ದೇವಾಸುರರ ಬಗೆಗೆ ನಮಗಿರುವ ಸಾಮಾನ್ಯ ಪರಿಕಲ್ಪನೆಯೆಂದರೆ: ದೇವತೆಗಳು ಪೂಜ್ಯರು, ಅಮೃತಪಾನ ಮಾಡಿದ ಅಮರರು, ಪ್ರಕಾಶಮಯರು, ಸರ್ವಾಭರಣಗಳಿಂದ ಅಲಂಕೃತರು, ಬಲಿಷ್ಠರು, ಮಾನವರನ್ನು ಅನುಗ್ರಹಿಸುವವರು ಇತ್ಯಾದಿ. ಅಂತೆಯೇ ಅಸುರರು ಮಹಾಬಲಿಷ್ಠರು, ವಿಕಾರರೂಪದಿಂದ ಕೂಡಿದವರು, ಹಿಂಸಾತ್ಮಕರು, ಕ್ರೂರಿಗಳು ಇತ್ಯಾದಿ.
ವೇದಗಳಲ್ಲಿ ಹಾಗೂ ಶ್ರೀಮದ್ಭಾಗವತ, ಸ್ಕಾಂದ ಮುಂತಾದ ಪುರಾಣಗಳಲ್ಲಿ ದೇವಾಸುರರ ಬಗೆಗೆ ಅನೇಕಾನೇಕ ಉಲ್ಲೇಖಗಳು ಕಾಣಸಿಗುತ್ತವೆ. ಇವುಗಳು ಸ್ವಾರಸ್ಯವಾದ ಕಥೆಗಳೆಂದೆನಿಸಿದರೂ ನಿಸ್ಸಂಶಯವಾಗಿ ಗೊಂದಲವನ್ನೂ ಏರ್ಪಡಿಸುತ್ತವೆ. ಉದಾಹರಣೆಗೆ ದೇವತೆಗಳ ಸಂಖ್ಯೆ 33 ಕೋಟಿ ಎಂದು ವೇದ-ಪುರಾಣಗಳು ಸಾರುತ್ತವೆ. ಪ್ರಕೃತಿಯಲ್ಲಿ ಸಾಮಾನ್ಯವಾಗಿ ಸಂಭವಿಸುವ ಮಳೆ-ಗಾಳಿ-ಗುಡುಗು ಇತ್ಯಾದಿಗಳ ಹಿಂದೆಯೂ ಒಂದೊಂದು ದೇವತೆಯನ್ನು ಸೃಷ್ಟಿಸಿ, ಜೋಡಿಸಿರುವುದು ಎಷ್ಟು ಹಾಸ್ಯಾಸ್ಪದವೆನಿಸುತ್ತದೆ! ಎಂದೇ ಕೆಲವು ವಿದ್ವಾಂಸರು ಋಗ್ವೇದವನ್ನು ದೇವತಾನಿರ್ಮಾಣ ಮಾಡುವ ಅತಿದೊಡ್ಡ ಕಾರ್ಖಾನೆ ಎಂಬುದಾಗಿ ಟೀಕೆ ಮಾಡುತ್ತಾರೆ.
ಆದಿಮಾನವರು ಸಿಡಿಲು-ಮಿಂಚು-ಬೆಂಕಿ ಮುಂತಾದವುಗಳಿಗೆ ಹೆದರಿ ಅವುಗಳಿಗೆ ದೇವತಾರೂಪವನ್ನು ಕೊಡುವುದಲ್ಲದೆ ಸ್ತೋತ್ರವನ್ನೂ ಮಾಡಿದರು. ಆ ಸಾಹಿತ್ಯವೇ ವೇದಗಳೆಂದು ತಮ್ಮ ವಾದವನ್ನು ಮುಂದಿಡುತ್ತಾರೆ. ಮತ್ತು ಹೀಗೆ ಬಹುದೇವತಾವಾದದ(polytheism) ಪ್ರತಿಪಾದನೆಯೇ ನಮ್ಮ ದೇಶದಲ್ಲಿ ಅನೇಕ ಅಂತಃಕಲಹಗಳಿಗೆ ಕಾರಣವಾಗಿದೆ ಎಂಬ ಆಪಾದನೆಯೂ ಪ್ರಬಲವಾಗಿದೆ. ಇತರ ಮತಗಳಲ್ಲಿ ಏಕದೇವತೋಪಾಸನೆಯಿಂದ ದೊರಕುವ ಒಗ್ಗಟ್ಟು ನಮ್ಮಲ್ಲಿಲ್ಲದಿರುವುದಕ್ಕೆ ಇದೇ ಕಾರಣವೆನ್ನುತ್ತಾರೆ.
ಅನೇಕ ಸಂದರ್ಭಗಳಲ್ಲಿ ದೇವರಾಜನಾದ ಇಂದ್ರನೇ ಕಾಮಕ್ಕೆ ವಶನಾಗಿ ಪಾಪವನ್ನು ಎಸಗುತ್ತಾನೆ. ಅಂತೆಯೇ ಇತರ ದೇವತೆಗಳೂ ಸಹ. ಸ್ವರ್ಗಲೋಕವಾಸಿಗಳಾದ ಅಪ್ಸರಸೆಯರ ನಾಟ್ಯವನ್ನು ವೀಕ್ಷಿಸುತ್ತಾ ಮೋಹಕ್ಕೊಳಗಾಗುವುದನ್ನು ಕೇಳಿದರೆ ಇಂದ್ರಿಯ ಸಂಯಮದಲ್ಲಿ ಮನುಷ್ಯರಿಗಿಂತ ಯಾವ ರೀತಿ ಉತ್ತಮರಿವರು ಎಂದನಿಸುವುದು. ದೇವತೆಗಳು ಪೂಜ್ಯರೇ ಅದರೆ ಈ ರೀತಿ ಕಾಮ-ಕ್ರೋಧಾದಿಗಳಿಗೆ ವಶರಾಗುವುದೆಂತು?
ದೇವೇಂದ್ರನ ಅಸೂಯಾಪರತೆಯಂತೂ ಸುಪ್ರಸಿದ್ಧ. ಋಷಿ-ಮುನಿಗಳ ತಪಸ್ಯೆಯನ್ನು, ಅಪ್ಸರಸೆಯರನ್ನು ಕಳುಹಿಸುವುದು ಮುಂತಾದ ನಾನಾ ರೀತಿಗಳಲ್ಲಿ ಭಂಗಗೊಳಿಸುವುದು ಸರ್ವವಿದಿತ. ತಪಸ್ಯೆಗೆ ತಡೆಯೊಡ್ಡುವುದು ನ್ಯಾಯವೇ? ತಪಸ್ವಿಗಳು ತಮ್ಮ ಪಾಡಿಗೆ ತಪಸ್ಯೆಯನ್ನು ಆಚರಿಸುತ್ತಿದ್ದರೆ ದೇವತೆಗಳಿಗೇನಾಗಬೇಕು? ಇದು ಮೋಸವಲ್ಲವೇ? ಇಂತಹ ಮೋಸಗಾರರಿಗೇಕೆ ಪೂಜೆ?
ಇನ್ನು, ದೇವತೆಗಳು ಅಸುರರ ಸಂಗಡ ಯುದ್ಧಮಾಡುವುದಾದರೂ ಏಕೆ? ಮಾನವರಿಗೆ ಆದರ್ಶವನ್ನು ಬೋಧಿಸುವ ವಿಧಾನವೇ ಇದು? ಈ ಸಮರದಲ್ಲಿ ಅನೇಕ ಬಾರಿ ದೇವತೆಗಳು ಸೋಲನ್ನಪ್ಪುವುದೂ ಉಂಟು. ಮಹಾವಿಷ್ಣುವಿನಿಂದ ರಕ್ಷಿಸಲ್ಪಡುವವರಿಗೆ ಸೋಲು ಹೇಗೆ ಸಾಧ್ಯ ? ಎಂಬ ಪ್ರಶ್ನೆ ಬರುವುದೂ ಸಹಜವೇ.
ದೇವತೆಗಳು ಮನುಷ್ಯರು ಮಾಡುವ ಯಜ್ಞದ ಹವಿಸ್ಸನ್ನು ಸ್ವೀಕರಿಸಿ ಬದುಕುತ್ತಾರೆ, ಅವುಗಳನ್ನು ಆಯಾಯಾ ದೇವತೆಗಳಿಗೆ ವಿತರಣೆ ಮಾಡುವವನು ಅಗ್ನಿ ದೇವನು ಎಂಬ ವರ್ಣನೆಯನ್ನೂ ನೋಡುತ್ತೇವೆ. ಹಾಗಾದರೆ ಮನುಷ್ಯರು ಯಜ್ಞಕರ್ಮವನ್ನು ಆಚರಿಸದಿದ್ದಲ್ಲಿ ದೇವತೆಗಳಿಗೆ ಉಪವಾಸವೇ?
ಅಸುರರು (ದೈತ್ಯರು-ದಾನವರು-ರಾಕ್ಷಸರು) ಸಂಖ್ಯೆಯಲ್ಲಿ ದೇವತೆಗಳಿಗಿಂತ ಎರಡು ಪಟ್ಟು ಹೆಚ್ಚು-ಅಂದರೆ 66 ಕೋಟಿ. ದೇವತೆಗಳಿಗಿಂತ ಹೆಚ್ಚು ಬಲಿಷ್ಠರು ಅಸುರರು ಎಂದು ಸಾರುತ್ತವೆ ವೇದ-ಪುರಾಣಗಳು. ಸಾಮಾನ್ಯವಾಗಿ ಅಸುರರು ಘೋರ ರೂಪಿಗಳು. ಅಸುರರಿಗೆ ಕುಲಗುರುವಾಗಿ ಅತ್ಯಂತ ನಿಷ್ಠೆಯಿಂದ ಸಹಾಯ ನೀಡುವ ಶುಕ್ರಾಚಾರ್ಯರು ಮಹಾಮುನಿಗಳು, ತಪಸ್ವಿಗಳು. ಅತ್ಯಂತ ಘೋರವಾದ ತಪಸ್ಸಿನಿಂದ ಮೃತಸಂಜೀವಿನೀ ವಿದ್ಯೆಯನ್ನು ಈಶ್ವರನಿಂದ ಪಡೆದು ಅಸುರರನ್ನು ಮರಣದಿಂದ ರಕ್ಷಿಸುತ್ತಿದ್ದರು. ಮಹರ್ಷಿಗಳು ದೈತ್ಯರಿಗೆ ಗುರುವಾಗುವುದು ವಿಡಂಬನೆಯೇ ಅಲ್ಲವೇ?
ಯಾವುದೋ ಯುಗಕ್ಕೆ ಸಂಬಂಧಪಟ್ಟವರು ಅಸುರರು. ಹಿರಣ್ಯಕಶಿಪು, ಹಿರಣ್ಯಾಕ್ಷ ಮುಂತಾದವರು ಕೃತಯುಗದವರು. ಅವರ ವೃತ್ತಾಂತಗಳನ್ನು ಕೇಳಿ ನಮಗಾಗುವುದಾದರೂ ಏನು? ಬಹುಪಾಲು ಇಂತಹ ಕಥೆಗಳು ಹಾಸ್ಯಾಸ್ಪದಗಳೇ ಆಗಿರುತ್ತವೆ. ಉದಾಹರಣೆಗೆ ಹಿರಣ್ಯಾಕ್ಷನು ಇಡೀ ಭೂಮಿಯನ್ನೇ ತನ್ನ ಕಂಕುಳಿನಲ್ಲಿಟ್ಟು ಸಮುದ್ರದೊಳಗೆ ಅವಿತುಕೊಂಡ ಎಂಬ ಕಥಾಭಾಗವು ಎಷ್ಟು ವಿಚಿತ್ರವಾಗಿದೆ! ಹಾಗಿದ್ದಲ್ಲಿ ಅವನ ಶರೀರದ ಗಾತ್ರವಾದರೂ ಎಂತಹುದು? ಸಮುದ್ರವೂ ಭೂಮಿಯ ಒಂದು ಭಾಗವೇ ಎಂಬುದೂ ತಿಳಿದಿರಲಿಲ್ಲವೇ ?
ಘೋರರೂಪಿಗಳಾದ ರಾಕ್ಷಸರು ನಿಷ್ಕಾರಣವಾಗಿ ಪರಮ ಸಾಧುಗಳಾದ ಮುನಿಗಳ ತಪಸ್ಸನ್ನೂ ಯಜ್ಞಗಳನ್ನೂ ಧ್ವಂಸಮಾಡುವುದು ಅವರ ಹುಟ್ಟುಗುಣ. ಆದರೆ ಅವರೆಲ್ಲರೂ ಎಲ್ಲ ಕಾಲದಲ್ಲೂ ದುಷ್ಟರೆಂದೇನಲ್ಲ. ತ್ರಿಪುರಾಸುರರಂತೆ ಧರ್ಮಿಷ್ಠರೂ ಉಂಟು. ಸಾಮಾನ್ಯವಾಗಿ ಎಲ್ಲ ಅಸುರರೂ ಮಹಾತಪಸ್ವಿಗಳು. ತಪಸ್ಸಿನಿಂದ ಊಹಿಸಲಸಾಧ್ಯವಾದ, ಅಮೋಘವಾದ ವರಗಳನ್ನು ಪಡೆದವರು. ಆಸುರರಲ್ಲೂ ಪ್ರಹ್ಲಾದನಂತಹ ಪರಮ ಭಾಗವತೋತ್ತಮರೂ, ಬಲಿಚಕ್ರವರ್ತಿಯಂತಹ ಮಹಾದಾನಿಯೂ, ಬಾಣಾಸುರನಂತಹ ಪರಮ ಶಿವಭಕ್ತನೂ ಇಲ್ಲದಿಲ್ಲ.
ಒಟ್ಟಾರೆ ಗಮನಿಸಿದರೆ ದೇವಾಸುರರ ವಿಷಯವು ಅತ್ಯಂತ ಕುತೂಹಲಕಾರಿ, ವಿಸ್ಮಯಕಾರಿ, ಗೊಂದಲಕಾರಿಯೂ ಹೌದು. ಇಂತಹ ಗೊಂದಲದಿಂದ ಪಾರಾಗಲು ದೇವಾಸುರರ ಸ್ವರೂಪ ಹಾಗೂ ಅವರಿಗೂ ನಮಗೂ ಇರುವ ನೈಜವಾದ ಸಂಬಂಧಗಳನ್ನು ಅರ್ಥೈಸಿಕೊಳ್ಳಬೇಕಾಗಿದೆ. ಮುಂದಿನ ಲೇಖನಗಳಲ್ಲಿ ಶ್ರೀರಂಗಮಹಾಗುರುಗಳು ಕೊಟ್ಟ ನೋಟದಲ್ಲಿ ಈ ವಿಚಾರಗಳನ್ನು ವಿಮರ್ಶಿಸುವ ಪ್ರಯತ್ನವನ್ನು ಮಾಡೋಣ.
ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 11/11/2023 ರಂದು ಪ್ರಕಟವಾಗಿದೆ.