ಪ್ರಶ್ನೆ – 45 ಯಶಸ್ಸಿಗೆ ಕಾರಣವಾದುದು ಯಾವುದು ?
ಉತ್ತರ - ದಾನ.
ಈ ಸೃಷ್ಟಿಯಲ್ಲಿ ಪ್ರತಿಯೊಂದೂ ಕಾರ್ಯಕಾರಣಭಾವದಿಂದ ಕೂಡಿರುತ್ತದೆ. ಕಾರ್ಯದಿಂದ ಕಾರಣವನ್ನು, ಕಾರಣದಿಂದ ಕಾರ್ಯವನ್ನು ಊಹಿಸುವಂತಿದ್ದರೆ ಆಲ್ಲಿ ಕಾರ್ಯಕಾರಣಗಳ ನಡುವೆ ಅಂತಹ ಅವಿನಾಭಾವ ಸಂಬಂಧವಿದೆ ಎನ್ನಬಹುದು. ಅಂತಹ ಕಾರಣವು ಕಾರ್ಯಸಾಧಕವಾಗುವುದರಲ್ಲಿ ಸಂದೇಹವಿಲ್ಲ. ಇಲ್ಲಿ ಯಕ್ಷನು ಕೇಳುವ ಪ್ರಶ್ನೆಯಲ್ಲಿ ಅಂತಹ ಕಾರ್ಯಕಾರಣಭಾವ ಕಂಡುಬರುತ್ತಿದೆ. ಅದೇ ಆಶಯವನ್ನು ಬಿತ್ತರಿಸುವ ಪ್ರಶ್ನೆ ಇದಾಗಿದೆ - ಯಶಸ್ಸಿಗೆ ಕಾರಣ ಯಾವುದು? ಎಂದು. ದಾನವೇ ಯಶಸ್ಸಿಗೆ ಕಾರಣ. ದಾನವೆಂದರೇನು? ಯಾವ ರೀತಿಯ ದಾನದಿಂದ ಯಶಸ್ಸು ಬರುತ್ತದೆ? ಯಶಸ್ಸಿನ ಲಕ್ಷಣವೇನು?
ಯಶಸ್ಸು ಅಥವಾ ಕೀರ್ತಿಯನ್ನು ಪ್ರತಿಯೊಬ್ಬನೂ ಬಯಸುತ್ತಾನೆ. ಯಶಸ್ಸಿಗಾಗಿಯೆ ಕೆಲವರು ಕೆಲಸವನ್ನು ಮಾಡುತ್ತಾರೆ. ಮಾಡುವ ಕೆಲಸದಿಂದ ಯಶಸ್ಸು ಬರುವುದುಂಟು. ಇವೆರಡರಲ್ಲಿ ಕೆಲಸದಿಂದ ಬರುವ ಯಶಸ್ಸಿಗೆ ಹೆಚ್ಚಿನ ಬೆಲೆ ಉಂಟು. ಕೀರ್ತಿಕಾಮನೆಯಿಂದ ಮಾಡುವ ಕರ್ಮವು ಕಾಮ್ಯಕರ್ಮವಾಗುತ್ತದೆ. ಫಲಾಪೇಕ್ಷೆಯಿಲ್ಲದೇ ಮಾಡುವ ಕರ್ಮವೇ ನಿಜವಾದ ಕರ್ಮಯೋಗ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಉಪದೇಶಿಸಿದ್ದಾನೆ. ಆದ್ದರಿಂದ ಫಲೋದ್ದೇಶ್ಯಕವಾದ ಕರ್ಮವು ಬಂಧನವನ್ನು ಉಂಟುಮಾಡಿದರೆ ಫಲದಲ್ಲಿ ಅಧಿಕಾರವಿಲ್ಲದೇ ಮಾಡುವ ಕರ್ಮವು ಮುಕ್ತಿಗೆ ಸಾಧನವಾಗುತ್ತದೆ. ಮುಕ್ತಿಗೆ ಸಾಧನವಾದ ಕರ್ಮಗಳು ಅನೇಕ. ಅವುಗಳಲ್ಲಿ ದಾನವು ಅತ್ಯಂತ ಶ್ರೇಷ್ಠವಾದ ಕರ್ಮ ಎಂಬುದಾಗಿ ಪ್ರಶಂಸೆ ಮಾಡಿದ್ದಾರೆ. ನೂರಕ್ಕೆ ಒಬ್ಬ ಶೂರ ಸಿಗಬಹುದು, ಸಾವಿರಕ್ಕೆ ಒಬ್ಬ ಪಂಡಿತ ಸಿಗಬಹುದು, ಲಕ್ಷಕ್ಕೆ ಒಬ್ಬ ವಾಗ್ಮಿ ಸಿಗಬಹುದು, ಆದರೆ ದಾನಿ ಸಿಗಬಹುದೇ? ಎಂಬುದಾಗಿ ಒಂದು ಸುಭಾಷಿತ ದಾನಿಯ ಮಹತ್ತ್ವವನ್ನು ಸಾರಿದೆ. ಆದ್ದರಿಂದ ದಾನಕ್ಕೆ ಅಂತಹ ಮುಖ್ಯವಾದ ಸ್ಥಾನವಿದೆ. ಆದ್ದರಿಂದ ಅದೊಂದು ಶ್ರೇಷ್ಠವಾದ ಕಾರ್ಯ.
ದಾನವೆಂಬುದು ಸೃಷ್ಟಿಯ ಸಹಜವಾದ ಕ್ರಿಯೆ ಎಂದು ಶ್ರೀರಂಗಮಹಾಗುರುಗಳು ಹೀಗೊಂದು ಉದಾಹರಣೆಯನ್ನು ಕೊಟ್ಟಿದ್ದರು - "ದಾನ ಪ್ರತಿಗ್ರಹಗಳ ಪ್ರಿನ್ಸಿಪಲ್ ಮೇಲೆಯೇ ಸೃಷ್ಟಿಯು ನಡೆದು ನಿಂತು ಮಂದುವರಿಯುತ್ತಿದೆ. ಸೃಷ್ಟಿಕರ್ತನು ತನ್ನ ಸಂಪತ್ತುಗಳನ್ನು ತನ್ನ ಸಂತಾನಕ್ಕೆ ದಾನ ಮಾಡದಿದ್ದರೆ ಸೃಷ್ಟಿಯು ಹೇಗೆ ಮುಂದುವರಿದೀತು? ತಂದೆತಾಯಿಗಳು ತಮ್ಮ ಶಾರೀರಿಕ, ಮಾನಸಿಕ, ಬೌದ್ಧಿಕ ಆಧ್ಯಾತ್ಮಿಕ ಸ್ವತ್ತುಗಳನ್ನು ತಮ್ಮ ಸಂತಾನಕ್ಕೆ ದಾನ ಮಾಡುತ್ತಾರೆ. ಅವು ತಮ್ಮ ಮುಂದಿನ ಪೀಳಿಗೆಗೆ, ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ದಾನ ಮಾಡಿದ. ಇದರ ಮೇಲೆಯೇ ಸೃಷ್ಟಿವ್ಯಾಪಾರವೆಲ್ಲವೂ ನಿಂತಿದೆ. ದಾನ ಪ್ರತಿಗ್ರಹಗಳು ಸೃಷ್ಟಿಸಹಜವಾದ ಕ್ರಿಯೆಗಳು" ಎಂಬುದಾಗಿ ದಾನವು ಯಾವ ರೀತಿ ಸೃಷ್ಟಿಸಹಜವಾದದ್ದು ಎಂಬುದನ್ನು ವಿವರಿಸಿದ್ದರು. ಯಾವ ಯಾವುದೋ ಕರ್ಮದಿಂದ ಬಂದ ಯಶಸ್ಸಿಗಿಂತ ದಾನದಿಂದ ಬಂದ ಯಶಸ್ಸಿಗೆ ಅಷ್ಟೊಂದು ಹಿರಿತನವಿದೆ. ಹಾಗಾಗಿ ಹಿರಿಯರು 'ಯಶಸ್ವೀ ಭವ' ಎಂದು ಆಶೀರ್ವಾದವನ್ನು ಮಾಡುತ್ತಾರೆ. ಆಯುಷ್ಯಕ್ಕೆ ಎಷ್ಟು ಬೆಲೆ ಇದೆಯೋ ಅಷ್ಟೇ ಬೆಲೆಯನ್ನು ಯಶಸ್ಸಿಗೂ ಕೊಟ್ಟಿದ್ದಾರೆ ನಮ್ಮ ಪೂರ್ವಜರು. ಯಶಸ್ಸು ಮತ್ತು ಅದರ ಪ್ರಾಪ್ತಿಯ ಬಗ್ಗೆ ವೇದಗಳಲ್ಲಿ ಹೇರಳವಾದ ಮಂತ್ರಗಳೂ ಸಿಗುತ್ತವೆ. ಆದ್ದರಿಂದ ಸತ್ಕಾರಣದಿಂದ ಸತ್ಕಾರ್ಯವೇ ಆಗುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇದೇ ಆಶಯವನ್ನು ಜನಮಾನಸಕ್ಕೆ ತಲುಪಿಸುವ ದೃಷ್ಟಿಯಿಂದ ಯಕ್ಷನು ಧರ್ಮರಾಜನಿಗೆ ಯಶಸ್ಸು ಮತ್ತು ದಾನದ ಮಹತ್ತ್ವವನ್ನು ತಿಳಿಸಲು ಈ ಪ್ರಶ್ನೆಯನ್ನು ಕೇಳಿದ್ದಾನೆ. ಅದಕ್ಕೆ ಧರ್ಮಜನ ಉತ್ತರವೂ ಸಾಂಗತ್ಯವಾದುದು.
ಸೂಚನೆ : 17/7/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.