Monday, November 27, 2023

ದೇವತೆಗಳ ಸ್ವರೂಪ-ಸ್ವಭಾವ-ಕೃತ್ಯ (Devategala Svarupa-Svabhava-Krtya)

(ಪ್ರತಿಕ್ರಿಯಿಸಿರಿ lekhana@ayvm.in)


ದೇವತೆಗಳು ಸಹಜವಾಗಿಯೇ ಸೌಂದರ್ಯಪೂರ್ಣರು. ಪ್ರಕಾಶಮಯರಾದವರು. ದೇವತೆ ಎಂಬ ಪದವೇ ದಿವ್ (=ಪ್ರಕಾಶ) ಧಾತುವಿನಿಂದ ಉತ್ಪನ್ನವಾಗಿದೆ. ಸರ್ವಾಭರಣಗಳಿಂದ ಭೂಷಿತರಾದವರು. ರತ್ನಖಚಿತವಾದ ಕಿರೀಟವನ್ನು ಧರಿಸಿದವರು. ಆಯುಧಗಳನ್ನು ಧರಿಸಿ ಕಂಗೊಳಿಸುತ್ತಿರುವವರು - ಇಂದ್ರನಿಗೆ ವಜ್ರಾಯುಧವಾದರೆ ಯಮನಿಗೆ ಪಾಶ. ಅವರದೇ ಆದ ವಾಹನಗಳನ್ನು ಆರೋಹಣ ಮಾಡಿರುವವರು. ಉದಾಹರಣೆಗೆ ವಿಷ್ಣುವು ಗರುಡವಾಹನನಾದರೆ ಪರಶಿವನು ವೃಷಭವಾಹನ. ಕುಮಾರಸ್ವಾಮಿಯ ವಾಹನ, ಮಯೂರ. ಮಹಿಷಾಸುರಮರ್ದಿನಿಯು ಸಿಂಹವಾಹಿನೀ.

 ದೇವತೆಗಳು ಭಗವಂತನಿಂದ ಅವನ ಕೆಲಸಕ್ಕಾಗಿ ನೇಮಿಸಲ್ಪಟ್ಟವರು. ಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ಜಗತ್ತು ಅವನ ಸಂಕಲ್ಪದಂತೆ ಮುಂದೆ ಸಾಗಬೇಕು; ಅದಕ್ಕೆ ರಕ್ಷಣೆಯನ್ನು ಕೊಡುವವರು ಬೇಕು.  ದೇಶದ ರಕ್ಷಣೆಗೆ ಸಿಪಾಯಿಗಳನ್ನು ನೇಮಿಸುವಂತೆ, ಭಗವಂತನು ಸೃಷ್ಟಿಯ ರಕ್ಷಣೆಗೆ ದೇವತೆಗಳನ್ನು ನೇಮಿಸಿದ್ದಾನೆ. ಆತನ ಸಂಕಲ್ಪಕ್ಕನುಗುಣವಾಗಿ ಧರ್ಮದ ರಕ್ಷಣೆ-ಪಾಲನೆಗಳನ್ನೇ ಧ್ಯೇಯವಾಗಿಟ್ಟುಕೊಂಡು ವಿಶ್ವವನ್ನು ಮುನ್ನಡೆಸುವುದೇ ದೇವತೆಗಳ ಮಹತ್ಕಾರ್ಯ. ಇಂತಹ ಧರ್ಮಸೇತುವಿನ ಸಂರಕ್ಷಣೆ, ತನ್ಮೂಲಕ ನಮ್ಮಗಳ ರಕ್ಷಣೆಯೇ ದೇವತೆಗಳ ಮುಖ್ಯಕರ್ತವ್ಯ. ಸೃಷ್ಟಿ-ಸ್ಥಿತಿ-ಲಯ ಕಾರ್ಯಗಳನ್ನು ಮಾಡುವವರು ತ್ರಿಮೂರ್ತಿಗಳಾದರೆ ಅವರಿಗೆ ಸಹಾಯಕರಾಗಿ ಆ ವ್ಯವಸ್ಥೆಯು ಕೆಡದಂತೆ ರಕ್ಷಿಸುವವರು ಈ ದೇವತೆಗಳು. ಸೃಷ್ಟಿ-ಸ್ಥಿತಿ-ಲಯಗಳಿಗೆ ಸಂಬಂಧಪಟ್ಟಂತೆ ಕರ್ತವ್ಯಗಳಲ್ಲಿ ಬೇರೆಬೇರೆ ದೇವತೆಗಳ ನಿಯಮನವಾಗಿದೆ. ಇಡೀ ವಿಶ್ವದ ರಕ್ಷಣೆಯ ಹೊಣೆಗಾರಿಕೆ ಇರುವುದರಿಂದಲೇ ಅವರ ಸಂಖ್ಯೆಯೂ ಅಪಾರವಾದದ್ದಾಗಿದೆ. 

ದೇವತೆಗಳು ಮಹಾಬಲಿಷ್ಠರು ಹಾಗೂ ಧರ್ಮಿಷ್ಠರು.  ಅವರು ಯಜ್ಞಪ್ರಿಯರು ಎಂಬುದಾಗಿ ಪುರಾಣಗಳು ಸಾರುತ್ತವೆ. ಅವರು ಯಜ್ಞಗಳನ್ನು  ಮಾಡುವವರು ಹಾಗೂ ಮನುಷ್ಯರು ಮಾಡುವ ಯಜ್ಞಗಳಲ್ಲಿ ಹವಿಸ್ಸನ್ನು ಸ್ವೀಕಾರ ಮಾಡುವವರಾಗಿದ್ದಾರೆ. ದೇವತೆಗಳ ಮತ್ತೊಂದು ವಿಶೇಷ ಗುಣವೆಂದರೆ ಇವರೆಲ್ಲರೂ ಸತ್ಯಪ್ರಿಯರು. ಇಂತಹ ಸದ್ಗುಣಸಂಪನ್ನರಾದ್ದರಿಂದಲೇ ಇವರುಗಳು ವಿಷ್ಣುವಿಗೆ ಅತ್ಯಂತ ಪ್ರಿಯರಾದವರು.  ತನ್ನ ಸೃಷ್ಟಿ-ಸ್ಥಿತಿ ಕಾರ್ಯಗಳಲ್ಲಿ ನೆರವಾಗುವ ದೇವತೆಗಳಿಗೆ ಆತನು ಸಕಾಲದಲ್ಲಿ ಸಹಾಯವನ್ನು ಮಾಡುತ್ತಾನೆ. 

ದೇವತೆಗಳು ತ್ರಿಗುಣಗಳಲ್ಲಿ ಓಡಾಡುವವರಾದರೂ ಸಾತ್ತ್ವಿಕರು, ಸತ್ತ್ವಗುಣ ಪ್ರಧಾನರು. ಕೆಲವೊಮ್ಮೆ ರಜಸ್-ತಮೋಗುಣಗಳಿಗೆ ಕಾಲಿಟ್ಟಾಗ ಅವು ಅವರನ್ನೂ ಎಳೆದು ಜಾರಿಸಿಬಿಡಬಹುದು. ದೇವರಾಜನಾದ  ಇಂದ್ರನೇ ಈ ಗುಣಗಳಿಗೆ ವಶನಾಗಿ ಬಿಡುತ್ತಿದ್ದುದೂ ಉಂಟು. ಇಂದ್ರನು ಕಾಮಕ್ಕೆ ವಶನಾಗಿ ಅಹಲ್ಯೆಯ ವಿಷಯದಲ್ಲಿ ದುಡುಕಿ, ಗೌತಮರ ಶಾಪಕ್ಕೆ ಗುರಿಯಾದ ಕಥೆಯು ಸುಪ್ರಸಿದ್ಧವಾಗಿದೆ. ಆತನು ಕ್ರೋಧಕ್ಕೆ ವಶನಾಗಿ ಅವನ ವಜ್ರಾಯುಧವನ್ನು ಋಷಿಗಳ ಮೇಲೂ ಪ್ರಯೋಗ ಮಾಡಿರುವುದೂ ಉಂಟು. ಅಹಂಕಾರಕ್ಕೆ ತುತ್ತಾದ ನಹುಷನು ಮುನಿಗಳ ಶಾಪದಿಂದ ಸರ್ಪವಾದದ್ದು ಸರ್ವವಿದಿತ. ಆದರೆ ರಜೋಗುಣ ಸರ್ವಥಾ ತ್ಯಾಜ್ಯ ಎಂದೇನಲ್ಲ. ಏಕೆಂದರೆ ಅಧರ್ಮವನ್ನು ಮೆಟ್ಟುವ ಸಂದರ್ಭದಲ್ಲಿ ಅಸುರರ ಮೇಲೆ ಯುದ್ಧವನ್ನು ಮಾಡಲೋಸುಗ ರಜೋಗುಣಕ್ಕೆ ಇಳಿಯಲೇಬೇಕು. ಇಷ್ಟಿದ್ದರೂ ದೇವತೆಗಳು ಸಾತ್ತ್ವಿಕರು, ಸತ್ಯಪ್ರಿಯರು ಎನ್ನುವುದನ್ನು ಗಮನಿಸಬೇಕು.

  ದಿವ್ಯಲೋಕವಾದ ಸ್ವರ್ಗಲೋಕವೇ ದೇವತೆಗಳ ವಾಸಸ್ಥಾನ. ಇಡೀ ವಿಶ್ವವನ್ನೇ, ಅದರ ಧರ್ಮವನ್ನೇ  ಸಂರಕ್ಷಿಸುವ ಭಾರ ಅವರದು. ಉದಾಹರಣೆಗೆ, ಮನುಷ್ಯ-ವೃಕ್ಷ-ವನಸ್ಪತಿಗಳ ಸೃಷ್ಟಿ-ಸ್ಥಿತಿಗಳಿಗೆ ಬೇಕಾದ ಮಳೆ ಗಾಳಿಗಳನ್ನೂ, ಆಹಾರವನ್ನೂ ದಯಪಾಲಿಸುವ ಮಹಾಶಕ್ತಿಗಳೇ ವರುಣ, ವಾಯು ಮುಂತಾದ ದೇವತೆಗಳು.  ಆದ್ದರಿಂದಲೇ ದೇವತೆಗಳು ನಮಗೆ ಅತ್ಯಂತ ಪೂಜ್ಯರಾದವರು. ನಾವು ಅವರನ್ನು ಚೆನ್ನಾಗಿ ಪೂಜಿಸಿ-ಗೌರವಿಸಿದರೆ ಅವರು ನಮ್ಮನ್ನು ಚೆನ್ನಾಗಿ ಪೋಷಿಸುತ್ತಾರೆ. "ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯತ".  ಆದರೆ ನಮ್ಮಲ್ಲಿ ವ್ಯತಿರಿಕ್ತವಾದ ನಡೆ, ಅವರ ಕಾರ್ಯನಿರ್ವಹಣೆಗೆ ಅಡ್ಡಿಮಾಡುವಂತಹ ನಡೆ ಕಂಡುಬಂದಲ್ಲಿ ಸಾತ್ತ್ವಿಕರಾದರೂ ಇವರು ಕುಪಿತರಾಗುತ್ತಾರೆ. ಉದಾ: ಪ್ರಕೃತಿಯನ್ನು ನಮ್ಮ ಅವಿವೇಕದಿಂದ ಕೆಡಿಸಿ  ಪರಿಸರವನ್ನು ಹಾಳು ಮಾಡಿ ವಾಯುಮಾಲಿನ್ಯವನ್ನು ಏರ್ಪಡಿಸಿದಾಗ ಇವುಗಳ ಹಿಂದಿರುವ ದೇವತಾ ಶಕ್ತಿಗಳು ಕುಪಿತರಾಗಿ ನಮ್ಮ ಮೇಲೆ ಆಕ್ರಮಣ ಮಾಡುವುದುಂಟು. ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ ಮುಂತಾದ ಅನಾಹುತಗಳು ಸಂಭವಿಸುವುವು. ಈ ಅನಾಹುತಗಳಿಗೆ ಆಧುನಿಕ ವಿಜ್ಞಾನವು ಭೌತಿಕವಾದ ಕಾರಣಗಳನ್ನು ತೋರಿಸಿ ವಿವರಿಸಬಹುದು. ಆದರೆ ವಿಶೇಷವಾದ ಯೋಗದೃಷ್ಟಿಯಿಂದ ನೋಡಿದಾಗ ಭೌತಿಕಕ್ಕೆ ಹಿಂದೆ ಆಡುವ ದೇವತಾಶಕ್ತಿಗಳ ಪ್ರಕೋಪವನ್ನು ಅರಿಯಬಹುದಾಗಿದೆ. 

ದೇವತೆಗಳು ಅಸುರರಿಂದ ತಮ್ಮ ರಾಜ್ಯವನ್ನು ಸಂರಕ್ಷಿಸಿಕೊಳ್ಳಬೇಕು, ಮತ್ತು ಭೂಲೋಕದಲ್ಲಿನ  ಮನುಷ್ಯರು ತಮ್ಮ ಧಾರ್ಮಿಕ ಕರ್ಮಗಳನ್ನು ತಂಗುತಡೆಯಿಲ್ಲದೆ ನಿರ್ವಹಿಸಲು ಸಹಾಯಕರಾಗಿರಬೇಕು.  ಇದೂ ದೇವತೆಗಳ ಕೆಲಸವೇ. ದೇವತೆಗಳು ಸಾಮಾನ್ಯವಾಗಿ ಯಾರ ತಂಟೆಗೂ ಹೋಗದವರು, ಸಾತ್ತ್ವಿಕರು. ಆದರೆ ಇದಕ್ಕೆ ವ್ಯತಿರಿಕ್ತವಾದ ಸ್ವಭಾವದವರಾದ ಅಸುರರಿಗೂ ಮತ್ತು ಸಾತ್ತ್ವಿಕರಾದ ದೇವತೆಗಳಿಗೂ ಆಗಾಗ  ಘರ್ಷಣೆಗಳು ನಡೆಯುತ್ತಲೇ ಇರುವುದು. ದೇವಾಸುರರ ಸಮರದಲ್ಲಿ ಎಂದೆಂದಿಗೂ ದೇವತೆಗಳಿಗೇ ಜಯವೆಂಬ ನಿಯಮವೇನಿಲ್ಲ. ಅಸುರರಿಂದ ಸೋಲನ್ನಪ್ಪಿದ ಪ್ರಸಂಗಗಳನೇಕ. ಇಂದ್ರಾದಿ ಸಕಲ ದೇವತೆಗಳೂ ಹಿರಣ್ಯಕಶಿಪು, ಬಲಿಚಕ್ರವರ್ತಿಯೇ ಮುಂತಾದವರಿಂದ ಸೆರೆಹಿಡಿಯಲ್ಪಟ್ಟ ಕಥೆಗಳೂ ವಿರಳವೇನಲ್ಲ. ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಸಾಕ್ಷಾತ್ ವಿಷ್ಣುವನ್ನು ಮೊರೆಹೊಕ್ಕು ಸಹಾಯ ಪಡೆದು ಜಯವನ್ನು ಗಳಿಸಿ ಸಂರಕ್ಷಿಸಲ್ಪಡುತ್ತಾರೆ.

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 25/11/2023 ರಂದು ಪ್ರಕಟವಾಗಿದೆ.