ದೇವತೆಗಳ ಜನ್ಮವೈರಿಗಳೇ ಅಸುರರು. ಇವರೂ ಸಹ ಕಶ್ಯಪಪುತ್ರರೇ ಆಗಿದ್ದು, ದಿತಿ ಮತ್ತು ದನುವಿನ ಪುತ್ರರಾಗಿ ದೈತ್ಯರು ಮತ್ತು ದಾನವರು ಎಂಬುದಾಗಿ ಕರೆಸಿಕೊಳ್ಳುತ್ತಾರೆ. ದೇವತೆಗಳಿಗಿಂತಲೂ ಹಿರಿಯರು ಎಂಬುದಾಗಿ ಪುರಾಣಗಳು ತಿಳಿಸುತ್ತವೆ. ಇವರುಗಳೂ ಆಜನ್ಮ ಮಹಾಬಲಿಷ್ಠರು. ಇವರ ಬಲ ಊಹಿಸಲಸಾಧ್ಯವಾದುದು. ವಿಶೇಷವಾಗಿ ಇವರೆಲ್ಲರೂ ಮಾಯಾವಿಗಳು. ಯಾವ ರೂಪವನ್ನಾದರೂ ಯಾವ ಸಮಯದಲ್ಲಾದರೂ ಧಾರಣೆ ಮಾಡಬಲ್ಲರು. ಬೇರೆ ಬೇರೆ ಲೋಕಗಳನ್ನೂ ಪ್ರವೇಶಿಸಬಲ್ಲರು.
ಇವರು ರಜೋಗುಣ-ತಮೋಗುಣಗಳಲ್ಲೇ ಹೆಚ್ಚುಕಾಲ ಸಂಚರಿಸುವುದರಿಂದ ಸಹಜವಾಗಿಯೇ ಕಾಮ-ಕ್ರೋಧಗಳಿಗೆ ವಶರಾಗಿರುವವರು. ಅತಿಕಾಮಿಗಳು, ಸ್ತ್ರೀಲೋಲುಪರು. ಸುಂದರ ಸ್ತ್ರೀಯರನ್ನು ಕಂಡರೆ ಬಲಾತ್ಕಾರದಿಂದ ಅಥವಾ ರಾವಣನಂತೆ ವಂಚನೆಯಿಂದಲಾದರೂ ಅಪಹರಿಸುವ ಸ್ವಭಾವದವರು. ಉಗ್ರಕೋಪಿಷ್ಠರು. ತೀವ್ರಮದದಿಂದ ಕೊಬ್ಬಿದವರು. ಹಿರಣ್ಯಕಶಿಪುವಿನಂತೆ ತನ್ನನ್ನೇ ಈಶ್ವರನೆಂದು ಲೋಕವೆಲ್ಲವೂ ಪೂಜಿಸಬೇಕು ಎಂದು ಆಜ್ಞೆ ಹೊರಡಿಸುವವರು. ಉಲ್ಲಂಘಿಸಿದವರಿಗೆ ಕಠಿಣಶಿಕ್ಷೆ ನಿಶ್ಚಿತ. ಹಿರಣ್ಯಾಕ್ಷನಂತೆ ಮದಾಂಧರಾಗಿ ಕೆಲವೊಮ್ಮೆ ವಿಶ್ವನಾಯಕನಾದ ವಿಷ್ಣುವಿಗೇ ಸವಾಲು ಹಾಕುತ್ತಾರೆ. ದೌಷ್ಟ್ಯದಿಂದ ಕೂಡಿರುವವರಾಗಿರುತ್ತಾರೆ. ಸಾಧುಗಳನ್ನು ಹಿಂಸಿಸುವುದು, ಅದರಲ್ಲೇ ರಮಿಸುವುದು, ಅವರ ಗುಣ. ಅಂದರೆ ಹಿಂಸೆಯೇ ಅವರ ಪ್ರವೃತ್ತಿ. ಆದ್ದರಿಂದ ಧರ್ಮ ಕಂಟಕರಾಗಿರುತ್ತಾರೆ. ಧರ್ಮ ಕಾರ್ಯಗಳನ್ನು ಆಚರಿಸುವ ಸಜ್ಜನರಿಗೆ ಪೀಡೆಯನ್ನೆಸಗುವುದಲ್ಲದೇ ಸಂಹರಿಸಲೂ ಹಿಂಜರಿಯುವುದಿಲ್ಲ. ಯಜ್ಞ-ಯಾಗಾದಿಗಳಲ್ಲಿ ವಿನಾಕಾರಣ ಮಾಂಸ ಎಸೆದು, ರಕ್ತಸುರಿಸಿ, ಧ್ವಂಸ ಮಾಡುವುದೇ ಅವರಿಗೆ ಸಂತಸವನ್ನುಂಟುಮಾಡುತ್ತದೆ.
ಇವರ ಮತ್ತೊಂದು ಮುಖ್ಯಸ್ವಭಾವವೆಂದರೆ ದೇವತೆಗಳ ವಿಷಯದಲ್ಲಿ ಸದಾಕಾಲವೂ ದ್ವೇಷ ಕಾರುವವರು. ದೇವತೆಗಳಿಗೆ ತೊಂದರೆಯನ್ನೆಸಗುವುದು ಇವರ ಹುಟ್ಟುಗುಣ. ದೇವತೆಗಳು ಧರ್ಮಸೇತುವೆಯನ್ನು ಕಟ್ಟುತ್ತಿದ್ದರೆ ಅದನ್ನು ಒಡೆದು ಧ್ವಂಸ ಮಾಡುವುದೇ ಇವರ ಸ್ವಭಾವ. ಅಸುರರ ಸಂಖ್ಯೆಯೂ ದೇವತೆಗಳಿಗಿಂತಲೂ ಹೆಚ್ಚು. ದೇವತೆಗಳು ೩೩ ಕೋಟಿಯಾದರೆ ಅಸುರರು ೬೬ ಕೋಟಿ! ಇವರು ದೇವತೆಗಳಿಗಿಂತ ಮಹಾಬಲಿಷ್ಠರು. ಬಲ-ಸಂಖ್ಯೆಗಳೆರಡೂ ಹೆಚ್ಚಾಗಿರುವುದರಿಂದ ಸಾಮಾನ್ಯವಾಗಿ ಯುದ್ಧದಲ್ಲಿ ಇವರದು ಎತ್ತಿದ ಕೈ. ಪಾತಾಳಾದಿ ಸಪ್ತ ಅಧೋಲೋಕಗಳು ಇವರ ಸಾಮ್ರಾಜ್ಯ. ಇಷ್ಟಾದರೂ ದೇವತೆಗಳಿಗೆ ಸಂಬಂಧಪಟ್ಟಿರುವ ಊರ್ಧ್ವಲೋಕವನ್ನೂ ತಮ್ಮ ವಶಪಡಿಸಿಕೊಳ್ಳುವಿಕೆಯೇ ಅಸುರರ ಗುರಿಯಾಗಿರುತ್ತದೆ. ಸ್ವರ್ಗ, ಪಾತಾಳ ಇವೆರೆಡರ ಮಧ್ಯೆ ಇರುವುದು ಮನುಷ್ಯಲೋಕ. ದೇವತೆಗಳು ಮನುಷ್ಯರನ್ನೂ ರಕ್ಷಿಸಿ, ತಮ್ಮ ಲೋಕವನ್ನೂ ರಕ್ಷಿಸಿಕೊಳ್ಳಬೇಕು. ಆದರೆ ಅಸುರರು ತಮ್ಮ ಲೋಕದ ಆಧಿಪತ್ಯವನ್ನು ಉಳಿಸಿಕೊಂಡು ಮನುಷ್ಯಲೋಕ, ದೇವಲೋಕಕ್ಕೆ ಪೀಡೆಯನ್ನು ಒಡ್ಡುತ್ತಲೇ ಇರುವರು. ಸಾಮಾನ್ಯವಾಗಿ ಯುದ್ಧದಲ್ಲಿ ದೇವತೆಗಳನ್ನು ಪರಾಜಯಗೊಳಿಸಿ ಎಲ್ಲ ದೇವತೆಗಳನ್ನೂ ಸೆರೆಹಿಡಿದು ದೇವೇಂದ್ರನ ಸಿಂಹಾಸನವನ್ನು ವಶಪಡಿಸಿಕೊಳ್ಳುವುದೇ ಅವರ ಧ್ಯೇಯ. ನಂತರ ಭೂಲೋಕವನ್ನೂ ಧಾಳಿಮಾಡಿ ಮನುಷ್ಯರಿಗೂ ಹಿಂಸೆಯನ್ನು ಕೊಡುವರು. ಹೀಗೆ ದೇವಲೋಕ, ಮನುಷ್ಯಲೋಕ ಎರಡನ್ನೂ ತಮ್ಮ ವಶಕ್ಕೆ ತೆಗೆದುಕೊಳ್ಳುವರು. ಪಾತಾಳಲೋಕವು ಹೇಗೂ ಅವರ ಆಧಿಪತ್ಯದಲ್ಲೇ ಇರುವುದರಿಂದ ಮೂರು ಲೋಕಗಳಿಗೂ ಅಧಿಪತಿಗಳಾಗಿ ಲೋಕಕಂಟಕರಾಗಿ ಮೆರೆಯುವುದೇ ಇವರ ಉದ್ದೇಶ.
ಇಷ್ಟಾದರೂ ಅಸುರರಲ್ಲಿ ಧರ್ಮಿಷ್ಠರು ಇಲ್ಲವೆಂದೇನಿಲ್ಲ. ಬಾಣಾಸುರ-ತ್ರಿಪುರಾಸುರ ಮುಂತಾದ ಅನೇಕರು ಧರ್ಮಿಷ್ಠರು, ಮಹಾಶಿವಭಕ್ತರು. ಅಸುರರು ಕಠಿಣವಾದ ತಪಸ್ಸನ್ನು ಆಚರಿಸಲು ಹಿಂಜರಿಯುವವರಲ್ಲ. ದೀರ್ಘಕಾಲ ತಪಸ್ಸಿನ ಫಲವಾಗಿ ಬ್ರಹ್ಮದೇವರನ್ನೂ ಪರಶಿವನನ್ನೂ ಒಲಿಸಿಕೊಂಡು ಅಮರರಾಗುವಿಕೆಯನ್ನು ವರವಾಗಿ ಪ್ರಾರ್ಥಿಸುವರು. ಅದು ಸಾಧ್ಯವಿಲ್ಲವೆಂದಾಗ ಬದಲಿಗೆ ಅಷ್ಟೇ ಅಮೋಘವಾದ ವರಗಳನ್ನು ಪಡೆದುಕೊಳ್ಳುತ್ತಾರೆ. ನಂತರ ಅಹಂಕಾರದಿಂದ ಕೊಬ್ಬಿದವರಾಗಿ ಧರ್ಮಪ್ರಜ್ಞೆಯನ್ನು ಸಂಪೂರ್ಣವಾಗಿ ಕಳೆದುಕೊಂಡು ಹಿಂಸಾತ್ಮಕರಾಗುತ್ತಾರೆ. ಲೋಕಕಂಟಕರಾಗುತ್ತಾರೆ. ಭಸ್ಮಾಸುರನು ವರಕೊಟ್ಟ ದೇವರ ಮೇಲೇ ಪರೀಕ್ಷಾ-ಪ್ರಯೋಗ ನಡೆಸುತ್ತಾನೆ !
ಮಿತಿಮೀರಿದ ದೌಷ್ಟ್ಯದಿಂದ ಕೂಡಿದ ಅಸುರರನ್ನು ಸಾಕ್ಷಾತ್ ಮಹಾವಿಷ್ಣುವೇ ವರಾಹ, ನಾರಸಿಂಹಾದಿ ಹಲವು ಅವತಾರಗಳನ್ನು ತಾಳಿ ಸಂಹರಿಸುತ್ತಾನೆ. ಅಂತೆಯೇ ತಾರಕಾಸುರನ ಸಂಹಾರವು ಸೇನಾನಿಯೂ ಷಾಣ್ಮಾತೃಕಾಪುತ್ರನೂ ಆದ ಷಣ್ಮುಖನ ಮೂಲಕ ನಡೆಯುತ್ತದೆ. ಗಜಮುಖಾಸುರನನ್ನು ಪಾರ್ವತೀಪುತ್ರ ಗಜಾನನು ಸಂಹರಿಸಿದರೆ, ಬಾಣಾಸುರನನ್ನು ಕನ್ಯೆಯಾದ ಕನ್ಯಾಕುಮರಿಯು ವಧಿಸುತ್ತಾಳೆ. ಮಹಾಬಲಿಷ್ಠರೂ ವಿಚಿತ್ರವರವನ್ನು ಪಡೆದಂತಹವರೂ ಆದ ತ್ರಿಪುರಾಸುರರ ವಧೆಯನ್ನು ದೇವತೆಗಳ ಸೇವೆಯನ್ನೂ ಸ್ವೀಕರಿಸಿ ತ್ರಿಮೂರ್ತಿಗಳು ಒಂದುಗೂಡಿ ಪೂರ್ಣಗೊಳಿಸುತ್ತಾರೆ!
ಅಸುರರಲ್ಲಿ ಜನ್ಮತಃ ಅಸುರರು, ಶಾಪಗ್ರಸ್ತರಾಗಿ ಅಸುರರಾಗಿ ಹುಟ್ಟಿದವರು ಎಂದು ಎರಡು ವಿಧ. ಉದಾಹರಣೆಗೆ ಶ್ರೀವೈಕುಂಠದ ದ್ವಾರಪಾಲಕರಾದ ಜಯ-ವಿಜಯರು ಸನಕಾದಿಗಳ ಶಾಪದಿಂದ ರಾವಣ-ಕುಂಭಕರ್ಣಾದಿ ಮೂರು ಅವತಾರಗಳನ್ನು ಎತ್ತಿದ ವೃತ್ತಾಂತ ಸುಪ್ರಸಿದ್ಧ. ಅಂತಹವರು ಶಾಪದ ಅವಧಿ ಮುಗಿದ ಕೂಡಲೇ ತಮ್ಮ ಸ್ವಸ್ಥಾನಕ್ಕೆ ತೆರಳುವುದೂ ಸಹಜವೇ.
ದೇವತೆಗಳ ಒಡಗೂಡಿಯೇ ಸಮದ್ರಮಥನದಲ್ಲಿ ಅಸುರರೂ ಪಾಲ್ಗೊಂಡಿದ್ದರು. ಆದರೆ ಲೋಕಕಂಟಕ ಸ್ವಭಾವದಿಂದ ಕೂಡಿದುದರಿಂದಲೇ ಮಹಾವಿಷ್ಣುವು ಮೋಹಿನೀರೂಪ ಧರಿಸಿ ಅಸುರರನ್ನು ಅಮೃತಪಾನದಿಂದ ವಂಚಿಸುತ್ತಾನೆ. ಆದುದರಿಂದ ಅವರು ಅಮರತ್ವವನ್ನು ಕಳೆದುಕೊಳ್ಳುತ್ತಾರೆ.
ಇಲ್ಲಿಯವರೆಗೆ ದೇವತೆಗಳು ಮತ್ತು ಅಸುರರ ಬಗೆಗೆ ಒಂದು ಪರಿಚಯವನ್ನು ಮಾಡಿಕೊಂಡೆವು. ಆದರೆ ಯಾವುದೋ ಯುಗಕ್ಕೆ ಸಂಬಂಧಪಟ್ಟ ಅಸುರರ ವಿಷಯವು ಇಂದಿನ ವಿಜ್ಞಾನಯುಗಕ್ಕೆ ಪ್ರಸಕ್ತವೇ ಮುಂತಾದ ಪ್ರಶ್ನೆಗಳನ್ನು ಮುಂದೆ ವಿಮರ್ಶಿಸೋಣ.
ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 2/12/2023 ರಂದು ಪ್ರಕಟವಾಗಿದೆ.