Thursday, April 13, 2023

ಭಗವಂತನಲ್ಲಿ ಯಾವ ವರವನ್ನು ಬೇಡಬೇಕು? (Bhagavantanalli Yava Varavannu bedabeku?)

ಲೇಖಕರು: ವಾದಿರಾಜ. ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in)




ನಾವೆಲ್ಲಾ ಚಿಕ್ಕವರಾಗಿದ್ದಾಗ ಪ್ರತಿರಾತ್ರಿ ಕಥೆ ಕೇಳಿಯೇ ಮಲಗುತ್ತಿದ್ದೆವು. ಆ ದಿನಗಳಲ್ಲಿ ನಮ್ಮ ಅಜ್ಜಿ ಹೇಳಿದ ಕಥೆಯೊಂದು ಹೀಗಿದೆ.  ಒಂದು ಊರಿನಲ್ಲಿ ಒಬ್ಬ ಹುಡುಗನಿದ್ದನು. ಅವನಿಗೆ ದೇವರಲ್ಲಿ ಅಪಾರವಾದ ನಂಬಿಕೆ. ದೃಢಭಕ್ತಿಯಿಂದ ದೇವರ ಪೂಜೆ ಮಾಡುತ್ತಿದ್ದನು. ಅವನಿಗೆ ಒಂದು ದಿನ ದೇವರು ಪ್ರತ್ಯಕ್ಷನಾಗಿ 'ನಿನಗೆ ಏನು ವರ ಬೇಕೋ ಕೇಳಿಕೋ' ಎಂದನು. ಆ ಬಾಲಕನು 'ನಾನು ಹೇಳಿದ್ದು ನಡೆಯಲಿ!' ಎಂದು ಕೇಳಿಕೊಂಡನು. ಭಗವಂತನು "ತಥಾಸ್ತು" ಎಂದನು. 


ಹಲವು ದಿನಗಳ ಕಾಲ ಅವನು ಆ ವರವನ್ನು ಉಪಯೋಗಿಸಲಿಲ್ಲ. ಒಮ್ಮೆ ಇವನು ತಪ್ಪೊಂದನ್ನು ಮಾಡುತ್ತಿದ್ದ. ಅದನ್ನು ನೋಡಿದ ಮೇಷ್ಟ್ರು, ಇವನನ್ನು ಸರಿದಾರಿಗೆ ತರಲು ಹೊಡೆಯುತ್ತಾರೆ. ಕೋಪಗೊಂಡ ಬಾಲಕನಿಗೆ ದೇವರಲ್ಲಿ ಕೇಳಿದ ವರದ ನೆನಪು ಬಂತು. ಮೇಷ್ಟ್ರ ತಲೆ ಸಿಡಿದು ಹೋಗಲಿ ಅಂದನು. ತಕ್ಷಣ ಮೇಷ್ಟ್ರ ತಲೆ ಸಿಡಿದು ಹೋಯಿತು.


ಒಮ್ಮೆ ಇವನು ಬಾಳೆಹಣ್ಣನ್ನು ತಿಂದು ಸಿಪ್ಪೆಯನ್ನು ದಾರಿಯಲ್ಲಿ ಎಸೆದಿದ್ದನು. ನಂತರ ಆಟವಾಡುತ್ತಿದ್ದಾಗ ಅವನಿಗೆ ಅರಿವಿಲ್ಲದಂತೆ ಆ ಸಿಪ್ಪೆಯ ಮೇಲೆ ಕಾಲಿಟ್ಟನು; ಜಾರಿಬಿದ್ದನು. ಅಲ್ಲಿದ್ದ ಹುಡುಗರು ನಗಲಾರಂಭಿಸಿದರು. ಅವನಿಗೆ ಅವಮಾನ- ಕೋಪಗಳೆರಡೂ ಬಂದವು. ಹಿಂದೂ ಮುಂದೂ ಯೋಚಿಸದೆ, ಈ ಸಿಪ್ಪೆ ಎಸೆದವರ ತಲೆ ಸಿಡಿದು ಹೋಗಲಿ ಎಂದನಂತೆ. ಮರುಕ್ಷಣದಲ್ಲಿ ಆ ಬಾಲಕನ ತಲೆ ಪುಡಿಪುಡಿಯಾಯಿತು.


ಈ ಕಥೆಯು ಕೇಳಲು ಅಡುಗೂಲಜ್ಜಿ ಕಥೆ ಇದ್ದಂತೆ ತೋರಿದರೂ ನಮ್ಮ ಇತಿಹಾಸ-ಪುರಾಣಗಳಲ್ಲಿ ಇಂತಹ ಅನೇಕ ಘಟನೆಗಳು ನಡೆದಿವೆ. ಮಹಾಶಿವ ಭಕ್ತನಾದ ಭಸ್ಮಾಸುರನ ಕಥೆ, ಹಿರಣ್ಯಕಶಿಪುವಿನ ಕಥೆ, ಮಹಿಷಾಸುರನ ಕಥೆ, ಮೂಕಾಸುರನ ಕಥೆ… ಇತ್ಯಾದಿ, ಅನೇಕ ಚಿತ್ರ ವಿಚಿತ್ರ ವರಗಳಿಂದಲೇ ಅವರ ಅವನತಿಗಳಾಗಿವೆ. 


ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ದೇವರಿಂದ ವರಪಡೆದು ನಮ್ಮ ಉದ್ಧಾರವಾಗಬೇಕೇ ಹೊರತು ಅವನತಿಯಲ್ಲ! ಸರ್ವದಾ ಹರಿ ಭಕ್ತರಾದ ಪ್ರಹ್ಲಾದ, ಧ್ರುವನಂತಹವರ ಪ್ರಾರ್ಥನೆಗಳು ನಮಗೆ ಅನುಕರಣೀಯ. ಭಕ್ತಶಿರೋಮಣಿಗಳ, ಅನೇಕ ದಾಸರುಗಳ ಪಥವು ಅನುಸರಣೀಯವೇ. 

  

ಹಾಗಾಗಿ ನಮ್ಮ ಮಹರ್ಷಿಗಳು ಸಾರ್ವಕಾಲಿಕವಾಗಿ ಸರ್ವಜನಾಂಗದ ಒಳಿತಿಗಾಗಿ ಅನೇಕ ಚತುರ್ಭದ್ರವಿಚಾರಗಳನ್ನು ಆಚರಣೆಗೆ ತಂದಿದ್ದಾರೆ. 'ದೇವರು ನಮಗೆ ಜ್ಞಾನ ಭಕ್ತಿ ವೈರಾಗ್ಯಗಳನ್ನು ಕರುಣಿಸಲಿ' ಎಂಬ ಆದರ್ಶ ಪ್ರಾರ್ಥನೆಯನ್ನು  ಸೂತ್ರಪ್ರಾಯವಾಗಿ ತಿಳಿಸಿಕೊಟ್ಟಿದ್ದಾರೆ. ಇಂತಹ ಪ್ರಾರ್ಥನೆಯಿಂದ ಲೌಕಿಕ ಸುಖವುಂಟು. ಪಾರಮಾರ್ಥಿಕ ಸುಖವೂ ಉಂಟು."ಹಿನ್ನೋಟ, ಮುನ್ನೋಟ ಎರಡೂ ಮನುಷ್ಯನಿಗೆ ಬೇಕು. ಸ್ವರೂಪ ಜ್ಞಾನ ಬೇಕು. ಇವೆರಡನ್ನೂ ನೆನಪಿನಲ್ಲಿಟ್ಟಿರುವ ಮನುಷ್ಯ ಎಂದಿಗೂ ಮೃತ್ಯು ವಶನಾಗುವುದಿಲ್ಲ. ಅಮೃತತ್ವವನ್ನು ಪಡೆಯುತ್ತಾನೆ." ಎಂಬ ಯೋಗಿವರೇಣ್ಯರಾದ  ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯವಾಗಿದೆ.


ನಮ್ಮ ಬುದ್ಧಿಮಟ್ಟದಿಂದ ಕೇಳಿದ ವರವು ಒಂದೊಮ್ಮೆ ನಮ್ಮನ್ನು  ಕಷ್ಟಕ್ಕೆ ಸಿಲುಕಿಸಬಹುದು. ಹಾಗಾಗಿ ನಮಗೆ "ಯಾವುದು ಒಳಿತೋ ಆ ವರವನ್ನು ಕೊಟ್ಟು ಉದ್ಧರಿಸು" ಎಂದು ದೇವರನ್ನು  ಪ್ರಾರ್ಥಿಸೋಣ. ನಾವೆಲ್ಲಾ ಹೃನ್ಮನಗಳಲ್ಲಿ ನಿಷ್ಕಲ್ಮಷವಾದ  ಭಗವಂತನ ಭಕ್ತಿಗೆ ಪಾತ್ರರಾಗೋಣ.


ಸೂಚನೆ: 13/04/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.