ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ – 87 ಆರ್ಜವ ಎಂದರೇನು ?
ಉತ್ತರ - ಸಮಚಿತ್ತತೆ.
ಆರ್ಜವ ಎಂದರೆ ಋಜುತ್ವ, ನೇರವಾದ, ಸರಳವಾದ, ಪಾರದರ್ಶಕವಾದ, ಪ್ರಾಮಾಣಿಕವಾದ ಸ್ವಭಾವ. ಇದನ್ನೇ ಸಮಚಿತ್ತತೆ ಎಂದೂ ಕರೆಯುತ್ತಾರೆ. ಯಾರ ಚಿತ್ತ-ಮನಸ್ಸು ಸಮವಾಗಿರುವುದೋ ಅವರು ಸಮಚಿತ್ತರು. ಯಾವಾಗ ಮನಸ್ಸು ಸಮವಾದುದನ್ನು ಧರಿಸುವುದೋ ಆಗ ಅದನ್ನು ಸಮಚಿತ್ತ ಎಂದೂ, ಅಂತಹ ಮನಸ್ಸುಳ್ಳವರನ್ನು ಸಮಚಿತ್ತರು ಎಂದೂ ಕರೆಯಬಹುದು. ಅಂದರೆ ಈ ಎಲ್ಲಾ ವಿಶೇಷಣಗಳೂ ಅರ್ಥಪೂರ್ಣವಾಗಬೇಕಾದರೆ ಸಮ ಎಂಬ ಪದಾರ್ಥದ ಜ್ಞಾನವಾಗಬೇಕಾಗುತ್ತದೆ. ಹಾಗಾದರೆ ಸಮ ಎಂದರೇನು?
'ನಿರ್ದೋಷಂ ಹಿ ಸಮಂ ಬ್ರಹ್ಮ, ಸಮತ್ವಂ ಯೋಗ ಉಚ್ಯತೇ" ಮುಂತಾದ ಕಡೆ ಸಮ ಎಂದರೆ ನಿರ್ದುಷ್ಟವಾದ ವಿಷಯ, ಯೋಗ ಎಂಬೆಲ್ಲಾ ವಿವರಣೆಯನ್ನು ಕಾಣಬಹುದು. ಈ ಪ್ರಚಂಚವು ಸೃಷ್ಟಿಯಾಗಬೇಕಾದರೆ ಸತ್ತ್ವ, ರಜಸ್ಸು ಮತ್ತು ತಮಸ್ಸು ಎಂಬ ಮೂರು ಗುಣಗಳು ಬೇಕು. ಅವುಗಳ ಯಾವುದೋ ಬಗೆಯ ಸೇರುವಿಕೆಯಿಂದ ಈ ಸೃಷ್ಟಿಯಾಗುತ್ತದೆ ಎಂದು ಶಾಸ್ತ್ರ ಸಾರುತ್ತದೆ. ಗುಣಗಳ ಸೇರುವುಕೆಯಿಂದ ದೋಷವು ಸಂಭವಿಸುತ್ತದೆ. ಯಾವುದು ಈ ಪ್ರಪಂಚಕ್ಕೆ ಮೂಲ ಕಾರಣವೋ ಅದು ದೋಷರಹಿತವಾದುದು. ಅಲ್ಲಿಂದ ಸೃಷ್ಟಿಯಾಗಿದೆ. ಅಂದರೆ ಪರಬ್ರಹ್ಮ ಎಂಬುದು ಯಾವುದುಂಟೋ ಅದನ್ನು 'ಸಮ' ಎಂದು ಕರೆಯಲಾಗಿದೆ. ಅದನ್ನು ಧರಿಸಿದ ಮನಸ್ಸನ್ನು ಸಮಚಿತ್ತ ಎಂದು ಕರೆದು, ಅಂತಹ ಪರಬ್ರಹ್ಮವನ್ನು ಧರಿಸಿದ ಮನಸ್ಸುಳ್ಳವರನ್ನು ಸಮಚಿತ್ತರು ಎಂದು ಕರೆಯುತ್ತಾರೆ.
ಯೋಗಶಾಸ್ತ್ರವು ಯೋಗ ಎಂಬ ಪದದ ವಿವರಣೆಯನ್ನು 'ಯೋಗಃ ಚಿತ್ತವೃತ್ತಿನಿರೋಧಃ' ಎಂದು ಕೊಟ್ಟಿದೆ. ಮನಸ್ಸು ಪರಬ್ರಹ್ಮವನ್ನು ಧರಿಸುವ ಸ್ಥಿತಿಯನ್ನೇ 'ಯೋಗ' ಎಂದು ಕರೆಯಲಾಗಿದೆ. ಇಂತಹ ಸ್ಥಿತಿಯನ್ನು ಸಂಪಾದಿಸುವ ಮಾರ್ಗವನ್ನೂ ಯೋಗ ಎಂದು ಕರೆದಿದ್ದಾರೆ. ಇದರ ಪರಿಣಾಮವಾಗಿ ಮನಸ್ಸು ಪಾರದರ್ಶಕವಾಗುತ್ತದೆ. ಮನಸ್ಸು ತಿಳಿಯಾಗುವುದನ್ನೇ ಪಾರದರ್ಶಕತೆ ಎನ್ನಬಹುದು. ಆಗ ಮನುಷ್ಯ ಸರಳ ಸ್ವಭಾವದವನಾಗುತ್ತಾನೆ. ಅವನಲ್ಲಿ ನೇರವಾದ ನಡೆನುಡಿಗಳು ಬರುತ್ತವೆ. ಆತ ಪ್ರಾಮಾಣಿಕನಾಗುತ್ತಾನೆ. ಪ್ರಮಾಣವನ್ನು ತಿಳಿದವನು ಪ್ರಾಮಾಣಿಕನಷ್ಟೇ. ಪ್ರಮಾಜ್ಞಾನವನ್ನು ಸಂಪಾದಿಸಿದವ ಪ್ರಾಮಾಣಿಕ. ಇದ್ದಿದ್ದನ್ನು ಇದ್ದ ಹಾಗೆ ತಿಳಿಯುವ ಪ್ರಮಾ. ಇದ್ದಿದ್ದನ್ನು ಇದ್ದ ಹಾಗೆ ಹೇಳುವುದು ಪ್ರಾಮಾಣಿಕತೆ ಅಥವಾ ಸತ್ಯ. ಆದ್ದರಿಂದ ಅವನ ನುಡಿ ಪ್ರಾಮಾಣಿಕ, ಅವನ ಆಚಾರ ಪ್ರಾಮಾಣಿಕ, ಅವನಲ್ಲಿ ವಂಚನೆ ಅಥವಾ ಮೋಸಕ್ಕೆ ಆಸ್ಪದವಿರದು. ಋಜು ಎಂದರೆ ವಕ್ರವಲ್ಲದ್ದು. ಇಂತವರನ್ನೇ ಸಜ್ಜನರು - ಸತ್ಪುರುಷರು - ಸಮದರ್ಶಿಗಳು - ಆಪ್ತರು ಎಂದು ಕರೆಯುತ್ತಾರೆ. ಯಾರು ಆಪ್ತರು - ಸಮದರ್ಶಿಗಳು? ಎಂಬುದಕ್ಕೆ ಶ್ರೀರಂಗಮಹಾಗುರುಗಳು ಈ ಶ್ಲೋಕವನ್ನು ಉದ್ಧರಿಸಿ ಹೇಳುತ್ತಿದ್ದರು. "ರಜಸ್ತಮೋಭ್ಯಾಂ ನಿರ್ಮುಕ್ತಾಃ ತಪೋಜ್ಞಾನಬಲೇನ ಯೇ…. ಇತ್ಯಾದಿಯಾಗಿ. ತಮ್ಮ ತಪಸ್ಸು ಮತ್ತು ಜ್ಞಾನಗಳ ಬಲದಿಂದ ರಜಸ್ಸು ಮತ್ತು ತಮಸ್ಸಿನಿಂದ ಪಾರಾದವರು; ಯಾರಿಗೆ ಮೂರು ಕಾಲದಲ್ಲಿಯೂ ತಡೆಯಿಲ್ಲದೆ ನಿರ್ಮಲವಾದ ಜ್ಞಾನ ಪ್ರಕಾಶ ಗೋಚರಕ್ಕೆ ಬರುತ್ತಿರುವುದೋ ಅಂತವರು ಆಪ್ತರು; ಅವರೇ ಶಿಷ್ಟರು; ಅವರೇ ವಿಬುದ್ಧರು; ಅವರ ಮಾತುಗಳು ಸಂದೇಹಕ್ಕೆಡೆಯಾಗದ ಸತ್ಯಗಳು; ಅಸತ್ಯಕ್ಕೆ ಕಾರಣವಾದ ರಜಸ್ತಮೋದೋಷರಹಿತರೋ ಅವರು ಅಸತ್ಯವನ್ನು ಹೇಗೆ ಆಡಿಯಾರು!? ಎಂದು.