ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್
(ಪ್ರತಿಕ್ರಿಯಿಸಿರಿ lekhana@ayvm.in)
ಪಂಚಕನ್ಯೆಯರಲ್ಲಿ ಒಬ್ಬಳಾಗಿ ಪ್ರಾತ:ಸ್ಮರಣೀಯಳಾದ ಸೀತಾಮಾತೆಯ ಬಗ್ಗೆ ಅನುಸಂಧಾನ ಮಾಡೋಣ. ಮಹಾಕವಿ ಕಾಳಿದಾಸನು ರಘುವಂಶವೆಂಬ ಮಹಾಕಾವ್ಯವನ್ನು ರಚಿಸುವ ಮೊದಲು ವಿನಯದಿಂದ ಹೀಗೆ ಹೇಳುತ್ತಾನೆ, "ಮಹಾಸಮುದ್ರವನ್ನು ಒಂದು ಸಣ್ಣ ದೋಣಿಯಿಂದ ದಾಟಲು ಪ್ರಯತ್ನಿಸುತ್ತಿದ್ದೇನೆ. ಮಹಾಸಮುದ್ರವನ್ನು ದಾಟಲು ದೋಣಿಯು ಹೇಗೆ ಅಸಮರ್ಥವೋ ಹಾಗೆಯೇ ರಘುವಂಶದ ಚರಿತೆಯನ್ನು ಹೇಳುವ ಪ್ರಯತ್ನವೂ ನನ್ನ ಸಾಮರ್ಥ್ಯಕ್ಕೆ ಮೀರಿದ ವಿಷಯ. ಆದರೂ ಚಾಪಲ್ಯದಿಂದ ನನ್ನ ಪಾವಿತ್ರ್ಯಕ್ಕಾಗಿ ಹೇಳಲು ಹೊರಟಿದ್ದೇನೆ" ಎಂದು.
ಹಾಗೆಯೇ ಸೀತಾಮಾತೆಯ ಬಗ್ಗೆ ಹೇಳಲು ಪ್ರಯತ್ನಿಸುವುದೂ ಕೂಡ ನಮ್ಮ ಸಾಮರ್ಥ್ಯಕ್ಕೆ ಮೀರಿದ ವಿಷಯ. ಅವಳು ಪರಮಪುರುಷನ ಶಕ್ತಿಸ್ವರೂಪಿಣಿಯಾಗಿದ್ದು, ಅವನ ಆಶಯಕ್ಕೆ ಅನುಗುಣವಾಗಿ ಸೃಷ್ಟಿಯನ್ನು ಬೆಳೆಸುವ ಪ್ರಕೃತಿಸ್ವರೂಪಿಣಿ. ಭಗವಂತನು ಲೋಕಕಲ್ಯಾಣಕ್ಕಾಗಿ ಶ್ರೀರಾಮನಾಗಿ ಅವತರಿಸಿದಾಗ ಭಗವತಿಯೂ ಕೂಡ ಅವನ ಸತ್ಯ ಸಂಕಲ್ಪಕ್ಕೆ ಸಹಕಾರಿಣಿಯಾಗಿದ್ದು ಭುವಿಗೆ ಇಳಿದು ಬಂದು ಸೀತೆಯಾಗಿ, ಸಮಸ್ತ ಸ್ತ್ರೀ ಸಂಕುಲಕ್ಕೆ ಮಾತ್ರವಲ್ಲದೇ ಮಾನವತೆಗೇ ಆದರ್ಶಪ್ರಾಯಳಾಗಿ ತನ್ನ ಪಾತ್ರವನ್ನು ನಿರ್ವಹಿಸುತ್ತಾಳೆ.
ಅವಳ ಜೀವನ ಚಿಂತನೆಯೇ ನಮ್ಮ ಜೀವನವನ್ನು ಪಾವನವಾಗಿಸುತ್ತದೆ. ಮಿಥಿಲಾಧಿಪತಿಯಾದ ಜನಕಮಹಾರಾಜನು ಒಮ್ಮೆ ಯಾಗ ಭೂಮಿಯನ್ನು ನೇಗಿಲಿನಿಂದ ಉಳುತ್ತಿದ್ದಾಗ ಭೂಮಿಯನ್ನು ಬೇಧಿಸಿಕೊಂಡು ಬಂದ ಹೆಣ್ಣುಮಗುವನ್ನು ನೋಡಿ ವಿಸ್ಮಿತನಾಗುತ್ತಾನೆ. ವಾತ್ಸಲ್ಯಭರಿತನಾಗಿ ಆ ಮಗುವನ್ನು ಎತ್ತಿಕೊಂಡು ನನ್ನ ಮಗಳು ಎಂಬುದಾಗಿ ಉದ್ಘೋಷಿಸುತ್ತಾನೆ. ಅದೇ ಸಮಯದಲ್ಲಿ ಅವನ ಮಾತನ್ನೇ ಪುಷ್ಟೀಕರಿಸುವಂತಹ ಅಶರೀರವಾಣಿಯು ಮೊಳಗುತ್ತದೆ. ಸಾಕ್ಷಾತ್ ಮಹಾಲಕ್ಷ್ಮಿಯನ್ನೇ ಮಗಳಾಗಿ ಪಡೆದ ಕಾರಣ ಅವನ ರಾಜ್ಯವು ಸಕಲವಿಧವಾದ ಸಂಪತ್ತುಗಳಿಂದ ತುಂಬಿ ಶೋಭಿಸುತ್ತದೆ.
ಅನುಪಮ ಸ್ತ್ರೀರತ್ನಳಾದ, ದಿವ್ಯ ತೇಜಸ್ಸಿನಿಂದ ಬೆಳಗುತ್ತಿರುವ ಸೀತೆಗೆ ವಿವಾಹಕಾಲ ಸನ್ನಿಹಿತವಾಗುತ್ತದೆ. ಆಗ ಜನಕಮಹಾರಾಜನು ತನ್ನ ಮಗಳು ಮಹಾಪುರುಷನಿಂದ ಮಾತ್ರವೇ ವರಿಸಲ್ಪಡತಕ್ಕವಳು ಎಂಬುದನ್ನು ಅರಿತು ಅದಕ್ಕೆ ಅನುಗುಣವಾಗಿ ಸ್ವಯಂವರವನ್ನು ಯೋಜಿಸುತ್ತಾನೆ. ಅನೇಕ ರಾಜ ಮಹಾರಾಜರಿಂದ ಕಿಂಚಿತ್ತೂ ಅಲುಗಾಡಿಸಲು ಸಾಧ್ಯವಾಗದ ದೈವದತ್ತವಾದ ಶಿವಧನುಸ್ಸನ್ನು ಶ್ರೀರಾಮಚಂದ್ರನು ಲೀಲಾಜಾಲವಾಗಿ ಎತ್ತಿ ಭೇಧಿಸಿ ಸ್ವಯಂವರದಲ್ಲಿ ತನ್ನ ಆತ್ಮಶ್ರೀಯಾದಂತಹ ಸೀತೆಯನ್ನು ವರಿಸುತ್ತಾನೆ. ಲೋಕ ಮಂಗಳಕರವಾದ ಸೀತಾ - ರಾಮರ ಕಲ್ಯಾಣ ಸಂಪನ್ನವಾಗುತ್ತದೆ. ಸೀತೆಯು ತನ್ನ ಪತಿಯೊಂದಿಗೆ, ಪರಿಜನರೊಂದಿಗೆ ಅಯೋಧ್ಯೆಯಲ್ಲಿ ಸಂತೋಷದಿಂದ ಇರುತ್ತಾಳೆ. ಸಹಜವಾಗಿಯೇ ತನ್ನಲ್ಲಿ ನೆಲೆಯೂರಿರುವ ಉತ್ತಮ ಗುಣಗಳಿಂದ ಎಲ್ಲರ ಪ್ರೀತಿಗೆ ಗೌರವಕ್ಕೆ ಪಾತ್ರಳಾಗಿರುತ್ತಾಳೆ. ಅಂತಹ ಸಮಯದಲ್ಲಿ ಊಹಿಸಲೂ ಸಾಧ್ಯವಾಗದಂತಹ ಅತ್ಯಂತ ಕ್ಲಿಷ್ಟಕರವಾದ ಸಂದರ್ಭವೊಂದು ಬರುತ್ತದೆ. ಪತಿಗೆ ಪಟ್ಟಾಭಿಷೇಕ, ತಾನು ಮಹಾರಾಣಿಯ ಸ್ಥಾನವನ್ನು ಅಲಂಕರಿಸಬೇಕು, ಎಂಬುದಾಗಿ ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ಪತಿಯು ರಾಜ್ಯವನ್ನು ತೊರೆದು ವನವಾಸಕ್ಕೆ ಹೊರಡಬೇಕಾಗುತ್ತದೆ. ಆಗ ಕಿಂಚಿತ್ತೂ ಮನಸ್ಸಿನ ಸ್ಥೈರ್ಯ ಕಳೆದುಕೊಳ್ಳದೇ ಶ್ರೀರಾಮನಿಗೆ ತಕ್ಕ ಪತ್ನಿಯಾಗಿ, ಪತಿಯ ಮಾರ್ಗವನ್ನೇ ಅನುಸರಿಸಿ ಹೊರಡುತ್ತಾಳೆ.
ಸುಕುಮಾರಿಯಾಗಿ ಅರಮನೆಯ ವಾಸದಲ್ಲಿದ್ದವಳು ವನವಾಸದ ಕ್ಲೇಶಗಳನ್ನೆಲ್ಲಾ ಸಹಿಸಿಕೊಳ್ಳುತ್ತಾಳೆ. ಪತಿಯ ಸೇವೆಯನ್ನು ಮಾಡುತ್ತಾ ಹಾಗೂ ತಮ್ಮ ಸೇವೆಗಾಗಿ ಸರ್ವಸ್ವವನ್ನೂ ತ್ಯಾಗಮಾಡಿ ಬಂದಂತಹ ಲಕ್ಷ್ಮಣನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾ ವನವಾಸದಲ್ಲಿ ಸಂತೋಷವಾಗಿಯೇ ಕಾಲವನ್ನು ಕಳೆಯುತ್ತಾಳೆ. ಹಾಗಿರುವಾಗ ದುಷ್ಟ ರಾವಣನ ಆಗಮನವಾಗಿ ಅವನಿಂದ ಅಪಹರಿಸಲ್ಪಟ್ಟು ಲಂಕೆಯ ಅಶೋಕವನದಲ್ಲಿ ಪತಿ ವಿರಹದ ಶೋಕವನ್ನು, ರಾವಣನ ಕ್ರೌರ್ಯವನ್ನು ಅನುಕ್ಷಣವೂ ಅನುಭವಿಸುತ್ತಾ ಕಾಲ ಕಳೆಯಬೇಕಾದಂತಹ ಪ್ರಸಂಗ ಬರುತ್ತದೆ. ರಾವಣನು ಅವಳನ್ನು ಮೋಹಗೊಳಿಸಲು ಒಡ್ಡಿದ ಯಾವ ಪ್ರಲೋಭನೆಗಾಗಲೀ, ಬೆದರಿಸಲು ಮಾಡಿದ ಕುತಂತ್ರಗಳಿಗಾಗಲೀ, ಧೃತಿಗೆಡದೇ ಅನವರತವೂ ಪತಿಯನ್ನೇ ನೆನೆಯುತ್ತಾ ಅವನ ಆಗಮನದ ನಿರೀಕ್ಷೆಯಲ್ಲಿಯೇ ಪ್ರತಿಕ್ಷಣವನ್ನೂ ಕಳೆಯುತ್ತಿರುತ್ತಾಳೆ. ಕ್ಷಣಮಾತ್ರದಲ್ಲಿ ರಾವಣನನ್ನು ದಹಿಸುವಂತಹ ಪಾತಿವ್ರತ್ಯ,ತಪ:ಶಕ್ತಿ ಅವಳಲ್ಲಿ ಇದ್ದರೂ ಅದನ್ನು ತನ್ನಲ್ಲೇ ಅಡಗಿಸಿಟ್ಟುಕೊಂಡು, ರಾವಣ ಸಂಹಾರದ ಕೀರ್ತಿ ಪತಿಯಾದ ಶ್ರೀರಾಮನಿಗೇ ಸಲ್ಲಬೇಕು ಎಂಬ ಆಶಯದಿಂದ ಸಹನೆಯಿಂದ ಕಾಯುತ್ತಾಳೆ. ರಾವಣ ಸಂಹಾರದ ನಂತರ, ಸೀತೆ ಪರಮ ಪಾವನೆ ಎಂಬುದಾಗಿ ಶ್ರೀರಾಮನ ಅಂತರಾತ್ಮಕ್ಕೆ ತಿಳಿದಿದ್ದರೂ ಸಹ ಅವನು ಆದರ್ಶ ರಾಜನೂ ಆಗಿದ್ದರಿಂದ ,ಅವಳನ್ನು ಆ ಕ್ಷಣದಲ್ಲಿ ಅವನಿಂದ ಸ್ವೀಕರಿದೇ ಅವಳ ಪಾವಿತ್ರ್ಯದ ಪರೀಕ್ಷೆಯನ್ನು ನಿರೀಕ್ಷಿಸಬೇಕಾಗುತ್ತದೆ. ಪತಿಯ ಮನೋರಥವನ್ನು ಅರಿತ ಸೀತೆ ಲಕ್ಷ್ಮಣನಿಗೆ ಅಗ್ನಿಯನ್ನು ಸಿದ್ಧಪಡಿಸಲು ಹೇಳುತ್ತಾಳೆ. ಕಾಯಾ, ವಾಚಾ, ಮನಸಾ ಸದಾಕಾಲ ನಾನು ಧರ್ಮಜ್ಞನಾದ ನನ್ನ ಪತಿಯನ್ನೇ ಅನುಸರಿಸಿದ್ದಾದರೆ ನೀನು ನನ್ನನ್ನು ಕಾಪಾಡು ಎಂಬುದಾಗಿ ಅಗ್ನಿದೇವನನ್ನು ಪ್ರಾರ್ಥಿಸಿ ಅಗ್ನಿಯನ್ನು ಪ್ರವೇಶಿಸುತ್ತಾಳೆ. ಸೀತಾಮಾತೆಯ ಸಂಸರ್ಗದಿಂದ ಅಗ್ನಿದೇವನು ಇನ್ನಷ್ಟು ಪವಿತ್ರನಾಗುತ್ತಾನೆ. ಅವನು ಸಮಸ್ತ ದೇವತೆಗಳ ಹಾಗೂ ಅಲ್ಲಿ ನೆರೆದವರ ಸಮ್ಮುಖದಲ್ಲಿ ಸೀತೆಯನ್ನು ಪರಮ ಪಾವನೆ ಎಂದು ಘೋಷಿಸಿ ರಾಮನಿಗೆ ಒಪ್ಪಿಸುತ್ತಾನೆ.
ಆನಂತರ ಶ್ರೀರಾಮನ ಪಟ್ಟದ ರಾಣಿಯಾಗುತ್ತಾಳೆ. ಆದರೆ ಕಷ್ಟಗಳ ಪರಂಪರೆ ಮುಂದುವರೆಯುತ್ತಲೇ ಹೋಗುತ್ತದೆ. ಮೂಢಮತಿಯುಳ್ಳ ಅಯೋಧ್ಯೆಯ ಕೆಲ ಪ್ರಜೆಗಳ ಸಲುವಾಗಿ, ಅಯೋಧ್ಯೆಯ ರಾಜನಾಗಿ ರಾಮನು ಸೀತೆಯನ್ನು ಪರಿತ್ಯಾಗ ಮಾಡುವಂತಹ ಕಠೋರ ನಿರ್ಧಾರವನ್ನು ತೆಗೆದುಕೊಳ್ಳಲೇಬೇಕಾಗುತ್ತದೆ. ಮಹಾಮಾತೆಯ ಸಾನಿಧ್ಯದಲ್ಲಿ ಇರುವ ಸೌಭಾಗ್ಯ ವನ್ನು ಅಯೋಧ್ಯೆಯ ಪ್ರಜೆಗಳು ಕಳೆದುಕೊಳ್ಳುತ್ತಾರೆ. ಆದರೂ ವಾತ್ಸಲ್ಯಮಯಿಯಾದ ಸೀತೆ ಅವರ ಮೇಲೆ ಕ್ರೋಧ ದೃಷ್ಟಿಯನ್ನು ಬೀರುವುದಿಲ್ಲ, ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂಬ ಮಾತಿದೆ, ಜಗನ್ಮಾತೆಯಲ್ಲವೇ ಅವಳು, ಅವಳ ಮಮತೆಗೆ ಎಣೆ ಎಲ್ಲಿದೆ? ವಾಲ್ಮೀಕಿಗಳ ಆಶ್ರಮದಲ್ಲಿ ಕುಶ ಲವರನ್ನು ಸಂಸ್ಕಾರದಿಂದ ಬೆಳೆಸಿ ಬ್ರಹ್ಮಜ್ಞಾನದ ಜೊತೆಗೆ ಕ್ಷಾತ್ರತೇಜಸ್ಸನ್ನು ತುಂಬಿ ಪತಿಗೆ ಒಪ್ಪಿಸಿ ತಾನು ಬಂದ ನೆಲೆಯನ್ನು ಸೇರಿಕೊಳ್ಳುತ್ತಾಳೆ. ಆದರ್ಶ ಮಗಳಾಗಿ, ಪತ್ನಿಯಾಗಿ, ತಾಯಿಯಾಗಿ ಸದಾ ಆತ್ಮದೀಪ್ತಿಯ ಪ್ರಕಾಶದಿಂದ ಬೆಳಗಿದ ಸೀತಾಮಾತೆಯ ಸ್ಮರಣೆಯು ನಮ್ಮ ಪಾಪಗಳನ್ನು ದೂರಮಾಡಿ ಅತಿಶಯವಾದ ಪಾವನತ್ವವನ್ನು ಕೊಡುತ್ತದೆ ಎಂಬುದು ಸಾರ್ವಕಾಲಿಕ ಸತ್ಯ.