Sunday, January 29, 2023

ಯಕ್ಷಪ್ರಶ್ನೆ - 23 (Yaksha Prashne - 23)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)


ಪ್ರಶ್ನೆ – 22 ಸಂತತಿಯನ್ನು ಇಚ್ಛಿಸುವವರಿಗೆ ಉತ್ತಮ ಫಲ ಯಾವುದು? 

ಉತ್ತರ -  ಪುತ್ರ

ಈ ಸೃಷ್ಟಿಯು ಮುಂದುವರಿಯಬೇಕಾದರೆ ಸಂತತಿಯಾಗಬೇಕು. ಸಂತತಿಯಾಗಬೇಕಾದರೆ ಗಂಡು ಸಂತತಿ ಮುಖ್ಯವೋ? ಅಥವಾ ಹೆಣ್ಣು ಸಂತತಿ ಮುಖ್ಯವೋ? ಎಂದು ಪ್ರಶ್ನೆ ಬಂದರೆ ಅಲ್ಲಿ ಎರಡೂ ಮುಖ್ಯವೇ. ಯಾವುದು ಒಂದು ಇಲ್ಲದಿದ್ದರೂ ಸಂತತಿಯು ಮುಂದುವರಿಯಲಾರದು. 'ಸಂತತಿ' ಎಂಬ ಶಬ್ದಕ್ಕೆ ಅರ್ಥವೇ ವಿಸ್ತಾರವಾಗುವುದು ಎಂದು. ಸೃಷ್ಟಿ ಮುಂದುವರಿಯಲು ಗಂಡು ಎಷ್ಟು ಮುಖ್ಯವೋ ಹೆಣ್ಣೂ ಅಷ್ಟೇ ಮುಖ್ಯ. ಅದರಲ್ಲಿ ಯಾವುದು ಉತ್ತಮವಾದುದು? ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲವಲ್ಲವೇ? ಇದೊಂದು ಪ್ರಶ್ನೆಯೇ ಅಲ್ಲ. ಅಥವಾ ಉತ್ತರವೇ ಇಲ್ಲದ ಪ್ರಶ್ನೆಯೊಂದನ್ನು ಯಕ್ಷನು ಧರ್ಮರಾಜನಿಗೆ ಕೇಳುತ್ತಿರುವುದು ಅನುಚಿತವೇ? ಹಾಗಾದರೆ ಈ ಪ್ರಶ್ನೆಯ ಹಿಂದಿರುವ ತಾತ್ಪರ್ಯವಾದರೂ ಏನು? ಹಾಗಾದರೆ ಗಂಡಿಗೆ ಸಂತತಿಯಲ್ಲಿ ಪ್ರಾಧಾನ್ಯ ಬರಲು ಕಾರಣವಾದರೂ ಏನು ಎಂಬುದು ಈ ಉತ್ತರದಲ್ಲಿ ಅಡಕವಾಗಿದೆ. 

ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಹುಟ್ಟಿತೆಂದರೆ ಅವಳನ್ನು ಬೇರೊಂದು  ಕುಟುಂಬಕ್ಕೆ ದಾನಮಾಡಿ ಕೊಡುತ್ತೇವೆ. ಅಂದರೆ ಅ ಹೆಣ್ಣು ಮಗುವು ಬೇರೊಂದು ಕುಟುಂಬವನ್ನು ಬೆಳೆಸಲು ಕಾರಣವಾಗುವುದು. ಅದೇ ಗಂಡು ಮಗು ಹುಟ್ಟಿತೆಂದರೆ ಆ ಮಗುವಿನಿಂದ ಅದೇ ಕುಟುಂಬದ ವಿಸ್ತಾರವು ಆಗುತ್ತದೆ. ಅಲ್ಲಿ ಹುಟ್ಟುವ ಪ್ರತಿಯೊಂದು ಗಂಡಸಿಗೂ ಆ ಮನೆಯ ಸಂತತಿಯನ್ನು ಬೆಳೆಸುವ ಅವಕಾಶವಿರುತ್ತದೆ. ಇದನ್ನೇ 'ಗೋತ್ರಾಭಿವೃದ್ಧಿ' ಎಂದೂ  ಹೇಳುತ್ತಾರೆ. ನಾವೆಲ್ಲರೂ  ವಸಿಷ್ಠ, ಭಾರದ್ವಾಜ ಮೊದಲಾದ  ಋಷಿಕುಲದಲ್ಲಿ ಹುಟ್ಟಿದವರಾಗಿರುತ್ತೇವೆ. ಆ ಕುಲದಲ್ಲಿ ಹುಟ್ಟಿದ ಪ್ರತಿಯೊಂದು ಗಂಡು ಮಗುವಿನಿಂದಲೂ ಆ ಗೋತ್ರವೇ ಬೆಳೆಯುತ್ತದೆ. ಅದೇ ಹೆಣ್ಣುಮಗು ಹುಟ್ಟಿದರೆ ಇನ್ನೊಂದು ಕುಲಕ್ಕೆ ಕೊಡುವ ಸಂಪ್ರದಾಯವಿರುತ್ತದೆ. ಯಾವ ಗೋತ್ರದಲ್ಲಿ ಹುಟ್ಟಿರುತ್ತಾಳೋ ಆ ಗೋತ್ರವು ಪರಿವರ್ತನೆಗೊಂಡು, ಕೊಟ್ಟ ಕುಲದ ಗೋತ್ರವು ಆ ಹೆಣ್ಣಿಗೆ ಬರುತ್ತದೆ. ಈ ನೇರದಲ್ಲಿ ಸಂತತಿ ಬೆಳೆಯಲು ಗಂಡು ಮಗು ಬೇಕು ಎನ್ನುವ ಮಾತು ಬಂದಿದೆ. ಆದರೆ ಅಲ್ಲಿ ಹೆಣ್ಣಿಗೆ ಪ್ರಾಧಾನ್ಯವಿಲ್ಲವೆಂದಲ್ಲ. ಹೆಣ್ಣು ಇಲ್ಲದಿದ್ದರೆ ಈ ಕುಲದ ಮಗನಿಗೆ ಎಲ್ಲಿಯ ಹೆಣ್ಣು ಸಿಗುತ್ತದೆ? ಆದ್ದರಿಂದ ಹೆಣ್ಣೂ ಬೇಕು. ಗಂಡು ಸಂತತಿಯವೃದ್ಧಿಗೆ ಬೇಕೇ ಬೇಕು. ಎಂಬುದು ಇದರ ತಾತ್ಪರ್ಯವಾಗಿದೆ. 

'ಪುತ್ರ' ಎಂಬ ಶಬ್ದಕ್ಕೆ 'ಪುತ್' ಎಂಬ ನರಕದಿಂದ ಪಾರುಮಾಡುವವನು ಎಂಬ ಅರ್ಥವನ್ನು ಹೇಳುತ್ತಾರೆ. ಪ್ರತಿಯೊಬ್ಬ ಮಾನವನೂ ತನ್ನ ಮೇಲಿನ ಸ್ತರಗಳನ್ನು  ಪಡೆಯಬೇಕು. ಅವುಗಳಲ್ಲಿ  ಒಂದು ಪಿತೃಲೋಕ. ಯಾರು ಪುತ್ರನನ್ನು ಪಡೆಯುವುದಿಲ್ಲವೋ ಅಂತಹವನಿಗೆ ಮರಣಾನಂತರ ಶ್ರಾದ್ಧ, ತರ್ಪಣ ಮೊದಲಾದ ವಿಧಾನಗಳು ಯಾವುದೂ ನಡೆಯುವುದಿಲ್ಲ. ಮನುಷ್ಯಲೋಕದಲ್ಲಿ ಕೊಡುವ ಶ್ರಾದ್ಧ-ತರ್ಪಣಾದಿಗಳಿಂದ ತೀರಿಕೊಂಡ ಪಿತೃಗಳಿಗೆ ಪಿತೃಲೋಕವು ಪ್ರಾಪ್ತವಾಗುತ್ತದೆ. ಗಂಡು ಸಂತತಿಯೇ ಇಲ್ಲದಿದ್ದರೆ ಈ ಕಾರ್ಯವು ಅನ್ಯಗೋತ್ರದವಳಾದ ಮಗಳಿಂದ ಅಸಂಭವವೆಂಬದು ನಮ್ಮ ಧರ್ಮಶಾಸ್ತ್ರದ ನಿರ್ಣಯವಾಗಿದ್ದರಿಂದ ಗಂಡು ಸಂತತಿಗೆ ಹೆಚ್ಚಿನ ಪ್ರಾಶಸ್ತ್ಯ ದೊರಕಿದೆ ಎಂಬುದು ಇಲ್ಲಿನ ರಹಸ್ಯ. 

ಸೂಚನೆ : 29/1/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.