ಲೇಖಕರು: ಡಾ ಸಿ.ಆರ್. ರಾಮಸ್ವಾಮಿ(ಪ್ರತಿಕ್ರಿಯಿಸಿರಿ lekhana@ayvm.in)
ಈ ಲೇಖನಮಾಲೆಯ ಪ್ರಾರಂಭದಲ್ಲಿ ನೆನಪಿಸಿಕೊಂಡಂತೆ ದೇವತೆಗಳಬಗ್ಗೆ ಸಾಮಾನ್ಯವಾದ ಅಭಿಪ್ರಾಯ - ಅವರು ಅಮೃತಪಾನ ಮಾಡಿದ ಸ್ವರ್ಗವಾಸಿಗಳು, ಸರ್ವೈಶ್ವರ್ಯದಿಂದಕೂಡಿ ಸುಖ-ಭೋಗಗಳನ್ನನುಭವಿಸುವವರು ಇತ್ಯಾದಿ. ಅಸುರರೆಂದರೆ ಕ್ರೂರರೂಪಿಗಳು, ಬಲದಿಂದ ಕೊಬ್ಬಿ ಎಲ್ಲರನ್ನೂ ಹಿಂಸಿಸುವವರು, ಕಾಮಕ್ರೋಧಾದಿ ಅರಿಷಡ್ವರ್ಗಗಳ ಮೂರ್ತಾಕಾರವಾದವರು ಇತ್ಯಾದಿ. ಪುರಾಣಗಳು ದೇವಾಸುರರ ಬಗ್ಗೆ ಅನೇಕ ಕಥೆಗಳನ್ನು ಹೇಳುತ್ತವೆ. ಅವು ಸ್ವಾರಸ್ಯಕರವಾಗಿದ್ದರೂ ಕೆಲವೊಮ್ಮೆ ಅರ್ಥಹೀನ-ಅಸಂಭವ-ಕಾಲ್ಪನಿಕ ಕಥೆಗಳೆನಿಸುವುದಲ್ಲದೆ ಪುರಾಣಗಳೆಲ್ಲ ಕಟ್ಟುಕಥೆಯ ಕಂತೆಗಳೋ ಎಂಬ ಸಂಶಯವನ್ನೆಬ್ಬಿಸುತ್ತವೆ. ಈಗಿನ ವಿಚಾರಪರರ ಸಮಾಜದಲ್ಲಿ ಇವು ನಗೆಪಾಟಲಿಗೆ ವಿಷಯಗಳು.
ಪುರಾಣದ ಕಥೆಗಳಲ್ಲಿ ಮೂರು ವಿಧಗಳುಂಟೆಂದು ಜ್ಞಾನಿಗಳು ತಿಳಿಸುತ್ತಾರೆ -ಐತಿಹಾಸಿಕವಾದವು, ತತ್ತ್ವವನ್ನು ಸ್ಪಷ್ಟಪಡಿಸುವ ರೂಪಕಗಳು ಮತ್ತು ಸಾಧನೆಯಲ್ಲಾಗುವ ಅಂತರ್ದರ್ಶನಗಳನ್ನು ತಿಳಿಸುವ ಕಥೆಗಳು. ಆದ್ದರಿಂದಲೇ ಪುರಾಣಗಳನ್ನು ಗುರುಮುಖೇನ ಉಪದೇಶದಿಂದಲೇ ತಿಳಿಯಬೇಕೆನ್ನುವ ಪದ್ಧತಿ ಬೆಳೆದುಬಂದಿದೆ.
ಹೀಗೆ ಜ್ಞಾನಿಗಳ ನೋಟವು ತಿಳಿಸುವುದನ್ನು ನೆನೆಪಿಸಿಕೊಳ್ಳುವುದಾದರೆ, ದೇವಾಸುರರಿಬ್ಬರೂ ಎಲ್ಲ ಜೀವಕೋಟಿಗಳ ಒಳಗೂ ಹೊರಗೂ ಇದ್ದು ಆಡಿಸುವ ಶಕ್ತಿರೂಪರು, ಸ್ಥೂಲ ಶರೀರವಿಲ್ಲದ ತೇಜೋರೂಪರು. ಸೃಷ್ಟಿ-ಸ್ಥಿತಿ-ಲಯ ವ್ಯಾಪಾರಗಳನ್ನು ನಡೆಸಲು ಭಗವಂತನಿಂದಲೇ ಸೃಷ್ಟಿಸಲ್ಪಟ್ಟ ಶಕ್ತಿಗಳು. ಆದ್ದರಿಂದಲೇ ಒಂದೇ ತಂದೆಯ ಮಕ್ಕಳು, ಅಣ್ಣತಮ್ಮಂದಿರು ಎಂಬ ಮಾತಿದೆ. ಇವರು ಜ್ಞಾನದೃಷ್ಟಿಗೆ ಮಾತ್ರವೇ ಗೋಚರರು. ಉದಾಹರಣೆಗೆ ವಿದ್ಯುತ್ ಎನ್ನುವುದು ಶಕ್ತಿ ರೂಪ. ಅದನ್ನು ಬರಿಕಣ್ಣಿನಿಂದ ನೋಡಳಸಾಧ್ಯ. ಬಲ್ಬ್-ಫಾನ್ ಇತ್ಯಾದಿಗಳ ಚಾಲನೆಯ ಮೂಲಕವೇ ಅದರ ಇರವಿಕೆಯನ್ನು ತಿಳಿಯಬೇಕಾಗಿದೆ. ಅಂತೆಯೇ ಬ್ರಹ್ಮಾಂಡ-ಪಿಂಡಾಂಡಗಳ ಕಾರ್ಯಶೀಲತೆಯಿಂದಲೇ ದೇವಾಸುರರ ಇರವಿಕೆಯನ್ನು ಅರಿಯಬೇಕು.
ಸೃಷ್ಟಿಎಲ್ಲವೂ ತ್ರಿಗುಣಗಳ ಸೇರುವೆಯಿಂದಲೇ ಆಗಿದೆಯಾದ್ದರಿಂದ ನಮ್ಮಂತೆಯೇ ದೇವಾಸುರರಲ್ಲೂ ತ್ರಿಗುಣಗಳ ವ್ಯಾಪಾರ ನಡೆಯುವುದುಂಟು. ದೇವತೆಗಳಲ್ಲಿ ಸತ್ವಗುಣವು ಪ್ರಧಾನವಾಗಿದ್ದು ರಜಸ್ತಮೋಗುಣಗಳು ಗೌಣವಾಗಿರುತ್ತವೆ. ಆದ್ದರಿಂದ ದೈವೀಶಕ್ತಿ ಕೆಲಸಮಾಡುವ ವ್ಯಕ್ತಿಗಳು ಸಾತ್ವಿಕರಾಗಿಯು ಪ್ರಸನ್ನತೆ ಇತ್ಯಾದಿ ಸದ್ಗುಣಗಳಿಂದಲೂ ಕೂಡಿರುತ್ತಾರೆ. ಅಸುರರಲ್ಲಿ ರಜಸ್ತಮೋಗುಣಗಳೇ ಪ್ರಧಾನವಾಗಿದ್ದು ಸತ್ವಗುಣವು ಗೌಣವಾಗಿರುವುದರಿಂದ ಆಸುರೀ ಪ್ರಕೃತಿಗಳಲ್ಲಿ ಕಾಮಕ್ರೋಧಾದಿ ಅರಿಷಡ್ವರ್ಗಗಳು ಉಲ್ಬಣವಾಗಿರುತ್ತವೆ. ಕ್ರೌರ್ಯ-ಹಿಂಸೆ ಮುಂತಾದ ದುರ್ಗುಣಗಳೂ ಪ್ರಬಲವಾಗುತ್ತವೆ. ಆಸುರೀಶಕ್ತಿಯ ಮೂರ್ತಾಕಾರವಾದ ಹಿರಣ್ಯಾಕ್ಷ-ಹಿರಣ್ಯಕಶಿಪು ಮುಂತಾದವರು ಇದಕ್ಕೆ ಉದಾಹರಣೆ.
ಕ್ರಿಯಾಶೀಲತೆಯನ್ನುಂಟುಮಾಡುವ ರಜೋಗುಣವು ಸತ್ವ-ತಮಸ್ಸು ಎರಡರ ಜೊತೆಗೂ ಸೇರಬಲ್ಲದು. ಎರಡರಲ್ಲಿ ಯಾವುದು ಪ್ರಧಾನವಾಗಿದೆಯೋ ಆ ದಿಕ್ಕಿನಲ್ಲಿ ಕಾರ್ಯವೆಸುಗುವಂತೆ ಮಾಡುತ್ತದೆ.
ದೇವತೆಗಳ ಸಂಖ್ಯೆಯೇ ಅಸುರರಿಗಿಂತ ಹೆಚ್ಚೆಂಬುದು ವಿಚಿತ್ರವಾಗಿ ಕಂಡರೂ ಸಹಜವೇ ಆಗಿದೆ. ಸೃಷ್ಟಿಯನ್ನು ಸಕ್ರಮವಾಗಿ ನಡೆಸುವವರು ದೇವತೆಗಳು. ಅಕ್ರಮವಾದದ್ದು ಅಸುರರ ಕಾರ್ಯ. ಯಾವುದೇ ಕಾರ್ಯಕ್ಕೂ ಸರಿಯಾದ ದಾರಿ ಒಂದಾದರೆ ತಪ್ಪು ದಾರಿಗಳು ಎಷ್ಟು ಬೇಕಾದರೂ ಇರಬಹುದಲ್ಲವೇ? ಆದ್ದರಿಂದ ಅಸುರರ ಸಂಖ್ಯೆ ಅಧಿಕವಾಗಿರುವುದು ಸಹಜವೇ ಆಗಿದೆ.
ಇನ್ನು 33 ಕೋಟಿ ದೇವತೆಗಳ ಆಗತ್ಯವೇನು? ಎಂದರೆ ನಮ್ಮ ದೇಹದ ಭೌತಿಕವ್ಯಾಪಾರಕ್ಕೆ ಸಹಸ್ರಾರು ನರನಾಡಿಗಳು ಆಗತ್ಯವಾಗಿರುವಂತೆಯೇ ಬ್ರಹ್ಮಾಂಡ-ಪಿಂಡಾಂಡಗಳಲ್ಲಿ ಶಕ್ತಿಯನ್ನು ತುಂಬಿ ಕಾರ್ಯನಿರ್ವಹಿಸಲು ಸಹಸ್ರಾರು ಶಕ್ತಿಗಳು ಇರುವುದರಲ್ಲಿ ಆಶ್ಚರ್ಯವೇನು?
ಸೃಷ್ಟಿಯೇ ತ್ರಿಗುಣಾತ್ಮಕವಾಗಿರುವುದರಿಂದ ಸೃಷ್ಟಿಗಿಳಿದಿರುವ ನಾವು ತ್ರಿಗುಣಗಳ ಸೇರುವೆಯಿಂದಲೇ ಕಟ್ಟಲ್ಪಟ್ಟಿರುವೆವು. ನಮ್ಮ ಪೂರ್ವಕರ್ಮಾನುಗುಣವಾಗಿಯೇ ನಮ್ಮಲ್ಲಿ ಈ ತ್ರಿಗುಣಗಳ ಪ್ರಮಾಣವು ನಿರ್ಧಾರವಾಗುವುದು. ನಮ್ಮೊಳಗೆ ಕೆಲಸಮಾಡುವ ದೇವಾಸುರ ಶಕ್ತಿಗಳು ಸದಾ ಪರಸ್ಪರ ಪೈಪೋಟಿಯಲ್ಲಿ ನಿರತರಾಗಿರುತ್ತಾರೆ. ಸತ್ಕರ್ಮಗಳು ದೇವತಾಶಕ್ತಿಗಳಿಂದ ಪೋಷಿಸಲ್ಪಡುತ್ತವೆ. ಎಚ್ಚರತಪ್ಪಿ ನಡೆದರೆ ಅಲ್ಲಿ ಅಸುರರ ಕೆಲಸ ಪ್ರಾರಂಭ. ಹೇಗೆ ಹಣ್ಣನ್ನು ಕುಯ್ಯುವ ಕತ್ತಿಯನ್ನು ಸರಿಯಾಗಿ ಬಳಸದಿದ್ದಾಗ ಅದು ಕೈಯನ್ನೇ ಕುಯ್ಯುವುದೋ ಹಾಗೆ.
ಪುರುಷಾರ್ಥಗಳ ಸಾಧನೆಯೇ ಧ್ಯೇಯವಾಗಿದ್ದು ಜೀವನ ಸಾಗಿಸಿ ಕೊನೆಗೆ ಪರಮಪುರುಷನನ್ನು ಹೊಂದಿದಾಗಲೇ ಜೀವನದ ಸಾರ್ಥಕ್ಯ. ಇಂತಹ ಧ್ಯೇಯಬದ್ಧವಾದ ಜೀವನದಲ್ಲಿ ಮಾರ್ಗದರ್ಶನ ನೀಡುವುದು ಶಾಸ್ತ್ರಗಳು, ಭಕ್ತರ-ಮಹಾಪುರುಷರ ಆದರ್ಶಗಳು. ಅದನ್ನು ಬಿಟ್ಟರೆ ಸದ್ಗತಿಯಿಲ್ಲ. `ಯಶ್ಶಾಸ್ತ್ರವಿಧಿಮುತ್ಸೃಜ್ಯ ವರ್ತತೇ ಕಾಮಕಾರತಃ ನ ಸ ಸಿದ್ಧಿಮವಾಪ್ನೋತಿ ನ ಸುಖಂ ನ ಪರಾಂಗತಿಂ`
ಆದ್ದರಿಂದ ಅಸುರರ ಧಾಳಿಯಿಂದ ತಪ್ಪಿಸಿಕೊಳ್ಳಬೇಕಾದರೆ ಮೇಲೆಹೇಳಿದ ಮಾರ್ಗದರ್ಶನವನ್ನು ಅವಲಂಬಿಸಿಯೇ ವರ್ತಿಸ ಬೇಕು. ಜೀವನವೆಂಬುದು ತೈಲಸವರಿದ ಕಂಬದಂತೆ. ಅದರ ಮೇಲೇರುವುದು ಅತಿಕಷ್ಟಸಾಧ್ಯ. ಆ ಕಂಬವನ್ನು ಏರುವುದೆಂಬುದೇ ಜೀವಿಯ ಅಧ್ಯಾತ್ಮಜೀವನದ ಏಳಿಗೆಯನ್ನು ಸೂಚಿಸುವುದಾಗಿದೆ. ಏರುವವನನ್ನು ಕೆಳಗೆ ಸುಲಭವಾಗಿ-ವೇಗವಾಗಿ ಜಾರಿಸುವಂತಹ ಕಂಬವದು. ಆದಕ್ಕಾಗಿ ಹತ್ತುವ ಪ್ರಯತ್ನವನ್ನೇ ಮಾಡದೇನೇ ನಿಂತಲ್ಲೇ ನಿಲ್ಲುತ್ತೇವೆಂದರೂ ಅದು ಬಿಡುವುದಿಲ್ಲ. ತೈಲಕಂಬ ಜಾರಿಸುವುದು ಶತಸ್ಸಿದ್ಧ. ಅಂತೆಯೇ, ದೇವತೆಗಳನ್ನಾಶ್ರಯಿಸಿದರೆ ಮೇಲೇಳಲು ಸಹಾಯಮಾಡುತ್ತಾರೆ. ಅವರ ನೆರವನ್ನು ಬೇಡದಿದ್ದರೆ ದೇವತೆಗಳ ಸ್ಥಾನವನ್ನು ಆಕ್ರಮಿಸಲು ಸದಾ ಕಾಯುತ್ತಿರುವ ಅಸುರರು ಮುನ್ನುಗ್ಗಿಬಂದು ನಮ್ಮನ್ನು ಕೆಳಕ್ಕೆಳದೇ ಎಳೆಯುತ್ತಾರೆ.
ದೇವಾಸುರರಿಬ್ಬರೂ ನಮ್ಮೊಳಗೇ ಕೆಲಸಮಾಡುವ ಶಕ್ತಿಗಳೆಂಬುದನ್ನು ನಾವೆಂದಿಗೂ ಮರೆಯುವಂತಿಲ್ಲ. ಆದ್ದರಿಂದ ಋಷಿವಾಕ್ಯಗಳನ್ನವಲಂಬಿಸಿ ದೈವೀಮಾರ್ಗವನ್ನು ಹಿಡಿದರೆ ತ್ರಿಗುಣಗಳಿಂದ ಕೂಡಿದ ಜೀವನದಲ್ಲೇ ತ್ರಿಗುಣಾತೀತವಾದ ಸ್ಥಿತಿಯನ್ನು ತಲುಪಬಹುದೆಂಬುದನ್ನು ಅರಿತು ಗುರಿಮುಟ್ಟುವವರಾಗೋಣ.
ಈ ಲೇಖನಮಾಲಿಕೆಯಲ್ಲಿ ತಿಳಿಸಿರುವ ವಿಷಯಗಳು ಬಹುಮಟ್ಟಿಗೆ ಶ್ರೀ ಶ್ರೀರಂಗಮಹಾಗುರುವಿನ ದೃಷ್ಟಿಕೋಣವನ್ನವಲಂಬಿಸಿ, ಶ್ರೀ ರಂಗಪ್ರಿಯಯತಿವರೇಣ್ಯರು ಮುಂತಾದ ಹಿರಿಯರ ಪ್ರವಚನಗಳ ಆಧಾರಿತ. ಅವರೆಲ್ಲರಿಗೂ ನನ್ನ ಕೃತಜ್ಞತಾಪೂರ್ವಕ ನಮನಗಳು.
ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 3/2/2024 ರಂದು ಪ್ರಕವಾಗಿದೆ.