ಲೇಖಕರು : ವಿದ್ವಾನ್ ನರಸಿಂಹ ಭಟ್ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ 4 - ಸಂಸಾರದಲ್ಲಿ ಸಾರ ಯಾವುದು ?
ಉತ್ತರ - ಪರಮಾತ್ಮತತ್ತ್ವ.
ಈ ಹಿಂದಿನ ಪ್ರಶ್ನೆಯಲ್ಲಿ 'ನಾವು ಸಂಸಾರವನ್ನು ಬಿಡಬೇಕು; ಸಂಸಾರದ ಸಂಬಂಧವನ್ನು ಕತ್ತರಿಸಿಕೊಳ್ಳಬೇಕು ಬುದ್ಧಿವಂತನಾದವನು' ಎಂಬ ವಿಷಯವನ್ನು ಚರ್ಚಿಸಲಾಗಿತ್ತು. ಆದರೆ ಈ ಪ್ರಶ್ನೆಯಲ್ಲಿ ನಾವು ಚಿಂತಿಸಬೇಕಾದ ವಿಷಯ ಹೀಗಿದೆ - ಸಂಸಾರದಲ್ಲೂ ಕೂಡ ಸಾರ ಯಾವುದಾದರೂ ಇದೆಯೇ? ಎಂಬುದಾಗಿ. ಅದಕ್ಕೆ ಉತ್ತರ ಪರಮಾತ್ಮತತ್ತ್ವ ಎಂಬುದಾಗಿ. ಇಲ್ಲಿ 'ಸಂಸಾರ' ಎಂಬ ಪದವನ್ನೇ ನಾವು ವಿಶ್ಲೇಷಿಸಿದಾಗ ಅರ್ಥ ಮಾಡಿಕೊಳ್ಳಬಹುದು; ಸಮ್- ಸಮ್ಯಕ್-ಒಳ್ಳೆಯದಾದ, ಸಾರ-ಅತಿಮುಖ್ಯವಾದ ಭಾಗ. ಸಂಸಾರ ಅಂದರೆ ಸಂಸಾರದಲ್ಲೂ ಬೇಕಾದ ಭಾಗ ಇದ್ದೇ ಇದೆ ಎಂಬುದನ್ನು ಸಂಸಾರವೆಂಬ ಪದವೇ ನಮಗೆ ತಿಳಿಸುತ್ತದೆ. ಹಾಗಾದರೆ ಆ ಭಾಗ ಯಾವುದು? ಅದನ್ನೇ 'ಪರಮಾತ್ಮತತ್ತ್ವ' ಎಂಬುದಾಗಿ ಕರೆಯಲಾಗಿದೆ. ಅಂದರೆ ಭಗವಂತನನ್ನು ಈ ಸಂಸಾರದಲ್ಲಿ ಭಗವಂತನನ್ನು ಭಾವಿಸಿದರೆ ಆ ಸಂಸಾರವೂ ಕೂಡ ನಮಗೆ ಸಾರವಾಗಿಯೇ ಗೋಚರವಾಗುತ್ತದೆ. ಸಂಸಾರದಲ್ಲಿ ಪರಮಾತ್ಮತತ್ತ್ವವನ್ನು ಚಿಂತಿಸುವುದು ಹೇಗೆ? ಸಂಸಾರವೆಂ
ಬಂತಹ ಈ ಸಾಗರದಲ್ಲಿ ಅದಕ್ಕೆ ಅವಕಾಶವಿದೆಯೇ ಎಂಬ ಪ್ರಶ್ನೆ ಬರಬಹುದು. ಹೌದು, ಅದರಲ್ಲಿಯೇ ಚಿಂತಿಸಬೇಕಾದದ್ದು ಪರಮಾತ್ಮತತ್ತ್ವ. ಉದಾಹರಣೆಗೆ ಒಂದು ತೆಂಗಿನಕಾಯಿ. ಇದರಲ್ಲಿ ನಮಗೆ ಬೇಕಾದ ಅತಿಮುಖ್ಯವಾದ ಭಾಗವೆಂದರೆ ಕೊಬರಿ. ಅದಕ್ಕೆ ಹೊರಗಡೆ ಕರಟ, ಮೊಟ್ಟೆ ಮುಂತಾದ ಭಾಗಗಳನ್ನೆಲ್ಲಾ ಸೇರಿಸಿಕೊಂಡು ತೆಂಗು ಎಂದೇ ಕರೆಯುತ್ತೇವೆ. ಕೊಬರಿಗಾಗಿ ಉಳಿದೆಲ್ಲಾ ಭಾಗವನ್ನು ಕಾಪಿಡುತ್ತೇವೆ. ಅಲ್ಲಿಯವರೆಗೆ ಆ ಎಲ್ಲಾ ಭಾಗವನ್ನೂ ತೆಂಗು ಎಂದೆ ಕರೆಯುತ್ತೇವೆ.
ಯಾವಾಗ ಒಳಗಡೆಯ ಸಾರವಾದ ಭಾಗವನ್ನು ಉಪಯೋಗಿಸಿಕೊಳ್ಳುತ್ತೇವೋ ಆಗ ಉಳಿದ ಭಾಗವನ್ನು ಎಸೆಯುತ್ತೇವೆ. ಏಕೆಂದರೆ ಕರಟವಾಗಲಿ ನಾರಾಗಲಿ ಅಡಿಗೆಗೆ ಉಪಯೋಗವಾಗುವುದಿಲ್ಲವಷ್ಟೇ. ಕೊನೆಯಲ್ಲಿ ನಾವು ಪಡೆಯಬೇಕಾದದ್ದು ಕೊಬ್ಬರಿಯನ್ನು ಅಷ್ಟೇ. ಹಾಗಾಗಿ ಹೊರಕವಚವನ್ನು ಚೆನ್ನಾಗಿಯೇ ನೋಡಿಕೊಳ್ಳಬೇಕಾದುದು ಕರ್ತವ್ಯವಷ್ಟೆ. ಇನ್ನೊಂದು ಉದಾಹರಣೆಯನ್ನು ಗಮನಿಸೋಣ. ರಾಮಾಯಣ ಎಂಬ ಗ್ರಂಥವು ರಾಮನ ಚರಿತ್ರವನ್ನು ಸಾರುವ ಗ್ರಂಥವಾಗಿದೆ. ರಾಮಾಯಣ ಎಂದರೆ ಪುಸ್ತಕವೇ? ಅಥವಾ ಅದಕ್ಕೆ ಹಾಕಿದ ಬಾಯಿಂಡೇ? ಅಥವಾ ಅಲ್ಲಿ ಬರುವ ಏಳು ಕಾಂಡಗಳು, ಇಪ್ಪತ್ತ ನಾಲ್ಕು ಸಹಸ್ರ ಶ್ಲೋಕಗಳೇ? ವಸ್ತುತಃ ಅಲ್ಲ. ರಾಮನೆಂಬ ತತ್ತ್ವ ನಮಗರ್ಥವಾಗುವ ತನಕ ಅವೆಲ್ಲವೂ ರಾಮಯಣವೇ? ಅಲ್ಲಿಯತನಕ ರಾಮ ಎಂಬ ತತ್ತ್ವಕ್ಕೆ ಸಲ್ಲಿಸುವ ಗೌರವವನ್ನು ಅಲ್ಲೆಲ್ಲಾ ಸಲ್ಲಿಸುತ್ತೇವೆ. ಯಾವಾಗ ರಾಮನೇ ಅನುಭವಕ್ಕೆ ಬರುತ್ತಾನೋ ಆಗ ಬಾಯಿಂಡ್, ಪುಸ್ತಕ, ಶ್ಲೋಕಗಳೆಲ್ಲವೂ ಬೇಡವಾಗುತ್ತವೆ. ಹಾಗೆ ಈ ಸಂಸಾರದಲ್ಲೇ ಈ ಪರಮಾತ್ಮತತ್ತ್ವ ಎಂಬುದು ಅಡಗಿದೆ. ನಾವು ತಿಳಿದುಕೊಳ್ಳಬೇಕಾದುದು ಅದುವೇ ಆಗಿದೆ. ಆ ಭಗವಂತನು ಸಿಗುವ ತನಕ ಸಂಸಾರವನ್ನು ಸಾರವಾಗಿ ಕಾಣಬೇಕು. ಆದರೆ ಒಂದು ಎಚ್ಚರಿಕೆಯೇನೆಂದರೆ ಯಾವತ್ತೂ ಸಂಸಾರವೇ ಸಾರವೆಂದು ಭಾವಿಸಬಾರದು. ಒಂದರ್ಥದಲ್ಲಿ ಸಂಸಾರ ಮತ್ತು ಪರಮಾತ್ಮಾ ಇವೆರಡು ಪೃಥಕ್ಕಾಗಿ ಇರುವಂತಹ ಪದಾರ್ಥವಲ್ಲ. ಒಂದಾಗಿ ಇರುವಂತಹದ್ದು. ಆದರೆ ಅದನ್ನು ನಾವು ಕೆಲವೊಮ್ಮೆ ಬೇರಾಗಿ ತಿಳಿದುಕೊಳ್ಳುತ್ತೇವೆ. ಆದರೂ ಸಂಸಾರದಲ್ಲೂ ಅಂತಹ ಒಂದು ತತ್ವ ಅಡಗಿದೆ ಎಂಬುದನ್ನು ತಿಳಿಯಬೇಕು ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.
ಸೂಚನೆ : 23/2/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.