ಪ್ರಶ್ನೆ ೧೬. ಯಾರು ಶೂರ ?
ಉತ್ತರ - ಸ್ತ್ರೀಯರ ಕಣ್ಣಿನಿಂದ ಹೊರಬರುವ ಮನ್ಮಥನ ಬಾಣದಿಂದ ವಿಚಲಿತನಾಗದವ.
ಶೂರ, ವೀರ, ಧೀರ, ಪರಾಕ್ರಮ ಈ ಪದಗಳು ಒಂದೇ ಅರ್ಥವನ್ನು ಹೇಳುತ್ತವೆ. ಮನಸ್ಸಿನ ನಿಯಂತ್ರಣ ಉಳ್ಳವನೇ ಧೀರನಾಗಿರುತ್ತಾನೆ. ಧೀ-ಬುದ್ಧಿ, ಬುದ್ಧಿಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡವನು ಎಂಬುದು ಧೀರ ಎಂಬ ಪದದ ಅರ್ಥ. ಆದ್ದರಿಂದ ಶೂರ ಎಂಬ ಪದವೂ ಇದೇ ಅರ್ಥವನ್ನು ಕೊಡುವ ಶಬ್ದವಾಗಿದೆ. ಇಲ್ಲಿ ಕೇಳುವ ಪ್ರಶ್ನೋತ್ತರದಲ್ಲಿ ಸ್ತ್ರೀಮೋಹದಿಂದ ದೂರ ಇರುವವನೇ ಶೂರ ಎಂಬ ಅರ್ಥ ಗೋಚರವಾಗುತ್ತದೆ. ಅದು ಹೇಗೆ ಎಂಬುದನ್ನು ಸ್ವಲ್ಪ ನೋಡೋಣ.
ಸಾಮಾನ್ಯವಾದ ಒಂದು ಮಾತಿದೆ. "ಹೆಣ್ಣು, ಹೊನ್ನು, ಮಣ್ಣು ಈ ಮೂರಕ್ಕೆ ಮೋಹಗೊಳ್ಳದವನು ಯಾರೂ ಇಲ್ಲ" ಎಂಬುದಾಗಿ. ಎಂತಹ ಪಂಡಿತನನ್ನು ಕೂಡ ಈ ಮೂರು ವಿಷಯಗಳು ಕಟ್ಟುತ್ತವೆ. ಇವುಗಳಿಂದ ಸಿಕ್ಕಿಹಾಕಿಕೊಳ್ಳದವನು ಯಾರೂ ಇರಲು ಸಾಧ್ಯವಿಲ್ಲ ಎಂಬಷ್ಟರ ಮಟ್ಟಿಗೆ ಇವುಗಳ ಮೋಹಕತ್ವವನ್ನು ಹೇಳಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಅನೇಕ ಪುರಾಣಪುಣ್ಯ ಕಥೆಗಳನ್ನೂ ನೋಡಬಹುದು. ಒಂದು ಹೆಣ್ಣಿನ ಮೋಹಕ್ಕೆ ಒಳಗಾಗಿ ರಾವಣ ಕಾಲವಾದ. ಒಂದು ಹೆಣ್ಣಿಗೋಸ್ಕರ ದುರ್ಯೋಧನ ದುಶ್ಶಾಸನಾದಿಗಳು ಅಂತರಾದರು. ರಾಮಾಯಣ ಮಹಾಭಾರತಗಳು ಒಂದು ಹೆಣ್ಣಿಗಾಗಿ ನಡೆದವು ಎಂದು ಹೇಳಲಾಗುತ್ತಿದೆ. ಹಾಗಾಗಿ ಹೆಣ್ಣಿನ ಮೋಹಕ್ಕೆ ಒಳಗಾಗಿ ಕೆಟ್ಟವರು ಬಹಳ ಮಂದಿ.
ಈ ಸಂಸಾರದಿಂದ ಮುಕ್ತನಾಗಬೇಕಾದರೆ ಈಷಣವನ್ನು ಬಿಡಬೇಕೆಂದು ಶಾಸ್ತ್ರ ಸಾರುತ್ತದೆ. ಅದರಲ್ಲಿ ಮುಖ್ಯವಾದುದು ದಾರೈಷಣಾ. ಇದನ್ನು ಮುಮುಕ್ಷುವು ಬಿಡಲೇಬೇಕು ಎಂಬುದಾಗಿ ಹೇಳಲಾಗುತ್ತದೆ. ಪ್ರಕೃತಿಕ್ಷೇತ್ರದಲ್ಲಿ ಇಳಿದ ಪ್ರತಿಯೊಂದು ಜೀವವೂ ಪ್ರಕೃತಿರೂಪಿಣಿಯಾದ ಸ್ತ್ರೀಯನ್ನು ಬಯಸದೇ ಇರಲಾರ. ಬಯಸದೆ ಇದ್ದರೆ ಬದುಕೂ ಅಪರಿಪೂರ್ಣವಷ್ಟೆ. ಸ್ತ್ರೀಯನ್ನು ಬಯಸುವುದು ಪ್ರಕೃತಿಸಹಜಗುಣವಷ್ಟೆ! ಈ ವಿಷಯದಲ್ಲಿ ಮನುಷ್ಯ ಹೊರತಲ್ಲ. ಉಳಿದ ಪ್ರಾಣಿಗಳು ಅವಶರಾಗಿ ಸಂತಾನಕ್ಕೋಸ್ಕರ ಬಯಸುವುದುಂಟು. ಅದೇರೀತಿ ಮನುಷ್ಯನೂ ಬಯಸಿದರೆ ತಪ್ಪಿಲ್ಲ. ಆದರೆ ಮನುಷ್ಯನಲ್ಲಿ ಒಂದು ಅಲಿಖಿತನಿಯಮ ಉಂಟು, ತನ್ನ ಪತ್ನಿಯನ್ನು ಮಾತ್ರ ಬಯಸಬೇಕು ಎಂಬುದಾಗಿ. ಉಳಿದ ಸ್ತ್ರೀಯರ ವಿಷಯದಲ್ಲಿ ತನ್ನ ತಾಯಿಗೆ ಸರಿಸಮಾನವಾಗಿ ಭಾವಿಸಬೇಕೆಂಬುದು ಸ್ತ್ರೀಬಯಕೆಯ ಕಡಿವಾಣ. ಇದು ಉಲ್ಲಂಘನೆಯಾಗದಂತೆ ವರ್ತಿಸುವುದೇ ನಿಜವಾಗಿ ಶೂರತ್ವದ ಲಕ್ಷಣ ಎಂಬುದು ಇಲ್ಲಿನ ಆಶಯವಾಗಿದೆ.
ಮನುಷ್ಯ ಎಷ್ಟರ ಮಟ್ಟಿಗೆ ಈ ವಿಷಯದಲ್ಲಿ ಮೋಹಕ್ಕೆ ಅಥವಾ ಸೆಳೆತಕ್ಕೆ ಉಳಗಾಗುವ ಸಾಧ್ಯತೆ ಇರಬಹುದು ಎಂದು ಪರಿಗಣಿಸಿ ಒಂದು ಸುಭಾಷಿತವು ಈ ವಿಷಯವನ್ನು ಹೀಗೆ ಹೇಳುತ್ತದೆ - ವಯಸ್ಸಿಗೆ ಬಂದ ಮಗಳೇ ಆದರೂ ತಂದೆಯಾದವನು ಒಂದೇ ಶಯನದಲ್ಲಿ ಇಟ್ಟುಕೊಳ್ಳಬಾರದು ಎಂದು. ರತಿ ಎಂಬುದು ಮನ್ಮಥ ಮಡದಿ. ಅವಳ ಆಕರ್ಷಣೆ ಮನ್ಮಥನಿಗೆ ಉಂಟು. ಅವಳು ಎಲ್ಲಾ ಸ್ತ್ರೀಯರಲ್ಲೂ ದೇವತಾರೂಪದಲ್ಲಿ ಇರುತ್ತಾಳೆ. ಅವಳನ್ನು ಒಂದು ಯಜ್ಞರೂಪದಲ್ಲಿ ಅಂದರೆ ರೇತೋಯಜ್ಞರೂಪದಲ್ಲಿ ಬಳಸಿಕೊಂಡಾಗ ಅಲ್ಲಿ ಸೃಷ್ಟಿಯ ಸಹಜವಿಸ್ತಾರಕ್ಕೆ ಬೇಕಾದ ಸಂತತಿ ಉಂಟಾಗುತ್ತದೆ ಎಂಬುದಾಗಿ ನಮ್ಮ ಹಿರಿಯರು ಈ ಸ್ತ್ರೀರತಿಯನ್ನು ಉತ್ತಮರೀತಿಯಲ್ಲಿ ಹೇಳಿದ್ದುಂಟು. ಇದಕ್ಕೆ ಹೊರತಾಗಿ ಯಾವುದೇ ಬಗೆಯ ರತಿ ಕಂಡುಬಂದರೂ ಕೂಡ ಅದು ಸೃಷ್ಟಿಯ ವಿಕೃತಿ ಎಂಬುದಾಗಿ ಅದೇ ಹಿರಿಯರು ಹೇಳಿದ್ದುಂಟು. ಇದನ್ನು ಅರ್ಥಮಾಡಿಕೊಂಡವೇ ನಿಜಾರ್ಥದಲ್ಲಿ ಶೂರ - ಧೀರನಾಗುತ್ತಾನೆ.