ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ ೩೧. ಅನರ್ಥಫಲವನ್ನು ಕೊಡುವುದು ಯಾವುದು?
ಉತ್ತರ - ಮಾನ
ಈ ಮುಂದಿನ ಪ್ರಶ್ನೆ ಹೀಗಿದೆ - "ಅನರ್ಥವನ್ನು ಕೊಡುವುದು ಯಾವುದು?" ಎಂಬುದಾಗಿ. ಇದಕ್ಕೆ ಉತ್ತರ - "ಮಾನ" ಎಂದು. ಅಂದರೆ ಮಾನವೆಂಬುದು ಸರ್ವ ಅನರ್ಥಕ್ಕೂ ದಾರಿಯನ್ನು ಉಂಟುಮಾಡುತ್ತದೆ ಎಂದರ್ಥ. ಹಾಗಾದರೆ ಮಾನ ಎಂದರೇನು? ಇದು ಹೇಗೆ ಅನರ್ಥಕಾರಿಯಾದುದು? ಎಂಬುದನ್ನು ಚಿಂತಿಸಬೇಕಾಗಿದೆ.
ಮಾನ ಎಂಬ ಪದವು ಅನೇಕ ಅರ್ಥವನ್ನು ಕೊಡುತ್ತದೆ. ಮಾನ ಎಂದರೆ ಅಳತೆ. ಮಾನ ಎಂದರೆ ಮರ್ಯಾದೆ ಅಥವಾ ಒಂದು ಶಿಸ್ತುಬದ್ಧ ಜೀವನಕ್ರಮ. ಇನ್ನೊಂದು ಮಾನ ಎಂದರೆ ಗೌರವ. ಇನ್ನೊಂದು ಬಗೆಯಲ್ಲಿ ಹೇಳುವುದಾದರೆ ಮಾನ ಎಂದರೆ ಅವಮಾನ ಅಥವಾ ಅಪಮಾನ, ಅಹಂಕಾರ ಇತ್ಯಾದಿ. ಹಾಗಾದರೆ ಇಲ್ಲಿ ಯಾವ ಅರ್ಥವನ್ನು ಇಟ್ಟುಕೊಂಡಾಗ ಈ ಪ್ರಶ್ನೆಗೆ ಉತ್ತರ ಲಭಿಸುತ್ತದೆ? ಅಳತೆ ಎಂಬ ಅರ್ಥವನ್ನು ಕೊಡುವ ಮಾನ ಶಬ್ದವು ಈ ಉತ್ತರ ಕೊಡಲಾರದು. ಒಬ್ಬ ಮರ್ಯಾದೆಯಿಂದ ಗೌರವಯುತವಾಗಿ ಬದುಕಿದಾಗ ಅವನಿಗೆ ಎಲ್ಲಾ ರೀತಿಯಾದ ಅರ್ಥವು, ಪರಮಾರ್ಥವೂ ದೊರಕುತ್ತದೆ. ಇದು ಮಾನ ಎಂಬ ಶಬ್ದದ ಒಂದು ಬಗೆಯ ಅರ್ಥ. ಯಾವುದು ಅಪಮಾನ - ಅವಮಾನವನ್ನು ಉಂಟುಮಾಡುವಂತಹದ್ದೋ, ಅಂತಹ ಮಾನ ಎಂಬ ಶಬ್ದದ ಅರ್ಥವನ್ನು ಇಲ್ಲಿ ನಾವು ತೆಗೆದುಕೊಳ್ಳಬೇಕು. 'ಅವನಿಗೆ ಮಾನವಿಲ್ಲ' ಎಂಬುದಾಗಿ ಹೇಳುತ್ತಾರೆ. ಅಂದರೆ ಇಲ್ಲಿ ಮಾನ ಎಂಬುದು ಅತ್ಯಂತ ಕನಿಷ್ಠ ಗುಣವನ್ನು ಹೊಂದಿದವ ಎಂಬ ಅರ್ಥವನ್ನು ಕೊಡುವ ಸಂದರ್ಭದಲ್ಲಿ ಈ ಪದದ ಬಳಕೆ ಕಂಡುಬರುತ್ತದೆ. ಇರಬೇಕಾದದ್ದು ಇಲ್ಲದಿರುವ ಸಂದರ್ಭ ಇದಾಗಿದೆ. ಮಾನಕ್ಕಾಗಿ ಪ್ರತಿಯೊಬ್ಬರೂ ಕೂಡ ಕಷ್ಟಪಡುತ್ತಾರೆ; ಮಾನವನ್ನು ಉಳಿಸಿಕೊಳ್ಳಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ; ಮಾನ ಹೋದರೆ ಅದು ಮತ್ತೆ ಬರಲಾರದು ಎಂಬಷ್ಟರ ಮಟ್ಟಿಗೆ ಈ ಮಾನವನ್ನು ಉಳಿಸಿಕೊಳ್ಳಲು ಪ್ರಯತ್ನ ಸರ್ವವಿಧವಾಗಿ ನಡೆದೇ ಇರುತ್ತದೆ. ಹಾಗಾಗಿ ಯಾವಾಗ ಈ ಮಾನವೆಂಬುದು ಕೆಡುತ್ತದೆಯೋ, ಆಗ ಸರ್ವ ಅನರ್ಥವೂ ಉಂಟಾಗುತ್ತದೆ ಎಂಬುದು ಪ್ರಶ್ನೋತ್ತರದಲ್ಲಿರುವ ವಿಷಯವಾಗಿದೆ. ಮಾನ ಎಂಬುದು ಅವನ ಉತ್ತಮವಾದ ಜೀವನದ ಪ್ರವೃತ್ತಿಯಾಗಿದೆ. ಅದನ್ನು ಆತ ಕಳೆದುಕೊಂಡರೆ ಆಗ ಅಲ್ಲಿ ಎಲ್ಲ ಬಗೆಯ ಅನರ್ಥಗಳನ್ನೂ ಆತ ಅನುಭವಿಸಬೇಕಾಗುತ್ತದೆ. ಒಬ್ಬ ಮನುಷ್ಯ ಹೇಗೆ ಬದುಕಬೇಕು? ಹೇಗೆ ಬದುಕಿದರೆ ಆ ಮನುಷ್ಯತ್ವವು ಸಾರ್ಥಕವಾಗುತ್ತದೆ ಎಂಬ ವಿಷಯವಿದೆ. ಅಂತೆಯೇ ಬದುಕಬೇಕಾದದ್ದು ಅವನ ಕರ್ತವ್ಯವೂ ಕೂಡ ಆಗಿರುತ್ತದೆ. ಅದೇ ಅವನ ಮಾನ. ಹಾಗಲ್ಲದೆ ವಿರುದ್ಧವಾಗಿ ವರ್ತಿಸಿದಾಗ ಅದು ಅನರ್ಥವೇ ಸರಿ.
ಭಾರತೀಯ ಸಂಸ್ಕೃತಿಯಲ್ಲಿ ಬದುಕನ್ನು ಕೇವಲ ಭೌತಿಕವಾಗಿ ಕಾಣದೆ, ದೈವಿಕ ಮತ್ತು ಆಧ್ಯಾತ್ಮಿಕ ಎಂದು ಒಟ್ಟು ಮೂರು ಹಂತದ ಬದುಕನ್ನು ಹೇಳಲಾಗಿದೆ. ಈ ಮೂರು ಹಂತಗಳಲ್ಲಿ ಬದುಕನ್ನು ಗೌರವಯುತವಾಗಿ ಸಾಗಿಸಬೇಕು. ಇಹಜೀವನದಲ್ಲಿ ಬದುಕುವಾಗ ನಮ್ಮ ಸುತ್ತು ಮುತ್ತಲು ಇರುವವರ ಜೊತೆ ಅತ್ಯಂತ ಸಹೃದಯತೆಯ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಇದು ಭೌತಿಕಜೀವನದ ಮಾನವಾಗಿರುತ್ತದೆ. ಅಂತೆಯೇ ದೇವತೆಗಳು ಪ್ರಸನ್ನರಾಗುವಂತೆ ಬದುಕಿದರೆ ಅದು ದೈವಿಕಪ್ರಪಂಚದ ಮರ್ಯಾದೆ. ಇನ್ನೂ ಒಳಕ್ಕೆ ಸಾಗಿದಾಗ ಅಧ್ಯಾತ್ಮಪ್ರಪಂಚದ ಮರ್ಯಾದೆಗೆ ಅನುಗುಣವಾಗಿ ಬದುಕಬೇಕಾಗುತ್ತದೆ. ಇಷ್ಟು ವಿಸ್ತಾರವಾದ ಬದುಕು ಸಾಧಿಸಿದಾಗ ಮಾತ್ರ ಅವನು ಮಾನದಿಂದ - ಮರ್ಯಾದೆಯಿಂದ ಜೀವನ ನಡೆಸಿದಂತಾಗುತ್ತದೆ. ಒಂದು ವೇಳೆ ಈ ಮಾನ ಹೋದರೆ ಅಲ್ಲಿ, ಎಲ್ಲ ಅನರ್ಥಗಳು ಉಂಟಾಗುವುದರಲ್ಲಿ ಸಂಶಯವಿಲ್ಲ.