ಮೇಲೆ ಹೇಗೆ ಹೇಗೆಯೋ ಬಾಳುವ ಬದಲು ದೈವೀ ಮಾರ್ಗ ಹಿಡಿಯಿರೀಪ್ಪ!" ಎಂಬ ಮಾತನ್ನು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು. ನಮ್ಮ ಮನಸ್ಸು ಬುದ್ಧಿ ,ಆತ್ಮ ಎಲ್ಲವನ್ನು ಶುದ್ಧಗೊಳಿಸುವ ದೈವೀ ಮಾರ್ಗವನ್ನು ಹಿಡಿದು  ಮಹರ್ಷಿಗಳ ಆಶಯದಂತೆ ಸುಕೃತವಾದ ಜೀವನವನ್ನು ನಡೆಸೋಣ. ಭಗವದಾನಂದಕ್ಕೆ ಪಾತ್ರರಾಗೋಣ.

ಸೂಚನೆ : 2/04/2029 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.