ಶ್ರೀಮತಿ ಮೈಥಿಲಿ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)
ಎಲ್ಲ ದೇಶಗಳಲ್ಲೂ ಅವರವರ ಮನಃಪರಿಪಾಕಾನುಸಾರವಾಗಿ ಸಂಸ್ಕೃತಿಯು ರೂಪುಗೊಂಡಿರುತ್ತದೆ. ಆ ಸಂಸ್ಕೃತಿ/ಮನಸ್ಸಿನ ಸ್ಥಿತಿಯು ನಡವಳಿಕೆಗಳಾಗಿ ಪರಿವರ್ತನೆಗೊಳ್ಳುವುದೇ ನಾಗರಿಕತೆಯೆನಿಸಿಕೊಳ್ಳುವುದು. ಇತರ ಸಂಸ್ಕೃತಿ-ನಾಗರಿಕತೆಗಳ ವಿಚಾರ ಹೇಗೇ ಇದ್ದರೂ ಭಾರತೀಯ ಸಂಸ್ಕೃತಿಯ ಬಗೆಗೆ ಅನೇಕ ಆಕ್ಷೇಪಗಳು ಎದ್ದಿರುವುದು ಚಿರಪರಿಚಿತ.
ಪ್ರಧಾನಕಾರಣವೆಂದರೆ ಇಲ್ಲಿನ ವಿಚಾರಗಳಲ್ಲಿ ಎದ್ದುಕಾಣುವ ಮೌಢ್ಯ. ಈ ಸಂಸ್ಕೃತಿಯಿಂದ ಬೆಳೆದು ಬಂದಿರುವ ಬಹುಮಟ್ಟಿನ ಸಂಪ್ರದಾಯಗಳು/ಪದ್ಧತಿಗಳು, ವಿಧಿ-ನಿಷೇಧಗಳ ಪಟ್ಟಿರೂಪದಲ್ಲಿರುವ ಶಾಸ್ತ್ರಗಳು, ಆಚರಣೆಗಳು ಎಲ್ಲವೂ ಅರ್ಥಹೀನವಾಗಿಯೇ ಕಂಡುಬರುತ್ತವೆ. ಊಟಮಾಡಲೊಂದು ಸಮವಸ್ತ್ರ(Uniform)-ಪಂಚೆ, ಉತ್ತರೀಯ! ನೆಲದಮೇಲೆಯೇ ಕೂರಬೇಕಂತೆ! ಮಣೆ/ಚಾಪೆಯಂತೂ ಕಡ್ಡಾಯವಂತೆ. ಹೀಗೇಕೆ? ಟೇಬಲ್ ನ ಮೇಲಿಟ್ಟೋ, ನಿಂತಲ್ಲಿಯೋ, ಓಡಾಡುತ್ತಲೋ ತಿಂದರೆ ಬಡಿಸುವವರಿಗೂ ಶ್ರಮ ಕಡಿಮೆಯಾಗುವುದಲ್ಲವೇ? ಹೀಗೆ ತಿಂದರೆ ಅನ್ನ ಅರಗುವುದಿಲ್ಲವೇ? ರುಚಿಸುವುದಿಲ್ಲವೇ? ಪೂಜೆಗೆ ಸ್ನಾನ ಮಾಡಿ ಮಡಿವಸ್ತ್ರವನ್ನೇ ಉಡಬೇಕೆನ್ನುವುದೇಕೆ? ಹಾಗಿಲ್ಲದಿದ್ದರೆ ದೇವರು ಪೂಜೆಯನ್ನೊಪ್ಪುವುದಿಲ್ಲವೇ? ಹೀಗೆ ಮೂಢನಂಬಿಕೆಗಳ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಇಂದಿನ ಜೀವನಶೈಲಿಗೆ-ಆಧುನಿಕಯುಗಕ್ಕೆ ಇವು ಪ್ರಸ್ತುತವಲ್ಲವೆಂದೇ ತೋರುತ್ತವೆ. ಆದ್ದರಿಂದ ಇದು ಮೌಢ್ಯವೆಂಬ ಆಪಾದನೆಯನ್ನು ತಳ್ಳಿಹಾಕುವಂತಿಲ್ಲ.
ಈ ಸಂಸ್ಕೃತಿಯು ಇಂದಿಗೂ ಅಸಂಖ್ಯಾತ ಜನಮನವನ್ನಾಕರ್ಷಿಸುತ್ತಲಿರುವುದೂ ನಿಜವೇ. ಅಂತಹವರು ಇದರಿಂದ ರೂಪುಗೊಂಡ ಆಚಾರ-ವಿಚಾರಗಳನ್ನು ಪಾಲಿಸುತ್ತಿರುವುದನ್ನೂ ಕಾಣಬಹುದಾಗಿದೆ. ಆದ್ದರಿಂದ ಈ ಬಗೆಗೆ ವಿವೇಕಪೂರ್ಣವಾದ ವಿಮರ್ಶೆಯು ಸೂಕ್ತವೇ ಆಗಿದೆ.
ಯಾವುದೇ ಕಾರ್ಯದ ಅಥವಾ ವಿಧಿ-ನಿಷೇಧಗಳ ಹಿಂದೆಯೂ ಸಾಧಿಸಬೇಕಾದ ಗುರಿಯೊಂದಿದ್ದರೆ ಮಾತ್ರವೇ ಅವುಗಳಿಗೆ ಬೆಲೆಯುಂಟು. ಇಲ್ಲದಿದ್ದರೆ ಅವೆಲ್ಲವೂ ಮೌಢ್ಯ-ವ್ಯರ್ಥ-ಅರ್ಥಹೀನವೆಂದೇ ಪರಿಗಣಿಸಲ್ಪಡುತ್ತವೆ. ವೈಜ್ಞಾನಿಕವೆಂದರೆ ಪ್ರಯೋಗ-ಪರೀಕ್ಷೆಗಳ ಮೂಲಕ ಸಿದ್ಧವಾಗುವಂತಹ-ಸಿದ್ಧಪಡಿಸಬಹುದಾದಂತಹ ಅಂಶಗಳು. ಈ ನಿಟ್ಟಿನಲ್ಲಿ ಭಾರತೀಯಸಂಸ್ಕೃತಿಯು ಮೌಢ್ಯವೇ-ವೈಜ್ಞಾನಿಕವೇ ಎಂಬುದನ್ನು ಪರೀಶೀಲಿಸಬೇಕಾಗಿದೆ.
ಮೌಢ್ಯವೋ? ಅರ್ಥಪೂರ್ಣವೋ?
ಮಹರ್ಷಿಮನೋಮೂಲವಾಗಿ ಹೊರಬಂದ ಭಾರತೀಯಸಂಸ್ಕೃತಿಯನ್ನರಿಯಲು ಅವರ ಮನೋಧರ್ಮವನ್ನರಿಯುವುದು ಅವಶ್ಯಕವಾಗಿದೆ. ಶರೀರದೊಳಗಿನ ಸೂಕ್ಷ್ಮಾತಿಸೂಕ್ಷ್ಮವಾದ ಭಾಗಗಳನ್ನೂ ಆಧುನಿಕ ವಿಜ್ಞಾನಿಗಳು ಪ್ರಯೋಗಶಾಲೆಗಳಲ್ಲಿ ಕುಳಿತು ಸೂಕ್ಷ್ಮದರ್ಶಕ ಯಂತ್ರಗಳ ಮೂಲಕ ಅನ್ವೇಷಿಸಿ ತಿಳಿಸುವಂತೆಯೇ ಮಹರ್ಷಿಗಳೂ ಅನ್ವೇಷಣೆಯನ್ನು ನಡೆಸಿದ್ದಾರೆ. ಅವರ ಶರೀರವೇ ಅವರ ಪ್ರಯೋಗಶಾಲೆ. ಉಪಕರಣಗಳು-ತೀವ್ರತಪೋಲಭ್ಯವಾದ ಜ್ಞಾನದೃಷ್ಟಿ-ಯೋಗದೃಷ್ಟಿ. ತಮ್ಮ ಮನಸ್ಸು-ಬುದ್ಧಿ-ಇಂದ್ರಿಯಗಳನ್ನು ಹೊರಪ್ರಪಂಚದಿಂದ ಹಿಂಸೆಳೆದು ಶರೀರದೊಳಗೆ ಯೋಗದೃಷ್ಟಿಯಿಂದ ಮಾತ್ರವೇ ಗೋಚರಿಸುವ ಅಂಶಗಳನ್ನು ಕಂಡರು. ಒಳಬೆಳಗುವ ದೇವತಾಶಕ್ತಿಗಳನ್ನೂ, ಅವುಗಳ ಸೃಷ್ಟಿಕಾರಕ-ಚೈತನ್ಯಪ್ರದ ಪರಮಾತ್ಮನನ್ನೂ ಕಂಡರು. ಅಲ್ಲೊದಗಿದ ಆನಂದಾನುಭವವು ಭೌತಿಕಪ್ರಪಂಚದಲ್ಲಿ ದೊರೆಯಬಹುದಾದ ಸುಖದ ಪರಮಾವಧಿಗಿಂತಲೂ ಕೋಟಿಕೋಟಿಪಾಲು ಹೆಚ್ಚಿನದೆಂಬುದನ್ನು ಮನಗಂಡರು. ಅತ್ಯುನ್ನತಮಟ್ಟದ ಆನಂದಸಾಗರದಲ್ಲಿ ಮಿಂದು-ಮುಳುಗಿ-ವಿಹರಿಸಿದ ಅವರ ಮನಸ್ಸಿನ ಪರಿಪಾಕವೂ ಅಷ್ಟೇ ಉತ್ಕೃಷ್ಟವಾಗಿದ್ದಿತು. ಮಾನವಸಾಮಾನ್ಯರೆಲ್ಲರಿಗೂ ಇಂತಹ ಆನಂದವು ಸಿಗಲೆಂಬ ಔದಾರ್ಯ ಅವರಲ್ಲಿ ಮೂಡಿಬಂದಿತು.
ಲೋಕವೆಲ್ಲವೂ ತಾವೇರಿದ ಉನ್ನತಸ್ಥಿತಿಗೇರಿ ಆನಂದಿಸುವುದಲ್ಲದೆ, ಅಲ್ಲಿಂದ ಹೊರಪ್ರಪಂಚಕ್ಕಿಳಿದಾಗಲೂ ಮತ್ತೆ ಮೇಲೇರಲು ಅನೂಕೂಲಕರವಾಗಿ-ಅಡ್ಡಿತಾರದಂತಿರುವ ಹೊರಜೀವನಶೈಲಿಯೊಂದನ್ನು ರೂಪಿಸಿದರು. ಜೀವನದಲ್ಲಿ ಅಂತ:ಪ್ರಪಂಚ-ಹೊರಪ್ರಪಂಚಗಳೆರಡರಲ್ಲೂ ತಂಗುತಡೆಯಿಲ್ಲದೆ ಸಂಚರಿಸಬಹುದಾದ ಹೆದ್ದಾರಿಯನ್ನು ನಿರ್ಮಿಸಿಕೊಡುವ ಉದ್ದೇಶದಿಂದ ಕೂಡಿದ್ದರು. ಆತ್ಮಪ್ರಪಂಚದಿಂದ ಹೊರಟ ವಿಚಾರಗಳೇ ಭಾರತೀಯಸಂಸ್ಕೃತಿ-ನಾಗರಿಕತೆಗಳಾಗಿರುವುವು. ಇಂತಹ ಪರಮೋನ್ನತ ಉದ್ದೇಶದೊಡಗೂಡಿರುವ ಭಾರತೀಯಸಂಸ್ಕೃತಿಯು ಅರ್ಥಹೀನ-ಮೌಢ್ಯ ಹೇಗಾದೀತು?
``ಮಹರ್ಷಿಗಳಿಂದ ಪ್ರಕಾಶಿತವಾದ-ಪ್ರವರ್ತಿತವಾದ ಸಂಸ್ಕೃತಿ-ನಾಗರಿಕತೆಗಳಲ್ಲಿ ಭುವಿಯಿಂದ ದಿವಿಯವರೆಗೂ ನಿರಾಯಾಸವಾಗಿ ಕರೆದುಕೊಂಡು ಹೋಗಿಬಿಡುವ ಸುಮಾರ್ಗವಿದೆ`` ಎಂಬ ಶ್ರೀರಂಗಮಹಾಗುರುಗಳ ಮಾತುಗಳು ಸ್ಮರಣೀಯವಾಗಿವೆ. ನಮ್ಮ ಸಂಸ್ಕೃತಿ-ನಾಗರಿಕತೆಗಳ ಸರಿಯಾದ ಅರಿವಿಲ್ಲದಿರುವುದೇ ಅದರ ಮೇಲಿನ ದ್ವೇಷಕ್ಕೆ ಕಾರಣ. ಅದು ಸಂಸ್ಕೃತಿಯ ದೋಷವಲ್ಲ, ನಮ್ಮ ದೃಷ್ಟಿದೋಷ. ಅದನ್ನು ನಾವು ಸರಿಪಡಿಸಿಕೊಳ್ಳಬೇಕೆಂಬುದು ಅವರ ನಿರ್ಣಯವಾಗಿತ್ತು.
ಸಂಸ್ಕೃತಿಯ ವೈಜ್ಞಾನಿಕತೆ
ಒಂದು ಪ್ರಯೋಗವನ್ನು ಯಾವುದೇ ಕಾಲದಲ್ಲಿ ಯಾರೇ ನಡೆಸಿದರೂ ಒಂದೇ ಫಲಿತಾಂಶವು ಸಿಕ್ಕುವುದಾದರೆ ಅದು ವೈಜ್ಞಾನಿಕವೆನಿಸಿಕೊಳ್ಳುತ್ತದೆ. ಭಾರತೀಯಸಂಸ್ಕೃತಿಯ ವಿಚಾರವನ್ನು ಈ ಮಾನದಂಡದಿಂದ ಅಳೆಯುವುದಾದರೆ ಸಾವಿರಾರು ವರ್ಷಗಳಿಂದ ಅನೇಕಾನೇಕ ಋಷಿ-ಮಹರ್ಷಿಗಳು ತಪಸ್ಯೆಯಿಂದ ಕಂಡ ವಿಚಾರಗಳು ಸಾಮಾನ್ಯವಾಗಿ ಒಂದೇ ರೀತಿಯಾಗಿರುವುದನ್ನು ಉಪನಿಷತ್ತು-ಪುರಾಣ-ಇತಿಹಾಸಗಳು ಸಾರುತ್ತಿವೆ. ಈ ಸನಾತನ-ಸದಾತನಸತ್ಯವನ್ನು ತಲುಪಲು ವಿಧಿಸಲ್ಪಟ್ಟಿರುವ ವಿಧಾನಗಳೂ ಅನೇಕ ಋಷಿ ಮುನಿಗಳಿಂದ ಸುದೃಢಗೊಳಿಸಲ್ಪಟ್ಟಿವೆ.
ಇತ್ತೀಚೆಗೆ ಸಾಮಾಜಿಕಜಾಲತಾಣಗಳಲ್ಲೂ ನಮ್ಮ ಸಂಸ್ಕೃತಿಯನ್ನು ನಾವೇ ಅರಿಯದಿರುವುದೇ ಸಂಸ್ಕೃತಿನಾಶಕ್ಕೆ ಕಾರಣವೆಂಬ ಕೂಗು ಕೇಳಿಬರುವುದು ಸಂತಸದ ವಿಷಯವಾದರೂ ಇಂದಿನ ವೈಚಾರಿಕಪ್ರಪಂಚವು ಯಾವುದೇ ವಿಚಾರವಾದರೂ ಅದರ `ಏನು?-ಏಕೆ?-ಹೇಗೆ?`ಗಳಿಗೆ ಉತ್ತರವನ್ನಪೇಕ್ಷಿಸುತ್ತದೆ. ಆದ್ದರಿಂದ ಭಾರತೀಯಸಂಸ್ಕೃತಿಯ ಯಾವುದೇ ಕ್ರಿಯೆ/ವಿಚಾರವನ್ನು ಸಮಾಜದಲ್ಲಿ ಉಳಿಸಬೇಕಾದರೂ ಅವುಗಳಲ್ಲಿನ ವಿಜ್ಞಾನವನ್ನು ಸಮಗ್ರವಾಗಿ ಅರಿಯುವುದು ಅನಿವಾರ್ಯವೇ ಸರಿ.
ಇಲ್ಲಿ ಶ್ರೀರಂಗಮಹಾಗುರುಗಳ ಅದ್ಭುತ ಕೊಡುಗೆಯು ಅತ್ಯಂತ ಪ್ರಸಕ್ತವಾಗಿದೆ. ಪ್ರತಿಯೊಂದು ಪದಾರ್ಥವೂ ತನ್ನ ಸ್ಪರ್ಶ-ಸೇವನೆ-ಆಘ್ರಾಣಗಳಿಂದ ನಮ್ಮ ಭೌತಿಕ-ದೈವಿಕ-ಆಧ್ಯಾತ್ಮಿಕಕ್ಷೇತ್ರಗಳ ಮೇಲೆ ಮಾಡುವ ಪರಿಣಾಮಗಳನ್ನು ನಾಡೀವಿಜ್ಞಾನದ ಮೂಲಕ ಅವರು ನಿಖರವಾಗಿ ಅಳೆದು ತೋರಿಸಿಕೊಟ್ಟರು. ಭಾರತೀಯಸಂಸ್ಕೃತಿಯ ಪ್ರಮುಖ ಅಂಶಗಳಾದ ಉಪನಯನ-ವಿವಾಹಾದಿ ಷೋಡಶಸಂಸ್ಕಾರಗಳಲ್ಲಿನ ಕ್ರಿಯಾಕಲಾಪಗಳಲ್ಲಿ ಬಳಸಲ್ಪಡುವ ಪ್ರತಿಯೊಂದು ಪದಾರ್ಥದ ಧರ್ಮವನ್ನೂ ಪ್ರಾಯೌಗಿಕವಾಗಿ ನಿರೂಪಿಸಿ ಆಯಾ ಕರ್ಮಗಳಲ್ಲಿ ಅವುಗಳ ಬಳಕೆಯ ಸೂಕ್ತತೆಯನ್ನು ತೋರಿಸಿಕೊಟ್ಟರು.
ಸಂಸ್ಕೃತಿಯ ಆಚರಣೆಗಳಲ್ಲಿನ ಪ್ರತಿಯೊಂದಂಶವನ್ನೂ ನಿಖರವಾಗಿ ಅಳೆದೇ ವಿಧಿಸಲಾಗಿದೆಯೆಂಬುದಕ್ಕೆ ಸೂಚನಾಮಾತ್ರವಾಗಿ ಕೆಲವು ಉದಾಹರಣೆಗಳೆಂದರೆ, ಇಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ದರ್ಭೆಯು ಸ್ಪರ್ಶಮಾತ್ರದಿಂದಲೇ ಮನಸ್ಸು ಆಧಿದೈವಿಕ -ಆಧ್ಯಾತ್ಮಿಕ ಕ್ಷೇತ್ರಗಳಿಗೆ ಪ್ರವೇಶಿಸಲು ಹೇಗೆ ಪುಷ್ಟಿ ನೀಡುವುದೆಂಬುದನ್ನು ನಾಡೀವಿಜ್ಞಾನದ್ವಾರಾ ನಿರೂಪಿಸಿದರು. ಋಷಿದೃಷ್ಟಿಯಲ್ಲಿ ಆಹಾರಸ್ವೀಕಾರವು ಹೊಟ್ಟೆ ತುಂಬುವ ಕೆಲಸವಷ್ಟೇ ಅಲ್ಲ. ಅದೊಂದು ಯಜ್ಞ. ಉದರಕ್ಕೆ ಕೊಡುವ ಆಹಾರವು ದಾಮೋದರನವರೆಗೂ ತಲುಪುವಂತಿರಬೇಕೆನ್ನುವ ಮಹಾಗುರುಗಳ ಮಾತನ್ನು ಸ್ಮರಿಸಬಹುದಾಗಿದೆ. ಆಹಾರಸ್ವೀಕಾರದಲ್ಲಿ ಮನಸ್ಸು, ಪ್ರಾಣಾಪಾನಗಳ ಸ್ಥಾನವನ್ನು ಮುಟ್ಟಿ ಅಲ್ಲಿಗೆ ಆಹುತಿಯನ್ನು ತಲುಪಿಸುವ ಕಾರ್ಯವು ಜರುಗುವುದರೊಂದಿಗೆ ಭಗವತ್ಸ್ಮರಣೆಯಿಂದ ಕೂಡಿರಬೇಕೆಂದಾಗ ಪ್ರಾಣಾಪಾನಗಳ ಮೇಲೆ ಹತೋಟಿಯಿರಬೇಕಾಗುತ್ತದೆ. ಇದನ್ನು ಸಾಧಿಸಲು ನೆಲದಮೇಲೆ ಕಾಲುಮಡಿಸಿಕೂರುವ ಭಂಗಿ, ಪಂಚೆ ಮುಂತಾದವುಗಳಿಂದಾಗುವ ಕಟ್ಟು(ಬಿಗಿತ)ಗಳು ಸಹಕರಿಸುತ್ತವೆ. ಇದಕ್ಕೊಪ್ಪುವ ಧರ್ಮವುಳ್ಳ ಪದಾರ್ಥಗಳನ್ನಾಯ್ದು ಅವುಗಳಿಂದ ತಯಾರಿಸಿದ ಮಣೆ/ಚಾಪೆಗಳನ್ನೇ ಆಸನಕ್ಕೂ ವಿಧಿಸಲಾಗಿದೆ. ಹೀಗೆ ಎಲ್ಲ ಅಂಶಗಳೂ ಗುರಿಗೊಪ್ಪುವಂತೆ-ಅರ್ಥಪೂರ್ಣವಾದವುಗಳಾಗಿವೆ.
ಕಾಲದ ಪ್ರಭಾವದಿಂದಾಗಿ ಮಹರ್ಷಿಪ್ರಣೀತವಾದ ವಿಧಿ-ವಿಧಾನಗಳಲ್ಲಾದ ಪ್ರಕ್ಷಿಪ್ತಗಳನ್ನು ಗುರುತಿಸಲು ಮೂಲದ ಅರಿವು ಅವಶ್ಯಕವೆಂಬುದನ್ನು ನೆನಪಿನಲ್ಲಿಡೋಣ.
ಬಾಹ್ಯಾಂತರಿಕ್ಷಕ್ಕೆ ಹಾರುವವನ ಉಡುಪು-ಆಹಾರಸೇವನಾಕ್ರಮಗಳ ವೈಚಿತ್ರ್ಯವು ಬಾಹ್ಯಾಂತರಿಕ್ಷದ ಪರಿಚಯವಿಲ್ಲದವನಿಗೆ ನಗೆಪಾಟಲಾಗಿರುವುದಲ್ಲವೇ? ಅಂತೆಯೇ ಅಂತರಂಗಪ್ರಪಂಚದ ಪರಿಚಯವಿಲ್ಲದ ನಮಗೆ ಆ ಪ್ರಪಂಚಗಳ ಆಧಾರದ ಮೇಲೆ ನಿಂತಿರುವ ಭಾರತೀಯ ಸಂಸ್ಕೃತಿಯು ಮೌಢ್ಯವೆಂದೆನಿಸಿದರೆ ಅದು ನಮ್ಮ ಆಜ್ಞಾನವೇ ಹೊರತು ಮಹರ್ಷಿಗಳ ತಪ್ಪಲ್ಲ.
ಮಹರ್ಷಿಸಂಸ್ಕೃತಿಯ ವಿಜ್ಞಾನವನ್ನರಿತು ಶ್ರದ್ಧೆಯಿಂದ ಆಚರಿಸಿದಾಗ ಅವರು ಅನುಭವಿಸಿದ ಆನಂದವು ಇಂದೂ ನಮ್ಮ ಪಾಲಿನದಾಗುವುದು ನಿಶ್ಚಿತವೆಂಬುದು ಜ್ಞಾನಿಸಮ್ಮತವಾಗಿದೆ. ಕರ್ಮಗಳನ್ನು ಮರ್ಮವರಿತು ಆಚರಿಸಬೇಕೆಂಬ ಮಹಾಗುರುಗಳ ಸೂತ್ರವನ್ನು ಸ್ಮರಿಸಿ ಮಹರ್ಷಿಗಳಿಗೂ ಮಹರ್ಷಿಭಾರತಕ್ಕೂ ನಮನವನ್ನರ್ಪಿಸುತ್ತೇನೆ.
ಸೂಚನೆ: 9/3/2023 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ.