ಲೇಖಕರು : ವಿದ್ವಾನ್ ಅನಂತ ಬಿ.ಜಿ.
ಪ್ರತಿಕ್ರಿಯಿಸಿರಿ (lekhana@ayvm.in)
ಅನಂತಪದ್ಮನಾಭನ ಸ್ವರೂಪ.
ಈ ಮೂರ್ತಿಗೆ ಎರಡು ಬಾಹುಗಳಿವೆ. ಅವುಗಳಲ್ಲಿ ಮೇಲಿರುವ ಎಡಗೈಯಲ್ಲಿ ಕೆಳಮುಖವಾದ ಒಂದು ಕಮಲವನ್ನು ತನ್ನ ಕಂಠದ ನೇರಕ್ಕೆ ಹಿಡಿದುಕೊಂಡಿದ್ದಾನೆ. ಕೆಳಗೆ ಚಾಚಿರುವ ಬಲಗೈಯಿಂದ ಶಿವಲಿಂಗವನ್ನು ಮುಚ್ಚಿಕೊಂಡಂತೆ ಕಾಣುತ್ತದೆ. ಹತ್ತಿರದಲ್ಲಿ ತನಗೆ ಸುಪ್ರಭಾತವನ್ನು ಬಯಸುತ್ತಿರುವ ಋಷಿಗಳನ್ನು ಮತ್ತು ಅನೇಕ ದೇವತೆಗಳನ್ನು ತನ್ನ ಯೋಗ ನಿದ್ರೆಯಿಂದ ಎಚ್ಚರಗೊಂಡಿರುವ ವಿಶಾಲವಾದ ಕಣ್ಣುಗಳಿಂದ ಅನುಗ್ರಹಿಸುತ್ತಿರುವ ಭಂಗಿಯಲ್ಲಿ ಸ್ವಾಮಿಯು ವಿರಾಜಿಸಿದ್ದಾನೆ. ನಾಭಿಯ ಪದ್ಮದಲ್ಲಿ ಚತುರ್ಮುಖ ಬ್ರಹ್ಮನು ಬೆಳಗುತ್ತಿದ್ದಾನೆ. ಈ ದಿವ್ಯವಾದ ಮೂರ್ತಿಯನ್ನು ಶ್ರೀ ಕ್ಷೇತ್ರ ತಿರುವನಂತಪುರದಲ್ಲಿ ಸಂದರ್ಶಿಸಬಹುದಾಗಿದೆ.
ವ್ರತದ ಕಾಲ.
ದಕ್ಷಿಣಾಯನದಲ್ಲಿ ಬರುವ ಭಾದ್ರಪದ ಶುದ್ಧ ಚತುರ್ದಶಿಯಂದು ಈ ವ್ರತವನ್ನು ಆಚರಿಸಬೇಕು. ಈ ಬಾರಿ ಇದು ಇದೇ ಸೆಪ್ಟೆಂಬರ್ 6ನೇ ತಾರೀಖಿನಂದು ಒದಗಿ ಬಂದಿದೆ. ಈ ಹಬ್ಬದ ಮಾರನೆಯ ದಿವಸ ಬರುವ ಹುಣ್ಣಿಮೆಯನ್ನು ಅನಂತನ ಹುಣ್ಣಿಮೆ ಎಂಬ ಹೆಸರಿನಿಂದ ಕರೆಯುವುದುಂಟು.
ಆಚರಣೆಯ ಕ್ರಮ.
ಅಂದು ಬೆಳಿಗ್ಗೆ ಸ್ನಾನ, ನಿತ್ಯಕರ್ಮಗಳ ಅನಂತರ ದಂಪತಿಗಳು ಕೆಂಪು ವಸ್ತ್ರವನ್ನುಟ್ಟು ಆಚಮನವನ್ನು ಮಾಡಿ ಅನಂತ ವ್ರತವನ್ನು ಆಚರಿಸಲು ಸಂಕಲ್ಪ ಮಾಡಬೇಕು. ಈ ವ್ರತದ ಅಂಗವಾಗಿ ಯಮುನಾ ದೇವಿಯ ಪೂಜೆಯನ್ನು ಮಾಡುವುದು ಒಂದು ವಿಶೇಷ.
ಎರಡು ಕಳಶಗಳನ್ನು ಸ್ಥಾಪಿಸಿ ಎರಡರಲ್ಲಿಯೂ ಅನಂತದೇವನನ್ನು ಆವಾಹನೆ ಮಾಡಿ ಕಲ್ಪೋತ್ತವಾಗಿ ಪೂಜಿಸಬೇಕು. ಕಳಶ ಪೂಜೆ, ಪ್ರಾಣಪ್ರತಿಷ್ಠೆ, ದ್ವಾರಪಾಲಾದಿ ಪರಿವಾರದ ಪೂಜೆ, ದಿಕ್ಪಾಲಕರ ಪೂಜೆ, ಅಂಗಪೂಜೆ, ಪತ್ರ -ಪುಷ್ಪಗಳಿಂದ ಪೂಜೆ, ದರ್ಭೆಯಲ್ಲಿ ಮಾಡಿದ ಐದು ಅಥವಾ ಏಳು ಹೆಡೆಗಳ ಶೇಷನಾಗನ ಪೂಜೆ, ದೋರಗ್ರಂಥಿಗಳ ಪೂಜೆ, ಅನಂತನ ಅಷ್ಟೋತ್ತರ ಶತನಾಮಾವಳಿ ಅಂತೆಯೇ ಸಹಸ್ರನಾಮಾರ್ಚನೆ, ಧೂಪ ದೀಪ ನೈವೇದ್ಯ, ಪ್ರಾರ್ಥನೆಗಳು ಕ್ರಮವಾಗಿ ನಡೆಯಬೇಕು.
ಅನಂತಪದ್ಮನಾಭನನ್ನು ಕುಂಭಗಳಲ್ಲಿ ಮಾತ್ರವಲ್ಲದೆ ಮಂಡಲದಲ್ಲಿ ಮೂರ್ತಿಯಲ್ಲಿ ಮತ್ತು ಚಿತ್ರಪಟದಲ್ಲೂ ಪೂಜಿಸಬಹುದು. ಅನಂತಪದ್ಮನಾಭನ ವ್ರತದ ವಿಷಯದಲ್ಲಿ ಗಮನಿಸಬೇಕಾದ ಒಂದು ಮುಖ್ಯವಾದ ವಿಷಯ ಎಂದರೆ 14 ಎಂಬ ಸಂಖ್ಯೆ ಆತನ ವ್ರತದ ತಿಥಿಯು ಚತುರ್ದಶೀ ಆತನ ಪೂಜೆಯಲ್ಲಿ ಕೈಗೆ ಕಟ್ಟಿಕೊಳ್ಳುವ ಸೂತ್ರದ ಗ್ರಂಥಿಗಳು 14. ಆವರಣ ಪೂಜೆಯ ದೇವತೆಗಳು 14. ಆತನಿಗೆ ಸಮರ್ಪಿಸುವ ಪತ್ರಗಳ ಪುಷ್ಪಗಳ ಮತ್ತು ನೈವೇದ್ಯಗಳ ಸಂಖ್ಯೆ 14, ವ್ರತದ ಉದ್ಯಾಪನೆಯನ್ನು 14 ವರ್ಷದ ನಂತರ ಮಾಡಬೇಕು, 14 ಲೋಕಗಳಿಂದ ಕೂಡಿದ ಸಮಸ್ತ ವಿಶ್ವವೂ ಆತನ ಅಖಂಡವಾದ ಆಧಿಪತ್ಯಕ್ಕೆ ಸೇರಿದೆ ಎಂಬ ವಿಷಯಕ್ಕೆ ಈ ವಿಶಿಷ್ಟ ಸಂಖ್ಯೆಯು ಸಂಕೇತವಾಗಿದೆ.
ಅನಂತನ ದಾರ ಮತ್ತು ಗೋಧಿಯಿಂದ ಮಾಡಿದ ಸಜ್ಜಪ್ಪವೆಂಬ ಸಿಹಿಯಾದ ಭಕ್ಷ್ಯವು ಈ ವ್ರತದ ವಿಶೇಷಗಳಲ್ಲಿ ಸೇರುತ್ತದೆ. ಅಂತೆಯೇ ಅನಂತನಿಗೆ ಪ್ರಿಯವಾದ ವರ್ಣ . ಕೆಂಪು ಬಣ್ಣ, ಆದ್ದರಿಂದಲೇ ಅಂದು ವ್ರತವನ್ನು ಆಚರಿಸುವವರು ಕೆಂಪು ಬಣ್ಣದ ವಸ್ತ್ರಗಳನ್ನು ಧರಿಸಬೇಕು. ಅನಂತನ ದಾರದ ಬಣ್ಣವು ಕೆಂಪು, ರಕ್ತ ಚಂದನದಿಂದ ಅವನಿಗೆ ಲೇಪನ, ಜೊತೆಗೆ ಅನಂತನ ಗೊಂಡೆ ಎಂಬ ಹೆಸರಿನ ಕೆಂಪಾದ ಹೂವುಗಳು ಕೂಡ ಅನಂತನಿಗೆ ಪ್ರಿಯವಾದವು.
ಅನಂತಪದ್ಮನಾಭ ಮೂರ್ತಿಯ ಮತ್ತೊಂದು ವಿಶೇಷವೆಂದರೆ ಅವನ ಸುತ್ತ ನೆರೆದಿರುವ ಭಕ್ತಗಣण् ಅವರಲ್ಲಿ ಋಷಿಗಳಿದ್ದಾರೆ, ಕಿನ್ನರರಿದ್ದಾರೆ, ಕೆಂಪುರುಷರಿದ್ದಾರೆए ದೇವತೆಗಳೂ ಇದ್ದಾರೆ, ಅವರೆಲ್ಲರೂ ಏತಕ್ಕಾಗಿ ಸೇರಿದ್ದಾರೆ. ಎಂದರೆ ಯೋಗ ನಿದ್ರೆಯಲ್ಲಿ ಮುಳುಗಿ ಕಣ್ಣುಗಳನ್ನು ಮುಚ್ಚಿಕೊಂಡಿರುವ ಸ್ವಾಮಿಯು ಯಾವಾಗ ಲೋಕವನ್ನು ಅನುಗ್ರಹಿಸಲು ಕಣ್ಣುಗಳನ್ನು ತೆರೆಯುತ್ತಾನೆಯೋ, ಯಾವಾಗ ಯೋಗದ ಅನುಭವಗಳಿಂದ ತುಂಬಿದ ಅವನ ಕಮಲದ ಕಣ್ಣುಗಳನ್ನು ನೋಡುತ್ತೇವೆಯೋ, ಯಾವಾಗ ಅವನ ದೃಷ್ಟಿ ಪ್ರಸಾದವನ್ನು ಪಡೆಯುತ್ತೇವೆಯೋ ಎಂದು ಕಾತರದಿಂದ ಕಾದಿದ್ದಾರೆ.