ವಿಶ್ವಾಮಿತ್ರರು ಹಿಂದೆ ರಾಜರಾಗಿದ್ದವರು. ಅವರು ತಪಶ್ಚರ್ಯೆ ಮಾಡಿ ಕೊನೆಗೆ ಬ್ರಹ್ಮರ್ಷಿಗಳಾದದ್ದಕ್ಕೆ ಕಾರಣ - ಅವರಿಗೂ ಬ್ರಹ್ಮರ್ಷಿಗಳಾದ ವಸಿಷ್ಠರಿಗೂ ಆದ ಒಂದು ಮುಖಾಮುಖಿ. ಅದರಲ್ಲಿ ಮೊದಲು ಎಲ್ಲವೂ ಸೌಹಾರ್ದಯುತವಾಗಿಯೇ ಇತ್ತು. ರಾಜಾ ವಿಶ್ವಾಮಿತ್ರನನ್ನು ಕುಶಲಪ್ರಶ್ನೆ ಇತ್ಯಾದಿ ಮಾಡಿದ ವಸಿಷ್ಠರು ಪ್ರಸನ್ನರಾಗಿ ರಾಜನಿಗೂ ಅವನ ಪರಿವಾರಕ್ಕೂ ಯಥೋಚಿತ ಆತಿಥ್ಯ ಮಾಡಬಯಸಿದರು. ತನಗೆ ಕೊಟ್ಟಿದ್ದ ಅರ್ಘ್ಯ-ಪಾದ್ಯ-ಆಚಮನಗಳು ಕಂದಮೂಲಾದಿಗಳೇ ಸಾಕೆಂದು ರಾಜಾವಿಶ್ವಾಮಿತ್ರನು ಮತ್ತೆ ಮತ್ತೆ ಹೇಳಿದನು. ಆದರೂ ವಸಿಷ್ಠರ ಒತ್ತಾಯಕ್ಕೆ ಅವನು ಮಣಿದನು.
ಋಷ್ಯಾಶ್ರಮದಲ್ಲಿ ರಾಜೋಚಿತವಾದ ಸತ್ಕಾರವನ್ನು ಒದಗಿಸಿದ್ದು ವಸಿಷ್ಠರ ಬಳಿ ಇದ್ದ ಶಬಲೆ ಎಂಬ ಧೇನು. ಕಾಮಧೇನುವಿನಂತಿದ್ದ ಆ ಹಸುವು ನಾನಾ ಭಕ್ಷ್ಯಗಳನ್ನೂ ಮತ್ತಿತರ ಖಾದ್ಯಗಳನ್ನೂ ರಾಜಯೋಗ್ಯವಾದ ಸಹಸ್ರಾರು ಬೆಳ್ಳಿಯ ಪಾತ್ರೆಗಳಲ್ಲಿ ಒದಗಿಸಿತು. ಆ ಆತಿಥ್ಯದಿಂದ ಸಂತುಷ್ಟನಾದ ವಿಶ್ವಾಮಿತ್ರನು, ಆ ರತ್ನಸದೃಶವಾದ ಧೇನುವು ರಾಜನಾದ ತನ್ನ ಬಳಿ ಇರಬೇಕೆಂದು ವಸಿಷ್ಠರನ್ನು ಕೇಳಿದನು. ಬದಲಿಗೆ ಲಕ್ಷಗೋವುಗಳನ್ನು ಕೊಡುವುದಾಗಿ ಹೇಳಿದನು. ಅದಕ್ಕೆ ಒಪ್ಪದ ವಸಿಷ್ಠರು ಹೇಳಿದ್ದು "ನನ್ನೆಲ್ಲಾ ಕಾರ್ಯಗಳಿಗೆ - ಅಗ್ನಿಹೋತ್ರ, ಭೂತಬಲಿ, ಹೋಮ ಇತ್ಯಾದಿಗಳಿಗೆಲ್ಲಾ - ಈ ಹಸುವು ಆಧಾರವಾಗಿದೆ. ನಾ ಕೊಡಲಾರೆ ಇವಳನ್ನು" ಎಂದು.
ಇಲ್ಲಿಂದ ಪ್ರಾರಂಭವಾದದ್ದು ಘರ್ಷಣೆ. ರಾಜನು ತನ್ನ ಕ್ಷಾತ್ರಬಲವನ್ನೂ ವಸಿಷ್ಠರು ತಮ್ಮ ಬ್ರಹ್ಮಬಲವನ್ನೂ ಪ್ರಯೋಗಿಸಲು, ಕೊನೆಗೆ ಕ್ಷಾತ್ರವನ್ನು ಬ್ರಾಹ್ಮವು ಸೋಲಿಸಿತು. ಬ್ರಾಹ್ಮದ ಬಲವನ್ನರಿತು ವಿಶ್ವಾಮಿತ್ರರು ತಪಸ್ಸನ್ನಾಚರಿಸಿ, ಅದನ್ನು ತಾವೂ ಗಳಿಸಲು ಹೊರಟು ಅದನ್ನು ಸಾಧಿಸಿಯೂ ಬಿಟ್ಟರು.
ಇರಲಿ. ಇಲ್ಲಿ ಬರುವ ಪ್ರಶ್ನೆ ಇದು: ಇಬ್ಬರೂ ಧರ್ಮಾತ್ಮರೇ. ಇಬ್ಬರ ನಿಲುವನ್ನೂ ಒಂದೊಂದು ನೇರದಲ್ಲಿ ಸರಿಯೆಂದು ವಾದಿಸಬಹುದು. ಸರಿ-ತಪ್ಪಿನ ಪ್ರಶ್ನೆ ಇಲ್ಲದಿದ್ದರೆ ಸಂಘರ್ಷವೇಕಾಯಿತು?
ರಾಜನಾಗಿ ವಿಶ್ವಾಮಿತ್ರನು ಒಂದು ಅಮೂಲ್ಯವಾದ ವಸ್ತುವು ತನ್ನಲ್ಲಿರಬೇಕೆಂದು ಬಯಸುವುದು ತಪ್ಪಲ್ಲ. ಏಕೆಂದರೆ, ಧಾರ್ಮಿಕನಾದ ರಾಜನು ಒಂದು ವಸ್ತುವಿನ ಸದುಪಯೋಗಮಾಡಿದಾಗ ತನ್ನೆಲ್ಲಾ ಪ್ರಜಾಸ್ತೋಮಕ್ಕೆ ಅದು ಉಪಕಾರಿಯಾಗಲಿ ಎಂಬ ಉದ್ದೇಶವಿರುತ್ತದೆ. ಹಾಗೂ ಅದರ ಉಪಯೋಗವಾಗುವುದರ ವ್ಯಾಪ್ತಿ ಸಣ್ಣದರಿಂದ ದೊಡ್ಡದಕ್ಕೆ ವಿಸ್ತರಿಸಲು ಆಸ್ಪದವಾಗುತ್ತದೆ. ಆದರೆ, ವಸಿಷ್ಠರಾದರೋ ಈ ಧೇನುವನ್ನು ಬಳಸುತ್ತಿರುವುದು ಯಜ್ಞಕಾರ್ಯಕ್ಕೆ. ಯಜ್ಞವೆಂದರೆ ಧರ್ಮಸಂರಕ್ಷಣೆಯ ಕಾರ್ಯ. ಆದ್ದರಿಂದ ಗುರಿಯಲ್ಲಿ ಪ್ರಾಪಂಚಿಕ ಧ್ಯೇಯಕ್ಕಿಂತ ಇದು ಹಿರಿದಾಯಿತು.
ಇದಕ್ಕೂ ಮುಖ್ಯವಾದ ಇನ್ನೊಂದಂಶ ಇಲ್ಲಿದೆ. ವಿಶ್ವಾಮಿತ್ರನು ಈ ಧೇನುವನ್ನು ತನ್ನ ಸ್ವತ್ತನ್ನಾಗಿ ಮಾಡಿಕೊಳ್ಳಬಯಸಿರುವನು. ಆದರೆ ವಸಿಷ್ಠರಿಗೆ ಈ ಹಸು ಸ್ವತ್ತಲ್ಲ, ತಮ್ಮ ಅಸ್ತಿತ್ವದ ಆಧಾರ. ಧೇನುವನ್ನು ಕುರಿತಾಗಿರುವ ವಸಿಷ್ಠರ ಧ್ಯೇಯೋದ್ದೇಶಗಳು ವಿಶ್ವಾಮಿತ್ರನ ಧ್ಯೇಯೋದ್ದೇಶಗಳಿಗಿಂತ ಹಿರಿದಾದವು. ಒಂದು ವಸ್ತುವಿನ/ಧ್ಯೇಯದ ಸ್ವಾಭಾವಿಕಮೌಲ್ಯ ಏನೇ ಆಗಿರಬಹುದು, ಆದನ್ನು ನಾವು ಯಾವ ಕಾರಣಕ್ಕೆ ಪಡೆಯಬಯಸುತ್ತೇವೆಂಬುದು, ನಮಗೆ ಅದನ್ನು ಪಡೆಯಲು ಅರ್ಹತೆ ಇದೆಯೋ ಇಲ್ಲವೋ ಎಂಬ ನಿರ್ಧಾರಕ್ಕೆ ಮುಖ್ಯವಾಗುತ್ತದೆ. ಶ್ರೀರಂಗಮಹಾಗುರುಗಳ ಮಾತಿನಲ್ಲಿ "ನಾವು ನಮ್ಮ ಜೀವಮಾನದಲ್ಲಿ ಯಾವುದೇ ಕಾರ್ಯವನ್ನು ಮಾಡಿದರೂ ಅದರ ಹಿನ್ನೆಲೆಯಲ್ಲಿ ಒಂದು ಮಹತ್ವದ ಉದ್ದೇಶವಿರಬೇಕು: ಮೂಲಕ್ಕೆ ಕರೆದೊಯ್ಯುವಂತಿರಬೇಕು."
ಸೂಚನೆ: 16/3/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.