Sunday, November 12, 2023

ಯಕ್ಷ ಪ್ರಶ್ನೆ 63 (Yaksha prashne 63)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ – 62 ಯಾವುದನ್ನು ಬಿಟ್ಟರೆ ಮನುಷ್ಯನು ಸುಖಿಯಾಗುತ್ತಾನೆ ?

ಉತ್ತರ - ಲೋಭವನ್ನು ಬಿಟ್ಟರೆ  

 ಈ ಹಿಂದಿನ ಯಕ್ಷಪ್ರಶ್ನೆಗಳಲ್ಲಿ ಕಾಮ ಮತ್ತು ಕ್ರೋಧದ ಬಗ್ಗೆ ವಿವರಿಸಲಾಗಿದೆ. ಇದೇ ಸಾಲಿಗೆ ಸೇರುವ ಮತ್ತೊಂದು ವಿಷಯ ಲೋಭ ಎಂಬುದು. ಕಾಮ ಮತ್ತು ಲೋಭಗಳಿಗೆ ಸ್ವಲ್ಪ ಅಂತರವಿದೆ. ಒಂದು ದೃಷ್ಟಿಯಿಂದ ಇವೆರಡೂ ಬಯಕೆಗಳೇ ಆಗಿವೆ. ನನಗೆ ಬೇಕೆಂಬುದೇ ಆಗಿದೆ. ಇದಕ್ಕೆ ಸಂವಾದಿಯಾದ ಆಶೆಯೆಂಬ ವಿಷಯವನ್ನೂ ಈ ಹಿಂದಿನ ಲೇಖನದಲ್ಲಿ ಚಿಂತಿಸಲಾಗಿದೆ. ಆಶೆಗೂ ಲೋಭಕ್ಕೂ ಮಧ್ಯೆ ಇಲ್ಲೂ ಕಿಂಚಿತ್ ಅಂತರವನ್ನು ಕಾಣಬಹುದು. ಕಾಮ ಕ್ರೋಧ ಮತ್ತು ಲೋಭ ಈ ಮೂರು ನರಕಕ್ಕೆ ಕಾರಣವಾದವುಗಳು. ಆದ್ದರಿಂದ ಈ ಮೂರನ್ನೂ ಮಾನವನಾದವನು ಬಿಡಲೇಬೇಕು ಎಂದು ಭಗವದ್ಗೀತೆ ಹೇಳುತ್ತದೆ.  ಲೋಭವೆಂಬುದು ಯಾವ ರೀತಿ ದುಃಖಕ್ಕೆ ಕಾರಣವಾಗುತ್ತದೆ? ಲೋಭವನ್ನು ಬಿಡುವುದರಿಂದ ಸುಖವು ಹೇಗೆ ಲಭಿಸುತ್ತದೆ? ಎಂಬುದು ಯಕ್ಷನ ಪ್ರಶ್ನೆಯ ಆಶಯ. 

ಕಾಮ ಅಥವಾ ಆಶೆಯೆಂಬುದು ತನಗೆ ಇನ್ನೂ ಬೇಕು, ಮತ್ತೂ ಬೇಕು ಎಂಬ ಅಮಿತವಾದ ಬಯಕೆ. ಲೋಭವೆಂಬುದು ಇನ್ನೂ ಮುಂದಕ್ಕೆ ಹೋಗುತ್ತದೆ. ಕಾಮದಲ್ಲಿ ಮತ್ತೊಬ್ಬರ ವಸ್ತುವನ್ನು ಬಯಸುವ ವಿಷಯ ಬರುವುದಿಲ್ಲ. ಆದರೆ ಲೋಭವೆಂಬುದು ಮತ್ತೊಬ್ಬನ ವಸ್ತುವನ್ನು ಬಯಸುವುದಾಗಿದೆ. ಆಶೆಯು ತನ್ನ ಎಲ್ಲೆಯನ್ನು ಮೀರಿದಾಗ, ಯಾವ ವಸ್ತು ತನ್ನದು? ತಾನು ಬಯಸಬೇಕಾದುದು ಯಾವುದಲ್ಲ? ಎಂಬ ವಿವೇಕವೇ ಕೆಲಸ ಮಾಡುವುದಿಲ್ಲ. ಒಟ್ಟಾರೆ ತನ್ನ ಬಯಕೆಯನ್ನು ಹೇಗಾದರೂ ಮಾಡಿ ಈಡೇರಿಸಿಕೊಳ್ಳಬೇಕೆಂದು ಹಪಿಹಪಿಸುತ್ತಾನೆ. ಈ ಪ್ರಪಂಚವು ಬಹು ವಿಸ್ತಾರವಾದುದು. ಹಾಗೆಯೇ ಬಯಕೆಯೂ ವಿಸ್ತಾರವಾಗುತ್ತಾ ಹೋಗುತ್ತದೆ. ಪದ್ಮಪುರಾಣದಲ್ಲಿ ಲೋಭಕ್ಕೆ ಈ ರೀತಿಯಾದ ವಿವರಣೆಯನ್ನು ಕೊಟ್ಟಿದ್ದಾರೆ "ಬೇರೆಯವರ ಹಣ ಮೊದಲಾದ ದ್ರವ್ಯವನ್ನು ನೋಡಿ ಅದನ್ನು ಪಡೆಯಬೇಕು ಎಂದು ಯಾವನಲ್ಲಿ ಅಭಿಲಾಷೆಯು ಉಂಟಾಗುತ್ತದೆಯೋ ಅದನ್ನು 'ಲೋಭ' ಎಂದು ಕರೆಯಬಹುದು" ಎಂದು. ಯಾವಾಗ ವಸ್ತುವಿನ ಅಥವಾ ವಿಷಯದ ಸಂಗ್ರಹ ಬುದ್ಧಿಯು ಬೆಳೆಯುತ್ತಾ ಹೋಗುತ್ತದೆಯೋ ಆಗ ಇಂದ್ರಿಯಲೋಲುಪತೆ ಜಾಸ್ತಿಯಾಗುತ್ತದೆ. ಇಂದ್ರಿಯದ ಸಂಯಮವೇ ಸುಖಕ್ಕೆ ಕಾರಣವಲ್ಲವೇ? ಇಂದ್ರಿಯಗಳ ಬಯಕೆಯೇ ಈ ಲೋಭಕ್ಕೆ ಕಾರಣ. ತನ್ಮೂಲಕ ಮನಸ್ಸೂ ತನ್ನ ಕಾರ್ಯವನ್ನು ಇಂದ್ರಿಯವ್ಯಾಪಾರದಲ್ಲೇ ಕಳೆಯಬೇಕಾಗುತ್ತದೆ. ವಸ್ತುವಿನ ಸಂಗ್ರಹವು ಸುಖಕ್ಕೆ ಕಾರಣವಲ್ಲ; ಅವುಗಳ ತ್ಯಾಗವೇ ಶಾಶ್ವತ ಸುಖಕ್ಕೆ ಕಾರಣ ಎಂಬುದನ್ನು ಉಪನಿಷತ್ ಮೊದಲಾದ ಸಾಹಿತ್ಯಗಳು ಮತ್ತೆ ಮತ್ತೆ ನಮ್ಮನ್ನು ಜ್ಞಾಪಿಸುತ್ತವೆ. ವಸ್ತುಗಳಿಂದ ಬರುವ ಸುಖವನ್ನೇ ನೈಜ ಸುಖವೆಂಬ ಭ್ರಮೆಯಲ್ಲಿ ನಾವಿದ್ದೇವೆ. ಆದರೆ ಅದು ಕ್ಷಣಿಕ. ಈ ಬದುಕಿನಲ್ಲಿ ಶಾಶ್ವತವಾದ ಯಾವ ಪರಬ್ರಹ್ಮಾನಂದವನ್ನು ಅನುಭವಿಸುವ ಸುಖ ಯಾವುದುಂಟೋ ಅದನ್ನು ಪಡೆಯಬೇಕು. ಆ ಸುಖವನ್ನು ಪಡೆಯಬೇಕಾದರೆ ಅದು ಯಾವ ವಸ್ತುವಿನಿಂದಲೂ ಬರುವಂತಹದ್ದಲ್ಲ. ಅದು ನಿರ್ವಿಷಯಕವಾದ ಆನಂದ. ಹಾಗಾಗಿ ಆನಂದವನ್ನು ನಿರ್ವಿಷಯಕ ಮತ್ತು ಸವಿಷಯಕ ಎಂದು ಎರಡಾಗಿ ವಿಭಾಗಿಸಿ ಪ್ರತಿಯೊಬ್ಬರು ನಿರ್ವಿಷಯಕವಾದ ಆನಂದವನ್ನು ಪಡೆಯುವುದೇ ಜೀವನ ಮುಖ್ಯ ಉದ್ದೇಶ ಎಂಬುದಾಗಿ ಈ ಉತ್ತರ ಸಾರುತ್ತದೆ.

ಸೂಚನೆ : 11/11/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.