ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ – 88 ಮಾನವನಿಗೆ ಜಯಿಸಲು ಅಸಾಧ್ಯವಾದ ಶತ್ರು ಯಾರು?
ಉತ್ತರ - ಕ್ರೋಧ.
ಕ್ರೋಧ ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಈ ಹಿಂದೆ ಯಕ್ಷನು ಅನೇಕ ಪ್ರಶ್ನೆಗಳನ್ನು ಕೇಳಿದ್ದಾನೆ. ಅದಕ್ಕೆ ಧರ್ಮರಾಜನು ಉತ್ತರವನ್ನೂ ಕೊಟ್ಟಿದ್ದಾನೆ. ಮತ್ತೆ ಅದೇ ವಿಷಯಕ್ಕೆ ಸಂಬಂಧಪಟ್ಟ ಪ್ರಶ್ನೆಯನ್ನು ಕೇಳುತ್ತಿದ್ದಾನೆ. ಕೇಳಿದ್ದನ್ನೇ ಕೇಳುವುದು ಪುನರುಕ್ತಿಯಲ್ಲವೇ ? ಅಥವಾ ಯಕ್ಷನಿಗೆ ಪ್ರಶ್ನೆಯನ್ನು ಕೇಳಲು ಮತ್ತೆ ಉಳಿದಿಲ್ಲವೇ ? ಹಾಗಲ್ಲ. ಒಂದೇ ವಿಷಯ ಅಥವಾ ವಸ್ತುವಾದರೂ ಅದು ಅನೇಕ ರೀತಿಯಲ್ಲಿ ವಿವರಣೆಯನ್ನು ಅಪೇಕ್ಷೆಪಡುತ್ತದೆ. ಮತ್ತು ಅದು ಅನೇಕ ಮುಖವನ್ನು ಹೊಂದಿರುತ್ತದೆ ಕೂಡ. ಮತ್ತು ಕೆಲವೊಮ್ಮೆ ಒಂದೇ ವಿಷಯವನ್ನು ಅನೇಕ ಬಾರಿ ವಿಮರ್ಶಿಸಿದಾಗ ಅದು ದೃಢವಾಗಲೂಬಹುದು. ಹಾಗಾಗಿ ಇಂತಹ ಅನೇಕ ಪ್ರಯೋಜನಗಳಿಂದಲೇ ಈ ಪ್ರಶ್ನೆಯನ್ನು ಯಕ್ಷನು ಕೇಳಿರಬಹುದು ಎಂದು ನಾವು ಅಂದುಕೊಳ್ಳಬಹುದು.
ಜೀವನದಲ್ಲಿ ಅನೇಕ ಬಾರಿ ಸೋಲುತ್ತೇವೆ. ಹಾಗೆಯೇ ಅನೇಕ ಬಾರಿ ಗೆಲ್ಲುತ್ತೇವೆ ಕೂಡ. ಆ ಸೋಲು ಮತ್ತು ಗೆಲುವುಗಳು ಕೆಲವೊಮ್ಮೆ ಕಠಿನವೂ ಆಗಬಹುದು ಅಥವಾ ಸುಲಭವೂ ಆಗಬಹುದು. ಅಥವಾ ಕೆಲವೊಮ್ಮೆ ಗೆಲ್ಲಲು ಆಗದೆಯೂ ಇರಬಹುದು, ಇನ್ನು ಕೆಲವೊಮ್ಮೆ ಗೆಲ್ಲಲು ಅತ್ಯಂತ ಕಷ್ಟವೂ ಆಗಬಹುದು. ಅಂತಹ ಗೆಲ್ಲಲು ಕಷ್ಟಸಾಧ್ಯವಾದ ಶತ್ರು ಯಾವುದು ಎಂಬುದು ಇಲ್ಲಿನ ಯಕ್ಷಪ್ರಶ್ನೆಯಾಗಿದೆ. ಅದಕ್ಕೆ ಉತ್ತರ 'ಕ್ರೋಧ' ಎಂಬುದು.
ಶತ್ರುಗಳಲ್ಲಿ ಅಂತಃಶತ್ರು ಹಾಗು ಬಹಿಃಶತ್ರು ಎಂಬುದಾಗಿ ಎರಡು ಬಗೆಯ ಶತ್ರುಗಳು ಇರುತ್ತಾರೆ. ಬಹಿರಂಗವಾಗಿ ಇರುವ ಶತ್ರುಗಳು ಹೊರಗಣ್ಣಿಗೆ ಕಾಣುವ ಆಕೃತಿರೂಪದಲ್ಲಿರುವ ಮೂರ್ತರೂಪರಾದ ಶತ್ರುಗಳಾಗಿರುತ್ತಾರೆ. ಅವರನ್ನು ಸದೆಬಡಿಯುವುದು ಅಥವಾ ನಿಯಂತ್ರಿಸುವುದು ಅಷ್ಟೇನೂ ಕಷ್ಟವಾಗಲಾರದು. ಅವರನ್ನು ಅಸ್ತ್ರ ಅಥವಾ ಶಸ್ತ್ರ ಮೊದಲಾದ ಸಾಧನಗಳಿಂದ ಜಯಿಸಲು ಸಾಧ್ಯ. ಆದರೆ ಅಂತಃಶತ್ರುಗಳು ನಮ್ಮ ಹೊರಗಣ್ಣಿಗೆ ಕಾಣಲಾರರು. ಅವರು ಅಮೂರ್ತರು. ಅವರನ್ನೇ ಕಾಮ ಕ್ರೋಧಾದಿ ಅರಿಷಡ್ವರ್ಗ ಎಂದೂ ಕರೆಯುತ್ತಾರೆ. ಇವುಗಳಲ್ಲಿ ಎರಡನೆಯ ಶತ್ರುವೇ ಕ್ರೋಧ. ಕ್ರೋಧವೆಂದರೆ ಸಿಟ್ಟು, ಕೋಪ, ಮರ್ಷ ಮೊದಲಾದ ಪದಗಳಿಂದ ಕರೆಯಲ್ಪಡುತ್ತದೆ. ಸಿಟ್ಟನ್ನು ಒಂದು ಅಗ್ನಿಯ ರೂಪದಲ್ಲಿ ಕಾಣುತ್ತೇವೆ. 'ಕೋಪಾಗ್ನಿಯು ಸುಟ್ಟಿತು' ಇತ್ಯಾದಿ ಕಾವ್ಯಮಯವಾದ ಭಾಷೆಯಲ್ಲಿ ಹೇಳುವುದೂ ಉಂಟು. ಇಂತಹ ಕ್ರೋಧಶಮನವೆಂಬುದು ದುಃಸಾಧ್ಯ ಅಥವಾ ಅತ್ಯಂತ ಕಷ್ಟ ಎಂಬುದಾಗಿ ಇಲ್ಲಿ ಧರ್ಮರಾಜನು ಹೇಳುತ್ತಾನೆ. ಕ್ರೋಧವು ಎಂತವನನ್ನೂ ಬಿಡುವುದಿಲ್ಲ. ಸಾಮಾನ್ಯನಿಗೆ ಕೋಪವು ಬಂದರೆ ಆತ ತನ್ನ ಮೇಲಿನ ನಿಯಂತ್ರಣವನ್ನೇ ಕಳೆದುಕೊಳ್ಳುತ್ತಾನೆ. ಸಿಟ್ಟು ಬಂದರೆ ಎಂತಹ ಅವಿವೇಕ ಆವರಿಸುತ್ತದೆ ಎಂದರೆ ತನ್ನನ್ನೇ ಅಥವಾ 'ಕ್ರುದ್ಧಃ ಹನ್ಯಾತ್ ಗುರೂನಪಿ' ಎಂಬ ಮಾತಿನಂತೆ ತನ್ನ ಗುರುವನ್ನೇ ಕೊಲ್ಲಲೂಬಹುದು. ಅದು ಮನಸ್ಸನ್ನು ಹಾಳುಮಾಡುತ್ತದೆ. ಮನಸ್ಸಿನ ಸ್ತಿಮಿತತೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ. ಆದರೆ ಸಾಧು ಸಂತರು ಕೋಪವನ್ನು ಅವರ ನಿಯಂತ್ರಣದಲ್ಲಿ ಇರಿಸಿಕೊಳ್ಳಬಲ್ಲರು. ಅವರು ಬೇಕಾದಾಗ ಸಾತ್ತ್ವಿಕಕಾರ್ಯಕ್ಕೆ ಆ ಕೋಪವನ್ನು ಬಳಸಿಕೊಳ್ಳುತ್ತಾರೆ ಎಂಬುದಕ್ಕೆ ಅನೇಕ ಪುರಾಣಕಥೆಗಳನ್ನು ನೋಡಬಹುದು. ಅಂದರೆ ಕೋಪವು ಕೆಟ್ಟದ್ದೆಂದರ್ಥವಲ್ಲ. ಹಾಗಾದರೆ ಕೋಪವನ್ನು ತಡೆಯುವ ಬಗೆ ಹೇಗೆ? ಎಂದರೆ ಅದರ ಮೂಲವಾದ ಕಾಮವನ್ನು - ಬಯಕೆಯನ್ನು ನಿಯಂತ್ರಿಸಿಕೊಳ್ಳಬೇಕು ಅಷ್ಟೇ. ರಾಜಸಿಕ ಮತ್ತು ತಾಮಸಿಕ ಬಯಕೆಯನ್ನು ಬಿಟ್ಟು ಕೇವಲ ಸಾತ್ತ್ವಿಕವಾದ ಬಯಕೆಯನ್ನು ಮಾತ್ರ ಇಟ್ಟುಕೊಳ್ಳುತ್ತಾ ಬಂದರೆ ಕೋಪವು ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತದೆ.