Sunday, April 28, 2024

ಮರ್ಯಾದೆ ನಿಜಕ್ಕೂ ಯಾರಿಗೆ? (Maryade Nijakku Yarige?)


ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ
 (ಪ್ರತಿಕ್ರಿಯಿಸಿರಿ lekhana@ayvm.in)


 ಪಂಡರಾಪುರದಲ್ಲೊಬ್ಬ ಭಕ್ತ. ಅವನಿಗೆ ವಿಠಲನನ್ನು ಊರ ಬೀದಿಯಲ್ಲೆಲ್ಲ ಬಿಜಯಮಾಡಿಸುವ ಆಸೆ. ಇವನು ಬಡವ. ರಥ ಎಲ್ಲಿಂದ ತರುವುದು? ಅಲ್ಲೊಂದು ಅಗಸನ ಕತ್ತೆ. ಸ್ವತಂತ್ರವಾಗಿ ಓಡಾಡುತ್ತಿತ್ತು. ಈ ಭಕ್ತ ಆ ಕತ್ತೆಯನ್ನು ತಂದ. ಅದನ್ನು ಸ್ನಾನ ಮಾಡಿಸಿ ಶುಚಿಗೊಳಿಸಿದ. ಅದರ ಬೆನ್ನಮೇಲೆ ವಿಠಲನ ವಿಗ್ರಹವನ್ನಿಟ್ಟ. ಹೊರಟಿತು ಉತ್ಸವ. ಪಾಂಡುರಂಗನಿಗೆ ಜಯವಾಗಲಿ ಘೋಷಣೆ ಮೊಳಗಿತು. ಇನ್ನೂ ಅನೇಕಜನ ಭಕ್ತರು ಜೊತೆಗೂಡಿದರು. ಮನೆಮನೆಯಲ್ಲಿ ವಿಠಲನಿಗೆ ತಿಲಕವಿಟ್ಟರು. ಹೂಮಾಲೆ ಹಾಕಿದರು. ಅದು ದೊಡ್ಡವನ ಚಿಕ್ಕವಿಗ್ರಹ. ಹೂಮಾಲೆಗಿನ್ನು ಜಾಗವಿಲ್ಲದಾಯಿತು. ಜನ ವಿಠಲನನ್ನು ಹೊತ್ತ ಕತ್ತೆಯ ಕೊರಳಿಗೆ ಮಾಲೆ ಹಾಕಿದರು. ಕತ್ತೆಗೆ ಸಂಭ್ರಮ. ತನಗೆ ಇಷ್ಟು ಗೌರವ ಯಾವತ್ತೂ ಯಾರೂ ತೋರಿಸಿಲ್ಲ. ತನ್ನ ಯಜಮಾನ ಅಗಸ ಕೇವಲ ಏಟು ಕೊಟ್ಟಿದ್ದಾನೆ. ಭಾರ ಹೊರಿಸಿದ್ದಾನೆ.ತನ್ನ ಕೆಲಸ ಆದೊಡನೆ ನನ್ನನ್ನು ಮೇಯಲು ಅಟ್ಟಿದ್ದಾನೆ. ನನ್ನ ಯೋಗ್ಯತೆ ಇಷ್ಟು ದೊಡ್ಡದು ಎಂದುಕೊಂಡಿರಲಿಲ್ಲ. ಹಾರ ತುರಾಯಿಗಳೇನು! ಆರತಿಯೇನು! ತಿಲಕವೇನು! ಬಾಳೆಹಣ್ಣನ್ನು ಕೊಡುವವರೇನು! ಹೀಗೆ ಯೋಚಿಸುತ್ತಾ ಕತ್ತೆ ಹಿಗ್ಗಿಹೋಯಿತು. ಸಂಜೆ ಉತ್ಸವ ಮುಗಿಯಿತು. ವಿಠಲನ ವಿಗ್ರಹವನ್ನು ಇಳಿಸಿ ಕತ್ತೆಯನ್ನು ಮುಕ್ತಗೊಳಿಸಿದರು. ಮಾರನೇ ದಿನ ಕತ್ತೆ ಅಗಸನ ಹತ್ತಿರ ಹೋಗಲಿಲ್ಲ. ರಾಜ ಬೀದಿಯಲ್ಲೆಲ್ಲಾ ಓಡಾಡಿತು. ಯಾರೂ ಹಾರ ಹಾಕಲಿಲ್ಲ. ಆರತಿ ಇಲ್ಲ. ಅಷ್ಟೇ ಅಲ್ಲ. ರಸ್ತೆಯಲ್ಲಿ ತೊಂದರೆಯಾಗುತ್ತಿದೆ ಎಂದು ಏಟು ಕೊಟ್ಟರು. ಕತ್ತೆ ವಿಧಿಯಿಲ್ಲದೇ ಮತ್ತೆ ಅಗಸನ ಹತ್ತಿರ ಹೋಯಿತು. ಅಲ್ಲೂ ಪೆಟ್ಟು ತಿಂದಿತು.

ವಿಠಲನಿಗೆ ಕೊಡುತ್ತಿರುವ ಮರ್ಯಾದೆ

ಏಕೆ ಹೀಗಾಯಿತು? ಮೇಲಿದ್ದ ವಿಠಲನ ಮೂರ್ತಿಗೆ ಎಲ್ಲಾ ಮರ್ಯಾದೆ ಸಲ್ಲುತ್ತಿದೆ ಎಂದು ಕತ್ತೆಗೆ ಅರಿವಾಗಲಿಲ್ಲ. ತನಗೇ ಎಂದುಕೊಂಡಿತು.  ಈ ಕಥೆ ಆಳವಾದ ತತ್ತ್ವದತ್ತ ಕೈದೊರುತ್ತದೆ.  ನಮ್ಮೊಳಗೇ ಬೆಳಗುವ ಚೈತನ್ಯ ಒಂದುಂಟು. ಅದಿರುವುದರಿಂದ ನಮ್ಮ ಇಂದ್ರಿಯಗಳೆಲ್ಲ ಕೆಲಸ ಮಾಡುತ್ತಿವೆ. ನಮ್ಮ ಬುದ್ಧಿ ಮನಸ್ಸುಗಳು ಅದರ ಬಲದಿಂದಲೇ ಅನೇಕ ಸಾಧನೆಗಳನ್ನು ಮಾಡುತ್ತವೆ. ಎಂಬುದು ಈ ದೇಶದ ಮಹರ್ಷಿಗಳ ಸಮಗ್ರ ಜೀವನ ದೃಷ್ಟಿ. ಆದರೆ ನಮ್ಮ ಸಾಧನೆಗಳಿಂದ ಬರುವ ಕೀರ್ತಿಯನ್ನೆಲ್ಲ ಒಳಗಿರುವ ದೇವನಿಗೆ ನಾವು ಸಮರ್ಪಿಸುವುದಿಲ್ಲ. ಎಲ್ಲವೂ ನನ್ನದೇ ಎಂದು ಬೆನ್ನು ತಟ್ಟಿಕೊಳ್ಳುತ್ತೇವೆ. ಆ ಕತ್ತೆಯಂತೆ.ಆದರೆ ಇಲ್ಲೊಂದು ವ್ಯತ್ಯಾಸ. ಗೌರವ ಕೊಡುವವರಿಗೂ ಯಾರಿಗೆ ಕೊಡುತ್ತಿದ್ದೇವೆ ಎಂಬ ಅರಿವಿಲ್ಲ. ತೆಗೆದುಕೊಂಡ ನಮಗೂ ಅದು ಎಲ್ಲಿಗೆ ಸಲ್ಲಬೇಕೆಂಬ ನಿಗವಿಲ್ಲ.

ಒಳ ಬೆಳಗುವ ಆತ್ಮ ವಸ್ತುವಿನ ಭಿಕ್ಷೆಯಿಂದ ನಮ್ಮ ಬದುಕು. ಯಾಜ್ಞವಲ್ಕ್ಯರು ಮೈತ್ರೇಯಿಗೆ ಹೇಳುತ್ತಾರೆ- ಒಳಗೆ ಬೆಳಗುವ ಆತ್ಮವಸ್ತುವಿಂದಲೇ ಪತ್ನಿ,ಪುತ್ರರು,ಎಲ್ಲರೂ ಪ್ರಿಯವಾಗುತ್ತಾರೆ. ಅದರಿಂದ ಆತ್ಮವೇ ನೋಡಬೇಕಾದುದು,ಕೇಳಬೇಕಾದುದು, ಮನನ ಮಾಡಬೇಕಾದುದು, ಏಕಾಗ್ರತೆಯಿಂದ ಧ್ಯಾನ ಮಾಡಬೇಕಾದುದು ಎಂಬುದಾಗಿ. ಒಳಗಿರುವ ದೇವ ಈ ದೇಹದ ಯಜಮಾನ. ನಮ್ಮ ಲಕ್ಷ್ಯ ಯಜಮಾನನ ಕಡೆಗೆ ಇರಬೇಕಾಗಿತ್ತು. ಯಜಮಾನನ ಶಕ್ತಿಯಿಂದಲೇ ನಾವು ಎಲ್ಲಾ ಸುಖಗಳನ್ನೂ ಪಡೆಯುತ್ತಿದ್ದೇವೆ. ಯಜಮಾನನನ್ನು ಮರೆತಿದ್ದೇವೆ. ಭಾರತೀಯ ಜೀವನದ ಸಂಸ್ಕಾರ, ಅನುಷ್ಠಾನ, ಪೂಜೆ, ಪುರಸ್ಕಾರಗಳೆಲ್ಲವೂ ನಮ್ಮೆಲ್ಲರ ಮೂಲನಾದ ಯಜಮಾನನನ್ನು ನೆನಪಿಸುವುದಾಗಿದೆ. ನಾವು ವೃಕ್ಷದ ಬೇರಿಗೆ ನೀರೆರೆಯುತ್ತೇವೆ. ಮೇಲಿನ ಎಲೆ, ಕೊಂಬೆಗಳಿಗಲ್ಲ. ನಮಗೆ ಎಲೆ ಕೊಂಬೆಗಳ ಮೇಲೆ ದ್ವೇಷವಲ್ಲ. ಅವು ಬೇಡವೆಂದೂ ಅಲ್ಲ. ಅವುಗಳು ಸೊಂಪಾಗಿ ಬೆಳೆಯಬೇಕಾದರೆ ಬೇರಿಗೇ ನೀರೆರೆಯಬೇಕು. "ಜೀವನವೆಂದರೇನು?ಎನ್ನುವುದನ್ನರಿತು ಜೀವನವನ್ನೂ ಅದರ ವಿಕಾಸಾವಸ್ಥೆಯನ್ನೂ ನೋಡದಿದ್ದರೆ ಬೇರನ್ನು ಮರೆತು ಮರದ ತುದಿಯಲ್ಲಿರುವ ಹಣ್ಣುಗಳನ್ನು ನೋಡುವವನಂತೆ ಆಗುತ್ತದೆ ನಮ್ಮ ಸ್ಥಿತಿ.ಆದ್ದರಿಂದ ಮೂಲವರಿತು ನೋಡುವ ಶ್ರದ್ಧೆ ನಮಗೆ ಬೇಕಾಗಿದೆ" ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಹಾಗೆಯೇ ಈ ಜೀವನ ವೃಕ್ಷದ ಬೇರು ಒಳಗಿರುವ ಚೈತನ್ಯ. ಅದರ ಆಶಯದಂತೆ ಧರ್ಮ,ಅರ್ಥ ಕಾಮಗಳನ್ನು ಅನುಭವಿಸಬೇಕು ಎಂಬುದು ಈ ವೃಕ್ಷದ ಪರಿಚಯವಿರುವ ಋಷಿಗಳ ಮಾತು. ಬೇರನ್ನೇ ಕಡೆಗಣಿಸಿ ಆರೈಕೆ ಎಲ್ಲವನ್ನೂ ಮೇಲು ಮೇಲೆ ಕಾಣುವುದಕ್ಕೆ ಮಾತ್ರ ಮಾಡತೊಡಗಿದರೆ ಆ ವೃಕ್ಷ ಸರ್ವಾಂಗ ಸುಂದರವಾಗಿ ಬೆಳೆಯದು. ಈ ಸತ್ಯಾರ್ಥವನ್ನು ಅರ್ಥ ಮಾಡಿಕೊಂಡು ನಮ್ಮ ಹಿರಿಯರು ಹಾಕಿದ ಮಾರ್ಗದಲ್ಲಿ ಆತ್ಮ ನಿಷ್ಠರಾಗಿ ಬದುಕಲು ಪ್ರಯತ್ನಿಸೋಣ.

ಸೂಚನೆ: 27/04/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.