ಲೇಖಕರು; ಶ್ರೀಮತಿ ಸೌಮ್ಯಾ ಪ್ರದೀಪ್
(ಪ್ರತಿಕ್ರಿಯಿಸಿರಿ lekhana@ayvm.in)
ಧರ್ಮಾತ್ಮನಾದ ವಿದುರನು ಸಾಕ್ಷಾತ್ ಯಮಧರ್ಮನ ಅವತಾರವೆಂಬುದನ್ನು ಮಹಾಭಾರತವು ಉಲ್ಲೇಖಿಸುತ್ತದೆ. ಅಣಿ ಮಾಂಡವ್ಯ ಎಂಬ ಮಹರ್ಷಿಗಳು ನೀಡಿದ 'ಭೂಲೋಕದಲ್ಲಿ ಜನಿಸು' ಎಂಬ ಶಾಪವನ್ನು ಯಮಧರ್ಮರಾಯನು ಲೋಕೋದ್ಧಾರಕ್ಕಾಗಿ ಸ್ವೀಕರಿಸಿ, ಭಗವಂತನ ಸಂಕಲ್ಪದಂತೆ ಧರ್ಮ ಪ್ರತಿಷ್ಠಾಪನಾ ಕಾರ್ಯದಲ್ಲಿ ವಿದುರನಾಗಿ ಜನಿಸಿ ಉತ್ತಮ ಪಾತ್ರವನ್ನು ನಿರ್ವಹಿಸುತ್ತಾನೆ. ಹಾಗಾಗಿಯೇ ಅವನಾಡುವ ಪ್ರತಿಯೊಂದು ಮಾತೂ ಕೂಡ ಧರ್ಮಸಮ್ಮತವೇ ಆಗಿರುತ್ತದೆ. ಭೀಷ್ಮನಿಂದ ಮೊದಲ್ಗೊಂಡು ಯುಧಿಷ್ಠಿರನವರೆಗೂ ಎಲ್ಲರೂ ಯಾವುದೇ ಮಹತ್ವದ ನಿರ್ಣಯವನ್ನು ತೆಗೆದು ಕೊಳ್ಳಬೇಕಾದ ಸಂದರ್ಭದಲ್ಲಿಯೂ ವಿದುರನ ಅಭಿಪ್ರಾಯವನ್ನು ಪಡೆದ ನಂತರವೇ ಮುಂದಿನ ಹೆಜ್ಜೆಯನ್ನಿಟ್ಟಿರುವುದು ಮಹಾಭಾರತದ ಉದ್ದಕ್ಕೂ ಕಂಡುಬರುತ್ತದೆ.
ಅಂತೆಯೇ ಧೃತರಾಷ್ಟ್ರನೂ ಕೂಡ ಧರ್ಮಸಂದಿಗ್ಧವಾದ ಪರಿಸ್ಥಿತಿಯಲ್ಲಿ ವಿದುರನ ನೀತಿಯುಕ್ತವಾದ ಮಾತುಗಳನ್ನು ಕೇಳ ಬಯಸುತ್ತಾನೆ. ಆದರೆ, ಅದರಂತೆಯೇ ನಡೆಯಲು ಅನೇಕ ಬಾರಿ ಪುತ್ರವ್ಯಾಮೋಹವು ಅಡ್ಡಿಬರುತ್ತದೆ. ವಿದುರನ ಕೆಲವೊಂದು ನೀತಿಯುಕ್ತವಾದ ವಚನಗಳ ಕಡೆ ಗಮನ ಹರಿಸೋಣ-
"ಪಂಚೇoದ್ರಿಯಸ್ಯ ಮರ್ತ್ಯಸ್ಯ ಛಿದ್ರo ಚೇದೇಕಮಿಂದ್ರಿಯಮ್ l
ತತೋsಸ್ಯ ಸ್ರವತಿ ಪ್ರಜ್ಞಾ ಧೃತೇ: ಪಾತ್ರಾದಿವೋದಕಮ್" ll
(ಪಂಚೇಂದ್ರಿಯಗಳುಳ್ಳ ಮನುಷ್ಯನ ಯಾವುದಾದರೂ ಒಂದು ಇಂದ್ರಿಯದಲ್ಲಿ ಸಣ್ಣ ರಂದ್ರ ಉಂಟಾದರೂ ( ವಿಷಯ ಲಾಲಸೆಗೆ ತುತ್ತಾದರೂ) ಮನುಷ್ಯನ ಪ್ರಜ್ಞೆಯೂ ಚರ್ಮದ ಚೀಲದಲ್ಲಿ ಉಂಟಾದ ರಂಧ್ರದಿಂದ ನೀರು ಸ್ರವಿಸುವಂತೆ ಆ ಇಂದ್ರಿಯದ ಜೊತೆಯಲ್ಲಿಯೇ ಹರಿದು ಹೋಗುತ್ತದೆ).
ಈ ಮಾನವ ದೇಹ ಅನ್ನುವುದು ಪಂಚ ಜ್ಞಾನೇಂದ್ರಿಯಗಳು ಮುಂತಾದ ಇಪ್ಪತ್ತನಾಲ್ಕು ತತ್ತ್ವಗಳಿಂದ ರಚಿತವಾಗಿದೆ ಎಂಬುದು ಭಾರತೀಯ ಆರ್ಷ ನೋಟ. ಅವುಗಳಲ್ಲಿ ಎಲ್ಲವಕ್ಕೂ ತಮ್ಮದೇ ಆದ ಪಾತ್ರವಿದೆ, ಕಣ್ಣು, ಕಿವಿ, ಮೂಗು, ನಾಲಿಗೆ ಹಾಗೂ ಚರ್ಮ ಎಂಬ ಪಂಚ ಜ್ಞಾನೇಂದ್ರಿಯಗಳು ಬಾಹ್ಯ ಪ್ರಪಂಚದಲ್ಲಿ ಹೆಚ್ಚಾಗಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತವೆ. ಗೀತೆಯು ತಿಳಿಸುವಂತೆ ಅವುಗಳು ಸುಸಂಸ್ಕೃತವಾದ ಮನಸ್ಸಿನ ಅಧೀನದಲ್ಲಿರಬೇಕು; ಮನಸ್ಸು ಸುಶಿಕ್ಷಿತವಾದ ಬುದ್ಧಿಯ ಅಧೀನದಲ್ಲಿರಬೇಕು. ಆಗ ಜೀವನದಲ್ಲಿ ತಪ್ಪು ಹೆಜ್ಜೆಯನ್ನು ಇಡುವ ಪ್ರಸಂಗ ಬರುವುದಿಲ್ಲ. ಆದರೆ ಅದು ವ್ಯತ್ಯಾಸವಾಗಿ ಇಂದ್ರಿಯಗಳು ಓಡಿದಂತೆ ಅದರ ಹಿಂದೆ ಮನಸ್ಸೂ ಓಡಿ ಅವುಗಳ ಅಧೀನಕ್ಕೆ ಒಳಪಟ್ಟಾಗ ಜಾರಿ ಬೀಳುವ ಪ್ರಸಂಗವೇ ಹೆಚ್ಚು. ಇಂದ್ರಿಯಗಳ ಚಾಪಲ್ಯಕ್ಕೆ ಒಳಪಟ್ಟು ತನ್ನದ್ದಲ್ಲದನ್ನು ಬಯಸಿ ನಂತರ ಅದರಿಂದ ಉಂಟಾದ ದುಷ್ಪರಿಣಾಮಗಳನ್ನು ಅನುಭವಿಸುವಂತಹ ಪ್ರಕರಣಗಳು ಹಿಂದೆಯೂ ಇದ್ದವು; ಈಗಲೂ ಇವೆ. "ಇಂದ್ರಿಯಗಳಿಗೆ ಅತಿಲಾಲನೆಯೂ ಕೂಡದು, ಅತಿ ಪೀಡನವೂ ಕೂಡದು (ನೇoದ್ರಿಯಲಾಲನಾತಿಪೀಡನೇ) ಒಂದು ಬ್ಯಾಲೆನ್ಸ್ ನಲ್ಲಿದ್ದರೆ ಶೋಭಿಸುತ್ತೆ" ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಹೇಗೆ ಮಕ್ಕಳನ್ನು ಅತಿಯಾಗಿ ಲಾಲಿಸದೇ, ಅತಿಯಾಗಿ ಶೋಷಿಸದೇ ಕಾಲ ಕಾಲಕ್ಕೆ ತಿದ್ದಿ ತೀಡಿ ಹಿತವಾದದ್ದನ್ನೇ ನೀಡಿ, ಪೋಷಿಸುವಂತೆ ಇಂದ್ರಿಯಗಳಿಗೂ ಧರ್ಮಕ್ಕೆ ಅವಿರೋಧವಾದ ವಿಷಯಗಳನ್ನು ಕೊಟ್ಟು ತೃಪ್ತಿ ಪಡಿಸಬೇಕಾಗುತ್ತದೆ. ಆದರೆ ಬುದ್ಧಿಯು ತನ್ನ ಸ್ವಾಧೀನವನ್ನು ಕಳೆದುಕೊಂಡು ಅವುಗಳ ಹಿಡಿತಕ್ಕೆ ಒಳಗಾದರೆ ಮನುಷ್ಯನ ಪ್ರಜ್ಞೆಯು ಜಾರಿಹೋಗಿ ಅಪಾಯ ತಪ್ಪಿದ್ದಲ್ಲ. ಒಂದು ಸಣ್ಣ ವಿಷಯ ಲಾಲಸೆಯೂ ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡಬಹುದು.
"ಕಿನ್ನು ಮೇ ಸ್ಯಾದಿದo ಕೃತ್ವಾ ಕಿನ್ನು ಮೇ ಸ್ಯಾದಕುರ್ವತ: l
ಇತಿ ಕರ್ಮಾಣಿ ಸಂಚಿಂತ್ಯ ಕುರ್ಯಾದ್ ವಾ ಪುರುಷೋ ನ ವಾ" ll
ಎನ್ನುವುದು ವಿದುರನೀತಿಯ ಇನ್ನೊಂದು ಮಾತು.
(ಈ ಕಾರ್ಯವನ್ನು ಮಾಡುವುದರಿಂದ ಯಾವ ಲಾಭ ಉಂಟಾಗುತ್ತದೆ, ಮಾಡದಿರುವುದರಿಂದ ಆಗುವ ಹಾನಿ ಯಾವುದು ಎಂದು ಮುಂತಾಗಿ ಸಾಧಕ ಬಾಧಕಗಳನ್ನು ಸರಿಯಾಗಿ ಸಮಾಲೋಚಿಸಿದ ನಂತರವೇ ವ್ಯಕ್ತಿಯು ಆ ಕೆಲಸವನ್ನು ಕೈಗೊಳ್ಳಬೇಕು ಅಥವಾ ಬಿಡಬೇಕು).
ಲೋಕದಲ್ಲಿ ಯಾವುದೇ ಒಂದು ಕಾರ್ಯ ಸಂಪನ್ನವಾಗಬೇಕಾದರೆ ಅದಕ್ಕೆ ಜ್ಞಾನ, ಇಚ್ಛೆ ಹಾಗೂ ಕ್ರಿಯೆಗಳೆಂಬ ಮೂರು ಹಂತಗಳು ಇರುತ್ತವೆ. ಮೊದಲು ಕಾರ್ಯದ ಸ್ವರೂಪದ ಬಗ್ಗೆ ಒಂದು ತಿಳುವಳಿಕೆ, ನಂತರ ಅದನ್ನು ಸಾಧಿಸಬೇಕೆಂಬ ಆಸೆ, ನಂತರ ಅದರಲ್ಲಿ ಪ್ರವೃತ್ತಿ -ಹೀಗೆ ಒಂದು ಜ್ಞಾನವು ಕ್ರಿಯಾರೂಪವನ್ನು ತಾಳುತ್ತದೆ. ಆದರೆ ಕ್ರಿಯೆಯ ಸ್ವರೂಪದ ಜ್ಞಾನವೇ ಇಲ್ಲದೇ ಕೇವಲ ಇಚ್ಛೆಯನ್ನಾಧರಿಸಿ ಮಾಡಿದ ಕಾರ್ಯಗಳು ದೋಷಪೂರಿತವಾಗಿರುವ ಸಂಭವವೇ ಅಧಿಕ.
ಹಾಗಾಗಿ ಮೇಧಾವಿಗಳು ಮೊದಲು ಮಾಡಬೇಕೆಂದಿರುವ ಕಾರ್ಯದ ಸ್ವರೂಪವನ್ನು ಚೆನ್ನಾಗಿ ಅರಿತು ಅಥವಾ ಹಿತೈಷಿಗಳಿಂದ ಮಾರ್ಗದರ್ಶನವನ್ನು ಪಡೆದು, ಈ ಕ್ಷಣಕ್ಕೆ ಆ ಕಾರ್ಯವು ಪ್ರಿಯವೆನಿಸಿದರೂ ಮುಂದೆ ತನ್ನಮೇಲೆ ಹಾಗೂ ತನ್ನನ್ನು ಆಶ್ರಯಿಸಿದವರ ಮೇಲೆ ಅದರ ಪರಿಣಾಮ ಏನಾಗಬಹುದೆಂದು ಪರ್ಯಾಲೋಚಿಸಿದ ನಂತರವೇ ಅದರಲ್ಲಿ ಪ್ರವೃತ್ತರಾಗುವುದೋ ಅಥವಾ ಬೇಡವೋ ಎಂಬ ತೀರ್ಮಾನಕ್ಕೆ ಬರುತ್ತಾರೆ. ಈಗ ಪ್ರಿಯವೆನಿಸಿದ ಕಾರ್ಯ ಮುಂದೆ ದುಃಖದಲ್ಲಿ ಪರ್ಯಾವಸಾನಗೊಳ್ಳಬಹುದು ಅಥವಾ ಇಂದಿನ ಕಟು ನಿರ್ಧಾರ ಮುಂದೆ ಸುಖದಲ್ಲೇ ಅಂತ್ಯ ಗೊಳ್ಳಬಹುದು. ಉದಾಹರಣೆಗೆ ದುರ್ಯೋಧನನು ಪಾಂಡವರನ್ನು ಅವಮಾನಗೊಳಿಸಬೇಕೆಂಬ ದುರುದ್ದೇಶವೊಂದನ್ನೇ ಇಟ್ಟುಕೊಂಡು ತುಂಬಿದ ಸಭೆಗೆ ಪತಿವ್ರತೆಯಾದ ದ್ರೌಪದಿಯನ್ನು ಎಳೆತಂದು ವಸ್ತ್ರಾಪಹರಣ ಮಾಡಲೆತ್ನಿಸಿದರ ಪರಿಣಾಮ, ಭೀಮನು ಭಯಂಕರವಾದ ಪ್ರತಿಜ್ಞೆ ಕೈಗೊಂಡು ಮುಂದೆ ದುರ್ಯೋಧನಾದಿಗಳ ವಿನಾಶಕ್ಕೆ ದಾರಿ ಮಾಡಿಕೊಟ್ಟಿತು. ಪಾಂಡವರು ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ದುಡುಕಿನ ನಿರ್ಧಾರ ತೆಗೆದುಕೊಳ್ಳದೇ ವನವಾಸದ ಸಂದರ್ಭದಲ್ಲಿ ಅನೇಕ ಮಹರ್ಷಿಗಳ ಆಶೀರ್ವಾದವನ್ನೂ, ಮಹತ್ತರವಾದ ಅಸ್ತ್ರಗಳನ್ನೂ, ಭಗವಂತನ ಕೃಪೆಯನ್ನೂ ಸಂಪಾದಿಸಿಕೊಂಡು ಸರ್ವ ರೀತಿಯಿಂದಲೂ ಸಮರ್ಥರಾಗಿ ಯುದ್ಧದಲ್ಲಿ ಜಯವನ್ನು ಪಡೆದರು. ಹಾಗಾಗಿ, ಯಾವುದೇ ಕಾರ್ಯದ ಸ್ವರೂಪವನ್ನರಿತು ಮುನ್ನಡೆಯುವುದು ಕ್ಷೇಮಕರ ಎಂಬುದು ವಿದುರನ ಈ ಮಾತಿನ ಸಾರ.