Thursday, August 3, 2023

ನಮ್ಮ ದೇಹದ ಬಗ್ಗೆ ನಮಗೆಷ್ಟು ಗೊತ್ತು? (Namma Dehada Bagge Namagestu Gottu?)

ಲೇಖಕರು: ಶ್ರೀ ಜಿ ನಾಗರಾಜ 
(ಪ್ರತಿಕ್ರಿಯಿಸಿರಿ lekhana@ayvm.in)


      

 ಇಂದಿನ ನಮ್ಮ ಲೋಕಾರೂಢಿಯ ಜೀವನವನ್ನು ಗಮನಿಸಿದರೆ ನಾವು ಮಾನವ ದೇಹವನ್ನು ಹೇಗೆ ಬಳಸಿಕೊಳ್ಳುತ್ತಿದ್ದೇವೆ? ಅದರ ಬಗ್ಗೆ ಯಾವ ಅಭಿಪ್ರಾಯವನ್ನು ಹೊಂದಿದ್ದೇವೆ? ಎಂದು ಕೇಳಿದರೆ ಅದನ್ನು ಎರಡಾಗಿ ವಿಭಾಗ ಮಾಡಿಕೊಳ್ಳಬಹುದು, ಮೊದಲನೆಯದಾಗಿ ಅದರ ಬಗ್ಗೆ ಬೆಳೆದಿರುವ ವಿಜ್ಞಾನ  Anatomy, physiology ಮುಂತಾದವುಗಳಾಗಿ. ಮಾನವ ದೇಹದಲ್ಲಿ ಇಂತಿಂತಹ ಸಾಮಗ್ರಿಗಳಿವೆ ಅನ್ನುವ ನೇರದಲ್ಲಿ ದೇಹದ ಬಗ್ಗೆ ಕೆಲವು ನೋಟ ಇದೆ, ಉದಾಹರಣೆಗೆ blood circulation system ಇದೆ, nervous system ಇದೆ, skeletal system ಇದೆ ಇತ್ಯಾದಿಯಾಗಿ.ಇನ್ನು ದೈನಂದಿನ ಜೀವನದಲ್ಲಿ ನಾವು ಅದನ್ನ ಬಳಸಿಕೊಳ್ಳುವುದು ಅನ್ನುವುದರರ ಬಗ್ಗೆ ವಿಚಾರ ಮಾಡಿದರೆ ನಾವು ಇಂದ್ರಿಯ ಸುಖಕ್ಕಾಗಿ ಈ ದೇಹವನ್ನು ಬಳಸಿಕೊಳ್ಳುತ್ತಿದ್ದೇವೆ, ಹೇಗೆಂದರೆ ಏನಾದರೂ ಇಷ್ಟವಾಗಿರುವುದನ್ನು ತಿನ್ನುವುದು ಇಷ್ಟವಾಗಿರುವುದನ್ನು ಕೇಳುವುದು, ಇಷ್ಟವಾಗಿರುವುದನ್ನು ನೋಡುವುದು ಹೀಗೆ. ಆದರೆ ಇಷ್ಟೆಯೇ ಮಾನವ ದೇಹವನ್ನು ಪಡೆದುದರ ಪೂರ್ಣ ಪ್ರಯೋಜನ? ಮತ್ತು ನಾವು ಬೆಳೆಸಿಕೊಂಡಿರುವಂತಹ ಆಧುನಿಕ ವೈಜ್ಞಾನಿಕ ಪರಿಚಯ ಪೂರ್ಣವೇ? ಎಂದು ವಿಚಾರ ಮಾಡಿದರೆ ಹಾಗೇನಿಲ್ಲ. ಏಕೆಂದರೆ ಈ ಮಾನವ ದೇಹದಲ್ಲಿ ಏನೆಲ್ಲಾ ಇದೆ ಎಂದು ಗಮನಿಸಿದರೆ ಕೇವಲ ರಕ್ತ,ಮಾಂಸ,ಮೂಳೆ ಅಷ್ಟೇ ಅಲ್ಲದೆ ಇಲ್ಲೊಂದು ಮನಸ್ಸಿದೆ,ಇಲ್ಲೊಂದು ಬುದ್ಧಿ ಇದೆ ಮತ್ತು ಎಲ್ಲದಕ್ಕೂ ಮಿಗಿಲಾಗಿ ಒಂದು ಜೀವ ಇದೆ. ಯಾರಾದರೂ ಒಬ್ಬ ವ್ಯಕ್ತಿ ಸತ್ತಾಗ ಆ ವ್ಯಕ್ತಿಯ ದೇಹ ಅಲ್ಲೇ ಇರುತ್ತದೆ, ಆದರೂ ಆ ವ್ಯಕ್ತಿ ಇನ್ನಿಲ್ಲ ಎಂದು ವ್ಯವಹರಿಸುತ್ತೇವೆ. ಅಂದರೆ, ದೇಹಕ್ಕಿಂತ ಮಿಗಿಲಾದ ಇನ್ನೊಂದು ವಸ್ತು ದೇಹದಲ್ಲಿತ್ತು, ಅದು ದೇಹದಿಂದ ಹೊರಗೆ ಹೋದಾಗ ವ್ಯಕ್ತಿ ಇಲ್ಲ ಎಂದು ವ್ಯವಹರಿಸುತ್ತೇವೆ. ಸತ್ ಆದ ವಸ್ತು, ದೇಹದಲ್ಲಿ ಇತ್ತು, ಅದನ್ನೇ ಜೀವ ಎಂದು ಹೇಳುತ್ತಾರೆ, ಆ ಜೀವ ದೇಹದಿಂದ ಹೊರಟು ಹೋದಾಗ ಸತ್ತು ಹೋಯಿತು, ಸತ್ತು ಹೋದ  ಎನ್ನುವ ವ್ಯವಹಾರ ಬರುತ್ತದೆ. ಅಂದರೆ ಮಾನವ ದೇಹದ ಬಗ್ಗೆ ತಿಳಿದುಕೊಳ್ಳಬೇಕಾದರೆ ದೇಹ, ಮನಸ್ಸು, ಅಹಂಕಾರ, ಬುದ್ಧಿ, ಚಿತ್ತ, ಮತ್ತು ಜೀವ - ಇವುಗಳೆಲ್ಲದರ ಬಗೆಗೆ ತಿಳಿದರೆ ಅದನ್ನು ಮಾನವದೇಹದ ಬಗೆಗಿನ ಪೂರ್ಣ ಪರಿಚಯ ಎಂದು ಹೇಳಬಹುದು. ದೇಹದಲ್ಲಿರುವ ಈ ಎಲ್ಲವೂ ಸರಿಯಾದ ಬಳಕೆಗೆ ಬಂದಾಗ ದೇಹದ ಪ್ರಯೋಜನ ಪೂರ್ಣವಾಗುತ್ತದೆ.


 ಶ್ರೀರಂಗ ಮಹಾಗುರುಗಳು ಒಂದು ನೋಟವನ್ನು ಕೊಟ್ಟಿದ್ದರು, ''ಯಾವುದೇ ಒಂದು ವಸ್ತುವನ್ನು ಉಪಯೋಗಿಸಬೇಕಾದರೆ ಆ ವಸ್ತುವನ್ನು ವಿನ್ಯಾಸ ಮಾಡಿ,ಅದನ್ನು ತಯಾರಿಸಿದವನು ಯಾವ ಅಭಿಪ್ರಾಯದಿಂದ ಅದನ್ನು ತಯಾರಿಸಿದ್ದಾನೆಯೋ ಅದಕ್ಕೆ ಅನುಗುಣವಾಗಿ ಅದನ್ನು ಉಪಯೋಗಿಸಿಕೊಂಡರೆ ಆಗ ಅದು ಅದರ ಸರಿಯಾದ ಉಪಯೋಗವಾಗುತ್ತದೆಯಪ್ಪ" ಎಂಬುದಾಗಿ. ಉದಾಹರಣೆಗೆ ಒಂದು ಮೊಬೈಲ್ ಫೋನನ್ನು ನಾವು  Call ಮಾಡುವುದಕ್ಕೆ ಹಾಗೂ text ಮಾಡುವುದಕ್ಕೆ ಉಪಯೋಗಿಸಿಕೊಂಡರೆ ಸರಿಯಾದ ಉಪಯೋಗವಾಗುತ್ತದೆ, ಅದನ್ನು ಬಿಟ್ಟು ಆ ವಸ್ತುವನ್ನು ಇನ್ನೊಬ್ಬರ ಮೇಲೆ ಬಿಸಾಕಿ ಅವರಿಗೆ ಏಟನ್ನು ಉಂಟುಮಾಡಲು ಉಪಯೋಗಿಸಿಕೊಂಡರೆ ಅದು ಅದರ ಸರಿಯಾದ ಉಪಯೋಗವಾಗುತ್ತದೆಯೇ? ಇಲ್ಲ. ಇದೇ  ರೀತಿಯಲ್ಲಿ ಮಾನವದೇಹವನ್ನು ವಿನ್ಯಾಸ ಮಾಡಿದವರು ಯಾರು? ಅವರ ಆಶಯವೇನು ಎಂದು ಕೇಳಿದರೆ, ಈ ದೇಹವನ್ನು ನಿರ್ಮಿಸಿದವರು ಬ್ರಹ್ಮ; ಆ ಬ್ರಹ್ಮನ ಆಶಯ ಏನಿದೆ ಎಂದರೆ, ಮಾನವರು ತಮ್ಮ ಹಿಂದೆ ಬೆಳಗುತ್ತಿರುವ ಜ್ಯೋತಿಯನ್ನು ಕಂಡು ಈ ಸಂಸಾರದಿಂದ ಮುಕ್ತಿಯನ್ನು ಪಡೆಯಲಿ,ಅದಕ್ಕಾಗಿಯೇ ಈ ದೇಹವನ್ನು ನಿರ್ಮಿಸಿದ್ದೇನೆ ಎನ್ನುವುದು.  ಸೃಷ್ಟಿಕರ್ತನ ಈ ಆಶಯವನ್ನು ಅರ್ಥ ಮಾಡಿಕೊಂಡು,ಅವನು ಇಟ್ಟಿರುವ ವಿನ್ಯಾಸವನ್ನು ಸದುಪಯೋಗಪಡಿಸಿಕೊಂಡು, ಆ ನಮ್ಮ ಮೂಲದಲ್ಲಿ ಬೆಳಗುತ್ತಿರುವಂತಹ ಜ್ಯೋತಿಯನ್ನು ಕಾಣುವುದಕ್ಕಾಗಿ ಮಾನವ ದೇಹವನ್ನು ಬಳಸಿದರೆ ಆಗ ಈ ದೇಹಯಂತ್ರವನ್ನು ವಿನ್ಯಾಸ ಮಾಡಿದವನ ವಿನ್ಯಾಸ ಹಾಗೂ ಆಶಯಕ್ಕೆ ತಕ್ಕಂತೆ ಬಳಸಿಕೊಂಡ ಹಾಗಾಗುತ್ತದೆ. ನಾವು ದೇಹಯಂತ್ರವನ್ನು ಬಳಸಿಕೊಂಡು ಭಗವಂತನನ್ನು ಕಾಣುವುದಕ್ಕೆ ಹೇಗೆ ಸಾಧ್ಯ? ಮತ್ತು ಈ ನೇರದಲ್ಲಿ ನಮಗೆ ದೇಹ ಯಂತ್ರದ ಬಗ್ಗೆ ಯಾವ ರೀತಿಯ ಪರಿಚಯ ಬೇಕಾಗಿದೆ ಎಂದು ಕೇಳಿದರೆ, ಅದಕ್ಕೆ ನಮಗೆ ಮಹರ್ಷಿಗಳು ಕೊಟ್ಟಿರುವ ನೋಟದಲ್ಲಿ ಉತ್ತರ ಸಿಗುತ್ತದೆ. ತಪಸ್ಯೆಯ ಮೂಲಕ ಮಹರ್ಷಿಗಳು ಈ ಮಾನವ ದೇಹದಲ್ಲಿ ಏನೇನಿದೆ ಎಂಬುದನ್ನು ತಮ್ಮೊಳಗೆ ಕಂಡುಕೊಂಡು ಅವರು ದೇಹದಲ್ಲಿರುವ elements ಅಥವಾ ತತ್ವಗಳೆಷ್ಟು ಮತ್ತು ಅವು ಯಾವುವು ಎನ್ನುವುದನ್ನು ವಿಸ್ತಾರವಾಗಿ ನಿರೂಪಿಸಿದ್ದಾರೆ. ಈ elements ಅಥವಾ ತತ್ವಗಳು 26; ಯಾವುವೆಂದರೆ -  ಪೃಥ್ವಿ,ಅಪ್,ತೇಜಸ್,ವಾಯು ಮತ್ತು ಆಕಾಶ ಎನ್ನುವ ಪಂಚಭೂತಗಳಿವೆ(5), ಶಬ್ದ,ರಸ,ರೂಪ ಗಂಧ, ಮತ್ತು ಸ್ಪರ್ಶ ಎಂಬ (5)ಪಂಚತನ್ಮಾತ್ರೆಗಳಿವೆ,  ವಾಕ್, ಪಾದ, ಪಾಯು ಪಾಣಿ, ಹಾಗೂ ಉಪಸ್ಥ ಎಂಬುದಾಗಿ ಪಂಚ (5)ಕರ್ಮೇಂದ್ರಿಯಗಳಿವೆ. ಕಣ್ಣು, ಕಿವಿ,ಮೂಗು,ನಾಲಿಗೆ ಮತ್ತು ಚರ್ಮ(5) ಇವು ಜ್ಞಾನೇಂದ್ರಿಯಗಳು. ಇವೆಲ್ಲ ಸೇರಿ 20 ತತ್ವಗಳು ಆಗುತ್ತವೆ. ಇವೆಲ್ಲದರ ಹಿಂದೆ ಮನಸ್ಸು,ಬುದ್ಧಿ, ಅಹಂಕಾರ ಮತ್ತು ಚಿತ್ತ ಎಂಬುದಾಗಿ ಇವೆ, ಇವನ್ನು ಅಂತ:ಕರಣಗಳು ಎಂದು ಕರೆಯುತ್ತಾರೆ. ಈ 24 ತತ್ವಗಳು ಒಟ್ಟಿನಲ್ಲಿ ಪ್ರಕೃತಿ ಎಂದು ಆಗಿದೆ. ಇವುಗಳ ಹಿಂದೆ ಜೀವ ಇದ್ದಾನೆ ಮತ್ತು ಅವನಿಗೂ ಹಿಂದೆ ಪರಮಾತ್ಮನೂ ಇದ್ದಾನೆ. ಇವಿಷ್ಟೂ ಅಂದರೆ ಒಟ್ಟು 26 ತತ್ವಗಳೂ ಸೇರಿಯೇ ಈ ಮಾನವ ದೇಹ ಎಂಬುದಾಗಿ ಆಗಿದೆ. 


ಹಾಗಿದ್ದರೆ ಪ್ರತಿಯೊಂದು ದೇಹದಲ್ಲಿಯೂ ಭಗವಂತ ಇದ್ದಾನೆಯೇ? ಎಂದರೆ ಖಂಡಿತವಾಗಿಯೂ, ಇದ್ದಾನೆ. ಏಕೆಂದರೆ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ 

ಈಶ್ವರಸ್ಸರ್ವಭೂತಾನಾಂ| ಹೃದ್ದೇಶೇರ್ಜುನ ತಿಷ್ಠತಿ l

ಭ್ರಾಮಯನ್ ಸರ್ವಭೂತಾನಿ| ಯಂತ್ರರೂಢಾನಿ ಮಾಯಯಾ ll 


ಎಂಬುದಾಗಿ ಹೇಳಿದ್ದಾನೆ ಅಂದರೆ ಅವನೇ ಈ ದೇಹದಲ್ಲಿ ಕುಳಿತುಕೊಂಡು ನಮ್ಮನ್ನೆಲ್ಲಾ ಆಡಿಸುತ್ತಿದ್ದಾನೆ. ಎಂದರೆ ನಮ್ಮ ದೇಹದಲ್ಲಿ ಒಂದು ಮೆಕ್ಯಾನಿಸಮ್ ಇಟ್ಟು ಆ ಮೆಕ್ಯಾನಿಸಮ್ ಅನ್ನು ಭಗವಂತ ಇಲ್ಲಿ ಇಟ್ಟು ಆಪರೇಟ್ ಮಾಡುತ್ತಿದ್ದಾನೆ ಮತ್ತು ನಮ್ಮ ಇಚ್ಛೆಯಂತೆ ಅದನ್ನು ನಡೆಸುತ್ತಿದ್ದಾನೆ. ಈ ಜೀವಕ್ಕೆ ತನ್ನ ಕರ್ಮಫಲದ ಅನುಗುಣವಾಗಿ ಎಷ್ಟು ಸ್ವಾತಂತ್ರವಿದೆಯೋ ಅಷ್ಟು ಸ್ವಾತಂತ್ರದಲ್ಲಿ ಈ ಜೀವದ ಇಚ್ಚೆಗೆ ಅನುಗುಣವಾಗಿ ಭಗವಂತ ಈ ದೇಹವೆಂಬ ರಥವನ್ನು ನಡೆಸಿಕೊಂಡು ಹೋಗುತ್ತಾ ಇರುತ್ತಾನೆ. ಹೀಗಾಗಿ ಈ ದೇಹದಲ್ಲಿ ಭಗವಂತನಿದ್ದಾನೆ, ಜೀವ ಇದೆ ಮತ್ತು ಈ ಪ್ರಕೃತಿ ಅನ್ನುವುದು ಇದೆ ಅನ್ನುವ ನೋಟವನ್ನು ಮಹರ್ಷಿಗಳು ಕೊಟ್ಟಿದ್ದಾರೆ. ಆಧುನಿಕವಾದ ಮೆಡಿಕಲ್ ಸೈನ್ಸ್  ದೇಹದ ಬಗ್ಗೆ ಸ್ಥೂಲವಾದ ನೋಟವನ್ನು ಮಾತ್ರ ಕೊಡುತ್ತದೆ, ಇದಕ್ಕಿಂತ ವಿಭಿನ್ನವಾದ ನೋಟವನ್ನು ನಮ್ಮ ಮಹರ್ಷಿಗಳು ಕೊಟ್ಟಿದ್ದಾರೆ. ಈ ನೋಟದ ಸಹಾಯದಿಂದ ನಾವು ಲೌಕಿಕ ಜೀವನ ಅಥವಾ ಇಂದ್ರಿಯಾವಲಂಬೀ ಜೀವನವನ್ನು ಮಾಡುವುದಲ್ಲದೇ ಆತ್ಮ ಸುಖವನ್ನೂ ಅನುಭವಿಸಿದರೆ ಮಾತ್ರ ಈ ಮಾನವ ದೇಹದ ಉಪಯೋಗ ಪೂರ್ಣವಾಗುತ್ತದೆ, ನಾವು ಪೂರ್ಣ ಜೀವನ ಮಾಡಿದ ಹಾಗೆ ಆಗುತ್ತದೆ ಎನ್ನುವುದು ಮಹರ್ಷಿಗಳ ಅಭಿಪ್ರಾಯವಾಗಿದೆ. 


ಹೀಗೆ, ಅನೇಕ ದೃಷ್ಟಿಕೋಣಗಳಿಂದ ನೋಡಿದಾಗಲೂ ನಮ್ಮ ದೇಹದ ಹಿಂಬದಿಯಲ್ಲಿರುವ ಜೀವ ಮತ್ತು ಭಗವಂತನ ಸಾಕ್ಷಾತ್ಕಾರ ಮಾಡಿಕೊಂಡಾಗಲೇ ನಮಗೆ ನಮ್ಮ ಪರಿಚಯ ಪೂರ್ಣವಾಗುವುದು ಮತ್ತು ಜೀವನ ಸಾರ್ಥಕವಾಗುವುದು. ಈ ದಿಕ್ಕಿನಲ್ಲಿ ಪ್ರಯತ್ನ ಪಟ್ಟು ಜೀವನವನ್ನು ಸಾರ್ಥಕ ಮಾಡಿಕೊಳ್ಳೋಣ.


ಸೂಚನೆ: 3/8/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ಯಲ್ಲಿ ಪ್ರಕಟವಾಗಿದೆ.