ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್
(ಪ್ರತಿಕ್ರಿಯಿಸಿರಿ lekhana@ayvm.in)
ಶ್ರೀರಾಮ ಹಾಗೂ ಲಕ್ಷ್ಮಣರು ಅಹಲ್ಯೆಯ ಪಾದಗಳಿಗೆ ನಮಸ್ಕರಿಸುತ್ತಾರೆ. ಯಾರ ನಾಮ ಸ್ಮರಣೆಯಿಂದ ಸಮಸ್ತ ಪಾಪಗಳೂ ಭಸ್ಮವಾಗುತ್ತವೆಯೋ ಅಂತಹ ಶ್ರೀರಾಮಚಂದ್ರಪ್ರಭುವೇ ಅವಳಿಗೆ ನಮಸ್ಕರಿಸಿದ ಅಂದ ಮೇಲೆ ಅವಳ ತಪಸ್ಸಿನ ಪ್ರಭಾವ ಅದರಿಂದಾದ ಪಾವಿತ್ರ್ಯ ಎಷ್ಟು ಎಂಬುದು ಊಹೆಗೂ ನಿಲುಕದ ವಿಷಯ. ಅವಳು ತನ್ನಿಂದ ಆದ ಪಾಪಕ್ಕೆ ಪ್ರಾಯಶ್ಚಿತ್ತ ಹೊಂದಿ ತಪಸ್ಯೆಯ ಮೂಲಕ ಅತ್ಯಂತ ಪರಿಶುದ್ಧಳಾಗಿ ಶ್ರೀರಾಮಚಂದ್ರನ ಗೌರವಕ್ಕೆಪಾತ್ರಳಾಗುತ್ತಾಳೆ. ಆ ಸಮಯಕ್ಕೆ ಸರಿಯಾಗಿ ಗೌತಮ ಮಹರ್ಷಿಗಳೂ ಅಲ್ಲಿಗೆ ಬರುತ್ತಾರೆ. ಅಹಲ್ಯೆಯೊಂದಿಗೆ ಯಥಾವಿಧಿಯಾಗಿ ಶ್ರೀರಾಮ ಲಕ್ಷ್ಮಣರ ಸತ್ಕಾರ ಮಾಡುತ್ತಾರೆ. ಅಹಲ್ಯೆಯು ಪುನಃ ಗೌತಮ ಮಹರ್ಷಿಗಳೊಂದಿಗೆ ಪರಿಶುದ್ಧವಾದ ಜೀವನವನ್ನು ಪ್ರಾರಂಭಿಸಿ ಪರಮ ಪತಿವ್ರತೆಯಾಗಿ ಬೆಳಗುತ್ತಾಳೆ. ಅವಳ ಕಠಿಣವಾದ ತಪಸ್ಯೆ ಹಾಗೂ ಶ್ರೀರಾಮಚಂದ್ರನ ಸಂದರ್ಶನದ ಫಲವಾಗಿ ಅವಳಲ್ಲಿದ್ದ ಕೊಳೆಯೆಲ್ಲವೂ ತೊಳೆದು ಹೋಗಿ ಅವಳು ಒಂದು ನೂತನ, ಪವಿತ್ರತಮವಾದ ಜನ್ಮವನ್ನೇ ಪಡೆದು ಲೋಕದಲ್ಲಿ ಪ್ರಸಿದ್ಧಿಯನ್ನು ಹೊಂದುತ್ತಾಳೆ. ಅಹಲ್ಯೆಯ ಮನಸ್ಸು ಒಂದು ಕ್ಷಣ ಸ್ಥಿರತೆಯನ್ನು ಕಳೆದುಕೊಂಡ ಪರಿಣಾಮ ಅವಳಿಂದ ಪತಿದ್ರೋಹದಂತಹ ಮಹಾಪಾತಕವೇ ನಡೆಯಿತು. ಆದರೆ ಪತಿಯೂ , ಬ್ರಹ್ಮರ್ಷಿಯೂ ಆದ ಗೌತಮರು ಅವಳಿಗೆ ನೀಡಿದ ಶಾಪ ಅವಳಿಗೆ ವರವಾಗಿಯೇ ಪರಿಣಮಿಸಿತು. ಮಹಾತ್ಮರ ಶಾಪವೂ ಅನುಗ್ರಹದಂತೆಯೇ ಕೆಲಸ ಮಾಡಿ ಪತಿತರಾದ ಜೀವಿಗಳ ಉದ್ಧಾರಕ್ಕೆ ಕಾರಣವಾಗುತ್ತದೆ. ಅವರು ನೀಡಿದ ಶಿಕ್ಷೆ ಕೇವಲ punishment ಅಲ್ಲ. ನೀನು ನಾಶವಾಗಿ ಹೋಗು ಎಂಬುದಾಗಿಯೋ ಅಥವಾ ಅವಳಿಗೆ ಅಧೋಗತಿಯನ್ನು ಉಂಟುಮಾಡುವ ಇನ್ಯಾವುದೇ ಶಾಪವನ್ನು ಅವರು ನೀಡಲಿಲ್ಲ. ವಿವಾಹವೆಂದರೆ ಪತಿ ಪತ್ನಿಕೇವಲ ಭೌತಿಕವಾಗಿ ಜೊತೆಗೆ ಬಾಳುವುದಷ್ಟೇ ಅಲ್ಲ. ಅವರಿಬ್ಬರ ಮನಸ್ಸುಗಳು ಹೃದಯಗಳು ಒಂದಾಗಿ ದೈವಿಕ ಹಾಗೂ ಅಧ್ಯಾತ್ಮಿಕ ಜೀವನದಲ್ಲಿಯೂ ಒಟ್ಟಿಗೆ ಹೆಜ್ಜೆಯನ್ನು ಇಡಬೇಕಾದ ಸಂಸ್ಕಾರ. ಪತಿಯಾದವನು ಪತ್ನಿಯನ್ನು ಎಲ್ಲ ರೀತಿಯಿಂದಲೂ ಉದ್ಧಾರ ಮಾಡಬೇಕು. ತಾನು ಭಗವನ್ಮಾರ್ಗದಲ್ಲಿ ನಡೆದು ಅವಳನ್ನೂ ನಡೆಸಿ ಮೂಲಸ್ಥಾನವಾದ ಭಗವಂತನ ನೆಲೆಗೆ ಕೊಂಡೊಯ್ಯುವ ಕರ್ತವ್ಯ ಪತಿಯದ್ದೇ ಆಗಿರುತ್ತದೆ. ಹಾಗಾಗಿ ಗೌತಮರು ಅಹಲ್ಯೆಗೆ ಗುರುವಿನ ಸ್ಥಾನದಲ್ಲಿದ್ದುಕೊಂಡು ಅವಳಿಗೆ ನೀಡಿದ ಶಿಕ್ಷೆ ಅಥವಾ ಶಾಪ, ಶಿಕ್ಷಾ - ವಿದ್ಯೋಪಾದಾನೇ ಎಂಬಂತೆ ಅವಳಿಗೆ ನೀಡಿದ ಶಿಕ್ಷಣವೇ ಆಗಿದೆ. ಬಾಹ್ಯ ದರ್ಶನದ ಯೋಗ್ಯತೆಯನ್ನು ಕಳೆದುಕೊಂಡಿದ್ದ ಅವಳು ಪತಿಯ ಶಾಪದಂತೆ ಅದೃಶ್ಯಳಾಗುತ್ತಾಳೆ.
ತಪಸ್ಯೆಯಿಂದ ಅತ್ಯಂತ ಪರಿಶುದ್ಧಳಾದ ಅಹಲ್ಯೆಯನ್ನು ಶ್ರೀರಾಮಚಂದ್ರನೇ ಮೊದಲು ಸಂದರ್ಶಿಸಿ ಅವಳಿಗೆ ಪರಮ ಪಾವನತ್ವವನ್ನು ತಂದು ಕೊಡುತ್ತಾನೆ. ಪಾಪ ಕಳೆದ ಮೇಲೂ ಅಂತಹವರನ್ನು ಹಿಂದಿನ ಪಾಪದ ದೃಷ್ಟಿಯಿಂದಲೇ ನೋಡಿದರೆ ಹಾಗೆ ನೋಡಿದವರಿಗೆ ಪಾಪ ಬರುತ್ತದೆ ಎಂದು ಶ್ರೀರಂಗಪ್ರಿಯ ಸ್ವಾಮಿಗಳು ಹೇಳಿದ್ದು ಇಲ್ಲಿ ಸ್ಮರಣೀಯ. ಪರಮ ಪಾವನೆಯಾದ ಅಂತಹ ಅಹಲ್ಯೆಯ ಸ್ಮರಣೆಯಿಂದ ನಮ್ಮ ಪಾತಕಗಳೂ ನಾಶವಾಗಿ ನಮಗೂ ಪಾವಿತ್ರ್ಯ ಉಂಟಾಗುವುದರಲ್ಲಿ ಸಂಶಯವಿಲ್ಲ.