ಲೇಖಕರು: ಡಾ. ರಾಮಮೂರ್ತಿ ಟಿ.ವಿ.
(ಪ್ರತಿಕ್ರಿಯಿಸಿರಿ lekhana@ayvm.in)
ದೇವತೆಗಳ ಶಕ್ತಿ ಹಾಗೂ ಗುಣಗಳು ಲೋಕಹಿತಕ್ಕೆ ಕಾರಣವಾದುದರಿಂದ, ಭಗವಂತ, ದೇವತೆಗಳ ಪಕ್ಷಪಾತಿಯಾಗಿರುತ್ತಾನೆ; ದೇವತಾಮಾರ್ಗವನ್ನು ಅನುಸರಿಸಿದರೆ ಶ್ರದ್ಧಾಳುಗಳು ಸತ್ಯಸಾಕ್ಷಾತ್ಕಾರ ಹೊಂದಲು ಸಹಾಯವಾಗುತ್ತದೆ ಎಂಬುದು ಹಿರಿಯರ ಮಾತು. ಪುರಾಣಗಳಲ್ಲಿ, ದೇವಾಸುರ ಸಂಗ್ರಾಮಗಳಲ್ಲಿ ದೇವತೆಗಳ ಪರವಾಗಿ ನಿಂತ ಋಷಿಮುನಿಗಳು, ರಾಜಮಹಾರಾಜರು ತ್ಯಾಗಗಳನ್ನು ಮಾಡಿದ್ದಾರೆ. ದಧೀಚಿಮಹರ್ಷಿಗಳು ಇಂತಹ ತ್ಯಾಗಿಗಳಲ್ಲಿ ಒಬ್ಬರು. ಇವರ ಬಗ್ಗೆ ಪ್ರಸ್ತಾವನೆ ಋಗ್ವೇದದ ಕಾಲದಿಂದಲೂ ಬಂದಿದೆ. ವಿವಿಧ ಕಥಾರೂಪಗಳೂ ಇವೆ. ಇವರು ದೇವತೆಗಳ ಸಹಾಯಕ್ಕಾಗಿ ತಮ್ಮ ದೇಹವನ್ನೇ ತ್ಯಾಗಮಾಡಿದಂತಹ ಮಹಾತ್ಮರು. ಲೋಕಹಿತಕ್ಕಾಗಿ ಸೇವೆ ಮಾಡಿದರೆ ಭಗವಂತನ ಸೇವೆಯನ್ನೇ ಮಾಡಿದಂತಾಗುತ್ತದೆ. ಯೋಗಿವರೇಣ್ಯರಾದ ಶ್ರೀರಂಗಸದ್ಗುರುಗಳ ವಾಣೀ ಇಲ್ಲಿ ಸ್ಮರಣೀಯ. "ಕಣ್ಣಿನಲ್ಲಿ ಒಂದು ತೊಟ್ಟು ರಕ್ತ ಇರುವವರೆಗೂ ಬಿಡದೆ ಅವನ ಸೇವೆ ಮಾಡಬೇಕು. ಗಂಧ ತೇಯುವಂತೆ ಅವನಿಗಾಗಿ ದೇಹ ತೇಯ್ದುಬಿಡಬೇಕು".
ದೇವೇಂದ್ರನು ಒಮ್ಮೆ ವೃತ್ರಾಸುರನೆಂಬ ರಾಕ್ಷಸನ ಕಾರಣದಿಂದ ದೇವಲೋಕದ ಪದವಿಯನ್ನು ಕಳೆದುಕೊಳ್ಳುತ್ತಾನೆ. ವೃತ್ರಾಸುರನಿಗೆ "ಅಲ್ಲಿಯವರೆಗಿದ್ದ ಯಾವ ಶಸ್ತ್ರಗಳಿಂದಲಾಗಲೀ, ಮರ ಅಥವಾ ಲೋಹಗಳಿಂದ ಮಾಡಿದ ಶಸ್ತ್ರಗಳಿಂದಾಗಲಿ ಸಂಹರಿಸಲು ಅಸಾಧ್ಯ" ಎಂಬುದಾಗಿ ವರವಿರುತ್ತದೆ. ದಧೀಚಿ ಮಹರ್ಷಿಗಳ ಮೂಳೆಗಳಿಂದ ತಯಾರಾದ ಶಸ್ತ್ರದಿಂದ ಮಾತ್ರ ವೃತ್ರಾಸುರನನ್ನು ಕೊಲ್ಲಲು ಸಾಧ್ಯವೆಂದು ದೇವತೆಗಳಿಗೆ ಮಹಾವಿಷ್ಣುವಿನಿಂದ ತಿಳಿಯುತ್ತದೆ. ದೇವತೆಗಳು ದಧೀಚಿಗಳ ಬಳಿ ಬಂದು ವೃತ್ರನನ್ನು ಕೊಲ್ಲಲು ಸಹಾಯ ಬೇಡುತ್ತಾರೆ. ದಧೀಚಿಗಳು ಪ್ರಾರ್ಥನೆಗೆ ದಯೆ ತೋರಿ ಒಪ್ಪಿ, ತಾವು ಯೋಗಸಮಾಧಿಯಲ್ಲಿ ದೇಹತ್ಯಾಗ ಮಾಡುವುದಾಗಿಯೂ ನಂತರ ದೇವತೆಗಳು ತಮ್ಮ ಇಷ್ಟಾರ್ಥವನ್ನು ನೆರವೇರಿಸಿಕೊಳ್ಳಬಹುದೆಂದೂ ತಿಳಿಸುತ್ತಾರೆ. ಇಂದ್ರನು ಎಲ್ಲ ನದಿಗಳ ಪವಿತ್ರ ತೀರ್ಥವನ್ನು ದಧೀಚಿಗಳ ಹಂಬಲದಂತೆ ಅಲ್ಲಿಯೇ ತರಿಸಲಾಗಿ ದಧೀಚಿಗಳು ತೃಪ್ತರಾಗಿ ಯೋಗಸಮಾಧಿಯಲ್ಲಿ ಮುಳುಗುತ್ತಾರೆ. ನಂತರ, ದೇವತೆಗಳು ದಧೀಚಿಗಳ ಬೆನ್ನುಮೂಳೆಯಿಂದ ವಿಶ್ವಕರ್ಮನ ನೆರವಿನಿಂದ ಪ್ರಖ್ಯಾತವಾದ ವಜ್ರಾಯುಧವನ್ನು ತಯಾರಿಸುತ್ತಾರೆ. ಮುಂದೆ ಇಂದ್ರನು ಆ ವಜ್ರಾಯುಧದಿಂದಲೇ ವೃತ್ರನನ್ನು ಕೊಂದು ಜಯಶಾಲಿಯಾಗುತ್ತಾನೆ.
ಮೂಳೆಯ ಸಾಂದ್ರತೆಗಿಂತ ಕೆಲವು ಲೋಹಗಳಿಗೆ ಸಾಂದ್ರತೆ ಹೆಚ್ಚು. ಹಾಗಿದ್ದಲ್ಲಿ ದಧೀಚಿಗಳ ಮೂಳೆಯನ್ನು ಸೂಚಿಸಿದ್ದು ಏಕೆ ? ಇದನ್ನು ತಾತ್ತ್ವಿಕ ದೃಷ್ಟಿಯಿಂದಲೂ ಗಮನಿಸಬಹುದು. ಮಾನವನಿಗೆ ಬ್ರಹ್ಮ ಮಾರ್ಗ ತೆರೆಯಬೇಕಾದರೆ, ಕುಂಡಲಿನೀ ಶಕ್ತಿಯು ಅವನ ಬೆನ್ನುಹುರಿಯೊಳಗೆ ಮೇಲ್ಮುಖವಾಗಿ ಹರಿಯಬೇಕಾಗುತ್ತದೆ ಎಂದು ಯೋಗಶಾಸ್ತ್ರಗಳು ತಿಳಿಸುತ್ತವೆ. ನಮ್ಮ ಬೆನ್ನುಹುರಿಗೆ ಆಶ್ರಯವಾಗಿರುವ ಬೆನ್ನುಮೂಳೆಗೆ ಯೋಗಶಾಸ್ತ್ರದಲ್ಲಿ ವಜ್ರದಂಡ, ಮೇರುದಂಡ ಎಂದು ಕರೆಯುತ್ತಾರೆ. ಕುಂಡಲಿನೀ ಶಕ್ತಿಯು ಊರ್ಧ್ವಮುಖವಾಗಿ ಸಂಚರಿಸುವ ಪ್ರಕ್ರಿಯೆಯನ್ನೇ ಅಸುರರ ಸಂಹಾರವು ವಜ್ರದಂಡದಿಂದಲೇ ಆಗಿ ದೇವತೆಗಳ ವಿಜಯವಾಯಿತೆಂದು ಪುರಾಣವು ರೂಪಿಸುತ್ತದೆ. ಹಾಗೆಯೇ ಪವಿತ್ರ ನದಿಗಳು ಅವರ ಬಳಿ ಅಷ್ಟು ಶೀಘ್ರವಾಗಿ ಬಂದದ್ದು ಹೇಗೆ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ತ್ರಿಭುವನವ್ಯಾಪಿನಿಯಾದ ಜ್ಞಾನಗಂಗೆಯು ಕಾಶೀಕ್ಷೇತ್ರವಾದ ನಮ್ಮ ಶರೀರದಲ್ಲಿಯೇ ಇದೆಯೆಂದು ತಿಳಿಸುತ್ತಾರೆ ಆಚಾರ್ಯ ಶಂಕರರು. ನಾವೂ ದಧೀಚಿ ಮಹರ್ಷಿಗಳಂತೆ ಅಂತರಂಗ ಮಾರ್ಗದಲ್ಲಿ ಸಾಗಿ, ಭಗವತ್ಕೈಂಕರ್ಯ ಮಾಡುವ ಸದ್ಬುದ್ಧಿಯನ್ನು ದೈವ ಕರುಣಿಸಲಿ ಎಂದು ಆಶಿಸೋಣ.