ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ – 54 ಲಾಭಗಳಲ್ಲಿ ಶ್ರೇಷ್ಠವಾದ ಲಾಭ ಯಾವುದು ?
ಉತ್ತರ - ಆರೋಗ್ಯ
ಮಾನವನು ತನ್ನ ಜೀವನದಲ್ಲಿ ಪಡೆಯಬೇಕಾದುದು ಯಾವುದು? ಎಂದರೆ ಜ್ಞಾನ. ವಸ್ತುತಃ ಜ್ಞಾನಕ್ಕಿಂತ ಶ್ರೇಷ್ಠವಾದ ಲಾಭ ಇನ್ನೊಂದಿಲ್ಲ. ಮನುಷ್ಯನು ಮುಕ್ತನಾಗಬೇಕಾದರೆ ಜ್ಞಾನದಿಂದ ಮಾತ್ರ ಸಾಧ್ಯ ಎಂಬುದನ್ನು ' ಜ್ಞಾನಾದೇವ ತು ಕೈವಲ್ಯಮ್' ಎಂಬ ಮಾತು ದೃಢೀಕರಿಸುತ್ತದೆ. ಆದರೆ ಇಲ್ಲಿ ಯಕ್ಷನು ಆರೋಗ್ಯವನ್ನೇ ಎಲ್ಲಾ ಲಾಭಕ್ಕಿಂತಲೂ ಶ್ರೇಷ್ಠವಾದುದು ಎಂಬ ಉತ್ತರವನ್ನು ಧರ್ಮರಾಜನಿಂದ ಪಡೆಯುತ್ತಾನೆ .ಹಾಗಾದರೆ ಜ್ಞಾನಕ್ಕಿಂತಲೂ ಆರೋಗ್ಯವೇ? ಎಂಬ ಸಂಶಯ ಬರಬಹುದು. ಶ್ರೀರಂಗಮಹಾಗುರುಗಳು ಆಯುರ್ವೇದಶಾಸ್ತ್ರವು ಮಾನವನಿಗೆ ಎಷ್ಟು ಮುಖ್ಯ ಎಂಬುದನ್ನು ಹೇಳುವಾಗ ಆರೋಗ್ಯದ ಮಹತ್ತ್ವವನ್ನೂ ತಿಳಿಸುತ್ತಾ "ಲೋಕದಲ್ಲಿ ಕೆಲವು ವಿಷಯಗಳು ಕಾಲ ದೇಶಭೇದಗಳಿಂದ ಬೇಕು-ಬೇಡವಾಗಿರಬಹುದು. ಆದರೆ 'ಶರೀರಮ್ ಆದ್ಯಂ ಖಲು ಧರ್ಮಸಾಧನಮ್' ಎಂಬಂತೆ ಯಾವ ಕಾರ್ಯಕ್ಕೂ ಶರೀರವು ಮೂಲವಾಗಿರುವುದರಿಂದ ಎಲ್ಲಾ ಭೂತವರ್ಗಗಳೂ ತಮ್ಮ ಆರೋಗ್ಯ ಆಯುಸ್ಸು ಇವುಗಳನ್ನು ಸದಾ ಬಯಸುವುದರಿಂದ ಇಂತಹ ಬಯಕೆಗಳನ್ನು ಸಲ್ಲಿಸುವುದಕ್ಕಿರುವ ಅನಾದಿಸಿದ್ಧವೂ ಪ್ರತ್ಯಕ್ಷವೂ ಆದ ಶಾಸ್ತ್ರವನ್ನು ಯಾರು ತಾನೇ ಬೇಡವೆನ್ನುವರು?" ಎಂಬುದಾಗಿ ಆರೋಗ್ಯದ ಅನಿವಾರ್ಯವನ್ನು ಹೀಗೆ ಹೇಳಿದ್ದಾರೆ. ಹಾಗಾಗಿ ಆರೋಗ್ಯವೇ ಎಲ್ಲಾ ಲಾಭಗಳಿಗಿಂತಲೂ ಶ್ರೇಷ್ಠ ಎನ್ನಲಾಗಿದೆ.
ಮನುಷ್ಯನಿಗೆ ಆರೋಗ್ಯವಿಲ್ಲದಿದ್ದರೆ ಏನೊಂದೂ ಸಾಧ್ಯವಿಲ್ಲ. ಮಗುವಿನಿಂದ ಹಿಡಿದು ಮುದುಕನವರೆಗೂ ಎಲ್ಲರಿಗೂ ಆರೋಗ್ಯ ಬೇಕು. 'ಆರೋಗ್ಯವೇ ಭಾಗ್ಯ' ಎಂಬ ಗಾದೆ ಮಾತೂ ಈ ಹಿನ್ನೆಲೆಯಲ್ಲೇ ಹುಟ್ಟಿದ್ದು. ಯಾರಾದರೂ ಬಂಧುಬಂಧವರನ್ನು ಅಥವಾ ಪರಿಚಿತರನ್ನು ಭೇಟಿ ಮಾಡಿದಾಗ ನಾವು ಮೊದಲು ವಿಚಾರಿಸುವುದು 'ಆರೋಗ್ಯವಾಗಿದ್ದೀರಾ?' ಎಂದು ತಾನೆ. ಅಂದರೆ ಇರಬೇಕಾದುದು ಆರೋಗ್ಯ. ಅದೇ ಸಹಜವಾದ ಪರಿಸ್ಥಿತಿ. ಆರೋಗ್ಯ ಹದಗೆಟ್ಟಾಗ ಮತ್ತೆ ಅದನ್ನು ಸರಿಪಡಿಸಿ ಆರೋಗ್ಯವನ್ನೇ ಪಡೆಯುತ್ತೇವೆ. ಯಾರೇ ಸಿಕ್ಕಿದರೂ ನಾವು 'ಅನಾರೋಗ್ಯವೇ?' ಎಂದು ಕೇಳುತ್ತೇವೋ? ಇಲ್ಲ. ಏಕೆಂದರೆ ಅನಾರೋಗ್ಯ ಸಹಜಸ್ಥಿತಿಯಲ್ಲ. ಆರೋಗ್ಯವೇ ಇರಬೇಕಾದ ಸ್ಥಿತಿ. ಅಂತಹವನನ್ನೇ ಆಯುರ್ವೇದವು 'ಸ್ವಸ್ಥ' ಎಂದು ಕರೆಯುತ್ತದೆ. ಅಂದರೆ ತನ್ನ ತನ್ನ ಸಹಜವಾದ ಸ್ಥಿತಿಯಲ್ಲಿರುವುದು ಎಂದರ್ಥ. ಆಯುರ್ವೇದವು ಸ್ವಸ್ಥನ ಲಕ್ಷಣವನ್ನು ಈ ರೀತಿಯಾಗಿ ಹೇಳಿದೆ " ಸಮದೋಷಃ ಸಮಾಗ್ನಿಶ್ಚ ಸಮಧಾತುಮಲಕ್ರಿಯಃ। ಪ್ರಸನ್ನಾತ್ಮೇಂದ್ರಿಯಮನಾಃ ಸ್ವಸ್ಥ ಇತ್ಯಭಿಧೀಯತೇ॥" ಎಂದು. ಆರೋಗ್ಯಶಾಸ್ತ್ರವು ಆರೋಗ್ಯವನ್ನು ಎರಡಾಗಿ ವಿಭಾಗಿಸುತ್ತದೆ ಶಾರೀರಿಕ ಮತ್ತು ಮಾನಸಿಕ ಎಂಬುದಾಗಿ. ನಮ್ಮ ಶರೀರದಲ್ಲಿರುವ ವಾತ, ಪಿತ್ತ, ಕಫಗಳೆಂಬ ಮೂರು ದೋಷಗಳು, ದೇಹದ ಜಾಠರಾಗ್ನಿಯ ವ್ಯವಸ್ಥಿತವಾದ ರೀತಿ, ರಸ, ರಕ್ತ, ಮಾಂಸ, ಕೊಬ್ಬು, ಮೂಳೆ, ಮಜ್ಜ, ಶುಕ್ರ ಎಂಬ ಸಪ್ತಧಾತುಗಳು, ಮಲ ಮೂತ್ರ ಸ್ವೇದಗಳೆಂಬ ಮೂರು ಮಲಗಳು ಸರಿಯಾಗಿ ದೇಹದಿಂದ ಹೊರಹೋಗುವಿಕೆ, ಇಂದ್ರಿಯ, ಮನಸ್ಸು ಮತ್ತು ಆತ್ಮ ಇವೆಲ್ಲವೂ ನೆಮ್ಮದಿಯಾಗಿರುವುದು, ಹೀಗೆ ಎಲ್ಲಾ ಅಂಗಗಳೂ ಅದರದರ ಕಾರ್ಯವನ್ನು ಸರಿಯಾಗಿ ಮಾಡುವಂತಿರಬೇಕು. ಹಾಗಿದ್ದರೆ ಬಾಹ್ಯ ಅಂಗಗಳನ್ನು ಸಾಧನವಾಗಿಸಿಕೊಂಡ ಅಂತರಂಗದ ಅಂಗಗಳು ಸಾಂಗವಾಗಿ ಕಾರ್ಯವನ್ನು ಮಾಡಲು ಸಾಧ್ಯ. ಆದ್ದರಿಂದ ಮಾನವನ ಜೀವಿತದ ಪ್ರತಿಯೊಂದು ಕಾರ್ಯವೂ ಆರೋಗ್ಯವನ್ನು ಅವಲಂಬಿಸಿಯೇ ಇರುವುದರಿಂದ ಆರೋಗ್ಯಕ್ಕಿಂತ ಮತ್ತೊಂದು ಮುಗಿಲಾದ ಭಾಗ್ಯ ಇರಲು ಹೇಗೆ ಸಾಧ್ಯ!.