Sunday, October 20, 2024

ಯಕ್ಷ ಪ್ರಶ್ನೆ 111 (Yaksha prashne 111)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ –  110 ಪ್ರಿಯವಾಗಿ ಮಾತನಾಡುವವನಿಗೆ ಯಾವುದು ಲಭಿಸುತ್ತದೆ?

ಉತ್ತರ - ಎಲ್ಲರೂ ಪ್ರಿಯರಾಗುತ್ತಾರೆ.

ಯಕ್ಷನು ಈ ಪ್ರಶ್ನೆಯಲ್ಲಿ ಮಾತಿನ ಬಗ್ಗೆ ತಿಳಿಸಿಕೊಡುತ್ತಿದ್ದಾನೆ. ಮಾತನ್ನು ಆಡುವುದೇ ಮಾನವನ ವಿಶೇಷತೆ. ಅದೇ ಅವನ ಅಸ್ತಿತ್ವದ ದ್ಯೋತಕ. ಆದ್ದರಿಂದ ಮಾತು ಯಾವ ರೀತಿಯಾಗಿ ಇರಬೇಕು? ಅದರ ಫಲಿತಾಂಶವೇನು? ಎಂಬುದು ಈ ಪ್ರಶ್ನೋತ್ತರದಲ್ಲಿ ಇದೆ. 

ಹೀಗೊಂದು ಸುಭಾಷಿತವಿದೆ "ಪ್ರಿಯವಾಕ್ಯಪ್ರದಾನೇನ ಸರ್ವೇ ತುಷ್ಯಂತಿ ಜಂತವಃ । ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ ॥" ಒಳ್ಳೆಯ ಮಾತಿನಿಂದ ಎಲ್ಲಾ ಪ್ರಾಣಿಗಳೂ ಸಂತೋಷಪಡುತ್ತವೆ ಎಂದಾದರೆ ಏಕೆ ಒಳ್ಳೆಯ ಮಾತನ್ನಾಡಬಾರದು? ಎಂಬುದಾಗಿ. ಮಾತಿನಿಂದ ಮನುಷ್ಯ ಮಾತ್ರ ಸಂತೋಷಪಡುವವನಲ್ಲ; ಪ್ರಾಣಿ ಪಶು ಪಕ್ಷಿಗಳೂ ಸಂತೋಷಪಡುತ್ತವೆ. ಒಂದು ಹಸುವನ್ನೋ, ನಾಯಿಯನ್ನೋ, ಬೆಕ್ಕನ್ನೋ ಮುದ್ದಾಗಿ ಪ್ರೀತಿಯಿಂದ ಮಾತನಾಡಿಸೋಣ. ಆಗ ಅವುಗಳ ಪ್ರತಿಕ್ರಿಯೆ ಹೇಗಿರುತ್ತದೆ? ಎಂಬುದನ್ನು ಗಮನಿಸಬೇಕು. ಅದೇ ಪ್ರಾಣಿಗಳನ್ನು ಕಠಿಣವಾದ ಅಥವಾ ಪರುಷ ಮಾತುಗಳಿಂದ ಬೈದರೆ ಆಗಿನ ಪ್ರತಿಕ್ರಿಯೆಯನ್ನೂ ಗಮನಿಸಬಹುದು. ಅವೆರಡಲ್ಲಿ ವ್ಯತ್ಯಾಸವೂ ಅಷ್ಟೇ ಸಹಜವಾಗಿ ತಿಳಿದುಬರುತ್ತದೆ. ಮುದ್ದು ಮಾಡುವುದು ಅಥವಾ ಮುದ್ದಾಗಿ ಮಾತನಾಡಿಸುವುದರಿಂದ ಅವೂ ನಮ್ಮನ್ನು ಪ್ರೀತಿಸುತ್ತವೆ. ನಾವು ಪ್ರೀತಿಯಿಂದ ವರ್ತಿಸಿದರೆ ಅವೂ ಕೂಡ ಹಾಗೇ ವರ್ತಿಸುತ್ತವೆ, ಇವು ಮನುಷ್ಯೇತರರಲ್ಲಿ ಕಾಣುವ ಪ್ರತಿಕ್ರಿಯೆಯಾಗಿರುತ್ತದೆ. ಹಾಗಾದರೆ ಭಾವನಾಜೀವಿಯಾದ ಮಾನವನಲ್ಲಿ ಇದನ್ನು ಕಾಣುವುದರಲ್ಲಿ ವಿಶೇಷತೆ ಏನು! ಅಲ್ಲವೇ!.

ಮಾತಿನ ಬಗ್ಗೆ ಸಾಹಿತ್ಯಗಳಲ್ಲಿ ವಿಪುಲವಾದ ಮಾತುಗಳನ್ನು ಕಾಣಬಹುದು. ಕನ್ನಡದಲ್ಲಿ ಅನೇಕ ಗಾದೆಮಾತನ್ನೂ ಕಾಣಬಹುದು. ಅದೇ ರೀತಿಯಾಗಿ ಸಂಸ್ಕೃತದ ಸುಭಾಷಿಗಳು ಮಾತಿನ ಬಗ್ಗೆ ಇರುವಷ್ಟು ಬೇರೆ ವಿಷಯಗಳಿಗೆ ಕಾಣಲಾರೆವು. ಅಂದರೆ ಮಾತಿನ ಬಗ್ಗೆ ಅದೆಷ್ಟು ಮಹತ್ತ್ವ ಜನಮಾನಸದಲ್ಲಿ ಕಾಣಸಿಗುತ್ತದೆ! "ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು. ಮಾತೇ ಮಾಣಿಕ್ಯ" ಎಂಬಿತ್ಯಾದಿ ಗಾದೆಗಳು ಮಾತಿನ ಮಹಿಮೆ ಅರಿವಿಗೆ ಬರುತ್ತದೆ. 

ಮಾತಿನ ನಿಯಮವನ್ನು ಹೇಳಲೆಂದೇ ಭಾಷಾಶಾಸ್ತ್ರ ವಿಸ್ತಾರವಾಗಿ ಬೆಳೆದಿದೆ. ಅದಕ್ಕೆಂದೇ ವ್ಯಾಕರಣ, ಅಲಂಕಾರ, ಛಂದಸ್ಸು ಮೊದಲಾದ ಶಾಸ್ತ್ರಗಳೂ ಹುಟ್ಟಿಕೊಂಡಿವೆ. ಮಾತಿನಿಂದ ಮಾಧುರಾದಿ ಷಡ್ರಸಗಳನ್ನು ಮತ್ತು ಶೃಂಗಾರಾದಿ ಒಂಭತ್ತು ಸಾಹಿತ್ಯರಸಗಳನ್ನು ಹುಟ್ಟಿಸಲು ಸಾಧ್ಯ ಎಂಬುದನ್ನು ನಮ್ಮ ಹಿಂದಿನ ಋಷಿಮಹರ್ಷಿಗಳು ಕಂಡರು. ಅಷ್ಟೇ ಅಲ್ಲ ಮಾತಿಗೆ ದೇವತೆಯನ್ನು ಭಾವಿಸಿದ ಸಂಸ್ಕೃತಿ ನಮ್ಮದು. ಪ್ರತಿಯೊಂದಕ್ಕೂ ದೇವತಾಮೂಲವಿದ್ದಂತೆ ಮಾತಿಗೂ ದೇವತಾಮೂಲವಿದೆ. ಹಾಗಾಗಿ ದೇವತೆಯನ್ನು ಪ್ರಸನ್ನಗೊಳೊಸಿದರೆ ಮಾತ್ರ ಮಾತು ಶುದ್ಧವಾಗಿ ಬರಲು ಸಾಧ್ಯ. ದೇವತಾಪ್ರಕೋಪವಿದ್ದರೆ ಮಾತಿಗೆ ಬಲವಿರುವುದಿಲ್ಲ; ಅದು ಇನ್ನೊಬ್ಬರಿಗೆ ರುಚಿಸುವುದಿಲ್ಲ; ಆಕರ್ಷಣೀಯವಾಗಿರುವುದಿಲ್ಲ. ಎಲ್ಲರಿಗೂ ಪ್ರಿಯವಾಗಿ ಇರುವುದಿಲ್ಲ. ಆದ್ದರಿಂದ ಒಬ್ಬನ ಮಾತು ಎಲ್ಲರಿಗೂ ಪ್ರಿಯವಾಗುವುದು ಎಂಬುದು ಅಷ್ಟು  ಸುಲಭದ ಮಾತಲ್ಲ. ಮಾತು ಎಲ್ಲರನ್ನೂ ಆಳಲೂಬಹುದು. ಎಲ್ಲರಿಂದಲೂ ಮನ್ನಣೆಗೆ ದೊರಕಿಸಲೂಬಹುದು. ಮಾತು ಸ್ವಲ್ಪ ವ್ಯತಿರಿಕ್ತವಾದಲ್ಲಿ ಅವಮಾನವೂ ಆಗಬಹುದು. ಪ್ರಾಣಕ್ಕೆ ಕುತ್ತೂ ಬರಬಹುದು. ಹಾಗಾಗಿ ಮಾತಿನಲ್ಲಿ ಮಿತಿ ಇರಬೇಕು. ಅದಕ್ಕೆ ನಾಲಗೆಗೆ ಅಧಿದೇವತೆಯಾದ ಸರಸ್ವತಿಯ ಅನುಗ್ರಹ ಬೇಕೇಬೇಕು. ಅದಕ್ಕಾಗಿ ತಪಸ್ಸು ಬೇಕು. ಹಾಗಿದ್ದಾಗ ಮಾತ್ರ ಅವನ ಮಾತು ಸರ್ವರಿಗೂ ಪ್ರಿಯವಾಗುತ್ತದೆ. ಪ್ರಿಯವಾಗಿ ಮಾತನಾಡುವವನಿಗೆ ಸರ್ವರೂ ಪ್ರಿಯರಾಗುತ್ತಾರೆ ಎಂಬ ಧರ್ಮಜ ಉತ್ತರದ ಆಶಯ ಇದೇ ಆಗಿದೆ.

ಸೂಚನೆ : 20/10/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.