Sunday, April 28, 2024

ಯಕ್ಷ ಪ್ರಶ್ನೆ 87 (Yaksha prashne 87)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 86 ಶ್ರೇಷ್ಠವಾದ ದಯೆ ಯಾವುದು ?

ಉತ್ತರ - ಎಲ್ಲರ ಸುಖವನ್ನು ಬಯಸುವುದು.  

ಈ ಹಿಂದಿನ ಪ್ರಶ್ನೆಯ ಮುಂದುವರಿದ ಪ್ರಶ್ನೆ ಇದಾಗಿದೆ. ಸುಖ ಅಥವಾ ಶಾಂತಿ ಎಲ್ಲರ ಸಹಜವಾದ ಬಯಕೆ. ಪ್ರತಿಯೊಬ್ಬರೂ ಅವರವರ ಸುಖವನ್ನು ಬಯಸುವಿಕೆ ಈ ಹಿಂದಿನ ಪ್ರಶ್ನೆಯ ಆಶಯವಾಗಿದೆ. ಆದರೆ ಪ್ರಸ್ತುತ ಪ್ರಶ್ನೆಯು ಪ್ರತಿಯೊಬ್ಬರೂ ಮತ್ತೊಬ್ಬರ ಸುಖವನ್ನು ಬಯಸುವ ವಿಧಾನವನ್ನು ತಿಳಿಸುವುದಾಗಿದೆ. ಅವರವರ ನೆಮ್ಮದಿಯನ್ನು ಬಯಸುವುದು ದೊಡ್ದ ವಿಷಯವಲ್ಲ. ಅದನ್ನು ಪ್ರಯತ್ನಪೂರ್ವಕವಾಗಿ ರೂಢಿಸಿಕೊಳ್ಳುವ ಅವಶ್ಯಕತೆ ಇಲ್ಲ. ಈಗ ತಾನೇ ಹುಟ್ಟಿದ ಮಗುವಿರಲಿ ಅಥವಾ ಪಶು, ಪಕ್ಷಿ, ಕೀಟ ಯಾವುದೇ ಇರಲಿ ಅದರ ಬಯಕೆ ಸುಖ, ಅದರ ನೆಮ್ಮದಿ, ಅದರ ಜೀವಿಕೆ. ಆದರೆ ಮತ್ತೊಬ್ಬರೂ ಸುಖವನ್ನು ಪಡೆಯಬೇಕು, ಶಾಂತಿಯನ್ನು ಹೊಂದಬೇಕು, ನೆಮ್ಮದಿಯನ್ನು ಕಾಣಬೇಕು ಎಂದು ಬಯಸುವುದು ಅಷ್ಟು ಸುಲಭವಲ್ಲ. ಇಂತಹ ಗುಣವನ್ನು ಪ್ರತಿಯೊಬ್ಬರೂ ಪ್ರಯತ್ನಪೂರ್ವಕವಾವಾದರೂ ಪಡೆಯಲೇಬೇಕು. ಅದನ್ನೇ 'ದಯಾ' ಎಂದು ಕರೆಯಬೇಕು. ಇದೇ ವಿಷಯವನ್ನು ಯಕ್ಷನು ಧರ್ಮರಾಜನಿಗೆ ಕೇಳಿದ್ದು. 

ನಿಸರ್ಗದಲ್ಲಿ ಪ್ರತಿಯೊಂದು ಜೀವಕ್ಕೂ ಬದುಕುವ ಆಸೆ ಮತ್ತು ಹಕ್ಕು ಎರಡೂ ಇದೆ. ಅದನ್ನು ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲವೇ ಇಲ್ಲ. ಒಂದು ವೇಳೆ ಕಸಿದುಕೊಂಡರೆ ಅದು ಹಿಂಸೆ. ಆ ಹಕ್ಕನ್ನು ಉಳಿಸುವಂತೆ ಮಾಡುವುದು; ಅಥವಾ ಯಾರಿಂದಲಾದರೂ ಅಂತಹ ಹಕ್ಕಿಗೆ ತೊಂದರೆ ಬರುವಂತಿದ್ದರೆ ಅದನ್ನು ನಿಗ್ರಹಿಸುವುದೂ ಕೂಡಾ ದಯೆ ಎಂದೇ ಕರೆಯಪಲ್ಪಡುತ್ತದೆ. "ನಿಗ್ರಹವೂ ಭಗವಂತನ ಅನುಗ್ರಹವೇಪ್ಪ" ಎಂಬುದಾಗಿ ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ನಿಗ್ರಹದಲ್ಲಿ ಒಂದು ಮಟ್ಟಿನ ಹಿಂಸೆ ಇರುತ್ತದೆ ಆದರೆ ಅದು ಹಿಂಸೆ ಎಂದು ಪರಿಗಣಿಸಲ್ಪಡುವುದಿಲ. ನಿಸರ್ಗದಲ್ಲಿ ತನ್ನಂತೆ ಮತ್ತೊಂದು ಜೀವಿಯ ಬದುಕುವ ಹಕ್ಕನ್ನು ಉಳಿಸುವುದೇ ನಿಗ್ರಹ. ಅವರವರ ನಿಸರ್ಗಸಹಜವಾದ ಬದುಕಿಗೆ ಅವಕಾಶ ಮಾಡಿಕೊಡುವುದು ಒಂದು ಬಗೆಯ ದಯೆ ಆದರೆ; ಅವುಗಳ ಬದುಕಿಗೆ ಉಂಟಾಗುತ್ತಿರುವ ಬಾಧೆಯನ್ನು ನಿವಾರಿಸಿ ಮತ್ತೆ ಅವುಗಳ ಬದುಕಿಗೆ ಆಸರೆಯಾಗುವುದೂ ಕೂಡಾ ದಯೆಯಾಗಿದೆ. 'ಜೀವೋ ಜೀವಸ್ಯ ಜೀವನಮ್' ಎಂಬ ಮಾತಿನಂತೆ ಒಂದು ಜೀವವು ಬದುಕಬೇಕಾದರೆ ಮತ್ತೊಂದು ಜೀವವಿರುವ ಜೀವಿಯನ್ನು ಆಹಾರವಾಗಿ ಸ್ವೀಕರಿಸಬೇಕಾಗುತ್ತದೆ. ಇದು ಆ ಆ ಜೀವದ ಜೀವಿಕೆಗಾಗಿ ನಿಸರ್ಗವೇ ಕಲ್ಪಿಸಿದ ವ್ಯವಸ್ಥೆ. ಇದನ್ನು ನಿಗ್ರಹಿಸುವುದು ದಯೆ ಎಂದು ಕರೆಸಿಕೊಳ್ಳುವುದಿಲ್ಲ. ವೃಥಾ ಮತ್ತೊಬ್ಬರ ಬದುಕಿಗೆ ಹಾನಿಯನ್ನು ಉಂಟುಮಾಡುವುದೇ ಹಿಂಸೆ ಎನಿಸಿಕೊಳ್ಳುತ್ತದೆ.

ದಯೆಯನ್ನು ಎಂಟು ವಿಧವಾದ ಆತ್ಮಗುಣಗಳಲ್ಲಿ ಮೊದಲನೆಯ ಗುಣವಾಗಿ ಪರಿಗಣಿಸಲಾಗಿದೆ. ಇದು ಮುಂದಿನ ಎಲ್ಲಾ ಗುಣಗಳಿಗೂ ಆಧಾರವಾಗಿದೆ. ಈ ಗುಣವಿಲ್ಲದಿದ್ದರೆ ಕ್ಷಮೆ, ಅನಸೂಯಾ, ಮೊದಲಾದ ಯಾವ ಗುಣಗಳೂ ಬೆಳಯಲಾರವು. ಮತ್ಸ್ಯಪುರಾಣದಲ್ಲಿ ಈ ಮಾತು ಬರುತ್ತದೆ "ಪ್ರಯತ್ನಪೂರ್ವಕವಾದರೂ ಬೇರೆಯವರ ಕ್ಲೇಶವನ್ನು ಪರಿಹರಿಸುವ ಯಾವ ಗುಣವಿದೆಯೋ ಅದನ್ನು 'ದಯಾ' ಎಂದು ಕರೆಯಬೇಕು ಎಂದು. ಅಧರ್ಮಿಯಾದವರನ್ನು ಉಪದೇಶ ಅಥವಾ ಸಾಮ, ದಾನ, ಮೊದಲಾದ ಉಪಾಯಗಳಿಂದ ಧರ್ಮಮಾರ್ಗದಲ್ಲಿ ನಡೆಯುವಂತೆ ಮಾಡಬೇಕು, ಇಲ್ಲವಾದರೆ ಅಂತವರನ್ನು ನಿಗ್ರಹಿಸಬೇಕು. ಹೀಗೆ ಪ್ರಪಂಚವು ಕ್ಷೇಮವಾಗಿ ಉಳಿಯಲು ದಯೆ ಎಂಬ ಗುಣದಿಂದ ಮಾತ್ರ ಸಾಧ್ಯ. 

ಸೂಚನೆ : 28/4/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.