ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ – 68 ಯಾವ ಕಾರಣದಿಂದ ಈ ಲೋಕವು ಪ್ರಕಾಶಿತವಾಗಿಲ್ಲ ?
ಉತ್ತರ - ತಮಸ್ಸಿನ ಕಾರಣದಿಂದ
ಈ ಹಿಂದಿನ ಲೇಖನದಲ್ಲಿ 'ಲೋಕವು ಯಾವ ಕಾರಣಕ್ಕಾಗಿ ನಮಗೆ ತಿಳಿಯುವುದಿಲ್ಲ?' ಎಂಬ ಪ್ರಶ್ನೆಯನ್ನು ವಿವರಿಸಿದ್ದಾಗಿದೆ. ಪ್ರಸ್ತುತಪ್ರಶ್ನೆಯಲ್ಲಿ ಯಾವ ಕಾರಣಕ್ಕಾಗಿ ಲೋಕವು ನಮಗೆ ಕಾಣದೇ ಇರುವುದು? ಎಂಬುದುದನ್ನು ತಿಳಿಯಬೇಕಾಗಿದೆ. ಸ್ಥೂಲವಾಗಿ ಗಮನಿಸಿದಾಗ ಎರಡೂ ಪ್ರಶ್ನೆಗಳ ಆಶಯ ಒಂದೇ ಎಂಬುದಾಗಿ ಅನ್ನಿಸುತ್ತದೆ. ಆದರೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವುಗಳಲ್ಲಿ ವ್ಯತ್ಯಾಸ ತಿಳಿಯುತ್ತದೆ. ಈಗಿನ ಪ್ರಶ್ನೆಯಲ್ಲಿ ಇರುವ ಲೋಕವು ನಮಗೆ ಏಕೆ ಕಾಣುವುದಿಲ್ಲ? ಎಂಬುದು. ಆದರೆ ಹಿಂದಿನ ಪ್ರಶ್ನೆಯಾದರೋ ಕಾಣಲು ಸಾಧ್ಯವಾಗದ ಲೋಕವು ನಮ್ಮ ಅರಿವಿಗೆ ಬಾರದಿರಲು ಕಾರಣವೇನೆಂಬುದಾಗಿದೆ. ಉದಾಹಣೆಗೆ ಒಂದು ಮಾವಿನ ಮರದಲ್ಲಿ ಹಣ್ಣು ಇದೆ. ಆ ಹಣ್ಣು ಎಲೆಯ ಮರೆಯಲ್ಲಿ ಇದೆ. ಇಲ್ಲಿ ಹಣ್ಣನ್ನು ಮರೆಸಿದ್ದು ಯಾವುದು?ಎಂಬ ಪ್ರಶ್ನೆಗೆ ಉತ್ತರ 'ಎಲೆ' ಎಂದು. ಎಲೆಯಿಂದ ಮರೆಯಾದ ಹಣ್ಣನ್ನು ನಾವು ಕಾಣದಿರಲು ಕಾರಣವೇನು? ಎಂದರೆ ಆಗ ಕತ್ತಲೆ ಇತ್ತು, ಅಥವಾ ನಾವು ನೋಡಲಿಲ್ಲ ಇತ್ಯಾದಿ ಕಾರಣಸಮೂಹದಿಂದದ ಹಣ್ಣು ಕಾಣಲಿಲ್ಲ ಎಂಬ ಉತ್ತರವೋ, ಅಂತೆಯೇ ಇಲ್ಲೂ ಮರೆಯಾದ ವಿಷಯವು ಕಾಣದಿರಲು ಕತ್ತಲೆಯೂ ಕಾರಣ ಎಂಬುದು.
ವಸ್ತು ಕಾಣಲು ಬೆಳಕು ಕಾರಣ. ಹಾಗಾಗಿ ಆ ವಸ್ತು ಕಾಣದಿರಲು ಬೆಳಕು ಇಲ್ಲದಿರುವುದೇ ಕಾರಣ ಎಂಬುದು ಸಾಮಾನ್ಯರಿಗೂ ತಿಳಿಯುವ ಸಂಗತಿ. ಬೆಳಕು ಇಲ್ಲದಿರುವಿಕೆಯನ್ನೇ ಕತ್ತಲೆ ಅಥವ ತಮಸ್ಸು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಕೆಲವು ಬೆಳಕು ಹೇಗೆ ವಸ್ತು ಕಾಣಲು ಕಾರಣವೋ,ಹಾಗೆಯೇ ತಮಸ್ಸು, ವಸ್ತು ಕಾಣದಿರಲು ಕಾರಣ ಎಂಬುದಾಗಿ ಬೆಳಕಿನ ವಿರುದ್ಧ ಧರ್ಮ ಹೊಂದಿದ ಮತ್ತೊಂದು ಪದಾರ್ಥ ಎಂದೂ ಹೇಳಿರುವುದುಂಟು. ಏನೇ ಇರಲಿ. ವಸ್ತು ಕಾಣದಿರಲು ಪ್ರಕಾಶ ಇಲ್ಲದಿರುವಿಕೆಯೇ ಕಾರಣ ಎಂಬುದು ಧರ್ಮರಾಜನ ಉತ್ತರ.
ಈ ಪ್ರಶ್ನೆಯಲ್ಲಿ ನಾವು ಅರಿಯಬೇಕಾದ ವಿಚಾರವೇನು? ಅಂದರೆ ಹೊರಗಡೆ ಕಾಣುವು ಬೆಳಕು ಅಥವಾ ಕತ್ತಲೆಯಲ್ಲ ಇಲ್ಲಿನ ಪ್ರಶ್ನೆಯ ವಿಷಯ. ಇದಕ್ಕೆಲ್ಲ ಕಾರಣವಾದ ಜ್ಞಾನವೆಂಬ ಬೆಳಕು. ಅಜ್ಞಾನವೆಂಬ ಕತ್ತಲೆ. ಹೊರಗಡೆ ಎಷ್ಟೇ ಕಣ್ಣು ಕುಕ್ಕುವಷ್ಟು ಬೆಳಕು ಇದ್ದರೂ ಕಣ್ಣು ಇಲ್ಲದಿದ್ದರೆ ಕಾಣದು, ಕಣ್ಣು ಇದ್ದರೂ ನಾವು ನೋಡದಿದ್ದರೆ ಕಾಣದು. ಕಣ್ಣಿನ ಬೆಳಕಿಗೆ 'ನಾನು' ಎಂಬ ಬ್ಯಾಟರಿಯನ್ನು ಬಿಟ್ಟಾಗ ಮಾತ್ರವೇ ಆ ವಸ್ತು ಗೋಚರಿಸುವುದು ತಾನೇ. ಕಣ್ಣು ಇದೆ, ವಸ್ತುವೂ ಇದೆ, ಹೊರಗೆ ಪೂರ್ತಿ ಕಗ್ಗತ್ತಲೇ ಆವರಿಸಿದಾಗ ಕಾಣಿಸದು. ಹಾಗಾಗಿ 'ನಾನು' ಎಂಬ ಬೆಳಕಿನ ಕಿಡಿಯೇ ಬೆಳಕಿನಲ್ಲಿರುವ ಪದಾರ್ಥ ಕಾಣಲು ಸಹಾಯಕ. ಅಂತೆಯೇ ಕತ್ತಲೆ ಇದ್ದಾಗಲೂ ಬ್ಯಾಟರಿ ಬಿಟ್ಟು ನೋಡುವಾಗಲೂ ಕಾಣಿಸಬೇಕಾದರೆ ಅದೇ ನಾನು ಎಂಬ ಬೆಳಕಿನ ಕಿಡಿಯೇ ಕಾರಣ. ಹಾಗಾಗಿ ಈ ಲೋಕವು ಕಾಣದಂತೆ ಇರಲು ಕಾರಣ ತಮಸ್ಸು. ಅಂದರೆ ಲೋಕವನ್ನು ಸಂದರ್ಶಿಸುವವನು ನಾನು ಅಥವಾ ನಾವುಗಳು. ಅವನಿಗೆ ಲೋಕವು ಕಾಣದಿರಲು ಅಥವಾ ಅನ್ಯಥಾ ಕಾಣಲು ಈ ನಾನುವಿಗೆ ಬಂದ ಅಜ್ಞಾನವೆಂಬ ತಮಸ್ಸು. ಅಜ್ಞಾನದ ನಿವೃತ್ತಿಯೇ ಇರುವ ಲೋಕ ಕಾಣುವಂತಾಗುತ್ತದೆ. ಹಾಗಾಗಿ ಜ್ಞಾನವನ್ನು- ಪ್ರಕಾಶವನ್ನು ನಮ್ಮೊಳಗೆ ತುಂಬಿಸಿಕೊಳ್ಳುತ್ತಾ ಹೋದರೆ ಕತ್ತಲೆ ತಾನಾಗಿಯೇ ದೂರಸಾಗುತ್ತದೆ. ಅದಕ್ಕಾಗಿ ಪ್ರತ್ಯೇಕ ಪ್ರಯತ್ನ ಬೇಡ. ಕತ್ತಲೆಯಿಂದ ಬೆಳಕಿನ ಕಡೆ ಸಾಗೋಣ.