Sunday, October 19, 2025

ಅಷ್ಟಾಕ್ಷರೀ - 78 ದೀಪಾತ್ ದೀಪಾಂತರಂ ಯಥಾ (Astakshari 78)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಇದೋ ಬಂದಿತು ದೀಪೋತ್ಸವ, ಈ ಬಾರಿಯ ಮಹಾದೀಪೋತ್ಸವ!

೨೦೨೫ರ ಅಯೋಧ್ಯಾದೀಪೋತ್ಸವವು (ಅಕ್ಟೋಬರ್ ೧೯) ಗಿನ್ನಿಸ್ ದಾಖಲೆಗಳಲ್ಲಿ ಸೇರಲಿರುವುದು. ಏಕೆ? 

ನಿಮಗೆ ಹದಿನಾಲ್ಕರ ಮಗ್ಗಿ ಬರುತ್ತದೆಯೇ? ಇದೋ ನೋಡಿ. ರಾವಣ ಸಂಹಾರದೊಂದಿಗೆ ಹದಿನಾಲ್ಕು ವರ್ಷ ವನವಾಸ ಮುಗಿಸಿ ಬಂದರಲ್ಲವೇ ರಾಮ-ಸೀತೆ-ಲಕ್ಷ್ಮಣರು ಅಯೋಧ್ಯೆಗೆ? ಹಿಂದಿರುಗಿ ಬಂದಂದು ಅದೆಷ್ಟು ಸಂಭ್ರಮವಿದ್ದಿತೋ!

ಈ ಬಾರಿ ೨೮ ಲಕ್ಷ ದೀಪಗಳು; ಸರಯೂನದೀತೀರದ ೫೬ ಘಟ್ಟಗಳಲ್ಲಿ (೧೪*೨, ೧೪*೪)! ಈ ಪ್ರಮಾಣದ ಜಗಮಗಾಯಿಸುವ ದೀಪಗಳ ಹಬ್ಬವು ವಿಶ್ವದ ಇತಿಹಾಸದಲ್ಲೇ ಇದ್ದಿರಲಾರದು. ರಾಷ್ಟ್ರವೇ ಸಂಭ್ರಮಿಸುವ ಹಬ್ಬವಿದು. ಅಂದಲ್ಲಿಯ ದೀಪಮಾಲೆಗಳೇನು, ನದಿಯಲ್ಲಿ ಅವುಗಳ ಪ್ರತಿಫಲನವೇನು, ಮಂತ್ರ-ಸ್ತೋತ್ರ-ಘೋಷಗಳೇನು - ಎಲ್ಲವೂ ಕಣ್ಣು-ಕಿವಿಗಳಿಗೆ ಹಬ್ಬವೇ!

ಇಲ್ಲಿರಲಿ, ಅಮೆರಿಕದ ನ್ಯೂಯಾರ್ಕ್-ನ್ಯೂಜರ್ಸಿ-ಪೆನ್ಸಿಲ್ವೇನಿಯಾಗಳಲ್ಲೂ ಇದರಾಚರಣೆಗಾಗಿ ರಜೆಯುಂಟು. ನಮ್ಮ ಸಂಸ್ಕೃತಿಯೊಳಗೇ ಜನಿಸಿದ ಬೌದ್ಧ-ಜೈನ-ಸಿಕ್ಖಮತಗಳಲ್ಲೂ ಇದರ ಆಚರಣೆಯುಂಟು. 

ಏನು ದೀಪಾವಲಿಯೆಂದರೆ? ಆವಲಿಯೆಂದರೆ ಸಾಲು. ದೀಪಗಳ ಸಾಲೇ ದೀಪಾವಲಿ. ಕಾರ್ತಿಕಮಾಸವೇ ದೀಪಗಳನ್ನು ಬೆಳಗಿಸುವ ಮಾಸ. ಮಾಸದ ಕೊನೆಯಲ್ಲಿ ಶಿವದೀಪೋತ್ಸವ/ವಿಷ್ಣುದೀಪೋತ್ಸವಗಳು. ದೀಪಾವಲಿಯು ನಾಲ್ಕೈದು ದಿನಗಳ ಹಬ್ಬ. ವಿಷ್ಣು-ಲಕ್ಷ್ಮೀ-ಶಿವ-ಯಮ-ಕುಬೇರ ಮುಂತಾದವರಿಗಿಲ್ಲಿ ಬೆಳಕಿನಾರತಿಯುಂಟು. ಮದ್ದಿನ ಪಟಾಕಿಗಳ ಬಾಣ-ಬಿರುಸುಗಳ ಬೆಳಕು-ಸದ್ದುಗಳ ಸಡಗರವೆಲ್ಲೆಡೆಯುಂಟು. 

ತ್ರಯೋದಶಿಯಂದು ಯಮಪ್ರೀತಿಗಾಗಿ ಮನೆಯಾಚೆ ಹಚ್ಚುವ ದೀಪಗಳು ಅಪಮೃತ್ಯುನಿವಾರಕ. ಚತುರ್ದಶಿ-ಅಮಾವಾಸ್ಯೆಗಳ ರಾತ್ರಿ ಉರಿಯುವ ದೀಪಿಕೆ(ಕೊಳ್ಳಿ)ಗಳ ಉಜ್ಜ್ವಲಜ್ಯೋತಿಸ್ಸಿನಿಂದ ಪಿತೃಗಳಿಗೆ ಸದ್ಗತಿಪ್ರಾಪ್ತಿ .ಅಮಾವಾಸ್ಯೆಯಂದಂತೂ ಮನೆತುಂಬ ದೀಪಗಳು. ಪಾಡ್ಯಮಿಯಂದು ಬಲೀಂದ್ರಪೂಜೆಯಲ್ಲಿ ಧೂಪ-ದೀಪ-ನೈವೇದ್ಯಗಳು. ಅಮಾವಾಸ್ಯೆಯ ಕಗ್ಗತ್ತಲ ರಾತ್ರಿಯಲ್ಲಿ ಬೆಳಗುವ ಬೆಳಕುಗಳ ಸಾಲು ನಯನೋತ್ಸವವೇ ಸರಿ. 

ನಿತ್ಯಗಟ್ಟಲೆಯಲ್ಲೂ ಭಾರತೀಯರಲ್ಲಿ ದೀಪ ಹಚ್ಚದ ಮನೆಯುಂಟೇ? ಪೀಡಾಪರಿಹಾರಕ್ಕಾಗಿ ಎಳ್ಳೆಣ್ಣೆಯ ದೀಪ; ಅಭ್ಯುದಯ-ನಿಃಶ್ರೇಯಸಗಳಿಗಾಗಿ ತುಪ್ಪದ ದೀಪ. 

ದೀಪವು ಜ್ಞಾನದ ಪ್ರತೀಕ. ಇದರ ವಿರುದ್ಧವಾದ ತಮಸ್ಸೆಂದರೆ ಕತ್ತಲೆಯೂ ಅಜ್ಞಾನವೂ ಆಗುವುದು. ತಮಸ್ಸಿನಿಂದ ಜ್ಯೋತಿಸ್ಸಿನತ್ತ ಒಯ್ಯೆಂಬುದೇ ಭಾರತೀಯರೆಲ್ಲರ ನಿತ್ಯಪ್ರಾರ್ಥನೆ. ತಮಸ್ಸನ್ನೇ ಪ್ರೀತಿಸುವವರೆಂದರೆ ಭೂತ-ಪ್ರೇತಗಳು, ಗೂಬೆ-ಜಿರಲೆಗಳು, ಕಳ್ಳ-ಕಾಕರುಗಳು. ಹಚ್ಚಿದ ದೀಪವನ್ನು ಆರಿಸುವುದಂತೂ ಅತ್ಯಂತ ಅಸಂಸ್ಕೃತರ ಲಕ್ಷಣವೇ ಸರಿ. 

ಭಗವಂತನೇ ಮೊಟ್ಟಮೊದಲ ದೀಪ. ಜ್ಯೋತಿಸ್ಸುಗಳಿಗೂ ಆತನು ಜ್ಯೋತಿಸ್ಸು – ಎನ್ನುತ್ತದೆ ಗೀತೆ. ಭಗವಂತನಿಗೆ ಬೆಳಗುವ ದೀಪವು ಅಂಗುಷ್ಠ-ಪರ್ವದಷ್ಟಿರಬೇಕು, ಮಲ್ಲಿಗೆಯ ಮೊಗ್ಗಿನಂತಿರಬೇಕು – ಎಂದು ಶ್ರೀರಂಗಮಹಾಗುರುಗಳು ತಿಳಿಸಿರುವರು.

ಈಚೆಗೆ ದೇವಸ್ಥಾನಗಳಲ್ಲಿ ಹಾಗೂ ಮನೆಗಳಲ್ಲೂ ಪುಳಕ್-ಪುಳಕ್ ಎಂದು ಹತ್ತಿ-ಆರಿ-ಹತ್ತಿ-ಆರುವ ವಿದ್ಯುದ್ದೀಪಗಳನ್ನು ಹಚ್ಚುವುದುಂಟು. ಅದಾಗಲಿ, ಕಣ್ಣುಕೋರೈಸುವ ದೀಪವಾಗಲಿ, ಪ್ರಶಸ್ತವಲ್ಲ; ಮೊದಲನೆಯದು ಚಾಂಚಲ್ಯವರ್ಧಕ; ಎರಡನೆಯದು ನೇತ್ರ-ಚಿತ್ತಗಳಿಗೆ ಶಮವನ್ನು ತರುವುದಲ್ಲ - ಎಂಬ ಮರ್ಮಗಳನ್ನೂ ಅವರು ತಿಳಿಸಿದ್ದರು.

ದೇವದೇವನಾದ ಜಗತ್ಪತಿಯೊಬ್ಬನೇ ಜ್ಯೋತಿರ್ಮಯನೆಂದಲ್ಲ. ಎಲ್ಲ ದೇವತೆಗಳೂ ಬೆಳಗುವವರೇ. ದೇವ ಎಂಬ ಪದದ ಮೂಲ ಸಂಸ್ಕೃತದ ದಿವ್-ಧಾತು. ಬೆಳಗುವುದು ಎಂದದರರ್ಥ. ದೇವರೆನ್ನಲು ಗ್ರೀಕ್-ಲ್ಯಾಟಿನ್-ಗಳಲ್ಲಿರುವ ಥಿಯೋಸ್(theos) ಹಾಗೂ ಡೇಯುಸ್ (deus) ಎಂಬ ಪದಗಳು ಸಹ ಸಂಸ್ಕೃತಜನ್ಯಗಳೇ! 

ಬೈಬಲ್ಲಿನಲ್ಲೂ ದೇವರನ್ನು ಬೆಳಕೆಂದು ಕರೆದಿದೆ, ಸರಿಯೇ. ಮ್ಯಾಕ್‍ಡೋನೆಲ್ ಎಂಬ ಸಂಸ್ಕೃತ-ವಿದ್ವಾಂಸನು ಹೇಳಿರುವಂತೆ, ಭಗವಂತನನ್ನು ಬೆಳಕೆಂದು ಜಗತ್ತಿನ ಇತಿಹಾಸದಲ್ಲೇ ಮೊಟ್ಟಮೊದಲು ಸಾರಿರುವುದು ಹಿಂದೂಗಳ ವೇದಗಳೇ.

ನರಕಚತುರ್ದಶಿಯಂದು ಆಚರಿಸುವ ಹಬ್ಬವೂ ಅಂತರ್ಜ್ಯೋತಿಯನ್ನು ಆರಾಧಿಸುವ ಹಬ್ಬವೇ. ನರಕಾಸುರನ ನಗರವು ಪ್ರಾಗ್‍-ಜ್ಯೋತಿಷ. ಪ್ರಾಗ್‍ಜ್ಯೋತಿಷವೆಂದರೆ ಹೊರಬೆಳಕು, ಅರ್ಥಾತ್ ಇಂದ್ರಿಯಗಳ ಬೆಳಕು; ಶ್ರೀಕೃಷ್ಣನು ಪ್ರತ್ಯಗ್‍-ಜ್ಯೋತಿಸ್ಸು - ಎಂದರೆ ಒಳಬೆಳಕು. ಇಂದ್ರಿಯಗಳ ಬೆಳಕಿನಲ್ಲಿ/ಇಂದ್ರಿಯ-ಸುಖಗಳಲ್ಲಿ ಮಾತ್ರವೇ ರಮಿಸುವವರು ತುಚ್ಛರು; ಕುತ್ಸಿತ ನರನನ್ನೇ "ನರಕ"ನೆನ್ನುವುದು; ಮಾನವನ ಮಾನವತ್ವವಿರುವುದಾದರೂ, ಮನುಷ್ಯಜನ್ಮಕ್ಕೇ ಮೀಸಲಾಗಿರುವ ಅಂತರ್ಜ್ಯೋತಿಯ ದರ್ಶನದ ಪರಮಸುಖವನ್ನು ಅನುಭವಿಸುವುದರಲ್ಲೇ - ಎಂಬಿವೆಲ್ಲವನ್ನೂ ಶ್ರೀರಂಗಮಹಾಗುರುಗಳು ವಿವರಿಸಿರುವರು.

ದೀಪವನ್ನು ಹಚ್ಚುವುದು ದೇವರಿಗೇನೋ ಉಪಕಾರವಾಗಲೆಂದಲ್ಲ. ಭಗವಂತನೇ ದೀಪ-ಸ್ವರೂಪನೆಂಬ ತತ್ತ್ವವನ್ನು ನಾವು ಜ್ಞಾಪಿಸಿಕೊಳ್ಳುವಂತೆ ನಮ್ಮ ಮೂಲದ ಸ್ಮರಣೆಯುಂಟುಮಾಡಿಸುವ ಅಭಿಜ್ಞಾನವದು. ಬೆಳಗುವ ಅಗ್ನಿಯಿಂದ ಬೆಳಕಿನ ಕಿಡಿಗಳು ಹೊಮ್ಮುವಂತೆ, ಭಗವಂತನಿಂದಲೇ ಹೊಮ್ಮಿದ ಜೀವಗಳು ನಾವು. ಹೀಗೆ ನಾವು ನಮ್ಮ ಮೂಲದತ್ತ ಸಾಗುವಂತಾಗಿಸುವ ದೀಪಗಳು ಹೀಗೆ ಜ್ಞಾಪಕಗಳೂ ಕಾರಕಗಳೂ ಹೌದು.

ಭಗವಂತನಿಗಾಗಿ ಹಚ್ಚಿದ ಆ ಒಂದು ಮೂಲದೀಪದಿಂದಲೇ ಉಳಿದೆಲ್ಲ ದೀಪಗಳನ್ನೂ ಹಚ್ಚಿಕೊಳ್ಳುವುದು: ಇದನ್ನೇ ದೀಪಾದ್ ದೀಪಾಂತರಂ ಯಥಾ - ಎನ್ನುವುದು. ಎಲ್ಲರ ಮನೆಗಳೂ ಮನಗಳೂ ಹೊರಗೆ ಹರ್ಷೋಲ್ಲಾಸಗಳಿಂದಲೂ, ಮತ್ತೂ ಮಿಗಿಲಾಗಿ ಒಳಗೆ ಆತ್ಮಜ್ಯೋತಿಯ ಪ್ರಕಾಶದಿಂದಲೂ, ಬೆಳಗಲೆಂದು ಪ್ರಾರ್ಥಿಸೋಣವೇ?

ಸೂಚನೆ: 18/10//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 78 ಕತ್ತಲಾಗಿಸಿ ಬೆಣ್ಣೆ ಕದ್ದವನೆಮ್ಮ ಕತ್ತಲ ಕಳೆಯಲಿ (Krishakarnamrta 78)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಗೋಪಾಲಬಾಲನು ಕಾಪಾಡಲಿ. ಎಂತಹವನು ಈ ಬಾಲಗೋಪಾಲ? ಅದನ್ನು ಒಂದು ಪ್ರಸಂಗದ ಮೂಲಕ ಕವಿ ಹೇಳಿದ್ದಾನೆ. ಬೆಳಗ್ಗೆ ಬೇಗನೇಳುತ್ತಲೇ ಕೃಷ್ಣನ ಚೇಷ್ಟಿತವೇನೆಂಬುದನ್ನೂ ಚಿತ್ರಿಸಿದ್ದಾನೆ.

ಹಿಂದೆಯೆಲ್ಲಾ ಹಳ್ಳಿಗಳಲ್ಲಿ - ಪಟ್ಟಣಗಳಲ್ಲಿ ಸಹ - ಬೆಳಗಾಗುತ್ತಲೇ ಮೊಸರನ್ನು ಗಡಿಗೆಗೆ ಹಾಕಿಕೊಂಡು, ಕಡೆಗೋಲಿಗೆ ಹಗ್ಗವನ್ನು ಕಟ್ಟಿ ಮೊಸರನ್ನು ಕಡೆಯುತ್ತಿದ್ದರು. ಎಡಗೈಲೊಮ್ಮೆ ಬಲಗೈಲೊಮ್ಮೆ ಹಗ್ಗವನ್ನು ಸೆಳೆದು ಹೀಗೆ ಮಥನ ಮಾಡುತ್ತಿದ್ದಾಗ ಗೇರ್ ಗೇರ್ ಎಂಬ ಸದ್ದು ಬರುತ್ತಿತ್ತು.

ಮಕ್ಕಳು ಮಲಗಲು ಲಾಲಿ ಹೇಳುವುದುಂಟಲ್ಲವೇ? ಮಲಗಲೊಂದು ದನಿಯಾದರೆ ಏಳಲೂ ಒಂದು ದನಿ! ಬೆಣ್ಣೆಯೆಂದರೆ ಹಾತೊರೆವ ಪುಟ್ಟಕೃಷ್ಣನಿಗೆ ಹೀಗೆ ದಧಿಯನ್ನು, ಎಂದರೆ ಮೊಸರನ್ನು, ಕಡೆಯುವ ಧ್ವನಿಗೇ ಎಚ್ಚರವಾಗಿಬಿಡುತ್ತಿತ್ತು!

ನವವಾಗಿ, ಎಂದರೆ ಹೊಸತಾಗಿ, ತೆಗೆದ ಬೆಣ್ಣೆಗೆ ತಾನೆ ನವ-ನೀತವೆನ್ನುವುದು? ಹೀಗೆ ದಧಿ-ಮಥನದ ಈ ನಿನಾದದಿಂದಲೇ, ಎಂದರೆ ಸದ್ದಿನಿಂದಲೇ, ಕೃಷ್ಣನಿಗೆ ಎಚ್ಚರವಾಗುತ್ತಿದ್ದುದು.

ಹೀಗೆ ನಿದ್ದೆ ಕಳೆದ ಕೃಷ್ಣನು ಮಾಡುತ್ತಿದ್ದುದೇನು? ನಿಭೃತವಾದ - ಅರ್ಥಾತ್ ಸದ್ದೇ ಇಲ್ಲದ - ಹೆಜ್ಜೆಗಳಿಂದ ನಡೆಯುತ್ತ ಪ್ರವೇಶಿಸುತ್ತಿದ್ದನು - ವಲ್ಲವಿಯರ ಅಗಾರಗಳನ್ನು, ಎಂದರೆ ಗೊಲ್ಲತಿಯರ ಮನೆಗಳನ್ನು.

ವಾಸ್ತವವಾಗಿ ಆಗಿನ್ನೂ ಬೆಳಗಿನ ಜಾವ. ಆ ಪ್ರಭಾತಸಮಯದಲ್ಲಿ ಇನ್ನೂ ಒಂದಿಷ್ಟು ಕತ್ತಲೆಯೇ. ಎಂದೇ ವಲ್ಲವಿಯರು ದೀಪಗಳನ್ನು ಅಲ್ಲಲ್ಲಿ ಹಚ್ಚಿಟ್ಟುಕೊಂಡಿದ್ದು ತಮ್ಮಕೆಲಸಗಳನ್ನು ಮಾಡಿಕೊಳ್ಳುತ್ತಿರುವರು. ಮೊಸರು ಕಡೆಯುವಾಗಲೂ ದೀಪಗಳು ಜೊತೆಗಿರತಕ್ಕವೇ. ಕೃಷ್ಣನು ಸ್ವಲ್ಪ ಕಪ್ಪೇ ಆದರೂ, ಆ ಬೆಳಕುಗಳಿರುವಾಗ ಕಾಣುವುದೇ ಇಲ್ಲವೆಂದೇನಲ್ಲವಲ್ಲ? ಅವಿದ್ದರೆ ತಾನು ಸಿಕ್ಕಿಹಾಕಿಕೊಳ್ಳಬಹುದೇನೋ? – ಎಂಬ ಎಚ್ಚರ ಈ ಪೋರನಿಗಿರದೇ? ಎಳೆಯವನಾದರೂ ಅಷ್ಟು ಜಾಣತನಕ್ಕೇನೂ ಕಡಿಮೆಯಿಲ್ಲ, ಈ ಕಳ್ಳಹೆಜ್ಜೆಯ ಕೃಷ್ಣನಿಗೆ.

ಎಲ್ಲ ಕಳ್ಳರಿಗೂ ತಮ್ಮ ಕೆಲಸವನ್ನು ಅರಂಭಿಸುವ ಮುಂಚೆ ಎರಡು ಎಚ್ಚರಗಳು ಇದ್ದೇ ಇರುತ್ತವೆ. ತಾನು ಹೇಗೆ ಯಾರ ಕಣ್ಣಿಗೂ ಬೀಳಬಾರದು, ಹಾಗೂ ಸಿಕ್ಕಿಕೊಳ್ಳಲೇಬಾರದು - ಎಂಬುದೊಂದು. ಮತ್ತು ಎರಡನೆಯದು, ತಾನು ಸಿಕ್ಕಿಬೀಳುವಂತಾದರೂ ಥಟ್ಟನೆ ತಪ್ಪಿಸಿಕೊಂಡು ಓಡಿಹೋಗುವುದು ಹೇಗೆ? - ಎಂಬುದು. ಎಂದೇ ಈ ಅತಿಜಾಣ ಕೃಷ್ಣನೇನು ಮಾಡಿದ್ದಾನೆ? ಉಫ್- ಎಂದು ದೀಪಗಳನ್ನು ಊದಿ ಆರಿಸಿದ್ದಾನೆ. ತನ್ನ ಬಾಯುಸಿರಿನಿಂದ ಬೇಗಬೇಗನೆ ನಂದಿಸಿದ್ದಾನೆ, ದೀಪಗಳನ್ನು.

ಎಷ್ಟಾದರೂ ಬಂದ ಕೆಲಸ ಬೇಗನೆ ಆಗಬೇಕಲ್ಲವೇ? ಇನ್ನೂ ಎಷ್ಟೆಷ್ಟು ಕಡೆ ಹೋಗಿ ಮಾಡಬೇಕಾದ ಇಂತಹವೇ ಮುಖ್ಯಕೆಲಸಗಳಿವೆಯೋ! ವಿಳಂಬವಾಗಿಬಿಟ್ಟಲ್ಲಿ, ಬೆಳಕು ಹರಿದಷ್ಟೂ ಸಿಕ್ಕಿಕೊಳ್ಳುವ ಸಂಭವವೂ ಹೆಚ್ಚೇ ಆಗುವುದಲ್ಲವೇ ಎಷ್ಟಾದರೂ?

ಈ ಸಂದರ್ಭದಲ್ಲೂ ಕವಿಯ ಮನಶ್ಚಕ್ಷುಸ್ಸಿಗೆ - ಎಂದರೆ ಮನಸ್ಸೆಂಬ ಕಣ್ಣಿಗೆ - ಮುದ್ದು ಬಾಲನ ಮುದ್ದು ಮುಖ ಗೋಚರವಾಗಿದೆ. ಹೇಗಿದೆ ಅದು? ಕಮಲದಂತಿರುವ ಮುಖವದು! ಅದರಿಂದ ಹೊಮ್ಮಿದ ಸಮೀರದಿಂದ ದೀಪವನ್ನಾರಿಸಿದ್ದಾನೆ. ಸಮೀರವೆಂದರೆ ವಾಯು.

ಆಮೇಲಿನ್ನೇನು? ದೀಪ ನಂದಿಸಿ ನವನೀತವನ್ನು ಕಬಳಿಸಿದ್ದಾನೆ.

ಹಾಗೆ ಗಬಗಬನೆ ಬೆಣ್ಣೆ ಮುಕ್ಕಿರುವ ಈ ಮುದ್ದುಮೊಗದ ಗೋಪಾಲಬಾಲನು ಕಾಪಾಡಲಿ - ಎಂದು ಶ್ಲೋಕವನ್ನು ಮುಗಿಸಿದ್ದಾನೆ, ಲೀಲಾಶುಕ.

ಶ್ಲೋಕ ಹೀಗಿದೆ:
ದಧಿ-ಮಥನ-ನಿನಾದೈಃ ತ್ಯಕ್ತ-ನಿದ್ರಃ ಪ್ರಭಾತೇ /
ನಿಭೃತ-ಪದಂ ಅಗಾರಂ ವಲ್ಲವೀನಾಂ ಪ್ರವಿಷ್ಟಃ |
ಮುಖಕಮಲ-ಸಮೀರೈಃ ಆಶು ನಿರ್ವಾಪ್ಯ ದೀಪಾನ್ /
ಕವಳಿತ-ನವನೀತಃ ಪಾತು ಗೋಪಾಲಬಾಲಃ ||

*****

ಕೃಷ್ಣನ ಆಟ ನಮ್ಮನ್ನು ಪೋಷಿಸಲಿ - ಎಂದು ಕೇಳಿಕೊಳ್ಳುತ್ತಾನೆ, ಕವಿ ಲೀಲಾಶುಕ. ಯಾವ ಆಟವದು? ಅದು ಕಟಾಕ್ಷ-ಕೇಲಿ, ಓರೆಗಣ್ಣಿನ ಆಟ. ಆ ಕಟಾಕ್ಷದ ಹಿಂದಿರುವುದು ಆತನ ಕಾರುಣ್ಯ. ಆತನ ಕರುಣಾ-ಕಟಾಕ್ಷವು ರಕ್ಷಕವು ಮಾತ್ರವಲ್ಲ, ಪೋಷಕವೂ ಹೌದು.

ಎಂತಹವನು ನಮ್ಮ ಕೃಷ್ಣ? ಆತನು ದಯಾರಾಶಿ. ರಾಶಿಯೇನು, ಸಮುದ್ರವೇ. ದಯೆಯೊಂದೇ ಆತನಲ್ಲಿರುವುದು. ಎಂದೇ ದಯೈಕಸಿಂಧು ಅವನು. ಸಿಂಧುವೆಂಬ ನದಿಯುಂಟು. ಸಿಂಧುವೆಂದರೆ ಸಮುದ್ರವೂ ಹೌದಲ್ಲವೇ? ಇಲ್ಲಿ ಎರಡನೆಯದೇ, ಸಾಗರವೆಂಬ ಅರ್ಥವೇ, ಅನ್ವಿತ. ಹಾಗಾಗಿ, ಪುಣ್ಯಶಾಲಿಗಳ ಮಟ್ಟಿಗೆ ಆತನು ದಯಾಮಾತ್ರಸಾಗರನೇ.

ಆದರೆ ಅಯ್ಯೋ, ಅತನು ನಮ್ಮ ಮನಸ್ಸಿನ ಮೇಲೆ ಹೇಗೆ ತಾನೆ ಕೆಲಸಮಾಡಿಯಾನು? ಸಾಧ್ಯವಾಗದು. ಏಕೆ? ನಮ್ಮ ಚಿತ್ತವು ತೃಷ್ಣೆಯಿಂದ ಆತುರವಾಗಿದೆ. ಆತುರವೆಂದರೆ ಬೇಗಬೇಗನೆ - ಎಂಬ ಅರ್ಥ, ಕನ್ನಡದಲ್ಲಿ. ಸಂಸ್ಕೃತದಲ್ಲಿಯ ಅರ್ಥವೇ ಬೇರೆ. ಅತುರವೆಂದರೆ ರುಗ್ಣ, ರೋಗಕ್ಕೆ ತುತ್ತಾಗಿರುವಂತಹುದು, ಪೀಡಿತವಾಗಿರುವುದು. ಆಸೆಯೆಂಬುದೇ ರೋಗ. ಹೀಗೆ ತೃಷ್ಣೆಯಿಂದ ಆತುರವಾಗಿದೆ, ನಮ್ಮ ಚಿತ್ತ. ಆಸೆಗಳೆಂಬ ರೋಗಗಳು ಬೇರುಬಿಟ್ಟಿವೆ ಚಿತ್ತದಲ್ಲಿ. "ಇಷ್ಟು ಸಿಕ್ಕರೆ ಮತ್ತಷ್ಟು ಬೇಕೆಂಬಾಸೆ" – ಎಂದು ದಾಸರು ಚಿತ್ರಿಸಿದ್ದಾರಲ್ಲವೇ? ಆಸೆಗೇನು ಅಂತವುಂಟೇ? ಆಸೆಯಿಲ್ಲದ ಕ್ಷಣವುಂಟೇ?

ಅಂತಹ ಚಿತ್ತದಲ್ಲಿ ಏನು ವಿಜೃಂಭಿಸುವುದು? ಮತ್ತೇನು, ಅಂಧಕಾರವೇ ಸರಿ. ಅದೇನು ಕಡಿಮೆ ಕತ್ತಲೆಯೇ? ಅದು ಮಹಾಂಧಕಾರವೇ ಹೌದು, ಕಗ್ಗತ್ತಲೇ ಅದು.

ಚಿತ್ತದಲ್ಲಿ ಕತ್ತಲೆಂದರೆ ಅದೊಂದು ರೂಪಕವಷ್ಟೆ. ಯಾವುದಾ ಕತ್ತಲೆ? ಮೋಹವೇ ಮಹಾಂಧಕಾರ. ತೃಷ್ಣೆಯೆಲ್ಲಿಯ ತನಕ ಇರುವುದೋ ಮೋಹವೂ ಅಲ್ಲಿಯ ತನಕ ಇರುವುದೇ. ಯಾವುದರ ಬಗ್ಗೆ ಆಸೆಯೋ ಅದರ ಬಗೆಗಿನ ಸೆಳೆತವೂ ಬಿಗಿಯೇ. ಶಿಶುಮೋಹ, ಸತಿಮೋಹ – ಎಂದು ಮುಂತಾಗಿ ಅಷ್ಟಮೋಹಗಳನ್ನು ಪಟ್ಟಿಮಾಡುವುದುಂಟಲ್ಲವೇ? ಎಂದೇ, ಅದನ್ನು ಆಗಾಗ ಸರಿಪಡಿಸಲೆಳಸಿದರೂ ಮತ್ತೆ ಮತ್ತೆ ವಿಜೃಂಭಿಸುವುದೇ ಅದು. ಹೇಗೆ ಕತ್ತರಿಸಿದರೂ ವರ್ಧಿಸುತ್ತಿರುವಂತಹುದು, ಈ ಮೋಹ. ಜೃಂಭಮಾಣವೆಂದರೆ ಬೆಳೆಯುತ್ತಿರುವುದೇ, ತಿಂದುಹಾಕಲು ಬಾಯ್ಬಿಡುತ್ತಿರುವುದೇ, ಕಬಳಿಸಲು ಹೊಂಚುತ್ತಿರುವುದೇ.

ಆ ಮೋಹವನ್ನು ಕಿತ್ತೆಸೆದರೆ, ಪರಿಣಾಮವಾಗಿ ಆಶಾಪೀಡೆಯು ತೊಲಗಿದರೆ, ಆತನ ಅಪಾಂಗಲೀಲೆಯು ಆಗ ಕೆಲಸ ಮಾಡೀತು. ಹಾಗೆಂದು ತೋರುವುದೇನೋ ಸರಿಯೇ. ಅದಕ್ಕಾಗಿ ಯತ್ನಿಸಿ ಯತ್ನಿಸಿ ಸೋಲುವುದಷ್ಟೆ ನಮ್ಮ ಪಾಡು! ಆತನೇ ಅದನ್ನು ಕೀಳಬೇಕು. ಅತನೇ ಈ ಮೋಹವೆಂಬ ಕಗ್ಗತ್ತಲನ್ನು ಕಿತ್ತು ಬಿಸಾಡಬೇಕು.

ಕದಿಯುವ ಕಲೆ ಕರಗತವಾಗಿದೆಯಲ್ಲವೇ, ಕೃಷ್ಣನಿಗೆ? ನಮಗೆ ತಿಳಿಯದಂತೆಯೇ ಅದನ್ನು ತಾನೇ ಹೊರಸಾಗಿಸಿ ತನ್ನ ಕಟಾಕ್ಷವನ್ನು ಬೀರಲಿ - ಎಂದಿಲ್ಲಿ ಬೇಡಿಕೊಂಡಿದೆ.

ಒಟ್ಟಿನಲ್ಲಿ, ಲೋಭ-ಮೋಹಗಳು ನಮ್ಮನ್ನು ಕಾಡಿಸುವುವಲ್ಲವೇ? ಅರಿ-ಷಡ್ವರ್ಗದಲ್ಲಿ ಮೂರನೆಯ ಮತ್ತು ನಾಲ್ಕನೆಯವು ಅವು. ಅವೆರಡನ್ನೂ ಮೊದಲೆರಡು ಪಾದಗಳಲ್ಲಿ ಸೂಚಿಸಿದೆ. ಅವನ್ನು ಹೋಗಲಾಡಿಸಿ ತನ್ನ ಕಡೆಗಣ್ಣೋಟವನ್ನು ಬೀರಲಿ - ಎಂಬ ಕೇಳ್ಕೆಯಿಲ್ಲಿದೆ.

ಶ್ಲೋಕದ ದ್ವಿತೀಯಾಕ್ಷರಪ್ರಾಸ ಸುವೇದ್ಯವಾಗಿದೆ. ಪ್ರಥಮಪಾದ-ತೃತೀಯಪಾದಗಳಲ್ಲಿಯ ತೃಷ್ಣಾ/ಪುಷ್ಣಾ-ಪದಗಳೂ ದ್ವಿತೀಯಪಾದ-ಚತುರ್ಥಪಾದಗಳಲ್ಲಿಯ ಮುಷ್ಣ/ಕೃಷ್ಣಗಳೂ ಅನುಪ್ರಾಸಾರ್ಥವಾಗಿಯೇ.

ಶ್ಲೋಕ ಹೀಗಿದೆ:

ತೃಷ್ಣಾತುರೇ ಚೇತಸಿ ಜೃಂಭಮಾಣಂ /
ಮುಷ್ಣನ್ ಮುಹುಃ ಮೋಹ-ಮಹಾಂಧಕಾರಂ |
ಪುಷ್ಣಾತು ನಃ ಪುಣ್ಯ-ದಯೈಕ-ಸಿಂಧೋಃ /
ಕೃಷ್ಣಸ್ಯ ಕಾರುಣ್ಯ-ಕಟಾಕ್ಷ-ಕೇಲಿಃ ||

ಸೂಚನೆ : 18/10/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Sunday, October 12, 2025

ಕೃಷ್ಣಕರ್ಣಾಮೃತ 78 ದನಕಾಯುವ ಜಗದೊಡೆಯನ ಮುಖಮಾಧುರ್ಯ (Krishakarnamrta 78)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಶ್ರೀಕೃಷ್ಣನು ನಮ್ಮನ್ನು ಕಾಪಾಡಲಿ - ಎಂಬುದಾಗಿ ಕೇಳಿಕೊಳ್ಳುವ ಶ್ಲೋಕವೊಂದು ಇಲ್ಲಿದೆ. ಇದರಲ್ಲೆಲ್ಲೂ "ಶ್ರೀಕೃಷ್ಣ" ಎಂಬ ಪದವನ್ನೇ ಬಳಸಿಲ್ಲ, ಲೀಲಾಶುಕ. ಬದಲಾಗಿ ನಾಲ್ಕು ಪಾದಗಳಲ್ಲಿ ನಾಲ್ಕು ವಿಶೇಷಣಗಳನ್ನು ಬಳಸಿದ್ದಾನೆ. ಅವುಗಳು ಹೇಳುವುದು ಕೃಷ್ಣನ ವೈಭವವನ್ನೇ ಎನ್ನುವುದು ಸ್ಪಷ್ಟವೇ ಸರಿ.

ಕೃಷ್ಣನು ಅಖಿಲೇಶ್ವರ, ಎಲ್ಲಕ್ಕೂ ಒಡೆಯ. ಆತನ ಮೈಯೂ ಆತನ ವೈಭವವೇ.

ಕೃಷ್ಣನ ಶರೀರವು ದಿವ್ಯವಾದದ್ದು. ಅದು ಕಾಂತಿಯಿಂದ ತುಂಬಿರುವುದು. ಅಷ್ಟೇ ಅಲ್ಲ, ಅದು ಪರಿಮಲಭರಿತವೂ ಹೌದು. ಕಿಶೋರಭಾವಕ್ಕೂ ಯೌವನಕ್ಕೂ ಮಧ್ಯದಲ್ಲಿರುವ ಸ್ಥಿತಿ : ಯೌವನವಿನ್ನೂ ಆವರಿಸಿಲ್ಲ, ವ್ಯಕ್ತವಾಗಿಲ್ಲ. ಆ ಅವ್ಯಕ್ತತೆಯೇ ಆತನ ಕಿಶೋರಸ್ಥಿತಿಯನ್ನು ಆವರಿಸಿದೆ.

ಮೇಲಿನ ಎರಡಂಶಗಳು ಕೃಷ್ಣನ ಶರೀರದ ಸೊಬಗನ್ನು ಸೂಚಿಸತಕ್ಕವು. ಕೃಷ್ಣನಿಗೇ ವಿಶಿಷ್ಟವಾದ ಒಂದಂಶವೂ ಉಂಟು. ಆತನು ಶಿಕ್ಷಣ ಪಡೆದುಕೊಂಡಿರುವುದು ಗವ್ಯಾನುಪಾಲನದಲ್ಲಿ. ಗವ್ಯವೆಂದರೆ ಗೋ-ಸಮೂಹ. (ಪಂಚ-ಗವ್ಯವೆನ್ನುವಾಗ ಗವ್ಯವೆಂದರೆ ಬೇರೆ ಅರ್ಥ: ಗೋವಿನಿಂದ ಜನಿಸಿದ ಪದಾರ್ಥ - ಎಂದು). ಹಸುವಿನ ಮಂದೆಯ ಅನುಪಾಲನವಿಧಿಯೆಂದರೆ ಅವನ್ನು ಕಾಯುವ ಬಗೆ. ಆ ಬಗ್ಗೆ ಆತನು ಅನುಶಿಷ್ಟ. ಅನುಶಿಷ್ಟನೆಂದರೆ ಅನುಶಾಸನಕ್ಕೆ ಒಳಪಟ್ಟಿರುವವನು, ಶಿಕ್ಷಣ ಹೊಂದಿರುವವನು.

ಇಷ್ಟಲ್ಲದೆ ಅವ್ಯಾಜ-ರಮ್ಯತೆಯೂ ಅಲ್ಲಿದೆ. ವ್ಯಾಜವೆಂದರೆ ನೆಪವೆಂದೋ ಕಾರಣವೆಂದೋ ಅರ್ಥ. ಯಾರಾದರೂ ಚೆನ್ನಾಗಿ ಕಾಣಲು ವೇಷವೋ ಭೂಷಣಗಳೋ ಕಾರಣವಾಗುವುದುಂಟು. ಅವೇನೂ ಇಲ್ಲದೆಯೇ ಯಾವುದು ಸೊಗಯಿಸುವುದೋ ಅದು ಅವ್ಯಾಜ-ರಮ್ಯ.

ಹಾಗಿರುವ ಅಖಿಲೇಶ್ವರನ ವೈಭವವು ಕಾಪಾಡಲಿ ನಮ್ಮನ್ನು - ಎಂಬುದಾಗಿ ನಮ್ಮೆಲ್ಲರಿಗೂ ರಕ್ಷಣೆಯನ್ನು ಕೋರುತ್ತಿದ್ದಾನೆ, ಲೀಲಾಶುಕ. ಶ್ಲೋಕ ಹೀಗಿದೆ:

ಸುವ್ಯಕ್ತ-ಕಾಂತಿ-ಭರ-ಸೌರಭ-ದಿವ್ಯ-ಗಾತ್ರಂ
ಅವ್ಯಕ್ತ-ಯೌವನ-ಪರೀತ-ಕಿಶೋರ-ಭಾವಂ |
ಗವ್ಯಾನುಪಾಲನ-ವಿಧಾವನುಶಿಷ್ಟಂ ಅವ್ಯಾತ್
ಅವ್ಯಾಜ-ರಮ್ಯಂ ಅಖಿಲೇಶ್ವರ-ವೈಭವಂ ನಃ ||

ಮೊದಲನೆಯ ಪಾದವು ಸುವ್ಯಕ್ತವಾದುದನ್ನು ಹೇಳಿದರೆ, ಎರಡನೆಯ ಪಾದವು ಅವ್ಯಕ್ತವಾದುದನ್ನು ಹೇಳುತ್ತದೆ. ನಾಲ್ಕು ಪಾದಗಳಲ್ಲೂ ದ್ವಿತೀಯಾಕ್ಷರಪ್ರಾಸವನ್ನು ಕಾಣಬಹುದು. ಜಗದೊಡೆಯನೇ ದನಕಾಯುವವನಾಗಿರುವ ಲೀಲೆಯನ್ನುಈ ಪದ್ಯದಲ್ಲಿ ಪರಿಶೀಲಿಸಿದೆ.

***

ಕೃಷ್ಣನು ನಮ್ಮನ್ನು ಸಂತೋಷಪಡಿಸಲಿ ಎಂದು ಬಯಸುತ್ತಾನೆ, ಕವಿ ಲೀಲಾಶುಕ. ಕೃಷ್ಣನೊಂದು ತೇಜಸ್ಸು. ಬಹಳ ವಿಶೇಷವಾದ ತೇಜಸ್ಸದು. ರಮೆಯ ಅಂತಃಪುರವೆನಿಸುವ ತೇಜಸ್ಸು.

ಲಕ್ಷ್ಮಿಯು ಸದಾ ಆತನ ಹೃದಯದಲ್ಲೇ ನೆಲೆಸಿರುವಳಷ್ಟೆ? ರಾಣಿವಾಸದವರನ್ನು ರಾಜನ ಅಂತಃಪುರವೆನ್ನುವುದನ್ನು ಕೇಳಿರುತ್ತೇವೆ. ಆದರೆ ಲೀಲಾಶುಕನ ನಿರೂಪಣೆಯಲ್ಲಿ, ಲಕ್ಷ್ಮಿಯ ಅಂತಃಪುರವೇ ಶ್ರೀಕೃಷ್ಣ!

ಕೃಷ್ಣನು ಅಧಿಕ-ಮನೋಹರ - ಎಂದರೆ ಅತ್ಯಂತ ಆಕರ್ಷಕನಾಗಿರುವವನು. ಅಧಿಕವೆಂದರೆ ಎಷ್ಟು? ಅದಕ್ಕೇನಾದರೂ ಅಳತೆಗೋಲುಂಟೆ? ಉಂಟು. ಎಷ್ಟೆಂದರೆ ವ್ರಜ-ಯುವತಿಯರ, ಅರ್ಥಾತ್ ಗೊಲ್ಲತಿಯರ, ಅಚ್ಚುಮೆಚ್ಚು ಆತ.

ಅವರಿಗೆ ಆತನು ಅಚ್ಚುಮೆಚ್ಚೆಂದರೆ ಅವನನ್ನು ಕಾಣುತ್ತಿರುವ ಬಯಕೆ ಅವರದು - ಎಂದೇ. ಅವರ ವಿಲೋಚನಗಳಿಗೆ ಆತನು ಅವಲೇಹ್ಯನಂತೆ. ಹಾಗೆಂದರೆ ತಮ್ಮ ಕಣ್ಣುಗಳಿಂದ ಆತನನ್ನು ನೆಕ್ಕುವರಂತೆ ಅವರು!

ಲೇಹ್ಯವೆಂದರೆ ನೆಕ್ಕಿ ನೆಕ್ಕಿ ಆಸ್ವಾದಿಸುವಂತಹುದು. ಒಂದೇ ತುತ್ತಿಗೋ ಒಂದೇ ಗುಟುಕಿಗೋ ನುಂಗಿ ಮುಗಿಸಿಬಿಡುವಂತಹುದಲ್ಲ. ನಾಲಿಗೆಯ ಮೇಲೆಲ್ಲಾ ಪಸರಿಸಿಕೊಂಡು ಮೆಲ್ಲಮೆಲ್ಲನೆ ಆಸ್ವಾದಿಸಿ ಸುಖಿಸುವಂತಹ ವಸ್ತುವೇ ಲೇಹ್ಯ.

ನಾಲಿಗೆಯ ಈ ಕೆಲಸವನ್ನು ಕಣ್ಣಿಗೆ ಹಚ್ಚುವ ಪರಿಯಲ್ಲಿ ಕವಿಯ ಕೈವಾಡವು ಕಾಣುತ್ತದೆ. ಕೃಷ್ಣನನ್ನು ಒಮ್ಮೆ ಕಂಡರೂ ತೃಪ್ತಿಯಾಗುವುದೇ; ಜೊತೆಗೇ, ಎಷ್ಟು ಕಂಡರೂ ತೃಪ್ತಿಯೇ ಇಲ್ಲ - ಎಂಬುದೂ ನಿಜವೇ. ಎವೆಯಿಕ್ಕದೆ ನೋಡುತ್ತಿರಬೇಕೆಂಬ ತನ್ನ ಹೃದ್ಗತವಾದ ಆಸೆಯನ್ನೇ ವ್ರಜಾಂಗನೆಯರ ಹಂಬಲಿಕೆಯಾಗಿ ಕವಿ ನಿರೂಪಿಸುತ್ತಿದ್ದಾನೆ. ತಮ್ಮೆರಡೂ ಕಣ್ಣುಗಳಿಂದ ಆತನನ್ನು ತುಂಬಿಕೊಳ್ಳುತ್ತಿರುವವರು, ಗೋಕುಲದ ಮುಗ್ಧರಮಣಿಯರು.

ಕೆಲವರ ಮುಖ-ಮಾಧುರ್ಯವು ಹೇಗಿರುವುದೆಂದರೆ ಅವರನ್ನು ಸುಮ್ಮನೆ ನೋಡುತ್ತಿರಬೇಕೆನಿಸುತ್ತದೆ. ಅವರು ಕಿಂಚಿತ್ತಾದ ಮಂದಹಾಸವನ್ನು ಬೀರಿದರಂತೂ ಮತ್ತೂ ಮನೋಹರವಾಗಿಯೇ ತೋರುತ್ತಾರೆ. ಕೃಷ್ಣನಿಲ್ಲಿ ಹಾಗೆಯೇ. ತನ್ನ ಮಂದಹಾಸದಿಂದಲೇ ಅಧಿಕ-ಮನೋಹರನಾಗಿ ತೋರಿ ಮನಸೆಳೆದವನು.

ಏನಿದೆ ವಿಶೇಷ ಆತನ ಮಂದಹಾಸಗಳಲ್ಲಿ? ಅತ್ಯಂತ ಆಸ್ವಾದ್ಯವೆನಿಸುವುದು ಅಮೃತವೆನ್ನುತ್ತಾರಲ್ಲವೇ? ಅದನ್ನು ಹೋಲುವುದೇ ಈ ಮಂದಸ್ಮಿತ? - ಎಂದು ಕೇಳುವಿರೇನು? ಹೋಲುವುದಲ್ಲ, ಇದರ ಮುಂದೆ ಅದೇ ಸೋಲುವುದು! ಸುಧೆಗೆ ಮದವಿರಬಹುದು, ತಾನೇ ಅತ್ಯಂತ ಆಸ್ವಾದ್ಯವೆಂದು. ಅದರಿಂದುಂಟಾಗುವ ಯಾವ ಅಹಂಕಾರವುಂಟೋ ಅದನ್ನೇ ಅಪಹಾಸ್ಯಮಾಡುವ ಆಸ್ವಾದ್ಯತೆ ಶ್ರೀಕೃಷ್ಣನ ಮಂದಹಾಸಕ್ಕುಂಟು. ಎಂತಹ ಆರ್ದ್ರವಾದ ಹಸಿತ, ಕೃಷ್ಣನದು! ಆರ್ದ್ರವೆಂದರೆ ಒದ್ದೆ, ಅರ್ಥಾತ್ ರಸಭರಿತವಾದದ್ದು.

ಹೀಗೆ ಸುಧೆಯನ್ನು ಮೀರಿಸುವ ಮಂದಹಾಸದಿಂದಾಗಿ ಅತಿಮನೋಹರನಾಗಿದ್ದು ಗೊಲ್ಲತಿಯರ ನೇತ್ರಗಳಿಗೆ ಹಬ್ಬವಾಗಿದ್ದ ಕೃಷ್ಣನು ನಮ್ಮನ್ನೂ ಸಂತೋಷಪಡಿಸಲಿ - ಎನ್ನುತ್ತಾನೆ, ಲೀಲಾಶುಕ.

ಶ್ಲೋಕ ಹೀಗಿದೆ:
ಅಪಹಸಿತ-ಸುಧಾ-ಮದಾವಲೇಪೈಃ
ಅಧಿಕ-ಮನೋಹರಂ ಆರ್ದ್ರ-ಮಂದಹಾಸೈಃ |
ವ್ರಜ-ಯುವತಿ-ವಿಲೋಚನಾವಲೇಹ್ಯಂ
ರಮಯತು ಧಾಮ ರಮಾವರೋಧನಂ ನಃ ||

***

ನನ್ನ ಮನಸ್ಸಿನಲ್ಲಿ ನಲಿಯಲಿ, ಆ ತೇಜಸ್ಸು - ಎಂದು ಕೇಳಿಕೊಳ್ಳುತ್ತಾನೆ, ಲೀಲಾಶುಕ. ಯಾವುದು ಆ ತೇಜಸ್ಸು? ಅದೇನೆಂದು ಹೇಳಲಾಗದು- ಎನ್ನುತ್ತಾನೆ, ಕವಿ; ಆದರೂ ಕೆಲವೇ ಲಕ್ಷಣಗಳನ್ನು ಹೇಳಲು ಶಕ್ಯ. ಏನನ್ನೂ ಹೇಳಲೇ ಆಗದೆಂದೆನ್ನುವಲ್ಲಿ ಆ ಬಗ್ಗೆ ಮಾತನಾಡುವುದಾದರೂ ಎಂತು?

ಹಾಗಿದ್ದರೆ ಆ ಬಗ್ಗೆ ಏನನ್ನು ಹೇಳಬಹುದು? ಕಾಡಿನಲ್ಲಿ ಅದು ಜಗಳ ಮಾಡಿಕೊಂಡಿದೆಯೆನ್ನಬಹುದು. ಕಾಡೆಂದರೆ ವೃಂದಾವನವೇ. ಅದರ ಜಗಳ ಮೋಡದೊಂದಿಗೆ. ಇಬ್ಬರು ಬೆಳ್ಳಗಿದ್ದರೆ ಕೆಲವೊಮ್ಮೆ ಪೈಪೋಟಿಯಿರುವುದಲ್ಲವೇ - ತಾ ಹೆಚ್ಚು ಬಿಳಿಯೋ ನಾ ಹೆಚ್ಚೋ? – ಎಂದು. ಹಾಗಿಲ್ಲಿ ನಾ ಕರಿಯೋ ನೀ ಕರಿಯೋ ಎಂದು ಪೈಪೋಟಿ! ಏಕೆ? ಕೃಷ್ಣನೂ ಕಪ್ಪು, ಕಾಳಮೇಘವೂ ಕಪ್ಪು. ಯಾರು ಹೆಚ್ಚು ಕಪ್ಪೆಂಬ ಪೈಪೋಟಿ.

ಹೀಗೆ ಹೇಳುವುದರ ತಾತ್ಪರ್ಯವೆಂದರೆ, ಕೃಷ್ಣವೆಂಬ ತೇಜಸ್ಸು ಕಾಲಮೇಘದಂತೆ ಇದೆ, ಎಂಬುದೇನೋ ಅಷ್ಟೇ. ಮುಖಕ್ಕೂ ಕಮಲಕ್ಕೂ ಪೈಪೋಟಿಯೆಂದರೆ ಹೇಗೋ ಹಾಗೆಯೇ ಇದೂ. ಪೈಪೋಟಿಯೆಂದರೂ ಔಪಮ್ಯವೇ ಉದ್ದಿಷ್ಟ.

ಈ ಕಪ್ಪಾದ ಮಹಸ್ಸಿನ ವಿಶೇಷವೆಂದರೆ ಅದರ ವೇಣುಧ್ವನಿಯು ಎಲ್ಲರಿಗೂ ಮಾನ್ಯವಾಗಿದೆ. ಎಲ್ಲರಿಗೂ ಎಂದು ಹೇಳಲೇಬೇಕಿಲ್ಲ. ಪರಮ-ಸಂಗೀತ-ರಸಿಕರು ಯಾರೋ ಅವರಿಗೆ ಮೆಚ್ಚುಗೆಯಾಗಿದೆಯೆಂದು ಹೇಳಿದರೆ ಸಾಕು. ಆಗ ಮಿಕ್ಕವರು ಲೆಕ್ಕಕ್ಕೇ ಇಲ್ಲ.

ಯಾರವರು ಅಂತಹ ಸಂಗೀತ-ರಸಿಕರು? ಅವರೇ ಕಿನ್ನರಿಯರು. ಆಕಾಶದಲ್ಲಿ ಸಂಚರಿತತಕ್ಕ ಕಿಂನರ/ಕಿಂಪುರುಷರ ನಾರಿಯರು. ಖೇಚರರಾದ ಅವರು ಗಾಂಧರ್ವ-ಗಾನದ ಅರಿವುಳ್ಳವರು. ಅವರೇ ಮನಸೋತಿರುವ ಮೃದುವಾದ ವೇಣು-ಧ್ವನಿ, ಈ ಕೃಷ್ಣನೆಂಬ ತೇಜಸ್ಸಿನದು.

ಈ ಅಂಶಗಳಿಗಿಂತಲೂ ಮಿಗಿಲಾದ ಒಂದು ಅಂಶವಿದೆ, ಆ ತೇಜಸ್ಸಿನಲ್ಲಿ. ಅದೆಂದರೆ ಅದು ಕೃಪಾಸ್ಪದವಾದದ್ದು, ಎಂದರೆ ದಯಾಮಯವಾದದ್ದು. ಈ ಕಾರಣಕ್ಕಾಗಿಯೇ ಆ ತೇಜಸ್ಸು ನಮ್ಮ ಮನಸ್ಸಿನಲ್ಲಿ ಆಡಲಿ - ಎಂದು ಕೇಳಿಕೊಂಡಿರುವುದು.

ಖೇಲತಾಂ ಮನಸಿ ಖೇಚರಾಂಗನಾ-

-ಮಾನನೀಯ-ಮೃದು-ವೇಣು-ನಿಃಸ್ವನೈಃ |

ಕಾಲಮೇಘ-ಕಲಹೋದ್ವಹಂ ಮಹಃ

ಕಾನನೇ ಕಿಮಪಿ ನಃ ಕೃಪಾಸ್ಪದಮ್ ||

ಸೂಚನೆ : 12
/10/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಪ್ರಶ್ನೋತ್ತರ ರತ್ನಮಾಲಿಕೆ 33 (Prasnottara Ratnamalike 33)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೩೫. ಅಮೂಲ್ಯವಾದುದು ಯಾವುದು?

ಉತ್ತರ - ಸಮಯದಲ್ಲಿ, ಅಧಿಕಾರಿಗೆ ಕೊಟ್ಟಿದ್ದು.


ಈ ಪ್ರಶ್ನೆಯ ಆಶಯ ಹೀಗಿದೆ - ನಮ್ಮ ಬದುಕನ್ನು ಹಸನು ಮಾಡಿಕೊಳ್ಳುಲು ಸೃಷ್ಟೀಶನು ನಮಗೆ ಅನೇಕ ಪದಾರ್ಥಗಳನ್ನು ನೀಡಿದ್ದಾನೆ. ಅವುಗಳಲ್ಲಿ ಅನೇಕವು ನಮ್ಮ ಉಪಯೋಗಕ್ಕಾಗಿಯೇ ಇರುವಂತವು; ಇನ್ನು ಕೆಲವು ಬೇರೆಯವರಿಗೆ ಉಪಯೋಗಕ್ಕೆ, ನಾವು ಕೊಡಲು ಯೋಗ್ಯವಾದದ್ದು. ಇಂತಹ ಬದುಕಿನಲ್ಲಿ ಅಮೂಲ್ಯವಾದ ವಸ್ತು ಯಾವುದು? ಎಂಬುದು.

ಅದಕ್ಕೆ ಉತ್ತರ - ಸಕಾಲದಲ್ಲಿ - ಅವಶ್ಯಕತೆ ಇರುವಾಗ ಸರಿಯಾದ ವ್ಯಕ್ತಿಗೆ - ಯೋಗ್ಯನಾದ ವ್ಯಕ್ತಿಗೆ ಅಂದರೆ ಅಧಿಕಾರಿಗೆ ನಾವು ಯಾವುದನ್ನು ಕೊಡುತ್ತೇವೋ ಅದು ಅಮೂಲ್ಯವಾದ ವಸ್ತು ಎಂದು ಅನಿಸಿಕೊಳ್ಳುತ್ತದೆ. ಅಂತಹ ವಸ್ತುವನ್ನು ಮತ್ತು ಆ ವಸ್ತುವನ್ನು ಪಡೆದುಕೊಳ್ಳಲು ಯೋಗ್ಯನಾದ ವ್ಯಕ್ತಿಯನ್ನು ಆರಿಸಿಕೊಳ್ಳುವುದರಲ್ಲಿ ಜಾಣತನ ಇದೆ ಎಂಬ ಮಾರ್ಮಿಕವಾದ ವಿಷಯ ಇಲ್ಲಿ ಅಡಗಿದೆ. ಸಕಾಲದಲ್ಲಿ ಅಧಿಕಾರಿಗೆ ಕೊಟ್ಟಂತಹ ವಸ್ತು ಹೇಗೆ ಅಮೂಲ್ಯದದ್ದು? ಎಂಬುದನ್ನು ನಾವಿಲ್ಲಿ ಚಿಂತಿಸೋಣ.


ಅಮೂಲ್ಯ ಎಂದರೆ ಮೌಲ್ಯವನ್ನು ಎಣಿಸಲು ಆಗದ್ದು; ಬೆಲೆಯನ್ನು ಕಟ್ಟಲು ಸಾಧ್ಯವಿಲ್ಲ ಎಂದರ್ಥ. ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ಬೆಲೆ ಇರುತ್ತದೆ ಮತ್ತು ಅದಕ್ಕೆ ಬೆಲೆಕಟ್ಟಲು ಸಾಧ್ಯವೂ ಆಗಿರುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಆ ವಸ್ತುವು ಬೆಲೆಕಟ್ಟಲಾಗದ ವಸ್ತುವಾಗಿ ಪರಿಣಮಿಸುತ್ತದೆ. ಆಗ ಆ ವಸ್ತುವನ್ನು 'ಅಮೂಲ್ಯ' ಎಂಬುದಾಗಿ ಕರೆಯಲಾಗುತ್ತದೆ.

ವಸ್ತುವನ್ನು ಕೊಡಬೇಕು; ಅದಕ್ಕೆ 'ದಾನ' ಎಂಬುದಾಗಿ ಕರೆಯುತ್ತಾರೆ. ಆದರೆ ಕೊಟ್ಟಿದ್ದೆಲ್ಲವೂ ದಾನವಾಗುವುದಿಲ್ಲ. ಸರಿಯಾದ ವ್ಯಕ್ತಿಗೆ ಅಂದರೆ ಅಧಿಕಾರಿವ್ಯಕ್ತಿಗೆ ಕೊಟ್ಟಾಗ ಮಾತ್ರ ಅದು ದಾನ ಎಂಬುದಾಗಿ ಕರೆಸಿಕೊಳ್ಳುತ್ತದೆ. ದಾನ ಸಫಲವಾಗಲು ಪಾತ್ರನ ಪಾತ್ರತ್ವ ಬಹಳ ಮುಖ್ಯವಾದದ್ದು. ತುಂಬಿಸಬೇಕು, ಅಂದುಕೊಂಡಿರುವ ಪಾತ್ರೆಯೇ ತೂತಾಗಿದ್ದರೆ ಅಲ್ಲಿ ಯಾವ ಉತ್ತಮವಾದ ಪದಾರ್ಥವನ್ನು ಅಥವಾ ಅಮೃತವನ್ನು ಹಾಕಿದರೂ ಆ ಪಾತ್ರದಲ್ಲಿ ಒಂದು ಹನಿಯೂ ಉಳಿಯುವುದಿಲ್ಲ. ಅದೇ ಪಾತ್ರ ಸರಿಯಾಗಿದ್ದರೆ ಹಾಕಿದ ಒಂದೊಂದು ಬಿಂದುವೂ  ಉಪಯುಕ್ತವಾಗುತ್ತದೆ. ಹಾಲು ಉತ್ತಮವಾದದ್ದೇ ಆದರೂ ಕಿಲಿಬುವ ಪಾತ್ರದಲ್ಲಿ ಹಾಲನ್ನು ಹಾಕಿದರೆ ಅದು ಹಾಳಾಗುತ್ತದೆ. ಅಂದರೆ ವಸ್ತು ತನ್ನತನವನ್ನು ಕೆಡಿಸಿಕೊಳ್ಳದೇ ಇರಲು ಆ ಪಾತ್ರವು ಅಷ್ಟೇ ಅಚ್ಚುಕಟ್ಟಾಗಿ ಇರಬೇಕಾದದ್ದು ಅವಶ್ಯ. ಇದನ್ನೇ ಈ ಪ್ರಶ್ನೋತ್ತರದಲ್ಲಿ ಹೇಳಲಾಗಿದೆ. ಆದರೆ ಉತ್ತರದಲ್ಲಿ ಸ್ವಾರಸ್ಯವಿದೆ. 'ಸಮಯ' ಮತ್ತು 'ಅಧಿಕಾರಿ' ಎಂಬ ಎರಡು ಮುಖ್ಯವಾದ ಅಂಶ ಇಲ್ಲಿದೆ. ಅಂದರೆ ಹಸಿದಾಗ ಊಟವನ್ನು ಕೊಟ್ಟರೆ, ಅದನ್ನು ಪಡೆದವನಿಗೆ ತೃಪ್ತಿ; ಅಂತೆಯೇ ಕೊಟ್ಟವನಿಗೂ ದಾನದ ಫಲ. ಆದರೆ ಉಂಡವನಿಗೇ ಊಟ ಅದು ಎಷ್ಟು ರುಚಿ ಎನ್ನಿಸೀತೂ! ಅಲ್ಲಿ ಊಟ ಕೊಟ್ಟರೂ ಅದು ಸಮಯವೂ ಅಲ್ಲ; ಆತ ಅಧಿಕಾರಿಯೂ ಅಲ್ಲ. ಹಾಗಾಗಿ ಅದು ಅಮೂಲ್ಯ ಎನಿಸುವುದಿಲ್ಲ. ಹಸಿದವನಿಗೆ ಊಟ ಕೊಡಬೇಕು; ಹಸಿದಾಗ ಊಟ ಕೊಡಬೇಕು. ಆದ್ದರಿಂದ ಸಮಯ ಮತ್ತು ಅಧಿಕಾರಿ ಈ ಎರಡು ಸಂಗತಿಗಳು ಒಂದು ವಸ್ತುವನ್ನು ಅಮೂಲ್ಯವಾಗಿಸುತ್ತವೆ. ನಮ್ಮಲ್ಲಿ 'ವಸ್ತುವಿದೆ' ಎಂದು ಕೊಡುವುದು, ಆ ವಸ್ತುವಿಗೆ ಕೊಡುವ ಗೌರವ ಆಗುವುದಿಲ್ಲ. ಪ್ರಶ್ನೋತ್ತರದ ತಾತ್ಪರ್ಯವಿಷ್ಟು -ಪಾತ್ರ ಯಾರು? ಎಂಬುದನ್ನು ಗುರುತಿಸಿಕೊಳ್ಳಬೇಕು ಎಂದು."ನ ವಿದ್ಯಯಾ ಕೇವಲಯಾ ತಪಸಾ ವಾಪಿ ಪಾತ್ರತಾ" ಯತ್ರ ವೃತ್ತಮ್  ಇಮೇ ಚೋಭೇ ತದ್ಧಿ ಪಾತ್ರಂ ಪ್ರಕೀರ್ತಿತಮ್" ಎಂದು. ಅಂದರೆ ವಿದ್ಯೆ ಅಥವಾ ತಪಸ್ಸು ಉಳ್ಳವನು ಮಾತ್ರ ಪಾತ್ರನಲ್ಲ; ಯಾರಲ್ಲಿ ಇವೆರಡೂ ಇದೆಯೋ ಅವನೇ ನಿಜಾರ್ಥದಲ್ಲಿ ಪಾತ್ರ - ಯೋಗ್ಯ. ಅಂಥವನಿಗೆ ಕೊಟ್ಟ ಪ್ರತಿಯೊಂದು ವಸ್ತುವೂ ಅಮೂಲ್ಯವೇ. 

ಸೂಚನೆ : 12/10/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Saturday, October 11, 2025

ಭಗವತನ ಸಂಕಲ್ಪಕ್ಕೆ ಇರುವ ಶಕ್ತಿ (Bhagavatana Sankalpakke iruva Shakti)

ವಿದುಷಿ ; ಸೌಮ್ಯಾ ಪ್ರದೀಪ್  ಎ. ಜೆ.

ಪ್ರತಿಕ್ರಿಯಿಸಿರಿ (lekhana@ayvm.in)


 


ಭರತವಂಶ ಪ್ರದೀಪಕನಾದ ಅಭಿಮನ್ಯು ಅರ್ಜುನ ಮತ್ತು ಸುಭದ್ರೆಯ ಸುಪುತ್ರ.  ಅವನು ತನ್ನ ಸದ್ಗುಣಗಳಿಂದ ಹಾಗೂ ಶೌರ್ಯದಿಂದ ಶ್ರೀಕೃಷ್ಣ ಪರಮಾತ್ಮನ ಪ್ರೀತಿಗೆ ಪಾತ್ರನಾಗಿದ್ದನು. ಕುರುಕ್ಷೇತ್ರ ಯುದ್ಧದಲ್ಲಿ ಅಪ್ರತಿಮ ಶೌರ್ಯವನ್ನು ತೋರಿದ ಅಭಿಮನ್ಯು, ಕೌರವರ ಅಧರ್ಮಕ್ಕೆ ಗುರಿಯಾಗಿ ವೀರಮರಣವನ್ನು ಹೊಂದುತ್ತಾನೆ. ಯುದ್ಧದ ನಂತರ  ಭರತ ವಂಶವೇ ನಾಶವಾಗುವಂತಹ ಸ್ಥಿತಿ ತಲೆದೋರಿರುವಂತಹ ಸಂದರ್ಭ, ಆಗ ಅಭಿಮನ್ಯುವಿನ ಪತ್ನಿಯಾದಂತಹ ಉತ್ತರೆಯ ಗರ್ಭದಲ್ಲಿ ಭರತ ವಂಶದ ಏಕಮಾತ್ರ ಕುಡಿಯು ಬೆಳೆಯುತ್ತಿರುತ್ತದೆ. ಆದರೆ ಅದನ್ನು ನಾಶ ಮಾಡುತ್ತೇನೆ ಎಂಬ  ಹಠದಿಂದ ಮೂರ್ಖನಾದ ಅಶ್ವತ್ಥಾಮ ಉತ್ತರೆಯ ಗರ್ಭಕ್ಕೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುತ್ತಾನೆ. ಅದು ಹೊಟ್ಟೆಯಲ್ಲಿಯೇ ದಹಿಸಲ್ಪಟ್ಟು, ಆರೇ ತಿಂಗಳಿಗೆ ಭೂಮಿಗೆ ಬಂದು ಚೈತನ್ಯ ರಹಿತವಾದ ಸ್ಥಿತಿಯಲ್ಲಿ ಇರುತ್ತದೆ.


 ಭರತ ವಂಶ ಬೆಳೆಯಬೇಕು, ಧರ್ಮರಾಜ್ಯ ಮುಂದುವರಿಯಬೇಕು ಎಂಬುದು ಶ್ರೀ ಕೃಷ್ಣ ಪರಮಾತ್ಮನ ಸಂಕಲ್ಪ, ಹಾಗಾಗಿ ಶ್ರೀ ಕೃಷ್ಣನು ತನ್ನ ದಿವ್ಯವಾದ ಶಕ್ತಿಯಿಂದ ಆ ಮಗುವಿಗೆ ಚೈತನ್ಯವನ್ನು ನೀಡಿ ಅದರ ಮರುಹುಟ್ಟಿಗೆ ಕಾರಣನಾಗುತ್ತಾನೆ.ಆ ಶಿಶುವನ್ನು ಸಜೀವಗೊಳಿಸಿದ ನಂತರ ವಾಸುದೇವನು, 'ಕ್ಷೀಣಿಸಿ ಹೋಗುವುದರಲ್ಲಿದ್ದ ಕುಲದಲ್ಲಿ ಹುಟ್ಟಿ ಈ ಕುಲದ ವೃದ್ಧಿಗೆ ಕಾರಣನಾದ ಇವನು ಪರೀಕ್ಷಿತನೆಂದೇ ಪ್ರಸಿದ್ಧನಾಗಲಿ' ಎಂಬುದಾಗಿ ಉದ್ಘೋಷಿಸುತ್ತಾನೆ ಎಂಬುದು ಶ್ರೀಮನ್ಮಹಾಭಾರತ ಗ್ರಂಥದಲ್ಲಿ ಉಲ್ಲೇಖಿತವಾಗಿದೆ. ನಂತರ ಅವನು ಪರೀಕ್ಷಿತನೆಂದು ಲೋಕದಲ್ಲಿ ಪ್ರಸಿದ್ಧಿಯನ್ನು ಹೊಂದುತ್ತಾನೆ. ಹೀಗೆ ಪರಮಾತ್ಮನ ಸಂಕಲ್ಪದಿಂದ ಭರತ ವಂಶವು ಮುಂದುವರಿಯುತ್ತದೆ.


ಬ್ರಹ್ಮಾಸ್ತ್ರಕ್ಕೆ ಬ್ರಹ್ಮಾಂಡವನ್ನೇ ನಾಶ ಮಾಡುವ ಶಕ್ತಿ ಇರುತ್ತದೆ. ಅಂತಹ ಅಸ್ತ್ರಕ್ಕೆ ಗುರಿಯದವರು ಉಳಿಯುವುದು ಅಸಾಧ್ಯವೇ ಸರಿ. ಆದರೂ ಭಗವಂತನ ಸಂಕಲ್ಪಕ್ಕೆ  ಎಂತಹ ಅದ್ಭುತ ಶಕ್ತಿ ಇದೆ ಎಂಬುದನ್ನು ನಾವು ಪರೀಕ್ಷಿತನ ಚರಿತ್ರೆಯಿಂದ ಅರಿಯಬಹುದು. ಭಗವಂತನ ಸಂಕಲ್ಪಕ್ಕೆ ಮೂಕನನ್ನೂ ವಾಚಾಳಿಯನ್ನಾಗಿಸುವ, ಕಾಲಿಲ್ಲದವನನ್ನೂ ಬೆಟ್ಟ ಹತ್ತುವಂತೆ ಮಾಡುವ ಶಕ್ತಿ ಇದೆ ಎಂಬುದನ್ನು ಭಗವದ್ಗೀತೆಯ ಧ್ಯಾನ ಶ್ಲೋಕ ಸಾರುತ್ತದೆ. ಹಾಗಾಗಿ ಭಗವತ್ಸಂಕಲ್ಪ ಅನ್ನುವುದು ಪ್ರಕೃತಿಯನ್ನೂ  ಮೀರಿ ಕೆಲಸ ಮಾಡುವಂತಹದ್ದು.


  ನಾವು ಮಾಡುವ ಪ್ರತಿಯೊಂದು ಕಾರ್ಯದ ಪೂರ್ವದಲ್ಲಿಯೂ ಭಗವಂತ ನಿನ್ನ ಸಂಕಲ್ಪಕ್ಕೆ ಅನುಗುಣವಾಗಿ ಈ ಕಾರ್ಯವು ನೆರವೇರಲಿ ಎಂಬ ಪ್ರಾರ್ಥನೆ ಇದ್ದಾಗ ಆ ಕಾರ್ಯವು ಸುಸಂಪನ್ನವಾಗುವುದರಲ್ಲಿ ಸಂಶಯವಿಲ್ಲ, ಏಕೆಂದರೆ ಪಲಾಫಲಗಳ ಪರಿಪೂರ್ಣವಾದ ಜ್ಞಾನ ಸಮಸ್ತ ಲೋಕ ಹಿತಚಿಂತಕನಾದ ಭಗವಂತನಿಗೆ ಮಾತ್ರ ಇರುವುದಕ್ಕೆ ಸಾಧ್ಯ.


 "ಸಂಕಲ್ಪವು ಸದೃಢವಾಗಿ ಶಕ್ತಿಯುತವಾಗಿದ್ದರೆ ಆ ಸಂಕಲ್ಪವನ್ನು ಹರಿಸಿಬಿಟ್ಟರೂ ಪರವಾಗಿಲ್ಲ. ಆ ಸಂಕಲ್ಪವೇ ಕೆಲಸ ಮಾಡಿಕೊಳ್ಳುತ್ತೆ. ದಾರ ಸುತ್ತಿ ಬುಗುರಿಯನ್ನು ಆಡಿಸಿ ಬಿಟ್ಟರೆ ದಾರದ ಸಂಬಂಧ ತಪ್ಪಿದರೂ ಬುಗುರಿ ಆಡುತ್ತಲೇ ಇರುತ್ತದೆ. ಸಂಕಲ್ಪ ಹರಿದುದಕ್ಕೆ ಅಷ್ಟು ದೂರ ಕೆಲಸ ಉಂಟು. ಆದ್ದರಿಂದ ದೃಢ ಸಂಕಲ್ಪವಿರಲಿ". ಎಂಬ ಮಾತನ್ನು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು.


  ಪ್ರತಿಯೊಬ್ಬರೂ ಮನಸ್ಸಿನಲ್ಲಿ ಭಗವಂತನ ಸ್ಮರಣೆಯೊಂದಿಗೆ ಸತ್ಸಂಕಲ್ಪವನ್ನು ಮಾಡಿಕೊಂಡು ಜೀವನದ ಹೆಜ್ಜೆಗಳನ್ನು ಇಡುತ್ತಾ ಹೋದಾಗ ಭಗವಂತನ ಸಂಕಲ್ಪವೂ ನಮ್ಮ ಮೇಲೆ ಹರಿದು  ಐಹಿಕ ಹಾಗೂ ಪಾರಮಾರ್ಥಿಕ ಜೀವನದ ಪರಿಪೂರ್ಣ ಸೊಬಗನ್ನು ಅನುಭವಿಸಬಹುದಾಗಿದೆ.


ಸೂಚನೆ : 11/10/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.  

ಭಗವಂತನ ಪಾದದ ಅವಲಂಬನೆ (Bhagavantana Padada Avalambane)

ಲೇಖಕರು: ಡಾ. ರಾಮಮೂರ್ತಿ  ಟಿ.ವಿ
(ಪ್ರತಿಕ್ರಿಯಿಸಿರಿ lekhana@ayvm.in)



ಭಗವಾನ್ ಶ್ರೀಕೃಷ್ಣನು ನಮಗಾಗಿ ಭಗವದ್ಗೀತೆಯಲ್ಲಿ ತಿಳಿಸಿರುವ ಪ್ರಸಿದ್ಧ ಹಿತವಚನ ಹೀಗಿದೆ –"ನನ್ನಲ್ಲೇ ಮನಸ್ಸಿಡು. ನನ್ನನ್ನು ಅತಿಶಯವಾಗಿ ಪ್ರೀತಿಸು. ನನ್ನನ್ನೇ ಆರಾಧಿಸು. ನನಗೆ ತಲೆಬಾಗು. ಮನಸ್ಸನ್ನು ಹೀಗೆ ಅಣಿಗೊಳಿಸಿ ನನ್ನನ್ನು ಮೊರೆಹೊಕ್ಕಾಗ ನನ್ನನ್ನೇ ಸೇರುವೆ" . ಪಾದಸೇವೆ ,ದಾಸ್ಯ,ಆತ್ಮನಿವೇದನ, ಶರಣಾಗತಿ(ಪ್ರಪತ್ತಿ)  ಎಂಬ ಭಕ್ತಿಯ ವಿಧಗಳು ಪರ್ಯಾಯಪದಗಳಲ್ಲವಾದರೂ ಹತ್ತಿರದಪದಗಳಾಗಿ  ಗೀತಾಚಾರ್ಯನ ಹಿತನುಡಿಗೆ ಪೋಷಕವಾಗಿದೆ.   ಮಹಾಲಕ್ಷ್ಮೀ , ಹನುಮಂತ , ಮೀರಾ, ದ್ರೌಪದೀ ಮೇಲ್ಕಂಡ ಭಕ್ತಿವಿಧಗಳ ಜ್ವಲಂತ ಉದಾಹಣೆಗಳು. ಈ ಭಕ್ತಿಯ ವಿಧಗಳು  ಮಾನಸಿಕವಾಗಿ ನಡೆಯುವ ಕ್ರಿಯೆಗಳು.  "ನಾನು ನನ್ನದೇನು ಇಲ್ಲ" ವೆಂಬ ವಸ್ತುಸ್ಥಿತಿಯ ಗುರುತಿಸುವಿಕೆಯೇ ಹೊರತು ದೈನ್ಯಭಾವವಾಗಲೀ, ಆತ್ಮವಿಶ್ವಾಸ ಕಳೆಯುವಿಕೆಯಾಗಲೀ ಅಲ್ಲ. ಆದಿಶಂಕರರ ಭಗವನ್ಮಾನಸಪೂಜಾ ಸ್ತೋತ್ರದಲ್ಲಿ ಈ ಭಾವಗಳನ್ನು " ನಮಸ್ಕಾರೋsಷ್ಟಾಂಗಃ  , ಅಹಮಪಿ ಚ ದಾಸಃ " ಎಂಬುದಾಗಿ ಬಿಂಬಿಸಿದ್ದಾರೆ. 

ಸಾಧಕನಿಗೆ ಈ ಮಾರ್ಗದಲ್ಲಿ ಹೆಜ್ಜೆಯಿಡಬೇಕಾದರೆ ಅವಲಂಬನೆ ಬೇಕಾಗುತ್ತದೆ. ಇಂತಹ ಶ್ರೇಷ್ಠವಾದ ಅವಲಂಬನೆಗಳು-ಸಂತರಿಂದ ಗೌರಾವಿಸಲ್ಪಟ್ಟ ಪರಮಾತ್ಮನ ಪಾದ ಮತ್ತು ಅವನು ಸಂಕಲ್ಪಪೂರಿತವಾಗಿ ಮೆಟ್ಟಿದ  ಅವನ ಪ್ರತಿನಿಧಿಯೇ ಆಗಿರುವ ಪಾದುಕೆ. ಈ ಪ್ರತೀಕಗಳ ಬಗ್ಗೆ ಶ್ರೀರಂಗಮಹಾಗುರುಗಳು  ಕೊಡುತ್ತಿದ್ದ ವೈಣಿಕನ ಉದಾಹರಣೆ  ಸ್ಮರಣೀಯ.  ವಾದ್ಯಗಾರರು ವಾದ್ಯದ ಮೂಲಕ ತಮ್ಮ ಮನೋಧರ್ಮವನ್ನು ಹರಿಸಬಲ್ಲರು. ಆ ನಾದಲಹರಿಯನ್ನು ಕೇಳಿ ಸಂಗೀತಜ್ಙನಾದವನು ವಾದ್ಯಗಾರರ ಇಂಗಿತವನ್ನು ಅರ್ಥಮಾಡಿಕೊಳ್ಳಬಲ್ಲ. ರಸಿಕರು ಕೀರ್ತನೆಯ ಪದಗಳು ವಾದ್ಯದಲ್ಲಿ ಬರದಿದ್ದರೂ, ಕೀರ್ತನೆ ಚೆನ್ನಾಗಿ  ಹರಿದುಬಂತು ಎಂದು ಉದ್ಘಾರ ಮಾಡುತ್ತಾರೆ. ಹಾಗೆಯೇ ಭಾವಗ್ರಾಹಿ ಜನಾರ್ಧನ, ಭಕ್ತನ ಮನೋಧರ್ಮವನ್ನು ಸುಲಭವಾಗಿ ಪತ್ತೆಹಚ್ಚಬಲ್ಲ. ಶ್ರೀರಾಮನ ಪಾದುಕೆಯು ಭರತನಿಗೆ ನಿರ್ದೇಶನವಿತ್ತು ರಾಜ್ಯಭಾರ ಮಾಡಲಿಲ್ಲವೇ?  ಶ್ರೀರಂಗಮಹಾಗುರುಗಳ ವಾಣಿಯಂತೆ, "ಆ ಜೀವನು ತನ್ನ ನೆಲೆ ಸೇರಲು, ಈ ಪಾದವನ್ನವಲಂಬಿಸಿದರೆ ತಾನೇ ಸಾಧ್ಯವಪ್ಪಾ! ಅವನ ಪಾದವು ಎಲ್ಲ ಕ್ಷೇತ್ರದಲ್ಲೂ ವ್ಯಾಪಿಸಿಕೊಂಡಿದೆ" .

ಈ ಪ್ರತೀಕಗಳ ಮೇಲಿನ ಮನೋಧರ್ಮದ ವೃದ್ಧಿಗಾಗಿ ಇಂದಿಗೂ ಸದಾಚಾರದ ಪದ್ದತಿ ಅನೇಕ ವೈಷ್ಣವ ದೇವಾಲಯಗಳಲ್ಲಿ ನೋಡಬಹುದಾಗಿದೆ. ಇದನ್ನು ಶಠಾರಿ ಎನ್ನುತ್ತಾರೆ. ಇದರ ಮುಖಭಾಗವು " ನಮ್ಮಾಳ್ವಾರ್  " ಎಂಬ ಭಕ್ತರ ಸಂಕೇತವಾಗಿದ್ದು, ಮೇಲೆ ಭಗವಂತನ ಪಾದಮುದ್ರೆಗಳಿರುತ್ತವೆ.  ಶಠಾರಿಯನ್ನು ದೇವರ ದರ್ಶನಕ್ಕಾಗಿ ಬಂದ ಎಲ್ಲ ಆಸ್ತಿಕರ ಶಿರಸ್ಸಿನ ಮೇಲಿಡುತ್ತಾರೆ. ಕೆಳಗಿನ ಮಹಿಮಾನ್ವಿತ ವಿಷಯಗಳು - "ಶ್ರೀರಾಮನ ಪಾದಸ್ಪರ್ಶದಿಂದ ಕಲ್ಲಿಗೇ ಜೀವ ಬಂತು ಮತ್ತು ಅಹಲ್ಯೆಗೆ ಶಾಪವಿಮೋಚನೆಯಾಯಿತು. ಭಗವಂತನು ವಟಪತ್ರಶಾಯಿಯಾಗಿ ತನ್ನ ಪಾದಾಂಗುಷ್ಟವನ್ನು ಸವೆಯುತ್ತಿದ್ದಾನೆ. ಪರಮಾತ್ಮನ ಪಾದದ  ಮಹಿಮೆಯನ್ನು ಅರಿತು, ತಿರುಮಲ ಕ್ಷೇತ್ರದಲ್ಲಿ ವಾರಕ್ಕೊಮ್ಮೆ "ನಿಜಪಾದ ದರ್ಶನ ಸೇವೆ" ನಡೆಯುತ್ತದೆ." ಓದುಗರ ಮನಸ್ಸಿನಲ್ಲಿ ಅಚ್ಚಳಿಯದೆ ಮುದ್ರಿತವಾಗಿರಬಹುದು. "ದಾಸರಂದರೆ ಪುರಂದರದಾಸರಯ್ಯಾ" ರವರು ಪುರಂದರವಿಠ್ಠಲನಲ್ಲಿ ವಿನಂತಿಸುವಂತೆ " ಕಡೆಹಾಯಿಸುವ ಭಾರ ನಿನ್ನದದಕೆ ನಾ ಬಿಡೆ ನಿನ್ನ ಪಾದವ ಬಿಂಕವಿದೇತಕೆ ", ಆ ಭಗವಂತನನ್ನು ನೆನೆಯುತ್ತಾ ನಮ್ಮನ್ನು ಸಾಧನಮಾರ್ಗದಲ್ಲಿ ಕೈಹಿಡಿದು ನಡೆಸು ಎಂದು ಪ್ರಾರ್ಥಿಸೋಣ. ಸರ್ವಂ ಶ್ರೀಕೃಷ್ಣಾರ್ಪಣಮಸ್ತು.

ಸೂಚನೆ : 11/10/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.  

ಹಬ್ಬಗಳ ಬಗ್ಗೆ ಹೊಸ ನೋಟ (Habbagala Bagge Hosa Nota)

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)


ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ-ಹರಿದಿನಗಳಿಗೆ ಒಂದು ವಿಶೇಷವಾದ ಸ್ಥಾನವಿದೆ. ಜೀವನಚಕ್ರದಲ್ಲಿ ಬರುವ ಹತ್ತುಹಲವು ಘಟ್ಟಗಳನ್ನು ಉತ್ಸವಗಳಾಗಿ ನಾವು ಆಚರಿಸುತ್ತೇವಲ್ಲವೇ? ಹಾಗೆಯೇ, ಋತುಚಕ್ರದ ಪ್ರಮುಖವಾದ ದಿನಗಳನ್ನೂ ಆಚರಿಸುತ್ತೇವೆ. ಇವುಗಳಿಗೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮಹತ್ವಗಳುಂಟಷ್ಟೆ. ಅಷ್ಟೇ ಅಲ್ಲದೆ, ಸಾಮಾಜಿಕ ಮಹತ್ತ್ವವೂ ಉಂಟು.

ವರ್ಷದಲ್ಲಿ ಹಲವು ಹಬ್ಬಸಾಲುಗಳು ಬರುವುದುಂಟು. ಹಬ್ಬಸಾಲೆಂದರೆ ಸಾಲುಸಾಲಾಗಿ ಹಬ್ಬಗಳನ್ನಾಚರಿಸುವುದು. ಒಂದೇ ಕಾಲಘಟ್ಟದಲ್ಲಿ ಒಂದರ ಹಿಂದೊಂದಂತೆ ಸರಮಾಲೆಯಾಗಿ ಬರುವ ಹಬ್ಬಗಳಿವೆಯಲ್ಲವೇ? ಉದಾಹರಣೆಗೆ ವಸಂತಕಾಲದಲ್ಲಿ ಯುಗಾದಿ, ವಸಂತನವರಾತ್ರ, ರಾಮನವಮಿ, ಹನೂಮಜ್ಜಯಂತಿಗಳು ಬರುತ್ತವೆ. ವರ್ಷರ್ತುವಿನಲ್ಲಿ ನಾಗಪಂಚಮಿ, ವರಮಹಾಲಕ್ಷ್ಮಿ, ಗೌರೀ-ಗಣೇಶ ಹಬ್ಬಗಳು. ಶರತ್ಕಾಲದಲ್ಲಿ ನವರಾತ್ರಿ, ದೀಪಾವಳಿ, ತುಲಸೀಹಬ್ಬ, ಕಾರ್ತಿಕ ದೀಪೋತ್ಸವಗಳ ದೊಡ್ದ ಹಬ್ಬಸಾಲು!

ಇವಲ್ಲಿ ಕೆಲವು ಋತು-ಸಂಬಂಧಿಯಾದ ಪರ್ವದಿನಗಳು.  ಉದಾಹರಣೆಗೆ, ಸಂಕ್ರಾಂತಿ, ಯುಗಾದಿ. ಮತ್ತೆ ಕೆಲವು ದೇವತಾ-ಸಂಬಂಧಿಯಾದವುಗಳು. ಉದಾಹರಣೆಗೆ, ರಾಮನವಮಿ, ಕೃಷ್ಣಜನ್ಮಾಷ್ಟಮಿ. 

ಸುಖ-ದುಃಖಗಳು, ಆರೋಗ್ಯ-ಅನಾರೋಗ್ಯಗಳು, ಸಮಾಧಾನ-ದುಗುಡಗಳು ಚಕ್ರದಂತೆ ಜೀವನದಲ್ಲಿ ಏರುಪೇರು ಮಾಡುತ್ತಿರುತ್ತವೆ. ಇದಕ್ಕೆ ಪ್ರತಿಯಾಗಿ, ನಮ್ಮನ್ನು ದೃಢವಾಗಿ ಧ್ರುವವಾಗಿ ನಿಲ್ಲಿಸುವುದು ಭಗವದಭಿಮುಖತೆಯೊಂದೇ. ಅದನ್ನು ಮಾಡಲೋಸುಗವೇ ನಮ್ಮ ಋಷಿಪರಂಪರೆಯು ಈ ಹಬ್ಬ-ಹರಿದಿನಗಳನ್ನೂ ಪುಣ್ಯಕಾಲಗಳನ್ನೂ ರೂಪಿಸಿಕೊಟ್ಟಿರುವುದು. ಅವುಗಳ ತತ್ತ್ವಗಳನ್ನರಿತು ಆಚರಿಸಿದಾಗ ಚತುರ್ಭದ್ರವೂ ಲಭ್ಯ. ಎಂದರೆ ನಾಲ್ಕು ಪುರುಷಾರ್ಥಗಳೂ ನಮಗೆ ದೊರೆಯುವುವು. ಇಲ್ಲಿ ಶ್ರೇಯಸ್ಸೂ ಉಂಟು ಪ್ರೇಯಸ್ಸೂ ಉಂಟು. ಹಾಗೆಂದರೆ, ಪರದಲ್ಲಿ ಒಳಿತೂ ಉಂಟು, ಇಹದಲ್ಲಿ ದೊರೆಯುವ ಇಂದ್ರಿಯಗಳ ಸುಖವೂ ಉಂಟು.

ಈ ಅಭಿಮುಖತೆಯನ್ನೇ ಸಾಮಾನ್ಯಜೀವನದಲ್ಲೂ ಅಳವಡಿಸಿಕೊಳ್ಳಬೇಕು – ಎನ್ನುತ್ತಾರೆ, ಮಹಾತ್ಮರು. ಉದಾಹರಣೆಗೆ, ಕನಕದಾಸರು "ತನು ನಿನ್ನದು ಜೀವನ ನಿನ್ನದು, ರಂಗಾ" ಎಂಬ ಕೃತಿಯಲ್ಲಿ ಇಂದ್ರಿಯಗಳು ಭೋಗಿಸುವ ವಸ್ತುಗಳನ್ನೆಲ್ಲಾ ಭಗವದರ್ಪಣ ಮಾಡಿ ಕೃತಾರ್ಥರಾಗಿರಿ -  ಎಂಬ ಸಂದೇಶವನ್ನು ಕೊಟ್ಟಿದ್ದಾರೆ. ಮುಕುಂದಮಾಲೆಯಲ್ಲಿ ಬರುವ "ಜಿಹ್ವೇ ಕೀರ್ತಯ ಕೇಶವಂ" ಎಂಬ ಶ್ಲೋಕವು, ಎಲ್ಲ ಇಂದ್ರಿಯಗಳಿಗೂ ಭಗವತ್ಸಂಬಂಧಿಯಾದ ವಿಷಯವನ್ನು ಕೊಡುವಂತೆ ತಿಳಿಹೇಳುತ್ತದೆ.

ಇಂದ್ರಿಯ-ಜಗತ್ತಿನಲ್ಲಿದ್ದುಕೊಂಡೂ ಭಗವಂತನಿಗೆ ಅಭಿಮುಖವಾಗಿ ಇರುವುದೇ ಎರಡೂ ಹಾದಿಗಳಲ್ಲೂ ಏಕೋದ್ದೇಶವಾಗಿದೆ. ಇದೇ ಉದ್ದೇಶವನ್ನು ಮತ್ತೂ ವಿಶೇಷವಾಗಿ ಹಬ್ಬ-ಹರಿದಿನಗಳಂದು ನಡೆಸುವುದಾಗುತ್ತದೆ. ಏಕೆಂದರೆ, ಈ ಪರ್ವದಿನಗಳು ಆಧ್ಯಾತ್ಮಿಕಪ್ರಗತಿಗೆ ಹೇಳಿಮಾಡಿಸಿದಂತಹ ಕಾಲಘಟ್ಟಗಳು. ಆದಾಗ್ಯೂ ಅದರೊಂದಿಗೇ ಇಂದ್ರಿಯಗಳಿಗೂ ಹಬ್ಬವಾಗುತ್ತವೆ.

ನಮ್ಮಲ್ಲಿ ಹಲವರಿಗೆ ಹಬ್ಬ ಎಂದರೆ ಹೊಸಬಟ್ಟೆ, ರುಚಿಯಾದ ತಿಂಡಿತಿನಿಸುಗಳು, ಹಲವಾರು ಬಂಧು-ಸ್ನೇಹಿತರೊಂದಿಗೆ ಕಾಲ-ಯಾಪನ (ಎಂದರೆ ಕಾಲ ಕಳೆಯುವುದು) - ಮುಖ್ಯವಾಗಿ ಇಷ್ಟೇ. ಇನ್ನು ಕೆಲವರಿಗೆ ದೇವರ ಪೂಜೆ, ದೇವರಿಗೆ ಮಾಡುವ ಹೂವಿನ ಅಲಂಕಾರ ಇವುಗಳಲ್ಲಿ ಆಸಕ್ತಿ.

ಆದರೆ ಇವೆಲ್ಲಕ್ಕೂ ಸಾರಭೂತವಾದದ್ದೆಂದರೆ ಆ ಹಬ್ಬದ ಆಚರಣೆಯ ಹಿಂದಿರುವ ತತ್ತ್ವದ ಜ್ಞಾನ. ಅದನ್ನು ತಿಳಿದಾಗಲೇ, ನಾವು ಆಚರಣೆ ಮಾಡುತ್ತಿರುವ ರೀತಿಯಲ್ಲಿ ಆ ತತ್ತ್ವಕ್ಕೆ ವಿರುದ್ಧವಾದದ್ದೇನೂ ಇಲ್ಲವೆಂಬುದನ್ನು ಖಾತ್ರಿ ಮಾಡಿಕೊಳ್ಳಲು ಸಾಧ್ಯ.

ಉದಾಹರಣೆಗೆ, ಸಂತೋಷವಾಗಿ ನಮ್ಮವರೊಂದಿಗೆ ಕುಳಿತು, ನೈವೇದ್ಯ ಮಾಡಿರುವಂತಹ ರುಚಿಯಾದ ಆಹಾರವನ್ನು ಸೇವಿಸುವುದು ಹಬ್ಬದ ಒಂದು ಉದ್ದೇಶವೇ ಆದರೂ, ಅದರೊಂದಿಗಿನ ಮುಖ್ಯೋದ್ದೇಶವನ್ನು ಮರೆಯುವಂತಿಲ್ಲ. ಶ್ರೀರಂಗಮಹಾಗುರುಗಳ ಮಾತುಗಳಲ್ಲಿ ಹೇಳಬೇಕೆಂದರೆ "ಅಂದು ಸೇವಿಸುವ ಆಹಾರ ಪಾನೀಯಗಳು ಕೇವಲ ಉದರತೃಪ್ತಿಯಲ್ಲಿ ನಿಲ್ಲದೆ ದಾಮೋದರನ ಸಂತೃಪ್ತಿಯಲ್ಲಿ ವಿಶ್ರಾಂತಿ ಹೊಂದಬೇಕು".

ಹಬ್ಬವೇನೋ ಗೊತ್ತು, ಹರಿದಿನಗಳೆಂದರೇನು? ಹರಿದಿನ ಎಂದರೆ ಹರಿಯ ದಿನ, ಎಂದರೆ ಭಗವದಾರಾಧನೆಗೆ ಮಾತ್ರ ಸಮರ್ಪಿತವಾದ ದಿನ. ಹಬ್ಬಗಳಲ್ಲಾದರೂ ಭಗವಂತನ ಆರಾಧನೆಯೊಂದಿಗೆ ಇಂದ್ರಿಯಪ್ರೀತಿಯಾಗುವ ವಿಷಯಗಳನ್ನು ಕೊಡುವುದುಂಟು.

ಇವುಗಳಲ್ಲಿ ಕೆಲವು ವಿಶೇಷವಾದ "ಉಪವಾಸ"ದ ಪರ್ವಗಳಿವೆ - ಶಿವರಾತ್ರಿ, ಏಕಾದಶಿಯಂತಹವು. ಭಗವದಾರಾಧನೆಗೇ ಒತ್ತು, ಹೊಟ್ಟೆಗೆ ಉಪವಾಸ, ಆತ್ಮನಿಗೆ "ಉಪ-ವಾಸ", ಎಂದರೆ ದೇವರ ಸಂನಿಧಿಯಲ್ಲಿ ವಾಸ, ಹಾಗೂ ಅದರ ಮೂಲಕ ಆನಂದದೌತಣ.

ಇನ್ನು ಅವುಗಳ ಆಚರಣೆಗೆ ಬಂದರೆ, ಹಬ್ಬ-ಹರಿದಿನಗಳಲ್ಲಿ ನಮ್ಮ ಮನಃಸ್ಥಿತಿಯನ್ನು ಹೇಗಿಟ್ಟುಕೊಂಡಿರಬೇಕು? ಭರ್ಜರಿಯಾಗಿ ಪೂಜೆ ಮಾಡಲು ಅಣಿಮಾಡಿಕೊಳ್ಳುವ ಭರದಲ್ಲಿ ಮನಸ್ಸಿಗೆ ಟೆನ್ಷನ್ ಅನ್ನೋ ಕೆಲಸ ಸಾಗದಿದ್ದಾಗ ಬೇರೆಯವರ ಮೇಲೆ ಕಿಡಿಗಾರುವುದೋ ಅಥವಾ ಆಗುವ ಖರ್ಚಿಗೆ ಕೊರಗುತ್ತಲೋ ಇರುವುದು ಸರಿಯಲ್ಲ.  

ಭಗವಂತನ ಪೂಜೆಗೆ ಮೊಟ್ಟಮೊದಲು ಬೇಕಾದದ್ದು ಮನಸ್ಸಿನ ಶಾಂತಿ, ತದನಂತರ ಯಥಾಶಕ್ತಿ ತಯಾರಿ. ಉದ್ವೇಗದಿಂದ ಮಾಡುವ ಕಾರ್ಯವಲ್ಲ ಇದು. ನೀರಿನ ಮೇಲೆ ರಂಗೋಲೆ ಹಾಕುವುದನ್ನು ಕೇಳಿರಬಹುದು ನೀವು. ಅದಕ್ಕೆ ತಟ್ಟೆಯಲ್ಲಿ ನಿಶ್ಚಲವಾದ ನೀರಿನ ಮೇಲೆ ಇಜ್ಜಲಿನ ಪುಡಿಯ ಒಂದು ಪದರವನ್ನು ತೆಳ್ಳಗೆ ಉದುರಿಸಿ, ನಂತರ ಅದರ ಮೇಲೆ ರಂಗೋಲೆ ಹಾಕಲಾಗುತ್ತದೆ! ನೀರು ನಿಶ್ಚಲವಾಗಿ ಇರದಿದ್ದರೆ, ಅಲ್ಲಿ ರಂಗೋಲೆ ಹಾಕುವುದು ಅಸಾಧ್ಯವಾಗುತ್ತದೆ. ಅದೇ ರೀತಿ ಇಲ್ಲೂ - ಶಾಂತಚಿತ್ತರಾಗಿ ಪೂಜೆ ಮಾಡಿದಾಗಲೇ ನಮಗೆ ಭಗವಂತನೆಡೆಗೆ ಮನಸ್ಸನ್ನು ಸಂಪೂರ್ಣ ಕೊಡಲಾಗುವುದು.

ಐತಿಹಾಸಿಕವಾಗಿ, ನಮ್ಮಲ್ಲಿ ಜಗನ್ನಾಥಪುರಿಯ ರಥೋತ್ಸವದಂತಹ ಉತ್ಸವಗಳೂ ಕುಂಭಮೇಳದಂತಹ ಧಾರ್ಮಿಕ ಸೇರ್ವೆಗಳೂ ಸಾಮೂಹಿಕವಾದ ಆಚರಣೆಗಳಾಗಿವೆ, ಹಬ್ಬಗಳಲ್ಲ. ಆದರೆ ಮಹಾರಾಷ್ಟ್ರ ಪ್ರಾಂತದಲ್ಲಿ ಗಣೇಶೋತ್ಸವವನ್ನು ಆಚರಿಸುವುದರ ಮೂಲಕ ಹಬ್ಬಗಳನ್ನು ಸಾಮೂಹಿಕವಾದ ಆಚರಣೆಯಾಗಿ ಮಾಡಲು ಪ್ರಾರಂಭಿಸಿ ಸನಾತನಿಗಳನ್ನು ಒಗ್ಗೂಡಿಸಿದ್ದು ಬಾಲಗಂಗಾಧರ ಟಿಳಕರು.

ಸಾಮೂಹಿಕವಾಗಿ ಪರ್ವದಿನವನ್ನು ಆಚರಿಸುವಾಗಲಂತೂ ವಿಶೇಷವಾಗಿ ಅದರ ಮೂಲತತ್ತ್ವಕ್ಕೆ ವಿರುದ್ಧವಾಗಿ ನಾವೇನೂ ಮಾಡುತ್ತಿಲ್ಲ ತಾನೇ? - ಎಂಬ ಎಚ್ಚರಿಕೆ ವಹಿಸಬೇಕಾಗುತ್ತದೆ. ಉದಾಹರಣೆಗೆ, ಹಲವೆಡೆಗಳಲ್ಲಿ ಗಣೇಶನ ಹಬ್ಬ ಆಚರಿಸುವ ಹೆಸರಲ್ಲಿ ಸಭ್ಯವೆನಿಸದ ಸಿನಿಮಾ-ಸಂಗೀತವನ್ನು ಧ್ವನಿವರ್ಧಕಗಳ ಮೂಲಕ ಹಾಕುವುದು ಯಾವ ರೀತಿಯಲ್ಲೂ ಆ ದೇವತಾರಾಧನೆಗಾಗಲಿ, ಅದು ತಂದುಕೊಡಬೇಕಾದ ಮನೋವೃತ್ತಿಗಾಗಲಿ, ಪೂರಕವಾದದ್ದಲ್ಲ.

ಕಾಲಧರ್ಮವು ಪೋಷಕವಾಗಿರುವಾಗ ಆಧ್ಯಾತ್ಮಿಕಪ್ರಗತಿಗೆ ನಾವು ಶ್ರಮಿಸಬೇಕು. ಅದಕ್ಕೆ,  ಶ್ರೀರಂಗಮಹಾಗುರುಗಳು ಹೇಳಿದ ಸೂತ್ರ "ಗಾಳಿ ಬಂದಾಗ ತೂರಿಕೋ" - ಎಂಬುದಾಗಿ. ಅದನ್ನು ನೆನೆದು, ಈ ಮುಂದೆ ಬರುವ ಪರ್ವದಿನಗಳನ್ನು ತತ್ತ್ವವನ್ನು ತಿಳಿದು, ಶಾಂತರಾಗಿ ಆಚರಿಸುವತ್ತ ನಾವು ಮನಸ್ಸು ಕೊಡಬೇಕು, ಅಲ್ಲವೇ?

ಸೂಚನೆ : 11/10/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 78 ದನಕಾಯುವ ಜಗದೊಡೆಯನ ಮುಖಮಾಧುರ್ಯ (Krishakarnamrta 78)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಶ್ರೀಕೃಷ್ಣನು ನಮ್ಮನ್ನು ಕಾಪಾಡಲಿ - ಎಂಬುದಾಗಿ ಕೇಳಿಕೊಳ್ಳುವ ಶ್ಲೋಕವೊಂದು ಇಲ್ಲಿದೆ. ಇದರಲ್ಲೆಲ್ಲೂ "ಶ್ರೀಕೃಷ್ಣ" ಎಂಬ ಪದವನ್ನೇ ಬಳಸಿಲ್ಲ, ಲೀಲಾಶುಕ. ಬದಲಾಗಿ ನಾಲ್ಕು ಪಾದಗಳಲ್ಲಿ ನಾಲ್ಕು ವಿಶೇಷಣಗಳನ್ನು ಬಳಸಿದ್ದಾನೆ. ಅವುಗಳು ಹೇಳುವುದು ಕೃಷ್ಣನ ವೈಭವವನ್ನೇ ಎನ್ನುವುದು ಸ್ಪಷ್ಟವೇ ಸರಿ.

ಕೃಷ್ಣನು ಅಖಿಲೇಶ್ವರ, ಎಲ್ಲಕ್ಕೂ ಒಡೆಯ. ಆತನ ಮೈಯೂ ಆತನ ವೈಭವವೇ. ಕೃಷ್ಣನ ಶರೀರವು ದಿವ್ಯವಾದದ್ದು. ಅದು ಕಾಂತಿಯಿಂದ ತುಂಬಿರುವುದು. ಅಷ್ಟೇ ಅಲ್ಲ, ಅದು ಪರಿಮಲಭರಿತವೂ ಹೌದು. ಕಿಶೋರಭಾವಕ್ಕೂ ಯೌವನಕ್ಕೂ ಮಧ್ಯದಲ್ಲಿರುವ ಸ್ಥಿತಿ : ಯೌವನವಿನ್ನೂ ಆವರಿಸಿಲ್ಲ, ವ್ಯಕ್ತವಾಗಿಲ್ಲ. ಆ ಅವ್ಯಕ್ತತೆಯೇ ಆತನ ಕಿಶೋರಸ್ಥಿತಿಯನ್ನು ಆವರಿಸಿದೆ. ಮೇಲಿನ ಎರಡಂಶಗಳು ಕೃಷ್ಣನ ಶರೀರದ ಸೊಬಗನ್ನು ಸೂಚಿಸತಕ್ಕವು. ಕೃಷ್ಣನಿಗೇ ವಿಶಿಷ್ಟವಾದ ಒಂದಂಶವೂ ಉಂಟು. ಆತನು ಶಿಕ್ಷಣ ಪಡೆದುಕೊಂಡಿರುವುದು ಗವ್ಯಾನುಪಾಲನದಲ್ಲಿ. ಗವ್ಯವೆಂದರೆ ಗೋ-ಸಮೂಹ. (ಪಂಚ-ಗವ್ಯವೆನ್ನುವಾಗ ಗವ್ಯವೆಂದರೆ ಬೇರೆ ಅರ್ಥ: ಗೋವಿನಿಂದ ಜನಿಸಿದ ಪದಾರ್ಥ - ಎಂದು). ಹಸುವಿನ ಮಂದೆಯ ಅನುಪಾಲನವಿಧಿಯೆಂದರೆ ಅವನ್ನು ಕಾಯುವ ಬಗೆ. ಆ ಬಗ್ಗೆ ಆತನು ಅನುಶಿಷ್ಟ. ಅನುಶಿಷ್ಟನೆಂದರೆ ಅನುಶಾಸನಕ್ಕೆ ಒಳಪಟ್ಟಿರುವವನು, ಶಿಕ್ಷಣ ಹೊಂದಿರುವವನು.

ಇಷ್ಟಲ್ಲದೆ ಅವ್ಯಾಜ-ರಮ್ಯತೆಯೂ ಅಲ್ಲಿದೆ. ವ್ಯಾಜವೆಂದರೆ ನೆಪವೆಂದೋ ಕಾರಣವೆಂದೋ ಅರ್ಥ. ಯಾರಾದರೂ ಚೆನ್ನಾಗಿ ಕಾಣಲು ವೇಷವೋ ಭೂಷಣಗಳೋ ಕಾರಣವಾಗುವುದುಂಟು. ಅವೇನೂ ಇಲ್ಲದೆಯೇ ಯಾವುದು ಸೊಗಯಿಸುವುದೋ ಅದು ಅವ್ಯಾಜ-ರಮ್ಯ. ಹಾಗಿರುವ ಅಖಿಲೇಶ್ವರನ ವೈಭವವು ಕಾಪಾಡಲಿ ನಮ್ಮನ್ನು - ಎಂಬುದಾಗಿ ನಮ್ಮೆಲ್ಲರಿಗೂ ರಕ್ಷಣೆಯನ್ನು ಕೋರುತ್ತಿದ್ದಾನೆ, ಲೀಲಾಶುಕ. ಶ್ಲೋಕ ಹೀಗಿದೆ:

ಸುವ್ಯಕ್ತ-ಕಾಂತಿ-ಭರ-ಸೌರಭ-ದಿವ್ಯ-ಗಾತ್ರಂ
ಅವ್ಯಕ್ತ-ಯೌವನ-ಪರೀತ-ಕಿಶೋರ-ಭಾವಂ |
ಗವ್ಯಾನುಪಾಲನ-ವಿಧಾವನುಶಿಷ್ಟಂ ಅವ್ಯಾತ್
ಅವ್ಯಾಜ-ರಮ್ಯಂ ಅಖಿಲೇಶ್ವರ-ವೈಭವಂ ನಃ ||

ಮೊದಲನೆಯ ಪಾದವು ಸುವ್ಯಕ್ತವಾದುದನ್ನು ಹೇಳಿದರೆ, ಎರಡನೆಯ ಪಾದವು ಅವ್ಯಕ್ತವಾದುದನ್ನು ಹೇಳುತ್ತದೆ. ನಾಲ್ಕು ಪಾದಗಳಲ್ಲೂ ದ್ವಿತೀಯಾಕ್ಷರಪ್ರಾಸವನ್ನು ಕಾಣಬಹುದು. ಜಗದೊಡೆಯನೇ ದನಕಾಯುವವನಾಗಿರುವ ಲೀಲೆಯನ್ನುಈ ಪದ್ಯದಲ್ಲಿ ಪರಿಶೀಲಿಸಿದೆ.

***

ಕೃಷ್ಣನು ನಮ್ಮನ್ನು ಸಂತೋಷಪಡಿಸಲಿ ಎಂದು ಬಯಸುತ್ತಾನೆ, ಕವಿ ಲೀಲಾಶುಕ. ಕೃಷ್ಣನೊಂದು ತೇಜಸ್ಸು. ಬಹಳ ವಿಶೇಷವಾದ ತೇಜಸ್ಸದು. ರಮೆಯ ಅಂತಃಪುರವೆನಿಸುವ ತೇಜಸ್ಸು. ಲಕ್ಷ್ಮಿಯು ಸದಾ ಆತನ ಹೃದಯದಲ್ಲೇ ನೆಲೆಸಿರುವಳಷ್ಟೆ? ರಾಣಿವಾಸದವರನ್ನು ರಾಜನ ಅಂತಃಪುರವೆನ್ನುವುದನ್ನು ಕೇಳಿರುತ್ತೇವೆ. ಆದರೆ ಲೀಲಾಶುಕನ ನಿರೂಪಣೆಯಲ್ಲಿ, ಲಕ್ಷ್ಮಿಯ ಅಂತಃಪುರವೇ ಶ್ರೀಕೃಷ್ಣ! ಕೃಷ್ಣನು ಅಧಿಕ-ಮನೋಹರ - ಎಂದರೆ ಅತ್ಯಂತ ಆಕರ್ಷಕನಾಗಿರುವವನು. ಅಧಿಕವೆಂದರೆ ಎಷ್ಟು? ಅದಕ್ಕೇನಾದರೂ ಅಳತೆಗೋಲುಂಟೆ? ಉಂಟು. ಎಷ್ಟೆಂದರೆ ವ್ರಜ-ಯುವತಿಯರ, ಅರ್ಥಾತ್ ಗೊಲ್ಲತಿಯರ, ಅಚ್ಚುಮೆಚ್ಚು ಆತ. ಅವರಿಗೆ ಆತನು ಅಚ್ಚುಮೆಚ್ಚೆಂದರೆ ಅವನನ್ನು ಕಾಣುತ್ತಿರುವ ಬಯಕೆ ಅವರದು - ಎಂದೇ. ಅವರ ವಿಲೋಚನಗಳಿಗೆ ಆತನು ಅವಲೇಹ್ಯನಂತೆ. ಹಾಗೆಂದರೆ ತಮ್ಮ ಕಣ್ಣುಗಳಿಂದ ಆತನನ್ನು ನೆಕ್ಕುವರಂತೆ ಅವರು! ಲೇಹ್ಯವೆಂದರೆ ನೆಕ್ಕಿ ನೆಕ್ಕಿ ಆಸ್ವಾದಿಸುವಂತಹುದು. ಒಂದೇ ತುತ್ತಿಗೋ ಒಂದೇ ಗುಟುಕಿಗೋ ನುಂಗಿ ಮುಗಿಸಿಬಿಡುವಂತಹುದಲ್ಲ. ನಾಲಿಗೆಯ ಮೇಲೆಲ್ಲಾ ಪಸರಿಸಿಕೊಂಡು ಮೆಲ್ಲಮೆಲ್ಲನೆ ಆಸ್ವಾದಿಸಿ ಸುಖಿಸುವಂತಹ ವಸ್ತುವೇ ಲೇಹ್ಯ.

ನಾಲಿಗೆಯ ಈ ಕೆಲಸವನ್ನು ಕಣ್ಣಿಗೆ ಹಚ್ಚುವ ಪರಿಯಲ್ಲಿ ಕವಿಯ ಕೈವಾಡವು ಕಾಣುತ್ತದೆ. ಕೃಷ್ಣನನ್ನು ಒಮ್ಮೆ ಕಂಡರೂ ತೃಪ್ತಿಯಾಗುವುದೇ; ಜೊತೆಗೇ, ಎಷ್ಟು ಕಂಡರೂ ತೃಪ್ತಿಯೇ ಇಲ್ಲ - ಎಂಬುದೂ ನಿಜವೇ. ಎವೆಯಿಕ್ಕದೆ ನೋಡುತ್ತಿರಬೇಕೆಂಬ ತನ್ನ ಹೃದ್ಗತವಾದ ಆಸೆಯನ್ನೇ ವ್ರಜಾಂಗನೆಯರ ಹಂಬಲಿಕೆಯಾಗಿ ಕವಿ ನಿರೂಪಿಸುತ್ತಿದ್ದಾನೆ. ತಮ್ಮೆರಡೂ ಕಣ್ಣುಗಳಿಂದ ಆತನನ್ನು ತುಂಬಿಕೊಳ್ಳುತ್ತಿರುವವರು, ಗೋಕುಲದ ಮುಗ್ಧರಮಣಿಯರು.

ಕೆಲವರ ಮುಖ-ಮಾಧುರ್ಯವು ಹೇಗಿರುವುದೆಂದರೆ ಅವರನ್ನು ಸುಮ್ಮನೆ ನೋಡುತ್ತಿರಬೇಕೆನಿಸುತ್ತದೆ. ಅವರು ಕಿಂಚಿತ್ತಾದ ಮಂದಹಾಸವನ್ನು ಬೀರಿದರಂತೂ ಮತ್ತೂ ಮನೋಹರವಾಗಿಯೇ ತೋರುತ್ತಾರೆ. ಕೃಷ್ಣನಿಲ್ಲಿ ಹಾಗೆಯೇ. ತನ್ನ ಮಂದಹಾಸದಿಂದಲೇ ಅಧಿಕ-ಮನೋಹರನಾಗಿ ತೋರಿ ಮನಸೆಳೆದವನು.

ಏನಿದೆ ವಿಶೇಷ ಆತನ ಮಂದಹಾಸಗಳಲ್ಲಿ? ಅತ್ಯಂತ ಆಸ್ವಾದ್ಯವೆನಿಸುವುದು ಅಮೃತವೆನ್ನುತ್ತಾರಲ್ಲವೇ? ಅದನ್ನು ಹೋಲುವುದೇ ಈ ಮಂದಸ್ಮಿತ? - ಎಂದು ಕೇಳುವಿರೇನು? ಹೋಲುವುದಲ್ಲ, ಇದರ ಮುಂದೆ ಅದೇ ಸೋಲುವುದು! ಸುಧೆಗೆ ಮದವಿರಬಹುದು, ತಾನೇ ಅತ್ಯಂತ ಆಸ್ವಾದ್ಯವೆಂದು. ಅದರಿಂದುಂಟಾಗುವ ಯಾವ ಅಹಂಕಾರವುಂಟೋ ಅದನ್ನೇ ಅಪಹಾಸ್ಯಮಾಡುವ ಆಸ್ವಾದ್ಯತೆ ಶ್ರೀಕೃಷ್ಣನ ಮಂದಹಾಸಕ್ಕುಂಟು. ಎಂತಹ ಆರ್ದ್ರವಾದ ಹಸಿತ, ಕೃಷ್ಣನದು! ಆರ್ದ್ರವೆಂದರೆ ಒದ್ದೆ, ಅರ್ಥಾತ್ ರಸಭರಿತವಾದದ್ದು. ಹೀಗೆ ಸುಧೆಯನ್ನು ಮೀರಿಸುವ ಮಂದಹಾಸದಿಂದಾಗಿ ಅತಿಮನೋಹರನಾಗಿದ್ದು ಗೊಲ್ಲತಿಯರ ನೇತ್ರಗಳಿಗೆ ಹಬ್ಬವಾಗಿದ್ದ ಕೃಷ್ಣನು ನಮ್ಮನ್ನೂ ಸಂತೋಷಪಡಿಸಲಿ - ಎನ್ನುತ್ತಾನೆ, ಲೀಲಾಶುಕ.

ಶ್ಲೋಕ ಹೀಗಿದೆ:
ಅಪಹಸಿತ-ಸುಧಾ-ಮದಾವಲೇಪೈಃ
ಅಧಿಕ-ಮನೋಹರಂ ಆರ್ದ್ರ-ಮಂದಹಾಸೈಃ |
ವ್ರಜ-ಯುವತಿ-ವಿಲೋಚನಾವಲೇಹ್ಯಂ
ರಮಯತು ಧಾಮ ರಮಾವರೋಧನಂ ನಃ ||

***

ನನ್ನ ಮನಸ್ಸಿನಲ್ಲಿ ನಲಿಯಲಿ, ಆ ತೇಜಸ್ಸು - ಎಂದು ಕೇಳಿಕೊಳ್ಳುತ್ತಾನೆ, ಲೀಲಾಶುಕ. ಯಾವುದು ಆ ತೇಜಸ್ಸು? ಅದೇನೆಂದು ಹೇಳಲಾಗದು- ಎನ್ನುತ್ತಾನೆ, ಕವಿ; ಆದರೂ ಕೆಲವೇ ಲಕ್ಷಣಗಳನ್ನು ಹೇಳಲು ಶಕ್ಯ. ಏನನ್ನೂ ಹೇಳಲೇ ಆಗದೆಂದೆನ್ನುವಲ್ಲಿ ಆ ಬಗ್ಗೆ ಮಾತನಾಡುವುದಾದರೂ ಎಂತು?

ಹಾಗಿದ್ದರೆ ಆ ಬಗ್ಗೆ ಏನನ್ನು ಹೇಳಬಹುದು? ಕಾಡಿನಲ್ಲಿ ಅದು ಜಗಳ ಮಾಡಿಕೊಂಡಿದೆಯೆನ್ನಬಹುದು. ಕಾಡೆಂದರೆ ವೃಂದಾವನವೇ. ಅದರ ಜಗಳ ಮೋಡದೊಂದಿಗೆ. ಇಬ್ಬರು ಬೆಳ್ಳಗಿದ್ದರೆ ಕೆಲವೊಮ್ಮೆ ಪೈಪೋಟಿಯಿರುವುದಲ್ಲವೇ - ತಾ ಹೆಚ್ಚು ಬಿಳಿಯೋ ನಾ ಹೆಚ್ಚೋ? – ಎಂದು. ಹಾಗಿಲ್ಲಿ ನಾ ಕರಿಯೋ ನೀ ಕರಿಯೋ ಎಂದು ಪೈಪೋಟಿ! ಏಕೆ? ಕೃಷ್ಣನೂ ಕಪ್ಪು, ಕಾಳಮೇಘವೂ ಕಪ್ಪು. ಯಾರು ಹೆಚ್ಚು ಕಪ್ಪೆಂಬ ಪೈಪೋಟಿ. ಹೀಗೆ ಹೇಳುವುದರ ತಾತ್ಪರ್ಯವೆಂದರೆ, ಕೃಷ್ಣವೆಂಬ ತೇಜಸ್ಸು ಕಾಲಮೇಘದಂತೆ ಇದೆ, ಎಂಬುದೇನೋ ಅಷ್ಟೇ. ಮುಖಕ್ಕೂ ಕಮಲಕ್ಕೂ ಪೈಪೋಟಿಯೆಂದರೆ ಹೇಗೋ ಹಾಗೆಯೇ ಇದೂ. ಪೈಪೋಟಿಯೆಂದರೂ ಔಪಮ್ಯವೇ ಉದ್ದಿಷ್ಟ.

ಈ ಕಪ್ಪಾದ ಮಹಸ್ಸಿನ ವಿಶೇಷವೆಂದರೆ ಅದರ ವೇಣುಧ್ವನಿಯು ಎಲ್ಲರಿಗೂ ಮಾನ್ಯವಾಗಿದೆ. ಎಲ್ಲರಿಗೂ ಎಂದು ಹೇಳಲೇಬೇಕಿಲ್ಲ. ಪರಮ-ಸಂಗೀತ-ರಸಿಕರು ಯಾರೋ ಅವರಿಗೆ ಮೆಚ್ಚುಗೆಯಾಗಿದೆಯೆಂದು ಹೇಳಿದರೆ ಸಾಕು. ಆಗ ಮಿಕ್ಕವರು ಲೆಕ್ಕಕ್ಕೇ ಇಲ್ಲ. ಯಾರವರು ಅಂತಹ ಸಂಗೀತ-ರಸಿಕರು? ಅವರೇ ಕಿನ್ನರಿಯರು. ಆಕಾಶದಲ್ಲಿ ಸಂಚರಿತತಕ್ಕ ಕಿಂನರ/ಕಿಂಪುರುಷರ ನಾರಿಯರು. ಖೇಚರರಾದ ಅವರು ಗಾಂಧರ್ವ-ಗಾನದ ಅರಿವುಳ್ಳವರು. ಅವರೇ ಮನಸೋತಿರುವ ಮೃದುವಾದ ವೇಣು-ಧ್ವನಿ, ಈ ಕೃಷ್ಣನೆಂಬ ತೇಜಸ್ಸಿನದು. ಈ ಅಂಶಗಳಿಗಿಂತಲೂ ಮಿಗಿಲಾದ ಒಂದು ಅಂಶವಿದೆ, ಆ ತೇಜಸ್ಸಿನಲ್ಲಿ. ಅದೆಂದರೆ ಅದು ಕೃಪಾಸ್ಪದವಾದದ್ದು, ಎಂದರೆ ದಯಾಮಯವಾದದ್ದು. ಈ ಕಾರಣಕ್ಕಾಗಿಯೇ ಆ ತೇಜಸ್ಸು ನಮ್ಮ ಮನಸ್ಸಿನಲ್ಲಿ ಆಡಲಿ - ಎಂದು ಕೇಳಿಕೊಂಡಿರುವುದು.

ಖೇಲತಾಂ ಮನಸಿ ಖೇಚರಾಂಗನಾ-

-ಮಾನನೀಯ-ಮೃದು-ವೇಣು-ನಿಃಸ್ವನೈಃ |

ಕಾಲಮೇಘ-ಕಲಹೋದ್ವಹಂ ಮಹಃ

ಕಾನನೇ ಕಿಮಪಿ ನಃ ಕೃಪಾಸ್ಪದಮ್ ||

ಸೂಚನೆ : 11/10/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.