Saturday, May 20, 2023

ವಿಶ್ವಾಸಃ ಫಲದಾಯಕಃ (Visvasah Phaladayakah)


ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)



ನಂಬಿಕೆ ಎಂಬ ವಿಷಯ ಹೇಗೆ ಬಂತು? ಅದರ ಆವಶ್ಯಕತೆ ಇದೆಯೇ? ಈ ನಂಬಿಕೆಯಿಂದಲೇ ಭಾರತೀಯರು ಅಲಸರಾದರು? ಭಾರತೀಯರು ಇಷ್ಟು ಹಿಂದುಳಿಯಲು ಈ ನಂಬಿಕೆಯೇ ಕಾರಣ? ಕಣ್ಣಿಗೆ ಕಾಣದ, ಮನಸ್ಸಿಗೂ ತೋಚದ ವಿಷಯದ ಬಗ್ಗೆ ನಂಬಿಕೆಯಿಂದ ಏನು ಪ್ರಯೋಜನ? ಇವೆಲ್ಲಾ ಪ್ರಶ್ನೆಗಳು ಈ ನಂಬಿಕೆಯ ಬಗ್ಗೆ ಬಂತು. ಈ ವಿಷಯದಲ್ಲಿ ನಮ್ಮ ಹಿರಿಯರು ಯಾವ ರೀತಿ ಅಂದುಕೊಂಡಿದ್ದರು? ಈ ನಂಬಿಕೆಯೆಂಬ ವಿಷಯದಿಂದ ನಮಗಾದ ಪ್ರಯೋಜನವಾದರೂ ಏನು ಎಂಬ ವಿಚಾರವನ್ನು ಇಲ್ಲಿ ವಿಮರ್ಶಿಸೋಣ. 


ನಂಬಿಕೆ ಅಥವಾ ವಿಶ್ವಾಸ ಎಂಬುದು ಕಾಣದಿರುವ ವಿಷಯದ ಮೇಲೇ ಬಂದಿರುವಂಥದ್ದು. ಕಾಣುವಂತಹದ್ದಾದರೆ ನಂಬಿಕೆ ಬೇಕಾ ? ಉದಾಹರಣೆಗೆ 'ಇಲ್ಲಿ ದೀಪ ಇದೆ.' ಇಂಬುದಕ್ಕೆ ನಂಬಿಕೆ ಬೇಕೆ? ಕೆಲವೊಂದು ವಿಷಯ ಈಗ ಕಾಣದೆ ಇರಬಹುದು. ಆದರೆ ಯಾವಾಗಲೂ ಕಾಣುವುದೇ ಇಲ್ಲವೆಂದು ಹೇಳಲಾಗದು. ಈಗ ಸೆಕೆಯನ್ನು ಅನುಭವಿಸುತ್ತಿದ್ದೇವೆ. ಆದರೆ ಇದು ಶಾಶ್ವತವಲ್ಲ. ಮುಂದೊಂದು ದಿನ ವಾತಾವರಣ ಬದಲಾಗುತ್ತದೆ. ಹಾಗಾದರೆ ಕಾಣದೇ ಇರುವಂತಹದ್ದು ಯಾವುದು? ದೇವರು. ಭೌತಿಕವಾದ ಇಂದ್ರಿಯಗಳಿಗೆ ಮತ್ತು ಮನಸ್ಸಿಗೆ ಯಾವುದೇ ಕಾರಣಕ್ಕೂ ಕಾಣಲು ಸಾಧ್ಯವೇ ಇಲ್ಲದಿರುವಂತಹದ್ದು. ಪರಬ್ರಹ್ಮವೆಂಬ ವಿಷಯ ಮಾತ್ರ ಯಾವ ಕಾಲಕ್ಕೂ ಯಾವುದೇ ಕಾರಣಕ್ಕೂ ಗೋಚರಿಸುವುದೇ ಇಲ್ಲ. ಆದ್ದರಿಂದ ನಂಬಿಕೆಗೆ ವಿಷಯವಾದದ್ದು ಇದೇ ತಾನೆ! ಕೆಲವೊಮ್ಮೆ ಕಾಣುವ ವಿಷಯವನ್ನೇ ನಂಬುತ್ತೇವೆ ಅಂದಮೇಲೆ ಕಾಣದಿರುವುದಕ್ಕೆ ನಂಬಿಕೆ ಬೇಕಲ್ಲವೆ? ನಮಗೆ 'ಇವನು ತಂದೆ' ಎಂದು ಹೇಗೆ ತಿಳಿಯಿತು? ನಾವೇನೂ ನೋಡಲಿಲ್ಲ. ಅಮ್ಮ ಹೇಳಿದ್ದರಿಂದ ತಿಳಿಯಿತು. ಅಮ್ಮ 'ಇವನು ನಿನ್ನ ಅಪ್ಪ' ಎಂದು ಮತ್ತೆ ಮತ್ತೆ ಹೇಳಿಸಿ 'ಇವನೇ ಅಪ್ಪ' ಎಂದು ವಿಶ್ವಾಸಪಡುತ್ತೇವೆ. ನಮ್ಮ ಬೆನ್ನು ನಮಗೆ ಕಾಣುತ್ತದೆಯೇ? ನಮಗೆ ಬೆನ್ನು ಇಲ್ಲವೆಂದರೆ ನಾವು ನಂಬುತ್ತೇವೆಯೇ? 'ಕದಾಚಿತ್ ಕುಪಿತಂ ಮಿತ್ರಂ ಗುಪ್ತದೋಷಂ ಪ್ರಕಾಶಯೇತ್' ಎಂಬ ಮಾತಿದೆ. ಎಂತಹ ಮಿತ್ರನೇ ಆದರೂ ಕೋಪ ಬಂದರೆ ತನ್ನ ಮಿತ್ರನ ಗುಟ್ಟನ್ನು ಬಯಲು ಮಾಡಬಹುದು. ಹಾಗಾಗಿ ಯಾರಲ್ಲೂ ವಿಶ್ವಾಸಪಡುವುದು ಯೋಗ್ಯವಲ್ಲ. ಅದಕ್ಕೆ ಅತಿವಿಶ್ವಾಸ ಎಂದೂ ಕರೆಯುತ್ತಾರೆ. ವಿಶ್ವಾಸವು ವಿವೇಕದಿಂದ ಕೂಡಿರಬೇಕು. ಅದಿಲ್ಲದಿದ್ದರೆ ಅಪಾಯ ನಿಶ್ಚಿತ.


ಕೆಲವೊಮ್ಮೆ ನಂಬಿಕೆಯ ಹೆಸರಿನಲ್ಲಿ ಮೂಢನಂಬಿಕೆಯೂ ನಮ್ಮನ್ನು ಆವರಿಸುತ್ತದೆ. ಯಾವುದು ಮೂಢನಂಬಿಕೆ? ಎಂಬುದನ್ನು ತಿಳಿಯುವುದೂ ಅಷ್ಟೇ ಕರ್ತವ್ಯವೂ ಕೂಡ. ಯಾವುದು ಕಾರ್ಯಕಾರಣಬದ್ಧವಲ್ಲವೋ ಅಥವಾ ಯಾವುದು ವಿಜ್ಞಾನಬದ್ಧವಲ್ಲವೋ ಅಥವಾ ಯಾವುದು ಶಾಸ್ತ್ರನಿರ್ಣೀತವಲ್ಲವೋ ಅದನ್ನು ತಾನೇ ಮೌಢ್ಯ ಎಂದು ಕರೆಯಬೇಕು. ಶಾಸ್ತ್ರವೆಂದರೆ ವಿಜ್ಞಾನ. ಅಲ್ಲಿ ಪ್ರಣೀತವಾದುದು ಎಂದಿಗೂ ಮೌಢ್ಯವಾಗಲಾರದು. ಅದು ಮೌಢ್ಯವೆಂದು ಭಾವಿಸಿದರೆ ಶಾಸ್ತ್ರವನ್ನು ತಿಳಿಯಲು ನಾವು ಮೂಢರಾಗಿದ್ದೇವೆ ಎಂಬುದೇ ನಿಶ್ಚಯ.  


ಭಾರತೀಯ ಸಂಸ್ಕೃತಿ ನಿಂತಿರುವುದೇ ವಿಶ್ವಾಸದ ಮೇಲೆ. ಸಂಪ್ರದಾಯ-ಪರಂಪರೆ-ಪದ್ಧತಿ ಇವೆಲ್ಲಕ್ಕೂ ಅರ್ಥ ಬರಬೇಕಾದರೆ ಅಲ್ಲಿ ನಂಬಿಕೆ ಬೇಕು. ಕಣ್ಣಿಗೆ ಕಾಣುವ ವಿಷಯಕ್ಕೆ ನಂಬಿಕೆ ಬೇಕು. ಒಳ್ಳೆಯ ಫಸಲು ಬರಬಹುದು ಎಂಬ ನಂಬಿಕೆಯಿಂದ ತಾನೆ ಬೀಜ ಬಿತ್ತುವುದು! ಪ್ರಕೃತಿವಿಕೋಪ ಬಂದರೆ?? ಯಾವುದೋ ಈತಿ ಬಾಧೆಗಳು ಬಂದು ಬೆಳೆ ನಾಶವಾಗಲೂ ಬಹುದು. ಭವಿಷ್ಯತ್ತಿನ ಆಪತ್ತಿಗೆ ಆಗುತ್ತದೆ ಎಂದು ಸಂಪತ್ತನ್ನು ರಕ್ಷಿಸುತ್ತೇವೆ. ಬ್ಯಾಂಕಿನಲ್ಲಿ ಶಾಶ್ವತನಿಧಿಯನ್ನು ಸ್ಥಾಪಿಸುತ್ತೇವೆ. ಇಲ್ಲಿ ನಂಬಿಕೆ ಮಾತ್ರ ವಿಷಯವಲ್ಲವೇ? ಬ್ಯಾಂಕು ಇರುತ್ತದೆ ಎಂಬ ಬಗ್ಗೆ ಯಾವ ಗ್ಯಾರಂಟಿ? ಮುಪ್ಪಿನಲ್ಲಿ ನಮಗೆ ಸಹಾಯವಾಗಬಹುದು ಎಂದು ಮಕ್ಕಳನ್ನು ನೋಡಿಕೊಳ್ಳುತ್ತೇವೆ. ಅವರು ಮುಪ್ಪಿನಲ್ಲ ಆಗಿಬರುತ್ತಾರೆ ಎಂಬುದಕ್ಕೆ ಯಾವ ಗ್ಯಾರಂಟಿ ಹೇಳಿ? ಇಲ್ಲಿ ನಮ್ಮ ಕರ್ತವ್ಯ ಎಂದು ಭಾವಿಸಬೇಕಷ್ಟೇ! ಯಾವುದೋ ರೋಗಶಮನಕ್ಕಾಗಿ ಶಾಂತಿಯಾಗವನ್ನು ಮಾಡುತ್ತೇವೆ. ಯಾವುದೋ ರೋಗನಿವಾರಣೆಗೋಸ್ಕರ ಔಷಧವನ್ನು ಸ್ವೀಕರಿಸುತ್ತೇವೆ. ಈ ಬಾಳಿನ ಉದ್ದಕ್ಕೂ ಸಂಗಾತಿಯಾಗುವಳು ಎಂದು ಕನ್ಯೆಯ ಕರಪಿಡಿಯುತ್ತೇವೆ. ಇವೆಲ್ಲವೂ ನಂಬಿಕೆಯ ಮೇಲೇ ನಿಂತಿವೆಯಲ್ಲವೇ? ಇವೆಲ್ಲವೂ ನಮ್ಮೆದುರಿಗೆ ಬಂದುನಿಲ್ಲುವ ಸಂಗತಿಗಳು. ಆದರೆ ಕಾಣದ ಸಂಗತಿಗಳಿಗೆ ವಿಶ್ವಾಸವೇ ಬೇಕಷ್ಟೇ. ಇಂತಹ ನಂಬಿಕೆಯ ಭವನದಲ್ಲಿ ತಂಪಾಗಿ ಬಾಳು ಸಾಗಿಸಿ ಬಾಳನ್ನು ಹಸನ ಮಾಡಿಕೊಂಡರು ನಮ್ಮ ಹಿರಿಯರು. ಅಸಾಧ್ಯವಾದುದನ್ನೇ ಸಾಧಿಸಿದರು. ತಪಸ್ಸನ್ನು ಆಚರಿಸಿದರು. ದೇವರನ್ನು ಕಂಡರು. ಶಾಂತಿಯನ್ನು ಅನುಭವಿಸಿದರು. ಲೋಕಕ್ಕೆಲ್ಲ ತಂಪಿನ ಅನುಭವವನ್ನು ಹಂಚಿದರು. ಇಂತಹ ಆಪ್ತರನ್ನು ನಂಬಿದರೆ ನಮ್ಮ ಜೀವನವನ್ನು ಹಸನಾಗಿಸಿಕೊಳ್ಳಬಹುದು. ನಾವೂ ನಮ್ಮ ಬಾಳಿನಲ್ಲಿ ಹಿರಿಯ ಸಾಧನೆಯನ್ನು ಮಾಡಬಹುದು. ಅಂದರೆ ಒಟ್ಟಾರೆ ಹೇಳುವುದಾದರೆ "ವಿಶ್ವಾಸಃ ಫಲದಾಯಕಃ"  ಅಷ್ಟೇ!


ಸೂಚನೆ: 18/05/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.