Saturday, August 12, 2023

ಸುಸಂಸ್ಕಾರಗಳು ನಮ್ಮನ್ನು ಉದ್ಧರಿಸುವುವು (Susanskaragalu Nammannu Uddharisuvuvu)

 ಶ್ರೀಮತಿ ಪದ್ಮಿನಿ ಶ್ರೀನಿವಾಸನ್

 (ಪ್ರತಿಕ್ರಿಯಿಸಿರಿ lekhana@ayvm.in)


https://www.ayvm.in/publications )


ತಮಿಳು ಪ್ರಾಂತದಲ್ಲಿ ಶಿವಭಕ್ತ ಕುಟುಂಬವೊಂದರಲ್ಲಿ ಮಗುವಿನ ಜನನವಾಯಿತು. ಮಗುವಿನ ತಂದೆ ಜನಸಾಮಾನ್ಯರೆಲ್ಲರಿಗೂ ಶಿವಭಕ್ತಿಯನ್ನು ಸಾರುತ್ತಾ, ಶಿವಭಕ್ತಿಯಲ್ಲೇ ಮುಳುಗಿದ್ದ. ಮಗನನ್ನೂ ಶಿವಾರಾಧನೆ, ಶಿವಸ್ಮರಣೆಗಳೊಂದಿಗೇ ಬೆಳೆಸಿದ. ವಿಧೇಯನಾಗಿದ್ದ ಮಗ. ಆದರೆ ಎಲ್ಲೋ ಮಧ್ಯದಲ್ಲಿ ಲೌಕಿಕ ವ್ಯವಹಾರಗಳಲ್ಲಿ ವ್ಯಸ್ತನಾಗಿ, ಶಿವ ಸ್ಮರಣೆಯನ್ನು ಮರೆತ.


 ವಯಸ್ಸಿಗೆ ಬಂದಾಗ ವಿವಾಹಕ್ಕೆ ಸಿದ್ಧತೆಗಳನ್ನು ಮಾಡಲಾಯಿತು. ವಿವಾಹವು  ಧರ್ಮಪ್ರಜೆಯನ್ನು ಪಡೆಯಲು, ಧರ್ಮಪತ್ನಿಯನ್ನು ಸ್ವೀಕರಿಸುವ  ಸಂಸ್ಕಾರ, ಎಂಬುದನ್ನು ಮರೆತು, ಕೇವಲ ಇಂದ್ರಿಯಗಳ ತೃಪ್ತಿಗಾಗಿ, ಆಡಂಬರಗಳೊಂದಿಗೆ ಏರ್ಪಟ್ಟಿತ್ತು. ಆಹ್ವಾನಿತ ಅತಿಥಿಗಳೆಲ್ಲರೂ ಆಗಮಿಸಿದ್ದರು. ವರನು ವಧುವಿಗೆ ಮಾಂಗಲ್ಯವನ್ನು ಕಟ್ಟಬೇಕೆನ್ನುವಾಗ, ವೃದ್ಧ ಬ್ರಾಹ್ಮಣನೊಬ್ಬ "ಇಲ್ಲ, ದಯವಿಟ್ಟು ಈ ಮದುವೆಯನ್ನು ನಿಲ್ಲಿಸಿ" ಎಂದು ಕೂಗುತ್ತಾ ಬಂದನು. ಯಾವುದೋ ಆಶೌಚ ಬಂದಿರಬಹುದು, ಎಂದು ಆತಂಕಗೊಂಡ ಜನ ಪಿಸುಗುಟ್ಟಿದರು. "ಇಲ್ಲ ಯಾವ ಆಶೌಚವೂ ಇಲ್ಲ. ವಿಷಯವೇನೆಂದರೆ, ಈ ವರ ನನ್ನ ದಾಸ. ನನ್ನ ಅನುಮತಿಯಿಲ್ಲದೆ ಮದುವೆಯಾಗುವಂತಿಲ್ಲ" ಎಂದ ಬ್ರಾಹ್ಮಣ. "ಎಲೋ! ನಿನಗೆ ತಲೆ ಕೆಟ್ಟಿದೆ. ಅವನ ಕೆಳಗೆ ಹಲವಾರು  ಸೇವಕರು ಕೆಲಸ ಮಾಡುವರು. ಅವನು ದಾಸನಲ್ಲ" ಎಂದು ಅಲ್ಲಿದ್ದವರೆಲ್ಲಾ ತರ್ಕ ಮಾಡಿದರು. "ನಾನು ವ್ಯರ್ಥ ಮಾತನಾಡುವವನಲ್ಲ. ಇಗೋ ನೋಡಿ ಪತ್ರ" ಎಂದು ವರನ ಕೈಬರಹದಿಂದಲೇ ಲಿಖಿತವಾದ ಪತ್ರವನ್ನು ತೋರಿಸಿದ ಬ್ರಾಹ್ಮಣ. ಅದರಲ್ಲಿ "ನಾನು ಬಹಳ ಕಾಲದಿಂದ ನಿನ್ನ ದಾಸ" ಎಂದು ಬರೆದಿತ್ತು..


 ಸತ್ಯ ಧರ್ಮಗಳನ್ನು ಆದರಿಸುತ್ತಿದ್ದ ಅಂದಿನ ಸಮಾಜವು, ಮದುವೆಯ ಸಡಗರವನ್ನು ಬಿಟ್ಟು ಸತ್ಯಾನ್ವೇಷಣೆಗೆ ಉದ್ಯುಕ್ತರಾದರು. ವರನಿಗೆ ಆಶ್ಚರ್ಯ! ಪತ್ರವನ್ನಾವಾ ಬರೆದನೆಂದು ನೆನಪಾಗದಿದ್ದರೂ, ಅವನ ಹಸ್ತಾಕ್ಷರದಲ್ಲಿ ಕಪಟವಿಲ್ಲವೆಂದು ನಂಬಿದನು. ಕ್ಷಣಮಾತ್ರದಲ್ಲಿ ಕೋಪಗೊಂಡು ಪತ್ರವನ್ನು ಹರಿದು ಬಿಸಾಡಿದ. ಬ್ರಾಹ್ಮಣನು ನಕ್ಕು "ನೀನು ಹರಿದರೇನಂತೆ, ಅದರ ಅಸಲು ನನ್ನ ಹಳ್ಳಿಯಲ್ಲಿದೆ" ಎಂದ. "ನನಗೆ ತೋರು" ಎಂದ ವರ. "ಸತ್ಯವನ್ನು ಬಯಸುವ ಹಿರಿಯರೆಲ್ಲರೂ ನನ್ನೊಂದಿಗೆ ಬನ್ನಿ" ಎಂದು ಹೇಳಿ, ಶಿವದೇವಾಲಯಕ್ಕೆ ಎಲ್ಲರನ್ನೂ ಕರೆದೊಯ್ದ ವೃದ್ಧ. 


"ಇವನು ದಾಸ. ಇಂದಿನಿಂದ ಮಾತ್ರವಲ್ಲ, ಇವನ ತಂದೆ, ತಾತ, ಮುತ್ತಾತ, ಏಳು ಪೀಳಿಗೆಗಳಿಂದ ಎಲ್ಲರೂ ನನ್ನ ದಾಸರು" ಎಂದು ಪತ್ರದಲ್ಲಿ ಬರೆದಿತ್ತು. ವರನಿಗೆ ಮರುಮಾತೇ ಹೊರಡಲಿಲ್ಲ. ಬ್ರಾಹ್ಮಣ ಅದೃಶ್ಯನಾದ!! ಅವನ ಪೂರ್ವ ಸಂಸ್ಕಾರಗಳು ಅವನ ಹಿಂದಿನ ಧಾರ್ಮಿಕ ಜೀವನವನ್ನು ನೆನಪಿಗೆ ತರಿಸಿದವು. ಭಗವಂತನಲ್ಲಿ " ನಾನು ನಿನ್ನ ದಾಸಾನುದಾಸ, ನನ್ನ ದಾಸ್ಯವನ್ನು ಸ್ವೀಕರಿಸಿ ನನ್ನನ್ನು ಉದ್ಧರಿಸು ಎಂದು ಪ್ರಾರ್ಥನೆ ಮಾಡಿದ್ದೆಲ್ಲವೂ ಸ್ಮರಣೆಯಾಯಿತು. "ದೇವರೇ! ಇಂದ್ರಿಯಗಳ ದುರ್ವ್ಯವಹಾರವನ್ನು ತಡೆಗಟ್ಟಿ, ದಾಸನಾಗಿಸಿದೆಯಪ್ಪಾ" ಎಂದು ಅಡ್ಡಬಿದ್ದ. "ನಿನಗೆ ನಾನು ಶರಣಾಗಿದ್ದೇನೆ,ನನ್ನನ್ನು ನಿನ್ನ ಚರಣಕಮಲಗಳಲ್ಲಿ ಸೇರಿಸಿಕೊ ", ಎಂಬುದು ಅವನ ಚಿಕ್ಕಂದಿನ ಪ್ರಾರ್ಥನೆಯಾಗಿತ್ತು. ಅವನು ಮರೆತರೂ ದೇವರು ಅದನ್ನು ಮರೆತಿರಲಿಲ್ಲ. ಸೂಕ್ತ ಸಮಯದಲ್ಲಿ ಜ್ಞಾಪಿಸಿದ. 


ಪೂರ್ವಸುಕೃತಗಳ ಪಾತ್ರ:

ಅವನ ಪೂರ್ವಸಂಸ್ಕಾರಗಳು ಅವನನ್ನು ಹೀಗೆ ಶರಣಾಗುವಂತೆ ಮಾಡಿತು, ಎಂದು ಶ್ರೀ ಶ್ರೀ ರಂಗಪ್ರಿಯ ಸ್ವಾಮಿಗಳು ಈ ಕಥೆಯನ್ನು ಹೇಳುತ್ತಿದ್ದರು. ಪೂರ್ವಸಂಸ್ಕಾರವೆಂದರೆ, ವಂಶವಾಹಿಯಾಗಿ, ಹಾಗೂ ನಮ್ಮ ಆಚರಣೆಗಳಿಂದ ಪಡೆದುಕೊಂಡಿರುವ  ದೇಹಾತ್ಮಶುದ್ಧಿ. ಹೇಗೆ ಒಂದು ರಸ್ತೆಯು ಚೆನ್ನಾಗಿದ್ದರೂ, ಬಹುಕಾಲ ಬಳಸದಿದ್ದರೆ, ಮುಳ್ಳುಗಿಡಗಳು ಬೆಳೆದು, ನಡೆಯಲು ದುಸ್ತರವಾಗುತ್ತದೆಯೋ,, ಹಾಗೇ ಜನ್ಮದಿಂದ ಸಂಸ್ಕಾರಿಯಾಗಿದ್ದರೂ,ಈ ವರನು ಹಿರಿಯರು ಹಾಕಿಕೊಟ್ಟ ಧರ್ಮದ ದಾರಿಯನ್ನು ಮರೆತಿದ್ದರಿಂದ, ಆ ಮಾರ್ಗ ಮುಸುಕಾಗಿತ್ತು. ಮೋಡಗಳು ಮರೆಯಾಗಿ ಸೂರ್ಯ ದರ್ಶನವಾದಂತೆ ತೀವ್ರವಾದ ಅವನ ಪೂರ್ವ ಸಂಸ್ಕಾರಗಳು ಈ ಘಟನೆಯಿಂದ ಮತ್ತೆ ಮುನ್ನೆಲೆಗೆ ಬಂದವು.


ಪವಿತ್ರ ಸಂಸ್ಕಾರ-ವಿವಾಹ

ವಿವಾಹವು ಸತ್ಸಂತಾನವನ್ನು ಪಡೆಯಲು, ಧರ್ಮ,ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳನ್ನು ಸಾಧಿಸಲು ಋಷಿಗಳು ತಂದಿರುವ  ಸಂಸ್ಕಾರ.  ಜಗನ್ಮಾತಾಪಿತೃಗಳ ಸಂಕಲ್ಪದಂತೆ ಇಬ್ಬರೂ ಸೇರಿ, ಪುರುಷಾರ್ಥಮಯವಾಗಿ ಜೀವನ ನಡೆಸೋಣ, ಅನ್ನುವುದು ವಿವಾಹದ ಪವಿತ್ರ ಸಂಕಲ್ಪ. ಅಂತಹ ಸಂಕಲ್ಪದೊಂದಿಗಿನ ಮಿಲನ ಸತ್ಸಂತಾನವನ್ನು ಸೃಷ್ಟಿಯಲ್ಲಿ ಮುಂದುವರೆಸಲು ಸಹಾಯಕವಾಗುತ್ತದೆ.ಅದಿಲ್ಲದೇ ಪಶುಗಳಂತೆ ಕೇವಲ ಇಂದ್ರಿಯ ಸುಖದ ಅಪೇಕ್ಷೆಯಿಂದಷ್ಟೇ ಆದ ಒಂದುಗೂಡುವಿಕೆ ಮಹರ್ಷಿಗಳು ತಂದ ಪವಿತ್ರ ಸಂಸ್ಕಾರವಾದ ವಿವಾಹ ಆಗದು. ಎಂದೇ ಅವನನ್ನು ಅಂತಹ ಕಾರ್ಯಕ್ಕೆ ಅಣಿಗೊಳಿಸಿದ ಕರುಣೆ ಭಗವಂತನದು.


ಇಂದ್ರಿಯಕ್ಷೇತ್ರಕ್ಕೆ ಜಾರಿದ ವರನನ್ನು ಮತ್ತೊಮ್ಮೆ ಧರ್ಮ ಮಾರ್ಗಕ್ಕೆ ಎಳೆದು, ಆನಂತರವೇ ವಿವಾಹ ನಡೆಯಬೇಕೆಂಬುದು ಬ್ರಾಹ್ಮಣ ರೂಪಿಯಾದ ಭಗವಂತನ ಇಚ್ಛೆಯಾಗಿತ್ತು.


 "ಸತ್ಯಕ್ಕೆ ಕವಚವಾದ ಧರ್ಮವನ್ನು ಸತ್ಯರೂಪನಾದವನು ಉಳಿಸುತ್ತಾನೆ. ಧರ್ಮಕ್ಕೆ ಬಂದ ಮುಸುಕನ್ನು ತೆಗೆಯಲು ಅವನೇ ಯತ್ನಿಸುತ್ತಾನೆ. ಭಗವಂತನ ಬಳಿಯಿದ್ದ ಜೀವ, ಇಂದ್ರಿಯಗಳ ಕೈಗೆ ಸಿಕ್ಕಿಹಾಕಿಕೊಂಡು ಬಿದ್ದಿದೆ. ಈ ರೀತಿ ಬಿದ್ದಿದ್ದನ್ನು ಮೆಲಕ್ಕೆತ್ತುವುದೇ ಧರ್ಮ". "ಬಿದ್ದವನನ್ನು, ಬೀಳುತ್ತಿರುವವನನ್ನು, ಬೀಳುವವನನ್ನು ಮೇಲೆತ್ತುವುದೇ ಧರ್ಮ" ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ..


ನಿರಂತರವಾಗಿ ಭಗವಂತನ ಸ್ಮರಣೆಯಿಂದ, ಸಜ್ಜನರ ಸಹವಾಸದಿಂದ ಸಂಸ್ಕಾರಿಗಳಾಗಿದ್ದರೆ, ಅದು ಎಂದೆಂದಿಗೂ ನಮ್ಮ ಜೊತೆಯಿದ್ದು ಬೀಳದಂತೆ ರಕ್ಷಿಸುತ್ತದೆ. ಅಂತಹ ಜ್ಞಾನೀ ಜನರ ಮಾರ್ಗದಲ್ಲಿ ಹೆಜ್ಜೆ ಹಾಕೋಣ.


ಸೂಚನೆ : 12/08/2023 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.