ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ – 57 ನಿರಂತರವಾಗಿ ಫಲವನ್ನು ಕೊಡುವ ಧರ್ಮ ಯಾವುದು ?
ಉತ್ತರ - ತ್ರಯೀ - ವೇದ
ಈ ನಿಸರ್ಗದಲ್ಲಿ ಯಾವುದೇ ಬೀಜವು ಫಲವನ್ನು ಕೊಡಬೇಕಾದರೆ ಅದಕ್ಕೊಂದು ಕಾಲ ಸನ್ನಿವೇಶಗಳ ಅವಶ್ಯಕತೆ ಇರುತ್ತದೆ. ಅಥವಾ ಎಲ್ಲಾ ಬೀಜವೂ ವೃಕ್ಷವಾಗಿ ಎಲ್ಲಾ ಕಾಲದಲ್ಲೂ ಎಡಬಿಡದೇ ಫಲವನ್ನು ಕೊಡುವುದೆಂಬುದೂ ಅಸಾಧ್ಯದ ಮಾತೇ. ಅಂತೆಯೇ ನಿರಂತರವಾಗಿ ಫಲವನ್ನು ಕೊಡುವ ಯಾವುದೇ ವೃಕ್ಷವನ್ನು ಕೇಳಿಲ್ಲ, ಕಂಡಿಲ್ಲ. ಆದರೆ ಇಲ್ಲಿ ಯಕ್ಷನು ನಿರಂತರವಾಗಿ ಫಲವನ್ನು ಕೊಡುವಂತಹ ಧರ್ಮ ಯಾವುದು? ಎಂಬ ಪ್ರಶ್ನೆಯನ್ನು ಮುಂದಿಡುತ್ತಾನೆ. ಅದಕ್ಕೆ ಧರ್ಮರಾಜನು ತ್ರಯೀ - ವೇದ ಎಂಬ ಉತ್ತರವನ್ನು ಕೊಡುತ್ತಾನೆ. ಅಂದರೆ ಅದಾವ ಧರ್ಮಕ್ಕೆ ನಿರಂತರ ಫಲಕೊಡುವ ಯೋಗ್ಯತೆಯಿದೆ? ಮತ್ತು ಹೇಗೆ? ಫಲವನ್ನು ಕೊಡಲು ಅದು ವೃಕ್ಷವಾಗಿರಬೇಕಲ್ಲವೇ? ವೇದಕ್ಕೆ ತ್ರಯೀ ಎಂದು ಹೆಸರು ಹೇಗೆ ಬಂತು? ಮತ್ತು ವೇದವೆಂಬ ಧರ್ಮವು ಹೇಗೆ ಮಧ್ಯೆ ಬಿಡುವಿಲ್ಲದೇ ಫಲವನ್ನು ಕೊಡಲು ಸಾಧ್ಯ? ಎಂಬೆಲ್ಲಾ ಪ್ರಶ್ನೆಗಳು ಉದ್ಭವಿಸುತ್ತವೆ.
ಇಲ್ಲಿ ಹೇಳುತ್ತಿರುವುದು ನಾವು ಕಾಣುವ ವನದಲ್ಲಿ ಇರುವ ವೃಕ್ಷವಲ್ಲ. ಆರಣ್ಯಕ, ಬ್ರಾಹ್ಮಣ ಮತ್ತು ಸಂಹಿತಾ ಎಂಬ ಮೂರು ಶಾಖೆಗಳಿಂದ ಕೂಡಿರುವ ವೇದವೆಂಬ ವೃಕ್ಷ. ವೇದವೃಕ್ಷವು ಊರ್ಧ್ವಮೂಲವಾದ ಕೆಳಕೊಂಬೆಯಿಂದ ಕೂಡಿದ್ದಾಗಿದೆ. ವಿದ-ಜ್ಞಾನೇ ಎಂಬ ಸಂಸ್ಕೃತಮೂಲವಾದ ಶಬ್ದಕ್ಕೆ ಜ್ಞಾನ ಎಂದು ಅರ್ಥ. ಇಂತಹ ಜ್ಞಾನರೂಪವಾದ ವೇದವು ನಿರಂತರವಾದ ಫಲವನ್ನು ಕೊಡುತ್ತದೆ. ಜ್ಞಾನ, ಇಚ್ಛಾ, ಕ್ರಿಯೆಗಳು ನಿರಂತರವಾಗಿ ನಡೆಯುತ್ತಿರುವ ಪ್ರವೃತ್ತಿಗಳು. ಇಲ್ಲಿ ಇಚ್ಛಾ ಮತ್ತು ಕ್ರಿಯೆಗಳಿಗೆ ಜ್ಞಾನವೇ ಮೂಲವಾಗಿದೆ. ಜ್ಞಾನವು ಈ ಸೃಷ್ಟಿಯಲ್ಲಿ ಸದಾ ಜಾಗೃತವಾಗಿ ಮೊಳಗುತ್ತಿರುವ ಶಬ್ದಗಳ ತರಂಗ. ಅವುಗಳನ್ನು ಸಾಕ್ಷಾತ್ಕರಿಸಿಕೊಂಡವನು ಋಷಿ. ಅಂತಹ ಜ್ಞಾನದಿಂದ ನಡೆಯುವ ಮುಂದಿನ ಎಲ್ಲಾ ವ್ಯಾಪಾರಗಳೂ ವೇದಮೂಲವಾದವುಗಳೇ ಆಗಿವೆ. ಇಂತಹ ವ್ಯಾಪಾರವು ಅವ್ಯಾಹತವಾಗಿ ಇಂದೂ ಮುಂದೂ ಎಂದೆಂದೂ ನಡೆದುಕೊಂಡು ಬರುತ್ತಲೇ ಇದೆ. ವೇದಗಳು ಯಜಕ್ಕಾಗಿಯೇ ಋಷಿಗಳ ಮನೋಭೂಮಿಯಲ್ಲಿ ಬೆಳೆದ ಮರವದು. ಯಜ್ಞರೂಪವಾದ ಕರ್ಮ ನಿರಂತರವಾಗಿಯೇ ಇರುವುದರಿಂದ ಆ ಯಜ್ಞಗಳ ಫಲವು ಹಾಗೇ ನಿರಂತರವಾಗಿ ಬರಬೇಕಲ್ಲವೇ. ಈ ದೃಷ್ಟಿಯಿಂದ ತ್ರಯೀ ಎನ್ನುವುದು ನಿರಂತರವಾಗಿ ಫಲವನ್ನು ಕೊಡುವ ಧರ್ಮವಾಗಿದೆ. ಧರ್ಮವೆಂದರೆ ಅದೊಂದು ಬಗೆಯ ಕಂಡೀಶನ್ ಎಂಬುದಾಗಿ ಶ್ರೀರಂಗ ಮಹಾಗುರುಗಳ ಮಾತನ್ನು ಈ ನೆನಪಿಸಿಕೊಳ್ಳುತ್ತೇನೆ. ವೇದವೆಂಬುದು ಈ ಸೃಷ್ಟಿಯಲ್ಲಿ ಮೊಳಗುತ್ತಿರುವ ಶಾಶ್ವತವಾದ ಸತ್ಯ. ಅದು ಯಾವುದೋ ಒಂದು ಕಂಡೀಶನ್ನಲ್ಲಿ ಇದ್ದಾಗ ಮಾತ್ರ ನಮಗೆ ಗೋಚರಿಸಬಲ್ಲದು. ನಿತ್ಯಸತ್ಯವಾದ ವೇದದ ಮೂಲವಾದ ಪ್ರತಿಯೊಂದು ಕ್ರಿಯೆಗಳೂ ಅನವರತ ನಡೆಯಲೇಬೇಕಾಗಿವೆ. 'ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತಿ ಅಕರ್ಮಕೃತ್' ಎಂದು ಗೀತೆಯಲ್ಲಿ ಹೇಳುವಂತೆ ನಿಷ್ಕ್ರಿಯವಾದ ಯಾವ ಜಂತುವೂ ಇಲ್ಲ. ಇವುಗಳಲ್ಲಿ ನಡೆಯುತ್ತಿರುವ ಕ್ರಿಯೆಗಳೆಲ್ಲವೂ ಜ್ಞಾನಮೂಲವಾದುವುಗಳೇ ಅಲ್ಲವೇ!
ಮತ್ತು 'ಮೋಕ್ಷಮಂತ್ರಸ್ತ್ರಯ್ಯೈವಂ ವಿದೇತ್' ಜಾಬಾಲೋಪನಿಷತ್ತಿನಲ್ಲಿ ಪ್ರಣವವನ್ನು 'ತ್ರಯೀ' ಎನ್ನಲಾಗಿದೆ. ಅಕಾರ ಉಕಾರ ಮಕಾರಗಳೆಂಬ ವಿಭಾಗಿಸಲಾಗದ ಅಂತರ್ಗತವಾದ ಧ್ವನಿರೂಪವಾದುದು ಪ್ರಣವ. ಅದರ ಅನುಸಂಧಾನವು ಮೋಕ್ಷಕ್ಕೆ ಸಾಧನೀಭೂತವಾದುದು. ಅದೂ ಈ ನಿಸರ್ಗದಲ್ಲಿ ಸಹಜವಾಗಿ ನಿತ್ಯವಾಗಿ ಪ್ರತಿಧ್ವನಿತವಾಗುತ್ತಾ ಇರುತ್ತದೆ. ಇಂತಹ ಪ್ರಣವದಿಂದ ವಿಸ್ತಾರವಾದುದೇ ವೇದ. ಇದೇ ಧರ್ಮಸಾಧನ.
ಸೂಚನೆ : 08/10/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.