Wednesday, December 20, 2023

ಸತ್ಕಾರ್ಯ ಫಲಿಸಲು ಇದು ಬೇಕು (Satkarya Phalisalu Idu beku)

ಲೇಖಕರು : ಡಾ. ಹಚ್.ಆರ್. ಮೀರಾ
(ಪ್ರತಿಕ್ರಿಯಿಸಿರಿ lekhana@ayvm.in)


ಸಗರನ ಹೆಸರು ಯಾರಿಗೆ ತಿಳಿದಿಲ್ಲ? ಆತ ಶ್ರೀರಾಮನ ವಂಶದ ಪೂರ್ವಜ. ಅವನಿಗೆ ಅರವತ್ತು ಸಾವಿರದ ಒಂದು ಮಕ್ಕಳು. ಅವನ ಹಿರಿಯ ಮಗನಾದ ಅಸಮಂಜ ದುಷ್ಟ. ಪ್ರಜೆಗಳನ್ನು ತಂದೆಯಂತೆ ನೋಡಿಕೊಳ್ಳುತ್ತಿದ್ದ ಸಗರ ಆ ಅಧರ್ಮಿಯನ್ನು ದೇಶದಿಂದ ಹೊರಹಾಕಿದ. ಅಸಮಂಜನ ಮಗನಾದರೋ ವೀರನೂ ಧರ್ಮಿಷ್ಠನೂ ಆದ ಅಂಶುಮಂತ. ಸಗರ ತನ್ನ ಈ ಮೊಮ್ಮಗ ಹಾಗೂ ಅರವತ್ತು ಸಾವಿರ ವೀರ ಮಕ್ಕಳ ಸಹಾಯದಿಂದ ಅಶ್ವಮೇಧಯಜ್ಞ ಮಾಡಲು ಮುಂದಾದ. ಯಜ್ಞಾಶ್ವವನ್ನು ಇಂದ್ರನು ಅಪಹರಿಸಿದ. ಅದನ್ನು ಹುಡುಕಹೊರಟ ಆ ಅರವತ್ತು ಸಾವಿರ ಸಗರಪುತ್ರರು ಭೂಮಿಯ ಎಲ್ಲ ಭಾಗಗಳನ್ನೂ ಹುಡುಕಿದರು. ಕುದುರೆ ಸಿಗದಿದ್ದಾಗ ಭೂಮಿಯನ್ನು ಭೇದಿಸತೊಡಗಿದರು. ಕೊನೆಗೆ, ರಸಾತಲದವರೆಗೆ ಹೋದರು.

ಅಲ್ಲಿ ಒಂದೊಂದು ದಿಕ್ಕಿನಲ್ಲಿ ಸಿಕ್ಕ ದಿಗ್ಗಜಗಳಿಗೆ ಪ್ರದಕ್ಷಿಣ-ನಮಸ್ಕಾರಗಳನ್ನರ್ಪಿಸಿ, ಕೊನೆಗೆ ಈಶಾನ್ಯ-ದಿಕ್ಕಿನಲ್ಲಿ ತಪೋಮಗ್ನನಾದ ಕಪಿಲಮುನಿಯನ್ನು ಕಂಡರು. ಅಲ್ಲಿಯೇ ಯಜ್ಞಾಶ್ವವೂ ಕಂಡಿತು. ಅವರಿಗೆ ಅದು ಸಿಕ್ಕ ಸಂಭ್ರಮವಾದರೂ, ಅಲ್ಲಿದ್ದ ಮುನಿಯೇ ಕಳ್ಳನೆಂಬ ಭ್ರಮೆಯೂ ಆಯಿತು. "ಕಳ್ಳ" ಎಂದು ಕೂಗುತ್ತಾ ಅವರು ಆ ಮುನಿಯ ಮೇಲೆ ಹಲ್ಲೆ ಮಾಡಹೊರಟರು. ಆ ಮಹಾತ್ಮನಿಗೆ ರೋಷವುಕ್ಕಿ, ಒಂದು ಹುಂಕಾರದಿಂದ ಇವರನ್ನು ಭಸ್ಮ ಮಾಡಿದ.

ಇಲ್ಲಿಗೆ ಈ ಕಥೆ ಮುಗಿಯಲಿಲ್ಲ. ವೀರನೂ ವಿನಯಸಂಪನ್ನನೂ ಆದ ಅಂಶುಮಂತನು ಕೊನೆಗೆ ಇವರ ಗತಿ ಏನಾಯಿತೆಂದು ತಿಳಿದುಕೊಂಡ. ಆದರೂ ಅವನಿಗೆ ತನ್ನ ಚಿಕ್ಕಪ್ಪಂದಿರಿಗೆ ಸದ್ಗತಿ ಉಂಟುಮಾಡಲಾಗಲಿಲ್ಲ. ಕೊನೆಗೆ ಅವನ ಪುತ್ರನಾದ ಭಗೀರಥನ ಮಹಾಕಾರ್ಯದಿಂದಲೇ ಅವರೆಲ್ಲರಿಗೂ ಸದ್ಗತಿಯಾಗುವಂತಾಯಿತು. ಇರಲಿ. ಈ ಸಗರಪುತ್ರರ ಕಥೆಯಲ್ಲಿ ಒಂದು ಮುಖ್ಯವಾದ ಪ್ರಶ್ನೆ ಮೇಲೇಳುತ್ತದೆ. ಅಸಮಂಜ ದುಷ್ಟ, ದುರ್ಮತಿ. ಅವನಿಗೆ ಶಿಕ್ಷೆಯಾದದ್ದು ಸರಿಯೇ. ಆದರೆ ಈ ಅರವತ್ತು ಸಾವಿರ ಸಗರಪುತ್ರರು ಒಳ್ಳೆಯವರೇ; ತಂದೆಯ ಮಾತನ್ನನುಸರಿಸಿ ಯಜ್ಞಾಶ್ವ ಹುಡುಕಲು ಹೊರಟವರು. ಭೂಮಿಯನ್ನು ಭೇದಿಸಿದಾಗಲೂ ಅಲ್ಲಿ ಸಿಕ್ಕ ದಿಗ್ಗಜಗಳಿಗೆಲ್ಲ ಗೌರವ ತೋರಿಸಿಯೇ ಮುಂದುವರೆದವರು. ಹಾಗಿದ್ದಾಗ, ಅವರಿಗೆ ಶಾಪವೇಕೆ?

ಏನೇ ಒಳ್ಳೆಯ ಕೆಲಸ ಮಾಡಲು ಹೊರಟಿದ್ದಾಗಲೂ ನಮ್ಮಿಂದ ಅಪರಾಧಗಳಾಗಬಹುದು. ತಪ್ಪು ಎಂದು ಗೊತ್ತಿದ್ದೂ, "ಒಂದಷ್ಟು ತಪ್ಪಾದರೇನಂತೆ? ಒಳ್ಳೆಯ ಉದ್ದೇಶದಿಂದ ತಾನೆ ಮಾಡುತ್ತಿರುವುದು?" ಎನ್ನುವ ಧೋರಣೆಯಿಂದ ಆಗಿಬಿಡಬಹುದು. ತಿಳಿಯದೇ ತಪ್ಪುಗಳಾಗಬಹುದು. ಆದರೆ ತಪ್ಪು ತಪ್ಪೇ.

ಸಂಸ್ಕೃತದ ಒಂದು ಸೂಕ್ತಿ ಹೇಳುತ್ತದೆ: "ಸತ್ಪುರುಷರಿಗೆ ತಾಪವನ್ನುಂಟುಮಾಡಿದರೆ 'ಶಾಪ ಕೊಡಿ' ಎಂದೇನೂ ಕೇಳಬೇಕಿಲ್ಲ" ಎಂದು. ಕಪಿಲರು ತಪಸ್ಸಿನಲ್ಲಿ ಮುಳುಗಿದ್ದವರು. ಅವರ ತಪೋಭಂಗ ಮಾಡಿದ್ದಲ್ಲದೆ, ಕಳ್ಳತನದ ಆಪಾದನೆಯನ್ನೂ ಮಾಡಿ ಅವರ ಮೇಲೆ ಆಕ್ರಮಣ ಮಾಡಹೊರಟಿದ್ದರು, ಸಗರಪುತ್ರರು. ಹೀಗಾಗಿ ಸಗರಪುತ್ರರು ಮಾಡಿದ ಅಪರಾಧದ ತೂಕ ಅವರ ಒಳ್ಳೆಯತನವನ್ನೂ, ಒಳ್ಳೆಯ ಉದ್ದೇಶವನ್ನೂ ಎಲ್ಲವನ್ನೂ ಮುಳುಗಿಸಿಬಿಟ್ಟಿತು.

ವಿನಯ-ವಿವೇಕಗಳಿಂದ ವರ್ತಿಸಿದರೆ ಜಾರದೇ ನಮ್ಮ ಕೆಲಸವನ್ನು ಸಾಧಿಸಬಹುದು. ಶ್ರೀರಂಗಮಹಾಗುರುಗಳ ಮಾತಿನಲ್ಲಿ ಹೇಳುವುದಾದರೆ "ವಿನಯವು ಒಂದು ರಕ್ಷೆ". ಇಲ್ಲವಾದಲ್ಲಿ ಆದ ಅಚಾತುರ್ಯವನ್ನು ಸರಿಪಡಿಸಲು ಭಗೀರಥಪ್ರಯತ್ನವನ್ನೇ ಮಾಡಬೇಕಾದೀತು!

ಸೂಚನೆ: 20/12/2023 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.