Sunday, July 9, 2023

ಯಕ್ಷ ಪ್ರಶ್ನೆ 45 (Yaksha prashne 45)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)
ಪ್ರಶ್ನೆ– 44  ಧರ್ಮಕ್ಕೆ ಅವಿರೋಧ ಪದ ಯಾವುದು ?

ಉತ್ತರ - ದಾಕ್ಷ್ಯ. 

ಈ ಹಿಂದೆ ವಿವರಿಸಿದ ಧರ್ಮ ಎಂಬ ಪದವನ್ನು ಇಲ್ಲಿ ಅನುಸಂಧಾನ ಮಾಡಿಕೊಂಡು ಈ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಬೇಕು. ಧರ್ಮ ಎಂಬುದು ಒಂದು ಕಂಡೀಶನ್-ಸ್ಥಿತಿ ಎಂಬ ವಿವರಣೆಯನ್ನು ಶ್ರೀರಂಗ ಮಹಾಗುರುಗಳು ನೀಡುತ್ತಿರುವುದನ್ನು ಇಲ್ಲಿ ಸ್ಮರಿಸಿಕೊಂಡರೆ ಮಾತ್ರ ಈ ವಿಷಯವನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಸಾಧ್ಯ. ಧರ್ಮವನ್ನು ಸಾಧಿಸಲು ಬೇಕಾದ ಪದ ಯಾವುದು ? ಎಂಬುದು ಯಕ್ಷನ ಪ್ರಶ್ನೆಯಾಗಿದೆ. ಅದಕ್ಕೆ ಧರ್ಮಜನ ಉತ್ತರ 'ದಾಕ್ಷ್ಯ' ಎಂದು. 

ಸಂಸ್ಕೃತದಲ್ಲಿ ಪದ ಎಂಬ ಶಬ್ದಕ್ಕೆ ಅನೇಕ ಅರ್ಥಗಳಿವೆ. ಪದ ಎಂದರೆ ಸ್ಥಾನ, ವಸ್ತು ಅಥವಾ ಪದಾರ್ಥವನ್ನು ತಿಳಿಸುವ ಶಬ್ದ, ಕಾಲು ಎಂಬೆಲ್ಲಾ ಅರ್ಥಗಳಿವೆ. ಧರ್ಮಕ್ಕೆ ದಾಕ್ಷ್ಯ ಎಂಬುದು ಹೇಗೆ ಪದವಾಗುತ್ತದೆ? ಅಂದರೆ ಧರ್ಮ ಎಂಬುದೇನು? ಇದು ಸ್ಥಾನವೋ? ಅಥವಾ ಶಬ್ದವೋ ? ಅಥವಾ ಪಾದವೋ? ಇಲ್ಲಿ ನಾವು ಸ್ಥಾನ ಮತ್ತು ಕಾಲು ಎಂಬ ಎರಡೂ ಅರ್ಥವನ್ನೂ ಸ್ವೀಕರಿಸಬಹುದು. ಪ್ರತಿಯೊಂದು ವಸ್ತುವೂ ಅದರದರ ಕಂಡೀಶನ್ನಲ್ಲಿ ಇದ್ದರೆ ಮಾತ್ರ ಅದು ಉದ್ದಿಷ್ಟವಾದ ಕಾರ್ಯವನ್ನು ಮಾಡಲು ಸಾಧ್ಯ . ಕಣ್ಣು ನೋಡುವ ಕಂಡೀಶನ್ನಲ್ಲಿದ್ದಾಗ ಮಾತ್ರ ಕಣ್ಣಿನಿಂದ ನೋಡುವ ಕಾರ್ಯ ಸಾಧ್ಯ. ಕಣ್ಣು ತನ್ನ ಸ್ವಭಾವವನ್ನು ಯಾವುದೋ ಅನಾರೋಗ್ಯದಿಂದಲೋ ಅಥವಾ ಯಾವುದೋ ಬಾಧೆಯಿಂದಲೋ ಕಳೆದುಕೊಂಡಿದ್ದರೆ, ಅದು ನೋಡಲು ಸಾಧನವಾಗುವುದಿಲ್ಲ. ಆದ್ದರಿಂದ ಇಲ್ಲಿ ಧರ್ಮ ಎಂಬ ಪದವು ಇದೇ ಅರ್ಥವನ್ನು ಕೊಡುವ ಪದವಾಗಿದೆ. ಶರೀರಧರ್ಮ, ಮನೋಧರ್ಮ, ಇಂದ್ರಿಯಧರ್ಮ ಇವೆಲ್ಲವನ್ನು ಸಂಪಾದಿಸಿಕೊಂಡಾಗ ಈ ಶರೀರದಲ್ಲಿ ಭಗವಂತನ ಸಾಕ್ಷಾತ್ಕಾರವನ್ನು ಪಡೆಯಲು ಸಾಧ್ಯ. ಇದೇ ಪ್ರತಿ ಮಾನವನ ಉದ್ದೇಶವೂ ಆಗಿದೆ. ಅಂದರೆ ಇದನ್ನು ಸಂಪಾದಿಸಲು ದಾಕ್ಷ್ಯ ಬೇಕು. ಹಾಗಾದರೆ 'ದಾಕ್ಷ್ಯ' ಎಂದರೇನು? 

ದಕ್ಷ ಎಂದರೆ ಸಮರ್ಥ. ಯೋಗ್ಯತೆ. ಸಾಮರ್ಥ್ಯ ಅಥವಾ ಯೋಗ್ಯತೆಯನ್ನೇ 'ದಾಕ್ಷ್ಯ' ಎಂದು ಕರೆಯುತ್ತಾರೆ. ಧರ್ಮವನ್ನು ಸಾಧಿಸಲು ಪ್ರತಿಯೊಂದಕ್ಕೂ ಸಾಮರ್ಥ್ಯ ಅಥವಾ ಯೋಗ್ಯತೆ ಬೇಕು. ಹಿಂದಿನ ಉದಾಹರಣೆಯನ್ನೇ ತೆಗೆದುಕೊಂಡು ವಿಚಾರ ಮಾಡುವುದಾದರೆ ಕಣ್ಣಿಗೆ ನೋಡುವ ಸಾಮರ್ಥ್ಯ ಬೇಕು. ದಕ್ಷತೆ ಬೇಕು. ಕಣ್ಣು ನೋಡುವ ಧರ್ಮವನ್ನು ಪಡೆದುಕೊಂಡಾಗ ಅದು ನೋಡುವ ದಕ್ಷತೆಯನ್ನು ಸಂಪಾದಿಸುತ್ತದೆ. ಇದನ್ನೇ ಯಕ್ಷನು ಧರ್ಮಕ್ಕೆ ಅವಿರೋಧವಾದುದು ದಾಕ್ಷ್ಯ ಎಂಬ ಉತ್ತರವನ್ನು ಧರ್ಮರಾಜನಿಂದ ಪಡೆದ.    

ದಾಕ್ಷ್ಯ ಎಂಬ ಪದಕ್ಕೆ ಕೌಶಲ ಅಥವಾ ನಿಪುಣತೆ ಎಂಬ ಅರ್ಥವೂ ಇದೆ. ಮಾಡುವ ಕರ್ಮದಲ್ಲಿ ನೈಪುಣ್ಯವಿದ್ದರೇ ಕರ್ಮವು ಸಫಲವಾಗುತ್ತದೆ. 'ಯೋಗಃ ಕರ್ಮಸು ಕೌಶಲಮ್' ಎಂದು ಭಗವದ್ಗೀತೆಯಲ್ಲಿ ಹೇಳಿದೆ. ಮಾಡುವ ಕರ್ಮವು ನಿಯತ್ತಿನಿಂದ ಕೂಡಿರಬೇಕು. ಮಾಡುವ ಕರ್ಮವು ಮರ್ಮದಿಂದ ಕೂಡಿದ್ದರೆ ಆ ಕರ್ಮವು ಸಫಲತೆಯ ಲಕ್ಷಣವಾಗಿರುತ್ತದೆ. ಇಂತಹ ಕರ್ಮವೇ ಭಗವಂತನ ಸಾಕ್ಷಾತ್ಕಾರಕ್ಕೆ ಕಾರಣವಾಗಿ 'ಕರ್ಮಯೋಗ' ಎನಿಸಿಕೊಂಡು ದಾಕ್ಷ್ಯ ಎಂಬ ಪದಕ್ಕೆ ಅರ್ಥವಾಗುತ್ತದೆ.

ಸೂಚನೆ : 9
/7/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.